ಅಂಕಣಗಳು

Subscribe


 

ನೃತ್ಯ ರಂಗದ ಅನಭಿಷಿಕ್ತ ರಾಣಿ : ರುಕ್ಮಿಣಿ -ಭಾಗ- 9

Posted On: Thursday, June 17th, 2010
1 Star2 Stars3 Stars4 Stars5 Stars (No Ratings Yet)
Loading...

Author: 'ಮನೂ' ಬನ

ಜೇಮ್ಸ್ ಕಸಿನ್ ಒಂದೆಡೆ ಹೀಗೆ ಬರೆಯುತ್ತಾರೆ.‘research as to costumes, jewels, and hair dressings ; in the adaptation of the text to stage purposes ; in the synchronizing of words and music, and of these with the rhythms, postures, gestures, groupings and finger-signs(mudras)…” and observed that all these evolved out of the knowledge, experience and imagination of Rukmini Devi…’

ಹಾಗಂತ ರುಕ್ಮಿಣೀ ತಾವು ಕಲಿತದ್ದನ್ನೆಲ್ಲಾ ಒಂದೇ ಸಲ ಪ್ರಯೋಗ ಮಾಡುತ್ತಿರಲಿಲ್ಲ. ಸಮಯ, ಸಂದರ್ಭವರಿತು ಸಂಸ್ಕೃತಿಗೆ ಏನು ಅಗತ್ಯವೋ ಅದನ್ನು ಪರಂಪರೆಯ ಅಡಿಪಾಯದಲ್ಲಿ ಹೊಸತಾಗಿ ಪುನರ್ ರೂಪಿಸುತ್ತಿದ್ದರು. ಹಾಗಾಗಿ ಕೊರವಂಜಿ ಸಾಹಿತ್ಯಮಯ ಮತ್ತು ನಿರೂಪಣೆಯಲ್ಲಿ ನಾಟಕೀಯವಲ್ಲದ ನೃತ್ಯ ಎಂಬುದನ್ನು ಅರಿತು ತಾವು ಕಲಿತಿದ್ದ ಬ್ಯಾಲೆಯಾಗಲೀ, ಅಥವಾ ನಾಟಕೀಯ ಕಲಾಭಾಗವೆನಿಸುವ ಕಥಕಳಿ, ಭಾಗವತಗಳು ಕೊರವಂಜಿಯ ನಿರೂಪಣೆಗೆ ಬಳಸಿಕೊಳ್ಳಲಿಲ್ಲ.

ಅದು ಕೊರವಂಜಿಯ ಮೊದಲ ಪ್ರದರ್ಶನ..ತಮ್ಮ ಕಲಾಕ್ಷೇತ್ರ ಬಳಗದ ಜೊತೆಗೆ ಮುಂಬೈಗೆ ಪ್ರದರ್ಶನಕ್ಕೆ ತೆರಳಿದ್ದರು. ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಕೇವಲ ೧೧ ದಿನಗಳಲ್ಲಿ ವೇಷಭೂಷಣ, ರಂಗ ಪರಿಕರ, ಸಂಗೀತವನ್ನು ವ್ಯವಸ್ಥೆ ಮಾಡಿದ್ದರು. ತಾಂತ್ರಿಕ ವಿಷಯಗಳಲ್ಲಿ ಅಲೆಕ್ಸ್ ಎಲ್ಮೋರ್, ನಂತರ ಪಾಲ್ ಸ್ಟಾರ್ಮ್ ಅವರು ಬೆಳಕು, ಧ್ವನಿವರ್ಧಕ ಸಹಕಾರವೀಯುತ್ತಿದ್ದರು. ಅದರಲ್ಲೂ ವಿದೇಶಿ ತಂತ್ರಜ್ಞರಿಗೆ ಭಾರತೀಯ ರಂಗದ ಪರಿಜ್ಞಾನ ಅಷ್ಟಾಗಿ ಇರಲಿಲ್ಲವಾದದ್ದರಿಂದ ಅದಕ್ಕೂ ರುಕ್ಮಿಣೀ ಅವರ ಮಾರ್ಗದರ್ಶನೈಲ್ಲದೇ ಅಗುತ್ತಿರಲಿಲ್ಲ. ಅವರ ಉಳಿದ ನೃತ್ಯರೂಪಕಕ್ಕಿಂತಲೂ ಮಿಗಿಲಾಗಿ ಮೊದಲ ನೃತ್ಯ ರೂಪಕದ ಸಂಯೋಜನೆಗೆ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ.

ಅವರೊಮ್ಮೆ ಬಹಳ ಕಾಲದ ನಂತರ ಹೀಗೆ ಹೇಳಿದ್ದರಂತೆ ; ‘ನನಗೆ ಅಷ್ಟು ಧೈರ್ಯ ಹೇಗೆ ಬಂತೋ ಗೊತ್ತಿಲ್ಲ. ಅದನ್ನೇ ನಾನು ಈಗ ಮಾಡಬೇಕೆಂದರೆ ಸಾಧ್ಯವಾಗುತ್ತಿರಲಿಲ್ಲವೇನೋ! ಅದರ ಸುಂದರ ಸಾಹಿತ್ಯ, ಭಕ್ತಿಮಯ ವಾತಾವರಣ ನನ್ನನ್ನು ಬಹಳ ಪ್ರೇರಿಸಿತು. ಇಂದಿಗೂ ಅದು ತನ್ನ ಭಾವನಾತ್ಮಕವಾದ ಅತೀತ ಅನುಭವ.

‘ಅಷ್ಟೆಲ್ಲಾ ಗಡಿಬಿಡಿ, ಒದ್ದಾಟಗಳಾದರೂ ಒಮ್ಮೆ ಯಶಸ್ಸು ಸಿಕ್ಕಿತೆಂದರೆ ಅದೇ ಒಂದು ಬಗೆಯ ನೆಮ್ಮದಿ, ಬಿಡುವು’ ಎಂಬುದು ರುಕ್ಮಿಣೀಯವರ ಭಾವನೆ. ಹೀಗೆ ಪ್ರತಿಯೊಂದು ಪ್ರದರ್ಶನಗಳಲ್ಲೂ ಕೊರವಂಜಿಯ ಪ್ರತಿ ಭಾಗಗಳು, ನಿರೂಪಣೆ ಮತ್ತಷ್ಟು ಚೆಂದದ ರೂಪ ಪಡೆಯುತ್ತಿದ್ದವು. ಕೊರವಂಜಿಯ ಮುಖ್ಯ ಪ್ರದರ್ಶನಗಳಲ್ಲಿ ಕುಟ್ರಾಲಂ ದೇವಸ್ಥಾನದಲ್ಲಿ ಜರುಗಿದ್ದು ಅತೀ ಆಪ್ತವಾದದ್ದು ಎನ್ನುವುದು ರುಕ್ಮಿಣೀ ಅವರ ಅನಿಸಿಕೆ. ಇಂದಿಗೂ ಕಲಾಕ್ಷೇತ್ರದ ಸುಂದರ ನೃತ್ಯರೂಪಕಗಳ ಪೈಕಿ ಕೊರವಂಜಿಯೇ ಅತ್ಯಂತ ಶ್ರೇಷ್ಟದ್ದು ಎಂಬುದು ಕಲಾರಸಿಕರ ಅಭಿಪ್ರಾಯ.

ರುಕ್ಮಿಣೀ ಎಂದಿಗೂ ತನ್ನನ್ನು ಪರಂಪರೆಯ ಪ್ರತಿನಿಧಿಯೆಂದೋ, ಸುಧಾರಕಿಯೆಂದೋ ಕರೆಸಿಕೊಳ್ಳಲು ಇಷ್ಟಪಡಲಿಲ್ಲ. ಅಷ್ಟಕ್ಕೂ ಇಂತಹ ಅದೆಷ್ಟೋ ನೃತ್ಯಭಾಗಗಳು ಮೊದಲು ಹೇಗಿದ್ದವು ಎಂಬುದಕ್ಕೆ ಅಂತಹ ಬಲವಾದ ಸಾಕ್ಷಿಗಳಾಗಲೀ, ಮಾಹಿತಿಗಳಾಗಲೀ ಲಭ್ಯವಿರಲಿಲ್ಲ. ಆದರೇನಂತೆ? ಇತಿಹಾಸವಲ್ಲದಿದ್ದರೂ ನಮ್ಮ ಕಲ್ಪನೆಗಳಿಂದ ಅದರ ಸ್ವರೂಪವನ್ನು ಕಂಡುಕೊಳ್ಳಬಹುದಲ್ಲವೇ?

ಅವರ ಶಿಷ್ಯೆ ಶಾರದ ಹಾಪ್‌ಮನ್ ಅವರು ಒಂದೆಡೆ ಹೀಗೆ ಹೇಳುತ್ತಾರೆ. ‘ರುಕ್ಮಿಣೀ ದೇವಿ ಅವರ ನೃತ್ಯರೂಪಕಗಳು ಪರಂಪರೆಯನ್ನೇ ಪ್ರತಿನಿಧಿಸುತ್ತವೆ ಎಂಬುದನ್ನು ಅಷ್ಟು ಕರಾರುವಕ್ಕಾಗಿ ಹೇಳಲಾಗುವುದಿಲ್ಲ. ಆದರೆ ಪರಂಪರೆಯ ಆತ್ಮವನ್ನು ಒಯ್ಯುವಲ್ಲಿ ಮತ್ತು ಕಾಣಿಸುವಲ್ಲಿ ನಿಚ್ಚಳವಾಗಿ ಅದರ ಪ್ರಭಾವ ತುಂಬಾ ದೊಡ್ಡದು. ಆದ್ದರಿಂದ ರುಕ್ಮಿಣೀ ಅವರ ಸ್ವಂತಿಕೆಗೆ ಇಲ್ಲಿ ಜಾಸ್ತಿ ಮಹತ್ತ್ವ.’

ಕೇವಲ ದಾನವಾಗಿ ಬಂದದ್ದೋ ಅಥವಾ, ದಾಟಿಸಲ್ಪಟ್ಟ ಪರಂಪರೆ ಎನ್ನುವುದು ಯಾವತ್ತಿಗೂ ಜೀವನದ ನಾಡಿಮಿಡಿತವಾಗಲು ಸಾಧ್ಯವಿಲ್ಲ. ಅದು ಆಗಾಗ ಪುನರ್ ವಿಮರ್ಶೆ, ಮಂಥನ, ಸಮಕಾಲೀನ ದೃಷ್ಟಿಯ ನೋಟಗಳನ್ನು ಪಡೆಯುತ್ತಾ ಅದರ ಸತ್ತ್ವವನ್ನು ಉಳಿಸಿಕೊಳ್ಳುತ್ತಲೇ ಇರಬೇಕು. ಇಲ್ಲವಾದಲ್ಲಿ ಅದು ಕಾಣೆಯಾಗುವ ಅಥವಾ ಜೀವನದ ಜೊತೆಗಿನ ಸಂಬಂಧ ಮತ್ತು ಪ್ರಸ್ತುತತೆಯನ್ನು ಕಳೆದುಕೊಳ್ಳುವ ಅಪಾಯ ಸದಾ ಇರುತ್ತದೆ.

ಅದೇ ಕಡು ಮಡಿವಂತರು ಪರಂಪರೆಯ ಶುದ್ಧತೆಯ ಬಗ್ಗೆ ಮಾತಾಡುತ್ತಾ ಅದರ ಬದಲಾವಣೆಗಳನ್ನು, ಹೊಸತನ್ನು ನಿರಾಕರಿಸುತ್ತಾರೆ. ಇದಕ್ಕೆ ಸಾಕ್ಷಿ ಬೇರೆ ಬೇಕಿಲ್ಲ. ರುಕ್ಮಿಣೀ ದೇವಿ ಅವರ ಸಹೋದರ ಯಜ್ಞೇಶ್ವರ ಶಾಸ್ತ್ರಿ. ನಿಧಾನವಾಗಿ ರುಕ್ಮಿಣೀ ಅವರ ಪ್ರಯತ್ನಗಳಿಗೆ ಕಟು ವಿಮರ್ಶೆಗಳನ್ನು ಮಾಡುತ್ತಾ ಕಲಾಕ್ಷೇತ್ರದಿಂದ ದೂರ ಸರಿಯುತ್ತಲೇ ಹೋದರು. ಅವರಿಗೆ ರುಕ್ಮಿಣೀ ಅವರ ವಿನೂತನ ಪ್ರಯತ್ನಗಳು ಚೆನ್ನಾಗಿ ಕಂಡರೂ ಎಲ್ಲಿ ಕೊನೆಗೆ ಒಳಿತಿಗಿಂತ ಕೆಡುಕನ್ನೇ ಕಾಣುವಂತೆ ಮಾಡುತ್ತವೋ ಎಂಬ ಹೆದರಿಕೆ ಇತ್ತು ! ಹೊಸತು ಮತ್ತು ಪರಂಪರೆಯ ತಪ್ಪಾದ ಸಾಂಗತ್ಯ ಸಾಂಸ್ಕೃತಿಕ ಪರಂಪರೆಯನ್ನೇ ಹಾಳುಗೆಡಹುವುದಲ್ಲ್ಲದೆ ಯಾವುದು ಹೊಸತು ಮತ್ತು ಯಾವುದು ಹಳತು ಎಂಬುದನ್ನು ಸರಿಯಾಗಿ ಕಾಣಲು, ಪ್ರತ್ಯೇಕಿಸಲು ಬರುವುದಿಲ್ಲ ಎಂಬುದು ಅವರ ಅನಿಸಿಕೆಯಾಗಿತ್ತು. ಆದರೆ ಪರಂಪರೆ ಎನ್ನುವುದು ವಸ್ತು ಸಂಗ್ರಹಾಲಯದ ಪಳೆಯುಳಿಕೆಯಲ್ಲ ; ಬದಲಾಗಿ ಜೀವಿತದಲ್ಲಿ ಪ್ರತಿಭಾವಂತರ ಫಲದಿಂದಾಗಿ ಬೆಳೆಯುವ, ಬದಲಾವಣೆಗೊಳಪಡುವ, ಪುನರ್‌ರಚಿಸುವ ಪ್ರಕ್ರಿಯೆಯುಳ್ಳದ್ದು ಎಂಬುದು ಈಗಿನಂತೆ ಆಗಿನ ಕಾಲದಲ್ಲೂ ಗೊತ್ತಿರದಿದ್ದ ಬಹಳಷ್ಟು ಮಂದಿ ಇದ್ದರು !

(ಸಶೇಷ..)

Leave a Reply

*

code