ಅಂಕಣಗಳು

Subscribe


 

ನೃತ್ಯ ರಂಗದ ಅನಭಿಷಿಕ್ತ ರಾಣಿ : ರುಕ್ಮಿಣೀ- ಭಾಗ 12

Posted On: Wednesday, December 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ನೃತ್ಯ ರಂಗದ ಅನಭಿಷಿಕ್ತ ರಾಣಿ : ರುಕ್ಮಿಣೀ

ಪಾರ್ವತಿಯಾಗಿ ರುಕ್ಮಿಣಿ ದೇವಿ

ಕಾಳಿದಾಸನ ಕುಮಾರಸಂಭವಂ ರೂಪಕವಾಗಿ ಮೊದಲು ಪ್ರದರ್ಶನ ಕಂಡದ್ದು ೧೯೪೭ರ ಸೆಪ್ಟೆಂಬರ್ ೩೦ರಂದು ಜರುಗಿದ ಬೆಸೆಂಟ್ ಶತಮಾನೋತ್ಸವ ಆಚರಣೆಯಲ್ಲಿ. ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿ ನೇತೃತ್ವ ವಹಿಸಿದ್ದವರು ಸ್ವತಃ ರುಕ್ಮಿಣಿ. ಅಂದಿನ ಸಂಭ್ರಮಕ್ಕೆ ಮಹಾತ್ಮಾ ಗಾಂಧಿ ಮೊದಲಾದವರಿಂದ ಹೃತ್ಪೂರ್ವಕ ಸಂದೇಶ ರುಕ್ಮಿಣೀ ಪಾಲಿಗಿತ್ತು.
ಕಾಳಿದಾಸನ ಸಮೃದ್ಧ ಸಾಹಿತ್ಯದಲ್ಲಿ ಯಾವುದನ್ನು ಆರಿಸಬೇಕು, ಯಾವುದು ಬಿಡಬೇಕು ಎಂಬುದು ಎಲ್ಲರಿಗೂ ಗೋಜಲು. ಆಗ ರುಕ್ಮಿಣಿ ಅವರಿಗೆ ಆಪ್ತರಾಗಿದ್ದ ಶಂಕರ್ ಮೆನನ್ ಪ್ರವಾಸಕ್ಕೆಂದು ವಿದೇಶಕ್ಕೆ ಹೋದವರು ಅಸ್ವಸ್ಥರಾಗಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಈ ನೃತ್ಯರೂಪಕಕ್ಕೆ ಅವರ ಸಹಕಾರ ಸಾಧ್ಯವಾಗಿರಲಿಲ್ಲ. ಈ ನಡುವೆ ಸಾಹಿತ್ಯವನ್ನು ನೃತ್ಯಾಭಿವ್ಯಕ್ತಿಗೆ ತಕ್ಕಂತೆ ವಿಭಾಗಿಸುವ ಪ್ರಕ್ರಿಯೆಯೇ ಟೈಗರ್ ವರದಾಚಾರ್ಯ, ಎಸ್. ವೆಂಕಟಾಚಲಶಾಸ್ತ್ರಿ, ಬಿ. ಎಸ್. ಆದಿನಾರಾಯಣ ಶರ್ಮ ಮುಂತಾದ ವಿದ್ವಾಂಸರಿಗೆ ಗೋಜಲಿಗಿಟ್ಟುಕೊಂಡಿತ್ತು.
ಟೈಗರ್ ವರದಾಚಾರ್ಯರು ಸಾಹಿತ್ಯವನ್ನು ತೆಲುಗಿಗೆ ಅವತರಣಿಕೆ ಮಾಡಿದರು. ಅದಕ್ಕೆ ತಕ್ಕಂತೆ ನೃತ್ಯ ಸಂಯೋಜಿಸುವ ಸಾಮರ್ಥ್ಯ ರುಕ್ಮಿಣಿಯವರಿಗಲ್ಲದೆ ಉಳಿದವರ್ಯಾರಿಗೂ ಇರಲಿಲ್ಲ. ಆದರೆ ಸಂಗೀತ ಸಂಯೋಜನೆಯ ಸಮಯಕ್ಕೆ ಸರಿಯಾಗಿ ಟೈಗರ್ ವರದಾಚಾರ್ಯರಿಗೆ ಹೊಟ್ಟೆನೋವು, ಸೆಕೆಗುಳ್ಳೆಗಳೆದ್ದು ಕಷ್ಟಪಡುವಂತಾಗಿತ್ತು. ಹಾಗಾಗಿ ಪ್ರದರ್ಶನ ಹಿಂದಿನ ದಿನದವರೆಗೂ ಸಂಗೀತ, ನೃತ್ಯ ಸಂಯೋಜನೆಗಳು ನಡೆಯುತ್ತಲೇ ಇದ್ದವು. ರುಕ್ಮಿಣಿ ದೇವಿ ಸಂಯೋಜನೆಯನ್ನು ಬೆಳಗ್ಗೆಯೂ, ಅದಕ್ಕೆ ತಕ್ಕ ಪೂರ್ವ ತಯಾರಿಯನ್ನು ಸಂಜೆಯೂ ಮಾಡುತ್ತಿದ್ದರು.
ರುಕ್ಮಿಣಿ ೫ ಮಂದಿ ವಿದ್ಯಾರ್ಥಿಗಳನ್ನು ಮುಂದಿರಿಸಿಕೊಂಡು ನೃತ್ಯಸಂಯೋಜನೆಗೆ ಆರಂಭಿಸಿದರು. ಇಡೀ ನೃತ್ಯರೂಪಕದ ಕೇಂದ್ರ ಶಿವನ ಸ್ತುತಿಯಾಗಿ ಆತನ ಮಹಿಮೆಯನ್ನು ಮೆಲು ಗತಿಯಲ್ಲಿ ಹೊಗಳುವುದಾಗಿರಬೇಕು ಎಂದು ರುಕ್ಮಿಣಿ ಇಚ್ಛೆ. ೧೦ ಸಾಲುಗಳ ಶ್ಲೋಕದಲ್ಲಿ ಹಿಮಾಲಯದ ಭವ್ಯ ವರ್ಣನೆಯಿರಬೇಕೆಂದು ರುಕ್ಮಿಣಿ ಹೇಳಿದ್ದರು. ತಾನಂ ಬಳಸಿ ಯಾವುದೇ ವಿಶೇಷ ಹಿನ್ನಲೆ ಮತ್ತು ವಾದ್ಯಗಳ ಸಹಕಾರವಿಲ್ಲದೆ ಈ ವರ್ಣನೆಯ ಸಾಲುಗಳಿದ್ದವು. ಹಾಗಾಗಿ ಮೊದಲು ಅಪ್ಸರೆಯರ ನೃತ್ಯ. ಘನ ರಾಗ ಮತ್ತು ಮೃದಂಗದ ದನಿಗಳಲ್ಲಿ ಶಿವನಪೂಜೆ.
ನಂತರ ಪಾರ್ವತಿಯ ಜನನವೆಂಬುದು ಪದಂ ಶೈಲಿಯಲ್ಲಿರಬೇಕೆಂದು ರುಕ್ಮಿಣಿ ತಮ್ಮ ಶಿಷ್ಯೆ ಶಾರದಾ ಪಾರ್ವತಿಯನ್ನು ಸ್ತುತಿಸುವುದನ್ನು ಸಂಯೋಜಿಸಿದರು. ರೂಪಕದ ಉದ್ದಕ್ಕೂ ಆಗಾಗ ಹಿನ್ನಲೆಯಿಂದ ಸಮೂಹದಲ್ಲಿ ಸಾಹಿತ್ಯ, ಶ್ಲೋಕಗಳನ್ನು ಹೇಳುವುದಿತ್ತು.
ಎರಡನೇ ಸನ್ನಿವೇಶದಲ್ಲಿ ಇಂದ್ರ ಬ್ರಹ್ಮನಲ್ಲಿ ಬಂದು ತಾರಕಾಸುರನ ಉಪಟಳ ನಿವಾರಣೆಗೆ ಕೇಳಿಕೊಳ್ಳುವುದು; ಅದಕ್ಕೆ ಬ್ರಹ್ಮನ ಉತ್ತರ. ಕಥಕಳಿಯ ಹಿರಿಯ ಗುರು ಕೆ. ಚಂದು ಪಣಿಕ್ಕರ್ ಬ್ರಹ್ಮನಾಗಿ, ಡಿ. ಪಶುಪತಿ ಇಂದ್ರನಾಗಿ ಅದ್ಭುತ ಅಭಿನಯ. ೩ನೇ ಸನ್ನಿವೇಶದಲ್ಲಿ ಸಿ. ವಿ ಚಂದ್ರಶೇಖರ್ ಮನ್ಮಥನಾಗಿ; ಸನ್ನಿವೇಶಕ್ಕೆ ಪೂರಕವಾಗಿ ಮನ್ಮಥ ಸೃಜಿಸುವ ವಸಂತಕಾಲದ ವರ್ಣನೆಯನ್ನು ಸಖಿಯರು ಪಾರ್ವತಿಗೆ ಮಾಡುವುದು. ತದನಂತರ ಮನ್ಮಥನ ಬಾಣ ಪ್ರಯೋಗ, ಮನ್ಮಥ ದಹನ, ಪಾರ್ವತಿಯೆಡೆಗೆ ಶಿವನ ಆಕರ್ಷಣೆ. ೫ನೇ ಸನ್ನಿವೇಶ ಶಿವನ ಮಾರುವೇಷ; ಪ್ರಶ್ನೋತ್ತರ. ಶಿವನ ಬಗ್ಗೆ ಛೇಡಿಸಿದಾಗ ಪಾರ್ವತಿಯ ಪ್ರತಿಕ್ರಿಯೆ, ಕೋಪ ಕೊನೆಗೆ ಶಿವನಾಗಿ ನಿಂತು ಪಾರ್ವತಿಯ ಮನೋಭಿಲಾಷೆಗೆ ಸ್ಪಂದನ. ಮಾರುವೇಷದವನಾಗಿ ಗುರು ಚಂದುಪಣಿಕ್ಕರ್, ಶಿವನಾಗಿ ಹಿರಿಯ ವಿದ್ಯಾರ್ಥಿ ರಾಜಾಮಣಿಯರದ್ದು ಉತ್ತಮ ಅಭಿವ್ಯಕ್ತಿ. ೬ನೇ ಸನ್ನಿವೇಶದಲ್ಲಿ ಶಿವ ಪಾರ್ವತಿ ಕಲ್ಯಾಣ. ಅದಕ್ಕೆ ತಕ್ಕ ಮೆರವಣಿಗೆ, ಅಪ್ಸರೆಯರಿಂದ ತಿಲ್ಲಾನ ನೃತ್ಯ. ಕೊನೆಯ ಸನ್ನಿವೇಶ ವಿವಾಹ ಮತ್ತು ಕುಮಾರ ಸಂಭವ. ತಿಲ್ಲಾನ ಧರುಗಳೊಂದಿಗೆ ರೂಪಕ ಮುಕ್ತಾಯ. ಇದಿಷ್ಟೂ ಕುಮಾರಸಂಭವಂನ ಸಂಯೋಜನಾ ವೈಖರಿ.
ಇನ್ನೇನು ಪ್ರದರ್ಶನಕ್ಕೆ ಎರಡು ದಿನವಷ್ಟೇ ಉಳಿದಿದೆ ಎನ್ನುವಾಗ ವಸ್ತ್ರವಿನ್ಯಾಸಗಳನ್ನು ಪರೀಕ್ಷಿಸಿದ ರುಕ್ಮಿಣಿ ಅವು ಯಾವುದೂ ಸರಿಯಾಗಿ ಹೊಂದುವುದಿಲ್ಲವೆಂದು ಮನಗಂಡರು. ಎಲ್ಲರಿಗೂ ಪೀಕಲಾಟಕ್ಕಿಟ್ಟುಕೊಂಡಿತು. ಆದರೆ ಇರುವ ಕೆಲವೇ ಕೆಲವು ಗಂಟೆಗಳಲ್ಲಿ ಪುರಾಣಕ್ಕೆ ಸಂಬಂಧಿಸಿದಂತೆ ಸರಳವೆನಿಸುವ ಶೋಭಾಯಮಾನವಾದ ಉಡುಗೆಗಳನ್ನು ತಮ್ಮ ನುರಿತ ಹೊಲಿಗೆಯರಿಂದ ಹೊಸದಾಗಿ ವಿನ್ಯಾಸ ಮಾಡಿಸಿದರು.
ಕಿಕ್ಕಿರಿದು ತುಂಬಿತ್ತು ಸಭಾಂಗಣ. ಪರದೆ ಸರಿದ ತಕ್ಷಣ ಪಾರ್ವತಿಯೇ ಭುವಿಗಿಳಿದು ಬಂದಿರುವಳೇ ಎಂಬಷ್ಟರ ಮಟ್ಟಿಗಿನ ಅದ್ಭುತ ಎಂಬ ಕಲ್ಪನೆ. ಎಲ್ಲರ ಮೈಯಲ್ಲೂ ವಿದ್ಯುತ್ಸಂಚಾರ. ಕಾಳಿದಾಸನ ಕಾವ್ಯ ಜೀವಂತವಾದಂತೆ ಅನಿಸಿತ್ತು. ‘ಸಾಕ್ಷಾತ್ ಪಾರ್ವತಿಯೇ ಧರೆಗಿಳಿದು ಬಂದು ಶಿಲ್ಪವಾಗಿ ನಿಂತಂತೆ ಭಾಸವಾಯಿತು. ತಕ್ಷಣವೇ ಆ ಶಿಲ್ಪಕ್ಕೆ ರಕ್ತ ಮಾಂಸಗಳು ತುಂಬಿ ಬಂದಂತ ಅನುಭವ ನಮಗಾಯಿತು.’ ಎಂದು ನೆನಪಿಸಿಕೊಳ್ಳುತ್ತಾರೆ ಕಪಿಲಾ ವಾತ್ಸ್ಯಾಯನ.
‘ಪುರಾಣವನ್ನೇ ಕಲ್ಪನೆಗೆ ತರುವ ವೇಷ-ಭೂಷಣ, ಪುರಾಣದ ಸಮಯವನ್ನೇ ತಂದಿಡುವಂತಹ ಹಿಮಾಲಯದ ಸನ್ನಿವೇಶ, ಹಿಮಾಲಯದಿಂದ ದೇವರುಗಳೇ ಇಳಿದು ಬಂದ ಕಲ್ಪನೆ, ಹಿಮಾಲಯದಲ್ಲಿ ನಾವು ಕಾಲಿಟ್ಟೆವೋ ಎಂಬ ಭಾವ, ಯಾವುದೇ ಕೊರತೆಗಳಿಲ್ಲದ ನೃತ್ಯರೂಪಕ’ ಎಂಬಿತ್ಯಾದಿಯಾಗಿ ಪತ್ರಿಕೆಗಳು ಶ್ಲಾಘಿಸಿದ್ದವು. ರೂಪಕದ ಜನಪ್ರಿಯತೆಯಿಂದಾಗಿ ಎರಡು ದಿನಗಳೊಳಗೆ ಅಡೆಯಾರ್‌ನಲ್ಲಿ ಅಕ್ಟೋಬರ್ ೨ ರಂದು ಕುಮಾರ ಸಂಭವಂ ಅನ್ನು ಕಲಾವಿದರು ಪುನಃ ನರ್ತಿಸಿದರು. ರೂಪಕದಿಂದ ಪ್ರಭಾವಿತವಾದ ಭಾರತ ಸರ್ಕಾರ ೧೯೫೦ರ ಮೊದಲ ಗಣರಾಜ್ಯೋತ್ಸವಕ್ಕೆ ಪ್ರದರ್ಶನ ನೀಡಲು ನವದೆಹಲಿಗೆ ಆಹ್ವಾನಿಸಿತ್ತು!
(ಸಶೇಷ)

Leave a Reply

*

code