ಅಂಕಣಗಳು

Subscribe


 

ರುಕ್ಮಿಣೀದೇವಿ- ಭಾಗ 10

Posted On: Sunday, August 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಕಳೆದ ಸಂಚಿಕೆಯಲ್ಲಿ..

(ರುಕ್ಮಿಣೀ ತಾವು ಕಲಿತಿದ್ದನ್ನು ಸಮಯ, ಸಂದರ್ಭವರಿತು ಸಂಸ್ಕೃತಿಗೆ ಏನು ಅಗತ್ಯವೋ ಅದನ್ನು ಪರಂಪರೆಯ ಅಡಿಪಾಯದಲ್ಲಿ ಹೊಸತಾಗಿ ಪುನರ್ ರೂಪಿಸುತ್ತಿದ್ದರು. ಅದರಲ್ಲೂ ವಿದೇಶಿ ತಂತ್ರಜ್ಞರಿಗೆ ಭಾರತೀಯ ರಂಗದ ಪರಿಜ್ಞಾನ ಅಷ್ಟಾಗಿ ಇರಲಿಲ್ಲವಾದದ್ದರಿಂದ ಅವರ ಸಹಕಾರವಿದ್ದರೂ, ರುಕ್ಮಿಣೀ ಅವರ ಮಾರ್ಗದರ್ಶನವಿಲ್ಲದೇ ಅಗುತ್ತಿರಲಿಲ್ಲ. ಪರಂಪರೆಯ ಆತ್ಮವನ್ನು ಒಯ್ಯುವಲ್ಲಿ ಮತ್ತು ಕಾಣಿಸುವಲ್ಲಿ ನಿಚ್ಚಳವಾಗಿ ಅವರ ಸಂಯೋಜನೆಗಳ ಪ್ರಭಾವ ತುಂಬಾ ದೊಡ್ಡದು. ಕೊರವಂಜಿಯ ಮುಖ್ಯ ಪ್ರದರ್ಶನಗಳಲ್ಲಿ ಕುಟ್ರಾಲಂ ದೇವಸ್ಥಾನದಲ್ಲಿ ಜರುಗಿದ್ದು ಅತೀ ಆಪ್ತವಾದದ್ದು ಎನ್ನುವುದು ರುಕ್ಮಿಣೀ ಅವರ ಅನಿಸಿಕೆ. ರುಕ್ಮಿಣೀ ಎಂದಿಗೂ ತನ್ನನ್ನು ಪರಂಪರೆಯ ಪ್ರತಿನಿಧಿಯೆಂದೋ, ಸುಧಾರಕಿಯೆಂದೋ ಕರೆಸಿಕೊಳ್ಳಲು ಇಷ್ಟಪಡಲಿಲ್ಲ.

ಆದರೆ ರುಕ್ಮಿಣೀ ದೇವಿ ಅವರ ಸಹೋದರ ಯಜ್ಞೇಶ್ವರ ಶಾಸ್ತ್ರಿ ನಿಧಾನವಾಗಿ ಕಟು ವಿಮರ್ಶೆಗಳನ್ನು ಮಾಡುತ್ತಾ ಕಲಾಕ್ಷೇತ್ರದಿಂದ ದೂರ ಸರಿಯುತ್ತಲೇ ಹೋದರು. ಅವರಿಗೆ ರುಕ್ಮಿಣೀ ಅವರ ವಿನೂತನ ಪ್ರಯತ್ನಗಳು ಚೆನ್ನಾಗಿ ಕಂಡರೂ ಎಲ್ಲಿ ಕೊನೆಗೆ ಒಳಿತಿಗಿಂತ ಕೆಡುಕನ್ನೇ ಕಾಣುವಂತೆ ಮಾಡುತ್ತವೋ ಎಂಬ ಹೆದರಿಕೆ ಇತ್ತು ! )

ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಕಲೆಯನ್ನು ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿ ಗೆದ್ದು ಬಂದವರು ರುಕ್ಮಿಣೀ. ದೇವಾಲಯಗಳಲ್ಲಿ ನೃತ್ಯವನ್ನು ನಿಷೇಧಿಸಲು ಕಾಯ್ದೆ ತರಹೊರಟಿದ್ದ ಮುತ್ತುಲಕ್ಷ್ಮಿ ರೆಡ್ಡಿಯವರು ಕೂಡಾ ತಾವು ನಡೆಸುತ್ತಿದ್ದ ‘ಅವ್ವೈ’ ಆಶ್ರಮದಿಂದಲೂ ಹೆಣ್ಣು ಮಕ್ಕಳನ್ನು ನೃತ್ಯಾಭ್ಯಾಸಕ್ಕೆ ಕಳುಹಿಸುತ್ತಿದರೆಂದರೆ ಅದು ಸುಲಭದ ಮಾತೇ ? ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುವುದು ಎಂದರೆ ಹೀನವಾಗಿಯೇ ಕಾಣುತ್ತಿದ್ದ ಕಾಲವದು. ವಿದ್ಯಾಭಾಸ ಪದ್ಧತಿಯ ಲೋಪ, ಅಪಸವ್ಯಗಳು ತಿಳಿದಿದ್ದರೂ ಗುರು ಶಿಷ್ಯ ಪರಂಪರೆಯೇ ಮುಖ್ಯವೆಂದು ಪ್ರೋತ್ಸಾಹಿಸಿದರು. ತನ್ನ ಶಿಷ್ಯರನ್ನೆಲ್ಲಾ ಸ್ವಂತ ಮಕ್ಕಳಂತೆಯೇ ಬೆಳೆಸಿದರು. ಶಿಷ್ಯರು ಅತ್ತೆ, ಅಕ್ಕ, ಅಮ್ಮ ಎಂದೆಲ್ಲಾ ಸಂಬೋಧಿಸಿಸುತ್ತಿದ್ದರೇ ವಿನಾ ಔಪಚಾರಿಕ ಚೌಕಟ್ಟಿನ ಸಂಬಂಧವಿರಲಿಲ್ಲ.

ಪ್ರತಿಭೆಗೆ ಮಾನ್ಯತೆ ಕೊಡುವುದು ಮುಖ್ಯ ಎಂದು ಅರಿತಿದ್ದ ರುಕ್ಮಿಣೀ ಹೊಸಬರಿಗೆ ಅನುಕೂಲವನ್ನು ಮಾಡಿಕೊಟ್ಟರು. ಸಂಗೀತ ಮನೆತನದವರಲ್ಲದ ಕಲಾವಿದರಿಗೂ ವೇದಿಕೆಗಳಲ್ಲಿ ಅವಕಾಶ ರುಕ್ಮಿಣಿಯಿಂದಾಗಿಯೇ ಬೆಳೆದು ಬಂತು. ಮೊದಮೊದಲು ಮನೆಯಲ್ಲಿ, ಸೊಸ್ಶೆಟಿಯ ಆವರಣದಲ್ಲಿ ಪಾಠ ಹೇಳಿಕೊಡುತ್ತಿದ್ದರಾದರೂ ಕ್ರಮೇಣ ನಿರಂತರ ಶಿಕ್ಷಣದ ಅಗತ್ಯವರಿತು ೫ ವರ್ಷಗಳ ಸಂಸ್ಕೃತ, ಸಂಗಿತ, ಚಿತ್ರಕಲೆ, ತಾಳವಾದ್ಯಗಳನ್ನೊಳಗೊಂಡ ಕೋರ್ಸ್ ಪ್ರಾರಂಭಿಸಿದರು. ಅವರ ಶಿಷ್ಯ ಶಂಕರ್ ಮೆನನ್ ಹೇಳಿದಂತೆ ‘ರುಕ್ಮಿಣಿ ಹುಟ್ಟು ಹೋರಾಟಗಾರ್ತಿ. ಬಹುಪಾಲು ಮಂದಿ ಸೂಚಿಸುವ ದಾರಿ ಎಂದು ಯಾವತ್ತೂ ನಡೆದವರಲ್ಲ.’

ವೇದಿಕೆಗೆ ನೀಲಿ ಬಣ್ಣದ ಪರದೆಗಳ ಬಳಕೆ, ಬೆಳಕಿಗೆ ಜಿಲೆಟಿನ್, ನಟ್ಟುವನ್ನಾರ್ ಮತ್ತು ಹಿನ್ನಲೆ ವಾದ್ಯದದವರನ್ನು ವೇದಿಕೆಯ ಬಲಬದಿಗೆ ಕುಳಿತುಕೊಳ್ಳುವಂತೆ ಮಾಡಿದ್ದು, ಎಂದಿಗೂ ಯಾರೂ ಯೋಚಿಸದಿದ್ದ ‘ ಡ್ಯಾನ್ಸ್ ಆಫ್ ನಟರಾಜ’ ಮುಂತಾದ ಸಂಯೋಜನೆಗಳು, ತಮಗಾಗಿ ಮಾಡಿಕೊಂಡ ವಸ್ತ್ರವಿನ್ಯಾಸಗಳು.. ಹೀಗೆ ನೃತ್ಯದಲ್ಲಿ ಇಂದಿಗೆ ಬಳಸುವ ಅದೆಷ್ಟೋ ಸಂಗತಿಗಳು ರುಕ್ಮಿಣಿ ಅವರಿಂದಾಗಿಯೇ ಮಾರ್ಪಾಡು ಹೊಂದಿ ಚಲಾವಣೆಗೆ ಬಂದದ್ದು ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ವಿಷಯದ ಪೂರ್ಣ ಅರಿವಿಲ್ಲದೆ ಅಂಧಾನುಕರಣೆ ಮಾಡುವವರೇ ನಮ್ಮೊಳಗೆ ಬೇಕಾದಷ್ಟಿದ್ದಾರೆ. ಇಂತವರ ಬಗ್ಗೆ ರುಕ್ಮಿಣಿ ಅವರಿಗೆ ಆಗಲೇ ಅರಿವಿತ್ತು. ಆದರೂ ತಾವಿತ್ತ ಆಲೋಚನೆಗಳು ಮಾದರಿಯಾದದ್ದಕ್ಕೆ ಸಂತಸಪಟ್ಟಿದ್ದರು. ‘ಅಂತಹ ಯೋಚನೆಗಳು ಉತ್ತಮವಾಗಿರಬಹುದು ; ಆದರೆ ಸ್ವಂತಿಕೆಯು ಕೊಡುವ ಪ್ರೇರಣೆ ಎಂಬುದು ಬೇರೆಯೇ. ಅಲ್ಲದೆ ಸಮಯ, ಸಂದರ್ಭ, ಪ್ರಸ್ತುತತೆಯನ್ನರಿಯದ ಪ್ರಯೋಗ ಎಂದೆಂದಿಗೂ ದೊಡ್ಡ ಮಟ್ಟಿಗಿನ ಕೆಟ್ಟದ್ದನ್ನೇ ಉಂಟುಮಾಡುತ್ತದೆ’ ಎಂಬ ಎಚ್ಚರಿಕೆ ಕೊಟ್ಟಿದ್ದರೂ ಕೂಡಾ !

ದೇವಸ್ಥಾನ ಪದ್ಧತಿಯ ಲೋಪದೋಷಗಳಿಂದ ನೃತ್ಯವನ್ನು ಆಚೆಗೆಳೆದು ನೃತ್ಯಕ್ಕೇ ದೇವಾಲಯದ ಸ್ವರೂಪ ಕೊಟ್ಟಿದ್ದರು ರುಕ್ಮಿಣೀ. ಆದರೆ ಅವರೆಂದೂ ತಾವು ಕಲಿತದ್ದನ್ನೆಲ್ಲಾ ಒಂದೇ ಸಲ ಪ್ರಯೋಗ ಮಾಡುತ್ತಿರಲಿಲ್ಲ. ಕೊರವಂಜಿಯ ಸ್ವರೂಪಕ್ಕೆ ಜನಪದ ಶೈಲಿಯನ್ನಷ್ಟೇ ಬಳಸಿದರೆ, ಭಾಗವತ ಮೇಳಕ್ಕೆ ಮೇಲತ್ತೂರಿನಿಂದ ಗುರುಗಳನ್ನು ಕರೆಸಿ ಪಾಠ ಮಾಡಿಸಿದರು. ರಾಮಾಯಣಕ್ಕೆ ಕಥಕ್ಕಳಿಯ ಗುರುಗಳಿಂದ ಮತ್ತಷ್ಟು ಭವ್ಯತೆಯ ಸೊಬಗನ್ನಿತ್ತಿದ್ದರು. ಹಾಗೆ ನೋಡಿದರೆ ಕೊರವಂಜಿಗಿಂತಲೂ ಮೊದಲೇ ಅಮೇರಿಕನ್ -ಇಂಡಿಯನ್ ರೂಪಕ ‘ಹಯವತ’ವನ್ನು ಮಕ್ಕಳಿಗಾಗಿ ೧೯೩೦ರಲ್ಲಿ ಸಂಯೋಜಿಸಿದ್ದರು ಕೂಡಾ !

ನೃತ್ಯದ ಸಂಯೋಜನಾ ಕಲ್ಪನೆಗೆ ಪುರಾಣ, ಶಿಲ್ಪಕಲೆ- ಪ್ರತಿಮಾಶಾಸ್ತ್ರಗಳ ಆಳವಾದ ಅಧ್ಯಯನ ಬೇಕು ಎಂಬುದು ಅವರ ಅಭಿಮತ. ಅವರ ಬಹಳಷ್ಟು ಹೊಸತೆನಿಸುವ ಸಂಯೋಜನೆಗಳು ಪುರಾತನದ ಮರುಸೃಷ್ಟಿಯಲ್ಲದೇ ಬೇರೇನಲ್ಲ. ನಿಜವಾದ ಸೃಷ್ಟಿಶೀಲತೆಗೆ ಆಧಾರ ಆಧ್ಯಾತ್ಮಿಕ ಸಂಸ್ಕಾರ ; ಅದರಿಂದಲೇ ಸಂಸ್ಕೃತಿ ಅನೂಚಾನವಾಗಿ ತಲೆಮಾರುಗಳಿಂದ ಹರಿದು ಬರುತ್ತಲಿದೆ ; ಇದರ ವಿನಾ ಸೃಷ್ಟಿ ಎನ್ನುವುದು ಕೇವಲ ಬಿಳುತ್ತಿರುವ ಸೌಧಕ್ಕೆ ಒಳಾಂಗಣ ವಿನ್ಯಾಸ ಮಾಡಿದಂತೆಯೇ ಸರಿ ಎನ್ನುವುದು ಅವರ ಬಲವಾದ ನಂಬಿಕೆ. ಹಾಗಾಗಿ ಹೊಸತು ಮತ್ತು ಹಳತರ ನಡುವೆ ಅಪೂರ್ವವಾದ ಎಳೆಯನ್ನು ಸಾಧಿಸಬಹುದು. ಹಳತಿನ ಸಾಂಗತ್ಯವಿಲ್ಲದ ಹೊಸತು ನಿರ್ಜೀವ, ಹೊಸತಿನ ಸ್ಪರ್ಶವಿಲ್ಲದ ಹಳತು ನಿಂತ ನೀರು ಎಂಬುದು ಅವರ ವಾದ. ಇದಕ್ಕೆ ಸಾಕ್ಷಿ ಸಾಂಪ್ರದಾಯಿಕ ವಿಧಾನಗಳಿಗೆ ಹೊಸ ಆಲೋಚನೆ, ನಿವೇದನೆ ಮತ್ತು ದಿಕ್ಕನ್ನು ಇತ್ತ ಅವರ ಹಲವು ಸಂಯೋಜನೆಗಳು.

ಕೇವಲ ವಿಷಯಾತ್ಮಕವಾಗಿ ಅಲ್ಲದೆ, ಪ್ರಾಯೋಗಿಕವಾಗಿಯೂ, ತಾಂತ್ರಿಕವಾಗಿಯೂ ಅರಿವನ್ನು ಪಡೆದುಕೊಳ್ಳುವ ಮತ್ತು ಇವೆಲ್ಲದರಿಂದಲಷ್ಟೇ ಬದಲಾವಣೆ, ಪರಿವರ್ತನೆ ಸಾಧ್ಯ ಎಂಬ ಮನೋಭಾವ ಕಲಾಕ್ಷೇತ್ರದ್ದಾಗಿತ್ತು. ಕಾಲವು ಕಲೆಯಿಂದ ಅಗಾಧವಾದ ವಿವರಣೆಯನ್ನು, ಗಟ್ಟಿತನವನ್ನು, ಸಂಕೀರ್ಣತೆಯನ್ನು ನಿರೀಕ್ಷಿಸುತ್ತದೆ ಎಂಬುದು ರುಕ್ಮಿಣಿಯವರ ಅನಿಸಿಕೆ. ಉದಾಹರಣೆಗೆ ಅಭಿನಯ ದರ್ಪಣದಿಂದಾಚೆಗೆ ಹಸ್ತ ಮುದ್ರೆಗಳ ಮಾದರಿಗಳು ದುಪ್ಪಟ್ಟಾದವು. ಹಲವು ವಿದ್ವಾಂಸರು ಕಲೆಯ ಮಟ್ಟ ಹೆಚ್ಚಿದಂತೆಲ್ಲಾ ವಿಷಯಗಳನ್ನು ಮತ್ತೂ ಸೇರಿಸುತ್ತಾ ಹೋದರು. ಅವರೇ ಹೇಳಿದಂತೆ ‘ಕೆಲವೊಂದು ಪ್ರಚಲಿತದಲ್ಲಿರುವ ಹಸ್ತಗಳು ನಮಗನ್ನಿಸಿದ ಉದ್ದೇಶಿತಾರ್ಥವನ್ನು ಕೊಡುತ್ತಿಲ್ಲವೆಂದು ಅನ್ನಿಸಿದಾಗ ನಾನೇ ಎಷ್ಟೋ ಹೊಸ ವಿನಿಯೋಗಗಳನ್ನು ಹುಡುಕಿಕೊಳ್ಳುವಂತಾಗಿದೆ. ಕೆಲವೊಂದು ನೃತ್ಯಪ್ರಕಾರಗಳು ಕಣ್ಮರೆಯಾಗಿದ್ದರೂ ಅದು ಭಾವಾಭಿವ್ಯಕ್ತಿಗೆ ಉಪಯೋಗ ಎಂದರಿತು ಅಳವಡಿಸಿಕೊಂಡಿದ್ದೇನೆ. ಹಾಗಾಗಿ ಆಳವಾದ ಸಂಶೋಧನೆಗಳು ನಡೆಯಬೇಕಾಗಿದೆ’

ಸಂಶೋಧನಾ ಪ್ರವೃತ್ತಿ ರುಕ್ಮಿಣೀಯಲ್ಲಿ ಹಾಸುಹೊಕ್ಕಾಗಿತ್ತು. ಒಂದರ್ಥದಲ್ಲಿ ಅನ್ನಿ ಬೆಸೆಂಟ್ ಅವರ ಮಾನಸ ಪುತ್ರಿಯೇ ಆಗಿಹೊಗಿದ್ದರು. ಕೇವಲ ಸಂಗೀತ, ನೃತ್ಯ ಕಲೆಗಳಷ್ಟೇ ಅಲ್ಲ ; ಭಾರತದ ಎಲ್ಲಾ ದೇಶೀಯ, ಸಾಂಪ್ರದಾಯಿಕ ಕಲೆಗಳು ಪುನರುಜ್ಜೀವನ ಕಾಣಬೇಕು ಎಂಬ ಧ್ಯೇಯ ಅವರದ್ದು. ಕಲೆಯ ಮೂಲಕ ದೇಶದ ಐಕ್ಯ ಎಂದರಿತಿದ್ದರು ಅರುಂಡೇಲ್. ಆದ್ದರಿಂದ ೧೯೩೭ರಲ್ಲಿಯೇ ಕಾರ್ಮಿಕ ಮತ್ತು ಕೈಗಾರಿಕಾ ಇಲಾಖೆಯ ಮೂಲಕ ನೇಯ್ಗೆ ಕೇಂದ್ರವನ್ನು ಸ್ಥಾಪಿಸಿ ಪುರಾತನ ಕಲೆಗೆ ಹೊಸ ಸ್ಪರ್ಶವನ್ನಿತ್ತರು. ಅವರ ಮುಂದಾಳತ್ವದಲ್ಲಿ ಬೆಳಕು ಕಂಡ ಕಲಾಕ್ಷೇತ್ರ ಸೀರೆ ಉದ್ಯಮ ಉತ್ತಮ ಅಭಿರುಚಿಯ, ಒಳ್ಳೆಯ ಗುಣಮಟ್ಟದ ವಸ್ತವಿನ್ಯಾಸಗಳಿಂದ ಶೋಭಿಸಿತು.

ಕಲೆಯು ಕರಕುಶಲ ವಸ್ತು ಮತ್ತು ಸಂಶೋಧನಾ ಕೆಂದ್ರವನ್ನು ಸ್ಥಾಪನೆ ಅವರ ದೂರದೃಷ್ಟಿಗೆ ಮತ್ತೊಂದು ಸಾಕ್ಷಿ. ಕಲಾಂಕಾರಿ ಎಂಬ ಈ ಕರಕುಶಲ ವಸ್ತು ಅಧ್ಯಯನ ಮತ್ತು ತಯಾರಿಕಾ ಕೇಂದ್ರ ರುಕ್ನಿಣೀ ಅವರ ಪ್ರಯತ್ನಗಳಿಗೆ ಮತ್ತೊಂದು ಕೈಗನ್ನಡಿ. ತರುವಾಯ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಯೋಜನೆಗಳಿಂದ ಮುಂದುವರೆದುಕೊಂಡು ಬಂತು.

ಕುಟ್ರಾಲ ಕೊರವಂಜಿಯ ಅದ್ಭುತ ಯಶಸ್ಸಿನ ನಂತರದ ಅವರ ನೋಟ ಕಾಳಿದಾಸನ ಕುಮಾರಸಂಭವಂ. ಅದರಲ್ಲಿ ಸ್ವತಃ ರುಕ್ಮಿಣೀಯವರದ್ದೇ ನಾಯಕಿ ಪಾತ್ರ !

(ಸಶೇಷ)

Leave a Reply

*

code