ಅಂಕಣಗಳು

Subscribe


 

ಕರ್ನಾಟಕ ನೃತ್ಯ ವೈಭವದ ಪ್ರಸ್ತುತಿಗೆ ಸಾಕಾರ ಯತ್ನ : ಭರತಾಗಮ

Posted On: Monday, August 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಕರ್ನಾಟಕದ ಶ್ರೀಮಂತ ಭರತನಾಟ್ಯ ನೃತ್ಯಪರಂಪರೆಗೆ ಸಾಕ್ಷಿಯಾದುದು ಭರತಾಗಮ ಪ್ರತಿಷ್ಠಾನದಿಂದ ಜುಲೈ ೨೩ ಮತ್ತು ೨೪ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಆಯೋಜಿತವಾದ ಕರ್ನಾಟಕ ನೃತ್ಯಪರಂಪರೆಗಳ ಕುರಿತ ವಿಚಾರಸಂಕಿರಣ ಮತ್ತು ನೃತ್ಯಾಭಿವ್ಯಕ್ತಿ. ಕೇಂದ್ರ ಸಂಗೀತ ನೃತ್ಯ ಅಕಾಡೆಮಿಯಿಂದ ಪ್ರಾಯೋಜಿತವಾದ ಈ ಕಾರ್ಯಕ್ರಮ ಒಂದರ್ಥದಲ್ಲಿ ದಾಖಲೀಕರಣಕ್ಕೆ ಅನುಕೂಲಕರವಾಗಿ ಮತ್ತು ಕರ್ನಾಟಕ ನೃತ್ಯಪರಂಪರೆಗೆ ಸೂಕ್ತ ಮನ್ನಣೆ ದೊರಕುವ ನಿಟ್ಟಿನ ಪ್ರಯತ್ನವಾಗಿರುವುದು ಶ್ಲಾಘನೀಯ. ಈ ಹಿನ್ನಲೆಯಲ್ಲಿ ಹಿರಿಯ ಕಲಾ ಸಂಶೋಧಕ ಡಾ. ಸುನಿಲ್ ಕೊಠಾರಿ ಅವರ ಉಪಸ್ಥಿತಿ ಹೊಸ ಭಾಷ್ಯ ಬರೆಯಬಲ್ಲುದೆಂಬ ಭರವಸೆಯಿದೆ.

ಈ ಸಂದರ್ಭದಲ್ಲಿ ಡಾ. ಚೂಡಾಮಣಿ ನಂದಗೋಪಾಲ್ (ಕರ್ನಾಟಕ ನೃತ್ಯಪಂಪರೆ), ಡಾ.ಕರುಣಾ ವಿಜಯೇಂದ್ರ ( ಕರ್ನಾಟಕದ ದೇವಾಲಯಗಳಲ್ಲಿ ರಂಗಭೋಗ), ಡಾ.ಮಾಲಾ ಶಶಿಕಾಂತ್ (ಕರ್ನಾಟಕ ನೃತ್ಯ ಶೈಲಿಗಳು) ಮಂಡಿಸಿದ ಶಾಸನ, ಶಿಲ್ಪ, ಸಾಹಿತ್ಯ, ಪ್ರಾಯೋಗಿಕ ನೆಲೆಯನ್ನಾಧರಿಸಿದ ಸಂಶೋಧನಾ ಲೇಖನಗಳು ಸ್ವಾರಸ್ಯಕರವೂ, ಮಾಹಿತಿಪ್ರದವೂ ಆಗಿ ರಂಗದಲ್ಲೂ, ಪುಸ್ತಕರೂಪದಲ್ಲೂ ಹೊರಬಂದು ಕರ್ನಾಟಕದ ನೃತ್ಯವೈಭವದ ಅನಾವರಣಕ್ಕೆ ಸಾಕ್ಷಿಯೆನಿಸಿತು.

ನಂತರ ನಡೆದ ನೃತ್ಯಾಭಿವ್ಯಕ್ತಿಯಲ್ಲಿ ಮೈಸೂರು ಶೈಲಿಯ ಭರತನಾಟ್ಯ ನಿರೂಪಣೆಯನ್ನು ಸಮರ್ಥವಾಗಿ ನಿರ್ವಹಿಸಿದವರು ಭರತ ಕಲಾ ನಿಕೇತನದ ಗುರು ಪ್ರೊ.ಶಕುಂತಲಾ ಅವರ ಶಿಷ್ಯರು. ಪೂರ್ವರಂಗ ವಿಧಿಗಳಲ್ಲಿನ ಸಭಾವಂದನೆ, ಚೂರ್ಣಿಕೆ, ಸೊಲ್ಕಟ್ಟು ಇತ್ಯಾದಿಗಳೊಂದಿಗೆ ಪೊನ್ನಯ್ಯ ಪಿಳ್ಳೈ ಅವರ ಪ್ರಖ್ಯಾತ ತಮಿಳು ವರ್ಣ ಮನವೀ ಚೈಕೊನವು ಪರಿಣಾಮಕಾರಿಯಾಗಿ ವಿಶೇಷ ಸಂಗತಿಗಳೊಡನೆ ಮೂಡಿಬಂದದ್ದು ಸ್ತುತ್ಯಾರ್ಹ. ಕಲಾಕ್ಷೇತ್ರ ಶೈಲಿಯ ಸಂಯೋಜನೆಗಿಂತಲೂ ಸಹಜವೆನಿಸುವ ಮಟ್ಟಿಗೆ ಭಾವ-ರಸ ಸಂವಹನದಲ್ಲಿ ಮತ್ತು ಔಚಿತ್ಯಪೂರ್ಣ ಜತಿನಿರ್ವಹಣೆಯಲ್ಲಿ ಮತ್ತು ಅರ್ಥಗರ್ಭಿತ ಸಂಚಾರೀಭಾವದೊಳಗೆ ವರ್ಣವು ಅರಳಿ ನಿಂತದ್ದು ನಿಜಕ್ಕೂ ರಸಿಕರನ್ನು ತೃಪ್ತರನ್ನಾಗಿಸಿತು. ತಮಿಳು ಭಾಷೆಯ ವರ್ಣವು ಕರ್ನಾಟಕದ ನೃತ್ಯ ಪರಂಪರೆಯ ಪ್ರತಿಪಾದನೆಯಲ್ಲಿ ಅಷ್ಟು ಸೂಕ್ತವಲ್ಲ ಎಂಬ ಇರಿಸು ಮುರಿಸು ವ್ಯಕ್ತವಾದರೂ ಪರಂಪರೆಯ ಪ್ರಾಚೀನತೆ ಮತ್ತು ಕನ್ನಡ ವರ್ಣಗಳು ಆಗಿನ ಕಾಲಕ್ಕೆ ರಚನೆಯಾಗದಿದ್ದ ಹಿನ್ನಲೆಯಲ್ಲಿ ಆಯ್ಕೆ ಅನಿವಾರ್ಯವಾಗಿದೆ ಎಂಬ ಸ್ಪಷ್ಟೀಕರಣ ಖಂಡಿತಾ ಇದೆ. ಆದ್ದರಿಂದ ಭಾಷಾ‌ಆಯ್ಕೆಗಿಂತಲೂ ಹೆಚ್ಚಾಗಿ ಅದರ ಪ್ರಸ್ತುತಿ ಕರ್ನಾಟಕದ ನೃತ್ಯಪರಂಪರೆಯ ಪ್ರತಿನಿಧಿಸಿದ್ದು ಸಂವಹನಶೀಲವೂ ಆಗಿದ್ದದ್ದು ವಿಶೇಷ.

ನೂಪುರ ನೃತ್ಯ ಸಂಸ್ಥೆಯ ನಿರ್ದೇಶಕರಾದ ವಿದುಷಿ ಲಲಿತಾ ಶ್ರೀನಿವಾಸನ್ ವಿಚಾರಸಂಕಿರಣದ ಆಯೋಜನೆಯ ಹಿನ್ನಲೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದವರು. ಆದರೆ ಅವರ ಶಿಷ್ಯೆಯರಿಂದ ಪ್ರತಿಪಾದನೆಯಾದ ಮೂಗೂರು-ಮೈಸೂರು ಶೈಲಿಗಳ ನೃತ್ತ-ಅಭಿನಯಗಳಲ್ಲಂತೂ ಸಹಜತೆಗಿಂತಲೂ ಪರಶೈಲಿಗಳ ಪ್ರಭಾವದ ಅಂಶ ಹೆಚ್ಚು ಕಂಡಂತೆ ಭಾಸವಾಗಿ ಗುರುವಿನ ಶ್ರಮಕ್ಕೆ ತಕ್ಕ ಅಭಿವ್ಯಕ್ತಿ ರಂಗದಲ್ಲಿ ಆಗಲಿಲ್ಲವೆಂಬ ಅಭಿಪ್ರಾಯ ಕಾಡಿತು. ಅವುಗಳೊಂದಿಗೆ ನವೋದಯ ಕವಿಗಳ ಕನ್ನಡ ಗೀತೆಗಳನ್ನು ಅಭಿನಯಿಸುವುದರ ಬದಲಾಗಿ ಮತ್ತೊಂದಷ್ಟು ಮೂಲ ಶೈಲಿಯ ನೃತ್ಯಬಂಧಗಳನ್ನು ಪ್ರಸ್ತುತಪಡಿಸಿದ್ದರೆ ಒಟ್ಟಾರೆ ಪರಿಣಾಮ ಮತ್ತು ಆಶಯಕ್ಕೆ ಹೆಚ್ಚು ಇಂಬನ್ನೀಯುತ್ತಿತ್ತು. ಆದರೆ ಎರಡನೇ ದಿನದಂದು( ಜುಲೈ ೨೪) ಲಲಿತಾ ಶ್ರೀನಿವಾಸನ್ ಪ್ರಸ್ತುತಪಡಿಸಿದ ನೃತ್ಯಪ್ರಾತ್ಯಕ್ಷಿಕೆಯೊಂದಿಗಿನ ಸಂಶೋಧನಾ ಪ್ರಬಂಧ ಸುಳಾದಿಯು ಶತಮಾನಗಳ ನೃತ್ಯ ವೈಭವಕ್ಕೆ ಸಾಕ್ಷಿಯಾಗುವುದರೊಂದಿಗೆ ಪ್ರಾಯೋಗಿಕತೆ ಮತ್ತು ಶಾಸ್ತ್ರದ ಔಚಿತ್ಯಪೂರ್ಣ ಸಮ್ಮಿಲನದ ಪ್ರಜ್ಞೆಯನ್ನು ತಿಳಿಸಿಕೊಟ್ಟಿದ್ದಷ್ಟೇ ಅಲ್ಲದೆ ಮತ್ತಷ್ಟು ಅಧ್ಯಯನಕ್ಕೂ ಅವಕಾಶಗಳಿರುವುದನ್ನು ಸ್ಪಷ್ಟಪಡಿಸಿದೆ. ೨ ದಶಕಗಳ ಹಿಂದೆ ನೃತ್ಯಸಂಶೋಧನಾ ಸಾಮಗ್ರಿಗಳ ಹೇರಳ ಕೊರತೆಯಿದ್ದಾಗ್ಯೂ ಕಣ್ಮರೆಯಾಗಿದ್ದ ಸುಳಾದಿ ಪ್ರಬಂಧಗಳ ಪುನರ್ ರಂಗನಿರ್ಮಾಣ ಕರ್ನಾಟಕದಲ್ಲಿ ಲಲಿತಾ ಶ್ರೀನಿವಾಸನ್ ಮಾಡಿರುವುದು ಅವರ ಸಂಶೋಧನಾ ಸಂಕಲ್ಪಕ್ಕೆ ಸಾಕ್ಷಿ.

ಜುಲೈ ೨೪ರ ಬೆಳಗಿನ ಹೊತ್ತು ಮತ್ತೆರಡು ವಿಶಿಷ್ಟ ಪ್ರಾತ್ಯಕ್ಷಿಕೆಯಿಂದೊಡಗೂಡಿದ ಸಂಶೋಧನೆಗಳಿಗೆ ಅವಕಾಶವನ್ನಿತ್ತಿತು. ಅವುಗಳ ಪೈಕಿ ಮೊದಲನೇಯದು ರಾಧಿಕಾ ನಂದಕುಮಾರ್ ಅವರು ಪುನರ್-ನಿರ್ಮಿಸಿದ ಗೌಂಡಲೀ ನೃತ್ಯ ಪದ್ಧತಿಯ ಅನಾವರಣ. ಎರಡನೇಯದು ಡಾ. ತುಳಸೀ ರಾಮಚಂದ್ರ ಪ್ರಸುತಪಡಿಸಿದ ಪೇರಣೀ ನೃತ್ಯಶೈಲಿ. ಗೌಂಡಲೀಯ ಸಂಯೋಜನೆ ಚಾರಿ, ನೃತ್ತಹಸ್ತ, ಕರಣದಿಂದೊಡಗೂಡಿದ ಶತಮಾನಗಳ ಹಿಂದಿನ ನೃತ್ಯಶೈಲಿಯ ಕುರಿತ ಆಳವಾದ ಅಧ್ಯಯನದ ಫಲಶ್ರುತಿ. ಆದರೆ ಪೇರಣೀಯ ಕುರಿತಂತೆ ಸೌಂದರ್ಯಪೂರಿತವಾದ, ಕ್ರಮ-ಶಾಸ್ತ್ರ ವಿಶ್ಲೇಷಣೆಯುಳ್ಳ ಪರಿಣಾಮಕಾರಿ ನೃತ್ತವಾಗಿ ಕಂಡುಕೊಳ್ಳುವಲ್ಲಿ ಮತ್ತಷ್ಟು ಅಧ್ಯಯನಕ್ಕೆ ಅವಕಾಶವಿದ್ದು; ಹೇರಳ ಸಾಧ್ಯತೆಗಳನ್ನು ತಿಳಿಸಿಕೊಟ್ಟಿತು. ನಂತರ ಸಂಜೆ ಜರುಗಿದ ನೃತ್ಯಾಭಿವ್ಯಕ್ತಿಯು ಕೋಲಾರ ಶೈಲಿಯ ಗುರು ವಿದ್ವಾನ್ ಸಿ.ರಾಧಾಕೃಷ್ಣ ಮತ್ತು ನಂಜನಗೂಡು ಪರಂಪರೆಯ ಡಾ. ಮಾಲಾ ಶಶಿಕಾಂತ್ ಅವರ ಶಿಷ್ಯರಿಂದ ಸೊಗಸಾಗಿ ಮೂಡಿಬಂದದ್ದಷ್ಟೇ ಅಲ್ಲದೆ ಆಸ್ಥಾನ, ಆಲಯ ನೃತ್ಯಪದ್ಧತಿಗಳ ಭಿನ್ನ ಆಚರಣಾ ನೃತ್ಯಬಂಧಗಳ ಪರಿಚಯ ಮಾಡಿಕೊಟ್ಟಿತು. ಕರ್ನಾಟಕ ನೃತ್ಯಪರಂಪರೆಯಲ್ಲಿನ ಅಭಿನಯ ಸ್ವಾತಂತ್ರ್ಯ, ಮುಕ್ತತೆ, ಸೌಂದರ್ಯ, ರಸದೃಷ್ಟಿ, ಭಾವವಿಶೇಷಕ್ಕೆ ಈ ಶೈಲಿಗಳನ್ನು ನರ್ತಿಸಿದ ಕಲಾವಿದರು ಸಾಕ್ಷಿಯಾದರು. ಒಟ್ಟಿನಲ್ಲಿ ಇಂತಹ ಅತ್ಯಪೂರ್ವ ಪ್ರಯತ್ನ ಮತ್ತು ಅದರ ಭವಿಷ್ಯದ ಬೆಳವಣಿಗೆ ಸ್ತುತ್ಯಾರ್ಹ. ಈ ಹಂತದಲ್ಲಿ ಇವುಗಳನ್ನು ಅರಿತು, ಆನಂದಿಸಿ, ಕಲಿತು ನರ್ತಿಸುವ ಕಲಾವಿದರು ಮತ್ತಷ್ಟು ಬೆಳೆದರೆ ಕರ್ನಾಟಕದ ನೃತ್ಯ ಶಾಸ್ತ್ರೀಯತೆಗೆ ಮೈಲಿಗಲ್ಲುಗಳು ದಕ್ಕಬಹುದು.

Leave a Reply

*

code