ಅಂಕಣಗಳು

Subscribe


 

ನರ್ತನವು ವ್ಯಾಯಾಮವೇ?

Posted On: Wednesday, November 5th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


ಪ್ರಿಯರೇ,

ಮನಸ್ಸು ಆರೋಗ್ಯವಾಗಿದ್ದಷ್ಟೂ ದೇಹ ಚೈತನ್ಯದಿಂದ ಕಂಗೊಳಿಸುತ್ತದೆ. ಹಾಗಾಗಿ ಮನಸ್ಸಿಗೇ ಮೂಲ ವ್ಯಾಯಮ ಕೊಟ್ಟು ಆ ಮೂಲಕ ದೈಹಿಕ ಪ್ರಜ್ಞೆಯನ್ನು, ಕಾಯ್ದುಕೊಳ್ಳುವ ಗುರಿ ನೃತ್ಯದ್ದು. ನೃತ್ಯ ಕೇವಲ ರಸ ಪ್ರಧಾನವಷ್ಟೇ ಅಲ್ಲ. ಬದಲಾಗಿ ಆರೋಗ್ಯ ಪ್ರಧಾನವೂ ಕೂಡಾ! ದೇಹ, ಮನಸ್ಸು, ಬುದ್ಧಿ ಏಕಕಾಲಕ್ಕೆ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡು ಏಕಾಗ್ರಗೊಳ್ಳುವ, ಕಲೆ. ಪ್ರತಿಯೊಂದೂ

ನರ್ತನವನ್ನೇ ಆವಿರ್ಭವಿಸಿಕೊಂಡವರಿಗೆ ನೃತ್ಯವೇ ಜಗತ್ತು. ಏಕೆಂದರೆ ಜಗತ್ತನ್ನೇ ಮರೆಸುವ ಶಕ್ತಿ ನೃತ್ಯಕ್ಕಿದೆ. ನರ್ತಕರು ಉಳಿದವರಿಗಿಂತ ದೀರ್ಘಕಾಲ ಆರೋಗ್ಯದಿಂದ ಬದುಕುತ್ತಾರೆ ಎಂದು ಅಧ್ಯಯನಗಳಿಂದ ದೃಢಪಟ್ಟಿದ್ದು, ಪ್ರಾತಃಕಾಲ, ಸಾಯಂಸಂಧ್ಯೆಯ ಅಭ್ಯಾಸಗಳಂತೂ ದೇಹ, ಮನಸ್ಸನ್ನು ಚೇತೋಹಾರಿಯಾಗಿಸಿ ದಿನವನ್ನು ಅರ್ಥಪೂರ್ಣವಾಗಿಸುತ್ತದೆ. ದೇಹದಲ್ಲಿನ ಕಲ್ಮಷಗಳು ಸಾಕಷ್ಟು ಪ್ರಮಾಣದಲ್ಲಿ ಬೆವರು, ಮೂತ್ರದ ರೂಪದಲ್ಲಿ ಹರಿದುಹೋಗುವುದಲ್ಲದೆ; ಪರಿಣಾಮ ನೀರಿನ ಸೇವನೆಯನ್ನು, ಹಸಿವನ್ನು ವೃದ್ಧಿಗೊಳಿಸುತ್ತದೆ. ದೇಹಕ್ಕೆ ಪ್ರಮಾಣವನ್ನು ಒದಗಿಸಿಕೊಡುತ್ತದೆ. ಮನಸ್ಸು ದೇಹದೊಂದಿಗೆ ಕುಣಿಯುತ್ತದೆ…ಲಯಬದ್ಧವಾಗಿ, ಶ್ರುತಿಬದ್ಧವಾಗಿ.

ನೃತ್ಯ ; ಅದು ಶಾಸ್ತ್ರೀಯವಾಗಿರಲಿ, ಪಾಶ್ಚಾತ್ಯವಾಗಿರಲಿ, ಜನಪದವಾಗಿರಲಿ; ಮನೋದೈಹಿಕ ಸಮತೋಲನವನ್ನು ಪರಿಣಾಮಕಾರಿಯಾಗಿ ಕಾಯ್ದುಕೊಳ್ಳಲು ಸಾಧ್ಯ. ಉದಾ: ಕಾಪೊಯಿರಾ ಎಂಬ ಯುದ್ಧಪ್ರಿಯ ಡೊಂಬರಾಟದಂತಿರುವ ನೃತ್ಯದಲ್ಲಿ ಒಂದು ವೃತ್ತಾಕಾರದ ರೇಖೆಯೊಳಗೆ ಇಬ್ಬರೂ ವ್ಯಕ್ತಿಗಳು ಬಾಗುತ್ತಾ, ಒಬ್ಬರಿಗೊಬ್ಬರು ಏಟುಗಳನ್ನು ಹಾಕವಲ್ಲಿ, ಹೊಡೆತಗಳಿಂದ ತಪ್ಪಿಸಿಕೊಳ್ಳಲು, ನುಣುಚಿಕೊಳ್ಳಲು ಯತ್ನಿಸುತ್ತಾ ಓಡಾಡುತ್ತಾರೆ. ಈ ನೃತ್ಯದಿಂದ ರಕ್ತದೊತ್ತಡ ಹತೋಟಿಗೆ ಬರುವುದಲ್ಲದೆ, ಹೃದಯ ಸದೃಢಗೊಂಡು ಕಾಯಿಲೆ ಶಮನಗೊಳ್ಳುವುದು. ದೇಹ ಸಮತೋಲನಗೊಂಡು ವಿಚಾರ ತೀಕ್ಷ್ಣವಾಗುವುದಲ್ಲದೆ ವಿವೇಕ ಸೂಕ್ಷ್ಮವಾಗುವುದು. ಈ ಪ್ರಭಾವ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ಇನ್ನಷ್ಟು ಹೆಚ್ಚು. ಅದರ ರಾಗ, ತಾಳ, ಭಾವ, ಲಯದ ಅಪೂರ್ವ ಸಮ್ಮಿಲನ ದೇಹದ ಇಂಚಿಂಚಿಗೂ ಯೋಗ ಸಾನ್ನಿಧ್ಯವನ್ನು ತಂದುಕೊಡುತ್ತದೆ.

ಪ್ರಾಮಾಣಿಕ ನೃತ್ಯಪಟುಗಳಿಗೆ ಆಗುವ ಪ್ರಯೋಜನಗಳು ಹಲವಾರು. ಕಣ್ಣುಗಳ ಕಾಂತಿಯುಕ್ತತೆ, ಕೈಕಾಲುಗಳಿಗೆ ಶಕ್ತಿ, ಜ್ಞಾಪಕಶಕ್ತಿ ವರ್ಧನೆ, ಕಷ್ಟ ಸಹಿಷ್ಣುತೆ, ಹಸನ್ಮುಖ-ಮೃದುವರ್ತನೆ, ನಡಿಗೆಯಲ್ಲಿ ಲಾಲಿತ್ಯ, ಸಮತೋಲನದ ಮನಸ್ಸು, ಬೊಜ್ಜು ಇಲ್ಲದಿರುವಿಕೆ, ನಿರಾಳ ಉಸಿರಾಟ, ಭಾವಪೂರ್ಣತೆ, ಚೈತನ್ಯ, ಏಕಾಗ್ರತೆ….

ಹಾಗಾದರೆ ನರ್ತಕರಿಗೆ ವ್ಯಾಯಾಮದ ಅಗತ್ಯವಿಲ್ಲವೇ? ಎಂಬ ಪ್ರಶ್ನೆ ! ಸಹಜ. ನರ್ತನವೇ ವ್ಯಾಯಾಮ, ಆದ್ದರಿಂದ ವಿಶೇಷ ವ್ಯಾಯಾಮದ ಅಗತ್ಯವಿಲ್ಲ ಎಂ ಭಾವನೆ ಸಾಕಷ್ಟು ಮಂದಿಯಲ್ಲಿದೆ. ಇದು ಸಮರ್ಥನೀಯವಲ್ಲ. ಹಲವು ವರ್ಷಗಳ ನೃತ್ಯ ಸಾಧನೆಯಿದ್ದಾಗ್ಯೂ ಕಲಾವಿದರು ಹಲವು ತೊಂದರೆಗಳಿಂದ ಬಳಲುತ್ತಾರೆ. ಅದರಲ್ಲೂ ಜೀವನ ಸಮಸ್ಯೆಗಳು, ಮಾನಸಿಕ ಒತ್ತಡಗಳು, ಆಹಾರ, ಅನಿರೀಕ್ಷಿತ ದೈಹಿಕ ತೊಂದರೆಗಳು ಇರುವಾಗ ಶರೀರದ ಸುಸ್ಥಿತಿಗೆ ವ್ಯಾಯಾಮ ಅಗತ್ಯ. ವ್ಯಾಯಾಮದಲ್ಲಿ ಶರೀರ, ಮನಸ್ಸು, ಪ್ರಾಣ, ಬುದ್ಧಿ ಒಂದೇ ದಿಕ್ಕಿನಲ್ಲಿ, ಏಕೋದ್ದೇಶಕ್ಕಾಗಿ ಹರಿಯುವುದರಿಂದ ಮನಸ್ಸು, ಶರೀರ ವಿಶ್ರಾಮ ಸ್ಥಿತಿಗೆ ಬರುತ್ತದೆ. ವ್ಯಕ್ತಿತ್ವದಲ್ಲಿ ಸಾಮರಸ್ಯ ಮೂಡಿ ನೃತ್ಯ ಸಾಧನೆ ಪರಿಪಕ್ವವಾಗುತ್ತಾ ಸಾಗುತ್ತದೆ.

ಆದ್ದರಿಂದಲೇ ಇಂದು ಬಹಳಷ್ಟು ಸಂಸ್ಥೆಗಳು ನೃತ್ಯವನ್ನು ಕೇವಲ ರಂಗಕಲೆಯೆಂದು ಸೀಮಿತವಾಗಿ ನೋಡದೆ, ವ್ಯಾಯಾಮವನ್ನೂ ಸಮೀಕರಿಸಿ ನೃತ್ಯ ಚಿಕಿತ್ಸೆಯನ್ನು ಕೊಡುತ್ತಾ ಬರುತ್ತಿವೆ. ಅದರಲ್ಲೂ ಆಧುನಿಕ ಯುಗದ ದೈನಿಕ ಒತ್ತಡಗಳಿಗೆ ತುತ್ತಾಗುತ್ತಿರುವ ಮನಸ್ಸಿಗೆ ಸರಳವೆನಿಸುವ ಕಸರತ್ತುಗಳನ್ನು ಕಲಿಸುತ್ತಿವೆ. ಉದಾ: ಸ್ತಂಭ ನೃತ್ಯವೆಂಬ ಪ್ರಕಾರದಲ್ಲಿ ಕಂಬಕ್ಕೊಂದು ಕೈ ಹಿಡಿದು ಸುತ್ತು ತಿರುಗಲಾಗುತ್ತದೆ. ಇದರಿಂದ ಅಂಗಾಂಗಗಳು ಸಡಿಲಗೊಂಡು, ದೇಹದಲ್ಲಿರುವ ಕೊಬ್ಬು ಕ್ರಮೇಣ ಕರಗುತ್ತಾ ತೋಳುಗಳು ಬಲಿಷ್ಟಗೊಳ್ಳುತ್ತವೆ. ಸ್ಥೂಲ ಶರೀರದ ಮಂದಿಗಂತೂ ಇದು ತುಂಬಾ ಸಹಕಾರಿಯಂತೆ!

ಏರೋಬಿಕ್ಸ್‌ನಂತಹ ನೃತ್ಯಕ್ಕೆ ಆಧುನಿಕ ಆರೋಗ್ಯಮುಖಿ ಸ್ಪರ್ಶವನ್ನು ನೀಡಿದ ಪದ್ಧತಿಗಳು ಯುವ ಸಂಸ್ಕೃತಿಯ ಅಚ್ಚುಮೆಚ್ಚಿನ ವಿಷಯಗಳಲ್ಲೊಂದು. ಆದರೆ, ಇಂತಹ ಪ್ರಯೋಗಗಳು ಇತ್ತೀಚೆಗಂತೂ ಮೆಟ್ರೋಪಾಲಿಟಿನ್ ಸಂಸ್ಕೃತಿಯಲ್ಲಿ ಫ್ಯಾಷನ್ ಮಾತು ಪ್ರತಿಷ್ಟೆಯ ಸಂಕೇತ. ಜೊತೆಗೆ ಬಹುಜನರಿಂದ (ಶ್ರೀಮಂತ, ಮೇಲ್ಮಧ್ಯಮ ವರ್ಗ) ವ್ಯಾಪಾರೀಕರಣಕ್ಕೆ ಸಮ್ಮತಿ ಪಡೆದ ಮಾಧ್ಯಮ.

ನೃತ್ಯದ ಆರೋಗ್ಯಮುಖಗಳನ್ನೂ ನೋಡುವುದೂ ಭ್ರಮರಿಯ ಉದ್ದೇಶ. ಈಗಾಗಲೇ ನೃತ್ಯದಲ್ಲಿ ಬಳಸುವ ಹಸ್ತಗಳನ್ನು, ಅದರ ಆರೋಗ್ಯ ಸಂಬಂಧಿ ವಿಚಾರಗಳನ್ನು ಸಂಚಿಕೆಗೊಂದರಂತೆ ಪ್ರಸ್ತುತಪಡಿಸುತ್ತಾ ಬಂದಿದ್ದೇವೆ. ನೃತ್ಯವೆಂಬುದು ಮನರಂಜನೆ ಮಾತ್ರವಲ್ಲ, ಅದು ಆರಾಧನೆ; ಅದು ಸಂವಹನ ; ಕಲಿಯುವಾತನಿಗೂ, ಕಲಿಸುವಾತನಿಗೂ, ಕಲಾವಿದನಿಗೂ ಮಾನಸಿಕ ಶಿಕ್ಷಣ ಕೂಡಾ!

ಈ ಬಾರಿಯೂ ಸಾಕಷ್ಟು ಜನ ಪತ್ರಿಸಿ, ಫೋನಾಯಿಸಿ ಬೆನ್ನು ತಟ್ಟಿದ್ದಾರೆ. ಅವರಲ್ಲಿ ಬೆಂಗಳೂರಿನ ನೂಪುರ ನೃತ್ಯ ಸಂಸ್ಥೆಯ ಲಲಿತಾ ಶ್ರೀನಿವಾಸನ್, ನೃತ್ಯ ದಂಪತಿಗಳಾದ ಶ್ರೀಧರ್ ಮತ್ತು ಅನುರಾಧಾ ಶ್ರೀಧರ್, ಯಕ್ಷಗಾನ ಚಿಂತಕ, ಕಲಾವಿದ ಡಾ| ಪ್ರಭಾಕರ್ ಜೋಷಿ, ಬೆಂಗಳೂರು ಪ್ರಸಾರಾಂಗದ ಡಾ| ಸರ್ವೋತ್ತಮ ಕಾಮತ್, ಸಮಾಜ ಸೇವಾ ಸಂಸ್ಥೆಯ ರಾಜಕುಮಾರ್, ಉಡುಪಿಯ ವಿದ್ವಾನ್ ಕೊಡವೂರು ಸುಧೀರ್ ರಾವ್, ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರವಾಚಕಿ, ವಿಮರ್ಶಕಿ ಡಾ| ಸಬೀಹಾ ಭೂಮಿ ಗೌಡ, ಉಜಿರೆಯ ಉಪನ್ಯಾಸಕರಾದ ಶ್ರುತಕೀರ್ತಿರಾಜ, ಕೇಶವ ಹೆಗ್ಡೆ, ಸನ್ಮಿತ್ರರಾದ ಚಿತ್ರಾ ಕರ್ಕೇರಾ, ಸಿಂಚನಾಮೂರ್ತಿ, ಮಹೇಶ್ ಭಗೀರಥ, ನಟೇಶ್, ಜೋಸೆಫ್…ಹೀಗೆ…ಪಟ್ಟಿ ಬೆಳೆಯುತ್ತದೆ. ನೀವು ನಮ್ಮೊಂದಿಗಿದ್ದೀರಿ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೇ?

ಮತ್ತಷ್ಟು ಹೊಸತೊಂದಿಗೆ, ಹೊಸ ನಿರೀಕ್ಷೆಗಳೊಂದಿಗೆ ಮತ್ತೆ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗುತ್ತೇನೆ..

ಪ್ರೀತಿಯಿಂದ ನಿಮ್ಮ,

ಮನೋರಮಾ ಬಿ. ಎನ್

Leave a Reply

*

code