ಅಂಕಣಗಳು

Subscribe


 

ದಿಕ್ಕು ತಪ್ಪುತ್ತಿದೆಯೇ ಸಂಶೋಧನೆಗಳ ಹಾದಿ ?

Posted On: Thursday, December 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಇಂದಿನ ದಿನದಲ್ಲಿ ಕಲೆಯ ಕುರಿತ ಸಂಶೋಧನೆಯ ದಿಕ್ಕುಗಳಿಗೆ ಅವಕಾಶಗಳು ಸಿಕ್ಕಿವೆಯೇನೋ ನಿಜ. ಆದರೆ ಅದು ಸಾಗುತ್ತಿರುವ ಹಾದಿ ಗಮನಿಸಿದರೆ ವಾಕರಿಕೆ ಬರುತ್ತದೆ. ಕೆಲವರಿಗೆ ಪಿ‌ಎಚ್‌ಡಿ ಪ್ರಮಾಣ ಪತ್ರ ತೆಗೆದುಕೊಳ್ಳುವವರೆಗೆ ಅದೊಂದು ಅರ್ಹತೆ ಗಿಟ್ಟಿಸಿಕೊಳ್ಳುವ ಅನಿವಾರ್ಯ ತಲೆನೋವಾದರೆ; ಇನ್ನೂ ಕೆಲವರಿಗೆ ಹೆಸರಿನ ಮುಂದೆ ಅಂಟಿಸಿಕೊಳ್ಳುವ ಲೇಬಲ್. ಮತ್ತಷ್ಟು ಮಂದಿಗೆ ಅದು ದುಡ್ಡು ಮಾಡಿಕೊಳ್ಳುವ ದಂಧೆ; ಇನ್ನಷ್ಟು ಮಂದಿ ಸಂಶೋಧನೆಯ ಕ್ಷೇತ್ರವನ್ನೇ ತಮ್ಮ ಗುತ್ತಿಗೆಗೆ ತೆಗೆದುಕೊಂಡಂತೆ ಮಾತನಾಡುತ್ತಾರೆ. ಇನ್ನು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಸಂಶೋಧನೆಗಳನ್ನು ನೋಡಿದರೆ ಬಹುಪಾಲು ರೀಸರ್ಚ್‌ಗೆ ತಲೆಯೂ ಇಲ್ಲ, ಬುಡವೂ ಇಲ್ಲ. ಕ್ರಮ-ವಿಧಾನಗಳಾವುವೂ ಗೊತ್ತಿಲ್ಲ. ೪-೫ ಪುಸ್ತಕಗಳಿಂದ ವಿಷಯ ಹೆಕ್ಕಿ ತೆಗೆದು ಒಟ್ಟು ಮಾಡಿದರೆ ಅದೇ ಸಂಶೋಧನೆ ಎನ್ನುವವರೇ ಹೆಚ್ಚು. ಜೊತೆಗೆ ಏನೇನೋ ಹುಚ್ಚುಚ್ಚು ಅಸಂದ್ಧ ವಿಷಯಗಳು. ಅದನ್ನು ಸಾಧಿಸಲು ಏನೇನೋ ವಿತಂಡವಾದಗಳು. ಹೀಗಾದರೆ ನೈಜ, ವಸ್ತುನಿಷ್ಠ ಸಂಶೋಧನೆಗಳು ಎಂದು ಬೆಳಕು ಕಂಡಾವು? ಏನೋ ಒಂದಷ್ಟು ನಿರೀಕ್ಷೆಗಳು, ಪ್ರತಿಭೆಗಳನ್ನು ಹೊತ್ತು ನಡೆಯುವವರಿಗಂತೂ ಅವಕಾಶ ಮತ್ತು ಮಾರ್ಗದರ್ಶನವೇ ಇಲ್ಲದಂತಾಗಿದೆ. ಸದ್ಯ, ನಮ್ಮ ಇತಿಹಾಸ ಕ್ಷೇತ್ರದಲ್ಲಿ ಇಷ್ಟೆಲ್ಲಾ ಗೋಜಲುಗಳಿಲ್ಲವಲ್ಲಾ ಎಂಬುದೇ ಸಮಾಧಾನದ ಸಂಗತಿ ಎಂದು ನಿಟ್ಟುಸಿರಿಟ್ಟರು ಓರ್ವ ಹಿರಿಯ ಇತಿಹಾಸ ಸಂಶೋಧಕ.

ಅವರ ನಿಟ್ಟುಸಿರಿನ ಅರ್ಥ ಹುಡುಕುತ್ತಾ ನಡೆದೆ. ನಮ್ಮ ಕಲಾಕ್ಷೇತ್ರದ ಸಂಶೋಧನಾ ಭವಿಷ್ಯ ಸೊನ್ನೆಯೆಂದೋ? ಅರಿವಿದ್ದೂ ಅಸಹಾಯಕರಾಗಿರುವುದರ ಉತ್ತರವೇ? ಶಿಕ್ಷಣದ ಹಾದಿಯ ವ್ಯಂಗ್ಯವನ್ನು ಜೀರ್ಣಿಸಿಕೊಳ್ಳಲಾಗದ್ದಕ್ಕೋ? ಅಥವಾ ಅವರ ಇತಿಹಾಸ ಕ್ಷೇತ್ರ ಕೆಲಮಟ್ಟಿಗಾದರೂ ಸಾಧ್ಯತೆ, ಅನುಕೂಲ, ಅವಕಾಶಗಳನ್ನು ಉಳಿಸಿಕೊಂಡು ಬಂದಿದೆಯೆಂಬ ಸಮಾಧಾನಕ್ಕೋ? ಒಟ್ಟಿನಲ್ಲಿ ಅವರ ಭಾವ ಹಲವು ರೀತಿಯಲ್ಲಿ ಹಲವು ತಿಂಗಳಿನಿಂದ ಕಾಡುತ್ತಲೇ ಇದೆ.

ಹೌದು. ಕಲಾ ಸಂಶೋಧನೆ ಎಂದಾಕ್ಷಣ ಇಂದಿಗೆ ಹಲವು ಮಂದಿ ಪ್ರಾಜ್ಞರು ಒಂದೋ ಮೂಗು ಮುರಿಯುತ್ತಾರೆ ಇಲ್ಲವೇ ಒಳಗೊಳಗೇ ಅನುಮಾನದ ದೃಷ್ಟಿಯಿಂದ ನೊಡುತ್ತಾರೆ. ಇದು ಸ್ವತಃ ಸ್ವಂತ ಆಸಕ್ತಿಯಿಂದ ಸಂಶೋಧನಾ ಕ್ಷೇತ್ರಕ್ಕಿಳಿದ ನನ್ನನ್ನೂ ಒಳಗೊಂಡಂತೆ ಹಲವು ಯುವ ಉತ್ಸಾಹಿಗಳ ಮುಂದಿರುವ ನುಂಗಲಾರದ ಬಿಸಿತುಪ್ಪ. 

ಕಾರಣಗಳಿಲ್ಲದಿಲ್ಲ. ಒಂದಲ್ಲ, ಎರಡಲ್ಲ ; ಹಿರಿಯರು ಹೇಳಿದಂತೆ ಸಾಕಷ್ಟು ಅಪಸವ್ಯಗಳು ಕಲಾ ಸಂಶೋಧನೆಯ ಕ್ಷೇತ್ರವನ್ನು ಕಾಡುತ್ತಲೇ ಇದೆ. ಚರ್ವಿತಚರ್ವಣವಾಗುತ್ತಿರುವ ಸವಕಲು ವಿಷಯಗಳು, ವಿಷಯದ ಆಯ್ಕೆಯಲ್ಲಿ ಜವಾಬ್ದಾರಿ-ಮಾರ್ಗದರ್ಶನದ ಕೊರತೆ, ಪಟ್ಟಭದ್ರ ಹಿತಾಸಕ್ತಿಗಳಲ್ಲಿ ಕರಗಿಹೋಗುವ ಪ್ರತಿಭೆಗಳು, ಕೇವಲ ಪದವಿ-ಪ್ರಮಾಣ ಪತ್ರಗಳೇ ಮಾನದಂಡವಾಗುತ್ತಿರುವ ಸಂಶೋಧನಾ ಪ್ರಕ್ರಿಯೆ..ಹೀಗೆ ಕಲಾ ಸಂಶೋಧನೆಯ ಹಾದಿಯ ತುಂಬೆಲ್ಲಾ ಗೊಂದಲ-ಅವ್ಯವಸ್ಥೆಗಳ ಹೆಬ್ಬಾವು ಅಂಗಾತ ಮಲಗಿದೆ. ಅಕಾಡೆಮಿಕ್ ಶಿಸ್ತುಗಳ ಪ್ರಯತ್ನಕ್ಕಿಂತಲೂ ಸ್ವಪ್ರತಿಷ್ಠೆಗಳನ್ನು ರೂಪಿಸಿಕೊಳ್ಳುವಲ್ಲಿಗೆ ಮಾತ್ರ ಸಂಶೋಧನೆ ಸೀಮಿತ. ಆದ್ದರಿಂದಲೇ ಕರ್ನಾಟಕದಲ್ಲಿನ ನೃತ್ಯಸಂಶೋಧನೆಗಳು ಜಾಗತಿಕವಾದ ಒಂದು ನೆಲೆಯನ್ನು ಕಂಡುಕೊಳ್ಳುವಲ್ಲಿ ದುರ್ಲಭವೆನಿಸಿವೆ. ಪರಿಣಾಮ ನಮ್ಮೊಳಗಿನ ಅವಕಾಶ, ಕೊರತೆಗಳನ್ನು ಅರ್ಥೈಸುವ ಹಾದಿ ಮುಚ್ಚಿದಂತಾಗಿ ನಮ್ಮ ಕೈಗಳನ್ನು ನಮಗರಿವಿಲ್ಲದೆ ನಾವೇ ಕಟ್ಟಿಕೊಳುತ್ತಲೇ ಇದ್ದೇವೆ.

ಹಾಗಾದರೆ ಕಲೆಯೆಂಬ ಪ್ರಾಯೋಗಿಕ ನೆಲೆಯುಳ್ಳ ವಸ್ತುವಿಗೆ ಯಾವ ಮಾದರಿಯ ಸಂಶೋಧನಾ ಸ್ಪರ್ಶ ಬೇಕು? ಕಲಾ ಸಂಶೋಧನೆಗಳು ಹೇಗಿರಬೇಕು? ಸಂಶೋಧನೆಯ ನಿಜವಾದ ಅರ್ಥ ಏನು? ಎಂತಹ ಗುಣಮಟ್ಟ ಇಂದಿನ ಕಲಾ ಸಂಶೋಧನಾ ಜಗತ್ತಿಗೆ ಬೇಕು? ಅದನ್ನು ಕಂಡುಕೊಳ್ಳುವ ಹಂತಗಳು ಹೇಗೆ? ಕಲೆಯನ್ನು ಸಂಶೋಧನೆಯ ಹಿನ್ನಲೆಯಲ್ಲಿ ಕಾಣುವಾಗ ಗಮನಿಸಬೇಕಾದ ಅಂಶಗಳೇನು? ಅದರ ನೆಲೆಗಳೇನು? ಶಿಸ್ತುಗಳ್ಯಾವುವು? ನಡೆಸುವ ಮಾದರಿಗಳು ಹೇಗೆ? ಸಂಶೋಧನಾ ಉದ್ದೇಶ ಮತ್ತು ವಿಧಾನಗಳನ್ನು ಕಂಡುಕೊಳ್ಳುವುದು ಹೇಗೆ? ಇಂದಿನ ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗುವಂತೆ ಎಂತಹ ದಿಕ್ಕುಗಳು ನಮ್ಮೆದುರಿಗಿವೆ? ಸವಾಲುಗಳೇನು? ಅತ್ಯಗತ್ಯ ಕರ್ತವ್ಯಗಳೇನು? ಸಂಶೋಧಕನ ಜವಾಬ್ದಾರಿಗಳೇನು? ಅವಕಾಶಗಳಾವುವು? ಅಂತರ್ ಶಿಸ್ತೀಯ ನೆಲೆಗಳೇನು? ಎಂತಹ ಮನಸ್ಸು ಬೇಕು? ಸಂಶೋಧನೆಯೊಂದರ ಭವಿಷ್ಯ, ಆಯುಷ್ಯ ಹೇಗೆ ನಿರ್ಧಾರವಾಗುತ್ತದೆ? ..ಹೀಗೆ ಶೋಧ ಜಗತ್ತಿನ ವಿವಿಧ ಪ್ರಶ್ನೆಗಳನ್ನು ನಮ್ಮೆದುರಿಗೆ ಇಟ್ಟುಕೊಂಡು ಪೂರ್ಣ ಅಕಾಡೆಮಿಕ್ ಮತ್ತು ಅದಕ್ಕೆ ಪೂರಕವಾದ ಪ್ರಾಯೋಗಿಕ ನೆಲೆಗಟ್ಟಿನಲ್ಲಿ ಉತ್ತರ ಕಂಡುಕೊಳ್ಳುವ ಅನಿವಾರ್ಯತೆಯಿದೆ.

ಈ ಹಿನ್ನಲೆಯಲ್ಲಿ ನೂಪುರ ಭ್ರಮರಿ ಪ್ರತಿಷ್ಠಾನ(ರಿ.) ಮಹಾಶಿವರಾತ್ರಿಯ ದಿನದಂದು ಒಂದು ದಿನದ ಕಮ್ಮಟವನ್ನು ಹಿರಿಯ ಸಂಶೋಧಕರು, ವಿದ್ವಾಂಸರೊಂದಿಗೆ ಹಮ್ಮಿಕೊಳ್ಳುತ್ತಲಿದೆ. ಜೊತೆಗೆ ಈಗಾಗಲೇ ಜರುಗಿದ ಸಂಶೋಧನೆಗಳಿಗೆ ಕ್ಷಕಿರಣ ಬೀರುತ್ತಾ ಸಂಶೋಧನಾ ಪ್ರಬಂಧ ಮಂಡನೆ, ಸಂವಾದ, ಚರ್ಚೆ, ನಿರ್ಣಯ, ಪ್ರಶ್ನೋತ್ತರ ಸರಣಿಗಳು, ನೃತ್ಯವಿಸ್ತಾರವನ್ನು ಹಿಗ್ಗಿಸುವ ಸಂಶೋಧನಾ ನೆಲೆಗಟ್ಟಿನ ವಿದ್ವತ್ ಪೂರ್ಣ ನೃತ್ಯ ಪ್ರದರ್ಶನ.. ಹೀಗೆ ಹಲವು ಆಯಾಮಗಳನ್ನು ಸ್ಪರ್ಶಿಸಬೇಕೆಂದಿದೆ. ನಮ್ಮ ಆಶಯದ ಯಶಸ್ಸಿಗೆ ನೀವೂ ಜೊತೆಗಿರಬೇಕು.

ಪಿ‌ಎಚ್‌ಡಿಯಂತಹ ಪದವಿಗಳನ್ನು ಪಡೆದು ಪುಸ್ತಕ ಪ್ರಕಟಿಸಿದಲ್ಲಿಗೆ ಸಂಶೋಧನೆಯ ಜವಾಬ್ದಾರಿಗಳು ಮುಗಿಯುವುದಿಲ್ಲ ಅಥವಾ ಅಂತವರು ಸಂಶೋಧಕರೂ ಆಗುವುದಿಲ್ಲ. ಸಂಶೋಧನೆಯೆಂಬುದು ನಿರಂತರ ಶ್ರದ್ಧೆಯ ಅನಂತ ಸಾಧ್ಯತೆಗಳ ಹರಿವು. ಅದರಲ್ಲಿ ಈಜಲು ಒಂದಷ್ಟು ಸ್ವಯಂಬದ್ಧತೆಗಳೇ ಬೇಕು. ಹಾಗಾಗಿ ಪಿ‌ಎಚ್‌ಡಿ/ ಎಂಫಿಲ್ ಪದವಿಗಳಿಂದಾಚೆಯೂ ಸಂಶೋಧನೆಯನ್ನು ಶಿಸ್ತಾಗಿ ಬೆಳೆಸಿಕೊಳ್ಳುವ ಅಧ್ಯಯನ ಶೀಲತೆ ಬೆಳೆದುಬರಬೇಕು ಎಂಬುದು ಪ್ರತಿಷ್ಠಾನದ ಅಭೀಪ್ಸೆ. ಹಾಗಾಗಿ ನೃತ್ಯದ ಎಂದಿನ ಸವಕಲು ಚರ್ಚೆಗಳಿಂದ ದೂರವಿದ್ದು, ಪ್ರತಿಷ್ಠೆ-ಗೌರವಗಳ ಮೂಟೆಯನ್ನು ಪಕ್ಕಕ್ಕಿಟ್ಟು, ಪೂರ್ವಾಗ್ರಹಗಳನ್ನು ಬದಿಗಿಟ್ಟು ಕಲಾ ಜಗತ್ತಿನ ಮತ್ತೊಂದು ಮುಖಕ್ಕೆ ಸಹೃದಯತೆಯಿಂದ ತೆರೆದುಕೊಳ್ಳಬೇಕು. ಈ ಹಿನ್ನಲೆಯಲ್ಲಿ ಒಂದಷ್ಟು ಶಿಸ್ತು-ಸಂವಿಧಾನಗಳನ್ನು ಜೊತೆಗಿರಿಸಿಕೊಂಡು ಮುನ್ನಡೆಯಬೇಕೆಂದಿದೆ ಪ್ರತಿಷ್ಠಾನ. ಈ ಅನ್ವೇಷಣೆಯ ಹೆಜ್ಜೆಗಳ ಜೊತೆ ನಿಮ್ಮ ಹೆಜ್ಜೆಯೂ ಇದೆ ತಾನೇ? ಸ್ವಾಗತವಿದೆ.

ಪ್ರೀತಿಯಿಂದ,

ಸಂಪಾದಕರು

Leave a Reply

*

code