ಅಂಕಣಗಳು

Subscribe


 

ನೃತ್ಯರಂಗದ ಅನಭಿಷಿಕ್ತ ರಾಣಿ : ರುಕ್ಮಿಣಿ -ಹೆಜ್ಜೆ -15

Posted On: Wednesday, June 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಕ್ಷೇತ್ರವೆಂದರೆ ದೈವಿಕವಾದ ಜಾಗ. ಮಾನವ ಸಹಜ ಭಾವಗಳಿಂದ ದೈವೀಕ ಅನುಭೂತಿಯ ಹತ್ತಿರ ಕೊಂಡೊಯ್ಯುವ ಸ್ಥಳ. ಯಾತ್ರೆಗೆ ಭಕ್ತರು ಆಯ್ದುಕೊಳ್ಳುವುದೇ ವಿವಿಧ ಧಾರ್ಮಿಕ ಕ್ಷೇತ್ರಗಳನ್ನು. ಅಂತೆಯೇ ನೃತ್ಯಕ್ಕೊಂದು ಕ್ಷೇತ್ರ ನಿರ್ಮಾಣ ಮಾಡುವ ಗುರಿ ರುಕ್ಮಿಣಿಯವರದ್ದಾಗಿತ್ತು. ರಸೋ ವೈ ಸಃ– ರಸಾಸ್ವಾದನವೆಂಬ ಅಮೂರ್ತ ಅನುಭವಕ್ಕೆ ಕೊಂಡೊಯ್ಯುವ ಕಲೆಗಳ ದೇವಸ್ಥಾನವೇ ಕಲಾಕ್ಷೇತ್ರವಾಗಿರಬೇಕು ಎಂಬುದು ಅವರ ಇಚ್ಛೆ.

ಆರ್ಥಿಕ ಅನನುಕೂಲತೆಗಳಿದ್ದವು. ಆ ಕಾಲಕ್ಕೆ ಅವರ ಜೊತೆ ಕೆಲಸ ಮಾಡುತ್ತಿದ್ದವರಿಗೆ ೭೫೦ ರೂ ಸಂಬಳ. ಸಂಭಾವನೆ ಕಡಿಮೆಯೆನಿಸಿದರೂ ಅವರೊಂದಿಗೆ ಕೆಲಸ ಮಾಡುವ ಮುದದ ಮುಂದೆ ಹಣವೊಂದು ವಿಷಯವಾಗಿರಲಿಲ್ಲ. ಆದರೂ ಅವರೊಂದಿಗೆ ದುಡಿಯಲು ಜನರು ಕಾತರಿಸುತ್ತಿದ್ದರು. ಎಂ.ಡಿ ರಾಮನಾಥನ್ ಅವರೇ ಹೇಳಿಕೊಂಡಂತೆ ರುಕ್ಮಿಣಿಯ ಜೊತೆಗಿನ ಕೆಲಸದಲ್ಲಿ ಒಂದು ರೀತಿಯ ನೆಮ್ಮದಿ, ಪರಿಪೂರ್ಣತೆ ಸಿಗುತ್ತಿತ್ತು.

ಆಕೆ ಸಾಮಾಜಿಕ ಇತಿಹಾಸ ತಜ್ಞೆಯೆಂಬಂತೆ ಕಟ್ಟಿದ ಇತಿಹಾಸವನ್ನು ರಕ್ಷಿಸಬೇಕೆಂಬ ಕಳಕಳಿಯಿದ್ದವರು. ಉತ್ತಮ ಕಲಾಸಮುದಾಯವು ಕಲಾಕ್ಷೇತ್ರದ ಸುತ್ತಲೂ ಬೆಳೆಯಬೇಕೆಂದು ಮದ್ರಾಸ್ ಕಾರ್ಪೋರೇಷನ್‌ನ್ನು ವಿನಂತಿಸಿ ರಸ್ತೆ ಮುಂತಾದ ಸೌಲಭ್ಯಗಳನ್ನು ಕಲಿಸ್ಪಲು ಶ್ರಮಿಸಿದರು. ಇಂತಹ ಶ್ರಮ ಮುಂದೊಮ್ಮೆ ಆಕೆಯ ಸಂಸ್ಥೆಯ ಕುರಿತಾದ ದೃಷ್ಟಿಗೆ ಅನುರೂಪವಾಗಿ, ಸಹಕಾರಿಯಾಗಿ ಬೆಳೆದು ಒಂದೊಮ್ಮೆ ತೊಂದರೆ, ಅಪಾಯ ಬಂದರೂ ಆಶಾಕಿರಣವಾಗುತ್ತದೆ ಎಂಬ ಮುನ್ಸೂಚನಾ ಗುಣ ಅವರಲ್ಲಿತ್ತು. ಅದರಂತೆಯೇ ಬೆಸೆಂಟ್ ನಗರದದ ಭಾಗವಾಗಿ, ಕಲಾಕ್ಷೇತ್ರ ಕಾಲೋನಿ ಎಂದೇ ಆ ವಲಯ ಹೆಸರಾಗಿದೆ.

ನಿಜವಾದ ಕಲಾವಿದರು ಯಾವತ್ತು ಅಂತರ್‌ಶಿಸ್ತೀಯ ಗುಣಗಳುಳ್ಳವರಾಗಿರುತ್ತಾರೆ. ೧೯೫೮ರ ನಂತರ ಕಲಾಕ್ಷೇತ್ರ ಕಲರ್ ಲ್ಯಾಬೋರೇಟರಿಯನ್ನು ಸ್ಥಾಪಿಸಿತ್ತು. ದೊಡ್ಡ ದೊಡ್ಡ ಪತ್ರಿಕೆಗಳೂ ಭೇಟಿ ನೀಡುವ ಫೋಟೋಗ್ರಫಿ ಲ್ಯಾಬ್ ಆಗಿ ಬೆಳೆದು ಸ್ವಲ್ಪ ದಿನಗಳಲ್ಲಿ ಮುದ್ರಣವೂ ಶುರುವಾಯಿತು. ಪಠ್ಯ ಮತ್ತು ಬೇರೆ ಪುಸ್ತಕಗಳ ಪ್ರಕಟಣೆಯ ಕಾರ್ಯವೂ ಆರಂಭವಾಗಿ ಕಲಾಕ್ಷೇತ್ರ ಪಬ್ಲಿಕೇಷನ್ ಬೆಳೆದುಬಂತು. ಸ್ವಾಮಿನಾಥನ್ ಗ್ರಂಥಾಲಯದ ಮೂಲಕ ಶಾಸ್ತ್ರ ಕಲಿಕೆಗೆ ಅನುಕೂಲವಾಯಿತು. ನಂತರ ಹಲವಾರು ಸಂಸ್ಥೆಗಳು ಈ ಮಾದರಿಯನ್ನು ಅನುಸರಿಸಿದವು.

ಇಂದಿನ ಕಾಲಕ್ಕೆ ದೇಶದ ಪ್ರತಿಯೊಂದು ಕಾಲೇಜು-ವಿದ್ಯಾಸಂಸ್ಥೆಗಳು ತಮಗೆ ಸ್ವಾಯತ್ತ ವಿಶ್ವವಿದ್ಯಾನಿಲಯದ ಸ್ಥಾನ ಬೇಕೆಂದು ಯಾವ ಅರ್ಹತೆಯಿಲದಿದ್ದರೂ ಹಠ ಮಾಡುವ ಸಂದರ್ಭದಲ್ಲಿ ಒಂದು ಕಾಲಕ್ಕೆ ಕಲಾಕ್ಷೇತ್ರವನ್ನು ಡೀಮ್ಡ್ ವಿಶ್ವವಿದ್ಯಾಲಯ ಮಾಡಲು ಯುಜಿಸಿಯೇ ಪ್ರಸ್ತಾಪವನ್ನು ಇಟ್ಟು ಮೀಟೀಂಗ್ ಕರೆದಾಗ ರುಕ್ಮಿಣಿ ಹೇಳಿದ್ದೇನು ಗೊತ್ತೇ? ನಿಮ್ಮ ಆಶಯಗಳು ಒಳ್ಳೆಯದೇನೋ ಹೌದು. ಆದರೆ ನೀವು ಹೇಳುವ ನೀತಿ ನಿಯಮಗಳು ಕಲಾಕ್ಷೇತ್ರದ ಉದ್ದೇಶಗಳು, ಕಾರ್ಯಕ್ರಮಗಳಿಗೆ ಅಷ್ಟಾಗಿ ಒಪ್ಪುವುದಿಲ್ಲ. ಉದಾ – ನಿವೃತ್ತಿಯ ವಯಸ್ಸಿನ ಮಿತಿ. ಲಲಿತಲಕಲೆಗಳ ಕ್ಷೇತ್ರದಲ್ಲಿ ನಿವೃತ್ತಿಯೆಂಬುದೇ ಇಲ್ಲ. ಕಲಾವಿದರು ಮಾಗಿದಂತೆ ಅರಿವಿನಲ್ಲಿ ಹಿರಿಯರಾಗುತ್ತಾರೆ. ಅಂತೆಯೇ ತರಗತಿಗಳ ಸಮಯ ಮಿತಿ ಒಂದು ಅರ್ಥಹೀನ ಕಟ್ಟುಪಾಡು. ಅದೂ ಒಪ್ಪುವಂತಹುದಲ್ಲ. ಗುರು ಆಶಿಸಿದಾಗ ವಿದ್ಯಾಥಿಗಳು ಕಲಿಯುವುದು ನಮ್ಮ ಪರಂಪರೆ. ಕಲಿಯುವಿಕೆಯ ಪ್ರಕ್ರಿಯೆಯಲ್ಲಿ ಸ್ವಾತಂತ್ರ್ಯ ಇರಬೇಕು. ಇಲ್ಲಿ ಕಲಿಸುವವರು ಮಹಾ ವಿದ್ವಾಂಸರು. ಅವರು ಕಲೆಗಾಗಿ ಬದುಕುತ್ತಾರೆಯೇ ವಿನಾ ಎಂದೂ ದುಡ್ಡಿಗಾಗಿ ದುಡಿಯುವುದಿಲ್ಲ. ನಿಮ್ಮ ಆಧುನಿಕತೆಗೆ ದಿಕ್ಕೆಂಬುದಿಲ್ಲ. ನಿಮ್ಮ ಅಧುನಿಕತೆಯಲ್ಲಿ ನನ್ನ ಆತ್ಮವನ್ನು ಕಳೆದುಕೊಳ್ಳಲಾರೆ. ನಿಮ್ಮ ಆಶಯ ಮತ್ತು ಅಹವಾಲುಗಳನ್ನು ನಿಮ್ಮ ಜೊತೆಯಲ್ಲಿರಿಸಿಕೊಳ್ಳಿ. ನಮಗೆ ನಮ್ಮದೇ ಪರಂಪರೆಯ ವಿಧಾನಗಳಿವೆ. ಅದು ನಮಗೆ ಒಪ್ಪುತ್ತದೆ ಎಂದು ಖಡಾಖಂಡಿತವಾಗಿ ವಿನಯವಾಗಿ ನಿರಾಕರಿಸಿದ್ದರು. ಕಲಾಕ್ಷೇತ್ರ ಪೂರ್ಣವಾಗಿ ಸರ್ಕಾರದ ಅಧೀನವಾಗುವುದು ರುಕ್ಮಿಣೀಗೆ ಮನಸ್ಸಿರಲಿಲ್ಲ. ಕಲಾಕ್ಷೇತ್ರ ಮುಂದೊಂದು ದಿನ ಡೀಮ್ಡ್ ವಿಶ್ವವಿದ್ಯಾನಿಲಯವಾದದ್ದು ಅವರ ನಿಧನದ ನಂತರವೇ !

ಕಲೆಯೆಂದರೆ ಜಾಗತಿಕ ಜೀವನಶಕ್ತಿಯ ಅಭಿವ್ಯಕ್ತಿ. ಪ್ರತಿಯೊಬ್ಬರು ಒಂದಲ್ಲ ಒಂದು ಹಂತದಲ್ಲಿ ತಮ್ಮ ಜೀವನವಿಧಾನದಲ್ಲಿ ಒಂದಲ್ಲ ಒಂದು ಹಂತದಲ್ಲಿ ಕಲಾವಿದರೇ ಆಗಿರುತ್ತಾರೆ ಎನ್ನುತ್ತಿದ್ದ ರುಕ್ಮಿಣೀ ಸೌಂದರ್ಯವೆಂಬುದು ಮಾನವನಪ್ರಜ್ಞೆಯನ್ನು ಐಕ್ಯತೆಯೆಡೆಗೆ ಕೊಂಡೊಯ್ಯುವ ಮತ್ತು ಆ ಮೂಲಕ ಮಾನವ ಸಮಾಜವನ್ನು ಸುಧಾರಿಸುವ ದಾರಿ. ಸಂಗೀತ, ನೃತ್ಯ ಮತ್ತು ಜೀವನದ ಪ್ರತಿಯೊಂದು ಹಂತಗಳು, ಅನುಭವಗಳು ನಮ್ಮನ್ನು ಕರೆದೊಯ್ಯುವುದು ಅರಳುವಿಕೆ ಅಥವಾ ಸೌಂದರ್ಯವೆಂಬ ಅಪೂರ್ವ ಅನನ್ಯ ಸಂಗತಿಯೆಡೆಗೆ. ಕಲೆಯಿಂದ ಜೀವನದಲ್ಲಿ ಜಗತ್ತಿನೆಡೆಗೆ ಸಂತೋಷವನ್ನು ಕಾಣಬಹುದು. ನಾವು ಅಸಹ್ಯವಾಗಿ ಬದುಕಿದರೆ ಜಗತ್ತೂ ಅಸಹ್ಯವೆಂಬಂತೆ ಭಾಸವಾಗುತ್ತದೆ. ಕ್ರೂರತೆ ಎಂಬುದು ಜಗತ್ತಿನ ಅಸಹ್ಯದ ಪರಮಾವಧಿ ಎಂದು ಶಿಷ್ಯರಿಗೆ ತಿಳಿಹೇಳುತ್ತಿದ್ದರು.

ಹಾಗಾಗಿ ಕಲಾಕ್ಷೇತ್ರದ ಆವರಣದೊಳಗೆ ಸಂಗೀತ, ನರ್ತನ ಮುಂತಾದ ಕಲೆಗಳ ನಿನಾದ, ಹೊಳಪು, ನಿಸರ್ಗದ ಸುಂದರ ವಾತಾವರಣ ಸದಾ ಧ್ವನಿಸುತ್ತಿತ್ತು. ಕಲಾಕ್ಷೇತ್ರದಲ್ಲಿ ಯಾವುದೇ ಜೀವವನ್ನು ಧಕ್ಕೆ ಮಾಡಬಾರದು ; ತೊಂದರೆ ಮಾಡಬಾರದು ಎಂಬ ಧ್ಯೇಯ ಅವರದ್ದು. ಸಂಗೀತ, ನೃತ್ಯ, ಚಲನೆಗಳಲ್ಲಿ ಸೌಹಾರ್ದ, ಶಾಂತಿಯನ್ನು ತರುವುದರಿಂದ ಎಲ್ಲವೂ ಉಪಯೋಗವಾಗುವುದಿಲ. ಮೊದಲು ಕಲಾವಿದನಲ್ಲಿ ಅಂತಹ ಶಾಂತಿ ಸೌಹಾರ್ದದ ಮನಸ್ಸಿರಬೇಕು. ಸಣ್ಣ ವಿಷಯಗಳಿಗೂ ಗಮನ ಕೊಡುವುದು ಅವಶ್ಯ. ಅದೇ ಕಲಾವಿದನನ್ನು ಪರಿಪೂರ್ಣತೆಯೆಡೆಗೆ ಸಾಗುವಂತೆ ಮಾಡುತ್ತದೆ. ಸರಿಯಾದ ವಾತಾವರಣ ನಿರ್ಮಾಣ ಮಾಡುವುದರಿಂದ ಉನ್ನತ ಆದರ್ಶಗಳು ಬೆಳೆದು ಭಾರತೀಯ ಸಂಸ್ಕೃತಿಯೆಡೆಗೆ ಯುವ ಜನಾಂಗದಲ್ಲಿ ಆಸಕ್ತಿ, ಗೌರವವನ್ನು ತರುತ್ತವೆ ಎನ್ನುತ್ತಿದ್ದರು.

(ಸಶೇಷ..)

———-

Leave a Reply

*

code