ಅಂಕಣಗಳು

Subscribe


 

ಅಷ್ಟನಾಯಿಕೆಯರ ಚಿತ್ತವೃತ್ತಿ-ಭಾಗ ೧

Posted On: Tuesday, December 14th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಲಲಿತಲಹರಿಯ ಮೂಲಕ ಮನೋಜ್ಞವಾದ, ಅಪೂರ್ವವೆನಿಸುವ ನೃತ್ಯಸಂಬಂಧೀ ಕನ್ನಡ ಭಾಷಾ ರಚನೆಗಳನ್ನು ಹಲವು ಸಂಚಿಕೆಗಳಿಂದ ಓದಿಕೊಂಡು ಬಂದಿದ್ದೀರಿ. ಈಗ ಅವೆಲ್ಲದಕ್ಕೂ ಕಳಶಪ್ರಾಯವಾಗಿ ನೃತ್ಯ-ನಾಟ್ಯಾದಿ ವರ್ಗಗಳಲ್ಲಿ ಸಾರ್ವಕಾಲೀನವೆನಿಸುವ, ಅಭಿವ್ಯಕ್ತಿಗೆ ಸವಾಲು ಮತ್ತು ಸಾಧನವೆನಿಸುವ ಅಷ್ಟನಾಯಿಕೆಯರ ಚಿತ್ತವೃತ್ತಿಗಳನ್ನು ಬಗೆಬಗೆಯಾಗಿ ಹರಡಿ ಅದರ ಅಂದಚೆಂದಗಳನ್ನು ಕಾಣಿಸುವ ಪ್ರಯತ್ನ ಈ ಸಂಚಿಕೆಯಿಂದ ಪ್ರಾರಂಭಗೊಳ್ಳಲಿದೆ. ಆ ಮೂಲಕವಾಗಿ ನಾಟ್ಯಾಭಿವ್ಯಕ್ತಿಗೆ ಕಲಾವಿದರಿಗೆ ಪ್ರೇರಣೆ ಮತ್ತು ಪೋಷಣೆಯನ್ನು ನೀಡುವುದರೊಂದಿಗೆ ಓದುಗರ ನಡುವೆ ಸಂವಾದ, ಅರಿವಿನ ಹರಿವಿಗೆ ಮತ್ತಷ್ಟು ಅವಕಾಶವಾಗುವುದೆಂಬ ನಂಬುಗೆ ನಮ್ಮದು. ಇದನ್ನು ಸೂಕ್ತವಾಗಿ ಕಂಡುಕೊಂಡಲ್ಲಿ ರಸಿಕವರ್ಗಕ್ಕೆ ರಸದೃಷ್ಟಿ, ಕಲ್ಪನಾವಕಾಶ, ಭಾವಾಭಿನಯ ಸಾಮರ್ಥ್ಯ, ರಸಪ್ರತಿಪಾದನೆಯ ಕ್ಷಿತಿಜ ಮತ್ತಷ್ಟು ವಿಸ್ತಾರವೆಂಬಂತೆ ಕಾಣುವುದರಲ್ಲಿ ಸಂಶಯವಿಲ್ಲ ಎಂಬುದು ವಿದ್ವಜ್ಜನರ ಅನಿಸಿಕೆ. ವರ್ಷದಾದ್ಯಂತ ಒಂದೊಂದು ಸಂಚಿಕೆಗೂ ಒಬ್ಬೊಬ್ಬ ನಾಯಿಕೆಯ ಸಂಕ್ಷಿಪ್ತ ಪರಿಚಯ, ಅದರ ಕುರಿತ ಕಾವ್ಯ ದೃಷ್ಟಿ, ಅನುಭವ-ಅನುಭಾವ ನೆಲೆಗಟ್ಟನ್ನು ಪರಿಚಯಿಸುವ, ಅಭಿನಯಕ್ಕೆ ಪೂರಕವಾದ ವಿಶ್ಲೇಷಣೆ, ಯಕ್ಷಗಾನ ಮತ್ತು ನೃತ್ಯಸಂಬಂಧೀ ಆಯಾಮಗಳನ್ನು ಈ ಮೂಲಕ ನೀಡಲಾಗುತ್ತದೆ. ಈ ಪ್ರಯತ್ನಕ್ಕೆ ಭ್ರಮರಿಯ ಹಿರಿಯ ಮಾರ್ಗದರ್ಶಿ ಶತಾವಧಾನಿ ಡಾ| ಆರ್. ಗಣೇಶ್, ಏಕವ್ಯಕ್ತಿ ಯಕ್ಷಗಾನದ ಸಾವಿರದ ಸಾಧಕ ಮಂಟಪ ಪ್ರಭಾಕರ ಉಪಾಧ್ಯ ಮತ್ತು ನಮ್ಮ ಬಳಗದ ಹಿರಿಯ ಕವಿ ಧಾರವಾಡದ ದಿವಾಕರ ಹೆಗಡೆಯವರು ಹೃತ್ಪೂರ್ವಕವಾಗಿ ಕೈಜೋಡಿಸಿದ್ದಾರೆ. ಶತಾವಧಾನಿ ಡಾ| ಆರ್. ಗಣೇಶ್ ಅವರ ‘ಭಾಮಿನೀ’ ಕಾವ್ಯ, ಅದಕ್ಕೆ ಮಂಟಪರ ಪ್ರಥಮ ಅಭಿವ್ಯಕ್ತಿಯ ಅನುಭವದ ಹೂರಣ, ಮತ್ತು ದಿವಾಕರ ಹೆಗಡೆಯವರ ನೃತ್ಯಸಂಬಂಧೀ ನೋಟಗಳು ಜೊತೆಯಾಗಲಿವೆ. ಈ ಸಂಚಿಕೆಯು ನಾಯಿಕೆಯರ ನೋಟಕ್ಕೆ ಒಂದು ಮುನ್ನುಡಿ.

(ವಿ.ಸೂ : ಈವರೆಗೆ ಅಷ್ಟನಾಯಿಕೆಯರನ್ನು ಒಂದೇ ಮೂಸೆಯಲ್ಲಿ ಹಿಡಿದಿಡುವ ಪ್ರಯತ್ನ ಇಲ್ಲವೇ ಇಲ್ಲವೆಂಬಷ್ಟು ವಿರಳ. ಆದರೆ ಮಂಟಪರ ‘ಭಾಮಿನೀ’ ಅಷ್ಟನಾಯಿಕೆಯರ ಅಭಿವ್ಯಕ್ತಿ ವಿಷಯದಲ್ಲಿ ಒಂದು ಮೈಲಿಗಲ್ಲು. ಈಗ ‘ಭಾಮಿನೀ’ಯ ಸಿ.ಡಿ.ಗಳು ಯುವ ಚಲನಚಿತ್ರ ನಿರ್ದೇಶಕ ಅಭಯಸಿಂಹ ಅವರ ಸಾಹಸದಲ್ಲಿ ಚೆಂದವಾಗಿ ಮೂಡಿಬಂದಿದ್ದು, ಸಿ.ಡಿ.ಗಳಿಂದ ಬಂದ ಧನ ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್‌ನ ಸದಭಿರುಚಿಯ ಕಾರ್ಯಕ್ರಮಗಳಿಗೆ ವಿನಿಯೋಗವಾಗಲಿದೆ. ಆಸಕ್ತರು ಸಂಘಟಕ ಶ್ರೀಯುತ ಮುರಳಿ ಕಡೆಕಾರ್ ಅವರನ್ನು ಸಂಪರ್ಕಿಸಬಹುದು. ಬೆಲೆ : ೧೦೦ ರೂ. ; ಫೋನ್ ನಂ :+೯೧ ೯೪೪೯೦೮೮೭೦೮ )

ಪೀಠಿಕೆ-ಪರಿಚಯ

ಮನೂ ‘ಬನ

ನಾಯಕ- ನಾಯಿಕಾ ಭಾವಗಳು ನಾಟ್ಯದ ಸಾತ್ತ್ವಿಕ ಅಭಿನಯಕ್ಕೆ ಪೋಷಕವಾದ ಹಾವಭಾವಗಳು. ಭಾವನೆಗಳ ಪರಸ್ಪರ ವಿನಿಮಯ ಮತ್ತು ಅದರ ಅವಸ್ಥೆಗಳೇ ಇಲ್ಲಿ ಮೂಲವಸ್ತು. ರಸಗಳಲ್ಲೇ ಪ್ರಧಾನವೆನಿಸುವ ಶೃಂಗಾರದ ಅವಸ್ಥೆಗೆ ಪೂರಕವಾಗಿ ರಚಿಸಲ್ಪಟ್ಟವು. ಆದರೂ ಪ್ರತಿಯೊಂದು ನಾಯಿಕೆ-ನಾಯಕರ ರಸಪ್ರತಿಪಾದನೆ ನವರಸಕ್ಕಿಂತಲೂ ಮೀರಿದ್ದು ಎಂಬುದು ಲಾಕ್ಷಣಿಕರ ಅಭಿಪ್ರಾಯ. (ನಾಯಕಿ ಎಂಬ ಪದ ಉಚ್ಛಾರ ತಪ್ಪು) ಅಮೂರ್ತವನ್ನು ಮೂರ್ತವಾಗಿಸುವಲ್ಲಿ ಮತ್ತ್ತು ಮೂರ್ತ ಕಲ್ಪನೆಯ ಮೂಲಕ ಅಮೂರ್ತವನ್ನು ಕಾಣುವಲ್ಲಿ ನಾಯಿಕೆ-ನಾಯಕ ಭಾವವು ನೃತ್ಯದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಜೀವಾತ್ಮ ಪರಮಾತ್ಮನ ಸಾಂಗತ್ಯವನ್ನು ಲೌಕಿಕ ಉದಾಹರಣೆಗಳ ಮೂಲಕ ಕಂಡುಕೊಂಡು ಲೌಕಿಕದ ಆನಂದ ಮತ್ತು ಪಾರಮಾರ್ಥಿಕದ ಅನುಭವವನ್ನು ಕಲಾವಿದನು ಸಾಕ್ಷಾತ್ಕಕರಿಸಿಕೊಳ್ಳುವುದರೊಂದಿಗೆ ರಸಿಕರಿಗೂ ದಕ್ಕುವಂತೆ ಮಾಡುವುದು ನಿಜಕ್ಕೂ ನಾಯಿಕಾ-ನಾಯಕ ಭಾವಗಳ ಪರಮ ಗುರಿ. ಕಲಾವಿದರಿಗೆ ಇವು ಒಡ್ಡುವ ಸವಾಲು ಅವರ ಪ್ರತಿಭಾಸಂಪನ್ನತೆಗೆ ಹಿಡಿಯುವ ದರ್ಪಣ. ತತ್ತ್ವಾದರ್ಶವಾದ, ಆಧ್ಯಾತ್ಮಿಕ ಸಾಂಕೇತಿಕತೆಯ, ಸೌಂದರ್ಯದ ಸಮೀಕರಣವುಳ್ಳ ಈ ಭಾವಗಳನ್ನು ನಾಟ್ಯಶಾಸ್ತ್ರದ ಪ್ರಾರಂಭದ ಅಧ್ಯಾಯಗಳಲ್ಲಿಯೇ ಗುರುತಿಸಲಾಗುತ್ತದೆ. ಈ ಭಾವ ಉಪನಿಷತ್ತು, ಪುರಾಣಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಉಲ್ಲೇಖಿತವಾಗಿದೆ. ಜಯದೇವನ ಅಷ್ಟಪದಿ ನಾಯಿಕಾ ಭಾವದ ನಿರೂಪಣೆಯಲ್ಲಿ ಸಂದರ್ಭ ಸಹಿತವಾಗಿ ಲೌಕಿಕ ಮತ್ತು ದೈವಿಕವನ್ನು ಸಂಯೋಗಗೊಳಿಸುವ ಮಹೋನ್ನತ ಕಾವ್ಯ. ಭರತಮುನಿಯು ನಾಟಕವನ್ನು ಸಂಯೋಜಿಸುವಾಗ ೪ ವೃತ್ತಿಗಳಲ್ಲೊಂದಾದ ‘ಕೈಶಿಕೀ’ ವೃತ್ತಿಯನ್ನು ಆಚರಿಸುವ ನೃತ್ಯಗಾತಿಯರ ಕೊರತೆ ಕಂಡುಕೊಂಡು ಬ್ರಹ್ಮನನ್ನು ಪ್ರಾರ್ಥಿಸಿ, ನಾಯಿಕಾ ಪಾತ್ರಗಳನ್ನು ನಿರ್ವಹಿಸುವ ಅಪ್ಸರೆಯರನ್ನು ಸೃಷ್ಟಿಸಿಕೊಂಡನೆಂದು ಪ್ರತೀತಿ. ತದನಂತರ ದೇವಸ್ಥಾನಗಳಿಂದ ಪೋಷಿತವಾಗುತ್ತಿದ್ದ ನೃತ್ಯಕಲೆ; ದೇವರನ್ನು ಸ್ತುತಿಸಿ, ನರ್ತಿಸುವ ದೇವದಾಸಿಯರನ್ನು ಸರ್ವೋಚ್ಛ ನಾಯಿಕೆಯರೆಂದು ಪರಿಗಣಿಸಿತು. ರಾಜಾಶ್ರಯದಲ್ಲಿ ಈ ಕಲ್ಪನೆಯು ರಾಜನಿಗೆ ಸೀಮಿತವಾಗಿ ಕ್ರಮೇಣ ಹಲವು ಸ್ಥಿತ್ಯಂತರಗಳಿಂದ ಕಳಂಕಕ್ಕೊಳಗಾಯಿತು. ಮುಂದೆ ೨೦ನೇ ಶತಮಾನದ ಪ್ರಾರಂಭದ ದಶಕಗಳಲ್ಲಿ ನೃತ್ಯವನ್ನು ಬಹಿಷ್ಕಾರ ಮಾಡುವ ಕ್ರಮಗಳು ತಲೆಯೆತ್ತಿ ನಿಂತಾಗ ನೃತ್ಯದ ಪುನರುಜ್ಜೀವನಕ್ಕೆ ರುಕ್ಮಿಣೀ ದೇವಿ ಅರುಂಡೇಲ್ ಸದಿರ್‌ನಲ್ಲಿ ಬಳಸುತ್ತಿದ್ದ ಶೃಂಗಾರದ ಕಲ್ಪನೆಯನ್ನೇ ಕಿತ್ತೆಸೆದು ನೃತ್ಯದ ನವೀಕರಣಕ್ಕೆಂದು ಭರತನಾಟ್ಯವೆಂದು ಹೆಸರಿಸಿ ಭಕ್ತಿ ಶೃಂಗಾರವೆಂಬ ಹೊಸ ಕಲ್ಪನೆಯನ್ನೇ ಪರಿಚಯಿಸಿದರು. ಬಹುಚಾಲ್ತಿಯಲ್ಲಿರುವ ನಾಟ್ಯಶಾಸ್ತ್ರ ಪ್ರಸ್ತಾಪಿಸುವ ನಾಯಿಕೆಯರು ೮, ನಾಯಕರು ೪. ಅವು ಹೀಗಿವೆ : ನಾಯಕರು : ಧೀರೋದಾತ್ತ, ಧೀರಲಲಿತ, ಧೀರೋದ್ಧಟ, ಧೀರಶಾಂತ. ನಾಯಿಕೆಯರು : ಪ್ರೋಷಿತಪತಿಕಾ, ವಾಸಕಸಜ್ಜಿಕಾ, ಅಭಿಸಾರಿಕಾ, ವಿಪ್ರಲಬ್ಧಾ, ವಿರಹೋತ್ಕಂಠಿತಾ, ಖಂಡಿತಾ, ಕಲಹಾಂತರಿತಾ, ಸ್ವಾಧೀನಪತಿಕಾ. ಇವುಗಳಲ್ಲೂ ಬೇರೆ ಬೇರೆ ವಿಧಧ, ವರ್ಗದ, ಸ್ಥಿತಿಯ, ಗುಣ, ನಡವಳಿಕೆಯ ನಾಯಿಕೆಯರು ಮತ್ತು ನಾಯಕರ ಬೇಧಗಳಿವೆ. ಇಂತಹ ನಾಯಿಕಾ-ನಾಯಕ ಬೇಧಗಳಿಗೆ ಸಹಾಯಕ-ಸಹಾಯಕಿಯರಾಗಿ ಸಖ-ಸಖಿಯರಿದ್ದು ಅವರಲ್ಲೂ ಬಗೆಬಗೆಯ ರಸ, ಭಾವಾನುಭಾವ, ವಿಭಾವಾದಿ ಮನೋಧರ್ಮಗಳಿವೆ. ಜೊತೆಗೆ ಶೃಂಗಾರದ ಬೇರೆ ಬೇರೆ ವಿಧಗಳಲ್ಲಿ ನಾಯಿಕೆಯರ ಹಲವು ಅವಸ್ಥೆಗಳು ಇನ್ನೂ ಅಧಿಕ. ಉಳಿದಂತೆ ಮೇಲಿನ ನಾಯಿಕೆಯರಿಗೆ ಪೂರಕವಾಗಿ ಉತ್ತಮ, ಮಧ್ಯಮ, ಅಧಮ ಎಂದೋ; ಸ್ವೀಯಾ, ಪರಕೀಯ, ಸಾಮಾನ್ಯೆ ಎಂದೋ; ಮುಗ್ಧಾ, ಮಧ್ಯಾ, ಪ್ರಗಲ್ಬಾ ಎಂಬುದಾಗಿಯೋ; ಜ್ಯೇಷ್ಠಾ, ಕನಿಷ್ಠಾ; ಧೀರ, ಧೀರಾಧೀರ, ಅಧೀರೆ; ಉಧಾ, ಅನುಧಾ; ಕನ್ಯಕೆ, ಪರೋಢೆ ಎಂದೋ ಪ್ರಧಾನ ನಾಯಿಕೆಯರನ್ನೂ ಒಳಗೊಂಡಂತೆ ವಿಭಾಗಿಸುವ ಪ್ರಕ್ರಿಯೆ ಹೆಚ್ಚು ಜನಜನಿತ. ಜೊತೆಗೆ ಪುನರ್ಭೂ (ಉಪವಿಭಾಗ: ಅಕ್ಷತ, ಕ್ಷತ, ಯತಾಯತ, ಯಯವರ), ಸ್ವೈರಿಣಿ, ಗಣಿಕ, ರೂಪಜಿವಾ, ವಿಲಾಸಿನಿ, ಸ್ವಯಂವರ, ವೇಶ್ಯೆ, ಕುಲಜ, ಪನ್ಯಕಾಮಿನಿ, ಕ್ಷತ್ರಿಯ, ದಿವ್ಯ, ಅದಿವ್ಯ, ದಿವ್ಯಾದಿವ್ಯ ಮುಂತಾದ ನಾಯಿಕೆಯರ ಪ್ರಸ್ತಾಪವೂ ಇವೆ. ಇವುಗಳೆಲ್ಲದರೊಳಗೂ ಹಲವು ಉಪವಿಭಾಗಗಳಿದ್ದು ಅವುಗಳ ಪೈಕಿ ಕೆಲವು ಕೆಳಗಿನಂತಿವೆ. ಜ್ಞಾತ ಯೌವನ, ಅಜ್ಞಾತ ಯೌವನ, ನವೋಢ, ವಿಶ್ರಬ್ಧ ನವೋಢ, ಗುಪ್ತ, ವಿದಗ್ಧ, ಲಕ್ಷಿತ, ಕುಲಟ, ಅನುಸಾಯನ, ಮಾನವತಿ, ವಕ್ರೋಕ್ತಿ ಗರ್ವಿತ, ಅನ್ಯ ಸಂಭೋಗ ದುಃಖಿತ, ಪ್ರೇಮ ಗರ್ವಿತ, ಸೌಂದರ್ಯ ಗರ್ವಿತ, ಪ್ರಥಮಾವತೀರ್ಣ, ಪ್ರಥಮಾನತೀರ್ಣ, ರತಿವಾಮ, ಮಾನಮೃದು, ಸಮಾಧಿಕ ಲಜ್ಜಾವತಿ, ವಿಚಿತ್ರ ಸುರತ, ಪ್ರರೂಢ ಸ್ಮರ, ಪ್ರರೂಢ ಯೌವನ, ಈಶತ್ ಪ್ರಗಲ್ಭಾ ವಚನ, ಮಧ್ಯಮ ವೃದ್ದಿತ, ಸ್ಮರಂಧಾ, ಗಾಢ ತಾರುಣ್ಯ, ಸಮಸ್ಥಾರದ ಕೋವಿದ, ಭಾವೋನ್ನತ, ದಾರ್ವ್ರೀಡ, ಅಕ್ರಾಂತ ನಾಯಕ, ರಕ್ತ, ವಿರಕ್ತ, ನವ-ವಯ, ನವ-ಕಾಮ, ರತೌವಾಮ, ಸಖಿವಸಾ, ಸವ್ರೀದರತ ಪ್ರಯತ್ನಾ, ರೋಷಾಕೃತವಾಸ್ಪ-ಮೌನಾ, ಮದನವಿಕಾರ, ಮೃದ್ವಿ, ಅಕ್ಷಮ, ಸಮಾನ ಲಜ್ಜಾಮದನಾ, ಪ್ರೋದ್ಯತ್ತಾರುಣ್ಯಶಾಲಿನೀ, ಕಿಂಚಿತ ಪ್ರಗಲ್ಭೋಕ್ತಿ, ಮೋಹಾಂತ ಸುರಕ್ಷಮಾ, ಪೂರ್ಣ ತಾರುಣ್ಯ, ಮಧಾಂಧ, ಊರೂರಾತೋತ್ಶುತ, ರಸಾಕ್ರಾಂತ ವಲ್ಲಭ, ಭೂರಿಭಾವೋದ್ಯಾಮಾಭಿಜ್ಞ, ಅತಿಪ್ರೌಢೋಕ್ತಿ, ಅತಿ ಪ್ರೌಢ ಜ್ಯೇಷ್ಠ, ಕ್ಲುಪ್ತಾನುರಾಗ, ಕಲ್ಪಿತಾನುರಾಗ ಇತ್ಯಾದಿ. ನಾಯಿಕೆಯ ಸಹಾಯಕಿಯರಾಗಿ ದಾಸಿ, ಸಖಿ, ರಜಕಸ್ತ್ರೀ, ಸಹೋದರಿ, ಭಿಕ್ಷುಕಿ, ಸನ್ಯಾಸಿನಿ, ಚಿತ್ರಗಾರ್ತಿ, ಕುಶಲ ಕಾರ್ಯ ನಿರತೆ, ಮಲತಾಯಿಯ ಮಗಳು, ನೆರೆಮನೆಯವಳು, ತಾಂಬೂಲ ತರುವವಳು, ಗಂಧ ಪೂಸುವವಳು ಎಂದು ಹಲವು ದೂತಿಯರ ವರ್ಣನೆ ಕಂಡುಬಂದಿದೆ. ಆದರೆ ಪ್ರಧಾನ ನಾಯಕರ ಹೊರತಾಗಿ ನಮಗೆ ಕಾಣುವುದು ಪತಿ, ಉಪಪತಿ, ವೈಶಿಕ ಎಂಬ ಗುಣ ಆಧಾರ ನಾಯಕರ ವಿಭಾಗವನ್ನು; ಅನುಕೂಲ, ದಕ್ಷಿಣ, ಶಠ, ದೃಷ್ಟ ಎಂಬ ನಡವಳಿಕೆ ಆಧರಿತ ವರ್ಗವನ್ನು ; ಉತ್ತಮ, ಮಧ್ಯಮ, ಅಧಮ ಎಂಬ ಭೇದಗಳು ಮತ್ತು ನಾಯಕನ ಸಹಾಯಕರಾಗಿ ವಿಟ, ವಿದೂಷಕ, ಚೇಟ ಹಾಗು ವಿರೋಧಿಯೆನಿಸುವ ಪ್ರತಿನಾಯಕ. ಇವೆಲ್ಲಾ ವಿಭಾಗದ ಲಕ್ಷಣ, ಮತ್ತು ಅದರೊಳಗಿನ ಮತ್ತಷ್ಟು ಉಪವಿಭಾಗಗಳನ್ನು, ಭಾವಗಳಿಗೆ ತಕ್ಕುದಾದ ಲಕ್ಷಣಗಳು, ಪಾತ್ರ-ಗುಣ-ದೋಷಗಳು ಹೇಳುತ್ತಾ ಹೋದರೆ ಬೃಹತ್ ಸಂಶೋಧನೆ ಆಗುವಷ್ಟು ವಿಷಯವಿದೆ. ಅದರಲ್ಲೂ ಸ್ತ್ರೀಪಾತ್ರವನ್ನುದ್ದೇಶಿಸುವ ನಾಯಿಕಾ ಗುಣಧರ್ಮಗಳು ನಾಯಕನಿಗಿಂತ ಹೆಚ್ಚು ಆಯ್ಕೆ ಮತ್ತು ವಿವಿಧತೆಯುಳ್ಳವುಗಳು. ಸಹಜವಾಗಿ ಗಮನಿಸಿದರೂ ಪುರುಷ ಭಾವಾಭಿವ್ಯಕ್ತಿಗಿಂತ ಸ್ತ್ರೀ ವೈವಿಧ್ಯಮಯ, ವಿಶಿಷ್ಟವೆನಿಸುವ ಭಾವ-ರಸ ಪ್ರಕಟಣೆಯ ಹೇತು. ಹಾಗಾಗಿ ಭರತನಷ್ಟೇ ಅಲ್ಲದೆ ರುದ್ರಟನ ಕಾವ್ಯಾಲಂಕಾರ, ಶೃಂಗಾರ ತಿಲಕ, ಧನಂಜಯನ ದಶರೂಪಕ, ಭೋಜರಾಜನ ಸರಸ್ವತಿ ಕಂಠಾಭರಣ, ಶೃಂಗಾರ ಪ್ರಕಾಶ, ವಾಗ್ಭಟನ ವಾಗ್ಭಂಟಾಲಂಕಾರ, ಹೇಮಚಂದ್ರನ ಕಾವ್ಯಾನುಶಾಸನ, ಶಾರದಾತನಯನ ಭಾವಪ್ರಕಾಶ, ಸಿಂಹಭೂಪಾಲನ ಲಾಸ್ಯರಂಜನ, ರಸಾರ್ಣವ, ಸುಧಾಕರ, ಪುಂಡರೀಕ ವಿಠಲನ ನರ್ತನನಿರ್ಣಯ, ವಿದ್ಯಾನಾಥನ ಪ್ರತಾಪರುದ್ರ, ಯಶೋಭೂಷಣ, ವಿಶ್ವನಾಥನ ಸಾಹಿತ್ಯದರ್ಪಣ, ಅಚ್ಯುತ ಶರ್ಮನ ಸಾಹಿತ್ಯಸಾರ, ಭಾನುದತ್ತನ ಕೃತಿಗಳು ಹಾಗೂ ಅಗ್ನಿಪುರಾಣ, ಭರತ ರಸಪ್ರಕರಣಂ, ನಾಟ್ಯದರ್ಪಣ ಇತ್ಯಾದಿಯಾಗಿ ಒಬ್ಬೊಬ್ಬ ನಾಟ್ಯಶಾಸ್ತ್ರಜ್ಞನೂ ತನಗೆ ತೋರಿದಂತೆ ವಿಧ ವಿಧವಾಗಿ ನಾಯಿಕೆಯರನ್ನು ವರ್ಣಿಸಿದ್ದಾರೆ. ಹೀಗೆ ಲೆಕ್ಕ ಹಾಕುತ್ತಾ ವಿಧದೊಳಗೊಂದು ವಿಧವೆಂಬಂತೆ ಅರಸುತ್ತಾ ಹೋದರೆ ಐದುಸಾವಿರಕ್ಕಿಂತಲೂ ಅಧಿಕ ನಾಯಿಕೆಯರನ್ನು ಕಾಣಬಹುದು. ಈ ಭಾವಗಳು ನೃತ್ಯ, ನಾಟ್ಯ ಸಂಬಂಧೀ ವಸ್ತುಗಳಾದ ರೂಪಕ, ಶಬ್ದ, ವರ್ಣ, ಪದ, ಜಾವಳಿ, ಕೀರ್ತನೆ, ಅಷ್ಟಪದಿ, ತರಂಗ, ದೇವರನಾಮ, ಚೂರ್ಣಿಕೆ, ಕಲಾಪ, ರಾಸ್ ನೃತ್ಯ, ಯಕ್ಷಗಾನ ಪ್ರಸಂಗ ಹೀಗೆ ಭಾರತೀಯ ನರ್ತನಕಲೆಯುದ್ದಕ್ಕೂ ಹಾಸುಹೊಕ್ಕಾಗಿದೆ. ರಸಿಕರಿಗೆ, ಓದುಗರಿಗೆ ಸರಳವಾಗಿ ಅರ್ಥವಾಗುವ ನಿಟ್ಟಿನಲ್ಲಿ ಮುಂದಿನ ಸಂಚಿಕೆಗಳಲ್ಲಿ ಪ್ರಧಾನ ನಾಯಿಕೆಯರ ಪ್ರಸ್ತಾಪ ಬಂದಾಗ ಆದಷ್ಟೂ ಸಮಗ್ರವಾಗಿ ಮತ್ತು ಸಂಕ್ಷಿಪ್ತವಾಗಿ ಹೇಳಲಾಗುವುದು.

ಭಾಮಿನೀ –

ಶತಾವಧಾನಿ ಡಾ. ಆರ್. ಗಣೇಶ್

ರಾಗ- ನಾಟ ;

ಕಂದಪದ್ಯ

ಶ್ರೀಮದ್ವಿಶಾಲವಿಶ್ವ ಪ್ರೇಮಾಂಗಣರಣರಂಗದೊಳ್ ಸ್ವಯಂ ನಾಯಕತಾ|

ಸ್ಥೇಮಂ ಜೀವಾತ್ಮಗಣಾ ರಾಮಂ ಚಿನ್ನಾಯಿಕಾಭಿರಾಮಂ ಗೆಲ್ವಂ ||

ರಾಗ : ಕಲ್ಯಾಣಿ ;

ಉತ್ಪಲಮಾಲಾವೃತ್ತ

ಲೋಕದ ಭಾವಜಾಲವಲಯಂಗಳೆ ನಾಯಿಕೆಯರ್ಕಳಳ್ತಿಯಂ ಸ್ವೀಕರಿಸಲ್ಕಲೋಕರಸಪಾಕಮೆ ಗೋಕುಲಪಾಲನಾಯಕಾ|

ಲೋಕನಲೀಲೆಯಾಗೆ ಮಿಗೆ ಸಂದುದು ಬಂದುದು ಯಕ್ಷಗಾನ ಬಿ ಬ್ಬೋಕವಿಧಾನದಿಂದೆ ರುಚಿರಮ್ಯಶುಚಿಸ್ಫರಿತಂ ನಿರೂಪಣಂ ||

ರಾಗ -ಕಾಪಿ ;

ಕಂದಪದ್ಯ

ಶೃಂಗಾರದ ಶಿಖರಾನುಭ ವಂ ಗಡ ದೊರೆಕೊಳ್ವುದಿಲ್ಲಿ ರಸಿಕರ್ಗೊಲವಿಂ|

ಸಂಗೀತಕಮಿದು ರೂಪಕ ಮಂಗೀಕೃತಮಕ್ಕೆ ನಾಯಿಕಾಷ್ಟನಾಕಂ|

Leave a Reply

*

code