ಅಂಕಣಗಳು

Subscribe


 

ನೃತ್ಯ ರಂಗದ ಅನಭಿಷಿಕ್ತ ರಾಣಿ: ರುಕ್ಮಿಣಿ- ಭಾಗ 3

Posted On: Monday, February 16th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

…… ಈವರೆಗೆ

Rukmini Devi arundale

Rukmini Devi arundale

( ಹೆಸರಾಂತ ರಷ್ಯನ್ ಬ್ಯಾಲೆ ಕಲಾವಿದೆ ಅನ್ನಾ ಪಾವಲೋವಾ ಅವರ ಮಾರ್ಗದರ್ಶ ದಲ್ಲಿ ಬ್ಯಾಲೆ ಕಲಿತ ರುಕ್ಮಿಣಿ, ಪಾವಲೋವಾ ಅವರ ಸೂಚನೆಯಿಂದ ಪ್ರೇರಿತರಾಗಿ ಭಾರತಕ್ಕೆ ಬಂದು ನೃತ್ಯ ಪದ್ಧತಿಗಳಿಗೆ ಪುನರುಜ್ಜೀವ ಕೊಡುವ ಕೆಲಸಕ್ಕೆ ಸಿದ್ಧರಾಗುತ್ತಾರೆ. ಆ ಹೊತ್ತಿಗೇ, ೧೯೩೩ ರಂದು ನೃತ್ಯ ಸಂಗಿತ ಅಕಾಡೆಮಿಯ ವಾರ್ಷಿಕೋತ್ಸವದ ನೃತ್ಯ ಪ್ರದರ್ಶನವೊಂದಕ್ಕೆ ಕೃಷ್ಣ ಅಯ್ಯರ್ ಅವರಿಂದ ಆಹ್ವಾನದ ಕರೆ ತಲುಪುತ್ತದೆ.)

Rukmini Devi arundale

Rukmini Devi arundale

ಅದು ನೃತ್ಯ ಸಂಗೀತ ಅಕಾಡೆಮಿಯ ವಾರ್ಷಿಕೋತ್ಸವ.. ಮೀನಾಕ್ಷಿ ಸುಂದರಂ ಪಿಳ್ಳೈ ಅವರ ಶಿಷ್ಯೆಯರಾದ ಜೀವರತ್ನಂ, ರಾಜೇಶ್ವರಿಯವರ ಸಾದಿರ್ ಶೈಲಿಯ ನೃತ್ಯ ಕಾರ್ಯಕ್ರಮ..
ಸಾದಿರ್..? ಯಾವುದನ್ನು ನಾವೀಗ ಸಂಸ್ಕೃತಿಯ ಅಮೂಲ್ಯ ಬೆಸುಗೆಯೆಂದು ಕೊಂಡಾಡಿ ಕಲಿಯುತ್ತೇವೆಯೋ ಅದೇ ಭರತನಾಟ್ಯದ ಮೂಲ ರೂಪ ಅದು., ಈಗ್ಗೆ ೭೦ ವರ್ಷಗಳ ಮೊದಲು ಸಾದಿರ್, ಕೂತ್ತು ಎಂದೆಲ್ಲಾ ಜನರಿಂದ ಕರೆಸಿಕೊಂಡು ದೇವದಾಸಿಯರ ಜೀವನದ ಭಾಗವೇ ಆಗಿ ಹೋಗಿ, ವೇಷಭೂಷಣ, ಹಿನ್ನಲೆ ಸಂಗೀತ, ನೃತ್ಯ ಭಾವಾಭಿನಯ ಗಳು, ನಾಟ್ಯಕ್ರಮ ಎಲ್ಲವೂ ದೋಷಪೂರಿತ ವಾಗಿ, ಎಲ್ಲರಿಂದಲೂ ತುಚ್ಛೀಕರಿಸಲ್ಪಟ್ಟು, ದುರಂತ ಅಂತ್ಯ ಎದುರಿಸಲಿದ್ದ ಕಲಾಪ್ರಕಾರವದು.
ರುಕ್ಮಿಣಿ ಅಚ್ಚರಿಯ ಬಿಡುಗಣ್ಣು ಗಳಿಂದ ಅದೇ ಮೊದಲ ಬಾರಿಗೆ ದಕ್ಷಿಣ ಭಾರತದ ನೃತ್ಯಪ್ರಕಾರವೊಂದನ್ನು ನೋಡಿದ್ದು..
ನೋಡಿದ ಕ್ಷಣವೇ ಸಾದಿರ್‌ನ್ನು ಕಲಿಯಲು ತೀರ್ಮಾನಿಸಿಯಾಗಿತ್ತು.
ಆದರೆ ಬ್ರಾಹ್ಮಣ ಕುಲದಲ್ಲಿ ಜನಿಸಿ ಸಾವಿರಾರು ಟೀಕೆಗಳ ನಡುವೆ ಎದ್ದುಬಂದರೂ ರುಕ್ಮಿಣಿಗೆ ಅಷ್ಟು ಸುಲಭ ವಾಗಿರಲಿಲ್ಲ. ಅದರಲ್ಲೂ ಒಳ್ಳೆಯ ಗುರು ಮತ್ತು ನೃತ್ಯ ವಾತಾವರಣ ಎಂಬುದು ಆಗಿನ ಕಾಲಕ್ಕೆ  ತೀರಾ ತ್ರಾಸದಾಯಕ ಸಂಗತಿ. ಸಾದಿರ್ ಸಂಪೂರ್ಣವಾಗಿ ದೇವದಾಸಿ ಪದ್ಧತಿಗಳೊಳಗೆ ಅಡಗಿ ಕುಳಿತು ಕಲಾವಿದರಿಗೆ ಮಹತ್ವವೇ ಇಲ್ಲದ ಕಾಲವದು. ಬಡವರಿಗಂತೂ ಕೈಗೆಟುಕದ ಕಠೋರ ವಾಸ್ತವ. ಪ್ರೋತ್ಸಾಹವೇ ಇರದಿದ್ದ ಕಾಲಕ್ಕೆ, ಒಂದು ವೇಳೆ ಕಲಿಯುತ್ತೇನೆಂದು ಹೊರಟರೂ ನಾನಾ ಅಡ್ಡಿ ಆತಂಕ, ಜೊತೆಗೆ ಬೆನ್ನಿಗೊಂದು ಗುದ್ದು ಎಂಬಂತೆ ಸಮಾಜದ ದೋಷಾರೋಪಣೆಗಳು, ಅಪವಾದ, ಅವಮಾನ, ಅನುಮಾನ. ಮಾತ್ರವಲ್ಲ, ಹಲವು ಬಗೆಯ ದೋಷಗಳಿಂದ,  ತುಂಬಿದ್ದ ನೃತ್ಯ ಪದ್ಧತಿಯನ್ನು ವಿದ್ವಾಂಸರೂ ನೋಡಲು ಹಿಂದೇಟು ಹಾಕುತ್ತಿದ್ದಾಗ ಇನ್ಯಾರು ಬಂದಾರು ಸಾದಿರ್ ನೃತ್ಯ ಪ್ರದರ್ಶನಗಳಿಗೆ. ಹೀಗಿದ್ದಾಗ ರುಕ್ಮಿಣಿಗೆ ?
ಸಾದಿರ್ ಕಲಿಯುವ ಹಂತದಲ್ಲಿ ಮಾತ್ರವಲ್ಲ, ಅದಾದ ನಂತರವೂ ತಾಯಿ ಶೇಷಮ್ಮಾಳ್ ಬಳಿ, ಕುಟುಂಬ-ಸಮಾಜದ ಒಳಗೆ ಸಂಬಂಧಿಕರು, ನೆರೆಹೊರೆಯವರು, ಕರ್ಮಠ ಸಂಪ್ರದಾಯಿಗಳು ದೂರಿಕೊಂಡು ಹೀಯಾಳಿಸಿದರೂ ಕೂಡಾ! ಆದರೆ ತಾಯಿ ಶೇಷಮ್ಮಾಳ್, ಸಹೋದರರು ಮತ್ತು ಅದಾಗಲೇ ಅನಿ ಬೆಸೆಂಟ್‌ರ ತರುವಾಯ ಥಿಯೋಸೋಫಿಕಲ್ ಸೊಸೈಟಿಯ ಜವಾಬ್ದಾರಿ ವಹಿಸಿಕೊಂಡಿದ್ದ ಪತಿ ಜಾರ್ಜ್ ಅರುಂಡೇಲ್ ಅವರ ಪ್ರೋತ್ಸಾಹ, ಸಹಕಾರ ಸಿಕ್ಕಿತ್ತು.

Rukmini Devi arundale

Rukmini Devi arundale

ಕಲೆಯ ಹಂಬಲ ರುಕ್ಮಿಣಿಯನ್ನು ಮೊದಲು ಕರೆತಂದಿದ್ದು, ಗುರು ಮುತ್ತು ಕುಮಾರ್ ಪಿಳ್ಳೈ ಅವರ ಬಳಿ. ಸಾದಿರ್‌ನ ಮೊದಲ ಹೆಜ್ಜೆಗಳನ್ನಿರಿಸಿದ್ದು ಅವರ ಮಾರ್ಗದರ್ಶನದಲ್ಲೇ !
ಅದಾದ ನಂತರ ಆ ಕಾಲದ ಖ್ಯಾತ ದೇವದಾಸಿ ಕಲಾವಿದೆ ಮೈಲಾಪುರ ಗೌರಿ ಅಮ್ಮಾಳ್ ಅವರಿಂದ ಅಭಿನಯ ಕಲಿಕೆ..
ಅದರೂ ಆಗಿನ ಕಾಲಕ್ಕೆ ಹೆಸರಾಂತ ಗುರುಗಳೆಸಿದ್ದ ಮೀನಾಕ್ಷಿ ಸುಂದರಂ ಪಿಳ್ಳೈ ಅವರಲ್ಲಿ ಶಿಷ್ಯತ್ವ ಮಾಡಬೇಕೆಂಬ ಕನಸು ಅಷ್ಟು ಸುಲಭಕ್ಕೆ ಈಡೇರಿರಲಿಲ್ಲ. ಆಗ ರುಕ್ಮಿಣಿಗೆ ೨೯ ವರ್ಷ ವಯಸ್ಸು.
ತಂಜಾವೂರು ಪೊನ್ನಯ್ಯ ಪಿಳ್ಳೈ ಅವರ ಮೊಮ್ಮಗ ಮೀನಾಕ್ಷಿ ಸುಂದರಂ ಪಿಳ್ಳೈ. ತಾತ ಪೊನ್ನಯ್ಯ ಪಿಳ್ಳೈ ತಂಜಾ ವೂರಿನ ತುಳಜಾಜಿ ರಾಜರ ಅಸ್ಥಾನದಲ್ಲಿ ಖ್ಯಾತ ವಿದ್ವಾಂಸರೆಸಿಕೊಂಡ ಮಹಾನು ಭಾವರು. ಸಹೋದರರಾದ ಚಿನ್ನಯ್ಯ, ಶಿವಾನಂದ, ವಡಿವೇಲು ಅವರ ಜೊತೆ ಗೂಡಿ ಸಾದಿರ್ ಅಂದರೆ ಭರತನಾಟ್ಯ ಕ್ಷೇತಕ್ಕೆ ಒಂದು ಪರಿವಿಡಿಯನ್ನು ಸಿದ್ಧಪಡಿಸಿ ಕೊಟ್ಟವರಲ್ಲಿ ಒಬ್ಬರಾಗಿದ್ದರು. ಇಂದು ನಾವು ನೋಡುವ ನಾಟ್ಯಕ್ರಮವನ್ನು ಸಿದ್ಧಪಡಿಸಿಕೊಟ್ಟವರೇ ಅವರು. ಹಸ್ತಗಳನ್ನು ನೃತ್ಯಕ್ಕಾಗಿ, ಅಭಿನಯಕ್ಕಾಗಿ ವಿಂಗಡಿಸಿ ದುದಲ್ಲದೆ, ನೃತ್ಯದ ಜೀವಾಳವಾದ ಅಡವು ಗಳನ್ನು ಹತ್ತು ವಿಧವಾಗಿ ವರ್ಗೀಕರಿಸಿ ಅದರಲ್ಲಿ ಹನ್ನೆರಡು ಬೇಧಗಳನ್ನು ಮಾಡಿ ನೃತ್ಯಕ್ಕೆ ಹೊಸ ರೂಪ ಕೊಟ್ಟವರು.
ಅದರೊಂದಿಗೆ ಹಲವಾರು ಕೃತಿ, ಜತಿಸ್ವರ, ಅಲರಿಪು, ಪದ, ಜಾವಳಿ, ಪದವರ್ಣ, ತಾನವರ್ಣ, ತಿಲ್ಲಾನಗಳನ್ನು ರಚನೆ ಮಾಡಿ ಸಂಗೀತ ಮತ್ತು ನೃತ್ಯ ಕ್ಷೇತ್ರಕ್ಕೆ ಅಸಾಧಾರಣ ಕೊಡುಗೆಗಳ ನ್ನಿತ್ತವರು. ತುಳಜಾಜಿ ಮಹಾರಾಜರಿಂದ ‘ಸಂಗೀತ ಸಾಹಿತ್ಯ ಭರತ ಶ್ರೇಷ್ಠ’ ಎಂಬ ಬಿರುದನ್ನು ಪಡೆದ ಪೊನ್ನಯ್ಯ ಪಿಳ್ಳೈ ಅವರು ತಮಗೆ ದೊರೆತ ಹಣವನ್ನೆಲ್ಲಾ ತಂಜಾವೂರಿನ ಬೃಹದೀಶ್ವರ ದೇವಾಲಾಯದ ರಥೋತ್ಸವಕ್ಕೆ ವಿಯೋಗಿಸುತ್ತಿದ್ದರು. ಇವರ ಮಗಳು ಪೆರಿಯ ಕುಟ್ಟಿಯವರ ಮಗನೇ ಮೀನಾಕ್ಷಿ ಸುಂದರಂ ಪಿಳ್ಳೈ. ಕಟ್ಟುನಿಟ್ಟಿನ ಗುರು.
ಹೀಗೆ ಸಂಗೀತ, ನೃತ್ಯದ ಪಾರಂಪರಿಕ ಶ್ರೀಮಂತಿಕೆಯೇ ಮೂರ್ತಿವೆತ್ತಂತಿದ್ದ ಮೀನಾಕ್ಷಿ ಸುಂದರಂ ಪಿಳ್ಳೈ ಅವರಲ್ಲಿ ಕಲಿಯುವುದು ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ. ಇ. ಕೃಷ್ಣ ಅಯ್ಯರ್ ಅವರ ನೆರವಿಂದ ರುಕ್ಮಿಣಿ ನಿವೇದಿಸಿ ಕೊಂಡರೂ ಗುರು ಪಿಳ್ಳೈ ಅವರು ನಿರಾಕರಿಸಿದ್ದರು !
ಕಾರಣ, ಚಿಕ್ಕ ಹುಡುಗಿಯಂತೆ ಕಾಣುವ ರುಕ್ಮಿಣೀಗೆ ಸಾದಿರ್ ಕಲಿ ಯುವಷ್ಟು ತಾಕತ್ತು, ಪ್ರತಿಭೆ ಇರಲಿಕ್ಕಿಲ್ಲ ಎಂದು ಅವರ ಆಲೋಚನೆಯಾಗಿತ್ತು !
ಆದರೂ ರುಕ್ಮಿಣಿಯ ಮನವಿ ಗಾಢವಾಗಿಯೇ ಪಿಳ್ಳೈ ಅವರನ್ನು ಹಿಂಬಾ ಲಿಸಿತ್ತು. ಸರಿ, ಈಕೆಯನ್ನು ಪರೀಕ್ಷೆ ಮಾಡಿ ದರೆ ಹೇಗೆ ? ತಮ್ಮ ಅಳಿಯ ಸಂಗೀತ ಅಕಾಡೆಮಿ ಅಧ್ಯಕ್ಷ ಸಂಗೀತ ಕಲಾನಿಧಿ ಪೊನ್ನಯ್ಯ ಪಿಳ್ಳೈ ಅವರ ಬಳಿ ಕಳಿಸಿ, ಈಕೆಯ ವ್ಯಕ್ತಿತ್ವ ದೃಢತೆ ತೀರ್ಮಾನ ಮಾಡಿದರೆ..? – ಹಾಗೆಂದು ಮೀನಾಕ್ಷಿ ಸುಂದರಂ ಪಿಳ್ಳೈ ನಿರ್ಧರಿಸುತ್ತಾರೆ.
ಅದರಂತೆಯೇ, ಪೊನ್ನಯ್ಯ ಪಿಳ್ಳೈ ಬಳಿಗೆ ಸಾಗಿತು ರುಕ್ಮಿಣಿ ಪಯಣ…ಕೊನೆಗೆ, ಅವರಿತ್ತ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಪರೀಕ್ಷೆಗಳಲ್ಲಿ ಪಾಸ್!
ಅಸಾಧಾರಣ ಪ್ರತಿಭೆ ಎನ್ನುವುದು ಮನವರಿಕೆಯಾಗಿತ್ತು ಅಳಿಯ ಮಾವಂದಿರಿಗೆ..! ಮೀನಾಕ್ಷಿ ಸುಂದರಂ ಪಿಳ್ಳೈ ಸಂತೊಷದಿಂದಲೇ ಸಾದಿರ್ ಕಲಿಸಲು ಒಪ್ಪಿಕೊಂಡರು. ಗುರುಕುಲ ಪದ್ಧತಿಯಲ್ಲಿ ಕೆಲವೇ ಕೆಲವು ತಿಂಗಳುಗಳಲ್ಲಿ ಅದ್ವಿತೀಯ ಪಾಂಡಿತ್ಯವನ್ನು ಪಡೆದರು ರುಕ್ಮಿಣಿ.

George arundale- Theosophical society President

George arundale- Theosophical society President

೧೯೩೫, ಡಿಸೆಂಬರ್. ಥಿಯೋ ಸೋಫಿಕಲ್ ಸೊಸೈಟಿಯ ವಜ್ರ ಮಹೋತ್ಸವ ವರ್ಷ.. ರುಕ್ಮಿಣಿಯವರ ಮೊದಲ ಸಾದಿರ್ ನೃತ್ಯ ಪ್ರದರ್ಶನವದು..! ಆಗ ಅವರ ವಯಸ್ಸು ೩೧ ವರ್ಷ ವಯಸ್ಸು.
ಈ  ಪ್ರದರ್ಶನ ಬದಲಾವಣೆ ತಂದೀತೇ ಸಮಾಜದ ಮನಸ್ಸುಗಳಲ್ಲಿ? ಜೀವ ತುಂಬಿತ್ತೇ ನೃತ್ಯ ಪ್ರದರ್ಶನಗಳಿಗೆ..?
(-ಸಶೇಷ)

Leave a Reply

*

code