ಅಂಕಣಗಳು

Subscribe


 

ಅಪ್ರತಿಮ ಕಲಾರಾಧಕ ವೇದಮೂರ್ತಿ ಬಿ.ಜಿ.ನಾರಾಯಣ ಭಟ್

Posted On: Friday, October 18th, 2019
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: - ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಜಬ್ಬಾರ್ ಸಮೋ, ವಿದ್ವಾನ್ ದಿವಾಕರ ಹೆಗಡೆ, ಡಾ. ಉದಯಶಂಕರ್, ಪಾರ್ವತೀ ಶಾಸ್ತ್ರಿ, ಲಕ್ಷ್ಮೀ ಉಪಾಧ್ಯಾಯ

ವೃತ್ತಿಯೇ ತಪಸ್ಸಾದ ಜೀವನ

ಸುಮಾರು ಐವತ್ತನಾಲ್ಕು ವರುಷಗಳ ದೀರ್ಘಾವಧಿಯ ವರೆಗೆ ಇತಿಹಾಸಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಸ್ಥಾನದಲ್ಲಿ ಅವಿರತವಾಗಿ ಪ್ರಧಾನ ಅರ್ಚಕರಾಗಿ, ದೇವಾಲಯ ಸಮಿತಿಯಲ್ಲಿ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿಕೊಂಡು ಬಂದವರು ರಾಜಪುರೋಹಿತ, ಕಲಾರಾಧಕ ಶ್ರೀಯುತ ಬಿ.ಜಿ.ನಾರಾಯಣ ಭಟ್ಟರು. ನಿತ್ಯಪೂಜೆಯಿಂದ ಮೊದಲ್ಗೊಂಡು ವಿಶೇಷಾವಧಿ ದಿನಗಳ ಪೂಜೆ, ಕಾರ್ಯಕ್ರಮಗಳಲ್ಲೂ ಸಕ್ರಿಯರಾಗಿ ತೊಡಗಿಸಿಕೊಂಡು, ಕ್ಲಿಷ್ಟ ಸಂದರ್ಭಗಳಲ್ಲಿ ಯೂ ಕರ್ತವ್ಯಕ್ಕೆ ಕೊಂಚವೂ ಲೋಪವೆಸಗದೆ  ಕೇವಲ ತನ್ನ ವೃತ್ತಿಯೆಂದು ಬಗೆಯದೆ ನಿಜಾರ್ಥದಲ್ಲಿಯೂ ಈಶ್ವರನ ಸೇವೆ ಸಲ್ಲಿಸಿ, ಹಲವು ಶ್ರದ್ಧಾಳುಗಳಿಗೂ ಸೇವೆಗೆ ಅವಕಾಶವನ್ನಿತ್ತು ಜನಾನುರಾಗಿಗಳೂ, ಭಕ್ತಾದಿಗಳ ನೆಚ್ಚಿನ ಪುರೋಹಿತರೂ ಆಗಿ ಬಾಳಿ ಬದುಕಿದವರು.

ಭಟ್ಟರ ಕುಟುಂಬದ ಹಿರೀಕರು ಶ್ರೀ ಓಂಕಾರೇಶ್ವರ ದೇವಾಲಯದ ನಿರ್ಮಾಣ ಮತ್ತು ಪ್ರತಿಷ್ಠಾಪನ ಸಂದರ್ಭದಲ್ಲಿ (೧೮೨೦ ಇಸವಿ)ರಾಜಪುರೋಹಿತ ವಲಯದಲ್ಲಿ ದುಡಿದು ಕೊಡಗಿನ ಅರಸರಿಂದ ಬಳುವಳಿ, ದತ್ತಿ ದಾನಗಳನ್ನು ಸ್ವೀಕರಿಸಿದ್ದಕ್ಕೆ ಐತಿಹಾಸಿಕ ದಾಖಲೆಗಳಿವೆ. ಈ ಪಾರಂಪರಿಕ ಬ್ರಾಹ್ಮಣ ಪುರೋಹಿತ ಮನೆತನಕ್ಕೆ ೧೯೫೦ರ ದಶಕದಲ್ಲಿಯೂ ಸುಮಾರು ೪೦೦ ಮನೆಗಳ ಪೌರೋಹಿತ್ಯ ಸುಪರ್ದಿ ಇತ್ತು. ವೈದಿಕ, ಜ್ಯೋತಿಷ, ಮಂತ್ರವಾದಗಳಲ್ಲಿ ಈ ಮನೆತನದ ಕೀರ್ತಿ  ಕೊಡಗು, ದಕ್ಷಿಣಕನ್ನಡ ಸೀಮೆಗಳಲ್ಲಿ ಪ್ರಸಿದ್ಧ. ಸಿರಿವಂತಿಕೆ, ಕಡು ಬಡತನವೆರಡನ್ನೂ ಕಂಡ ಕುಟುಂಬವದು.

ಅದಾಗಿ ದೈವಯೋಗದಿಂದ ೧೯೬೦ರ ದಶಕದಲ್ಲಿ ಅದೇ ಬರ್ಲಾಯಬೆಟ್ಟು ಕುಟುಂಬದ ಕುಡಿಯಾದ ನಾರಾಯಣ ಭಟ್ ಎಂಬ ನಾಮಕನಾದ ತರುಣ ತನ್ನ ಹದಿನಾರನೇಯ ವಯಸ್ಸಿಗೆ ದೇವಸ್ಥಾನಕ್ಕೆ ಅರ್ಚಕರಾಗಿ ನಿಯುಕ್ತಿಗೊಂಡರು. ’ ದೇಹೋ ದೇವಾಲಯಃಪ್ರೊಕ್ತೋ ಜೀವೋ ದೇವಃ ಸದಾಶಿವಃ-ದೇಹವೇ ದೇವಾಲಯ, ಜೀವವೇ ಶಿವ’ನೆಂದವರೇ; ’ದೇವಾಲಯವೇ ನನ್ನ ದೇಹ. ಅದನ್ನು ಬಿಟ್ಟು ಈ ಜೀವನಿಲ್ಲ’ ಎನ್ನುತ್ತಿದ್ದರು.  ಸಂಸಾರ ಸದಸ್ಯರಿಗಿಂತಲೂ ಹಿರಿದಾಗಿ ಶಿವಸಹವಾಸ, ಭಕ್ತಾದಿಗಳ ಭೇಟಿಯೇ ಜೀವನದ ಪರಮೋದ್ದೇಶವೆಂದು ಬಗೆದು ತಮ್ಮ ವಾಕ್ ಶಕ್ತಿ, ಜೀವನದೃಷ್ಟಿ, ಅಧ್ಯಾತ್ಮ ಜ್ಯೋತಿಷ ಚಿಂತನೆಗಳ ಮೂಲಕ ಅನೇಕರ ಸಮಸ್ಯೆಗಳಿಗೆ ಪರಿಹಾರವನ್ನಿತ್ತು ಸಮಾಧಾನ ಕೊಟ್ಟವರು. ಇಳಿವಯಸ್ಸಿನ ಅನಾರೋಗ್ಯದ ಹಿನ್ನೆಲೆಯಲ್ಲಿಯೂ ಅವರಲ್ಲಿದ್ದ ಅಸೀಮ ಸಾಮರ್ಥ್ಯವನ್ನು ಹೊರಗೆಡಹುತ್ತಿದ್ದದ್ದು ದೇವಸ್ಥಾನದ ವೃತ್ತಿ. ’ನನ್ನ ದೇವಸ್ಥಾನ’, ’ದೇವಸ್ಥಾನವೇ ನನ್ನ ಮನೆ’ಯೆಂಬಷ್ಟರ ಮಟ್ಟಿಗಿನ ಅಭಿಮಾನವೇ  ’ದೇವಸ್ಥಾನಕ್ಕೆ ಹೋಗುವುದು ನಿಲ್ಲಿಸಿದೆನೆಂದರೆ ಅಲ್ಲಿಗೆ ನನ್ನ ಕೊನೆ’ಯೆಂಬ ಮಾತನ್ನೂ ಬರಿಸಿ ಅಂತೆಯೇ ಬದುಕಿ ನೇಪಥ್ಯಕ್ಕೆ ಸರಿಯುವಂತಾಗಿದ್ದು ದೈವಲಿಖಿತವೇ ಇರಬೇಕು. 

 ನಾರಾಯಣ ಭಟ್ಟರ ಕಲಾಸಕ್ತಿ, ಕಲಾಪೋಷಕತ್ವದ ಬಗ್ಗೆ ಬರೆದಷ್ಟೂ ದಣಿಯದು. ರಸಪೋಷಕವಾದ ಕಲಾವಿದರೆಡೆಗೆ ಅವರದ್ದು ಕೊಡುಗೈ ದಾನಿಯ ಮನಸ್ಸು. ಕಲಾವಿದರ  ಕಲಾವಂತಿಕೆ, ಅದು ನೀಡುವ ಆನಂದಕ್ಕಾಗಿ ಸ್ವಯಂಸ್ಫೂರ್ತಿಯಿಂದ ಕೈಯೆತ್ತಿ ಉಡುಗೊರೆಗಳನ್ನು ಕೊಡುವವರು.  ಸ್ವತಃ ಉತ್ತಮ ಗಾಯಕರೂ, ಯಕ್ಷಗಾನ ಚಿಂತಕರೂ, ಕೊಳಲುವಾದಕರೂ, ಅಭಿನಯಪಾರಂಗತರೂ, ಕವಿಗಳೂ, ’ವಿಪ್ರನಾರಾಯಣ’ ಕಾವ್ಯನಾಮದಲ್ಲಿ ಬರೆಹಗಾರರೂ, ಭಾಷಣಕಾರರೂ ಮೇಲಾಗಿ ಅಪಾರ ಆತ್ಮಗುಣಸಂಪನ್ನರೂ,  ಸಹೃದಯರೂ, ಕಷ್ಟಸಹಿಷ್ಣುಗಳೂ, ಸಿನೆಮಾ ಪ್ರಿಯರೂ, ಅಲಂಕಾರಪ್ರಿಯರೂ, ಸೌಂದರ್ಯಾರಾಧಕರೂ, ಪ್ರಕೃತಿಪ್ರೇಮಿಗಳೂ, ಗೋ-ಪಶು-ಪಕ್ಷಿಪ್ರೇಮಿಗಳೂ, ವಾಚಸ್ಪತಿಗಳೂ ಆಗಿದ್ದವರು.

ದೇವಾಲಯದೊಳಗೂ ತಮ್ಮ ಮುರಳಿಯ ನಿನಾದದ ಮೂಲಕ, ತಮ್ಮದೇ ಆದ ವಿಶಿಷ್ಟ ಬಗೆಯ ಅಲಂಕಾರ, ಆಪ್ಯಾಯಮಾನವಾದ ಪೂಜಾಶೈಲಿಗಳ ಮೂಲಕ ಸುಂದರವಾದ  ಕಲಾಂಗಣವನ್ನೂ  ದೈವಸಾನಿಧ್ಯದಲ್ಲೇ   ಸಾಕ್ಷೀಕರಿಸಿದವರು. ದೇವಾಲಯದೊಳಗೆ ಅವರ ಉಪಸ್ಥಿತಿಯಲ್ಲಿಯೇ ಎಲ್ಲರೂ ಕುರಿತಿಟ್ಟು ಕೇಳುವ ದಿವ್ಯತೆ ಮೂಡಿಬರುತ್ತಿತ್ತು.  ದೇವಸ್ಥಾನಕ್ಕೆ ಕಾಲಿಟ್ಟರೆಂದರೆ ಎಂತಹ ಬಳಲಿಕೆಯೂ ಮಾಯವಾಗಿ ಅವರ ಶಕ್ತಿ ದುಪ್ಪಟ್ಟಾಗಿ ಚೈತನ್ಯ ಮೂಡುವಷ್ಟರಮಟ್ಟಿಗೆ ವೈದಿಕವೃತ್ತಿಯೆಂಬುದು ಅವರ ಎಲ್ಲಾ ಶಕ್ತಿಗಳ ಕೇಂದ್ರವಾಗಿತ್ತು. ’ಅರ್ಚಕಸ್ಯ ಪ್ರಭಾವೇಣ ಶಿಲಾ ಭವತಿ ಶಂಕರ’- ಎನ್ನುವ ಸೂಕ್ತಿಗೆ ಮೈವೆತ್ತಂತಿದ್ದ ಅಂತಹ ಪ್ರತಿಭಾಶೀಲ ಅರ್ಚಕತ್ವ ಮತ್ತೊಂದೆಡೆ ಕಾಣಸಿಗದೇನೋ !. ’ಬಡಪಾಯಿ ಅರ್ಚಕ’ ಎನ್ನುವ ಲೋಕನಿಂದೆಗಳಿಗೆ ಸವಾಲಾಗಿ ಅರ್ಚಕತ್ತ್ವದ ಪೂಜ್ಯತೆಗಳನ್ನು ಪ್ರಕಾಶಿಸಿದ ಶಕ್ತಿ.’ಅರ್ಚಕ ರತ್ನ’ ಬಿರುದಿಗೆ ಸಾರ್ಥಕವಾದ ಮನೋವೃತ್ತಿ.

ವೈಶಾಲ್ಯ ಪ್ರಜ್ನೆಯೆಂಬುದು ಶ್ರೀಯುತರ ಬದುಕಿನ ಅಂತರಂಗ. ವೃದ್ಧಾಪ್ಯದಲ್ಲೂ ಇಪ್ಪತ್ತೈದರ ಯುವಕರಂತೆಯೇ ಸುಟಿಸುಟಿಯಾಗಿ ಓಡಾಡಿಕೊಂಡಿದ್ದ,  ದೇಹ-ಮನಸ್ಸುಗಳ ಭಾರವನ್ನು ತಗ್ಗಿಸಿಕೊಡುತ್ತಿದ್ದ ಮನೋವೇಗಿ ಅವರು. ಎಂತಹ ವೇಳೆಯಲ್ಲೂ ಸೂಜಿಗಲ್ಲಿನಂತೆ ಜನರನ್ನು ಸೆಳೆಯುವ ಮಾತಿನ ಮೋಡಿಗಾರ, ಹಾಸ್ಯಸಂಭಾಷಣಾಚತುರ. ಯಾವುದೇ ಅಪರಿಚಿತ ಸ್ಥಳಕ್ಕೂ ಕ್ಷಣಾರ್ಧದಲ್ಲಿ ಪರಿಚಿತನಾಗುವ, ಒಮ್ಮೆ ನೋಡಿದರೆ ದಶಕಗಳ ನಂತರವೂ ನೆನಪಿಟ್ಟುಕೊಂಡು ಗುರುತಿಸುವ ಅವರ ಮುಖದ ಮಂದಾರವೇ ಸದಾ ಬಾಯ್ದೆರೆದು ಚಿಮ್ಮುತ್ತಿದ್ದ ಮಂದಹಾಸ. ಹೀಗಿದ್ದಾಗ ಸುತ್ತಮುತ್ತ ಸಕ್ಕರೆಗೆ ಮುತ್ತಿದ ಇರುವೆಗಳಂತೆ ಜನರ ಗುಂಪು ಅಚ್ಚರಿಯದ್ದೇನಲ್ಲ.  ಇನ್ನು ಕಿರಿಯರಿಗೂ ಪ್ರಿಯವಾಗುವಂತೆ ಫ್ಯಾಶನ್, ಸ್ಟೈಲ್ ಗಳಿಗೆ ಮುಕ್ತವಾದ ಮನೋದಿಗಂತ ಅವರದು. ಯಾರ್ಯಾರಿಗೆ ಯಾವುದು ಪ್ರಿಯವೋ ಅಂತೆಯೇ ತನ್ನ ಮಾತು-ಕತೆಗಳನ್ನು ಹೊಂದಿಸಿಕೊಳ್ಳುತ್ತಿದ್ದ ಶುದ್ಧ ಸ್ಫಟಿಕ ಸಲಿಲಧಾರೆ.  ಪೇಟೆಯುದ್ದಕ್ಕೂ ಅವರಿಗೆ ನಮಸ್ಕಾರ ಹೇಳದವರಿಲ್ಲ. ಮಾತಾಡಿದಷ್ಟೂ ಮುಗಿಯದು. ಮತ್ತೊಬ್ಬರ ಮನಸ್ಸನ್ನು ಒಳಹೊಕ್ಕು ಕೇವಲ ಕಣ್ಣು, ಹುಬ್ಬುಗಳಲ್ಲಿಯೇ ಅವರ ಮನಸ್ಸಿನ ಮಾತನ್ನು ಅರಿಯುವ ಭಾಷ್ಯಕಾರ ಬೇರೆ ! ಮಾತಿಗೆಂದೇ ಅವರು ಊರು ತಿರುಗಾಡುತ್ತಿದ್ದದ್ದಿದೆ. ಇಷ್ಟಾಗಿಯೂ  ಮಾತಿಗೆ ನಿಲುಕದ, ಮೌನಕ್ಕೆ ದೊರಕದ ಭಾಷಾತೀತ ಬೆರಗು ನಾರಾಯಣ ಭಟ್ಟರು!

ಹವ್ಯಾಸಗಳಾದರೋ ಶಾಲಗ್ರಾಮ-ಶಿವಲಿಂಗ-ಹಳೇ ವಾಚುಗಳು- ಗಡಿಯಾರ-ಶಂಖ- ನವರತ್ನ ಹರಳು-ಮೂರ್ತಿಗಳ ಸಮೇತವಾಗಿ ಪುರಾತನ ವಸ್ತುಗಳ ಸಂಗ್ರಹಣೆ, ಸೈಕಲ್ ತಿರುಗಾಟ, ಪೇಟೆ ಸುತ್ತಾಟ, ಗುಹೆ-ಬೆಟ್ಟ ಗುಡ್ಡಗಳಿಗೆ ಚಾರಣ ಹೋಗುವ ಸಾಹಸಪ್ರಿಯತೆ, ಹೊಸವಸ್ತುಗಳ ಖರೀದಿ, ರುಚಿಕರವಾದ ತಿಂಡಿಗಳಆರೋಗಣೆ, ಸಿಹಿತಿಂಡಿ-ಜೇನು- ಚಾಕಲೇಟ್ ಹಂಚುವಿಕೆ,  ಸಿನೆಮಾ ನಟನೆಯಿಂದ ಮೊದಲ್ಗೊಂಡು ಆಸ್ವಾದನೆಯಲ್ಲಿ ಬದುಕನ್ನು ಪ್ರತಿಫಲಿಸಿಕೊಳ್ಳುತ್ತಾ ಜೀವನವನ್ನು ಸಮೃದ್ಧವಾಗಿ, ಯಾರ ಹಿಡಿತಕ್ಕೂ ಸಿಗದಂತೆ ಅನುಭವಿಸುವ ಛಲ. ಸುಗಂಧವಸ್ತು-ಬೆಲ್ ಬಾಟಮ್ ಪ್ಯಾಂಟ್-ನೆಟ್ಟೆಡ್ ಬನಿಯನ್, ಐರನ್ ಮಾಡಿದ ಶರ್ಟು, ಬೆಲ್ಟ್- ಶೂನಂತಹ ಆಧುನಿಕತೆಯಿಂದ ಮೊದಲ್ಗೊಂಡು  ಕಚ್ಚೆ, ಪಂಚೆ, ಶಾಲು, ಮಡಿವಸ್ತ್ರ-ರತ್ನದುಂಗುರಗಳ-ರುದ್ರಾಕ್ಷಿಮಾಲೆಗಳ ಸಾಂಪ್ರದಾಯಿಕತೆಗೂ ತನಗೆ ತಾನೇ ಸಾಟಿಯಾಗುವಂತೆ ಕಾಲೋಚಿತವಾಗಿ ಬಗೆಬಗೆಯ ವಸ್ತ್ರಭೂಷಣಗಳನ್ನು ತೊಡುವ  ಅಲಂಕಾರ ರುಚಿ ಅವರದ್ದು.  ’ಹತ್ತು ಬೆರಳಿನ ಉಂಗುರ ಭಟ್ಟರು’ – ಜನರೇ ಇತ್ತ ಅಭಿಮಾನದ ಅಭಿಧಾನವದು. ಹಾಗೆಂದು ವಿರಾಗಿಯಂತೆ ಹೊರಟರೆ ಹಳೆಯ ಮಾಸುಬಟ್ಟೆಗಳನ್ನುಡಲೂ ಅವರ ಮೈ ಹಿಂಜರಿಯುತ್ತಿರಲಿಲ್ಲ. 

  ಎರಡು ಬಗೆಯ ದನಿಯಲ್ಲಿ ಮಾತಾಡುತ್ತಾ ಅಂಗಭಾವಗಳಲ್ಲಿ ಚೆಲುವನ್ನು ಇಮ್ಮಡಿಯಾಗಿ ಪ್ರಕಟೀಕರಿಸುವುದರಲ್ಲಿ ’ಸ್ಟೈಲ್ ಭಟ್ಟ’ರಿಗೆ ಸ್ಟೈಲ್ ಭಟ್ಟರೇ ಸಾಟಿ. ಫೋಟೋಗ್ರಫಿಗೆ ಫೋಸು ನೀಡುವಲ್ಲಿಯೂ ಅವರು ಕಡಿಮೆಯೇನಲ್ಲ. ಭಾಷೆಯ ಬಳಕೆಯ ಮೇಲೆ ಅವರಿಗಿದ್ದ ಅಸಾಮಾನ್ಯ ಹಿಡಿತ ವಿದ್ಯಾಭ್ಯಾಸದಿಂದ ಕಲಿತುಬಂದದ್ದಲ್ಲ.  ಬದುಕನ್ನು ಅವರು ನೋಡುತ್ತಿದ್ದ ಸೂಕ್ಷ್ಮವೇ ಅವರಿಗೆ ಹಲವು ಸೂಕ್ಷ್ಮಗಳನ್ನು ಕಲಿಸಿಕೊಟ್ಟಿತ್ತು. ಕೊನೆಗೆ ತಮ್ಮದೇ ನೆಚ್ಚಿನ ಪ್ರಾಯದ ಚೆಲುವಿನ ಚಿತ್ರಕ್ಕೂ ಮಾಲೆ ಹಾಕಿ ಹುಳ್ಳನೆಯ ನೆಗೆಯಾಡುವಷ್ಟು ಎಷ್ಟೋ ನಿಗೂಢವನ್ನು ತನ್ನಲ್ಲೇ ಬಚ್ಚಿಟ್ಟುಕೊಂಡುಹೋದ ಭವಿಷ್ಯಕಾರ.

ಕೃಷಿಯ ಬಗೆಗಿದ್ದ ಅಪಾರ ಒಲವಿನಂತೆ ಅವರಿಗೆ ಭೂಮಿ ಒದಗಿದ್ದರೆ ಚಿನ್ನವನ್ನೇ ಬೆಳೆಯುತ್ತಿದ್ದರೇನೋ. ವ್ಯವಸಾಯ, ಫಲವಸ್ತುಗಳನ್ನು ಬೆಳೆಸಬೇಕೆನ್ನುವ ಅವರ ಮನಸ್ಸಿನಂತೆ ಬಿತ್ತಿದ ಬೀಜವೆಲ್ಲವೂ ಚಿಗುರೊಡೆಯುವ ಕೈಗುಣ. ಹಾದಿಬದಿಯ ಗಿಡಮರಗಳನ್ನು ಮಕ್ಕಳಂತೆಯೇ ಬೆಳೆಸಿ ಪೋಷಿಸಿದ ಸಸ್ಯಪ್ರೇಮಿ. ಹಿಡಿ ಅಂಗುಲ ಜಾಗ ಸಿಕ್ಕಿದರೂ ಅಪರೂಪದ ಸಸ್ಯಗಳನ್ನು ನೆಟ್ಟು, ಬೀಜಗಳನ್ನು ಬಿತ್ತಿ ಹಂಚಿ ತಿನ್ನುವುದರಲ್ಲಿ, ಕೊಡುವುದರಲ್ಲಿ ಸುಖ ಕಾಣುತ್ತಿದ್ದ ಪರೋಪಕಾರಿ. 

ಕೆಡುಕು ಎಣಿಸಿದವರಲ್ಲಿ ಶೀಘ್ರಕುಪಿತರಾದರೂ ದೀರ್ಘದ್ವೇಷ ಸಾಧಿಸದ ಡಿಪ್ಲೊಮಸಿ ಇಲ್ಲದ ನೇರವಂತಿಕೆಯ ಋಷಿಸದೃಶ ವ್ಯಕ್ತಿ. ಭಜನಾ ವೇದಿಕೆ, ವೈದಿಕ ಸಮಾವೇಶ, ಶಂಕರ ಜಯಂತಿ ಆಚರಣೆ, ಯಕ್ಷಗಾನ ಮಂಡಳಿ, ಅಯ್ಯಪ್ಪ ಸೇವಾಸಮಿತಿ, ಕಲ್ಯಾಣಾದಿ ಕಾರ್ಯಕ್ರಮಗಳ ಸಹಿತ ಅನೇಕ ಸಾಮಾಜಿಕ- ಧಾರ್ಮಿಕ ಕಳಕಳಿಯ ಸಂಸ್ಥೆಗಳಿಗೆ ಅಡಿಪಾಯ ಹಾಕಿಕೊಟ್ಟು ಮಾರ್ಗದರ್ಶನವಿತ್ತ ಪ್ರಗತಿಶೀಲ.

 ಬಂಧುವರ್ಗ, ಸ್ನೇಹಿತವಲಯ, ಶ್ರದ್ದಾಳು ಭಕ್ತಾದಿಗಳೊಂದಿಗೆ ಎಲ್ಲಾ ಜಾತಿ- ಮತ- ವರ್ಗದವರಲ್ಲೂ ಅತ್ಯಂತ ಪ್ರೀತಿ- ವಿಶ್ವಾಸ -ಆದರವನ್ನಿಟ್ಟುಕೊಂಡು ಸಮಾನವಾಗಿ ನಡೆಸಿಕೊಂಡು, ವೈದಿಕ ವೃತ್ತಿಯನ್ನೂ ನಡೆಸಿಕೊಂಡು ಬಂದ ಅಪಾರ ಜನಪ್ರೀತಿಯ ಅಜಾತಶತ್ರು ನಾರಾಯಣ ಭಟ್ಟರು, ಯತಾರ್ಥದಲ್ಲಿಯೂ ಜಾತ್ಯಾತೀತ. ಜೀವನದ ಪ್ರತಿಯೊಂದು ಅಂಶಗಳಲ್ಲೂ ರುಚಿಶುದ್ಧಿ, ರಸನಿಷ್ಠೆ,  ಮಾತು-ಕೃತಿಗಳಲ್ಲಿ ಸಮಗ್ರತೆ ಜನ್ಮತಃ ಅವರೊಂದಿಗೆ ಸಾಗಿಬಂದು  ಬದುಕನ್ನು ಪೂರ್ಣವಾಗಿ, ಅನುಭವವಿಶೇಷವಾಗಿ ಆಸ್ವಾದಿಸುವಂತೆ ಮಾಡಿತ್ತು.  ಅವರೇ ಹೇಳುತ್ತಿದ್ದಂತೆ ’ಆನಂದವೇ ಆತ್ಮದ ಧರ್ಮ’. ಅದಕ್ಕಾಗಿ ಮಾಡುವ ಕೆಲಸವೆಲ್ಲವೂ ನ್ಯಾಯ, ಸತ್ಯ ಮತ್ತು ಸೂಕ್ತ.

ನಾರಾಯಣ ಭಟ್ಟರ ಏರು ಯೌವನದ ಅರ್ಚಕ ವೃತ್ತಿ- ಇಳಿ ಯೌವನದ ( ಕೊನೆಯ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ) ಮತ್ತು ವಿವಾಹ ಜರುಗಿಸುವ ಛಾಯಾಚಿತ್ರಗಳು

ಅವರಲ್ಲಿದ್ದ ಪರೀಕ್ಷಣ ಮತ್ತು ಶೋಧಬುದ್ಧಿಗೆ ಬದುಕಿನ ಹಲವು ಆಯಾಮ ಸಾಕ್ಷಿ ಹೇಳುತ್ತಲೇ ಇತ್ತು. ಆಚಾರ-ವಿಚಾರ, ಆಹಾರ-ವಿಹಾರ, ನಂಬಿಕೆ- ಮೂಢನಂಬಿಕೆಗಳ ಕುರಿತ ಅವರ ನಿಲುವೂ,  ಇತಿಹಾಸ-ವೇದಪುರಾಣ, ಜ್ಯೋತಿಷ, ನಿಗೂಢತೆ, ಧರ್ಮ-ಕರ್ಮ- ವೇದಾಂತದೃಷ್ಟಿ ಅತ್ಯಂತ ನಿರ್ದಿಷ್ಟ, ಸ್ಪಷ್ಟ. ಅಧ್ಯಯನಕ್ಕಿಂತಲೂ ಹೆಚ್ಚಿನ ಪ್ರಯೋಗಶೋಧ ಅವರ ಉಸಿರಿನ ಬಲ.  ಗುರುಮುಖೇನ ಆರ್ಜಿಸಿದ್ದಕ್ಕಿಂತ ಹೆಚ್ಚಾಗಿ ಜನ್ಮಾಂತರ ಸುಕೃತ ವಿಶೇಷದಿಂದ  ಅನೇಕ ಶಕ್ತಿ ಸಂಪನ್ನ.ಇನ್ನೊಂದಷ್ಟು ಅನುಭವ, ಕಲ್ಪನೆಯಿಂದ ದತ್ತವಾದದ್ದು. ಅದರಲ್ಲಿ ಗಾಯನ, ವಾದನ, ಅಭಿನಯ, ಕಲಾಸ್ವಾದನ, ರಾಗರುಚಿ, ಜ್ಯೋತಿಷ, ನಾಟಿವೈದ್ಯ, ನಿಧಿಶೋಧನೆ, ಮಂತ್ರವಾದ, ರೇಖಿ, ವಾಕ್ಪಟುತ್ವವೂ ಹೊರತಲ್ಲ.ವಿಚಿತ್ರವೆಂದರೆ, ಅವರಿಗೆಂದು ಸ್ವಂತಕ್ಕೆ ಉಪಕೃತವಾಗದ ಇವ್ಯಾವೂ ವಿದ್ಯೆಗಳಿಂದ ಬೇರೆಯವರು ಉಪಕೃತಗೊಳ್ಳುತ್ತಿದ್ದರು.  ಯಾವ ಮಟ್ಟಿಗೆಂದರೆ, ಅವರೇ ಹೇಳುತ್ತಿದ್ದ ಕಥೆ-ಹಾಸ್ಯ-ನಿಗೂಢ ಕಥಾನಕ-ಚರಿತ್ರೆ-ಹಾಸ್ಯ-ಬದುಕಿನ ಸಾಹಸದ ಸ್ವಾದ ಬರೆಹವಾಗಿ, ಕಥೆಯಾಗಿ ಬೇರೆಯವರು ಬರೆದರೂ ಪ್ರಶಸ್ತಿ, ಪುರಸ್ಕಾರ, ಸನ್ಮಾನ ದೊರೆಯುತ್ತಿತ್ತು ! ಹೀಗಿದ್ದಾಗ್ಯೂ ತನಗೆಂದು ಸ್ವಂತಕ್ಕೆ ಯಾವುದೇ ಹಿರಿದಾದ ಸನ್ಮಾನ, ಪ್ರಶಸ್ತಿ ಪುರಸ್ಕಾರ, ವೇತನ-ಸೌಲಭ್ಯಗಳಿಂದ ಸದಾ ವಂಚಿತರಾಗಿಯೇ ಉಳಿದ ಅದೃಷ್ಟಹೀನ ಶ್ರಮಜೀವಿ.

ಅತ್ಯಂತ ಕಡಿಮೆ ವೇತನ,ವೃತ್ತಿಸೌಕರ್ಯಗಳ ಕೊರತೆ ಜೀವನದುದ್ದಕ್ಕೂ ಕಾಡುತ್ತಿದ್ದಲಾಗ್ಯೂ ಯಾವುದೇ ದುಬಾರಿ ಆಡಂಬರದ ಅಪೇಕ್ಷೆಗಳಿಲ್ಲದೆ, ಯಾವುದೇ ನಿಂದೆಗಳಿಗೆ ಅಂಜದೆ ಅಳುಕದೆ, ಅಳತೆ ಮೀರಿ ಆಸೆಪಡದೆ ಸ್ವಧರ್ಮವನ್ನೊಂದೇ ಆಶ್ರಯಿಸಿ, ದಾನ ಧರ್ಮಾದಿಗಳನ್ನು ಜೀವನದುದ್ದಕ್ಕೂ  ನಡೆಸಿದ   ಉದಾರಿ ನಾರಾಯಣ ಭಟ್ಟರು. ಭಕ್ತಿಯೇ ಬಲವಾಗಿದ್ದರಂತೂ ಸ್ಥಾನಮಾನಾದಿಗಳ ’ಲೆವಲ್’ ಕೂಡಾ ಅವರ ಮುಂದೆ ತೃಣಸಮಾನ. ಕೀರ್ತಿ-ಪದವಿಗಳನ್ನು ಆದರಿಸುತ್ತಿದ್ದವರೂ ಅವರೇ, ’ಸಂದರ್ಭ’ ಬಂದರೆ ಎಂತಹ ’ದೊಡ್ಡವರನ್ನೂ’ ಧಿಕ್ಕರಿಸಿ ನಿಂತವರೂ ಅವರೇ. ಬಂದು ಆಶ್ರಯ ಬೇಡಿದವರಿಗೆ ಇಲ್ಲವೆನ್ನದೆ ತುತ್ತನ್ನಿಕ್ಕಿದ, ಹಲವು ಜೀವನ-ಕುಟುಂಬಗಳಿಗೆ ಅನ್ನದ ದಾರಿ ಒದಗಿಸಿಕೊಟ್ಟ ದಾತಾರ, ಸಾಮಾಜಿಕ ನ್ಯಾಯಗಳಿಗೆ ಹೋರಾಡಿದ ಆದರ್ಶ ಗೃಹಸ್ಥ. ಅತಿಥಿಗಳಿಗೆ ತ್ರಿಕಾಲವೂ ಷಡ್ರಸೋಪೇತ ಅನ್ನ ಪಾನಾದಿಗಳನ್ನಿತ್ತ ಪಾಕಪ್ರವೀಣ; ಸಾತ್ತ್ವಿಕ ಭೋಜನ ಭೀಮ. ಸ್ವತಃ ನವನವೋನ್ಮೇಷ ಪಾಕಪ್ರಿಯ. ಹಾಗೆಯೇ ಬ್ರಾಹ್ಮಭೋಜನಗಳಲ್ಲಿ ಬಿಡುಬೀಸಾಗಿ ಭೋರ್ಗರೆವ ಕಂಠದಿಂದ ವೇದವಾಕ್ಕುಗಳ ಜೊತೆಗೆ ಮಂಕುತಿಮ್ಮನ ಕಗ್ಗವನ್ನೂ ಚೂರ್ಣಿಕೆಗಳನ್ನಾಗಿಸಿದ ರಾಗಪ್ರಕಾಶಕ. 

ಹುಟ್ಟಿ ಬೆಳೆದಿದ್ದು ಪಂಜಸಮೀಪ- ಗುತ್ತಿಗಾರು. ೧೯೫೦ರ ಏಪ್ರಿಲ್ ೧೫ರಂದು. ತಾಯಿ ಗೌರಿ ಅಮ್ಮ- ಸಾಧ್ವಿ, ಸಹನಶೀಲೆ, ಕಷ್ಟಸಹಿಷ್ಣು. ತಂದೆ ವೇದಮೂರ್ತಿ ಗೋಪಾಲಕೃಷ್ಣ ಭಟ್ಟರು- ಸ್ವತಃ ಅಪಾರ ಶಕ್ತಿ-ಸಾಮರ್ಥ್ಯವಿದ್ದ ಕರ್ಮಠ ಬ್ರಾಹ್ಮಣ.  ೯ ಜನರ ಮಕ್ಕಳಲ್ಲಿ ಗಂಡುಮಕ್ಕಳ ಪೈಕಿ ಎರಡನೆಯ ಹಿರಿಯಣ್ಣ ನಾರಾಯಣ. ಎಳವೆಯಿಂದ ಅಪಾರವಾಗಿ ಕುಟುಂಬದ ಶ್ರೇಯಸ್ಸಿಗೆ ದುಡಿದ ಸೋದರ ಹಿತಾಭಿಲಾಷಿ.  ತುತ್ತು ಅನ್ನಕ್ಕಾಗಿ ಅಲೆದಾಡುತ್ತಾ, ಕುಟುಂಬ ಪಾಲನೆಗೆಂದು ಮಡಿಕೇರಿಗೆ ಬಂದು ನೆಲೆಯಾದ ನಂತರದಲ್ಲೂ ಬದುಕು-ಭಾವಗಳೆರಡರಲ್ಲೂ ಹೃದಯಶ್ರೀಮಂತಿಕೆಗೆ ಎಂದೂ ಬರ ತಂದುಕೊಳ್ಳದ ಕೆಚ್ಚೆದೆ. ಬಂಧುವರ್ಗದ ಮೇಲೆ ಅವರಿಗಿದ್ದ ಪ್ರೇಮದಿಂದಲೇ ಅನೇಕ ಜೀವಮಾನದ ಅವಕಾಶಗಳನ್ನು ಕೈಯಾರೆ ಬಿಟ್ಟುಕೊಟ್ಟ ಸ್ನೇಹಾಭಿಲಾಷಿ. ಪತ್ನಿ ಸಾವಿತ್ರಿ. ಮಗಳು ಡಾ ಮನೋರಮಾ ಬಿ.ಎನ್.; ಮಗ ರಾಜಗೋಪಾಲ್; ಅಳಿಯ ವಿಷ್ಣುಪ್ರಸಾದ್, ಸೊಸೆ ಇಂದುಶ್ರೀ, ಮೊಮ್ಮಗ ಆನಂದವರ್ಧನನೊಂದಿಗಿನ ಸಂತೃಪ್ತ ಸಂಸಾರದ ಪುರೋಭಿವೃದ್ಧಿಯಲ್ಲಿ ದೊರೆತ ಇಂಚಿಂಚೂ ಸಮಯವನ್ನು ವ್ಯಯಿಸಿದ ಯಜಮಾನ. ಮಕ್ಕಳಲ್ಲಿಯೂ ತನ್ನ ಕಲಾವಿಶೇಷವನ್ನು ಅರಸಿ, ಬೆಳೆಸಿ, ಕಂಡ ಗುರು. 

ಕಡುಬಡತನ ಕಲಿಸಿಕೊಟ್ಟ ಹೋರಾಟವನ್ನು ಜೀವನದುದ್ದಕ್ಕೂ ಕಾಪಿಟ್ಟು ಅನ್ಯಾಯ-ಅಸಹಿಷ್ಣು-ದರ್ಪದ ಸನ್ನಿವೇಶಗಳಲ್ಲಿ ನೇರ ದಿಟ್ಟವಾಗಿ ಮುಖ ಕೊಟ್ಟು ಎದುರಿಸಿ,  ದೃಢ  ನಿಲುವುಗಳಲ್ಲಿ ಅಸಾಮಾನ್ಯವೆನಿಸುವ ಚಿಂತನೆಯ ರೇಣುಗಳನ್ನು ಹರಡಿಸಿದವರು.  ಎಂಥಾ ಕಷ್ಟದ, ಸವಾಲಿನ ಸಂದರ್ಭಕ್ಕೂ ಅವರದ್ದು ಜೀವನೋತ್ಸಾಹದ, ಹೋರಾಟದ, ಸ್ವತಂತ್ರ ಮನೋಧರ್ಮ. ಬಡತನಕ್ಕೂ ಬಾಳುವುದಕ್ಕೂ ಸಂಬಂಧವಿಲ್ಲದಂತೆ ಬಡತನಕ್ಕೂ ಬಡತನ ಬರಿಸಿದ ಸಿರಿವಂತಿಕೆ ಹೃದಯದಲ್ಲಷ್ಟೇ ಅಲ್ಲ; ಬದುಕನ್ನು ತೋರಿಸಿಕೊಳ್ಳುವ ರೀತಿಯಲ್ಲೂ ಅವರಿಗಷ್ಟೇ ಸುಲಭಸಾಧ್ಯ ಎಂಬಂತಿತ್ತು.”ಸಂಪಾದನೆ ಮಾಡಬೇಕು’ ಎಂದವರೂ ಅವರೇ. ಆದ ಸಂಪಾದನೆಯನ್ನು ತನ್ನದಲ್ಲವೆಂಬಂತೆ ಹಂಚಿ ’ಲಭ್ಯವಿದ್ದಷ್ಟೇ ಉಳಿಯುವುದು.’ ಎನ್ನುತ್ತಿದ್ದವರೂ ಅವರೇ. ದಕ್ಷಿಣೆಯ ಕಾಸಿನಲ್ಲಿ  ಬದುಕು ಸಾಗಿಸುವ ಅನಿವಾರ್ಯತೆಯ ತೊಳಲಾಟಗಳ ಸ್ಪಷ್ಟ ಚಿತ್ರಣ ಅವರಿಗಿತ್ತಾದ್ದರಿಂದ ತನ್ನ ಓರಗೆಯ ವೈದಿಕರಿಗೆ ಅವರಿಂದ ಸಂದಾಯವಾಗುತ್ತಿದ್ದದ್ದು ಇಡೀ ಸೀಮೆಯಲ್ಲಿ ಯಾರೂ ಕೊಡದಷ್ಟು ಮೊತ್ತದ ದಕ್ಷಿಣೆ ! ವೈದಿಕನ ಹೃದಯಶ್ರೀಮಂತಿಕೆ  ಹೇಗಿರಬೇಕು ಎನ್ನುವುದಕ್ಕೆ ಅವರು ಎಂದೆಂದಿಗೂ ದೊಡ್ಡ ನಿದರ್ಶನ.

ಅವರ ಮುಖದ ಕಳೆ, ಜೇನುಕಣ್ಣಿನ ತೇಜಸ್ಸೇ ಸಾಕು..ಅವರಲ್ಲಿದ್ದ ಅವಧೂತನ ನಿರ್ಮಮತ್ವ, ರಾಜರಸಿಕನ ಸಾಕಾರತ್ವವು ಏಕಕಾಲಕ್ಕೆ ಏಕೀಭವಿಸಿದ್ದ ಸಾತ್ತ್ವಿಕ ಗುಣದ ರಾಜಸಿಕ ಪರಿಪಾಕದ ನಿಲುವನ್ನು ಪ್ರತಿಪಾದಿಸಲು. ಅರ್ಧನಾರೀಶ್ವರ ಹೇಗೆ ತಾಂಡವ ಲಾಸ್ಯ, ಉದ್ಧತ ಸುಕುಮಾರಗಳ ಸಮಾಗಮವೋ ಅಂತೆಯೇ ಶಿವನ ಈ ಸೇವಕನೂ ಉಗ್ರ, ಶಾಂತ ಸ್ವಭಾವಗಳೆರಡನ್ನೂ ಸದಾ ಕಾಲ ಚಿಮ್ಮಿಸುತ್ತಿದ್ದ ಕಾಂತಿ ಆ ಕಣ್ಣುಗಳಲ್ಲಿ. ಆದ್ದರಿಂದಲೇ ಅವರಾಗಿಯೇ ತಮ್ಮನ್ನು ಇಷ್ಟಪಟ್ಟು ಕರೆದುಕೊಂಡ ಹೆಸರು ’ರಾಜನಾರಾಯಣ’. ಅವರ ನಡೆ, ನುಡಿ, ಆಸಕ್ತಿಗಳನ್ನು ಅನುಕರಿಸಿ ಹೊರಟವರು ಅದೆಷ್ಟೋ. ಎಷ್ಟೋ ಮಂದಿಗೆ ಅವರು ’ಸ್ಟೈಲ್ ಐಕಾನ್’. ಆದರೆ ನಾರಾಯಣ ಭಟ್ಟರಂತೆ ಯಾರೂ ಆಗಲಿಲ್ಲ, ಅರಗಿಸಿಕೊಳ್ಳಲೂ ಇಲ್ಲ ಕೂಡಾ. ಭಟ್ಟರ ಬದುಕಿನ ಮರ್ಮ ಅವರಿಗಷ್ಟೇ ಗೊತ್ತು. ಉಂಡರೆ ಪಾಯಸವನ್ನೂ ಉಂಡಾರು, ಇಲ್ಲದಿದ್ದರೆ ಗಂಜಿಗೂ ತೃಪ್ತಿಪಟ್ಟಾರು.  ಭೋಗಿಯಿಂದ ವಿರಾಗಿಯ ತನಕೂ ಬೇಕೆನ್ನಿಸುವಾಗ ಯಾವುದೇ ಅವತಾರಗಳಲ್ಲಿ ತಮ್ಮನ್ನು ನಿಭಾಯಿಸುವಷ್ಟು ಸಾಮರ್ಥ್ಯವಿದ್ದ ಬೈರಾಗಿ. 

ಬ್ರಾಹ್ಮತೇಜಸ್ಸು ಒಡಗೂಡಿದ ಕ್ಷಾತ್ರ ಮನೋವೃತ್ತಿಯ  ಕಾರಣ ಜನ್ಮವದು ಎಂದು ಬಲವಾಗಿ ಅನಿಸುತ್ತಿದೆ. ಮೋಹ, ನಿರ್ಮೋಹಗಳ, ರಕ್ತಿ-ವಿರಕ್ತಿಗಳ ಸಂಗಮಕ್ಷೇತ್ರ.   ಆ ತೇಜಸ್ಸು ಕಾಷ್ಠಕ್ಕೇರುವಾಗಲೂ ಹಾಗೆಯೇ ಇತ್ತು ಎನ್ನುವುದು ಅವರ ಧೀಮಂತಿಕೆಗೆ, ಆತ್ಮದ ಗುಣಕ್ಕಿದ್ದ ಸಾಕ್ಷಿ. ಅದೊಂದು ಪಾಸಿಟಿವ್ ಎನರ್ಜಿ. ಇವೆಲ್ಲಾ ಗುಣಗಳೂ ಅವರನ್ನು ಪೊರೆದ ಶ್ರೀ ಓಂಕಾರೇಶ್ವರನ ದಯೆ, ಆತ್ಮಕ್ಕೂ ಆ ದೇವನಿಗೂ ಇರುವ ಸಂಬಂಧ ಈ ಜನುಮದ್ದಷ್ಟೇ ಅಲ್ಲ ಎಂಬುದು ಅವರ ಖಚಿತ ನಂಬಿಕೆಯಾಗಿತ್ತು. ’ಅಪ್ಪನೂ ಅಮ್ಮನೂ ಎಲ್ಲವೂ ಆ ಓಂಕಾರೇಶ್ವರ’- ಹಾಗಾಗಿ ಅವರು ದೀನನಾಗಿ ಕೇಳಿಕೊಳ್ಳುತ್ತಿದ್ದದ್ದೂ ಆ ದೇವನಲ್ಲೇ.!

ತಮ್ಮ ಕೊನೆಯ ದಿನಗಳಲ್ಲಿ ಕಾಡಿದ ತೀವ್ರ ಅಸೌಖ್ಯದಲ್ಲೂ ನಾರಾಯಣ ಭಟ್ಟರು ಮಾಡಿದ್ದು ಹೋರಾಟವನ್ನೇ. ಬಿಡದೆ ಕಾಡಿದ ಅನಾರೋಗ್ಯಕ್ಕೂ ಬಗ್ಗಿ ಅಷ್ಟುಸುಲಭಕ್ಕೆ ಬಿಟ್ಟುಕೊಟ್ಟವರಲ್ಲ. ಅಂತೂ ಮರಣಕ್ಕೆ ಶರಣಾಗಿ  ಬೆಂಗಳೂರಿನಲ್ಲಿ ಪಿತೃಪಕ್ಷದ ಪುಣ್ಯಕಾಲದ ಭರಣೀ ನಕ್ಷತ್ರ ಶ್ರಾದ್ಧದಿನದ ಸೆಪ್ಟೆಂಬರ್ ೧೮,೨೦೧೯ರಂದು ದೈವಾಧೀನರಾಗಿದ್ದು ನೂಪುರ ಭ್ರಮರಿಯೊಂದಿಗೆ ಕಲಾಕುಟುಂಬದ ಮಹತ್ತ್ವದ ಕೊಂಡಿ  ಈ ಪ್ರಕಾರವಾಗಿ ಮರೆಯಾಗಿದೆ. ಭೂಮಿಋಣ, ಪಿತೃಋಣ, ದೇವಋಣ, ಋಷಿಋಣ, ಸಮಾಜಋಣದಿಂದ ಮೊದಲ್ಗೊಂಡು ಲೋಕದ ಋಣವನ್ನು ಎಲ್ಲಾ ರೀತಿಯಲ್ಲೂ ತನ್ನ ಬದುಕಿನ 70ನೇ ವರುಷದ ವರೆಗೂ ಸಾರ್ಥಕವಾಗಿ ಪೂರೈಸಿ ಏನೊಂದು ಬಾಕಿ ಇಟ್ಟುಕೊಳ್ಳದೆ ತೆರಳಿದ ದಿವ್ಯಾತ್ಮ ಅವರದ್ದು. ಎಲ್ಲರಿಗೂ ಸೇವೆ ಮಾಡಿ, ತಾನು ಸೇವೆ ಮಾಡಿಸಿಕೊಳ್ಳಬೇಕಾದ ಸಮಯ ಬರುತ್ತಿದೆ ಎನ್ನುತ್ತಿದ್ದಾಗಲೇ ಏನೊಂದೂ ಹೇಳದೆ ಭವದ ಬಂಧನವನ್ನು ಕಳಚಿಸಿಕೊಂಡ ಜೀವ.  ಹಾಗೆಂದೇ ಅವರ ಪಾತ್ರ ಅವರೇ ನೆಚ್ಚುತ್ತಿದ್ದ ಡಾ.ರಾಜಕುಮಾರ್ ಸಿನೆಮಾದ ನಾಯಕನಂತೆ ಉದಾತ್ತ. ಆದರೂ undisputable ಅಲ್ಲದಷ್ಟು – ಜಗತ್ತಿನಲ್ಲಿ ಒಂದೇ ಸತ್ಯ ಎಂಬುದಿಲ್ಲ,ಸಮೃದ್ಧ ಬದುಕಿಗೆ ಒಂದೇ ಗುರಿ ಇಲ್ಲ ಎಂಬಂತೆ ! ಖಚಿತವಾಗಿಯೂ ಶಿವಸಾಯುಜ್ಯ ಹೊಂದಿರುತ್ತಾರೆಂಬುದ್ದು ನಮ್ಮ  ನಂಬಿಕೆ. ಅಂತೆಯೇ ಅವರ ಉತ್ತರಕ್ರಿಯೆಯು ಮಹಾಲಯ ಅಮಾವಾಸ್ಯೆಯಂದೇ ಸಂಪನ್ನಗೊಂಡು, ವೈಕುಂಠ ಸಮಾರಾಧನೆಯ ಹೊತ್ತಿಗೆ ನವರಾತ್ರ ಪ್ರವೇಶಿಸಿತ್ತು. ಮೊದಲ ಮಾಸಿಕ ತಿಥಿ ವಿಜಯದಶಮಿಯಂದಾದರೆ, ಕಾವೇರಿ ಸಂಕ್ರಮಣದಂದು ಅವರ ದೈವಾಧೀನದಿಂದ ತಿಂಗಳು ತುಂಬಿದ ತಿಥಿ ಏರ್ಪಟ್ಟಿತ್ತು.

ನಾರಾಯಣ ಭಟ್ಟರ ನಡೆ -ನುಡಿ- ವ್ಯಕ್ತಿತ್ವವನ್ನು ಹಿಡಿದಿಡಲೇ ಅಸಾಧ್ಯವೆನ್ನಿಸುವಷ್ಟು ವೈವಿಧ್ಯ, ವೈಶಿಷ್ಟ್ಯಪೂರ್ಣ, ಬಹುಮುಖೀ ಆಯಾಮದ್ದು.  ಇಲ್ಲಿ ಕಟ್ಟಿಕೊಟ್ಟ ನೋಟವೇನಿದ್ದರೂ ಸಾಗರಗರ್ಭದಲ್ಲಿ ಒಂದು ಬೊಗಸೆ ನೀರು ಮಾತ್ರ.  ಅದು ಅಷ್ಟು ಸುಲಭಕ್ಕೆ ಅಳತೆಗೆ ಸಿಗುವುದಲ್ಲ. ಹಾಗೆಂದು ಇದಾವುದೂ ಅತಿಶಯೋಕ್ತಿಗಳೂ ಅಲ್ಲ. ಅವರಿದ್ದಿದ್ದೇ ಹಾಗೆ. ಅದನ್ನು ಬಲ್ಲವರು ಅವರ ಒಡನಾಟದೊಳಗಿದ್ದವರು.ಈ ಹಿನ್ನೆಲೆಯಲ್ಲಿ ಕಲಾವಿದರು, ಕವಿಗಳು ಅವರನ್ನು ಕಲಾಕೀಲಕ ವಾಟ್ಸಾಪ್ ಗುಂಪಿನಲ್ಲಿ ಸ್ಮರಿಸಿಕೊಂಡ ಪಾರ್ಶ್ವನೋಟವನ್ನಷ್ಟೇ ಇಲ್ಲಿ ಕೊಡಲಾಗಿದೆ. ನೂಪುರ ಭ್ರಮರಿಯ ಸಂಸ್ಥಾಪಕ ಅಧ್ಯಕ್ಷರಾಗಿ, ಟ್ರಸ್ಟಿಯಾಗಿ, ಗುರುವಾಗಿ, ಸೇವಕನಾಗಿ ಯಾವುದಕ್ಕೂ ಇಲ್ಲವೆನ್ನದೆ, ಬೇಸರಿಸದೆ ಪ್ರಾರಂಭದ ದಿನಗಳಿಂದಲೂ ಪತ್ರಿಕೆ ಮತ್ತು ಟ್ರಸ್ಟ್ ಗೆ  ಬೆನ್ನೆಲುಬಿನಂತೆ ದುಡಿದವರು, ಸಂಪಾದಕಿ ಡಾ.ಮನೋರಮಾ ಬಿ.ಎನ್ ಅವರ ತಂದೆ ಶ್ರೀಯುತ ಬಿ.ಜಿ.ನಾರಾಯಣ ಭಟ್ಟರು.  ಅವರ ಕಲಾ ಸೇವೆಗೆ ನೂಪುರ ಭ್ರಮರಿ ಸದಾಕಾಲ ಋಣಿಯಾಗಿರುತ್ತದೆ ಎನ್ನುವುದೂ ಸಣ್ಣಮಾತೇ ಆದೀತೇನೋ. ಅಷ್ಟೊಂದು ವಾತಾಯನ ಅವರನ್ನು ಕಳಕೊಂಡು ಕಾಡುತ್ತಿದೆ. ಇದೋ ಅವರ ಪಾದಗಳಿಗೆ ಕಂಬನಿ ತುಂಬಿದ, ಭಕ್ತಿಪೂರ್ವಕ ನುಡಿನಮನ ಅಂಜಲಿ.

 

ಜೀವಸಮಾಧಿಯ ಕಲಾಂತರಂಗವನ್ನು ಆಸ್ವಾದಿಸಿದ ಸಹೃದಯಪುರುಷ

– ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ,

 ಹಿರಿಯ ರಂಗಕರ್ಮಿ, ಕವಿ, ಕಲಾವಿದ್ವಾಂಸ, ಬೆಂಗಳೂರು

ಆಗಸ್ಟ್ ಹತ್ತನೇ ತಾರೀಖು.‌ ಏಗ್ದಾಗೆಲ್ಲ ಐತೆ ನಾಟಕ ನೋಡಲು ಮನೋರಮಾ ಅವರನ್ನು ಕರೆತಂದಿದ್ದಳು.  ಅದಾಗಲೇ ಮರಣದ ಮುನ್ನೋಟ ತೆರೆಮರೆಯಲ್ಲಿ ಇಣುಕುತ್ತಿತ್ತು. ಸುಮಾರು ಎರಡು ಗಂಟೆ ಕಾಲ ರಸವಶರಾಗಿ ನೋಡಿದರು. ನಾಲ್ಕು ದಿನದ​​ ಬಳಿಕ ಅವರನ್ನು ನೋಡಲು ಹೋಗಿದ್ದೆ. ನಾಟಕ ನೋಡಿ ಭಟ್ಟರು ಒಂಥರಾ ಟ್ರಾನ್ಸ್‌ನಲ್ಲಿದ್ದರು. ತನಗಾದ ಆನಂದದ ಅನುಭೂತಿಯನ್ನು ತುಳುಕುಗಣ್ಣಿನಲ್ಲಿ ಪ್ರಸನ್ನವಾಗಿ ಪ್ರಕಟಿಸುತ್ತಲೇ ಇದ್ದರು, ಮಾತಲ್ಲಿ ಮತ್ತೆ‌ಮತ್ತೆ ಪಡಿನುಡಿಯುತ್ತಲೇ ಇದ್ದರು. ತನ್ನ ಜೀವನದ ಪರಮಸಂಭ್ರಮ ಅಂದರು.‌ ಇನ್ನು ಯಾವ ಉಪನಿಷತ್ತು ಗೀತೆ ವೇದಾಂತವೂ ಬೇಡ.‌   ಸಮಾಧಿ ಬಗ್ಗೆಎಂಥಾ ಮಾತು ಮುಕುಂದೂರು ಸ್ವಾಮಿದು. ‘ ಸತ್ತವರ ಗುಡ್ಡೆನೇ ಸಮಾಧಿ ಅಂತಾರಲ್ಲ ಜನ! ಸತ್ತ್ ಮ್ಯಾಕ್ ಎಂತಾ ಸಮಾಧಿ. ಅದೇನಿದ್ರೂ ಇದ್ದಾಗಲೇ ಆಗ್‌ಬೇಕು. ಅಂಗ್ ಸಮಾಧಿ ಅದ್ರೆ ಅದೇ ಸಿವ.‌ಈ ಸರೀರಾನೇ ಮಸಾಣ, ಅಂಥಾ ಮದಾಣದಾಗೆ ಸಿವ ಇದಾನೆ ಅಂದ್ರೆ , ಅದಪ್ಪಾ ಮಾತು ‘ ಅಹಾಹಾ, ಅದು ಅನುಭವದಿಂದ  ಬಂದದ್ದು. ಕಣ್ಣಿಗೆ ಕಾಣೋದು ಕಿವಿಗೆ ಕೇಳೋದಷ್ಟೇ ಅಲ್ಲ, ಅಂತರಂಗದ ಆಳಕ್ಕೆ ಇಳಿತದೆ. ನೋವನ್ನು ಮರೆಸುತ್ತದೆ. ಕಲೆ ಅಷ್ಟು ಮಾಡಿದರೆ ಸಾಕಲ್ಲ. ಅದು ಸಾಕ್ಷಾತ್ಕಾರ. ನೀವು ಅಷ್ಟು ಮಾಡಿಸಿದ್ದೀರಿ. ಯಾವ‌ಕಾಲಕ್ಕೂ ಮರಿಲಿಕ್ಕಿಲ್ಲ. …. ನಾರಾಯಣ ಭಟ್ಟರು ಹೇಳಿ ದಣಿಯರು. ಮರಣಾವರಣಗ್ರಸ್ತರಾದ ಅವರ ಮುಖದಲ್ಲಿ ಮೂಡಿ‌ಮರೆಯಾಗುತ್ತಿದ್ದ ಸಂತೃಪ್ತಿತರಂಗಗಳನ್ನು ಧನ್ಯತಾಮೌನದಿಂದ ಆರಾಧಿಸುತ್ತಾ ಕೂತಿದ್ದೆ ನಾನು.‌ ಕಲೆ ಎಂಬುದರ ಅಸೀಮಸಾಮರ್ಥ್ಯದ ಬಗ್ಗೆ ಕೃತಜ್ಞತೆ ಮೂಡುತ್ತಿತ್ತು.‌ ನಮ್ಮ ಪರಂಪರೆ ಅಂತರ್ನಿರ್ವೃತಿಗಾಗಿ ಎಂತೆಂತಹ ಹೆದ್ದಾರಿಗಳನ್ನು ಕಂಡುಕೊಂಡಿದೆ ! ನಾನೂ ಆ‌ಕ್ಷೇತ್ರದಲ್ಲಿದ್ದಕ್ಕಾಗಿ ಹೆಮ್ಮೆ ಅನಿಸಿತು. ಇಡೀ ಶರೀರವು ಅಸಹನೀಯರೋಗಬಾಧಾನಿರ್ಭರವಾದಾತನೊಬ್ಬ ಎರಡು ಗಂಟೆ ನಾಟಕವೊಂದನ್ನು ನೋಡಿ ಮೈಮರೆಯುತ್ತಾನೆ ಅಂತಾದರೆ ಅದಕ್ಕಿಂತ ಸಮರ್ಚನ ಬೇರೇನಿದೆ, ಬೇರೇನು ಬೇಕು! ಭಟ್ಟರ ಸಂಪರ್ಕಕ್ಕೆ ಬಂದವರೆಲ್ಲರಿಗೂ ತಿಳಿದಿರುವಂತೆ, ಅವರು ಅತ್ಯಂತ ವಿನೋದಶೀಲರು. ನಗೆ ಮಾಸದ ಮೋಹಕಮುಖ. ಹಾಗಾಗಿ ನಾನು ಅವರ ವ್ಯಾಧಿಗಾಗಿ ಮಮ್ಮಲಮರುಗಲು ಹೋಗದೆ ತಮಾಷೆಯ ತೆಕ್ಕೆಗೆ ಜಾರಿದೆ. ಮಾತಿನ ನಡುವೆ ಭಟ್ಟರು, ಮೈಯ ಒಳಗಡೆ ವಿಪರೀತ ತುರಿಸ್ತದೆ, ಮನು ರಾತ್ರಿಯೆಲ್ಲ ಉಜ್ಜುತ್ತಾಳೆ, ಆದರೆ ಒಳಗಿನ ತುರಿಕೆ ತಗ್ಗುವುದು ಹೇಗೆ ಅಂದರು. ‘ ಒಳಗಿನ ತುರಿಕೆಯೋ ! ಅದೇ ಅಧ್ಯಾತ್ಮ. ಅನುಭವ ಒಳಗಿಂದ ಬರಬೇಕು ಅನ್ನೋದೇ ವೇದಾಂತ. ನೀವೀಗ ಅಧ್ಯಾತ್ಮದ ಆಳಕ್ಕಿಳಿಯುತ್ತಿದ್ದೀರಿ. ಈ ಅಪೂರ್ವ ಅನುಭವ ಸಾಮಾನ್ಯಭವಿಗಳಿಗೆ ಬರೋದಿಲ್ಲ ‘ ಅಂತ ಕಿಚಾಯಿಸಿದೆ. ‘ ಮನು, ಉಪಾಧ್ಯಾಯರಿಗೆ ಅರ್ಥ ಆಯ್ತು ನೋಡು. ‘ ಅಂತ ಬಿರಿದರಳುಮೊಗದಲ್ಲಿ ನಗುನಗುನಗುತ್ತಾ ಎಷ್ಟು ಎಂಜಾಯ್  ಮಾಡಿದರೆಂದಿಲ್ಲ. ರಾತ್ರಿ ನಿದ್ದೆ ಬರೋದಿಲ್ಲ ಅಂದರು. ‘ ಸ್ವಾಮಿ, ನೈಂಟಿ ಹಾಕಿಬಿಡಿ. ಪಕ್ಕಾ ಸಮಾಧಿಯೇ’ ಅಂದೆ. ‘ ಮನು, ಕೇಳ್ಕೋ. ವ್ಯವಸ್ಥೆ ಮಾಡು. ವಿಪ್ರವಾಕ್ಯೋ ಜನಾರ್ದನ. ನೋಡಿ, ಇವರಿಗೆಲ್ಲ ಇದು ಅಂದಾಜಾಗೋದಿಲ್ಲ. ವಿಷ್ಣುಗೆ ಹೇಳಬೇಕು.‌ ‘ ಅಂತ ಮುಂದುವರಿಸಿದರು. ಮನೋರಮಾ, ಉಪಾದ್ರೇ ಸ್ವಲ್ಪ ಸುಮ್ನಿರ್ತೀರಾ. ಅವರು ಇಷ್ಟು ವರ್ಷ ಈಶ್ವರನ ಪೂಜೆ ಮಾಡಿದ್ದು ಗೊತ್ತಾಯ್ತಾ ಅಂತ ಒಗ್ಗರಣೆ ಹಾಕಿದಳು. ‘ ಓ, ಅದಕ್ಕೇನಂತೆ. ಸಮಸ್ತಪದರಪಂಚವೂ ಶಿವಮಯ ತಾನೆ. ಅವನೂ ಸಂಧ್ಯಾಪ್ರದೋಷದಲ್ಲಿ ಆ ನಮೂನೆ ಕುಮ್ಚಟ್ಟು ಧಿಗಿಣ ಹಾಕಿ ಸ್ಮಶಾನದಲ್ಲಿ ಕುಣಿಬೇಕಿದ್ದರೆ ಅಷ್ಟೋಇಷ್ಟೋ ಹಾಕೊಂಡೇ ಹೋಗಿರ್ತಾನೆ. ನಿಮಗೆ ಹಾಗೂ ಹಿಂಜರಿಕೆ ಇದ್ರೆ, ಓಂಕಾರೇಶ್ವರನಿಗೆ ಒಂದು ಪೆಗ್ಗನ್ನ ಎದುರಿಟ್ಟು ಭೂರ್ಭುವಸ್ವಃ ಸತ್ಯಂತ್ವರ್ತೇನ ಅಂತ ಯಥಾವಿಧಿ ನೈವೇದ್ಯ ಮಾಡಿ, ತೀರ್ಥವತ್‌ಪ್ರಾಶನ ಮಾಡಿದರಾಯ್ತು. ದೋಷದೂರ ಆಗತ್ತೆ. ಯಾವೋನೂ ಕೇಸ್ ಹಾಕಾಂಗಿಲ್ಲ ‘ ಅಂದೆ. ಇಷ್ಟ್ ವರ್ಷ ಬದುಕಿದರೂ, ಈ ರೀತಿ  ಶಾಸ್ತ್ರಬದ್ಧವಾಗಿ ಒಂದ್ ಮಾತು ಹೇಳಿದೋರಿಲ್ಲ. ಇನ್ ಯೋಚ್ನೆ‌ ಮಾಡಲಿಕ್ಕಿಲ್ಲ. ‘ ಅಂತ ಅಂತರಂಗದಾಳದ ತನಕ ನಗುವನ್ನು ಆವಾಹಿಸಿಕೊಂಡು ಹಗುರಾದರು. ಹಗುರೇ ಆದರು.

 

ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಗೆ ವಿಮರ್ಶಾ ಪ್ರಶಸ್ತಿ ನೀಡಿದ ಕ್ಷಣದಲ್ಲಿ ಗಣ್ಯರೊಂದಿಗೆ ನಾರಾಯಣ ಭಟ್ಟರು ನೂಪುರ ಭ್ರಮರಿಯ ಸಂಸ್ಥಾಪಕ ನಿರ್ದೇಶಕರಾಗಿ, ಸಂಪಾದಕಿ ಡಾ.ಮನೋರಮಾ ಬಿ ಎನ್ ರ ಪಕ್ಕಕ್ಕೆ (ಎಡದಿಂದ ಮೂರನೇ)

 

ಕಲಾಕಲಾಪದ ಜೀವಧಾತು : ನಾರಾಯಣಣ್ಣ

– ಜಬ್ಬಾರ್ ಸಮೋ, ಹಿರಿಯ ಯಕ್ಷಗಾನ ಅರ್ಥಧಾರಿ, ಪುತ್ತೂರು

ನಾರಾಯಣಣ್ಣ ನನ್ನ ಹೃದಯ ಭಿತ್ತಿಯಲ್ಲಿ  ಜೀವಂತ ಚಿತ್ರ. ಅವರ ಮತ್ತು ನನ್ನ ‘ಮಡಿಕೇರಿಯ ಬಾಂಧವ್ಯ’ ಶ್ರೀ ಓಂಕಾರೇಶ್ವರ ದೇವಳಕ್ಕೆ ತಾಗಿಕೊಂಡ ವೇದಾಂತ ಸಂಘದ ಜಗುಲಿಯ ಮಿದುಹಾಸಿನಿಂದ ಚಿಗಿತದ್ದು.ಇದರ ಬಳ್ಳಿ ಲೀಡ್ಸ್ ಟೈಲರ್ಸ್ ನ ಮಾಲಿಕ, ಯಕ್ಷಗಾನದ ಅಪ್ಪಟ ಪ್ರೇಮಿ ಗೋಪಾಲಕೃಷ್ಣರಿಂದ ಹಬ್ಬಿ ನನ್ನನ್ನು ಬಳಸಿದ್ದು. ನಮ್ಮ ಮೂವರ ಸಂಬಂಧ ಎಲ್ಲ ಲೌಕಿಕ ಕ್ಲೀಷೆಗಳನ್ನು ಮೀರಿದ್ದು.ಅವರ ಪುಟ್ಟ ಮನೆಯೊಳಗಿನ,ಅಗಾಧ ನಲ್ಮನಸಿನ ಅಚ್ಚಿನಂತಹ ಸೌಟಿನ ಪಾಯಸ,ಗರಿಮುರಿಯಾದ ಅವಲಕ್ಕಿ,ಚಹಾ ನಮ್ಮ ತಾಳಮದ್ದಲೆ ತಾಲೀಮಿಗೆ ಜೀವಧಾತು!

ನನ್ನ ಪೂರ್ವಾಶ್ರಮದ ಕಲೆಯ ಬೆಂಬತ್ತೋಣ ಸಾಹಸದಲ್ಲಿ ನಲುಗಿ,ತೇಕುವಾಗಲೆಲ್ಲಾ ನನಗೆ ಕುಳಿತು ಸಂಭಾಳಿಸಲು  ಅರವಟ್ಟಿಗೆಯಾದುದು ಈ ನಾರಾಯಣ ಭಟ್ಟರಂತಹ ಅಂತ:ಕರಣದ ಜಗುಲಿ. ಈಗವರ ವಿಯೋಗದಿಂದ ಒಂದು ದಿವ್ಯ ಅಂಕ ಪಾರ್ಶ್ವಕ್ಕೆ ಸರಿದಿದೆ. ಆದರಿದನ್ನವರು ನನ್ನ ಹೃದಯದ ಧೀಂ ಕಿಟ ದ ಲಯ ತಪ್ಪುವವರೆಗೂ ಏರಿಸಿಳಿಸುತ್ತಲೇ ಇರುತ್ತಾರೆ..ನನ್ನ ನೆನಪುಗಳ ನಾಟಕ ರಂಗದಲ್ಲಿ ಭಟ್ಟರ ಪಾತ್ರ ಚಿರಂಜೀವಿ. ಪರಂಜೀವಿಯೆನ್ನದೆ ಸತ್ಕರಿಸಿದ ಅವರ ಅಸು ಹರಡಿ ಹಾಸಾಗಲಿ ನನ್ನಂತಹ ಅಲೆಮಾರಿಗೆ.ಬೇರೇನೆಂದೇನು ನಾರಾಯಣಾಯನದ ಪರಿಸಮಾಪ್ತಿಯ ಸಂಕಟದ ಈ ವೇಳೆಯಲ್ಲಿ?

ಅವರ ಮಗುವಿನ ನಗುವಿನ ಮೆಚ್ಚುಗೆ ನಮ್ಮ ಅಟ್ಟಹಾಸ,ಆಳುಗಳಿಗೆ ಶ್ರುತಿಯಂತಿತ್ತು.ಹೊಗಳಿಕೆಗೂ ದಕ್ಕದ, ಅಪ್ಪಟ ಮನುಷ್ಯ,ನಾರಾಯಣ ಭಟ್ಟರ ನಿಧನ ವಾರ್ತೆ ಆಲಿಸಿದ ಕೃಷ್ಣಣ್ಣ,ನೆನಪುಗಳ ಮಧ್ಯೆ ಬಿಕ್ಕಿದ್ದು ನನ್ನ ಎದೆಗೂಡನ್ನು ಒದ್ದೆಯಾಗಿಸಿತು. ಓಂಕಾರೇಶ್ವರನ ಮುಖದಂತಹ ಪುಷ್ಕರಿಣಿಯ ಪಚ್ಚೆ ನೀರು ಭಟ್ಟರ ನಗೆಯೆಸಳುಗಳನ್ನು ಸದಾ ತೇಲಿಸುತ್ತಿರಲಿ. ಹೋಗಿ,ಬನ್ನಿ ಕರ್ಣಕುಂಡಲಗಳಿಂದೊಪ್ಪುವ ನನ್ನೊಳಗಿನ ಸ್ಪೂರ್ತಿಯಂತಹ ನಾರಾಯಣಣ್ಣಾ.

 

ಸ್ಟೈಲ್ ಭಟ್ಟರ ಮಧುರ ಸ್ಮೃತಿ

ವಿದ್ವಾನ್ ದಿವಾಕರ ಹೆಗಡೆ, ಹಿರಿಯ ಯಕ್ಷಗಾನ ಕಲಾವಿದರು, ಮೈಸೂರು

ಏಳೆಂಟು ವರುಷಗಳ ಹಿಂದಿನ ಸಂದರ್ಭ. ಬೆಂಗಳೂರಿನ ರಾಜಾಜಿ ನಗರದಲ್ಲಿದ್ದ ಮನೋರಮಾ- ವಿಷ್ಣು ಅವರ ಮನೆಗೆ ಹೋಗಿದ್ದೆ. ಅಲ್ಲಿ ನಾರಾಯಣ ಭಟ್ಟರ ಪರಿಚಯವಾಯಿತು. ಎತ್ತರದ ನಿಲುವು, ಗುಂಗುರು ಕೂದಲು, ವಯಸ್ಸಿಗೆ ಹೊಂದಿ ಅಗಲವಾದ ಹಣೆ, ಭಾವವ್ಯಂಜಕವಾದ ಅರಳಿದ ಕಣ್ಣು, ಹುರಿಗಟ್ಟುವ ಮೀಸೆ, ಚುಪುರು ಗಡ್ಡ, ಕೊರಳಲ್ಲಿ ರುದ್ರಾಕ್ಷಿಯ ಸರ,  ಮುಖದತುಂಬ ನಗು, ಹುಬ್ಬಿನ ಏರಿಳಿತದೊಂದಿಗೆ ಮಾತಾಡಿದರೆ ಅಪ್ಪಟ ಕಲಾವಿದನ ಅಂಗಭಾಷೆ.

ಪರಿಚಯವಾದ ಕೆಲವೇ ಕ್ಷಣಗಳಲ್ಲಿ ವಯಸ್ಸಿನ ಅಂತರವನ್ನೂ ಮೀರಿ ಆಪ್ತರಾದರು. ಮಡಿಕೇರಿಗೆ ಬನ್ನಿ, ಮನೆಗೆ ಬನ್ನಿ ಎಂದರು. ಮಡಿಕೇರಿಗೆ ಬಂದು ನಾರಾಯಣ ಭಟ್ಟರ ಮನೆ ಎಲ್ಲಿ ಎಂದು ಕೇಳುವುದಕ್ಕಿಂತ “ಸ್ಟೈಲ್ ಭಟ್ಟರ” ಮನೆ ಎಲ್ಲಿ ಎಂದು ಕೇಳಿ ಅಂದವರು ದೊಡ್ಡದಾಗಿ ನಕ್ಕರು.. ನಂತರ ಅದನ್ನು ವಿವರಿಸಿದರು. ಮಡಿಯುಟ್ಟು ಭಸ್ಮ ಹಚ್ಚಿ, ರುದ್ರಾಕ್ಷಿ ಧರಿಸಿ, ವೇದಘೋಷ ಮಾಡಬಲ್ಲ ನಿಷ್ಠಾವಂತ ವೈದಿಕರೂ ಹೌದು, ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಿ, ಬೂಟು ಮೆಟ್ಟಿಕೊಂಡು ಪೇಟೆಯಲ್ಲಿ ಓಡಾಡಬಲ್ಲ ಸಹಜ ರಸಿಕರೂ ಹೌದು. ಸಿನೆಮಾ, ಯಕ್ಷಗಾನ, ಕೀರ್ತನೆ, ಕಾದಂಬರಿ, ವೇದಗೋಷ್ಠಿ ಹೀಗೆ ಸಾರಸ್ವತ ಲೋಕದ ಎಲ್ಲದಕ್ಕೂ ತೆರೆದ ಮನಸು. ಆಯಾ ಕಾಲದ ಫ್ಯಾಶನ್ ಎನ್ನಿಸಿಕೊಂಡ ಸಂಗತಿಗಳನ್ನು ಅನುಸರಿಸುವಲ್ಲಿ ಹಿಂಜರಿಕೆಯಿಲ್ಲದ ಧೀರರು. ಹಾಗಾಗಿ ಅವರಿಗೆ ಸ್ಟೈಲ್ ಭಟ್ಟರೆಂಬ ಹೆಸರು ಬಂದಿತ್ತು. ಅವರ ಈ ವಿವರವನ್ನು ಕೇಳಿದಾಗ ಭಟ್ಟರ ಬಗೆಗಿನ ಗೌರವ ಹೆಚ್ಚಾಯಿತು. ವೈದಿಕನಾದವನು ಯಾವಾಗಲೂ ನಿರ್ದಿಷ್ಟವಾದ ಯುನಿಫಾರ್ಮ್ ನಲ್ಲಿಯೇ ಇರಬೇಕು ಎನ್ನುವ ಅಲಿಖಿತ ನಿಯಮವನ್ನು ಮೀರಿದ ಅವರ ಜೀವನೋತ್ಸಾಹಕ್ಕೆ, ಸಮಾಜ ಅವರನ್ನು ಸ್ಟೈಲ್ ಭಟ್ಟರೆಂದು ಕರೆದುದನ್ನು ಸಹಜವಾಗಿ ಸ್ವೀಕರಿಸಿದ ಅವರ ಧೈರ್ಯಕ್ಕೆ ಬಹಳ ಖುಶಿಪಟ್ಟೆ.

ಮುಂದೆ ಮಡಿಕೇರಿಯ ಅವರ ಮನೆಗೆ ಹೋಗಿದ್ದೆ. ಒಂದು ದಿನ ಅಲ್ಲಿಯೇ ಉಳಿದಿದ್ದೆ. ದಿನವಿಡೀ ಮಾತಾಡಿದರೂ ದಣಿಯದವರು. ಅದರಲ್ಲೂ ಯಕ್ಷಗಾನದ ಮಾತು ಬಂದರೆ ಅದೆಂತಹ ಉತ್ಸಾಹ, ಆನಂದ! ಮಾತು ಆರಂಭವಾಗುವಾಗ ರಾಜಕೀಯ, ಸಾಮಾಜಿಕ, ವೈದಿಕ ಯಾವುದಾದರೂ ಇರಲಿ ಮುಗಿಯುವಾಗ ಯಕ್ಷಗಾನಕ್ಕೇ ಬರುತ್ತಿತ್ತು. ವರ್ತಮಾನದ ಬದುಕಿಗೂ ಯಕ್ಷಗಾನದ ಪ್ರಮಾಣ ನೀಡಬಲ್ಲಷ್ಟು ಯಕ್ಷ ರಸಿಕರು.

೨೦೧೯ರ ಸೆಪ್ಟೆಂಬರ್ ತಿಂಗಳ ೧೪ ರಂದು ಸೂರ್ಯಾಸ್ತಮಾನದ ವೇಳೆಯಲ್ಲಿ ಬೆಂಗಳೂರಿನ ರಂಗದೊರೆ ಆತ್ರೆಯಲ್ಲಿ ನಾರಾಯಣ ಭಟ್ಟರನ್ನ ಕೊನೆಯ ಬಾರಿ ಕಂಡೆ. ಅಪಾರವಾದ ಜೀವನೋತ್ಸಾಹ, ಜೀವನ ಪ್ರೀತಿಗಳೇ ಸೋತು ಸೊರಗಿ ಮಂಚಕ್ಕೊರಗಿದಂತೆ ಕಾಣುತ್ತಿತ್ತು. ನಿಶ್ಶಕ್ತಿಯಿಂದ ಮಾತಾಡುವುದು ಕಷ್ಟವಾಗಿತ್ತು. ಕೆಮ್ಮು ಬರುತ್ತಿತ್ತು. ನನ್ನನ್ನು ಕಂಡಾಗ ಆ ಎಲ್ಲ ನೋವಿನ ನಡುವೆಯೂ ಭಟ್ಟರ ಮುಖದಲ್ಲಿ ವಿಶ್ವಾಸದ ನಗೆ ಮೂಡಿತು. ಕೈ ಹಿಡಿದುಕೊಂಡು ಮಾತಾಡಿಸಿದೆ. ಸಣ್ಣ ದನಿಯಲ್ಲಿಯೇ ಹೊಸ ಯಕ್ಷಗಾನದ ಹೆಸರುಗಳನ್ನು ಹೇಳಿ ನಕ್ಕರು. ಈಗೆಲ್ಲ ಇಂಥವೇ ಯಕ್ಷಗಾನಗಳು ಎಂದರು. ಅವರ ಪರಿಸ್ಥಿತಿ ಕಷ್ಟವಾಗಿತ್ತು. ಸಮಾಧಾನ ಹೇಳಲು ನಾನು ಸಣ್ಣವನು. ‘ ನೀವು ವೈದಿಕರಾಗಿ ಪ್ರತೀದಿನ ಅದೆಷ್ಟೋ ಶ್ರದ್ಧಾವಂತರಿಗೆ ಸಮಾಧಾನ ಹೇಳಿದ್ದೀರಿ. ಈಗ ನಿಮಗೇ ನೀವು ಸಮಾಧಾನ ಹೇಳಬೇಕು ” ಎಂದೆ. ಅದಕ್ಕೂ ಒಂದು ಮುಗುಳ್ನಗುವೇ ಅವರ ಉತ್ತರ. ಅಂಗೈಯನ್ನು ತಿಕ್ಕುತ್ತ ಒಂದಷ್ಟು ಹೊತ್ತು ಕುಳಿತೆ. ನಂತರ ಮತ್ತೆ ಸಿಗೋಣ ಎನ್ನುತ್ತ ಎದ್ದೆ. ಕೈ ಮುಗಿಯುವುದಕ್ಕೆ ಕೈಗಳನ್ನು ಎತ್ತಿದರು. ಆ ಕೈಗಳನ್ನು ನನ್ನ ತಲೆಯ ಮೇಲಿಟ್ಟುಕೊಂಡು ಕೈ ಮುಗಿದೆ. ‘ಮತ್ತೆ ಸಿಗೋಣ’ ಎಂದಿದ್ದು ಉಪಚಾರದ ಮಾತಾಗಿತ್ತು. ವಿಷಯ ಅವರ ಅರಿವಿಗೂ ಬಂದಿತ್ತು. ಆದರೂ ತಮ್ಮ ಪರಿಸ್ಥಿತಿಗೆ ತಾವೇ ಸಾಕ್ಷಿಯಾದಂತೆ ಮುಖದಲ್ಲಿ ಕಿರುನಗೆಯಿತ್ತು. ಮತ್ತಿವರನ್ನು ನೋಡಲಾರೆ ಎಂಬ ಸಂಕಟದಲ್ಲಿಯೇ ಅಲ್ಲಿಂದ ತಿರುಗಿ ಬಂದೆ.

ಮುಂದೆ ೧೮ನೇ ತಾರೀಖು ಭಟ್ಟರು ಈ ಜೀವನ ಯಾತ್ರೆ ಮುಗಿಸಿದರೆಂಬ ಸುದ್ದಿ ಬಂತು. ಸಿಕ್ಕ ಕೆಲವೇ ಕ್ಷಣಗಳನ್ನೂ ಆಪ್ತವಾಗಿಸಿದ ಸ್ಟೈಲ್ ಭಟ್ಟರ ಸೌಂದರ್ಯ ಪ್ರೀತಿಗೆ, ಜೀವನೋತ್ಸಾಹಕ್ಕೆ ನನ್ನ ನಮನ.

ಕೊಡಗು ದೈನಿಕ ’ಶಕ್ತಿ’ಯ ಮುಖಪುಟದಲ್ಲಿ ಶ್ರದ್ಧಾಂಜಲಿ

videos link of Shri Narayana Bhat : (2018 and before Shashti Utsava, Teopptsava, Dattotsava, Pallaki Utsava Shivaratri )

https://www.facebook.com/manoobana/videos/2076335215720866/?t=0    

#ನನ್ನಪ್ಪ.. #ನನ್ನಹೆಮ್ಮೆAfter #Teppotsava, #PallakiUtsava, #Dattotsava in #ShriOmkareshwara #Devasthana, #Madikeri Chief #archak My father Vedamurthy| B G Narayana Bhat taking #UtsavaMurthy to the #Peetha. He is serving temple since 54 years. Means from his 16 years…#Darshana #kartikapoornima#utsava

Posted by Manorama BN on Friday, November 23, 2018

#ನನ್ನಅಪ್ಪ..#ನನ್ನಹೆಮ್ಮೆ#Madikeri Sri #Omkareshwara #temple #Kartikapournami #DATTOTSAVA – an unique pattern of Pooja through fire and the #Bhasma #Ojosi (ashes) has been put as #tilaka to #diety Omkareshwara. It is believed that evil eye shall vanished out through #Ojosi. This rare #Utsava performed only once in a year. &This year, celebration of #Huttari too added flavour. (23 November 2018)DATTOTSAVA performed by Chief Archak my father vedamurthy| B G Narayana Bhat.Here is a glimpse of Final day of Utsava too-on #SubhramanyaShashti #Teppotsava in #Pushakaranihttps://m.facebook.com/story.php?story_fbid=376466522927195&id=565226236867375#ದಟ್ಟೋತ್ಸವ#ಶ್ರೀಓಂಕಾರೇಶ್ವರ#ಹುತ್ತರಿ#ಓಜೋಸಿ#ತೆಪ್ಪೋತ್ಸವ

Posted by Manorama BN on Friday, November 23, 2018

ಓಂಕಾರೇಶ್ವರ ದೇವಾಲಯದಲ್ಲಿ ತೆಪ್ಪೋತ್ಸವ…ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ತೆಪ್ಪೋತ್ಸವ ಲೈವ್…

Posted by Kodagu KannadaPrabha on Thursday, December 13, 2018

ಓಂಕಾರೇಶ್ವರ ದೇವಾಲಯದಲ್ಲಿ ತೆಪ್ಪೋತ್ಸವ

Posted by Kodagu KannadaPrabha on Friday, November 24, 2017

 

 

ಡಾ. ಉದಯಶಂಕರ್, ಸಾಹಿತಿ, ಆಯುರ್ವೇದ ವೈದ್ಯರು, ಮಡಿಕೇರಿ

ನೇರ ನಡೆ ನುಡಿ…

ಮಾತಿನಲ್ಲಿ ಮುಖದಲ್ಲಿ ತು೦ಟ ನಗು..

ಡಾ೦ಬಿಕತನಕ್ಕೆ ಮಾರುದೂರ…

ನಾರಾಯಣ  ಭಟ್ಟರು

ಮಡಿಕೇರಿ  ಮರೆಯಲಾಗದ ಮಹಾನುಭಾವ..

ಪಾರ್ವತಿ ಶಾಸ್ತ್ರಿ, ಕವಿ, ಬಂಧು, ಪುತ್ತೂರು

ನೂಪುರಭ್ರಮರಿ ಮನೋರಮಳ ಅಪ್ಪ

ಐವತ್ತು ವರುಷಗಳ ಧನ್ಯತೆಯ ಶಿವಸೇವೆ

ಗೈಯುತಲಿ ಶಿವನ ಸಾಯುಜ್ಯ ಸೇರಿದರು

ಪುಣ್ಯ ಜೀವಿಯು ಇವರು ಕಲೆಗಳಾರಾಧಕರು

ವೇದಾಂತ ಜ್ಯೋತಿಷ್ಯ ಹಲವು ಬಗೆ ವಿದ್ಯೆ

ಕೊಳಲ ನುಡಿಸಲು ಕುಳಿತರವರು ಕಣ್ಣನೆಯಹುದು

ಅತ್ಯುತ್ತಮ ಪಾಕಪ್ರವೀಣ

ಆತಿಥ್ಯದಲ್ಲಿ ದಣಿವರಿಯದ ದಣಿ

ನಟನ ಕೌಶಲವು ಸುಶ್ರಾವ್ಯ ಸಂಗೀತ

ಬಂಧು ಬಳಗವು ಸುತ್ತು ಶಿಷ್ಯ ಮಿತ್ರರ ಮನದಿ

ಪ್ರೀತಿ ಮೆಚ್ಚುಗೆ ಛಾಪು ಒತ್ತಿ ಪುಣ್ಯಾತ್ಮ

ಶಿವನನರ್ಚಿಸುತ ಶಿವಸಾಯುಜ್ಯವನೆ ಸೇರಿ

ಬದುಕು ಕೊನೆಗೊಳಿಸಿದಂಥ  ಜೀವಾತ್ಮ

ಕಳೆದಿರುವ ಸವಿನೆನಪು ಒತ್ತೊತ್ತಿ ಬರುತಿತ್ತು

ಮರೆಯಲುಂಟೇ ಅವರ ಪ್ರೀತಿ ಮಮತೆಯನು

ಕೊನೆಯ ಚಣದಲಿ ಹೋಗಿ ಗಂಗೋದಕವನೆರೆದು

ಅಂತಿಮದ ನಮನ ಸಲಿಸುತ್ತ ಬಂದಿಹೆನು

 

ಲಕ್ಷ್ಮೀ ಉಪಾಧ್ಯಾಯ, ಬೆಂಗಳೂರು

ಪರಿಶುದ್ಧ ಜೀವಿ ನಮ್ಮ ನಾರಾಯಣಣ್ಣ

ಸಂದೇಹವೇ ಇಲ್ಲ ಸೇರಿಹರು ನಾರಾಯಣನ್ನ

ನಾವು ಧನ್ಯರು ಅವರೊಡನಾಟ ಕೆಲಕಾಲ ಗೈದವರು

 

 

ಹಳೇ ಬೇರು ಹೊಸ ಚಿಗುರು ಕೂಡಿರಲು ವನಸೊಬಗು – ವೃದ್ಧಾಪ್ಯದಲ್ಲಿ ಆತ್ಮಸೌಖ್ಯವನ್ನಿತ್ತ ಮೊಮ್ಮಗ ಆನಂದವರ್ಧನನೊಂದಿಗೆ

 

Leave a Reply

*

code