ಅಂಕಣಗಳು

Subscribe


 

ಅಷ್ಟನಾಯಿಕಾ ಚಿತ್ತವೃತ್ತಿ ಪ್ರೋಷಿತ ಪತಿಕಾ(ಭರ್ತೃಕಾ)

Posted On: Tuesday, February 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ವಿವಿಧ ಲೇಖಕರು

ಪ್ರೋಷಿತ ಪತಿಕಾ(ಭರ್ತೃಕಾ)

 

(ಕಳೆದ ಸಂಚಿಕೆಯಿಂದ ಮುಂದುವರೆದುದು…)

ಷ್ಟವಿಧ ನಾಯಿಕೆಯರ ಪೈಕಿ ಸ್ಥಿತಿ-ಸಂದರ್ಭಾನುಸಾರ ವರ್ಗೀಕರಿಸಿದರೆ ಮೊದಲನೆಯವಳೇ- ಪ್ರೋಷಿತ ಪತಿಕಾ. ತನ್ನ ಪತಿ ಅಥವಾ ಪ್ರಿಯನು ಕಾರ್ಯಾರ್ಥವಾಗಿ ದೂರದೂರಿಗೆ ಹೋಗಿರುವಾಗ ಅಥವಾ ದೂರದೇಶಕ್ಕೆ ಪ್ರಯಾಣಸನ್ನದ್ಧವಾಗಿರುವಾಗ ಅವನ ವಿಯೋಗಕ್ಕಾಗಿ ವ್ಯಥೆಪಡುವವಳು. ಪ್ರಿಯನ ಹಾದಿ ಕಾಯುತ್ತಾ ಕುಳಿತುಕೊಳ್ಳುವುದು, ಎಂದಿಗೆ ಬರುವನು ಎಂಬ ನಿರೀಕ್ಷೆಯಲ್ಲಿ ದಿನಗಣನೆ, ಶಕುನ ನೋಡುವುದು, ಆತನ ಕಷ್ಟ-ಇಷ್ಟಗಳ ಬಗೆಗೆ ಯೋಚನೆಗಳು, ನಿದ್ರೆ ಇಲ್ಲದಿರುವುದು, ದುಃಸ್ವಪ್ನಗಳು, ಅನಾಸಕ್ತಿ, ನಿಂತ ಕಡೆ ನಿಲ್ಲದಿರುವುದು, ಏನೂ ತೋಚದಂತಾಗಿರುವುದು, ದಿನ ಮುಗಿದು ಕತ್ತಲಾವರಿಸಿದಾಗ ಭಾರವಾದ ಹೆಜ್ಜೆಯಿಂದ ತನ ಕೆಲಸಗಳನ್ನು ಬೇಕೂ ಬೇಡದಂತೆ ಮಾಡುವುದು ಇತ್ಯಾದಿ ಸಂದರ್ಭಗಳು ಈಕೆಯ ಅವಸ್ಥೆಗಳು.

ಈ ನಾಯಿಕೆಯಲ್ಲಿ ದಶಾವಸ್ಥೆಗಳಾದ ಅಭಿಲಾಷೆ, ಚಿಂತನ, ಸ್ಮೃತಿ, ಗುಣಕಥನ, ಉದ್ವೇಗ, ಪ್ರಲಾಪ, ಉನ್ಮಾದ, ಜ್ವರ, ಜಡತೆ, ಮರಣ ಮುಂತಾದವು ಕಂಡುಬರುತ್ತದೆ. ಸಹಜವಾಗಿ ಈಕೆ ಸ್ವೀಯ ಅಂದರೆ ತನ್ನ ಪ್ರಿಯನಿಗಾಗಿ ನಿಷ್ಟಳಾದ ನಾಯಿಕೆ. ಈ ನಾಯಿಕೆಯೊಂದಿಗೆ ವಿವಿಧ ಉಪನಾಯಿಕಾ ಬೇಧಗಳು ಸೇರಿಕೊಂಡರೆ ಅದಕ್ಕೆ ತಕ್ಕ ವರ್ತನೆ, ಗುಣ, ಅವಸ್ಥೆಗಳ ಏರಿಳಿತ ಪ್ರಕಟವಾಗುತ್ತದೆ.

ಈ ನಾಯಿಕೆಯಲ್ಲೂ ಉತ್ತಮ, ಮಧ್ಯಮ, ಅಧಮವೆಂಬ ಬೇಧಗಳಿದ್ದು ಅದು ಈಕೆಯ ಅವಸ್ಥೆಗಳನ್ನು ಅವಲಂಬಿಸಿರುತ್ತದೆ. ಸಹಜವಾಗಿ ಉತ್ತಮ ನಾಯಿಕೆಯದ್ದು ಹೆಚ್ಚೇನೂ ಅಭಿನಯಕ್ಕೆ ಅವಕಾಶ ನೀಡದ ಆದರೆ ಉನ್ನತ ಮಟ್ಟದ, ಗಂಭೀರ, ಮೃದು ವರ್ತನೆಯುಳ್ಳ ಭಾವಪ್ರಕಾಶವನ್ನು ಹೊಂದಿದ್ದರೆ; ಮಧ್ಯಮವು ಮನುಷ್ಯ ಸಹಜ ಮಿಶ್ರ ಭಾವನೆಗಳ ಪ್ರತಿರೂಪ. ಅಧಮನಾಯಿಕೆಯು ನೀಚ ಇಲ್ಲವೇ ಭಾವನೆಯನ್ನು ಹಿಡಿತವಿರಿಸದೆ ಯಥಾಸ್ಥಿತಿಯಲ್ಲಿ ಹರಿಬಿಡುವ, ಅಥವಾ ಗೌರವಯುತ ನಡವಳಿಕೆಗಳ ಬದಲಾಗಿ ಅನೌಚಿತ್ಯಕರವಾಗಿ ಕಾಣಿಸಿಕೊಳ್ಳುವವಳು.

ಪ್ರಸ್ತುತ ಕಾವ್ಯ ಮತ್ತು ಭಾವಾಭಿವ್ಯಕ್ತಿಯಲ್ಲಿ ನೀಡಲಾಗಿರುವ ನಾಯಿಕೆಯು ಮಧ್ಯಮ ಗುಣವುಳ್ಳವಳಾಗಿದ್ದು; ನರ್ತನದಲ್ಲಿ ಅಭಿನಯಕ್ಕೆ ಹೆಚ್ಚು ವಿಸ್ತಾರವನ್ನು ಕಲ್ಪಿಸಿಕೊಡುವ ಮತ್ತು ಮಾದರಿಯ ಜೀವನದ ಆಯಾಮವಿರುವುದರಿಂದ ಈ ಅಷ್ಟನಾಯಿಕಾ ಚಿತ್ತವೃತ್ತಿಯ ಹಾದಿಯಲ್ಲಿ ಮಧ್ಯಮನಾಯಿಕೆಯನ್ನೇ ಪ್ರಧಾನವಾಗಿ ಎಲ್ಲಾ ನಾಯಿಕೆಯರಿಗೂ ಅಳವಡಿಸಿ ಸಾಹಿತ್ಯವನ್ನು ನೀಡಲಾಗಿದೆ. ದಿವಾಕರ ಹೆಗಡೆಯವರ ಕವಿತ್ವವು ಭೂಮಿ, ಪ್ರಕೃತಿ, ಮಳೆ, ಬಾನು ಇತ್ಯಾದಿ ಪ್ರಾಕೃತಿಕವಾಗಿ ನಿರೂಪಿಸಲ್ಪಟ್ಟ ಸೆಲೆಯನ್ನು ಹೊಂದಿದೆ.

ಬನ್ನಿ, ಲಿಂಗಬೇಧಗಳನ್ನು ಮರೆತು ನಾಯಿಕೆಯರೊಳಗೊಂದಾಗಿ ನಮ್ಮ ಕಲ್ಪನಾ ಸಾಮರ್ಥ್ಯ, ಅನುಭವ-ಅನುಭಾವ, ವಿಶ್ಲೇಷಣೆ, ನಾಟ್ಯದ ಆಯಾಮ, ಸವಾಲು-ಸಾಧನ, ಅಭಿವ್ಯಕ್ತಿಯ ಕ್ಷಿತಿಜ, ರಸದೃಷ್ಟಿ, ಕಾವ್ಯದೃಷ್ಟಿ ಮತ್ತು ಅರಿವಿನ ಹರಹುವನ್ನು ವಿಸ್ತರಿಸಿಕೊಳ್ಳೋಣ.

 

ಭಾಮಿನೀ

ಶತಾವಧಾನಿ ಡಾ. ಆರ್. ಗಣೇಶ್

ರಾಗ : ಭೌಳಿ ; ಭಾಮಿನಿ ಪದ್ಯ

ಕುಮುದಿನಿಗೆ ವಿರಹದ ವಿದಾಯ

ಕ್ರಮವ ಕಲ್ಪಿಸಿ ತೆರಳೆ ಚಂದ್ರನು

ಕಮಲಬಾಂಧವನುದಿಸೆ ಮದನಾನಲವೊಲು ನಭದಿ|

ಅಮಮ ! ಪ್ರೋಷಿತಪತಿಕೆಯೀಕೆ

ಕ್ಲಮದೆ ನಿತ್ಯದ ನಿಲಯಕೃತ್ಯಕೆ

ಸಮೆದಳೆಂತೋ ಮನವನೊಲವಿನ ನೆನಪಿರಲಿ ನಾದಿ ||

(ಪ್ರೋಷಿತನಾಯಿಕೆಯು ಮುಂಜಾವಿನ ಮನೆಗೆಲಸಕ್ಕೆ ತೊಡಗುತ್ತಾಳೆ. ಆ ಸಮಯದಲ್ಲೆಲ್ಲ ಅವಳಿಗೆ ಪತಿಯದೇ ನೆನಪು. ಇನ್ನು ದುಡಿಯುವ ಮನವಿಲ್ಲೆಂದು ನಿರ್ಧರಿಸಿ ನಲ್ಲನ ಚಿಂತೆಯಲ್ಲಿಯೇ ಕರಗುತ್ತಾಳೆ.)

ರಾಗ : ಕಾನಡಾ ; ರೂಪಕ, ಏಕ, ಕೋರೆ, ಅಷ್ಟ ತಾಳಗಳು

 

ಎತ್ತ ಪೋದನೋ ಕಾಂತನೆತ್ತಪೋದನೋ ?

ಚಿತ್ತಜೋಪಮಾನನೆಂದು ಮತ್ತೆ ಬರ್ಪನೋ- ಕಾಂತ ||ಪ||

ತೆರಳುವಂದು ತರಳೆಯಂದು

ಸರಳಹಾಸದಿಂದ ರಮಿಸಿ |

ಮರಳಿಕಾಂಬೆನೆಂದು ಕದಪ

ಬೆರಳಿನಿಂದ ಮೀಟಿದವನು ||

ಬರುವೆ ಬೇಗ, ತರುವೆನಾಗ

ಸಿರಿಯ, ತೊಡವನ್ನೆಂದು ನುಡಿದು |

ಚಿರಮನೋಜ್ಞಭೂಷಣಗಳ

ಸರಸದಿಂದ ಸಲಿಸಿದವನು ||

ಬಿಸಿಲು-ಗಾಳಿ-ಮಳೆಗಳಲ್ಲಿ

ರಸವಿಹೀನಜನಗಳಲ್ಲಿ |

ಕಸುರುಕಾಡು ಮೇಡಿನಲ್ಲಿ

ಹಸಿದು ಹೊಸೆದು, ನೊಂದು ಬೆಂದು ||

ಮನೆಯ ಮಾತ ಮರೆತುಬಿಟ್ಟು

ವನಿತೆಯೆನ್ನನ್ನಿಲ್ಲಿಗಿಟ್ಟು |

ದಿನವನೆಣಿಸೆನ್ನುತ್ತಲಿಂತು

ಮನವನೆಂತೊ ಬಿಗಿದು ನಿಂತು ||

 

ಭಾಮಿನಿಯ ಭಾವಾಭಿವ್ಯಕ್ತಿ

-ಮಂಟಪ ಪ್ರಭಾಕರ ಉಪಾಧ್ಯ

 

ಸುಂದರವಾದ ಮಂಟಪ. ಮಂಟಪದ ಒಳಗೊಂದು ಉಯ್ಯಾಲೆ. ಬೀಸುತ್ತಿರುವ ತಂಗಾಳಿಯ ಜೊತೆಗೆ ಉಯ್ಯಾಲೆಯ ಶ್ರುತಿ. ಚಂದ್ರನ ತಂಪುಬೆಳಕು. ಆಗಾಗ ಕೇಳಿಸುವ ಗೂಡಿನ ಹಕ್ಕಿಗಳ ಚಿಲಿಪಿಲಿಯ ಹಿಮ್ಮೇಳ. ಉಯ್ಯಾಲೆ ತೂಗಿದಾಗಲೆಲ್ಲಾ ಮೂಗಿಗೆ ಬಡಿಯುವ ಬಿರಿದ ಸುಮಗಳ ಸುಗಂಧ ಪರಿಮಳ. ಇವುಗಳೆಲ್ಲ ಸೇರಿ ಅಮಲೇರಿಸಿದ ರಾತ್ರಿ ಪ್ರಿಯಕರನ ತೊಡೆಯ ಮೇಲೆ ತಲೆಯನ್ನಿಟ್ಟು ಬೆಚ್ಚನೆಯ ಅನುಭವದ ನಿದ್ರೆ. ಅಲ್ಲ ! ನಿದ್ರೆ ಬಂದಂತೆ, ನಟಿಸಿ ಪ್ರಿಯಕರನ ಮೈಬಿಸಿಯನ್ನು ಅನುಭವಿಸುತ್ತಿರುವ ರಸಕ್ಷಣ. ಅದೆಷ್ಟು ಹೊತ್ತು ಮಲಗಿದಳೋ ಈ ಭಾಮಿನಿ ತಿಳಿಯದು. ಇದ್ದಕ್ಕಿದ್ದಂತೆ ಕಾಗೆಯ ಕರ್ಕಶ ಅಪಸ್ವರದ ಸುಪ್ರಭಾತ. ಕಿವಿಮುಚ್ಚಿ ಥಟ್ಟನೆ ಎದ್ದು ಕುಳಿತಳು ಭಾಮಿನಿ. ಕಣ್ಣುಮುಚ್ಚಿ ಒಮ್ಮೆಲೇ ಸ್ತಬ್ಧಳಾದಳು. ಒಮ್ಮೆಲೆ ಕಣ್ಣುತೆರೆದು ನೋಡಿದರೆ ಕಂಡಿರುವುದೆಲ್ಲಾ, ಅನುಭವಿಸಿರುವೆಲ್ಲಾ ಕನಸೇ ಆಗಿತ್ತು. ಏಕಾಕಿನಿಯಾಗಿ ಕೆಲವು ದಿನಗಳನ್ನು ಕಗ್ಗತ್ತಲೆಯಲ್ಲೇ ಮಲಗಿದ ಆಕೆಗೆ ಸ್ವಪ್ನವೂ ಅನಿವಾರ್ಯ ಆಗಿತ್ತು. ಕತ್ತಲಿನ ಏಕಾಂತವನ್ನು ದೂರಮಾಡಿಕೊಳ್ಳಲು ಕನಸು ಸಹಾಯ ಮಾಡಿತ್ತು.

ಬಾಗಿಲು ತೆರೆದು ನೋಡಿದರೆ ಆಗಲೇ ಬೆಳಗಾಗಿತ್ತು. ಸೂರ್ಯನನ್ನು ಕಂಡದ್ದು ತಡವಾದ್ದರಿಂದಲೋ ಅಥವಾ ತಡವಾಗಿ ತಾನು ಸೂರ್ಯನನ್ನು ಕಾಣುತ್ತಿರುವುದರಿಂದಲೋ ಆತನ ತೀಕ್ಷ್ಣ ಕಿರಣಗಳು ಸೌಂದರ್ಯವನ್ನು ಕಳೆದುಕೊಂಡು ಭಾಮಿನಿಯನ್ನು ಬಾಣದಂತೆ ತಿವಿಯುತ್ತಿದ್ದವು. ಈಕೆಯ ಅಸಹನೆಯ ಹೂವು ಬಿರಿದು ಕೋಪಾಲಸ್ಯಗಳ ವಾಸನೆಯು ಜಿಗುಪ್ಸಾದಾಯಕವಾಗಿತ್ತು. ನಿಸ್ತೇಜಮುಖ, ಉದಾಸೀನದ ಹಜ್ಜೆಗಳು; ಲಯವನ್ನು ತಪ್ಪಿಸುತ್ತಿತ್ತು ಅವಳ ದೇಹ. ಒಮ್ಮೆಲೆ ಕುಕ್ಕರಿಸಿ ಕುಳಿತಳು. ಉದ್ದೇಶವಿಲ್ಲದೆ ನೆಲವನ್ನು ಕೈಬೆರಳಿನಿಂದ ಗೀಚುತ್ತಾ ಸುಂದರಸ್ವಪ್ನದ ಯೋಚನೆಗೆ ಇಳಿದಳು. ಕನಸನ್ನು ಅನುಭವಿಸಲಾರದ ಸ್ಥಿತಿಯಲ್ಲಿದ್ದ ಭಾಮಿನಿ ಬಳಲಿದ್ದಳು.

ಅಕ್ಕಪಕ್ಕದ ದೈನಂದಿನ ಚಟುವಟಿಕೆಗಳನ್ನು ಕಂಡು ತಾನೊಂದು ಹೆಣವಾಗುತ್ತಿದ್ದೇನೆಂದು ಭಾವಿಸಿದಳು. ನಾನು ನಿಜಕ್ಕೂ ಶವವಾಗುತ್ತಿದ್ದೇನೆಯೇ?; ಪ್ರಶ್ನಿಸಿದಳು. ಇಲ್ಲ.ಇಲ್ಲ. ನನ್ನವನಿಗಾಗಿ ನಾನು, ನನಗಾಗಿ ನನ್ನವನಿರುವಾಗ ಜಡವಾಗಬಾರದು ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡು ಪ್ರಪಂಚದ ವೇಗಕ್ಕೆ ಹೊಂದಿಕೊಳ್ಳುವ ಪ್ರಯತ್ನಕ್ಕೆ ಮುಂದಾದಳು. ಮನಸ್ಸು ಸಂಕಲ್ಪಿಸಿದರೂ ದೇಹ ಸ್ಪಂದಿಸಲೇ ಇಲ್ಲ. ಯಾಂತ್ರಿಕವಾಗಿ ದೈನಂದಿನ ಕೆಲಸಕ್ಕೆ ಮುಂದಾಗಿ ಕೊಡವನ್ನು ಎತ್ತಿಕೊಂಡಳು. ಇವಳ ಮನಸ್ಸು ಗಂಡನ ಯೋಚನೆಯಲ್ಲಿ ತುಂಬಿ ತುಳುಕಾಡುತ್ತಿದ್ದುದ್ದರಿಂದ ಖಾಲಿಕೊಡವನ್ನು ಎತ್ತುವಾಗ ಅರಿವಿಲ್ಲದೆ ಇವಳ ದೇಹ ಭಾರವಾಗಿ ಮುಗ್ಗರಿಸಿದಳು. ತನ್ನ ಭಾರವನ್ನು ಕೊಡದ ಮೇಲೆ ಇಳಿಸಿ ಅದನ್ನೇ ಆಧಾರವಾಗಿಟ್ಟುಕೊಂಡು ಎದ್ದು ನಿಂತು ಸೊಂಟದ ಮೇಲೆ ಏರಿಸಿಕೊಂಡಳು. ಅಕ್ಕಪಕ್ಕದವರನ್ನೆಲ್ಲಾ ಒಮ್ಮೆ ಇಣುಕಿದಳು. ಯಾರೂ ಇವಳನ್ನು ಗಮನಿಸಲೇ ಇಲ್ಲ. ಗಮನಿಸುತ್ತಿದ್ದರೆ ಈಕೆಗೆ ಒಂದಿಷ್ಟು ಜೀವಬರುತ್ತಿತ್ತೋ ಏನೋ ? ಅಂತೂ ತನ್ನ ಮನೆ ನಿರ್ಜೀವವಾಗಿದೆ ಎಂದು ಭಾವಿಸಿದಳು. ತಾನೀಗ ಜೀವನೀಡಲು ಹೊರಟು ನಿಂತಳು.

ತಾಳ ತಪ್ಪಿದರೂ ಲಯಭರಿತ ಹಜ್ಜೆಯನ್ನು ಇಡುತ್ತಾ ಬಾವಿಕಟ್ಟೆಗೆ ತೆರಳಿದಳು. ಬಾವಿಯಲ್ಲಿಯ ರಾಟೆಗೆ ಸುತ್ತಿದ ಹಗ್ಗದ ಕುಣಿಕೆ(ಉರುಳು) ಇವಳನ್ನು ಅಣಕಿಸುತ್ತಿತ್ತು.

ಭಾರವಾದ ಕೊಡವನ್ನು ಸುಲಭದಲ್ಲಿ ಏರಿಸಬಲ್ಲೆ. ಹಾಗೆಯೇ ಭಾರವಾದ ಜೀವವನ್ನು ಸುಲಭವಾಗಿ ಹಾರಿಸಬಲ್ಲೆ ಎಂದು ಗಾಳಿಗೆ ತುಯ್ದಾಡುತ್ತಾ ನನ್ನನ್ನೇ ಭಯಗೊಳಿಸಿತು, ಆ ರಾಟೆಯ ಉರುಳು. ತಥ್ ! ಎಂದು ಅದನ್ನು ತೂಗಾಡದಂತೆ ಹಿಡಿದು ನನ್ನ ಸ್ವಾಧೀನಕ್ಕೆ ತೆಗೆದುಕೊಂಡು ನನ್ನ ಹುಚ್ಚು ಆಲೋಚನೆಗಳಿಗೆ ಕಡಿವಾಣ ಹಾಕಿ ಬಿಂದಿಗೆಗೆ ಉರುಳು ಸೇರಿಸಿ ಬಿಗಿದೆ. ರಪ್ಪನೆ ಬಿಂದಿಗೆಯನ್ನು ಬಾವಿಗೆ ದೂಡಿದೆ. ಅವ್ಯಕ್ತ ಸಮಾಧಾನ ಆಯ್ತು. ಉದಾಸೀನದಿಂದಲೇ ತುಂಬಿದ ಬಿಂದಿಗೆಯನ್ನು ಸೆಳೆಯುತ್ತಿದ್ದೆ. ಬಿಂದಿಗೆಯು ರಾಟೆಯನ್ನು ಅಪ್ಪಳಿಸಿದಾಗಲೇ ಪುನಃ ವಾಸ್ತವಕ್ಕೆ ಮರಳಿದೆ. ಕುಣಿಕೆ ಬಿಡಿಸಿದೆ. ತುಂಬಾ ಆಯಾಸಗೊಂಡೆ. ಬಿಂದಿಗೆಯ ಮೇಲೆ ಕೈಯನ್ನು ಇಟ್ಟೆ. ಬಿಂದಿಗೆಯ ಮೇಲಿನ ನೀರು ತಂಪೆನಿಸಿತು. ಎರಡು ಬೊಗಸೆ ನೀರನ್ನು ಮುಖದ ಮೇಲೆ ಎರಚಿಕೊಂಡೆ. ಹಾಯೆನಿಸಿತು. ಗಲ್ಲದ ಮೇಲೆ ಕೈಯನ್ನಿಟ್ಟು ಕೈಯನ್ನು ಬಿಂದಿಗೆಯ ಮೇಲೆ ಇರಿಸಿ ಯೋಚಿಸಿದೆ; ನನ್ನ ದೃಷ್ಟಿ, ಯೋಚನೆ ಎಲ್ಲವೂ ನನ್ನ ಮನೆಯಂಗಳದ ತುದಿಯಲ್ಲಿನ ಮಲ್ಲಿಗೆಯ ಲತಾಮಂಟಪದ ಕೆಳಗೆ.

ಹೌದು ! ಅಂದು ನನ್ನ ಪತಿ ಇದೇ ಲತಾಮಂಟಪದ ಮರೆಯಲ್ಲಿ ನನ್ನನ್ನು ರಮಿಸಿದ ಆ ನೆನಪು. ಆ ಕ್ಷಣ ಒಂದು ರಸಕ್ಷಣವೇ ಆಗಿ ನನ್ನನ್ನು ಈ ರೀತಿಯಲ್ಲಿ ಆಟ ಆಡಿಸುತ್ತಿದೆ. ಜೀವನದ ಸತ್ಯವೊಂದನ್ನು ತಿಳಿದೆ. ಪ್ರಣಯದ ಒಂದು ರಸಕ್ಷಣ ಒಂದು ಬದುಕನ್ನೇ ಅಡವಿಡಬಹುದಾದಷ್ಟು ಬೆಲೆಯುಳ್ಳದ್ದು. ಜೊತೆಗೆ ಮತ್ತೊಮ್ಮೆ ಆ ರಸಕ್ಷಣಕ್ಕಾಗಿ ಬಯಸಿದೆ. ಬದುಕಿನ ಕೊನೆಕಾಲದವರೆಗೂ ಅಥವಾ ಅದರ ಸವಿನೆನಪೇ ಬದುಕೆಲ್ಲ ತಾಳ್ಮೆಯಿಂದ ಕಾಲಕಳೆಯುವ ಶಕ್ತಿ ನೀಡುತ್ತದೆ ಎಂದು ತಿಳಿದೆ. ಅಬ್ಬಾ ! ಅಂದು ನನ್ನನ್ನು ರಮಿಸುವಾಗ ನನಗಿಂತಲೂ ಆತನೇ ಹೆಚ್ಚಾಗಿ ನನ್ನ ಬಿಡಲಾರದ ಸಂಕಟ ಪ್ರಕಟಿಸಿದ್ದು. ಆತನನ್ನು ಸಮಾಧಾನಗೊಳಿಸಲಿಕ್ಕಾಗಿ ನನ್ನ ಸಂಕಟ ಅದುಮಿ ಆತನಲ್ಲಿ ನನ್ನ ಕಪಟತನದ ದೊಡ್ಡತನ ಪ್ರಕಟಿಸಿದೆ. ಆದರೆ ಕಣ್ಣಿನ ಭಾವಭಾಷೆಯನ್ನು ಅರಿತ ಆತ ಉದಾತ್ತವಾಗಿ ನನ್ನ ಸಂಕಟಕ್ಕೆ ಸ್ಪಂದಿಸಿದ್ದು ಒಂದೇ, ಎರಡೇ, ಅನೂಹ್ಯವಾದ ಪ್ರೀತಿ. ನಿನ್ನನ್ನು ಒಂದು ಕ್ಷಣವೂ ಬಿಟ್ಟಿರಲಾರೆ. ಬಹಳ ಬೇಗ ಬರುತ್ತೇನೆ ಎಂದು ವಿಧವಿಧವಾಗಿ ಪೂಸಿಹೊಡೆದದ್ದು. ನಾನೊಬ್ಬಳೇ ಹೇಗೆ ಮನೆಯಲ್ಲಿರಲಿ? ಎಂದು ಅವನನ್ನು ಪ್ರಶ್ನಿಸಿ ನೀನು ಹೋಗಬೇಡಾ ಎಂದು ಅಂಗಾಲಾಚಿದೆ. ಇದನ್ನರಿತ ಆತ ನನ್ನ ಧೈರ್ಯಕ್ಕಾಗಿ ನನ್ನನ್ನು ಎರಡು ಕೈಗಳಿಂದ ಅಪ್ಪಿಕೊಂಡು ಲಲ್ಲೆಗರೆಯುತ್ತಾ ನನ್ನ ಕಪೋಲವನ್ನು ಹಿಂಡಿದ. ಆ ರೋಮಾಂಚನ ! ಇನ್ನೂ ಅದರಿಂದ ಹೊರಬರಲಾಗಲಿಲ್ಲ.

ಆತನ ದೂರದ ಪ್ರಯಾಣಕ್ಕೆ ಆತನಿಗೆ ಇಷ್ಟವಾದ, ಪ್ರಿಯವಾದ ತಿಂಡಿಗಳನ್ನು ಬುತ್ತಿಕಟ್ಟಿಕೊಟ್ಟಾಗ ನನ್ನ ಕಣ್ಣುಗಳು ಆತನ ಕಣ್ಣುಗಳಲ್ಲೇ ಲೀನವಾಗಿದ್ದವು. ಅದರಲ್ಲಿ ನೀ ಹೋಗದಿರು ಎಂಬ ಬೇಡಿಕೆಯೇ ಇತ್ತು. ಇದನ್ನು ಅರಿತ ಆತ ನಿನ್ನ ಈ ಬುತ್ತಿಗೆ ಪ್ರತಿಯಾಗಿ ಪೇಟೆಯಿಂದ ಮನೋಹರವಾದ ಮುತ್ತಿನ ಮಾಲೆ ತರುತ್ತೇನೆ ಎಂದಿದ್ದ. ಅದಕ್ಕೆಲ್ಲಾ ನಾನು ಕರಗಲೇ ಇಲ್ಲ. ನನಗಂತೂ ಯಾವ ಆಭರಣವೂ ಬೇಕಿಲ್ಲವಾಗಿತ್ತು. ಆತನ ಎಲ್ಲಾ ಸರಸಗಳು ವ್ಯರ್ಥವಾಗಿತ್ತು. ನನ್ನ ತೀಕ್ಷ್ಣವಾದ ಪ್ರೀತಿ ಆತನಿಗೆ ಕಷ್ಟವಾಯ್ತೋ ಏನೋ. ನನ್ನ ಮೌನವನ್ನು ಭೇದಿಸಿ ಬುತ್ತಿಯನ್ನು ತೆಗೆದುಕೊಳ್ಳುವ ನೆವದಲ್ಲಿ ಕಣ್ಣುಮುಚ್ಚಿಕೋ ಎಂದು ಕಣ್ಣುಮುಚ್ಚಿಸಿ ಪಟಪಟನೆ ಮುತ್ತುಗಳನ್ನು ನೀಡಿ ಓಡಿಹೋಗಿ ಗಾಡಿಯಲ್ಲಿ ಕುಳಿತ.

ರಭಸದಿಂದ ನೀಡಿದ ಮುತ್ತಿನ ಸುರಿಮಳೆಗಳಿಂದ ನಾಚಿ ನೀರಾಗಿ ಹೋದೆ. ನಾಚಿಕೆ ಎನ್ನುವುದು ನನಗಾಗದಿದ್ದರೆ ತತ್‌ಕ್ಷಣ ಗಾಡಿಯನ್ನು ನಾನೂ ಏರಿಕೊಳ್ಳುತ್ತಿದ್ದೆ. ಗಂಡು ಜನ್ಮದ ಧೈರ್ಯ ಕಂಡು ಅಸೂಯೆಪಟ್ಟೆ ಆ ಕ್ಷಣ. ಜೊತೆಗೆ ಸುತ್ತ ಯಾರಾದರೂ ನೋಡಿದರೇ ಎಂಬ ಆತಂಕ. ಪುಣ್ಯ, ಮಲ್ಲಿಗೆ ಮಂಟಪದ ಮರೆಯಾದ್ದರಿಂದ ಯಾರಿಗೂ ತಿಳಿಯಲಿಲ್ಲ. ಆದರೂ ಸ್ವಲ್ಪವೂ ನಾಚಿಕೆಯ ಕಲ್ಪನೆ ಇಲ್ಲದ ನನ್ನವನನ್ನು ಶಪಿಸಿದೆ. ಕರಗಿ ನೀರಾಗಿ ಹೋದೆ. ನನ್ನನ್ನು ಎವೆಯಿಕ್ಕದೆ ಮಂದಸ್ಮಿತನಾಗಿ ನೋಡುತ್ತಾ ಹೋಗುತ್ತಿರುವ ನನ್ನ ಪತಿಯನ್ನು ಹಿಂಬಾಲಿಸಲು ಹೆಜ್ಜೆ ಇಡಲು ಮರೆತೆ. ನಿಜಕ್ಕೂ ಆತ ನನಗೆ ಮುತ್ತಿನಹಾರ ನೀಡಿಯೇ ಹೋಗಿದ್ದ.

ನಾಲ್ಕಾರುದಿನಗಳಲ್ಲಿ ಬರುತ್ತೇನೆಂದು ಹೋದ ಆತ ಇನ್ನೂ ಬಂದಿಲ್ಲ. ದಿನಗಳನ್ನೆಲ್ಲಾ ಎಣಿಸುತ್ತಲೇ ಇದ್ದೆ. ಗೋಡೆಯ ಮೇಲಣ ಗುರುತುಗಳೆಲ್ಲಾ ನನ್ನ ಲೆಕ್ಕ ತಪ್ಪಿಸಿದ್ದವು. ಅವಸರದಲ್ಲಿ ದಿನಕ್ಕೆ ಎರಡೆರಡು ಗುರುತು ಮಾಡಿದ್ದೆ. ನಾನು ಕಟ್ಟಿಕೊಟ್ಟ ಬುತ್ತಿಯಂತೂ ಉಳಿದಿಲ್ಲ. ಈಗೇನು ಮಾಡಬಹುದು; ಆತನೆಷ್ಟು ಕಷ್ಟಪಡುತ್ತಿರಬಹುದೆಂದು ಚಿಂತೆ. ಮಳೆಗಾಳಿಗೆ ಸಿಲುಕಿ ಯಾತನೆಪಡುತ್ತಿದ್ದಾನೋ ಎಂಬ ಆತಂಕ. ನನ್ನ ಸ್ಥಿತಿಯೋ ! ಭಯಗೊಂಡ ನಾನೊಬ್ಬಳೇ ಮನೆಯಲ್ಲಿ ಇರುವುದು ಇನ್ನೂ ಯಾಕೆ ಅವನಿಗೆ ತಿಳಿದಿಲ್ಲ ? ಒಂಟಿಯಾಗಿ ನಾನು ಇದ್ದ ಅನುಭವವೇ ಇಲ್ಲ.

ನಾಲ್ಕಾರು ದಿನದಲ್ಲಿ ಬರುತ್ತೇನೆಂದು ಹೇಳಿದ ಆತನ ಮಾತುಗಳನ್ನು ಎಣಿಸಿಕೊಂಡಾಗ ಆತನ ಮೇಲೆ ಹುಸಿಕೋಪ; ಅಸಹನೆ; ಉದ್ವೇಗ. ಆದರೆ ಆತನು ನೀಡಿದ ಮುತ್ತಿನಹಾರವನ್ನು ಎಣಿಸಿದಾಗ ಆತನಿಗೆ ಏನಾದರೂ ತೊಂದರೆ ಆಯ್ತೇ ಎನ್ನುವ ಕಾಳಜಿ. ನನಗಂತೂ ಹೊತ್ತೇ ಹೋಗಲಾರದು. ಊಟ ಬೇಕಿಲ್ಲವಾಗಿತ್ತು. ಮಲಗಿದರೆ ನಿದ್ರೆಯೂ ಇಲ್ಲ. ಆತಂಕದಲ್ಲಿದ್ದ ನನಗೆ ಕನಸೂ ಇಲ್ಲ, ಪುನಃ ಮನೆಯ ಹೊರಗೆ ಮಲ್ಲಿಗೆಯ ಮಂಟಪದ ಕಡೆ ನೋಡಿದೆ. ಸುಮ್ಮಸುಮ್ಮನೆ ನೋಡಿದೆ. ನಿರೀಕ್ಷೆಯೇ ಹೆಚ್ಚಾಗಿ ಹಳೆಯದನ್ನು ನೆನಪಿಸಲಾಗಲಿಲ್ಲ. ಬೇಸರವಾಗಿ ಮನೆಯ ಸುತ್ತ ತಿರುಗಲಾರಂಭಿಸಿದೆ…ನನ್ನ ಹಳೆಯ ನೆನಪುಗಳನ್ನೇ ಮೆಲುಕು ಹಾಕುತ್ತಾ ಹೆಜ್ಜೆ ಹಾಕಿದೆ…

 

 

ಮೇಘಮೇದಿನಿ

ದಿವಾಕರ ಹೆಗಡೆ, ಧಾರವಾಡ

ವಾರ್ಧಕ

ಸಾಗರವ ತುಂಬಿ ತೊನೆದಾಡುವಾ ತೆರೆಗಳನು |

ಓಘದಿಂ ಧುಮ್ಮಿಕ್ಕಿ ಮೊರೆವ ಜಲಪಾತವನು |

ಬಾಗಿ ಹರಗಿರುವ ಗಿಡ ಮರಗಳಂದವ ನೋಡಿ

ಹಸಿರಹಚ್ಚಡವ ಹರಸಿ |

ನಾಗಬನ ದೇವಬನ ಸುಖದ ಶೃಂಗಾರವನ |

ನೇಗಿಲಿನ ಗೆರೆಗೆ ತಾನಾಗಿ ಆಹಾರಬನ |

ಮೇಘದೊಲವಿನಲಿ ಗಜವದನ ನೀ ಕಾದಿರುವೆ

ಬಾಗುವೆನು ಶಿರವನಡಿಗೆ ||

ಇಳೆಯು ತರಳೆ ಮೇಘ ಮರುಳೆ ಇರುಳ ಕಳೆವಳೆಂತೋ |

ಮಿಲನದಲ್ಲಿ ಮೊಳೆತ ಭಾವ ಶರದೃತುವು ಬಂತೋ |

ಹೊಳೆ ಹೊಳೆಯುವ ಹೊಳೆಯ ನೀರು ಎಳೆ ಪ್ರಾಯದ ರನ್ನೆ |

ಚಳಿ ಚಳಿಯಲಿ ಚಿಮ್ಮಿ ನೆಗೆವ ನೀರಾಂಗನೆ ಚೆನ್ನೆ ||

ಕೌಮುದಿ ಪ್ರೇಮದಿ ಕಾಡಿಹುದು | ಶರದಾಲಿಂಗನ ಬೇಡಿಹುದು ||

ಭಾಮಿನಿ ನೆನಪಲಿ ಮಾಗಿದಳು | ಎಲೆಯುದುರಿದ ಮುದ ಮಾಗಿ ಇದು||

ಶ್ಯಾಮಲವಾಗಿದೆ ಆಗಸವು | ಎದೆಯಲಿ ಕಾದಲನುಸಿರಿಹುದು ||

ಕೋಮಲೆ ಪ್ರೋಷಿತೆಯಾಗಿಹಳು | ಸಿರಿಮುಡಿ ಬಿಳಿಹೂ ಮುಡಿದಿಹಳು||

———

Leave a Reply

*

code