ಅಂಕಣಗಳು

Subscribe


 

ಕಲಾವಿದನೊಳಗೆ…

Posted On: Friday, June 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ನಿವೇದಿತಾ ಶ್ರೀನಿವಾಸ್, ಸಂಶೋಧಕರು, ನೃತ್ಯ ಕಲಾವಿದರು, ’ಸ್ತುತಿ ನಾಟ್ಯಶಾಲೆ’, ಬೆಂಗಳೂರು

ಕಲೆಯನ್ನು ನೋಡಿದಾಗ ಸ್ವರ್ಗ ಪ್ರವೇಶ ಮಾಡಿದ ಹಾಗಾಗುತ್ತೆ. ಕಲಾವಿದನ ಒಳ ಹೊಕ್ಕಾಗ ಬೇರೆಯೇ ಇರುತ್ತೆ. ಯಾಕೆ ಈ ಕಾಂಟ್ರಡಿಕ್ಷನ್?’- ಎಸ್.ಎಲ್.ಭೈರಪ್ಪನವರ ಮಂದ್ರದ ಪ್ರಸಿದ್ಧ ಸಾಲುಗಳು. ಇದೇ ಪ್ರಶ್ನೆ ಕಾಡುತ್ತಿದ್ದುದೂ ಅದೇ ಸಮಯಕ್ಕೆ ಮಂದ್ರ ನಾಟಕ ನೋಡುವ ಅವಕಾಶ ಸಿಕ್ಕಿದ್ದೂ ಒಂದು ಕಾಕತಾಳೀಯವೇ. ಕತೆಯಲ್ಲಿನ ಕಲಾವಿದ ಮೋಹನಲಾಲನಂಥವರು ನಮ್ಮ ಮಧ್ಯೆ ಹೇರಳವಾಗಿದ್ದಾರೆ. ಅರ್ಥಾತ್, ಕಲೆಯಲ್ಲಿ ಮುಳುಗಿ ರಸದ ಅನುಭವ ಪಡೆದು ನೀಡುವವರು; ನಿಜ ಜೀವನದಲ್ಲಿ ಕೆಟ್ಟ ಚಟ, ದುರಾಭ್ಯಾಸಗಳ ಮೊರೆ ಹೋಗಿ, ತಮ್ಮದಲ್ಲದೆ ಜೊತೆಗಿದ್ದವರ ಜೀವನವನ್ನೂ ನರಕ ಮಾಡುತ್ತಾರೆ. ಕಾರಣ ಏನು?

ಪ್ರಾಯಃ ಇದು ಮನೋಶಾಸ್ತ್ರದಲ್ಲಿ ಅಧ್ಯಯನ ಯೋಗ್ಯವಸ್ತು ಆಗಬಹುದು ಅಥವಾ ಈಗಾಗಲೇ ಅಧ್ಯಯನ ಮಾಡಿರಬಹುದು. ವೈಜ್ಞಾನಿಕವಾಗಿ ಏನೇ ಹೇಳಲಿ, ಆಧ್ಯಾತ್ಮದ ಹಿನ್ನೆಲೆಯಿಂದ ವಿವರಿಸುವುದು ನಮ್ಮ ಸಂಪ್ರದಾಯ. ಆದರೆ ಅಲ್ಲಿಗೆ ಮುಟ್ಟುವ ಮುಂಚೆ ಏರಿದ ಮೆಟ್ಟಿಲುಗಳ ಮೇಲೆ ಒಂದು ನೋಟ…

ಹಲವು ಮಂದಿಯ ಮುಂದೆ ಈ ಪ್ರಶ್ನೆ ಇಟ್ಟಾಗ, ಬಂದ ಉತ್ತರ ನಾನಾ ತರಹವು. ಉರಿಯುವ ದೀಪದ ಸುತ್ತಲೂ ಬೆಳಕು ಇರುತ್ತದೆ, ಆದರೆ ಅದರ ಕೆಳಗೇ ಕತ್ತಲು. ಅದೇ ರೀತಿ, ಕಲಾವಿದ ಉಳಿದವರಿಗೆ ರಸಾನುಭವ ಕೊಟ್ಟರೂ ತಾನು ಅದರಿಂದ ವಂಚಿತನಾಗುತ್ತಾನೆ. ಹಾಗಾಗಿ ನೀಚ ಪ್ರವೃತ್ತಿಗೆ ಇಳಿಯುತ್ತಾನೆ’. ಈ ವಾದ ಒಪ್ಪಲು ಕಷ್ಟ. ರಸ ಎಂದಾಕ್ಷಣ ಅದು ಕಲಾವಿದ, ಪ್ರೇಕ್ಷಕ ಇಬ್ಬರೂ ಅನುಭವಿಸುವ ಆನಂದ. ಹಾಗಿರಲು ಕೇವಲ ಪ್ರೇಕ್ಷಕ ಮಾತ್ರ ಅನುಭವಿಸಲು ಹೇಗೆ ಸಾಧ್ಯ?

ಕಲಾವಿದ ಕಲೆಯ ಅಭ್ಯಾಸದಲ್ಲೇ ಸತತವಾಗಿ ತೊಡಗಿರುತ್ತಾನೆ. ಕಲೆಯೇ ಜೀವನ ಉಸಿರು. ಹೀಗಿರುತ್ತ, ಯಾವುದಾದರೂ ಒಂದು ಚಟ ಅಂಟಿಕೊಂಡು ಬಿಡುತ್ತದೆ. ಕಲೆ ಎಷ್ಟು ಸಂತೋಷ ಕೊಡುವುದೋ ಅಷ್ಟೇ ಆ ಚಟದಿಂದಲೂ ಸಿಗುತ್ತದೆ’. ಇರಬಹುದು. ಆದರೆ, ಚಟ ಅಂಟಿಕೊಳ್ಳುವುದು ಯಾಕೆ? ರಸಾಸ್ವಾದನೆಯಲ್ಲಿ ತೇಲಾಡುವವನಿಗೆ ಈ ಕ್ಷುಲ್ಲಕ, ಅನೈತಿಕ, ಬಾಹ್ಯ ವಸ್ತುಗಳಲ್ಲೇಕೆ ಆಕರ್ಷಣೆ? ಅಥವಾ ಕಲೆಯಲ್ಲಿ ಅನುಭವಿಸಿದ ಆನಂದ, ಸುತ್ತಲಿನ ವಸ್ತುಗಳಲ್ಲಿ ಕಾಣದಾದಾಗ, ಚಟಕ್ಕೆ ಬೀಳುತ್ತಾನೋ?

ಕಲಾವಿದನಾಗಿ ಅವನಿಗೆ ಮಾನಸಿಕ, ಬೌದ್ಧಿಕ ಮಟ್ಟದಲ್ಲಿ ರಸಾನುಭವವಾದ ನಂತರ ಸಂತೃಪ್ತಿ ಉಂಟಾಗುತ್ತದೆ. ಆದರೆ ದೈಹಿಕ, ಐಹಿಕ, ಲೌಕಿಕ ಮಟ್ಟದಲ್ಲಿ? ಅಲ್ಲೂ ಸಹ ಅದೇ ಆನಂದ ಹುಡುಕುತ್ತಾನೆ. ಆ ಹುಡುಕಾಟದಲ್ಲಿ ವ್ಯಸನಿ ಆಗುತ್ತಾನೆ. ರಸದಲ್ಲಿ ಮಿಂದ ಮನ, ದೇಹಕ್ಕೂ ಅಂಥದೇ ವಸ್ತುವನ್ನು ಹಂಬಲಿಸದೇ? ಇಂದ್ರಿಯಗಳು ಬೇಡುವ ಸುಖ, ಅವಕ್ಕೆ ನೀಡಬೇಡವೆ?

ಇಲ್ಲಿ ರಾಮಕೃಷ್ಣ ಪರಮಹಂಸರ ಒಂದು ಸಂದರ್ಭವನ್ನು ಉದಾಹರಣೆಯಾಗಿ ಹೇಳಬಹುದು. ದೀರ್ಘ ಸಮಾಧಿಯಿಂದ ಎದ್ದ ನಂತರ ಅವರು, ಒಮ್ಮೊಮ್ಮೆ ಕೊಕೊ ಕೋಲಾ ಕುಡಿಯಲು ಆಸೆ ಪಡುತ್ತಿದ್ದರಂತೆ! ಅಂಥ ಪಾರಮಾರ್ಥಿಕ ಅನುಭವ ಪಡೆದವರಿಗೆ ಇಂಥ ಲೌಕಿಕ ವಸ್ತುವಿನ ಬಯಕೆಯೇ? ನಂಬಲೇಬೇಕು. ಆದರೆ ಅವರು ವ್ಯಸನಿಗಳಾಗಲಿಲ್ಲ ಎಂಬುದನ್ನೂ ಒಪ್ಪಬೇಕು. ಹೇಗೆ ಸಮತೋಲನ ಕಾಪಾಡಿಕೊಂಡಿದ್ದರು ಮತ್ತು ರಸಾನುಭವ ಹಾಗೂ ಆತ್ಮಾನುಭವ ಒಂದೇ ಆಗುತ್ತದೆಯೇ? ಎರಡೂ ಪ್ರಶ್ನೆಗಳು ಸಹಜ ಮತ್ತು ಸಮಂಜಸ. ಈ ಪ್ರಶ್ನೆಗಳ ಉತ್ತರವೇ ಮೊಟ್ಟ ಮೊದಲು ಎದ್ದ ಪ್ರಶ್ನೆಗೆ ಉತ್ತರವಾಗಬಹುದು.

ಮೊದಲು ರಸಾನುಭವ, ಆತ್ಮಾನುಭವಗಳ ಸಾಮ್ಯತೆ, ವ್ಯತ್ಯಾಸ ತಿಳಿಯೋಣ. ಜ್ಞಾನಿಗಳು ಎರಡರ ಅನುಭವ ಒಂದೇ ಎನ್ನುತ್ತಾರೆ. ಕಲೆಯಲ್ಲಿ ಅದು ಕ್ಷಣಿಕ. ಇಹಲೋಕಕ್ಕೆ ಪುನಃ ಬರಲೇಬೇಕು. ಆಧ್ಯಾತ್ಮದಲ್ಲಿ ಅದು ನಿತ್ಯ ನಿರಂತರ. ಆಧ್ಯಾತ್ಮ ಎಂದಾಕ್ಷಣ ದೇವರ ಪೂಜೆಯೆಂಬ ಆಚರಣೆಯಲ್ಲ ಮತ್ತು ಯಾವುದೇ ಮತವನ್ನು ಪ್ರತಿಪಾದಿಸುವುದಿಲ್ಲ. ಎಲ್ಲಾ ಸಂಸ್ಕಾರಗಳಲ್ಲೂ ಇದನ್ನು ಬೇರೆ ಬೇರೆ ರೀತಿಯಲ್ಲಿ ಅನುಮೋದಿಸಿರುತ್ತಾರೆ.

ಡಾ. ಶೋಭಾ ಶಶಿಕುಮಾರ್ ಹೇಳುವಂತೆ, ಪ್ರತಿಯೊಬ್ಬ ಕಲಾವಿದನೂ ಆಧ್ಯಾತ್ಮದಲ್ಲಿ ಒಲವು ಹೊಂದಿರಲೇಬೇಕು; ಅಂದರೆ ಸ್ಥಿತಪ್ರಜ್ನರಾಗಿರಲೇಬೇಕು. ಏಕೆಂದರೆ, ಕಲೆಯಲ್ಲಿ ಆನಂದದ ಸವಿ ಉಂಡವನು, ಲೌಕಿಕದಲ್ಲಿ ಆ ಆನಂದ ಪಡೆಯದೆ ಹೆಣಗುತ್ತಾನೆ. ಕೆಳಮಟ್ಟದಿಂದ ಮೇಲೇರಿದವನು, ಮತ್ತೆ ಕೆಳಗಿಳಿದಾಗ ಅಸಹನೆ ಹೊಂದುತ್ತಾನೆ. ಇದಕ್ಕೆ ಸುಲಭ ಪರಿಹಾರವೆಂದರೆ ಇಹದಲ್ಲೂ ಆನಂದದಿಂದಿರುವುದು. ಉದ್ವೇಗ, ಆವೇಶಗಳಿಗೆ ಒಳಗಾಗದೆ, ಸಮತೋಲನ ಕಾಪಾಡಿಕೊಳ್ಳುವುದು.

ಹೇಳಿದಷ್ಟು ಸುಲಭವಲ್ಲ, ಆಚರಿಸುವುದು. ಆದರೂ ಪ್ರಯತ್ನ ಮಾಡಲೇಬೇಕು. ಅಂತಿಮವಾಗಿ ಮನಸ್ಸು ಹತೋಟಿಯಲ್ಲಿರಬೇಕೆನ್ನುವುದು ಮುಖ್ಯ. ಹಾಗೆಂದು ಇಂದ್ರಿಯ ನಿಗ್ರಹ ಮಾಡಿ ಸನ್ಯಾಸಿಯಂತಿರುವುದೂ ಅಲ್ಲ. ಯಾವುದೂ ಅತಿರೇಕಕ್ಕೆ ಹೋಗದಂತೆ ನೋಡಿಕೊಂಡು, ಮಿತಿಯಲ್ಲಿಯೇ ಇಂದ್ರಿಯಗಳ ಸುಖಕ್ಕೂ ಗಮನ ಕೊಡುತ್ತಿದ್ದರೆ ಆಯಿತು. ಮನಸ್ಸು ತಿಳಿಯಾಗಿ ಇದ್ದರೆ, ಹೊಸ ಹೊಸದನ್ನು ಸೃಷ್ಟಿಸಬಹುದು. ಎಲ್ಲಾ ವೇದ, ಪುರಾಣಗಳೂ, ಗೀತೆಯೂ ಹೇಳುವುದು ಮನಃಶಾಂತಿಯನ್ನೇ ಅಲ್ಲವೇ? ಅದೇ ಇಲ್ಲದಿದ್ದರೆ ಜೀವನದಲ್ಲಿ ಪ್ರಗತಿ ಹೊಂದುವುದು ಹೇಗೆ?

ಮಂದ್ರದ ಮೋಹನ್‌ಲಾಲನೂ ಕೇವಲ ಲೌಕಿಕ ಬದುಕಿಗೆ ಮಹತ್ವ ಕೊಟ್ಟು, ಅತಿಯಾಸೆ, ದುರಹಂಕಾರಗಳಿಂದ ಮೈದುಂಬಿ ತನ್ನ ಜೀವನ ಹಾಳು ಮಾಡಿಕೊಳ್ಳುತ್ತಾನೆ. ಅವನ ತಪ್ಪಿನ ಅರಿವಾಗುವ ಹೊತ್ತಿಗೆ ಕಾಲ ಮೀರಿರುತ್ತದೆ. ಅದೇ ಮೋಹನ್‌ಲಾಲನಿಗೆ ಸ್ವಲ್ಪ ಆಧ್ಯಾತ್ಮದ ಅರಿವು ಇದ್ದಿದ್ದರೆ, ಅನಾಹುತ ಆಗುತ್ತಿರಲಿಲ್ಲ. ’ಸುಖೇ ದುಃಖೇ ಸಮೇ ಕೃತ್ವಾ..’ ಎಂಬ ಗೀತೆಯ ವಾಕ್ಯವನ್ನು ಕಲಾವಿದರಲ್ಲದೆ ಉಳಿದವರೂ ಅನುಸರಿಸಿದರೆ, ಬದುಕನ್ನು ಹಸನುಗೊಳಿಸಬಹುದಲ್ಲವೇ?

ಅಂತ್ಯ ವಾಕ್ಯ – ಸ್ವಚ್ಛ, ಶಾಂತ ಮನಸ್ಸಿನಲ್ಲಿ ಮೂಡುವ ಚಿತ್ರಣ ಸಹೃದಯನಲ್ಲೂ ಪ್ರತಿಬಿಂಬಿಸುತ್ತದೆ.

Leave a Reply

*

code