ಅಂಕಣಗಳು

Subscribe


 

ಭ್ರಮರ ಹಸ್ತ

Posted On: Sunday, August 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಲಕ್ಷಣ: ಮಧ್ಯ ಮತ್ತು ಹೆಬ್ಬೆರಳುಗಳ ತುದಿಯನ್ನು ಕೂಡಿಸಿ ತೋರುಬೆರಳನ್ನು ಒಳಗೆ ಬಾಗಿಸಬೇಕು. ನಂತರ ಉಳಿದ ತೋರು, ಕಿರುಬೆರಳನ್ನು ನೀಡಬೇಕು. ಭ್ರಮರ ಎಂದರೆ ದುಂಬಿ ಎಂದರ್ಥ. ನಾಟ್ಯಶಾಸ್ತ್ರದಲ್ಲಿ ಹೆಬ್ಬೆರಳು ಮಧ್ಯದ ತುದಿಯನ್ನು ಮುಟ್ಟಿ ಕಿರು ಬೆರಳು ವಕ್ರವಾಗಿ, ಮಿಕ್ಕೆರಡು ಬೆರಳುಗಳು ಚಾಚಲ್ಪಡಬೇಕು. ಹಸ್ತ ಮುಕ್ತಾವಳಿಯಲ್ಲಿ ಹೆಬ್ಬೆರಳು ಮತ್ತು ಮಧ್ಯದ ಬೆರಳನ್ನು ಸೇರಿಸಿ ಉಳಿದ ಬೆರಳನ್ನು ನಿಡಿದಾಗಿ ಹಿಡಿಯಬೇಕು. ಇದೇ ಹಸ್ತವನ್ನು ಮತ್ತೊಂದು ಬಾರಿ ಪ್ರತ್ಯೇಕ ಹಸ್ತವಾಗಿ ಪರಿಗಣಿಸಿ ಚಲನ ಮಧುಕರವೆಂದು ಕರೆಯಲಾಗಿದ್ದು, ಅದರಲ್ಲಿ ಹೆಬ್ಬೆರಳು ಮತ್ತು ಮಧ್ಯದ ಬೆರಳನ್ನು ಸೇರಿಸಿ ಕಿರು ಬೆರಳನ್ನು ಮೇಲೆತ್ತಿ, ಉಳಿದ ಬೆರಳುಗಳನ್ನು ಬಗ್ಗಿಸಿ ಅಲುಗಾಡಿಸುತ್ತಿರಬೇಕು. ಕಥಕಳಿಯಲ್ಲಿ ಭ್ರಮರವೆಂದು ಕರೆಯಲ್ಪಡುವ ಹಸ್ತದ ಲಕ್ಷಣಗಳು ವಿಭಿನ್ನ. ಅದು ಅಭಿನಯದರ್ಪಣದ ಅರಾಳದಂತೆ ಇದ್ದು ತೋರುಬೆರಳನ್ನು ಮಡಚುವುದಾಗಿದೆ.

ಕಶ್ಯಪನು ತನ್ನ ಪತ್ನಿ ಅದಿತಿಗೆ ಕರ್ಣಾಭರಣಗಳನ್ನು ಮಾಡುವಾಗ ಉದ್ಭವವಾದ ಹಸ್ತ ಭ್ರಮರ. ಖೇಚರವರ್ಣ, ಮೇಚಕ ಬಣ್ಣ, ಋಷಿ : ಕಪಿಲ, ಅಧಿದೇವತೆ : ಗರುಡ. ಇದು ನಪುಂಸಕಹಸ್ತದ ಪ್ರಕಾರಕ್ಕೆ ಸೇರಿದೆ.

ಯೋಗದಲ್ಲಿ ಕಂಡುಬರುವ ಚಿಕಿತ್ಸಕ ಮುದ್ರೆಗಳ ಪೈಕಿ ಈ ಹಸ್ತವು ಭ್ರಮರ ಮುದ್ರೆಯೆಂಬುದಾಗಿದ್ದು ಇದರ ಬಳಕೆ ಪ್ರತಿರೋಧಕ ಶಕ್ತಿ ಉದ್ದೀಪನೆಗೆ, ಅಲರ್ಜಿ, ರೋಗ ನಿರೋಧಕ ಔಷಧಿಯಿಂದ ಉಂಟಾಗುವ ದುಷ್ಪರಿಣಾಮಗಳ ನಿವಾರಣೆಗೆ ಸಹಕಾರಿ.

ವಿನಿಯೋಗ : ಜೇನುನೊಣ, ದುಂಬಿ, ಗಿಣಿ, ರೆಕ್ಷೆ, ಸಾರಸಪಕ್ಷಿ, ಕೋಗಿಲೆ ಮೊದಲಾದ ಪಕ್ಷಿ.

ಇತರೇ ವಿನಿಯೋಗ : ಕಮಲ ಮುಂತಾದ ಉದ್ದನೆಯ ತೊಟ್ಟುಗಳುಳ್ಳ ಹೂಗಳನ್ನು ಕೊಯ್ಯುವುದು, ಕರ್ಣಕುಂಡಲ, ಕ್ರೂರವಾದ ಮುಖ, ಮಾವಿನ ತೆನೆ, ತಾಲಪತ್ರ, ಮುಳ್ಳು ತೆಗೆಯುವುದು, ಯೋಗಾಭ್ಯಾಸ, ಮೌನವ್ರತ, ಗಜಯುದ್ಧದಲ್ಲಿ ದಂತಘಾತ, ಬೀಸಣಿಗೆಯಂತಿದ್ದ ಉದ್ದನೆಯ ಎಲೆಗಳನ್ನು ಹಿಡಿಯುವುದು, ಕಿವಿಯ ಗುಗ್ಗೆಯನ್ನು ತೊಡೆದುಕೊಳ್ಳುವುದು, ಕೊಂಬು, ಕಿರಿಕಿರಿಯಿಂದ ತಪ್ಪಿಸಿಕೊಳ್ಳುವುದು, ಸೊಂಟಪಟ್ಟಿಯನ್ನು ಸಡಿಲಗೊಳಿಸುವುದು, ಎರಡು ಅಕ್ಷರದ ಕ್ರಿಯಾ ವಿಶೇಷಣ, ಹಾರಾಡುವ ಜೀವಿಗಳು, ಮೇಚಕಬಣ್ಣ, ರಹಸ್ಯವಾದ ವಿಷಯವನ್ನು ಕಿವಿಯಲ್ಲಿ ಉಸುರುವುದು.

ಕ್ರೀಡೆ, ಕಪ್ಪುದುಂಬಿಗಳ-ಜೀರುಂಡೆಗಳ ಶಬ್ದ ಕೇಳುವುದು, ದೊಡ್ಡ ಕರ್ಣಾಭರಣ, ಮೊಸಳೆ, ಘೇಂಡಾಮೃಗ, ಬಿಸಿಯಾದ ಪದಾರ್ಥಗಳನ್ನು ಮೇಲೆತ್ತುವುದು, ಅನಂತವೆಂಬ ಸರ್ಪ, ಏಳು ಹೆಡೆ ಸರ್ಪ, ತಕ್ಷಕ, ವಾಸುಕಿ, ಅನೆ, ಜಿಂಕೆ, ಕುದುರೆ, ಕೋಡುಗಳಿರುವ ಪ್ರಾಣಿ, ಹೂವು ಕೊಯ್ಯುವುದು, ವರಾಹಾವತಾರ, ಕೋಳಿ, ಲಕುಚವೃಕ್ಷ ಇತ್ಯಾದಿಗಳನ್ನು ಸೂಚಿಸಲು ಬಳಸಬಹುದು. ದಿನನಿತ್ಯ ಜೀವನದಲ್ಲಿ ಈ ಹಸ್ತದ ಬಳಕೆ ಕಡಿಮೆ.

ಭ್ರಮರದಿಂದ ತೋರುಬೆರಳನ್ನು ಹೆಬ್ಬೆರಳ ತುದಿಗೆ ಮುಟ್ಟಿಸಿ ನಂತರ ಹಸ್ತವನ್ನು ಅಗಲವಾಗಿ ಅಲ್ಲಾಡಿಸುವುದು ಸಂದಂಶ ಮುಕುಳ ಹಸ್ತವೆನಿಸುತ್ತದೆ. ಇದು ಕಾಗೆ ಎಂಬುದನ್ನು ಸಂವಹಿಸುತ್ತದೆ.

Leave a Reply

*

code