ಅಂಕಣಗಳು

Subscribe


 

ಕಲಾವಿದರೊಳಗಿನ ಕಳಂಕದಲ್ಲಿ ಕಲೆಯ ಪಾಡು !!

Posted On: Monday, August 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಎಂ.ಎಫ್.ಹುಸೇನ್ ಸತ್ತಾಗ ಅವನನ್ನು ಹೊಗಳಿ ತುಚ್ಛ ತುಚ್ಛ ಲೇಖನಗಳು ಕರ್ನಾಟಕದ ಎಲ್ಲಾ ಮುಖ್ಯ ದಿನಪತ್ರಿಕೆಗಳಲ್ಲೂ ಬಂದಿದೆ. ತನಗೆ ಬೇಕಾದಷ್ಟು ತನ್ನ ಪಾಲಿನ ಅಶ್ಲೀಲತೆಯನ್ನು, ನಮ್ಮ ದೇಶದ ಕುರಿತು ಅನೇಕಾನೇಕ ನೀಚತನವನ್ನು ಹುಸೇನರು ತೋರ್ಪಡಿಸಿದುದನ್ನು ಹೇಸಿಗೆಯಿಲ್ಲದೆ ಹೊಗಳಿ ಬರೆದವರೂ ಇದ್ದಾರೆ. ಹಿಂದೆಯೂ ಒಂದೆರಡು ಬಾರಿ ಈ ಕುರಿತು ಓದಿದ್ದು ನೆನಪಿದೆ. ಆಗ ನಾನು ಅಯ್ಯೋ ಇದನ್ನು ಓದುಗರು ಹೀಗೆ ಬಿಟ್ಟಿದ್ದಾರಲ್ಲಾ ಎಂದು ಚಿಂತಿಸುತ್ತಿದ್ದೆ. ಅದೇ ವಿಷಯ ಇಂದು ಮಾನವೀಯತೆಯನ್ನೆ ಹುಚ್ಚುಚ್ಚು ಮಾಡಿದೆ. ದಯವಿಟ್ಟು ಇದನ್ನು ಹೀಗೆ ಬಿಡದೆ ಪ್ರತೀಕಾರವೆಂಬ ಅಸ್ತ್ರವನ್ನು ಹೂಡಲೇಬೇಕು. ಸುಮ್ಮಗಿರಬಾರದು. ದಮ್ಮಯ್ಯ ಎಂದು ಕಳಕಳಿಯನ್ನು ಹೊತ್ತು ಬಂದ ಅಂಚೆಕಾರ್ಡು ಮಂಗಳೂರಿನಿಂದ ಕೈಸೇರಿತ್ತು. ಹಿರಿಯ ಗುರು ಮಾಸ್ಟರ್ ವಿಠಲ್ ತಮ್ಮ ಅಸಹನೆ, ನೋವನ್ನು ಬಿಚ್ಚಿಟ್ಟದ್ದು ಹೀಗೆ.

ತೀರಿಹೋದವರ ಕುರಿತಂತೆ ಆಡಿಕೊಳ್ಳಬಾರದು ಎಂಬ ನಾಣ್ಣುಡಿಯನ್ವಯ ಚಿಂತನೆ ಮಾಡಹೊರಟರೆ ಈ ವಿಷಯದಲ್ಲಿ ಟೀಕೆಗಳನ್ನು ಮಾಡುವುದು ಸರಿಯಲ್ಲ ಎಂದೆನಿಸುವುದಿದೆ. ಅಷ್ಟಕ್ಕೂ ಇಲ್ಲಿ ಹುಸೇನರ ವ್ಯಕ್ತಿತ್ವವೋ ಅಥವಾ ಅವರ ಕುರಿತ ಶ್ರದ್ಧಾಂಜಲಿ ಲೇಖನಗಳೋ ನಮ್ಮ ಚರ್ಚೆಯ ವಿಷಯವೂ ಅಲ್ಲ. ಹಾಗಂತ ನಿಧನ ಹೊಂದಿದವರ ಮನುಷ್ಯ ಸ್ವಭಾವದ ಸಹಜತೆಯನ್ನು ಹೇಳುವ ಬದಲು ವೃಥಾ ಹೊಗಳಿಕೆಗಳನ್ನು ಆರೋಪಿಸುವುದೂ ನಮ್ಮಲ್ಲಿನ ಸಂಸ್ಕಾರಹೀನತೆಯ ಲಕ್ಷಣವಲ್ಲವೇ? ಅದೂ ಕಲೆ-ಧರ್ಮ-ಮತಗಳ ಮೂಲಭೂತ ಧರ್ಮಗಳೆಡೆಗೇ ವಿವಾದಾಸ್ಪದ ವಿಷಯಗಳನ್ನು ಹುಟ್ಟುಹಾಕಿದವರ ಲೋಪಗಳಿಗೆ ತೇಪೆ ಹಾಕುವ, ಕಣ್ಣಿದ್ದೂ ಕುರುಡಾಗುವ, ಜಾಣಕಿವುಡನ್ನು ಪ್ರದರ್ಶಿಸುವ ನಿರ್ಲಕ್ಷ್ಯ ಯಾವ ಪುರುಷಾರ್ಥಕ್ಕೆ?

ಯಾವುದೇ ಕಲೆಯ ಗುರಿ ಲಿಂಗ-ಮತ-ಧರ್ಮಗಳಾಚೆಗಿನ ಒಂದು ಅದ್ಭುತ ರಸಾನುಭವ. ಅದನ್ನು ಪೂರೈಸದವರು ಎಷ್ಟೇ ದೊಡ್ಡ ಕಲಾವಿದರೇ ಆಗಿರಲಿ ಅವರು ಕಲೆ ಮತ್ತು ಕಲಾವಂತಿಕೆಯ ದೃಷ್ಟಿಯಿಂದ ಅನಿವಾರ್ಯವಲ್ಲ, ಅವರ ಅಗತ್ಯವೂ ಇಲ್ಲ್ಲ. ಅದರಲ್ಲೂ ಮತ-ಧರ್ಮಗಳ ಪರಿಮಿತಿಯಲ್ಲಿ ಕಲೆಯನ್ನು ಕಟ್ಟಿಹಾಕುವುದೇ ಒಂದು ದೊಡ್ಡ ಮೂರ್ಖತನ. ಹೀಗಿರುವಾಗ ಮತ-ಧರ್ಮಗಳ ಅನುಷ್ಠಾನಕ್ಕೆ, ಮತ ಪ್ರಸಾರಕ್ಕೆ ಅಥವಾ ಪರಧರ್ಮ ನಿಂದೆಗೆ ಕಲೆಗಳನ್ನು ಬಳಸುವುದು ಕಲೆ ಮತ್ತು ಧರ್ಮದ ಹಿನ್ನಲೆಯಲ್ಲಿ ದೊಡ್ಡ ಅಪರಾಧವಷ್ಟೇ ಅಲ್ಲ; ಮಾನವೀಯತೆಗೆ ನೀಡುವ ಕೊಡಲಿಯೇಟು. ದುರಂತವೆಂದರೆ ಸಂಗೀತ ನೃತ್ಯಾದಿಗಳನ್ನೂ ಒಳಗೊಂಡಂತೆ ಚಿತ್ರಕಲೆ, ಶಿಲ್ಪಕಲೆ ಹೀಗೆ ಎಲ್ಲೆಡೆಯೂತಮ್ಮತನದ ಅನಪೇಕ್ಷಿತ ವೈಭವೀಕರಣಕ್ಕೆ ಕಲೆಗಳನ್ನು ಅಸ್ತ್ರವನ್ನಾಗಿಸುವವರ ಸಂಖ್ಯೆ ಬಹಳ. ಅದಕ್ಕಿಂತಲೂ ಹೆಚ್ಚಾಗಿ ತಮಗೆ ಏನೇನೂ ಸಂಬಂಧವಿಲ್ಲವೆಂಬಂತೆ ಪ್ರಜ್ಞಾವಂತ ನಾಗರಿಕರೆನಿಸಿಕೊಂಡವರು ತೋರುವ ದಿವ್ಯ ನಿರ್ಲಕ್ಷ್ಯವು ಲಜ್ಜೆಗೇಡಿತನದ ಪರಮಾವಧಿ.

ಇಂತಹ ಪ್ರಯತ್ನಗಳ, ಅನುಭವಗಳ ಆಯುಷ್ಯ ಕ್ಷಣಿಕವೆಂಬುದು ವಿದಿತ. ನಿಜ, ಆದರೆ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷವೆಂಬುದು ಇಂತಹ ಸಂದರ್ಭಗಳಲ್ಲಿ ವೇದ್ಯವಾಗುವುದು ಕೊಳ್ಳೆ ಹೊಡೆದ ನಂತರ ಕೋಟೆ ಬಾಗಿಲು ಹಾಕಿದಂತೆಯೇ ! ಕಲಾ ದುರುಪಯೋಗವು ಸರಿಪಡಿಸಲಾರದ ಕಂದಕವನ್ನು ಉಂಟುಮಾಡಿದ ಉದಾಹರಣೆಗಳು ನಮ್ಮ ಇತಿಹಾಸದಲ್ಲಿ ಎಷ್ಟಿಲ್ಲ ಹೇಳಿ ? ಮತ್ತು ಅವೆಷ್ಟು ಬಗೆಯಲ್ಲಿ ತಿರುಚಲ್ಪಟ್ಟು ಶೈಕ್ಷಣಿಕ ಪಠ್ಯಗಳಲ್ಲೂ ತಿದ್ದಲಾರದ ಮಟ್ಟಿಗೆ ರೂಢಿಯಾಗಿಲ್ಲ? ಇದರಿಂದ ಧರ್ಮಕ್ಕೋ, ಕಲೆಗೋ ಚ್ಯುತಿ ಅಥವಾ ಹಾನಿಯಾಗಿ ಇತಿಹಾಸದ ಪುಟಗಳು ಶಾಪಗ್ರಸ್ಥವಾಗಿ, ವರ್ತಮಾನವೂ ಹೂತುಹೋಗುತ್ತಾ, ಭವಿಷ್ಯ ಪ್ರಶ್ನಾರ್ಥಕವಾಗಿ ಉಳಿಯುತ್ತಿದೆ. ಜೊತೆಗೆ ಸಮಾಜದ ಸ್ವಾಸ್ಥ್ಯವೂ ಕೆಡುತ್ತಾ ಮತ್ತೆಂದು ನಮ್ಮ ಪುರಾತನರನ್ನು ದಿಟ್ಟಿಸದಿರುವಷ್ಟರ ಮಟ್ಟಿಗಿನ ಪೂರ್ವಾಗ್ರಹ ಆವರಿಸಿಕೊಳ್ಳುತ್ತಲಿದೆ.

ಪ್ರತಿಯೊಂದು ಕಲೆಗಳೂ ತನ್ನದೇ ಆದ ಪರಿಸರ, ನೈಜ ಅಭಿವ್ಯಕ್ತಿ, ಪ್ರೇಕ್ಷಕ ವರ್ಗ, ಬೆಳವಣಿಗೆಯ ನೆಲೆಗಳಿಂದ ಕಾಲ-ದೇಶ-ಜನಗಳನ್ನನುಸರಿಸಿ ವೈವಿಧ್ಯವನ್ನು ಪಡೆದಿರುತ್ತವೆ. ಹೀಗಿರುವಾಗ ಯಾವುದೇ ಕಲೆಯನ್ನು ತಮ್ಮ ಅಯಾಚಿತ ಪ್ರಸಿದ್ಧಿಯ ಹಂಬಲಕ್ಕೋ; ತಮ್ಮ ಜಾತಿ, ಮತ, ಧರ್ಮದ ಪಾರಮ್ಯವೇ ಹೆಚ್ಚು ಎಂಬುದನ್ನು ಸಾಧಿಸುವುದಕ್ಕೋ; ಒಂದಷ್ಟು ಮತಪ್ರಚಾರ ನಡೆಸಲಿಕ್ಕೋ ಅಥವಾ ತಂತಮ್ಮ ಹೆಚ್ಚುಗಾರಿಕೆ, ಪಟ್ಟಭದ್ರ ಹಿತಾಸಕ್ತಿಗೋ; ಸರ್ಕಾರದ ಅನುದಾನ, ಪ್ರಯೋಜನಗಳ ಲಾಭ ಗಿಟ್ಟಿಸಿಕೊಳ್ಳಲೋ ಮತ್ತೊಂದು ಧರ್ಮದವರನ್ನು ಹೀಗಳೆದು ಇಲ್ಲವೇ ಅಪರೋಕ್ಷವಾಗಿ ಹೀಯಾಳಿಸಿ, ಊಹಾಪೋಹಗಳನ್ನು ಸೃಷ್ಟಿಸಿ ಅಥವಾ ವೃಥಾ ವೈಭವೀಕರಿಸಿ, ಸಮಕಾಲೀನದ ಮುಖವಾಡ ತೊಟ್ಟು ಸಂಕರ ನಡೆಸುವವರ ಜಾಯಮಾನ ಇಂದು ನಿನ್ನೆಯದಲ್ಲ. ಈ ಮೂಲಕ ಉಳಿದವರ ಕೆಂಗಣ್ಣಿಗೆ ಗುರಿಯಾಗುವುದನ್ನೇ ಗುತ್ತಿಗೆಗೆ ತೆಗೆದುಕೊಂಡವರಂತೆ ಬದುಕುವವರು ; ವಿರೋಧಿಸುವ, ವಾದಿಸುವ ನೆಪದಲ್ಲಿ ತಮ್ಮ ಉದ್ದೇಶಿತಾರ್ಥ ನೆರವೇರಿಸಿಕೊಳ್ಳುವವರೂ ನಮ್ಮ ನಡುವಿನಲ್ಲಿ ಸಾಕಷ್ಟು ಮಂದಿ ಇದ್ದಾರೆ. ಒಂದರ್ಥದಲ್ಲಿ ಈ ಬಗೆಯ ಮನೋಧರ್ಮ ಉಳಿದವರಿಗಿಂತ ವಿಭಿನ್ನವಾಗಿರುವ ಚಟಕ್ಕೆ ಋಣಾತ್ಮಕವಾಗಿಯಾದರೂ ಪ್ರಸಿದ್ಧಿಯನ್ನು ಪಡೆಯಬೇಕು ಎಂಬ ವಿಕೃತ ಆನಂದವೇ ಆಗಿರುತ್ತದೆ.

ಗೆಳೆಯರೊಬ್ಬರ ನಿಕಟವರ್ತಿಗಳ ಅನುಭವದ ನೈಜ ಘಟನೆ. ಸಂಗೀತ ಕಾಲೇಜೊಂದರ ಪ್ರಾಂಶುಪಾಲರಾಗಿ ಆಯ್ಕೆಯಾದ ಅವರಿಗೆ ಕೆಲವೇ ದಿನಗಳಲ್ಲಿ ಎದುರಾದ ದೊಡ್ಡ ಆಘಾತ – ವಾತಾಪಿ ಗಣಪತಿಂ ಭಜೇ ಕೀರ್ತನೆಯನ್ನು ಬೇರೊಂದು ಮತದ ದೇವರ ಹೆಸರನ್ನು ಹಾಕಿ ಅದೇ ಧಾಟಿಯಲ್ಲಿ ಹಾಡಿ, ಪಠ್ಯಕ್ರವುದಲ್ಲಿ ಸೇರಿಸಿ ಪ್ರಸಿದ್ಧಿಯಾಗಿಸಬೇಕೆಂಬ ಆಗ್ರಹಪೂರ್ವಕ ವಿನಂತಿ ! ಕೊನೆಗೆ ತಮ್ಮ ಆತ್ಮಸಾಕ್ಷಿಗೆ ದ್ರೋಹ ಬಗೆಯಲು ಮನಸ್ಸಿಲ್ಲದೆ ತಮ್ಮ ಕನಸಿನ ಹುದ್ದೆಗೆ ರಾಜೀನಾಮೆ ನೀಡಿ ವಾಪಾಸ್ಸಾದರಂತೆ ! ತಿಳಿದು ಬಂದ ಪ್ರಕರಣಗಳು ಕೆಲವು. ತಿಳಿಯದವು ಅದೆಷ್ಟೋ !

ಶತಶತಮಾನಗಳಿಂದಲೂ ನಮ್ಮ ಭರತಖಂಡದ ಮೇಲೆ ಅದೆಷ್ಟೋ ಆಕ್ರಮಣ, ಹಿಂಸೆ, ಅನಾಚಾರಗಳು, ಸನಾತನ ಪ್ರಜ್ಞೆಯ ಕುರಿತಂತೆ ಅಪಪ್ರಚಾರಗಳು ನಡೆಯುತ್ತಾ ಬಂದಿವೆ. ಆದರೂ ಇಲ್ಲಿನ ಯಾವ ಮಾದರಿಗೂ ಕುಟಿಲ ತಂತ್ರಾಲೋಚನೆಗಳು ಆದರ್ಶವಾಗಲೇ ಇಲ್ಲ. ಬದಲಾಗಿ ದಾಳಿ ಮಾಡಿದ ಎಲ್ಲಾ ಸಂಸ್ಕೃತಿಗಳಿಗೂ ಆನೋ ಭದ್ರಾಃ ಕೃತವೋ ಯಂತು ವಿಶ್ವತಃ ಎನ್ನುತ್ತಲೇ ಸದಾಕಾಲವು ಸ್ವಾಗತಿಸುತ್ತಾ ಬಂದಿರುವ ಸಮೃದ್ಧ ರಾಷ್ಟ್ರ ನಮ್ಮದು. ಆದ್ದರಿಂದಲೇ ಮೊಗೆದಷ್ಟೂ ಬತ್ತದ ಅನಂತ ಸತ್ತ್ವ, ತತ್ತ್ವ,, ಆಧಾತ್ಮ, ಜ್ಞಾನ ಸಾಗರದ ತವರಿಗೆ ಇಂದಿಗೂ ಅದೆಷ್ಟೋ ಸಹೃದಯಿ ವಿದೇಶಿಯರು ಆಕರ್ಷಿತರಾಗುತ್ತಲೇ ಇದ್ದಾರೆ. ಹಾಗಿದ್ದಾಗ ನಮ್ಮ ಸಂಸ್ಕೃತಿಗೆ ನಾವೇ iಸಿ ಬಳಿಯುವುದೂ ಒಂದೇ; ತೆಪ್ಪಗೆ ಇರುವುದೂ ಒಂದೇ !

ಕಲೆಯನ್ನೇ ಪ್ರಲೋಭನೆಗೆ, ಮಾರಾಟಕ್ಕೆ ಇಡುವ, ಸ್ವಹಿತಾಸಕ್ತಿಯ ಲೋಭಕ್ಕೆ ಬಳಸುವ ಕೀಳು, ಬೋಳು ವ್ಯಕ್ತಿತ್ವಗಳ ದಾಹಕ್ಕೆ ಕಲೆಗಳೂ ಪ್ರತೀಕವೆಂಬಂತೆಯೇ ಆಗಿಬಿಡುವ ಅಪಾಯ ನಿಧಾನವಾಗಿ ಗೋಚರಿಸುತ್ತದೆ. ಆದರೆ ಭೂತ, ವರ್ತಮಾನ, ಭವಿಷ್ಯ ಎಲ್ಲವೂ ಭ್ರಷ್ಟವಾಗುವ ವರೆಗೆ, ಅದರ ಇತಿಹಾಸವು ಹೆಪ್ಪುಗಟ್ಟುವ ತನಕ ಎಲ್ಲಾ ದಾರ್ಷ್ಟ್ಯ, ದೌರ್ಜನ್ಯಗಳಿಗೆ ನಮ್ಮ ಮೌನವೇ ಉತ್ತರವಾದರೆ ಅದು ಬಹಳಷ್ಟು ಸಲ ಸಮ್ಮತಿ ಲಕ್ಷಣವೇ ಆಗಿ ಕರಾಳ ಅಧ್ಯಾಯದ ಸರಪಣಿಯೇ ನಮ್ಮನ್ನು ಹಿಂಬಾಲಿಸಬಹುದು. ಎಚ್ಚೆತ್ತುಕೊಳ್ಳುವ ವೇಳೆಗೆ ಕೈಮೀರಿ ಹೋಗಬಹುದು.

ಶಿಕ್ಷಣ, ಆಧ್ಯಾತ್ಮ, ಕಲೆಗೆ ಅಂಟುವ ಕಳಂಕ ಎಂದೆಂದಿಗೂ ಮಾಸದ ಗಾಯವಾಗುತ್ತದೆ. ಎಚ್ಚರ !

ಪ್ರೀತಿಯಿಂದ,

ಸಂಪಾದಕರು

Leave a Reply

*

code