ಅಂಕಣಗಳು

Subscribe


 

ನೃತ್ಯ ಪುಸ್ತಕಗಳಲ್ಲಿ ಮಾಯವಾಗುತ್ತಿರುವ ಸೃಷ್ಟಿಶೀಲ ಬರೆವಣಿಗೆ

Posted On: Sunday, August 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ನಮ್ಮಲ್ಲಿ ನಿರಂತರವಾಗಿ ಜಾಗೃತಗೊಳ್ಳುತ್ತಾ, ನಾವು ಬದುಕುವ ಬದುಕನ್ನು ಮತ್ತೊಮ್ಮೆ ನೋಡಿಕೊಳ್ಳಬೇಕು ಎಂದಾದಾಗ ನಮಗೆ ನೆರವಾಗುವುದೇ ಸಷ್ಟಿಶೀಲ ಮನಸ್ಥಿತಿ. ನಾವು ಕಾಣುತ್ತಿರುವ, ಅನುಭವಿಸುವ, ಆಲೋಚಿಸುವ ಒಂದು ಜಗತ್ತು ಅಥವಾ ವಸ್ತು ನಮ್ಮನ್ನು ಕಾಡುತ್ತದೆ ಎಂದಾದರೆ ಆ ವಸ್ತುವಿನೆಡೆಗೆ ಒಂದು ದೃಷ್ಟಿ, ಆಸಕ್ತಿ, ಸಂಬಂಧ ಬೆಳೆಯುತ್ತಾ ಹೋಗುತ್ತದೆ. ಅದನ್ನು ಹೇಳುವುದೇ ಸೃಷ್ಟಿಶೀಲತೆ ! ಅದು ಕೇವಲ ಹೊಸತೊಂದರ ಜನ್ಮವಷ್ಟೇ ಅಲ್ಲ, ಕಳಚಿಕೊಂಡುಹೋಗುವ ಕೊಂಡಿಯೊಂದರ ಮರುಜನ್ಮವೂ ಆಗಬಹುದು.

ಅಂತಹ ಸೃಷ್ಟಿಶೀಲತೆ ಕಾರ್ಯೋನ್ಮುಖವಾಗಿ ರೂಪುಗೊಂಡರೆ ಕ್ರಾಂತಿಯೆನಿಸುವ ಕಲ್ಪನೆಗಳು, ಕಾಣ್ಕೆಗಳು ಹೊರಬೀಳುತ್ತವೆ. ಉದಾ : ಯಾವುದೋ ಅನ್ಯಾಯವಾಗುತ್ತಿದೆ ಎಂದುಕೊಂಡಾಗ ಆ ಅನ್ಯಾಯದ ಬೆಂಕಿ ನಮ್ಮೊಳಗೇ ಕಾಟ ಕೊಟ್ಟು ಅದರ ಬಗ್ಗೆ ನಾವು ಬೇರೊಂದು ಅಭಿವ್ಯಕ್ತಿಯನ್ನು ತಾಳುತ್ತೀವಿ ಎಂದಾದರೆ ಅದು ಸೃಷ್ಟಿಶೀಲತೆ. ಆ ಅನ್ಯಾಯದ ವಿರುದ್ಧ ಕೆಲಸ ಮಾಡುತ್ತೀವಿ ಅಂತಾದರೆ ಅದು ಕ್ರಿಯಾಶೀಲತೆ, ಸೃಷ್ಟಿಶೀಲ ಮನಸ್ಥಿಯ ಉಗಮಕ್ಕೆ ಇಚ್ಛಾಶಕ್ತಿ, ಜ್ಞಾನಶಕ್ತಿಗಳ ಹರಿವು ಬೇಕು. ಅದೇ ಇಚ್ಛಾಶಕ್ತಿ, ಜ್ಞಾನಶಕ್ತಿ ಕ್ರಿಯಾಶಕ್ತಿಯಲ್ಲಿ ಸರಿಯಾದ ದಾರಿಯಲ್ಲಿ ಪ್ರತಿಫಲಿತವಾದರೆ ಮಾತ್ರ ಶಿಕ್ಷಣ. ಇವುಗಳೆಲ್ಲದರ ಒಟ್ಟು ದರ್ಶನವೇ ಪ್ರತಿಭೆ. ಅದರ ಕಾರ್ಯ ಕಲೆ. ಪ್ರತಿಭೆ ಸೃಷ್ಟಿಗೂ, ಸೃಷ್ಟಿಶೀಲತೆ ಪ್ರತಿಭೆಗೂ ಸಹಕಾರಿಯೂ, ಪೂರಕವೂ ಹೌದು.

ಈ ಪ್ರತಿಭೆಗೆ ವಿಶಿಷ್ಟವಾದ ಒಂದು ದೃಢತೆಯನ್ನೂ, ಪುಷ್ಟಿಯನ್ನೂ ನೀಡುವುದು ಪಾಂಡಿತ್ಯ. ಶತಾವಧಾನಿಗಳು ಹೇಳುವಂತೆ ‘ಶುದ್ಧಪ್ರತಿಭೆಯನ್ನು ಜೋಗದ ಜಲಪಾತವೆನ್ನಬಹುದಾದರೆ ಪಾಂಡಿತ್ಯವು ಈ ಜಲಶಕ್ತಿಯನ್ನು ವಿದ್ಯುತ್ತಾಗಿ ಪರಿವರ್ತಿಸುವ ಯಂತ್ರರಾಶಿವಿಶೇಷ’. ಹೀಗೆ ಯಾವುದೇ ಪರಿಚ್ಛೇದಕ್ಕೆ ಒಳಗಾಗದ ಪ್ರತಿಭೆ ಮತ್ತು ದೇಶ-ಕಾಲ-ವಸ್ತುಗಳಿಂದ ಪರಿಚ್ಛಿನ್ನವಾದ ಪಾಂಡಿತ್ಯ ಒಂದಾಗಿ ಕಲೆತಾಗ ಮಾತ್ರ ಆನಂದಮಯ ಕಲಾಸೃಷ್ಟಿ ಸಾಧ್ಯ.

ಅಂತಹ ಪಾಂಡಿತ್ಯಪೂರ್ಣ ದೃಷ್ಟಿ, ಸೃಷ್ಟಿಶೀಲತೆ ಮತ್ತು ಕ್ರಿಯಾಶೀಲತೆಗಳ ಸಾಂಗತ್ಯದ ನಿಲುವು, ಪ್ರತಿಭೆಯ ಅರಿವು ಇಂದಿನ ನೃತ್ಯಕ್ಷೇತ್ರಕ್ಕೆ ಅಗತ್ಯವಿದೆ. ಅದು ಕೇವಲ ನೃತ್ಯ ಸಂಯೋಜನೆ, ಕಾವ್ಯ ಸಮಯ, ನೃತ್ಯ ಪ್ರದರ್ಶನಗಳಿಗಷ್ಟೇ ಸೀಮಿತವಾಗಬೇಕಿಲ್ಲ ; ಜೊತೆಗೆ ನೃತ್ಯಕ್ಷೇತ್ರದ ಬಗ್ಗೆ ಪರಿಚಯಿಸುವ, ಅನುಭವ-ಆಲೋಚನೆಯನ್ನು ಕಟ್ಟಿಕೊಡುವ, ಸುದೀರ್ಘ-ಸರಳ-ಆಸಕ್ತಿಕರ ಓದಿಗೆ ನೆರವಾಗುವ, ತಲೆಮಾರುಗಳ ತಹತಹಿಕೆ-ಸಂಬಂಧಗಳನ್ನು ವಿವರಿಸುವ, ಪೂರ್ಣ ಸಾದೃಶ್ಯ ವಿವರಗಳನ್ನು ಒದಗಿಸುವ, ಸರ್ಜನಶೀಲ (ಸೃಜನಶೀಲ-ವ್ಯಾಪಕವಾಗಿ ಬಳಸುವ ತಪ್ಪು ಪದ) ನೋಟಗಳನ್ನು- ಕ್ರಿಯಾಶೀಲ ಮನಸ್ಸುಗಳನ್ನು ಹೆಚ್ಚಿಸುವ, ಕಾಡುವ ಸಂವೇದನಾಶೀಲ ಪುಸ್ತಕಗಳು-ಗ್ರಂಥ ನಿರೂಪಣೆಗಳು ಹೊರಬರಬೇಕಾಗಿವೆ. ಆಗ ಮತ್ತಷ್ಟು ಪ್ರತಿಭೆಗಳು ವಿಕಸಿತಗೊಳ್ಳಲು, ಪ್ರಕಾಶಗೊಳ್ಳಲು, ಪ್ರಯೋಗವಾಗಲು, ಪಸರಿಸಲು, ಪೂರ್ಣವೆನಿಸಲು ಸಾಧ್ಯ.

ಕನ್ನಡದಲ್ಲಿ ಪ್ರಕಾಶಿತವಾದ ಬಹಳಷ್ಟು ನೃತ್ಯ ಸಂಬಂಧೀ ಪುಸ್ತಕಗಳು ಕೇವಲ ಪರೀಕ್ಷಾ ಕ್ರಮಕ್ಕಷ್ಟೇ ಮೀಸಲಾಗಿವೆ ಎಂಬಂತಿದೆ. ಕೇವಲ ಬೆರಳೆಣಿಕೆಯಷ್ಟು ಪುಸ್ತಕಗಳು ನೈಜವೆನಿಸುವ ಸಂಶೋಧನೆಗಳನ್ನು, ಸ್ವಂತಿಕೆಯ ವಿವರಗಳನ್ನು ಒದಗಿಸುತ್ತವೆಯಾದರೂ, ಕಾರಣಂತರಗಳಿಂದ ಲಭ್ಯವಾಗುತ್ತಿಲ್ಲ. ಉಳಿದಂತೆ ಬಹಳಷ್ಟು ಕೃತಿಗಳು ಮತ್ತೊಬ್ಬರ ಜೇಬಿಗೆ ಕೈ ಇಳಿಬಿಟ್ಟಂತ ಚೌರ್ಯವೆನಿಸದ ಚೌರ್ಯಗಳೇ ಆಗಿವೆ.

ಪುಸ್ತಕಗಳ ಕೊರತೆಯಿದ್ದಷ್ಟು ಅರಿವಿನ ಬೆಳಕಿಂಡಿ ದೂರವಾಗುತ್ತಲೇ ಹೋಗುತ್ತದೆ ; ಚೈತನ್ಯದ ದೃಷ್ಟಿ, ಆಳವೆನಿಸುವ ಅಧ್ಯಯನ, ಮರುನೋಟದ ಅವಕಾಶವೂ ಕುಸಿಯುತ್ತದೆ. ವ್ಯಾಪ್ತಿಯ ಅನುಭವವೂ ಕಡಿಮೆಯಾಗುವುದಲ್ಲದೆ ಕ್ಷೇತ್ರವೊಂದರ ಅನುಕೂಲ-ಅನನುಕೂಲ, ಅವಶ್ಯಕತೆ-ಅವಸ್ಥೆ, ಗತಿ-ನೆಲೆ, ಕೊಂಕು-ಕೊಳಕು-ಕಳಂಕ-ತೊಡಕು, ಸಾಧ್ಯತೆ, ಪ್ರತಿಭೆ, ಪರಿಣಾಮಗಳು ಅಷ್ಟಾಗಿ ಲಕ್ಷ್ಯಕ್ಕೆ ಬರುವುದಿಲ್ಲ. ಇದರಿಂದ ಕಲೆಯ ಭೂತಕಾಲದಲ್ಲಿದ್ದ ಶಾಸ್ತ್ರ-ಸಂಪ್ರದಾಯ, ವರ್ತಮಾನಗಳಲ್ಲಿ ಅವುಗಳ ಪ್ರಸ್ತುತತೆ-ವಾಸ್ತವಗಳಷ್ಟೇ ಅಲ್ಲ ; ಭವಿಷ್ಯದ ವಿಮರ್ಶೆಗಳು, ಚಿಂತನೆಗಳ ಗುಣಮಟ್ಟ ಅರಿವಿಗೆ ಬರಲಾರದು.

ಪುಸ್ತಕಗಳು ಭವಿತವ್ಯಕ್ಕೆ ನಾವು ನೀಡುವ ಅತುತ್ತಮ ಕೊಡುಗೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಸುವವರ ಮತ್ತು ಅಧ್ಯಯನದ ಫಲಶ್ರುತಿಯನ್ನು ಸರಿಯಾದ ದಿಕ್ಕಿನಲ್ಲಿ ಕಾಣಿಸುವವರ ಶ್ರಮ ಹೆಚ್ಚಿನ ಬದಲಾವಣೆಗಳನ್ನು ತರಲು ಸಾಧ್ಯ. ವೈಯಕ್ತಿಕ ನೆಲೆಯಲ್ಲಿ, ಸಂಸ್ಥೆ-ಸಂಘಟನೆಗಳ ಪ್ರಯತ್ನದೊಂದಿಗೆ ಅಕಾಡೆಮಿಗಳ, ಸರ್ಕಾರ ಪ್ರಾಯೋಜಿತ ಸಂಸ್ಥೆ- ಇಲಾಖೆಗಳ ನೆರವು, ಮುಂದಾಳತ್ವ, ಮಾರ್ಗದರ್ಶನ ಮತ್ತು ಮುನ್ನಡೆ ಅಗತ್ಯ ಬೇಕು. ಇನ್ನಾದರೂ ಇಂತಹ ಪುನಶ್ಚೇತನಗಳಿಲ್ಲವಾದಲ್ಲಿ ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಇರುವ ಕೊಂಡಿಯು ಶಿಥಿಲವಾಗುತ್ತದೆ ; ಅರಿವಿನ ಕ್ಷಿತಿಜ ಬರಿದಾಗುತ್ತದೆ ; ಕೈಮರ ಕಾಣೆಯಾಗುತ್ತದೆ ; ಪ್ರಕ್ಷುಬ್ಧ ಪರಿಸ್ಥಿತಿ ಪುನರಾವರ್ತನೆಗೊಳ್ಳುತ್ತದೆ ; ನಿರ್ವಾತ ತುಂಬಿಕೊಳ್ಳುತ್ತದೆ. ಅರಿವಿನ ದೀವಟಿಗೆಗೆ ಪುಸ್ತಕಗಳ ಪ್ರಕಾಶನ, ಮತ್ತು ಅದರಿಂದ ಪ್ರಯೋಜನ ಪಡೆದುಕೊಳ್ಳಬೇಕಾದ ವಿವೇಕ ನಮ್ಮಲ್ಲಿ ಇದ್ದರೆ ಮಾತ್ರ ಕಲಾದಿಗಂತ ನಿರ್ಮಲವಾಗಿ, ಸಮೃದ್ಧವಾಗಿ ಶೋಭಿಸಬಹುದು. ಆ ದಿಕ್ಕಿಗೆ ನಮ್ಮ ಪ್ರಯತ್ನವಿರಲಿ.

ಪ್ರೀತಿಯಿಂದ

ಸಂಪಾದಕರು

Leave a Reply

*

code