ಅಂಕಣಗಳು

Subscribe


 

ಕನ್ನಡ ಸಾಮಾಜಿಕ ಕಾದಂಬರಿಗಳಲ್ಲಿ ನೃತ್ಯ- ಉಪೋದ್ಘಾತ

Posted On: Saturday, June 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ ಬಿ.ಎನ್

ಸಮಾಜದ ಮನಸ್ಥಿತಿಯನ್ನು, ಸಾಹಿತ್ಯದ ವಿಸ್ತಾರವನ್ನು ಹೇಳುವಲ್ಲಿ ಐತಿಹಾಸಿಕ ಕಾದಂಬರಿಗಳದ್ದು ಒಂದು ದಾರಿಯಾದರೆ; ಸಾಮಾಜಿಕ ಕಾದಂಬರಿಗಳದ್ದು ಮತ್ತೊಂದು ದಾರಿ. ಐತಿಹಾಸಿಕ ಘಟನೆಗಳಿಗೆ ಹತ್ತಿರವಾಗಿ ಅದರ ಒಲವು-ತಿಳಿವನ್ನು ಐತಿಹಾಸಿಕ ಕಾದಂಬರಿಗಳು ಕೊಟ್ಟರೆ ಸಾಮಾಜಿಕ ಕಾದಂಬರಿಗಳು ನೇರವಾಗಿ ಸಮಾಜದ ಮುಖಗಳನ್ನು ಕಾಲ್ಪನಿಕ ಪಾತ್ರಗಳ ಮೂಲಕ ಹಿಡಿದಿಡುತ್ತವೆ.

ಹೀಗೆ ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ಕಾದಂಬರಿಗಳು ನೃತ್ಯವನ್ನು ದುಡಿಸಿಕೊಂಡ ರೀತಿ, ಅದರ ಒಟ್ಟಾರೆ ಆಶಯ, ಆಧಾರ, ಕಥಾ ತಂತ್ರದ ಹಲವು ಮುಖಗಳನ್ನು ವಿಮರ್ಶಿಸುವುದು ಈ ಲೇಖನದ ಉದ್ದೇಶ.ಮೂಲತಃ ಸಂಶೋಧನಾ ಲೇಖನವಾಗಿದ್ದರೂ ಓದುಗರ ಅನುಕೂಲಕ್ಕಾಗಿ ಲೇಖನವನ್ನು ಸರಳ ಮಾಡಲಾಗಿದ್ದು; ಕಾದಂಬರಿಗಳನ್ನು ಪರಿಶೀಲಿಸಿ ತಂತ್ರ, ಕಥೆ, ನಿರ್ದೇಶನ, ವಸ್ತು- ಆಶಯಗಳನ್ನು ಅಧ್ಯಯನ ಮಾಡಿ ದಾಖಲಿಸಲಾಗಿದೆ. ಐತಿಹಾಸಿಕ ಕಾದಂಬರಿಗಳ ವಸ್ತುವಿನಲ್ಲಿ ವಿಶೇಷ ಆಯ್ಕೆಗಲಿಲ್ಲದಿರುವುದರಿಂದ ಸದ್ಯ ಆ ವಿಚಾರ ಈ ಲೇಖನದಿಂದ ಹೊರಗುಳಿದಿದೆ.

ಪ್ರಸ್ತುತ ಈ ಲೇಖನದಲ್ಲಿ ಕನ್ನಡ ಕಾದಂಬರಿಗಳು ನೃತ್ಯವನ್ನು ಬಳಸಿದ ಉದ್ದೇಶ, ರೀತಿ, ನೃತ್ಯದ ಶಾಸ್ತ್ರ-ಸಂಪ್ರದಾಯ-ಸಂಸ್ಕೃತಿಗಳ ಚಿತ್ರಣ ಮತ್ತು ಸವಾಲು-ಸಮಸ್ಯೆಗಳ ಅಭಿವ್ಯಕ್ತಿ, ಕಾದಂಬರಿಯು ಪ್ರಸ್ತುತವಾಗುವ ಬಗೆ, ಸಾರ್ವಕಾಲಿಕತೆ, ಭವಿಷ್ಯದಲ್ಲಿ ಇಂತಹ ಕಾದಂಬರಿ ರಚನೆಗೆ ಅಗತ್ಯವಿರುವ ಪ್ರಯತ್ನದ ಕುರಿತಾಗಿ ದೃಷ್ಟಿಯನ್ನು ನೀಡಲಾಗಿದೆ.

ಕಾದಂಬರಿಗಳು ನೃತ್ಯವನ್ನು ಯಾವ ಬಗೆಯಾಗಿ ಪ್ರತಿನಿಧಿಸಿವೆ? ಯಾವ ಬಗೆಯ ಮೌಲ್ಯಗಳನ್ನು ನೃತ್ಯದೊಂದಿಗೆ ಸಮೀಕರಿಸಲಾಗಿದೆ? ನೃತ್ಯಮಾದರಿಗೆ ಸಂಬಂಧಿಸಿದಂತೆ ಯಾವ ಬಗೆಯ ಅಭಿಪ್ರಾಯಗಳನ್ನು ದಾಖಲಿಸಲಾಗಿದೆ? ಅದು ಮುಕ್ತವೇ? ಕಟ್ಟುಪಾಡಿಗೊಳಪಟ್ಟದ್ದೇ? ಕಾದಂಬರಿಯ ಪ್ರಧಾನ ಆಶಯಕ್ಕೆ ಹೊಂದಿಕೊಂಡಂತೆ ನೃತ್ಯಕ್ಕೆ ಪಾತ್ರವಿದೆಯೇ? ನರ್ತಕರ ವ್ಯಕ್ತಿತ್ವವನ್ನು ಯಾವ ಬಗೆಯಲ್ಲಿ ನಿರೂಪಿಸಲಾಗಿದೆ? ಯಾವ ಬಗೆಯಲ್ಲಿ ಕಾದಂಬರಿಯು ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ? ಕಾದಂಬರಿಯು ವಿವಿಧ ಮಾಧ್ಯಮಗಳಿಗೆ ಒಗ್ಗುವುದಾದರೆ ಯಾವ ಸಂದರ್ಭಗಳಿವೆ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಈ ಲೇಖನ ಸರಣಿರೂಪದಲ್ಲಿ ನೂಪುರ ಭ್ರಮರಿಯಲ್ಲಿ ಕಂತುಗಳಾಗಿ ಮೂಡಿಬರಲಿದೆ.

ಪೀಠಿಕೆ

ಕನ್ನಡ ಸಾಹಿತ್ಯದಲ್ಲಿ ೧೯ನೇ ಶತಮಾನದಿಂದೀಚೆಗಿನ ಕಾಲವು ಗದ್ಯ ಪ್ರಧಾನವಾದುದು. ಗದ್ಯಪ್ರಕಾರದಲ್ಲಿ ಪ್ರಮುಖ ಪ್ರಕಾರವೆನಿಸುವ ಕಾದಂಬರಿಯ ವಸ್ತು ವಿಷಯಗಳು ಬೆಳೆದು ಬಂದ ಹಾದಿಯನ್ನು ವಿವೇಚಿಸಿದರೆ ಸಮಕಾಲೀನ, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ, ನೈತಿಕ ನೆಲೆಯಲ್ಲಿ ವಿಭಾಗೀಕರಿಸಲ್ಪಡುತ್ತವೆ. ಜೊತೆಗೆ ಆಯಾಯ ಕಾಲಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ನವ್ಯ, ನವೋದಯ, ಪ್ರಗತಿಶೀಲ ಮುಂತಾದ ಕವಲುಗಳ ಪರಿಚಯಕ್ಕೆ ಪೂರಕವಾಗಿ ನಿಲ್ಲುತ್ತವೆ.

ಅದರಲ್ಲೂ ಈಗಿನ ಕನ್ನಡ ಕಾದಂಬರಿ ಪ್ರಬೇಧವು ಕಾದಂಬರಿ ಕ್ಷೇತ್ರದಲ್ಲಿ ಪ್ರಥಮ ಪ್ರಯತ್ನಗಳೆನಿಸುವ ಬಾಣಭಟ್ಟನ ಸಂಸ್ಕೃತ ಭಾಷೆಯ ಕಾದಂಬರಿ, ದುರ್ಗಸಿಂಹನ ಪಂಚತಂತ್ರ, ನೇಮಿಚಂದ್ರನ ಲೀಲಾವತಿ ಪ್ರಬಂಧ, ಜನ್ನನ ಯಶೋಧರ ಚರಿತೆ, ಮತ್ತು ದೀರ್ಘ ಗದ್ಯಗಳಲ್ಲೊಂದಾದ ವಡ್ಡಾರಾಧನೆ, ಮುದ್ದಣ್ಣನ ರಾಮಾಶ್ವಮೇಧಗಳಿಗಿಂತ ಮೂಲಭೂತ ಸಂವೇದನೆ ಮತ್ತು ತಾತ್ವಿಕ ಮಟ್ಟದಲ್ಲಿ ಬೇರೆಯಾಗಿದ್ದು; ಅದನ್ನು ಅವಲೋಕಿಸಿದಾಗ ಕಾಲಾಂತರದಲ್ಲಿ ಕಾದಂಬರಿ ಪ್ರಕಾರದಲ್ಲಾದ ಸ್ಥಿತ್ಯಂತರಗಳು ವೇದ್ಯವಾಗುತ್ತದೆ. ಅದರಲ್ಲೂ ಕನ್ನಡದಲ್ಲಿ ಸಾಮಾಜಿಕ ಕಾದಂಬರಿ ಹುಟ್ಟಿದ್ದು ಒಂದು ನಿರ್ದಿಷ್ಟ ಸಾಮುದಾಯಿಕ ಗುಂಪಿನ ಸ್ವ-ವಿಮರ್ಶೆಯಿಂದ ಎಂದು ಪರಿಭಾವಿಸಲಾಗಿದೆ.

ಕಾದಂಬರಿಯು ಕಲ್ಪನೆ ಒಂದು ಮಹತ್ವಪೂರ್ಣ ಆವಿಷ್ಕಾರ. ಕಾದಂಬರಿಯು ಆದರ್ಶ ಮತ್ತು ವಾಸ್ತವಗಳ ವಿಶಿಷ್ಟ ಸಂಯೋಗದಲ್ಲಿ ಹುಟ್ಟುವುದಾದರೂ ಅದು ವಾಸ್ತವದ ಅನುಕರಣೆ, ಅನುಕೃತಿ ಅಲ್ಲ. ಅದಕ್ಕಿಂತ ಭಿನ್ನವಾದ ರಚನೆ ಹಾಗೂ ಒಂದು ವ್ಯವಸ್ಥಿತ ಮಾದರಿ ಎನ್ನುತ್ತಾರೆ ಸಾಹಿತಿ, ವಿಮರ್ಶಕರಾದ ಆಮೂರರು. ಅದರಲ್ಲೂ ನವೋದಯ, ನವ್ಯರ ಆಶಯ- ಸಾಹಿತಿಗೆ ಸಮಾಜದ ಬದ್ಧತೆ ಅಗತ್ಯ ಎಂಬುದೇ ಆಗಿದ್ದರಿಂದ ಸಾಹಿತಿಗಳ ಆಲೋಚನಾಕ್ರಮಕ್ಕೆ ಅನುಗುಣವಾಗಿ ಕಾದಂಬರಿಯ ವಸ್ತು ಮತ್ತು ರಚನಾ ಕ್ರಮವೂ ಭಿನ್ನವಾಯಿತು. ನವೋದಯದ ನಂತರ ಕಾಣುವ ಪ್ರಗತಿಶೀಲ ಪರಂಪರೆ ಸಮಾಜದ ಕೊಳೆಯನ್ನು ಬಯಲಿಗಿಡುವ ತೀರಾ ಭಾವುಕಸ್ವರೂಪದ ಪ್ರಕ್ರಿಯೆಗಳನ್ನು ಹೊಂದಿತ್ತು.

ಹಾಗಾದರೆ ಕಾದಂಬರಿಯ ಜೊತೆಗೆ ನೃತ್ಯದ ಸಂಬಂಧವನ್ನು ಹುಡುಕಹೊರಟರೆ ಆಗುವ ಲಾಭಗಳೇನು? ನೃತ್ಯದ ಪರಿಸರಕ್ಕೆ ಇದು ಎಷ್ಟು ಪೂರಕ ಅಮತ್ತು ಅನುಕೂಲ?-ಉತ್ತರ ಕಂಡುಕೊಳ್ಳೋಣ. ಬನ್ನಿ.

ನೃತ್ಯ ಎಂಬುದು ಕೇವಲ ಸಾಂಸ್ಕೃತಿಕ ವಿವೇಚನೆ ಅಥವಾ ಸಂಸ್ಕೃತಿ ಮಾತ್ರವಲ್ಲ; ಸಾಮಾಜಿಕವಾಗಿ ಜನಾಂಗದ ಗುಣದೋಷ- ಮನೋಧsರ್ಮ-ಕಾರ್ಯ-ಕರ್ಮ-ನಾಗರೀಕತೆಯನ್ನು ಅಳೆಯುವ ಒಂದು ಮಾಪಕ. ನೃತ್ಯವೆಂಬುದು ಶಾಸ್ತ್ರೀಯ ಮನ್ನಣೆಯನ್ನು ಪಡೆದದ್ದೇ ಆಗಿರಲಿ ಅಥವಾ ಜಾನಪದವೆಂದು ನಂಬಿದ ದೇಶೀ ನೃತ್ಯಗಳೇ ಆಗಿರಲಿ, ಅದು ಆಯಾಯ ಪ್ರಾದೇಶಿಕ ವ್ಯಾಪ್ತಿ, ನೆಲೆ-ಹಿನ್ನೆಲೆ-ವಿಸ್ತಾರ- ಮನಸ್ಥಿತಿಯನ್ನು ಹೊರಗೆಡಹುತ್ತದೆ.

ಹಾಗಾಗಿ ಸಾಹಿತ್ಯ-ಸಂಸ್ಕೃತಿ ಮತ್ತು ಸಮಾಜದ ಮನಸ್ಥಿತಿಯನ್ನು ಪ್ರತಿನಿಧಿಸುವ ಕಾದಂಬರಿ ಮತ್ತು ನೃತ್ಯ ಇವೆರಡನ್ನೂ ಒಟ್ಟಾಗಿ ನೋಡಿದರೆ ಆಯಾಯ ಕಾಲಘಟ್ಟದ ಕಲ್ಪನೆ, ಜನಜೀವನ ಮಾದರಿಗಳನ್ನು ಸೂಕ್ಷ್ಮವಾಗಿ ಗಮನಿಸಬಹುದು. ಕನ್ನಡದ ಭಾಷಾ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ, ಬೆಳವಣಿಗೆಯ ದೃಷ್ಟಿಯಿಂದ ಕನ್ನಡ ಕಾದಂಬರಿಗಳಲ್ಲಿ ನೃತ್ಯದ ದುಡಿಮೆಯ ಕುರಿತ ವಿಶ್ಲೇಷಣೆ ಮಾಡುವುದರಿಂದ ಸಾಹಿತ್ಯ ಕಲೆಯ ಬಗ್ಗೆ ಪ್ರತಿಕ್ರಿಯಿಸಿದ ಸಂದರ್ಭಗಳು ಸ್ಪಷ್ಟವಾಗುತ್ತವೆ. ಜೊತೆಗೆ ನೃತ್ಯವೂ ಕೂಡ ಅರಿತು ಅಳವಡಿಸಿಕೊಳ್ಳಬೇಕಾದ ಸೂಕ್ಷ್ಮ, ಮಾರ್ಪಾಡು, ವ್ಯವಸ್ಥೆಯನ್ನು ತಿಳಿದಂತಾಗುತ್ತದೆ.

ಆದರೆ ಉಳಿದ ಕಾದಂಬರಿಗಳಿಗೆ ಹೋಲಿಸುವುದಾದರೆ ನೃತ್ಯವನ್ನೇ ಪ್ರಧಾನವಾಗಿ ಚಿತ್ರಿಸಿದ ಕನ್ನಡ ಕಾದಂಬರಿಗಳ ಸಂಖ್ಯೆ ತೀರಾ ಕಡಿಮೆಯಿದೆ. ಐತಿಹಾಸಿಕ ಚಿತ್ರಣ ನೀಡುವ ನೃತ್ಯದ ಕಾದಂಬರಿಗಳು ಹೊಯ್ಸಳ ರಾಣಿ ನಾಟ್ಯಸರಸ್ವತಿ ಶಾಂತಲೆಯನ್ನೇ ಮುಖ್ಯ ವಸ್ತುವಾಗಿಸಿ ಕೆ. ವಿ. ಅಯ್ಯರ್, ಮ.ನ.ಮೂರ್ತಿ, ಸಿ.ಕೆ.ನಾಗರಾಜರಾವ್, ಸಂಧ್ಯಾಶರ್ಮ ಅವರಿಂದ ಬರೆಯಲ್ಪಟ್ಟಿವೆ. ಇದನ್ನು ಹೊರತುಪಡಿಸಿದರೆ ದೇವುಡು ಅವರ ವಿಜಯನಗರದ ರಾಣಿಯ ಕುರಿತಾದ ಚಿನ್ನಾ ಮಾತ್ರ ಕನ್ನಡದ್ದೇ ಆದ ಮತ್ತೊಂದು ಐತಿಹಾಸಿಕ ಕಾದಂಬರಿಯಾಗಿದೆ. ಉಳಿದಂತೆ ತ.ರಾ.ಸು ಅವರ ಹಂಸಗೀತೆ ಕಾದಂಬರಿಯಲ್ಲಿ ನೃತ್ಯದ ಪ್ರಸ್ತಾಪವಿದೆಯಾದರೂ ಅಲ್ಲಿನ ಪ್ರಧಾನ ಮನೋಧರ್ಮ ಸಂಗೀತವಾಗಿದೆ. ಎಂ.ಕೆ ಇಂದಿರಾ ಅವರ ಗೆಜ್ಜೆಪೂಜೆ ಕಾದಂಬರಿಯು ದೇವದಾಸಿಯೊಬ್ಬಳ ಮಗಳ ತಳಮಳ, ತಲ್ಲಣ, ಜೀವನಧರ್ಮ, ಪರಿಹಾರೋಪಾಯಗಳನ್ನು ಚಿತ್ರಿಸಿದೆಯೇ ಹೊರತು ನೃತ್ಯದ ವಾತಾವರಣದ ಚಿತ್ರಣವನ್ನೇ ಪ್ರಧಾನ ವಸ್ತುವಾಗಿಸಿಲ್ಲ. ವಿಶೇಷವೆಂದರೆ ಇವೆರಡು ಮಾತ್ರ ಚಲನಚಿತ್ರಗಳಾಗಿ ಹೊರಬಂದಿವೆ.

ಡಾ. ಶಿವರಾಮ ಕಾರಂತರ ಮೊಗ ಪಡೆದ ಮನ

ಡಾ. ಶಿವರಾಮ ಕಾರಂತರ ಈ ಕಾದಂಬರಿಯನ್ನು ಪ್ರಧಾನ ವಿಶ್ಲೇಷಣೆಗೆ ಬಳಸಿಕೊಂಡಿಲ್ಲ. ಕಾರಣ ಅವರ ಮತ್ತೊಂದು ಕಾದಂಬರಿಯನ್ನು ನೃತ್ಯವಸ್ತುವಿನ ಬಳಕೆಯ ಹಿನ್ನೆಲೆಯಲ್ಲಿ ಕೈಗೆತ್ತಿಕೊಂಡಿರುವುದ್. ಮತ್ತು ೬೦ ನೇ ದಶಕದಲ್ಲಿ ಬಂದಿರುವ ಕಾದಂಬರಿಯಾಗಿರುವುದರಿಂದ ದಶಕಗಳ ಪ್ರಾತ್ನಿಧ್ಯದ ಹಿನ್ನೆಲೆಯಲ್ಲಿ ಮೊಗ ಪಡೆದ ಮನವನ್ನು ಕೈಬಿಟ್ಟಿರುವುದು. ಆದರೂ ಕಾದಂಬರಿಯ ಒಟ್ಟು ಆಶಯದ ಹಿನ್ನೆಲೆಯಲ್ಲಿ ಮುಖ್ಯ ಅಭಿಪ್ರಾಯವೊಂದನ್ನು ನೀಡಲಾಗಿದೆ.

ಈ ಕಾದಂಬರಿಯು ನೃತ್ಯವನ್ನು, ಪುರುಷ ನರ್ತಕರನ್ನೂ ವಸ್ತುವಾಗಿರಿಸಿಕೊಂಡ ಕಾದಂಬರಿ. ಈ ಕಾದಂಬರಿಯ ಕುರಿತಾಗಿ ವಿ.ಎಂ. ಇನಾಂದಾರ್ ಅವರು ಹೇಳಿರುವ ಮಾತುಗಳು ಉಲ್ಲೇಖನೀಯ.

ಇದು ನರ್ತಕನ ಬೆಳವಣಿಗೆಯ, ಆತನ ಅಂತರಂಗ ವಿಕಾಸಗೊಂಡಂತೆ ತನಗನಿಸಿದ್ದನ್ನು ವ್ಯಕ್ತಪಡಿಸಬೇಕಾದ, ರೂಪಿಸಿಕೊಳ್ಳಬೇಕಾದ ಹೊಸ ನೃತ್ಯ ವಿಧಾನಗಳ ಕಥೆ. ತನ್ನ ಪ್ರಯತ್ನದಿಂದಾಗಿ, ಎದುರಿಸಬೇಕಾದ ಸನ್ನಿವೇಶಗಳ ಫಲವಾಗಿ, ಪಡೆದ ಅನುಭವಗಳ ಪರಿಣಾಮವಾಗಿ ಆತನ ಸಂವೇದನಾಶೀಲತೆ ಹೊಸದಾರಿಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ. ಸಂಪ್ರದಾಯದ ನೃತ್ಯಪದ್ಧತಿಗಳಿಗೆ ಹೊಂದದಿದ್ದರೂ ವ್ಯಕ್ತಪಡಿಸಬೇಕೆಂದ ಭಾವನೆಗಳಿಗೆ ಸಮರ್ಥವಾಗಿ ಹೊಸರೂಪ ಕೊಡಬಲ್ಲ ನೃತ್ಯವಿಧಾನಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ನೃತ್ಯದ ಮೂಲಕ ಪಡೆಯಬಹುದಾದ ಕಲಾನುಭೂತಿಯ ಸಫಲತೆಗಾಗಿ ಆತ ಮಾಡುವ ಪ್ರಯೋಗ-ಪ್ರಯತ್ನಗಳನ್ನು, ಅಷ್ಟಕ್ಕಾಗಿ ಪಡಬೇಕಾದ ನಷ್ಟಕಷ್ಟಗಳನ್ನು ಕಾದಂಬರಿ ವಿವರಿಸುತ್ತದೆ. ಆತನ ಕಲಾಭಿಲಾಷೆಯ ಪ್ರಾಮಾಣಿಕತೆ ವ್ಯಕ್ತವಾಗುತ್ತದೆ. ಅಂಥ ಪ್ರಾಮಾಣಿಕತೆಗಾಗಿಯೇ ಸವಾಲಿನಂತೆ ಹೊರಜಗತ್ತಿನಲ್ಲಿಯ, ಅದರಲ್ಲಿಯೂ ವಿಶೇಷವಾಗಿ ನೃತ್ಯ ವ್ಯವಸಾಯದಲ್ಲಿಯ ಅನುಭವಗಳನ್ನು ಎದುರಿಸಬೇಕಾಗುತ್ತದೆ. ಭಾವಜೀವನಕ್ಕೆ ಹಾಗೆಯೇ ಆರ್ಥಿಕ ವಿಷಯಗಳಿಗೂ ಸಂಬಂಧಿಸಿದಂತೆ ಎದುರಿಸಬೇಕಾದ ಸಮಸ್ಯೆಗಳು ಆತನ ಅನುಭವಗಳನ್ನು ಆಳವಾಗಿಸುತ್ತದೆ; ಸಂವೇದನಾಶಕ್ತಿಯನ್ನು ತೀವ್ರವಾಗಿಸುತ್ತದೆ; ಬದುಕಿನ ಚೆಲುವನ್ನು, ಕಷ್ಟಗಳನ್ನು ನೇರವಾಗಿ ಅನುಭವಿಸಿ ನೃತ್ಯಮಾಧ್ಯಮದಲ್ಲಿ ಅದನ್ನು ಸಮರ್ಪಕವಾಗಿ ವ್ಯಕ್ತಪಡಿಸುವ ಪ್ರಯತ್ನದಲ್ಲಿ ತೊಡಗುತ್ತದೆ. ಕಲೆಯನ್ನು ಕುರಿತ ನಿಷ್ಠೆ-ನಂಬಿಕೆಗಳ ವಿಚಾರದಲ್ಲಿ ಕಾದಂಬರಿಯ ಕೇಂದ್ರ ಪಾತ್ರವಾದ ವ್ಯಾಸ ಅಭಿಪ್ರಾಯಗಳನ್ನು ಪ್ರತಿಧ್ವನಿಸುತ್ತ್ತಾನೆ. ಎಲ್ಲಿಯವರೆವಿಗೆ ಕಲಾವಿದ ತನ್ನ ಸ್ವಂತದ ಅನುಭವಗಳನ್ನು ವ್ಯಕ್ತಪಡಿಸುವ ಪ್ರಯತ್ನ ಮಾಡುವುದಿಲ್ಲವೋ, ಎಲ್ಲಿಯವರೆವಿಗೆ ಅಂಥ ಅಭಿವ್ಯಕ್ತಿಗಾಗಿ ಹೊಸ ವಿಧಾನಗಳನ್ನು ಹುಡುಕಿ ರೂಪಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆವಿಗೆ ಆತನ ಕಲೆ ಪರಿಣಾಮಕಾರಿಯಾಗಲಾರದು. ಹೆಚ್ಚೆಂದರೆ ತನಗಿಂತ ಮೊದಲಿನವರ ಸಾಧನೆಯನ್ನು ಅದು ಅನುಕರಿಸಬಹುದು. ವ್ಯಕ್ತಪಡಿಸಬೇಕೆಂದ ಭಾವದ ಆಂತರ್ಯ, ಅದರ ಗುಣವಿಶೇಷ ನೃತ್ಯದ ರೀತಿಯನ್ನು ಅದು ಬಳಸಬೇಕಾದ ತರಂಗಗತಿಯನ್ನು ನಿರ್ಧರಿಸಬೇಕು……..ವ್ಯಾಸ ನಡೆಸುವ ಹೋರಾಟ ಇಂತ ಅಡೆತಡೆಗಳಿಗೆ ಎದುರಾಗಿ. ಕಾದಂಬರಿಯುದ್ದಕ್ಕೂ ಪ್ರಯೋಗ-ಪ್ರಯತ್ನಗಳ ಕಥೆಯೇ ಬರುತ್ತದೆ. ಇದು ಆದಶ ನರ್ತಕನ ವಿಕಾಸದ ಚಿತ್ರೀಕರಣ.

ಡಾ. ಶಿವರಾಮ ಕಾರಂತರ ಒಂಟಿದನಿ (೧೯೬೬)

ಈ ಕಾದಂಬರಿಯಲ್ಲಿ ನೃತ್ಯವು ಪ್ರಧಾನ ವಸ್ತುವೆಂದು ಮೊದಲ್ನೋಟಕ್ಕೆ ಕಂಡರೂ; ಕಾದಂಬರಿಕಾರರು ತಮ್ಮ ರಾಜಕೀಯ-ರಾಷ್ಟ್ರೀಯ-ಸಾಂಸ್ಕೃತಿಕ-ಪತ್ರಿಕಾ-ಸಾಹಿತ್ಯಿಕ ಮುಂತಾಗಿ ತಮ್ಮ ಸೈದ್ಧಾಂತಿಕ ನೆಲೆಗಟ್ಟನ್ನು, ವಿಚಾರಧರ್ಮವನ್ನು ಪ್ರಸ್ತುತಪಡಿಸಲು ಕಾದಂಬರಿಯನ್ನು ಮಾಧ್ಯಮವಾಗಿಟ್ಟುಕೊಂಡಿದ್ದಾರೆ. ಆದ್ದರಿಂದ ಇಡೀ ಕಾದಂಬರಿಯು ಮುಂಬಯಿಯಂತಹ ಮೆಟ್ರೋಪಾಲಿಟನ್ ನಗರದಲ್ಲಿ ಕಲೆಯನ್ನು ಪತ್ರಿಕೆಗಳು ನೋಡಬೇಕಾದ ದೃಷ್ಟಿಕೋನ, ವಸ್ತುನಿಷ್ಟ ಪತ್ರಿಕೆ ಲೋನ್ ವಾಯ್ಸ್( ಒಂಟಿ ದನಿ)ಯ ಏಳುಬೀಳು, ಸಿಟಿ ವಾಯ್ಸ್ ಪತ್ರಿಕೆಯ ಮೂಲಕವಾಗಿ ಇಂದಿನ ವಿಮರ್ಶೆಯ ಹಾದಿ, ಪತ್ರಕರ್ತನ ನಿಲುವು, ವಿಮರ್ಶೆಯ ಮಟ್ಟ, ಪತ್ರಿಕಾ ಮಾಧ್ಯಮದ ಬೆನ್ನು ಹಿಡಿಯುವ ಕಲಾವಿದರ ದೃಷ್ಟಿಕೋನದ ಕುರಿತು ಸುತ್ತುತ್ತಾ ಹೋಗುತ್ತದೆ. ವಿ.ಎಂ. ಇನಾಂದಾರ್ ಅವರು ಉಲ್ಲೇಖಿಸುವಂತೆ ಒಂಟಿದನಿಯು ಕಾದಂಬರಿ ಎನ್ನುವ ದೃಷ್ಟಿಯಿಂದ ವಿಫಲ ಪ್ರಯತ್ನ. ಅದು ಕಾದಂಬರಿ ಎನ್ನುವುದಕ್ಕಿಂತ ಒಂದು ಚರ್ಚೆ. ಪಾತ್ರಗಳಿವೆ, ಕೆಲಮಟ್ಟಿಗೆ ಕಥೆಯೂ ಇದೆ. ಆದರೆ ಅವೆರಡಕ್ಕಿಂತಲೂ ವಿಚಾರಗಳ ನಿವೇದನೆಯೇ ಲೇಖಕರಿಗೆ ಮುಖ್ಯವಾಗಿದೆ. ಇದನ್ನು ಕಾರಂತರು ಅಲ್ಲಗಳೆಯುವುದಿಲ್ಲ. ಅವರ ಪ್ರಕಾರ ಕಾದಂಬರಿಯು ವಿಚಾರಗಳ ಸುತ್ತ ಬೆಳೆದು ನಿಂತಿದೆ. ಕೆಲವೊಂದೆಡೆ ವಿಚಾರಗಳನ್ನು ವಿಷದಪಡಿಸಲೆಂದೇ ಇದೆ.

ಕಾದಂಬರಿಯ ಪಾತ್ರಗಳು ಮನೋಭಾವದ ಪ್ರತೀಕಗಳಾಗಿ ಕೆಲಸ ಮಾಡಬೇಕಾದಲ್ಲಿ ಕಾದಂಬರಿಯಲ್ಲಿ ಚಿತ್ರಿತವಾದ ಸಂಗತಿಗಳು ಆ ಮನೋಭಾವದ ಮೇಲೆ ಬರೀ ಬೆಳಕು ಚೆಲ್ಲಿದರೆ ಸಾಲದು; ಆ ಮನೋಭಾವದ ಪೂರ್ಣತೆ ಅಥವಾ ಅಸಂಪೂರ್ಣತೆಗಳನ್ನು ವಿಶ್ಲೇಷಿಸುವ ಸಾಧನಗಳಾಗಬೇಕು. ಜೊತೆಗೇ ಆ ಸಂಗತಿಗಳೆಲ್ಲಾ ಇಂತಹ ವಿಶ್ಲೇಷಣೆಗೆ ಅವಶ್ಯಕವೇ ಎಂದು ಓದುಗ ಕೇಳದ ರೀತಿಯಲ್ಲಿ ಬರಬೇಕು. ಇಲ್ಲದಿದ್ದರೆ ಸಂಗತಿಗಳೇ ಮುಖ್ಯವಾಗಿ ಕತೆಯ ವಸ್ತುವಿನ ಮೇಲೆ ಗಮನ ಕೇಂದ್ರೀಕೃತವಾಗಲು ಸಾಧ್ಯವಾಗುವುದಿಲ್ಲ. ಇದೇ ಮಾತನ್ನು ‘’ಒಂಟಿದನಿಯ ಉದ್ದಕ್ಕೂ ಬಂದ ತಾತ್ವಿಕ ಮಟ್ಟದ ಸಂಭಾಷಣೆಗಳ ಬಗೆಗೂ ಹೇಳಬಹುದು. ಬಹುಷಃ ಕೆಲವೇ ಸಂಗತಿಗಳನ್ನು ಆಯ್ದುಕೊಂಡು ಅವಕ್ಕೆ ವಿವಿಧ ಮನೋಭಾವಗಳನ್ನು ಸಂಕೇತಿಸುವ ಪಾತ್ರಗಳ ಪ್ರತಿಕ್ರಿಯೆಗಳನ್ನು ಚಿತ್ರಿಸಿದ್ದರೆ ಕಾದಂಬರಿಯ ಕಲೆ ಹೆಚ್ಚು ಸಫಲವಾಗುತ್ತಿತ್ತೋ ಏನೋ ಎಂದು ಕಾದಂಬರಿಯ ನೆಲೆಯನ್ನು ವಿಶ್ಲೇಷಿಸಿದ್ದಾರೆ ಎಂ.ಜಿ ಕೃಷ್ಣಮೂರ್ತಿ.

ಈ ಹಿನ್ನಲೆಯಲ್ಲಿ ಕಾದಂಬರಿಯ ಪ್ರಮುಖ ವಸ್ತು ಪತ್ರಿಕೆ ಮತ್ತು ಬರೆವಣಿಗೆಯ ಮೇಲೆ ಕೇಂದ್ರೀಕೃತವಾಗಿ ಅದಕ್ಕೆ ಪೂರಕವಾದ ಘಟನಾವಳಿಗಳ ನಿರೂಪಣೆಗೆ ಮಾತ್ರ ನೃತ್ಯ ಒಂದು ವಸ್ತುವಾಗುತ್ತದೆ. ಪ್ರಾರಂಭದ ನಾಲ್ಕು ಅಧ್ಯಾಯಗಳಲ್ಲಿ ನೃತ್ಯವೇ ಪ್ರಧಾನವೆಂದು ಕಂಡರೂ ಹಲವು ವ್ಯಕ್ತಿತ್ವಗಳ ಸುತ್ತ ಕಥೆ ತಿರುಗುವ ಕಾರಣ ವಿಷಯ ಪಲ್ಲಟವಾಗಿ ಪುನಃ ನೃತ್ಯ ಸಂಬಂಧೀ ವಿಚಾರಗಳ ನಿರೂಪಣೆ ೮ನೇ ಅಧ್ಯಾಯದಲ್ಲಿ ಪ್ರತ್ಯಕ್ಷವಾಗಿ ತೆರೆದುಕೊಳ್ಳುತ್ತದೆ. ಉದಾಹರಣೆಗೆ : ವಿಮರ್ಶೆಯನ್ನು ಬರೆಯುವವರ ಲೋಪದೋಷಗಳನ್ನು ಪ್ರತಿಬಿಂಬಿಸಲು ನೃತ್ಯದ ಗುಣ-ಹುಳುಕುಗಳನ್ನು ಆಧಾರವಾಗಿಸಲಾಗಿದೆ. ಕಾದಂಬರಿಯಲ್ಲಿ ಕಲೆಯ ಕುರಿತಂತೆ ಪ್ರಸ್ತಾಪವಾದಾಗಲೆಲ್ಲಾ ನೃತ್ಯ ಮತ್ತು ಅದಕ್ಕೆ ಸಂವಾದಿಯಾಗಿರುವ ಪತ್ರಿಕೆ, ಸಂಗೀತ ಮುಂತಾದ ಎಲ್ಲಾ ವಿಷಯಗಳ ಗುಣ-ದೋಷ-ಮೌಲ್ಯಗಳ ಕುರಿತು ಸಂದೇಶಗಳು ಬೌದ್ಧಿಕ ಮಟ್ಟಕ್ಕೆ ತಾಕುವಂತೆ ಚರ್ಚೆಗೆ ವಸ್ತುವಾಗುತ್ತಲೇ ಇರುತ್ತದೆ.

ಆದ್ದರಿಂದಲೇ ಕಾದಂಬರಿಯಲ್ಲಿ ಕಥೆಯಿಲ್ಲ. ವ್ಯಕ್ತಿಗಳಿವೆ. ಅವುಗಳಿಗೆ ಸಂಬಂಧಿಸಿದ ಘಟನೆಗಳಿವೆ. ಆದರೆ ವ್ಯಕ್ತಿಗಳ ಮತ್ತು ಸಂಬಂಧಿಸಿದ ಘಟನೆಗಳ ನಡುವಿನ ಮೌನವನ್ನು ಮಾತಾಡಿಸುವ ಗೋಜಿಗೆ ಕಾರಂತರು ಹೋಗಿಲ್ಲ. ಅಂದರೆ ಲೇಖಕರಿಗೆ ವ್ಯಕ್ತಿ ಮತ್ತು ಘಟನೆಗಳನ್ನು ಬಿಟ್ಟರೆ ಬೇರೆ ಯಾವುದೂ ಅನುಭೂತವಾಗಿ ಬರುವುದಿಲ್ಲ ಎಂದಿದ್ದಾರೆ ಕೀರ್ತಿನಾಥ ಕುರ್ತಕೋಟಿ.

ಬೇರೆ ಬೇರೆ ಕಲಾಮಾಧ್ಯಮಗಳಲ್ಲಿ ವ್ಯವಸಾಯ ಮಾಡುತ್ತಾ, ಒಂದಿಲ್ಲೊಂದು ಬಗೆಯಲ್ಲಿ ಪ್ರಚಾರದಲ್ಲಿರುವ ಹಲವಾರು ವ್ಯಕ್ತಿಗಳ ಒಳಗು ಮತ್ತು ಹೊರಗುಗಳಲ್ಲಿರುವ ಅಂತರವನ್ನು ಬಿಂಬಿಸುವ ಕಾದಂಬರಿ ಒಂಟಿದನಿ. ತಂತಮ್ಮ ಕ್ಷೇತ್ರಗಳಲ್ಲಿ ದುಡಿಯುವಾಗ ಪ್ರಾಮಾಣಿಕವಾಗಿ ತಮಗೆ ಅನಿಸಿದ್ದನ್ನು ಇತರರಿಗೆ ಬರಹದ ಮೂಲಕವಾಗಲಿ; ನೃತ್ಯ, ಸಂಗೀತದ ಮೂಲಕವಾಗಲೀ ತಿಳಿಯಪಡಿಸುವ ಬಯಕೆಗಿಂತ ಲೋಕ ತನ್ನನ್ನು ಕಾಣಬೇಕು, ಕೇಳಬೇಕು ಎಂಬ ಪ್ರಚಾರಪ್ರಿಯತೆಯೇ ಈ ಕಾದಂಬರಿಯ ಹಲವು ಮುಖ್ಯ ಪಾತ್ರಗಳ ಧ್ಯೇಯಧೋರಣೆಗಳಾಗಿರುತ್ತವೆ  ಎಂದಿದ್ದಾರೆ ಮಾಲಿನಿ ಮಲ್ಯ.

ಈ ಕಾದಂಬರಿಯಲ್ಲಿ ಚರ್ಚೆಗೆ ಬರುವ ವಿಷಯಗಳು ಕೆಳಕಂಡಂತಿವೆ.

ಕಲಾವಿದರ ಮನೋಧರ್ಮ, ಪತ್ರಕರ್ತನ ಕರ್ತವ್ಯ,

ಹೊಸ- ಮತ್ತು ಹಳೆ ಬರೆವಣಿಗೆಗಾರರ ನಡುವಿನ ಅಂತರ,

ಪ್ರಸಿದ್ಧಿ v/s ಪಾಂಡಿತ್ಯದ ನಡುವಿನ ಸೂಕ್ಷ್ಮರೇಖೆ, ಅದಕ್ಕೆ ಜನಸಾಮಾನ್ಯರು ಸ್ಪಂದಿಸುವ ರೀತಿ,

ಕಲಾವಿದರು ಹೊಗಳಿಕೆ, ಪ್ರಸಿದ್ಧಿಗೆ ಮಾಡುವ ಮಂತ್ರಾಲೋಚನೆ,

ಮುಂಬೈಯಂತಹ ಮೆಟ್ರೋಪಾಲಿಟನ್ ನಗರದ ಕಲಾಸಂಸ್ಕೃತಿ, ನೃತ್ಯದ ಸವಾಲು-ಸಮಸ್ಯೆ, ವರ್ಣನೆ,

ಕಲಾವಿಮರ್ಶಕರ ಆಸಕ್ತಿ-ಒಡಕು-ಅಸೂಯೆ, ಒಳಹುಳುಕುಗಳು ಮತ್ತು ಧಾರ್ಷ್ಟ್ಯ

ಕಲಾವಿಮರ್ಶೆಯ ಅತಿರಂಜಿತ ಮಾತುಗಳು, ಕ್ಲೀಷೆಗಳು, ವರದಿಗಳ ಅತಿರಂಜಕತೆ,

ವಸ್ತುನಿಷ್ಠ ವಿಮರ್ಶೆ v/s ವ್ಯಕ್ತಿನಿಷ್ಠ ವಿಮರ್ಶೆ,

ವಿಮರ್ಶೆಯ ಅಗತ್ಯ ಮತ್ತು ಕಲಾವಿದರ ನಿರೀಕ್ಷೆಗಳು,

ನಿಜವಾದ ಕಲೆಗೆ ಮಾರಕವಾಗುವ ಪ್ರಸಿದ್ಧಿಯ ಹಂಬಲ, ಪ್ರಚಾರ ತಂತ್ರಗಳು,

ಕಲಾವಿದರನ್ನೂ ಒಳಗೊಂಡಂತೆ ಕಲೆಯಲ್ಲಿರುವ ವಿವಿಧ ವಲಯಗಳ ಜನರ ಚಪಲತೆ ಹಾಗೂ ತೆವಲುಗಳು,

ನೃತ್ಯಕಲೆಯ ಚಮತ್ಕಾರಿಕೆ ಮತ್ತು ಕಲಾದೃಷ್ಟಿ, ಫ್ಯಾಶನ್ ಆಗಿ ಪರಿವರ್ತಿತವಾದ ನೃತ್ಯ,

ವಿದ್ವಾಂಸರು ಮತ್ತು ಜನರ ಕಲಾಸ್ವಾದನೆಯ ವಿವಿಧ ಹಂತಗಳು, ಪೋಷಕರ ಒತ್ತಾಯಗಳು,

ಕಲಾವಿದೆಯಾಗುವಲ್ಲಿ ಇರಬೇಕಾದ ಚಾಣಾಕ್ಷತೆ, ವ್ಯವಹಾರ ಪ್ರಜ್ಞೆ,

ನೃತ್ಯಸಂಗೀತ ಮತ್ತು ಶುದ್ಧ ಸಂಗೀತ ಗಾಯನದ ವಿವೇಚನೆ,

ಕಲೆ ಮತ್ತು ಅಧ್ಯಾತ್ಮ, ಲೌಕಿಕ ಶೃಂಗಾರ v/s ಅಲೌಕಿಕ ಶೃಂಗಾರ,

ವಿದೇಶಿಯರು ಭಾರತೀಯ ನೃತ್ಯ ಕಲಿತರೆ ಆಗುವ ತೊಂದರೆ ಮತ್ತು ಪ್ರಯೋಜನಗಳು

ದುಡ್ಡಿಗಾಗಿ ಪಾಠ ಹೇಳುವ ಶಿಕ್ಷಕರು v/s ಅಕಾಡೆಮಿಕ್ ಶಿಸ್ತುಗಳು,

ಭಾರತ ಮತ್ತು ಹೊರದೇಶಗಳಲ್ಲಿ ನೃತ್ಯ ಪ್ರದರ್ಶನಗಳ ಲೆಕ್ಕಾಚಾರ ಮತ್ತು ಕಲಾಜಗತ್ತಿನ ವ್ಯತ್ಯಾಸ,

ನೃತ್ಯ ಪ್ರದರ್ಶನದ ಮುಕ್ತ ಪರಿಕಲ್ಪನೆ, ಮಡಿವಂತಿಕೆ v/s ಆಧುನಿಕ ಪ್ರಜ್ಞೆ,

ಕಲ್ಪನಾರಹಿತ ಪಾಂಡಿತ್ಯದ ಅಪಾಯ ಮತ್ತು ಕಲೆ-ಕಲಾವಿದರಿಗೆ ಇರಬೇಕಾದ ಅಪೇಕ್ಷಣೀಯ ಅಂಶಗಳು

ನರ್ತಕಿಯ ಅಪೇಕ್ಷೆ, ಸೌಂದರ್ಯಾಕಾಂಕ್ಷೆ, ಆರೋಗ್ಯದ ಮಹತ್ವ,

ಶುದ್ಧ ನೃತ್ಯಕಲೆ v/s ಜಿಮ್ನಾಸ್ಟಿಕ್ ನೃತ್ಯ ಮುಂತಾದ ನೃತ್ಯಸಂಬಂಧೀ ವಾದ-ವಿವಾದಗಳನ್ನೂ, ವ್ಯಾಖ್ಯಾನಗಳನ್ನೂ ಕಾದಂಬರಿಯ ಚೌಕಟ್ಟಿನಲ್ಲಿ ಪಾತ್ರಗಳ ಮಾತುಗಳಲ್ಲಿ ನೇರವಾಗಿ ತರಲಾಗಿದೆ.

ಹೀಗಾಗಿ ನೃತ್ಯ ಮತ್ತು ಅದರ ವಿಭಿನ್ನ ಪರಿಭಾಷೆಗಳು, ನರ್ತಕರ ನಡವಳಿಕೆಗಳು ತಾನಾಗಿ ಕಾದಂಬರಿಯಲ್ಲಿ ವ್ಯಕ್ತವಾಗುವುದಕ್ಕಿಂತ ಹೆಚ್ಚಾಗಿ ಪಾತ್ರಗಳ ಸಂಭಾಷಣೆಯಲ್ಲೇ ಮುಖಾಮುಖಿಯಾಗುತ್ತದೆ. ಕಾದಂಬರಿಯು ನೃತ್ಯಕಲೆಯ ಕುರಿತಾಗಿ ಓದುಗನ ಮಾನಸಿಕ ತುಮುಲಗಳಿಗೆ ಉತ್ತರವಾಗುತ್ತಾ ಬುದ್ಧಿಪ್ರಚೋದಕವಾಗಿ ನೃತ್ಯಕಲೆಯ ಅಂತರಂಗವನ್ನು ನೇರವಾಗಿ ಕಾಣಿಸಿಕೊಡುತ್ತದೆ. ಆದರೆ ಓದುಗನ ಮಾನಸಿಕ ಮಂಥನಕ್ಕೆ ಪೂರಕವಾಗುವ ಪರೋಕ್ಷ ತಂತ್ರದ ಮೂಲಕ ಕಥೆಯನ್ನು ಹೇಳುವ ತಂತ್ರ ನಿರೂಪಿತವಾಗುವುದಿಲ್ಲ. ಇವೆಲ್ಲದರಿಂದ ಕಾದಂಬರಿಯ ಕಥಾತಂತ್ರವನ್ನು ಗಮನಿಸಿದರೆ ನೃತ್ಯವು ಪ್ರಧಾನ ವಸ್ತುವಾದರೂ ; ಅದೇ ಆಗಿ ಉಳಿಯದೇ ಹೋಗುತ್ತದೆ. ವಿವಿಧ ಸೈದ್ಧಾಂತಿಕ ಆಲೋಚನೆಗಳನ್ನು ವಿನಿಮಯ ಮಾಡಲು ಕಾದಂಬರಿಯನ್ನು ವೇದಿಕೆಯಾಗಿ ಬಳಸಿರುವ ವಿಷಯ ಇದರಿಂದ ಸುಸ್ಪಷ್ಟವಾಗುತ್ತದೆ.    

ಒಂಟಿದನಿ ಕಾದಂಬರಿಯು ೫ ದಶಕಗಳ ಹಿಂದಿನ ನೃತ್ಯ ವಾತಾವರಣ ಮತ್ತು ಜನಜೀವನವನ್ನು ಬಿಂಬಿಸುತ್ತಿದೆ. ಆದರೆ ಅದು ಹೇಳುವ ವಸ್ತುಸ್ಥಿತಿ ಇಂದಿಗಿಂತ ಹೊರತಾದುದೇನಲ್ಲ. ಈ ನಿಟ್ಟಿನಲ್ಲಿ ಕಲೆ ಮತ್ತು ಕಲೆಯ ಅಪಸವ್ಯಗಳನ್ನು ಹೇಳುವಲ್ಲಿ ಕಾದಂಬರಿಯು ಯಶಸ್ವಿಯಾಗಿದೆ; ಮಡಿವಂತಿಕೆ v/s ಆಧುನಿಕ ಪ್ರಜ್ಞೆ ನಿಯಮಗಳನ್ನು ಸಮೀಕರಿಸುತ್ತಾ ಶಿವರಾಮ ಕಾರಂತರು ಕಲೆಯ ದೃಷ್ಟಿಯಿಂದ ಇವೆರಡರ ಔಚಿತ್ಯಪೂರ್ಣವಾದ ಮಿಲನದ ದಾರಿಯನ್ನು ನೃತ್ಯ ಜಗತ್ತು ಮಾಡಿಕೊಳ್ಳಬೇಕೆಂದು ಹೇಳುತ್ತಾರೆ.

ಈ ಕಾದಂಬರಿಯ ಪ್ರಧಾನವಾದ ನೃತ್ಯಪಾತ್ರ ಕಲಾವಿದೆ ನಯನತಾರೆಯದ್ದು. ಈ ಪಾತ್ರವು ಪ್ರಾರಂಭಕ್ಕೆ ಶಾಸ್ತ್ರದ ಔಚಿತ್ಯ ಕಂಡುಕೊಳ್ಳದೆ ಆಧುನಿಕ ಬೆಡಗನ್ನೇ ಉದ್ದೇಶವಾಗಿಟ್ಟುಕೊಂಡದ್ದು. ಆದರೆ ಈ ಪಾತ್ರವು ಕಾದಂಬರಿಯ ಆರಂಭದಲ್ಲಿ ಆಧುನಿಕ ಪ್ರಜ್ಞೆಯ ದೋಷಗಳನ್ನು ಬಿಂಬಿಸಿದರೂ ; ಉತ್ತರಾರ್ಧದಲ್ಲಿ ಆಧುನಿಕ ಪ್ರಜ್ಞೆಯನ್ನು ಹೊಂದಿಯೂ ಶಾಸ್ತ್ರಸಂಪತ್ತಿನ ಮೌಲ್ಯ ಮತ್ತು ಅರ್ಥಪೂರ್ಣತೆಯನ್ನು ಉಳಿಸಿಕೊಳ್ಳುವಂತೆ ಕಾಣುತ್ತದೆ. ಭರತನಾಟ್ಯದ ಕೆಲವು ತಾಂತ್ರಿಕ ವಿವರಣೆಗಳು, ಉಳಿದ ನೃತ್ಯ ಮಾಧ್ಯಮಕ್ಕಿರುವ ಪುಟ್ಟ ಪುಟ್ಟ ವ್ಯತ್ಯಾಸಗಳು ಮತ್ತು ಪ್ರದರ್ಶನದ ವಿವರಣೆಗಳ ದಾಖಲೆಯೂ ಪ್ರಥಮಾರ್ಧದಲ್ಲೇ ಇದೆ. ಉಳಿದಂತೆ ನೃತ್ಯ ಜಗತ್ತನ್ನು ಹೊಂದಿಕೊಂಡಂತಿರುವ ಪೋಷಕರು, ಗುರುಗಳು, ಕಲಿಕೆಯ ಶಿಸ್ತುಗಳನ್ನು ದ್ವಿತೀಯಾರ್ಧದಲ್ಲಿ ಅಂದರೆ ಹದಿಮೂರನೇಯ ಅಧ್ಯಾಯದ ಹೊತ್ತಿಗೆ ಕಾಣಬಹುದು.

ಕಲೆಯ ಮಾಧ್ಯಮ, ಅದರ ಅಭಿವ್ಯಕ್ತಿ ಮತ್ತು ಅವುಗಳ ಹಿಂದೆ ಕೆಲಸ ಮಾಡುವ ಮನಸ್ಸಿಗೂ ಇರುವ ಸಂಬಂಧ ಯಾವ ಬಗೆಯದೆಂಬುದನ್ನು ಕಾರಂತರು ಕಾದಂಬರಿಯಲ್ಲಿ ತೋರಿಸಲು ಯತ್ನಿಸಿದ್ದಾರೆ. ಅಂದರೆ ಅಭಿವ್ಯಕ್ತಿಯ ಸಮಸ್ಯೆ ಇಲ್ಲಿ ಕಲಾತ್ಮಕವೂ ಹೌದು, ನೈತಿಕವೂ ಹೌದು. ನಯನತಾರೆ ನೈತಿಕವಾಗಿ ಹಾಳಾದ ಪಾತ್ರವೆಂಬುದು ನಿಜ. ಆದರೆ ಅಭಿವ್ಯಕ್ತಿ ಯಾಂತ್ರಿಕ ಚಟದಂತೆ ಅವಳ ಬೆನ್ನುಹತ್ತಿದೆ. ನಯನತಾರೆಯ ಕುಣಿತದಲ್ಲಿ ಜೀವನದ ಲಯವಿನ್ಯಾಸವಿಲ್ಲ. ಆದರೂ ಅವಳು ಕುಣಿತವನ್ನು ಬಿಡಲಾರಳು ಎನ್ನುತ್ತಾರೆ ಕೀರ್ತಿನಾಥ ಕುರ್ತಕೋಟಿ.

ಈ ಕಾದಂಬರಿಯಲ್ಲಿ ಕೆಲವು ವಾಸ್ತವ ಜಗತ್ತಿನ ಸತ್ಯಗಳನ್ನು ಹೇಳುವ ಮಾತುಗಳು ಕೆಳಕಂಡಂತಿದೆ.

ಚಮತ್ಕಾರವೇ ಕಲೆಯಾಗಬಾರದು; ಕಲಾವಿದನಲ್ಲಿ ಪ್ರಾಮಾಣಿಕತೆಯಿರಬೇಕು; ಅಂತರಂಗದಲ್ಲಿ ಆಧ್ಯಾತ್ಮವಿದ್ದರೆ ಮಾತ್ರ ಕುಣಿತದಲ್ಲಿ ಬಂದೀತು; ಇಂಥ ಕಲೆ ಇಂಥದೇ ಕೆಲಸ ಮಾಡಬೇಕು; ಮಾಡಬಹುದು ಎಂಬುದು ಮೊದಲು ವಿಮರ್ಶಕನಿಗೆ ತಿಳಿದಿರಬೇಕು. ಅದಕ್ಕೆ ಸಂಬಂಧಪಟ್ಟ ಸಂಪ್ರದಾಯಗಳ ಅರಿವು ಇರಬೇಕು – ಲೋನ್ ವಾಯ್ಸ್ ಸಂಪಾದಕ ಜಗನ್ನಾಥರಾಯರ ಇಂಗಿತ

ಭಾವವನ್ನು ಯಾವುದರಿಂದ ಉಂಟುಮಾಡಿದರೇನು? ಟೆಕ್ನಿಕ್ ಯಾವುದಾದರೇನು  ಎನ್ನುವ ಹಲವು ವಿತರ್ಕ-ಸಂದೇಹಗಳ ಗೂಡಾದ ಅನಂತಕೃಷ್ಣ

ನೃತ್ಯ ಗೀತಗಳೆಂದರೆ ಬೋಜುವಾ ಜನಗಳ ಆಹಾರವೇ ಸೈ. ನಮ್ಮಂತಹ ಬಡವರಿಗಂತು ಅವು ಹೇಳಿಸಿದ್ದಲ್ಲ ಎಂಬ ಅನಂತಕೃಷ್ಣನ ಗೆಳೆಯನ ಹತಾಶೆಯ ನುಡಿ

ಕಲೆ ಯಾವುದೇ ಇರಲಿ, ಒಂದು ಮಾಧ್ಯಮ ಪಾಶ್ಚಾತ್ಯದ್ದಿರಲಿ, ದೇಶೀಯವೇ ಆಗಿರಲಿ, ಅದೇ ಮಹತ್ವದ ಸಂಗತಿಯಲ್ಲ. ಅದು ಮಾಡುತ್ತಿರುವ ಕೆಲ್ಸ ಏನು? ಸಾಧಿಸುವ ರೀತಿ ಯಾವುದು ಎಂಬುದು ಮುಖ್ಯ ಎಂಬ ಪ್ರೇಕ್ಷಕ ಹೇಮಚಂದ್ರರ ನಿರ್ದಿಷ್ಟತೆ

ಒಬ್ಬೊಬ್ಬ ಕಲಾವಿಮರ್ಶಕ ಒಂದೊಂದು ರೀತಿಯಲ್ಲಿ ಹೇಳುವಾಗ ಅವರನ್ನು ಸಂತೋಷಪಡಿಸಲು ಕಲಾವಿದರು ನೇಣುಹಾಕಿಕೊಳ್ಳಬೇಕಾದೀತು. ಹೀಗಾಗಿ ಕಲಾವಿದರು ಅರಸುವುದು ವಿಮರ್ಶಕರನ್ನಲ್ಲ. ಅವರಿಗೆ ಬೇಕಾದವರು ಗಿರಾಕಿಗಳು. ಅವರಿಗೂ ಬದುಕುವುದಕ್ಕೆ ಹಣ ಬೇಕು. ಮನಸ್ಸಿನ ಉತ್ಸಾಹ ಹೆಚ್ಚಿಸುವುದಕ್ಕೆ ಸಾಕಷ್ಟು ಹೊಗಳಿಕೆಯೂ ಬೇಕು ಎನ್ನುವ ಶಾಲಿನಿಯ ವಾಸ್ತವಿಕ ದೃಷ್ಟಿಕೋನ

ಕಲಾಸಂಪಾದನೆಯ ದೃಷ್ಟಿಯಿಂದ ಭಾರತದೇಶ ಆಶಾದಾಯಕವಲ್ಲ; ಆದರೂ ನೃತ್ಯಕಲೆಯ ಶೋಕಿ ಸಾರ್ವರ್ತ್ರಿಕವಾಗಿ ಹಬ್ಬಿರುವ ಕಾರಣ ತಾನು ಆ ದೃಷ್ಟಿಯಿಂದ ಬದುಕಬಹುದೆಂಬ ನಯನತಾರೆಯ ಧೈರ್ಯ, ಜನಗಳಿಗೆ ಕಂಡದ್ದನ್ನೇ ಕಂಡರೆ ಬೇಸರ ಬರುತ್ತದೆಯಾದ್ದರಿಂದ ಆ ಬೇಸರ ತಪ್ಪಿಸುವುದಕ್ಕೆ ಅನ್ಯ ನೃತ್ಯ ಮಾಧ್ಯಮಗಳನ್ನು ಕಲಿತು ಸಾಧಿಸಬೇಕೆಂಬ ಆಕೆಯ ಹಟ, ಕಲೆಯ ಕೆಲಸ ಒಬ್ಬರ ನಿರ್ದೇಶನದಲ್ಲಿ ನಡೆಯಬೇಕೇ ಹೊರತು, ಅದು ಹಲವು ಬಾಣಸಿಗರು ಮಾಡುವ ಅಡುಗೆಯಲ್ಲ; ರಂಗಚಲನೆಯ ಕಲ್ಪನೆ ಮತ್ತು ರಂಗಸ್ಥಳದ ನಿರ್ದೇಶನದ ಕಲ್ಪನೆ ಇಲ್ಲದವರು ಕುಣಿಯಬಲ್ಲರೆ ಹೊರತು ವಿದೇಶಗಳಿಗೆ ಸ್ವಂತ ಕೀರ್ತಿಯಿಂದ ಹೋಗಲಾರರು ಎಂಬ ಆಕೆಯ ವಿಶ್ವಾಸ

ಆದರೆ ನಯನತಾರೆಯನ್ನು ಟೀಕಿಸುತ್ತಾ ಅವಳಷ್ಟಕ್ಕೆ ಬಿಟ್ಟರೆ ಮಿಶ್ರ ಭಾಷೆ ಸೃಷ್ಟಿಸಿ ಏನೇನೋ ಮಾಡುತ್ತಾಳೆ, ಶಾಸ್ತ್ರವೇ ಉಳಿಯುವ ಹಾಗಿಲ್ಲ. ಹಿನ್ನಲೆಯ ವಾದ್ಯಗೀತಗಳನ್ನು ಮೀರುವ ಅಧಿಕಾರ ಮಾರ್ಗ ಪದ್ಧತಿಯ ನೃತ್ಯಗಳಲ್ಲಿ ಯಾರಿಗೂ ಇಲ್ಲ ಎಂಬ ಹಿರಿಯ ವಾದ್ಯಕಾರರ, ಗುರುಗಳ ವಾದ

ಅದಕ್ಕೆ ತಂತ್ರಶಾಸ್ತ್ರ ಬಂದ ಮೇಲೆ ಕಲಾವಿದನು ಸ್ವತಂತ್ರ; ಅಲ್ಲಿಯ ತನಕ ಆತ ಸ್ವಾತಂತ್ರ್ಯ ವಹಿಸಬಾರದು. ಪ್ರೇಕ್ಷಕರಲ್ಲಿ ಹಸ್ತಮುದ್ರಿಕೆಗಳನ್ನು ತಿಳಿಯಬಲ್ಲವರು ಕಡಿಮೆ; ಅವರು ಕುಣಿತದಲ್ಲಿ ಕಾಣುವುದೆಂದರೆ ಹೆಜ್ಜೆಯ ಚಮತ್ಕಾರವನ್ನು. ಜನರ ಚಪ್ಪಾಳೆ ಬರುವುದೇ ಚಮತ್ಕೃತಿಗಾಗಿ; ವಿದೇಶಗಳಿಗೆ ಹೋಗುವಾಗ ಕೊರಿಯೋಗ್ರಫಿ ಬೇಕು; ಸಾಮೂಹಿಕ ನೃತ್ಯವನ್ನು ಜನರು ಮೆಚ್ಚುತ್ತಾರೆ; ಮಡಿವಂತಿಕೆಯನ್ನಿರಿಸಿಕೊಂಡರೆ ಕೆಲಸ ನಡೆಯಲಾರದು; ಹಾಗಾಗಿ ಒಟ್ಟು ಪರಿಣಾಮದ ದೃಷ್ಟಿಯಿಂದ ನೃತ್ಯಗಳನ್ನು ಹೇಗೆ ಬೇಕೆಂದರೆ ಹಾಗೆ ಬಳಸಬೇಕು ಎಂಬ ನಯನತಾರೆಯ ಸಮಜಾಯಿಷಿ

ಅದಕ್ಕೆ ತಕ್ಕಂತೆ ಆಶ್ರಯದಾತರಿಂದ ಕಲೆಗಳು ಉಳಿಯಬೇಕಾಗಿದೆಯೇ ಹೊರತು ಏನೂ ಮಾಡದೆ, ಮಾಡಿದವರನ್ನು ಟೀಕಿಸುವ ಪಂಡಿತರಿಂದಲ್ಲ ಎಂಬ ನಾಗಿನದಾಸರ ಉಪೇಕ್ಷೆ

ಕಲೆ ಅಗ್ಗವಾದಷ್ಟೂ ಅದಕ್ಕೆ ಬೆಲೆ ಶೂನ್ಯ, ಆ ಕಾರಣದಿಂದಲೇ ತನ್ನ ಕಲಾ ಸಂಪತ್ತನ್ನು ಸರ್ಪದಂತೆ ಕಾದುಕೊಂಡಿದ್ದಾಳೆ ಎಂಬ ನಯನತಾರೆಯ ಕುರಿತ ವಿಮರ್ಶಕನ ನೋಟ

ಹೀಗೆ ಕಲೆಯ ಕುರಿತ ಸನ್ನಿವೇಶಗಳುದ್ದಕ್ಕೂ ಬೌದ್ಧಿಕ ವಾದಸರಣಿಗಳು ಓದುಗನನ್ನು ಹಿಂಬಾಲಿಸುತ್ತವೆ. ಒಟ್ಟಿನಲ್ಲಿ ಶಿವರಾಮ ಕಾರಂತರು ಕಲೆಯನ್ನು ನೋಡಿದ ರೀತಿ, ಅವರ ಅನುಭವಗಳು ಇಲ್ಲಿನ ಒಂದೊಂದು ಪಾತ್ರಗಳ ಮೂಲಕವಾಗಿ ಪ್ರತ್ಯಕ್ಷವಾಗಿ ವ್ಯಕ್ತವಾಗಿದೆ.

ಆದರೆ ಕಾದಂಬರಿಯ ಪ್ರಧಾನ ಮನೋಧರ್ಮ- ಕಲೆ ಮತ್ತು ಕಲಾವಿದರ ಜೀವನ, ನಡೆವಳಿಕೆಗಳನ್ನು ಪತ್ರಿಕಾ ಮಾಧ್ಯಮ ಅಥವಾ ಪತ್ರಕರ್ತರ ಮುಖಾಂತರ ನೋಡುವುದು ಮಾತ್ರ. ಕಾದಂಬರಿಯಲ್ಲಿ ಪಾತ್ರವಾಗಿ ಬರುವ ನೃತ್ಯ ಕಲಾವಿದೆ ನಯನತಾರೆಯ ಗುಣ, ಪ್ರಸಿದ್ಧಿಗಾಗಿ ಆಕೆ ಕೈಗೊಳ್ಳುವ ಚಾಣಾಕ್ಷ ಉಪಾಯಗಳು ಎರಡು ಪತ್ರಿಕೆಗಳ ಪತ್ರಕರ್ತರ ನಡುವೆ ಮತ್ತು ವಿಮರ್ಶಕರ ಮುಖಾಂತರ ವ್ಯಕ್ತವಾಗುತ್ತಾ ಹೋಗುತ್ತದೆ. ಈ ನೆಲೆಯಲ್ಲಿ ಕಲೆ ಮತ್ತು ಪತ್ರಿಕೆಗಳ ನಡುವಿನ ದ್ವಂದ್ವಗಳು ನೇರವಾಗಿ ಮತ್ತು ಗಮನಾರ್ಹವಾಗಿ ಕಂಡುಬಂದಿದೆ.

 ಒಂಟಿದನಿಯು ಬುದ್ಧಿಜೀವಿಗಳ ಬೌದ್ಧಿಕತೆಯೊಡನೆ ಅವರ ಜೀವನಮೌಲ್ಯಗಳನ್ನೂ ತೂಗಿ ನೊಡುವ ಕಾದಂಬರಿಯಾಗಿದೆ; ಅಲ್ಲದೆ ಕಲೆಯ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾದಂಬರಿಯ ವಸ್ತುವಿನ ಉಪಾಂಗಗಳಾಗಿ ಬಂದಿವೆ. ಈ ಕಾದಂಬರಿಯಲ್ಲಿ ಸುಸೂತ್ರವಾದ ಕಥೆಯೆನ್ನುವುದಿಲ್ಲ; ವ್ಯಕ್ತಿಗಳಿವೆ. ಅವುಗಳಿಗೆ ಸಂಬಂಧಿಸಿದ ಘಟನೆಗಳಿವೆ. ಆದರೆ ಓರ್ವ ವ್ಯಕ್ತಿಯ ಜೀವನವನ್ನು ಆಧರಿಸಿಕೊಂಡಿರುವ ಜೀವನದ ಬೆಳವಣಿಗೆ ಇಲ್ಲಿ ಇಲ್ಲ. ಹಾಗಾಗಿ ನಯನತಾರೆಯ ಕಲೆಯ ದಿಗ್ವಿಜಯವೂ ಉಳಿದ ಪಾತ್ರಗಳ ಘಟನೆಯಂತೆ ಒಂದು ಪ್ರಮುಖ ಸನ್ನಿವೇಶವಾಗುತ್ತದೆ. ಮುಂಬಯಿಯಂತಹ ನಗರದಲ್ಲಿ ವಾಸಿಸುವ ವ್ಯಕ್ತಿಗಳ ಸಮುದಾಯ ಇಂದಿನ ನಮ್ಮ ನಾಡಿನಲ್ಲಿ ನಡೆದಿರುವ ಬೌದ್ಧಿಕ ಗೊಂದಲವನ್ನು ಸರಿಯಾಗಿ ಪ್ರತಿಬಿಂಬಿಸುತ್ತದೆ. ಇಂದಿನ ಬೌದ್ಧಿಕ ಜೀವನದ ಮೌಲ್ಯ ಸಂಕರವನ್ನು ಮತ್ತು ಹೃದಯಹೀನತೆಯನ್ನು ಕಾದಂಬರಿ ಎಳ್ಳಷ್ಟೂ ಸಿನಿಕತನವಿಲ್ಲದೆ ಪ್ರತಿಪಾದಿಸುತ್ತದೆ. ಬುದ್ಧಿವಂತಿಕೆ ಮತ್ತು ನೀತಿ ಪರಮಾರ್ಥ ಮತ್ತು ದೈನಂದಿನ ವ್ಯವಹಾರ, ನೈಜವಾದ ಶ್ರೇಷ್ಟತೆ ಮತ್ತು ಯಶಸ್ಸು ಇವುಗಳ ಸಂಬಂಧದಲ್ಲಿಯೇ ವಿಚ್ಛೇದ ಉಂಟಾಗಿದೆ. ಉದಾಹರಣೆಗೆ ನಯನತಾರೆಯ ನೃತ್ಯಕಲೆ. ಫ್ರೆಂಚ್ ತಾಯಿಯ ಮಗಳಾದ ನಯನತಾರೆ ಭಾರತೀಯ ನೃತ್ಯಕಲೆಯನ್ನು ಕಲಿತು ಸುಲಭವಾಗಿ ಯಶಸ್ಸನ್ನು ಪಡೆಯಲು ಯತ್ನಿಸುವ ಪ್ರಸಂಗವೇ ಮೊದಲು ಸಾಕಷ್ಟು ವ್ಯಂಗ್ಯಪೂರ್ಣವಾಗಿದೆ. ಅದಕ್ಕಿಂತ ಹೆಚ್ಚಾಗಿ ಅವಳು ಒಂದು ಸಂಸ್ಥೆಯಾಗಿ ಅನೇಕ ಮೋಸಗಳಿಗೆ ಕಾರಣಳಾಗುತ್ತಾಳೆ ಮತ್ತು ಉಳಿದವರಲ್ಲಿ ಮೋಸದ ಪ್ರತಿಕ್ರಿಯೆಯನ್ನು ಹುಟ್ಟಿಸುತ್ತಾಳೆ. ಅನಂತಕೃಷ್ಣನ ಅಪಕ್ವ ಬುದ್ಧಿಗೆ ಅವಳ ಕಲೆ ಅರ್ಥವಾಗುವುದಿಲ್ಲ; ನಾಗಿನದಾಸರು ಅವಳ ರೂಪಕ್ಕೆ ಮರುಳಾಗುತ್ತಾರೆ; ಡಾ.ಜಯಂತ ಮತ್ತು ಜಾನಕಿನಾಥರು ಪರಸ್ಪರ ದ್ವೇಷದ ಮಸೆತಕ್ಕೆ ಅವಳ ಕಲೆಯನ್ನು ಉಪಯೋಗಿಸುತ್ತಾರೆ. ಕಲೆ ಇಲ್ಲಿ ಜೀವನದೊಡನೆ ಸಂಬದ್ಧವಾಗುವುದೇ ಭಯಾಜನಕವಾಗಿದೆ. ಲೋನ್ ವಾಯಿಸ್ ಪತ್ರಿಕೆಯ ಸಂಪಾದಕರಾದ ಜಗನ್ನಾಥ ರಾಯರ ಪ್ರತಿಕ್ರಿಯೆಯೊಂದೇ ಇಲ್ಲಿ ನೈಜವಾದದ್ದು. ನಯನತಾರೆಯ ನೃತ್ಯವಾಗಲೀ, ರಸೂಲ್‌ಖಾನರ ಗಾಯನವಾಗಲೀ ಅವರಿಗೆ ಒಂದು ಅನುಭವ. ಜಗನ್ನಾಥರಾಯರ ಪಾತ್ರದ ಮುಂದೆ ಕಾದಂಬರಿಯ ಉಳಿದೆಲ್ಲಾ ಪಾತ್ರಗಳೂ ಅಪೂರ್ಣವೆನಿಸುವುದು. ಬೌದ್ಧಿಕತೆಯ ದುರಂತ ಕಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿದ್ದರೂ ಕಾದಂಬರಿ ಅದರ ಬಗ್ಗೆ ಯೋಚಿಸುವಷ್ಟು ತಾಳ್ಮೆಯನ್ನು ತೋರುವುದಿಲ್ಲ. ಕಾದಂಬರಿಯಲ್ಲಿಯ ಶಿಲ್ಪದ ಅಸಂಪೂರ್ಣತೆ, ಪ್ರತ್ಯೇಕವಾದ ವ್ಯಕ್ತಿ ಚಿತ್ರಣಗಳಿಂದಾಗಿ ಮೌಲ್ಯಗಳ ತಾರತಮ್ಯ ಗೋಚರವಾಗುತ್ತದೆಯೇ ಹೊರತು ಜೀವನದ ಸಂಕೀರ್ಣತೆಯ ನೋಟ ಸಿಗುವುದಿಲ್ಲ. ಎಂದಿದ್ದಾರೆ ಕೀರ್ತಿನಾಥ ಕುರ್ತಕೋಟಿ.

ಇದನ್ನು ಇನಾಂದಾರ್ ಅವರೂ ಸಮ್ಮತಿಸಿದಂತೆ ಕಾಣುತ್ತಿದೆ. ಕಾದಂಬರಿಯಲ್ಲಿ ಪಾತ್ರಗಳು, ಅವುಗಳ ಹಿನ್ನಲೆ ಮತ್ತು ಅವು ತೊಡಗುವ ಕೆಲಸಕಾರ್ಯಗಳ ವಿವರಣೆಯೇ ಹೆಚ್ಚು. ಎತ್ತಿಹೇಳಬಹುದಾದ ಹೆಚ್ಚಿನ ಕಥಾಭಾಗ ಇಲ್ಲಿಲ್ಲ. ನುಡಿನಡೆಗಳೆರಡೂ ಸ್ವಪ್ರಚಾರಕ್ಕೆ ಸಾಧನ ಮಾತ್ರ. ಮಾತು-ಕ್ರಿಯೆಗಳ ನಡುವೆ ಸಂಬಂಧ ಇಲ್ಲದವರು ಇಲ್ಲಿನವರು. ತನ್ನ ನೃತ್ಯಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ತಿಳಿಸಿಕೊಡುತ್ತೇನೆಂದುಕೊಂಡ ವಿದೇಶೀ ತಾಯಿಯ ಮಗಳು ನಯನತಾರಾಳಿಗೆ ಪ್ರಚಾರತಂತ್ರದ ಹೊರತು ಇನ್ನಾವುದೂ ಗೊತ್ತಿಲ್ಲ. ಅಪಕ್ವ ಬುದ್ಧಿಯ ಅನಂತಕೃಷ್ಣನಿಗೆ ಕಲಾವಿಮರ್ಶಕನೆನಿಸಿಕೊಳ್ಳುವುದೇ ಒಂದು ಹೆಮ್ಮೆಯ ವಿಷಯ. ನಾಗಿನದಾಸರು ಅವಳ ರೂಪಕ್ಕೆ ಮಾರುಹೋಗುತ್ತಾರೆ. ಡಾ. ಜಯಂತ ಮತ್ತು ಜಾನಕಿನಾಥರು ತಮ್ಮ ಪರಸ್ಪರ ವಿರೋಧದ ಅಸ್ತ್ರವಾಗಿ ಅವಳ ವಿಮರ್ಶೆಯನ್ನು ಬರೆಯುತ್ತಾರೆ. ಹತ್ತಾರು ಬಗೆಯ ಇಂತ ಸೋಗು ಹಾಕಿದವರ ಸಂತೆಯಲ್ಲಿ, ಮೌಲ್ಯಗಳ ಅಪಮೌಲ್ಯದ ಮಧ್ಯೆ ಜಗನ್ನಾಥರಾಯ ಅಪವಾದವಾಗಿ ನಿಲ್ಲುತ್ತಾನೆ ಎಂದಿದ್ದಾರೆ ವಿ.ಎಸ್.ಇನಾಂದಾರ್.

ಕಾದಂಬರಿಯ ಅಧ್ಯಾಯ ಪ್ರಾಮುಖ್ಯತೆ ಕೆಳಕಂಡಂತಿದೆ.

ಮೊದಲರ್ಧ ಭಾಗದಲ್ಲಿ ನಯನತಾರೆಯು ಕಲಾವಿದರಲ್ಲಿರುವ ಚತುರತೆ ಹಾಗೂ ದೋಷ, ಪ್ರಸಿದ್ಧಿಯ ಪ್ರಯತ್ನಕ್ಕೆ ಒಂದು ವಸ್ತು

ಮಧ್ಯಭಾಗದ ನಂತರ ಮಾಗಿದ ತಿಳಿವಳಿಕೆಗಳನ್ನು ಹೊಂದಿರುವ, ಕಲೆಯ ಶೈಕ್ಷಣಿಕ ಪ್ರಸಾರಕ್ಕೆ ಯೋಜನೆಗಳನ್ನು ಹಮ್ಮಿಕೊಳ್ಳುವ ವ್ಯಕ್ತಿಯಾಗಿ ನಯನತಾರೆ ಕಾಣಿಸುವುದು.

ನಂತರದಲ್ಲಿ ಯೋಜನೆಗಳ ನಿರ್ವಹಣೆಗೆ ದುಡಿಯುವ, ಅದರ ಕಷ್ಟಾನಿಷ್ಟಗಳನ್ನು ಕಾಣಿಸುವ ಪ್ರೌಢೆಯಾಗಿ ಆಕೆ ಹಠಾತ್ ಗೋಚರಿಸುತ್ತಾಳೆ.

ಹೀಗಾಗಿ ೫ನೇ ಅಧ್ಯಾಯದ ಮಧ್ಯಭಾಗದಿಂದ ೮ನೇ ಅಧ್ಯಾಯಗಳ ನಡುವಿನಲ್ಲಿ ಆಕೆ ಸಂಪೂರ್ಣವಾಗಿ ಮರೆಯಾಗಿದ್ದಾಳೆ. ೮ನೇ ಅಧ್ಯಾಯದ ನಂತರ ಮತ್ತು ಆಕೆಯ ಮೊದಲಿನ ನಡವಳಿಕೆಯ ಬದಲಾವಣೆಗಳಿಗೆ ವಯಸ್ಸಿನ ಮಾಗುವಿಕೆಯನ್ನು ಹೊರತುಪಡಿಸಿ ಬೇರೆ ಯಾವುದೇ ಪುಷ್ಠಿಯಾಗಲೀ, ಪಾತ್ರಪೋಷಣೆಯಲ್ಲಿ ಸಮರ್ಥನೆಯಾಗಲೀ ಸಿಗುವುದಿಲ್ಲ. ೯ನೇ ಅಧ್ಯಾಯದಿಂದ ೧೩ನೇ ಅಧ್ಯಾಯದ ವರೆಗೂ ಇರುವ ಬಹುದೊಡ್ಡ ಅಂತರವು ಕಾದಂಬರಿಯಲ್ಲಿ ಆಕೆಯ ಅಸ್ತಿತ್ವವನ್ನೇ ಮಂಕಾಗಿಸುತ್ತದೆ, ಮಾತ್ರವಲ್ಲ; ಸಾಮಾನ್ಯ ಜನರ ಜೀವನ ಮತ್ತು ಸಾಂಸ್ಕೃತಿಕ ನೆಲೆಗಟ್ಟನ್ನು ಒಂದಾಗಿಸುವಲ್ಲಿ ಆಕೆಯ ಪಾತ್ರದ ಎಳೆ ಕಾಣಸಿಗುವುದಿಲ್ಲ.

ಒಟ್ಟಿನಲ್ಲಿ ನಯನತಾರೆಯನ್ನು ಕಲಾ ರಾಯಭಾರಿ ಅಥವಾ ಕಲಾವಿದೆಯ ಅಂತರಂಗದ ಒಂದು ಮುಖವನ್ನು ಹೇಳುವಲ್ಲಿಗೆ ಆಕೆಯ ಪಾತ್ರ ಸೀಮಿತಗೊಳ್ಳುತ್ತದೆ. ಈಕೆಯ ಪಾತ್ರ ಕಾದಂಬರಿಯ ಪಾತ್ರಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ಬೆರೆಯದೆ ಉಳಿದ ಪಾತ್ರಗಳಂತೆಯೇ ಪ್ರತ್ಯೇಕವಾಗಿ ನಿಂತಿದೆ. ಮತ್ತು ತನ್ನ ಆಯಾಯ ಕಾಲಮಾನದ ಉದ್ದೇಶವನ್ನು ಸಾಧಿಸಿಕೊಳ್ಳುವ ಅವಕಾಶವಾದಿಯಂತೆ ನಯನಾತಾರೆಯನ್ನು ಕಾಣಿಸಿಕೊಡಲಾಗಿದೆ. ಕಾದಂಬರಿಯ ಅಂತ್ಯಕ್ಕೆ ಕಲಾಪೋಷಣೆಯ ಉದ್ದೇಶವನ್ನೇ ನಂಬಿದ ಪತ್ರಿಕೆ ಲೋನ್ ವಾಯಿಸ್ನ ಸೈದ್ಧಾಂತಿಕ ಏಳುಬೀಳು ಹೆಚ್ಚು ಕಾಣಿಸಿಕೊಂಡು; ಆವರೆಗೆ ಇದ್ದರೂ, ಕಳಚಿಕೊಂಡಿದ್ದ ಕಥಾ ಎಳೆಯ ಕೊಂಡಿಗಳು ಪುನಃ ಹೆಣೆದುಕೊಂಡಂತೆ ಭಾಸವಾಗುತ್ತದೆ.

ವಿ.ಎಂ ಇನಾಂದಾರ್ ಉಲ್ಲೇಖಿಸುವ ಮಾತು ಇಲ್ಲಿ ಹೆಚ್ಚು ಅರ್ಥಪೂರ್ಣ. ಬೇರೆ ಬೇರೆ ಕಲಾಮಾಧ್ಯಮಗಳನ್ನು ಬಳಸುವವರ ಮನೋಧರ್ಮವನ್ನು ಒಳಹೊಕ್ಕು ನೋಡುವುದು ಇದರ ಉದ್ದೇಶ. ನಿಜವಾದ ಕಲೆಯ ದನಿ ಎಂದಿಗೂ ಒಂಟಿದನಿಯೇ. ಅದನ್ನು ಯಥಾವತ್ತಾಗಿ ಅರ್ಥಮಾಡಿಕೊಳ್ಳಬಲ್ಲವರ ಸಂಖ್ಯೆ ಯಾವಾಗಲೂ ಪರಿಮಿತ. ಆದರೆ ಅಂತಹ ಮಾಧ್ಯಮಗಳನ್ನು ಬಳಸಿಕೊಂಡು ಕೆಲಸ ಮಾಡುವವರು ಸ್ವಂತದ ಬಗೆಯಲ್ಲಿ ಪ್ರಾಮಾಣಿಕತೆಯನ್ನು, ತಮ್ಮದೆಂದುಕೊಂಡ ಕಲೆಯ ವಿಷಯದಲ್ಲಿ ನಿಷ್ಠೆಯನ್ನು ಬೆಳೆಯಿಸಿಕೊಳ್ಳದಿದ್ದಾಗ ಉದ್ದೇಶ ಹೊಲೆಗೆಡುತ್ತದೆ. ಒಟ್ಟಾರೆಯಾಗಿ ಕಲೆಯೊಂದಿಗೆ ಪತ್ರಿಕಾ ಮಾಧ್ಯಮದ ಮನೋಧರ್ಮವನ್ನು ತುಲನೆ ಮಾಡುತ್ತಾ ಸ್ಪಂದನ-ಪ್ರತಿಸ್ಪಂದನಗಳನ್ನು ಕಾರಂತರು ನಿರೂಪಿಸಿದ್ದು; ನೃತ್ಯವನ್ನು ಕಥಾವಸ್ತುವಿನೊಳಗೆ ದುಡಿಸಿಕೊಂಡ ಪ್ರಥಮ ಕಾದಂಬರಿಯೆನಿಸಿದೆ.

 

Leave a Reply

*

code