ಅಂಕಣಗಳು

Subscribe


 

ಮಧುರ ಭಕ್ತಿ ಶೃಂಗಾರದ ಔಚಿತ್ಯ ಅನೌಚಿತ್ಯದ ಚರ್ಚೆ

Posted On: Thursday, April 14th, 2011
1 Star2 Stars3 Stars4 Stars5 Stars (No Ratings Yet)
Loading...

Author: ಪ್ರೊ. ಎಂ. ಆರ್. ಕೃಷ್ಣಮೂರ್ತಿ, ನೃತ್ಯ ಗುರುಗಳು, 'ಕಲಾಕ್ಷಿತಿ’, ಬೆಂಗಳೂರು.

ಕಲೆಯೆನ್ನುವುದು ಒಬ್ಬ ಕಲಾವಿದನ ಅತೀ ಉತ್ಕಟ ಭಾವದ ಅಭಿವ್ಯಕ್ತಿ. ಒಬ್ಬ ಕಲಾವಿದ ಗಂಡು ಹೆಣ್ಣಿನ ಪ್ರೀತಿ-ಮಿಲನದಲ್ಲಿ ಭಾವನೆಗಳ ಉತ್ತುಂಗ ಶಿಖರವನ್ನು ಕಂಡರೆ; ಇನ್ನೊಬ್ಬ ಕಲಾವಿದ ಅದೇ ಮಿಲನದಲ್ಲಿ ದೈವಸಾಕ್ಷಾತ್ಕಾರವನ್ನು, ಭಕ್ತಿಯ ಪರಾಕಾಷ್ಟತೆಯನ್ನು ಕಾಣಬಹುದು. ಕಲೆಯ ಸಾಮ್ರಾಜ್ಯದಲ್ಲಿ ಪ್ರೀತಿ-ಒಲವುಗಳು ಎಲ್ಲಕ್ಕಿಂತ ಉತ್ಕಟವಾದ ಭವನೆಯೆನ್ನುವುದು ಎಲ್ಲರೂ ಒಪ್ಪುವ ಮಾತೇ ಆದರೂ ಆ ಒಲವನ್ನು ಒಬ್ಬೊಬ್ಬರು ಅರ್ಥೈಸುವ ರೀತಿ ಬೇರೆ ಬೇರೆ. ಒಬ್ಬೊಬ್ಬರ ದೃಷ್ಟಿಕೋನವೂ ಬೇರೆ. ರುಕ್ಮಿಣಿದೇವಿಯವರು ಎಲ್ಲಾ ತರಹದ ಪ್ರೀತಿ-ಪ್ರೇಮದಲ್ಲೂ ದೈವಿಕ ಭಾವವನ್ನು ಕಂಡರು. ಅವರು ಕಂಡ ಸತ್ಯದ ಬೆಳಕಿನಲ್ಲಿ ನಮ್ಮನ್ನು ನಡೆಸಿಕೊಂಡು ಹೋದರು. ಅವರ ಮಾರ್ಗದರ್ಶನದಲ್ಲಿ ನಾನು, ಕಲೆಯ ಆರಾಧನೆ ನಮ್ಮನ್ನು ಮೋಕ್ಷಕ್ಕೆ ಒಯ್ಯುವ ಪಥವೆಂದು ಅರಿತುಕೊಂಡೆ. ಭಕ್ತಿ ಶೃಂಗಾರದ ಕಲ್ಪನೆ ಹೊಸತೇನೂ ಅಲ್ಲ. ಹನ್ನೆರಡನೇ ಶತಮಾನದಲ್ಲಿ ಅಕ್ಕಮಹಾದೇವಿ, ಹದಿನಾರನೇ ಶತಮಾನದಲ್ಲಿ ಸಂತ ಮೀರಾಬಾಯಿ ಪರಮಾತ್ಮನಲ್ಲಿ ತಮ್ಮ ಪ್ರಿಯಕರನನ್ನು ಗುರುತಿಸಿಕೊಂಡು ಭಕ್ತಿ ಶೃಂಗಾರವನ್ನು ಪ್ರತಿಪಾದಿಸಿದರು. ಇದೆಲ್ಲವೂ ಅವರವರ ಅನುಭವದ ಆಳ; ಅವರ ಸೂಕ್ಷ್ಮ ಸಂವೇದನೆ ಹಾಗೂ ಅವರ ನಂಬುಗೆ. ಹೀಗಾಗಿ ಭಕ್ತಿ ಶೃಂಗಾರವನ್ನು ನೃತ್ಯಕ್ಕೆ ಅಳವಡಿಸಿದ್ದು ಸರಿಯೇ ಅಥವಾ ತಪ್ಪೇ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಲೆಯೆನ್ನುವುದು ಯಾರೊಬ್ಬರ ನಂಬುಗೆಗೂ ಸೀಮಿತವಾಗಿಲ್ಲ. ತಾವು ಕಂಡಂತೆ ಒಂದು ವಸ್ತುವನ್ನು ಅರ್ಥೈಸಿ ಅದನ್ನು ಅಭಿವ್ಯಕ್ತಿಪಡಿಸುವ ಸ್ವಾತಂತ್ರ್ಯ ಎಲ್ಲಾ ಕಲಾವಿದರಿಗೂ ಇದ್ದಂತೆಯೇ ಇತರ ಸಿದ್ಧಾಂತ, ಆಲೋಚನೆಗಳನ್ನು ಒಪ್ಪುವ ಅಥವಾ ಬಿಡುವ ಸ್ವಾತಂತ್ರ್ಯವೂ ಇದೆ.

ಪ್ರೊ. ಎಂ. ಆರ್. ಕೃಷ್ಣಮೂರ್ತಿ

ಹಿರಿಯ ನೃತ್ಯಗುರುಗಳು, ಕಲಾಕ್ಷಿತಿ, ಬೆಂಗಳೂರು.

 

Leave a Reply

*

code