ಅಂಕಣಗಳು

Subscribe


 

ಕಲೆಗೆ ಗುರುಪರಂಪರೆ ಬೇಕೆ? ಅಕಾಡೆಮಿಕ್ ಮಾನ್ಯತೆ ಬೇಕೆ?

Posted On: Wednesday, November 5th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಭಾರತೀಯ ಲಲಿತ ಕಲೆಗಳಿಗೆ ಬೇಕಿರುವುದು ಸಾಂಪ್ರದಾಯಿಕ ಗುರುಪರಂಪರೆಯ ಆಶ್ರಯವೋ? ಅಥವಾ ಬದಲಾದ ಕಾಲಘಟ್ಟದ ಶೈಕ್ಷಣಿಕ ಮಾನ್ಯತೆಯೋ? ..

.ಈ ಚರ್ಚೆ ರೂಪ ಪಡೆದುಕೊಂಡಿದ್ದು ಇತ್ತೀಚಿನ ದಶಕಗಳಲ್ಲಿ. ಯಾಕೆಂದರೆ ಗುರುಪರಂಪರೆ ಮತ್ತು ಅಕಾಡೆಮಿಕ್ ವಲಯಗಳು ಒಂದಷ್ಟು ಹೊಂದಾಣಿಕೆ, ಅಂತರಗಳನ್ನಿಟ್ಟುಕೊಂಡು ಮುಂದುವರೆಯುತಿದ್ದರೂ, ಎದುರಿಸುತ್ತಿರುವ ವೈರುಧ್ಯಗಳು ಹೊಸತೇನೂ ಅಲ್ಲ.

ಮೊದಲಿನಿಂದಲೂ ತಮ್ಮ ಗುರುಪರಂಪರೆಗೆ ಬದ್ಧವಾಗಿ ಬೆಳೆದ ಲಲಿತಕಲೆಗಳು ಕಾಲಾಂತರದಲ್ಲಿ ಬ್ರಿಟೀಷರ ಆಗಮನದಿಂದ ಅಕಾಡೆಮಿಕ್ ವಲಯದಲ್ಲೂ ಸ್ಥಾನ ಪಡೆದುಕೊಂಡು ಹೊಸ ಆಯಾಮಕ್ಕೆ ತೆರೆದುಕೊಂಡಿತು. ಈ ಎರಡೂ ವಲಯಗಳೂ ತಮ್ಮದೇ ಆದ ನಿಟ್ಟಿನಲ್ಲಿ ಇತ್ಯಾತ್ಮಕ ಮತ್ತು ನೇತ್ಯಾತ್ಮಕ ಧೋರಣೆಗಳನ್ನು ಒಳಗೊಂಡವು. ಗುರುಪರಂಪರೆ ಕಲೆಯ ಶಾಸ್ತ್ರೀಯ ಅಧ್ಯಯನಕ್ಕೆ, ಸಾಂಪ್ರದಾಯಿಕತೆಗೆ ಒತ್ತು ನೀಡಿ ಗುರು-ಶಿಷ್ಯ ಸಂಬಂಧಕ್ಕೆ ಮತ್ತು ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಸೌಹಾರ್ದ ಮುನ್ನುಡಿ ಬರೆಯುತ್ತದೆ, ಕಲೆಯ ಬಾಳ್ವೆಯನ್ನು ದೀರ್ಘ ಮಾಡುತ್ತದೆ ಎಂಬ ಒಲವು ಕೇಳಿ ಬಂದರೆ; ಗುರು ಪರಂಪರೆಯ ಲೋಪಗಳನ್ನು ಎತ್ತಿ ಹಿಡಿದ ಅಕಾಡೆಮಿಕ್ ವಲಯ ಎಲ್ಲಾ ಮತ-ಧರ್ಮೀಯರನ್ನು ಸಮಾನವಾಗಿ ಕಾಣುವ-ದುಡಿಸಿಕೊಳ್ಳುವ ಮುಕ್ತ ಅವಕಾಶ, ಕಲೆಗೆ ಶೈಕ್ಷಣಿಕ ಸಂವಿಧಾನವನ್ನಿತ್ತು ನೋಡುವ ಕ್ರಮದತ್ತ ಮುಖ ಮಾಡಿತ್ತು.

ಕಲೆಯನ್ನೇ ಉಸಿರಾಗಿಸಿಕೊಂಡವರಿಗೆ ಡಿಗ್ರಿಯ ಅವಶ್ಯಕತೆ ಇರುವುದಿಲ್ಲ. ನಿಜ, ಆದರೆ ಈ ಕಾಲದಲ್ಲಿ ಡಿಗ್ರಿ-ಸರ್ಟಿಫಿಕೇಟುಗಳ ಶೈಕ್ಷಣಿಕ ಮಾನ್ಯತೆಯೇ ಮಾನದಂಡವಾಗುವಾಗ ಅರ್ಹರಿಗೆ ಅದಿಲ್ಲದೇ ಹೊದಲ್ಲಿ ಆ ಕೊರಗು ಉಳಿಯುತ್ತದೆ. ಇಂತಹ ಸಂದರ್ಭದಲ್ಲಿ ಗುರುಪರಂಪರೆಯನ್ನೂ ಶ್ರದ್ಧೆಯಿಂದ ಮುಂದುವರೆಸುವವರು ಸೂಕ್ತ ಪರಿಹಾರ ನೀಡಿದ ಉದಾಹರಣೆಗಳು ಇದೆ. ಆದರೆ ಬರಬರುತ್ತಾ ಕಲೆಗಳ ಕಲಿಕಾ ಪರಂಪರೆ ಕೇವಲ ವಾರದ ಎರಡು ದಿನಗಳಿಗಷ್ಟೇ ಸೀಮಿತವಾಗುತ್ತಾ, ಹವ್ಯಾಸವಾಗುತ್ತಾ ಕೊನೆಗೆ ಪ್ರಾಥಮಿಕ, ಮಾಧ್ಯಮಿಕ, ವಿದ್ವತ್ ಪರೀಕ್ಷೆಗಳ ಬೆನ್ನು ಹತ್ತಿ ಅಂಕ ಗಿಟ್ಟಿಸಿ ಬೀಗುವ (ಕಲೆಯನ್ನು, ಅದರ ಒಳನೋಟ, ಸಾಧ್ಯತೆಗಳನ್ನು ಅರಿಯುವಲ್ಲಿ ಸೋತರೂ) ಮನೋಸ್ಥಿತಿಯನ್ನು ಬಿತ್ತಿತು. ಬಹುಶಃ ಪರಂಪರೆಯ ಪ್ರತಿನಿಧಿಗಳು ಅಕಾಡೆಮಿಕ್‌ನೊಂದಿಗೆ ತಮ್ಮನ್ನು ಬಲವಂತವಾಗಿ ಗುರುತಿಸಿಕೊಳ್ಳಲು ಹೋದದ್ದೇ ಕಾರಣವಾಯಿತೇನೋ!

ಮಾತ್ರವಲ್ಲ, ಸಲಾಮು ಹೊಡೆಯುವ ಪ್ರವೃತ್ತಿ, ತಮ್ಮ ಲಾಭಕ್ಕಾಗಿ ಕೆಲಸ ಮಾಡಿಕೊಳ್ಳುವ ಗುರು ವೃತ್ತಿ, ಸಾಂಪ್ರದಾಯಿಕತೆಯನ್ನು ಬದಲು ಮಾಡುವ ನಿಟ್ಟಿನಲ್ಲಿ ಆದ ಆಧುನಿಕ ಪ್ರಯೋಗಗಳು, ಹೆಸರು ಬರಬೇಕೆಂಬ ನಿಟ್ಟಿನಲ್ಲಿ ರಂಗಪ್ರವೇಶ-ಪ್ರದರ್ಶನಗಳಲ್ಲಾದ ಅನಪೇಕ್ಷಿತ ಮನೋಭಾವಗಳೇ, ನೃತ್ಯ ಕಲೆಗಳಂತಹ ಪ್ರದರ್ಶಕ ಕಲೆಗಳು ದುಬಾರಿ ಎನ್ನುವ ಭಾವನೆಯನ್ನು ಜಾಗೃತ ಮಾಡಿತ್ತು. ಪರಂಪರೆಗೆ ಹೊಸ ಸ್ಪರ್ಶವನ್ನು ನೀಡುವ ಭರದಲ್ಲಿ ಮೂಲರೂಪಕ್ಕೆ ಹೊಡೆತ ಬಿದ್ದದ್ದೇ ಕಲೆ ಮತ್ತಷ್ಟು ಕಮರ್ಷಿಯಲ್ ಆಗಲು ಕೊಡುಗೆ ನೀಡಿದ್ದಿರಬಹುದು!

ಹಾಗಂತ ಪೂರ್ಣ ನಿರಾಕರಣೆಯೂ ಸಲ್ಲದು. ಇಂದಿನ ಯುಗಕ್ಕೆ ತಕ್ಕ ಮಟ್ಟಿನ ಕಮರ್ಷಿಯಾಲಿಟಿ ಕಲೆಯ ಶಿಸ್ತಿಗೆ, ಪ್ರತಿಷ್ಟೆಗೆ ಸ್ವಾಗತಾರ್ಹ ಕೂಡಾ!

ಕಲೆ ನಿಂತ ನೀರಾದರೆ ಎಷ್ಟು ಚೆನ್ನ? ಬದಲಾದ ಕಾಲಕ್ಕೆ ಕಲೆಗೂ ಶೈಕ್ಷಣಿಕ ಮಾನ್ಯತೆ ಬೇಡವೇ?- ಆದ್ದರಿಂದ ಕಳೆದ ಕೆಲವು ದಶಕಗಳಿಂದ ಅಭಿವ್ಯಕ್ತಿಯಲ್ಲಿ ಹೊಸತನ್ನು, ಪ್ರಯೋಗಶೀಲತೆಯನ್ನು ತರುವಲ್ಲಿ ಲಲಿತಕಲಾ ಮಹಾವಿದ್ಯಾಲಯಗಳಂತಹ ಅಕಾಡೆಮಿಕ್ ಸಂಸ್ಥೆಗಳು ಸಾಕಷ್ಟು ಶ್ರಮಿಸುತ್ತಿವೆ. ವಿವಿಧ ಕಲಾಪ್ರಕಾರಗಳ ಬಗೆಗೆ, ಅವುಗಳ ಇತಿಹಾಸದ ಕುರಿತು ಅರಿವು ಬೆಳೆಸಿಕೊಳ್ಳಲು ಅಪಾರ ಅವಕಾಶಗಳಿರುತ್ತದೆ. ಕಲೆಯ ಪದವಿ ಮತ್ತು ಉನ್ನತ ವ್ಯಾಸಂಗ ನಮ್ಮಲ್ಲಿನ ಆಸಕ್ತಿಗೆ ಮತ್ತಷ್ಟು ಗಾಂಭೀರ್ಯ, ಶಿಸ್ತು, ಕ್ರಮಬದ್ಧತೆಯನ್ನು ಕೊಡುತ್ತದೆ. ಇದರಿಂದ, ಆಗತಾನೇ ಹೊಸತಾಗಿ ಕಲಾಪ್ರಕಾರವನ್ನು ಕಲಿಯುವವರಷ್ಟೇ ಅಲ್ಲದೆ, ಹುಟ್ಟು ಕಲಾವಿದರೂ ಮತ್ತಷ್ಟು ಪಳಗಿ ಸಮರ್ಥ ಕಲಾವಿದರಾದವರಿದ್ದಾರೆ.

ಹಲವು ಸರ್ಕಾರಿ ಮತ್ತು ಖಾಸಗಿ ಪ್ರಾಯೋಜಿತ ಲಲಿತ ಕಲಾ ಮಹಾವಿದ್ಯಾಲಯಗಳು ಕಲಾ ಪ್ರಪಂಚದ ಸಮನ್ವಯ ಅಧ್ಯಯನ ನೀಡುವಲ್ಲಿ, ಸಮಗ್ರವಾಗಿ ಅದನ್ನು ದುಡಿಸಿಕೊಳ್ಳುವಲ್ಲಿ ತೊಡಗಿಸಿಕೊಂಡಿವೆ. ಹಾಗೆ ನೋಡಿದರೆ, ಉದ್ಯೋಗವನ್ನೇ ಗುರಿಯಾಗಿಸಿಕೊಂಡ ಎಂದಿನ ಕಾಲೇಜು ಥಿಯರಿಗಳೆಡೆಗೆ ಮುಖ ಮಾಡಬೇಕಾದ ಅನಿವಾರ್ಯತೆ ಇಲ್ಲಿಲ್ಲ. ಕಾಟಾಚಾರಕ್ಕೆ ನೃತ್ಯ ತರಗತಿಗಳಿಗೆ ಸೇರಿಕೊಳ್ಳುವ, ಕಲಿಯುವ, ಕಲಿತು ಬಿಡುವ ಪರಿಪಾಠ ಇಲ್ಲಿಲ್ಲ. ಕಲೆಯನ್ನು ಪಠ್ಯ ವಸ್ತುವಾಗಿ ಅಧ್ಯಯನ ಮಾಡುವುದೇ ವಿಶಿಷ್ಟ ಬಗೆಯ ಮನೋಲ್ಲಾಸ. ಒಂದು ನಿಟ್ಟಿನಲ್ಲಿ ಇದೊಂದು ರೀತಿಯ ಸಾಂಸ್ಕೃತಿಕ ಬಂಡಾಯ!

ಇದಕ್ಕೆ ಅಪವಾದವೆನಿಸುವ ಪ್ರಸಂಗಗಳೂ ಗುರುಕುಲ, ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಇಲ್ಲದಿಲ್ಲ. ಆದ್ದರಿಂದ ಗುರು ಅಥವಾ ಸಂಸ್ಥೆಗಳ ಆಯ್ಕೆಯಲ್ಲಿ ಎಚ್ಚರಿಕೆ ಇರುವುದು ಒಳಿತು.

ಆಗ, ಕಲೆಯಲ್ಲಿ ನಮ್ಮನ್ನು ವೈವಿಧ್ಯವಾಗಿ ತೆರೆದುಕೊಳ್ಳುವ, ಗುರುತಿಸಿಕೊಳ್ಳುವ, ಸ್ವತಂತ್ರ-ಸಂತೃಪ್ತಿಯ ಜೀವನ ನಡೆಸುವ ಹಂಬಲ ನಿರಂತರ.

ಪ್ರೀತಿಯಿಂದ ನಿಮ್ಮ

-ಸಂಪಾದಕರು

Leave a Reply

*

code