ಅಂಕಣಗಳು

Subscribe


 

ಯುವ ಕಲಾವಿದರ ಆಶಾಕಿರಣವಾದ ಯಕ್ಷಗಾನ ಪುನಶ್ಚೇತನಾ ಶಿಬಿರ

Posted On: Saturday, August 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಶಂಭಯ್ಯ ಕಂಜರ್ಪಣೆ, ವೃತ್ತಿಪರ ಯಕ್ಷಗಾನ ಕಲಾವಿದರು, ಸುಳ್ಯ

ಜೀವನದಲ್ಲಿ ಕೆಲವೊಂದು ಘಟನೆಗಳು, ಕ್ಷಣಗಳು, ವ್ಯಕ್ತಿಗಳನ್ನು ಮರೆಯಲಾಗುವುದಿಲ್ಲ. ಕಾರಣ, ಅವು ಅಷ್ಟು ಪರಿಣಾಮಕಾರಿ. ಇದಕ್ಕೊಂದು ಉತ್ತಮ ಉದಾಹರಣೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಆಯೋಜಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ಸಂಪನ್ನಗೊಂಡ ಯುವ ವೃತ್ತಿಪರ ಯಕ್ಷಗಾನ ಕಲಾವಿದರ ಪುನಶ್ಚೇತನಾ ಶಿಬಿರ.

ಇತ್ತೀಚೆಗೆ ಪ್ರತಿಯೊಬ್ಬರೂ ಬಯಸುತ್ತಿರುವುದು ಪ್ರಸಿದ್ಧಿಯನ್ನು, ಸಿದ್ಧಿಯನ್ನಲ್ಲ. ಅದು ನೃತ್ಯ ಮತ್ತು ಯಕ್ಷಗಾನದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಕಳೆದ ಜೂನ್ ೭ರಿಂದ ೧೩ ರವರೆಗೆ ೭ ದಿವಸಗಳ ಕಾಲ ಯುವ ವೃತ್ತಿಪರ ಯಕ್ಷಕಲಾವಿದರಿಗೆ ( ತೆಂಕು+ಬಡಗು) ಪುನಶ್ಚೇತನ ಶಿಬಿರವನ್ನು ಉಜಿರೆಯ ಸಿದ್ಧವನ ಗುರುಕುಲದ ಪ್ರಶಾಂತ ವಾತಾವಣದಲ್ಲಿ ಏರ್ಪಡಿಸಲಾಗಿತ್ತು. ಉಚಿತ ಊಟ ವಸತಿಯೊಂದಿಗೆ ಶಿಸ್ತಿನಿಂದಲೇ ಜರುಗಿದ ಈ ಶಿಬಿರವನ್ನು ಉದ್ಘಾಟಿಸಿದ್ದು ರಾಜ್ಯದ ಗೃಹ ಸಚಿವರಾದ ಡಾ| ವಿ.ಎಸ್. ಆಚಾರ್ಯರು. ಸಮಾರೋಪ ಸಮಾರಂಭದಲ್ಲಿ ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯೊಂದಿಗೆ ಸಮಾಪನ ಕಂಡ ಈ ಶಿಬಿರ ಅತ್ಯಂತ ಪ್ರಶಂಸನೀಯ, ಶ್ಲಾಘನೀಯವೇ ಸರಿ !

ಹೊಸ್ತೋಟ ಮಂಜುನಾಥ ಭಾಗವತರು, ಬಲಿಪ ನಾರಾಯಣ ಭಾಗವತ, ಅಮೃತ ಸೋಮೇಶ್ವರ, ಎಚ್.ಜಿ.ಶ್ರೀಧರ ಹಂದೆ ಅವರುಗಳೊಂದಿಗೆ ಕಲೆತು ಅವರ ಅನುಭಗಳಿಗೆ ಕಿವಿಯಾಗುವ ಅವಕಾಶ ; ಶತಾವಧಾನಿ ಡಾ| ಆರ್. ಗಣೇಶ್, ಡಾ| ಪ್ರಭಾಕರ ಜೋಷಿ, ಕುಂಬ್ಳೆ ಸುಂದರ ರಾವ್, ಎಂ.ಎಲ್.ಸಾಮಗ ಹೀಗೆ ವಿದ್ವಜ್ಜನರಿಂದ ಮೂಡಿಬಂದ ವಾಕ್ ಸರಣಿ ಮತ್ತು ಚಿಂತನದಿಂದಾದ ಮನೋವಿಕಾಸ ; ಕೊರ್ಗಿ ವೆಂಕಟೇಶ ಉಪಾಧ್ಯಾಯ ಅವರಿಂದ ನಡೆದ ಅರ್ಥಗಾರಿಕೆಯ ಸೂಕ್ಷ್ಮಗಳ ನಿರೂಪಣೆ ; ಸೂರಿಕುಮೇರಿ ಗೋವಿಂದ ಭಟ್, ಬಳ್ಕೂರು ಕೃಷ್ಣಯಾಜಿ ಅವರ ಬೋಧನೆ ; ಕೋಳ್ಯೂರು ರಾಮಚಂದ್ರರಾಯರು, ಸಬ್ಬಣ್ಣಕೋಡಿ ರಾಮಭಟ್, ಮಂಟಪ ಪ್ರಭಾಕರ ಉಪಾಧ್ಯಾಯರ ಅಭಿನಯ ಪ್ರಾತ್ಯಕ್ಷಿಕೆಗಳು, ಚಿ.ಸು.ಕೃಷ್ಣ ಶೆಟ್ಟಿ, ದೇವಕಾನ ಕೃಷ್ಣ ಭಟ್ ಅವರಿಂದ ವೇಷಭೂಷಣ, ಪುರುಶೋತ್ತಮ ಅಡ್ವೆ ಅವರಿಂದ ಚಿತ್ರಕಲೆ ಮತ್ತು ಬೆಳಕು ಸಂಯೋಜನೆಯ ವಿಚಾರ ವಿಮರ್ಶೆ.., ಹೀಗೆ ಹೆಜ್ಜೆಗಾರಿಕೆ, ತಂತ್ರ ಕೌಶಲ, ಸಮಕಾಲೀನ ಪ್ರಜ್ಞೆ, ರಂಗ ತಂತ್ರ, ಅಭಿನಯ, ಮಾತುಗಾರಿಕೆ, ಬಣ್ಣಗಾರಿಕೆ, ಸೃಜನಶೀಲತೆ, ಯಕ್ಷಸಾಹಿತ್ಯ, ಭಾಗವತಿಕೆ, ಪ್ರಸ್ತುತ ಸ್ಥಿತಿಗತಿ.., ವಿವಿಧ ವಿಷಯಗಳನ್ನು ಒಂದೇ ಸೂರಿನಡಿ ಅರಿತುಕೊಳ್ಳುವ ಅಪೂರ್ವ ಅವಕಾಶ ನಮ್ಮದಾಗಿತ್ತು.

ಸೋದರ ಕಲೆಗಳಲ್ಲಿ ಕೇರಳದ ಕಲಾಮಂಡಲಂನ ಶಂಕರನಾರಾಯಣನ್ ಬಳಗದ ಕಥಕ್ಕಳಿ ಪ್ರಾತ್ಯಕ್ಷಿಕೆ, ಶಿವರಾಮ ಕಾರಂತರ ಪುತ್ರಿ ಕ್ಷಮಾ ರಾವ್ ಅವರ್ ಒಡಿಸ್ಸಿ ನೃತ್ಯ ಪ್ರಾತ್ಯಕ್ಷಿಕೆಗಳು ; ಸಮಕಾಲೀನ ಸಿನಿಮಾ ಕಲೆಯ ಕುರಿತು ಚಿತ್ರನಟ ರಾಮಕೃಷ್ಣ ಅವರಿಂದ ಅನುಭವ ಕಥನ, ಸುರೇಶ್ ಆನಗಳ್ಳಿ, ಜೀವನ್‌ರಾಂ ಸುಳ್ಯ, ಅವರಿಂದ ರಂಗದಲ್ಲಿ ಏಕಾಗ್ರತೆ, ಅಭಿನಯ, ಸ್ವರ, ಮುಖಭಾವ, ಬೆಳಕು ಹೇಗಿರಬೇಕು? ಎಂಬುದರ ಬಗ್ಗೆ ಸಕಾಲಿಕ ಸಂದೇಶ, ಯಕ್ಷ ವಿದ್ವಾಂಸರೊಡನೆ ನಮಗೆ ಸಿಕ್ಕಿದ ಸಂವಾದ, ಸಂವಹನ ಮಾತ್ರವಲ್ಲದೆ ಆರೋಗ್ಯವರ್ಧನೆಗೆ ದಿನನಿತ್ಯವೂ ಮುಂಜಾವಿಗೆ ಡಾ. ನಾಗರಾಜ್ ಅವರಿಂದ ಯೋಗ ಪ್ರಾಣಾಯಾಮದ ಪಾಠ, ಮತ್ತು ಎಷ್ಟೋ ಯಕ್ಷ ಕಲಾವಿದರನ್ನು ಅನಿವಾರ್ಯ ದೃಷ್ಟಿಯಲ್ಲಿ ಕಾಡಿದ ಮತ್ತು ಕಾಡುತ್ತಿರುವ ಮದ್ಯಸೇವನೆಯ ಕುರಿತಾಗಿ ಆಪ್ತ ಸಮಾಲೋಚನಕಾರರಾದ ವಿವೇಕ್ ಪಾಯಸ್‌ರಿಂದ ದುಷ್ಟಚಟಗಳು-ಅವುಗಳ ದುಷ್ಪರಿಣಾಮ ಮತ್ತು ಅನುಸರಿಸಬೇಕಾದ ವ್ಯಕ್ತಿತ್ವ ಕೌಶಲಗಳ ಕುರಿತು ಉಪನ್ಯಾಸ-ಬೋಧನೆ ಕಾರ್ಯಕ್ರಮವಿದ್ದದ್ದು ಶಿಬಿರದ ಸಮಗ್ರ ದೂರದೃಷ್ಠಿಗೆ ಸಾಕ್ಷಿ.

ಇವೆಲ್ಲವಕ್ಕಿಂತ ಮುಖ್ಯವಾಗಿ ಯಕ್ಷಗಾನ ನಾಟ್ಯದಲ್ಲಿ ಖಚಿತತೆ, ಶಾಸ್ತ್ರೀಯತೆಯನ್ನು ತೋರಿಸಿಕೊಟ್ಟ ಕರ್ಗಲ್ಲು ವಿಶ್ವೇಶ್ವರ ಭಟ್ಟರು, ಮತ್ತು ಬನ್ನಂಜೆ ಸಂಜೀವ ಸುವರ್ಣರ ನಿರಂತರ ನಿತ್ಯ ಪಾಠ ಮತ್ತು ನಾಟ್ಯ ವೈವಿಧ್ಯ ನಮ್ಮ ಮನದಲ್ಲಿ ಅಚ್ಚೊತ್ತಿತ್ತು. ರಂಗದಿಂದ ಮರೆಯಾದ ನಾಟ್ಯಗಳು, ಲಾಗಗಳು, ಪ್ರವೇಶ, ಸಭಾಕಲಸು ಇತ್ಯಾದಿ ರಂಗನಡೆ, ರಂಗತಂತ್ರಗಳನ್ನು ಅಭ್ಯಸಿಸುವುದಕ್ಕೆ ಅವಕಾಶವಾಯಿತು. ಪ್ರತಿದಿನ ಸಂಜೆ ಸೋದರ ಕಲೆಗಳ ಕಲಾವಿದರ ಅಪೂರ್ವ ಪ್ರದರ್ಶನಗಳ ಸಂಗ್ರಾಹ್ಯ ಸಿ.ಡಿ, ಡಿ.ವಿ.ಡಿಗಳನ್ನು ವೀಕ್ಷಿಸಿ ಅರಿಯುವ ಭಾಗ್ಯ ; ಜೊತೆಗೆ ಉಜಿರೆ ಕಾಲೇಜಿನ, ಮತ್ತು ಸಿದ್ಧವನದ ಅತಿಥೇಯ ಸಿಬ್ಬಂದಿಗಳ, ಉಪನ್ಯಾಸಕರ, ವಿದ್ಯಾರ್ಥಿಗಳ ಸೌಹಾರ್ದ ವರ್ತನೆ, ಸಹಕಾರ, ಸೌಲಭ್ಯವನ್ನಂತೂ ಮರೆಯಲು ಅಸಾಧ್ಯ.

ಯಕ್ಷಗಾನದಲ್ಲಿ ನಾವೇನು ತಪ್ಪುಗಳನ್ನು ಮಾಡುತ್ತಿದ್ದೇವೆ? ವಿಸ್ತಾರ ಎಷ್ಟಿದೆ ಎಂಬ ಸತ್ಯದ ಅರಿವು ಮೂಡಿದೆ. ಮುಂದೆ ಸೊಗಸಾದ ಯಕ್ಷಗಾನ ಮೂಡಿಬಂದರೆ ಅದಕ್ಕೆ ಕಾರಣ ಅಕಾಡೆಮಿ ಅಧ್ಯಕ್ಷರು, ಮುರಳಿ ಕಡೆಕಾರ್, ಚಂದ್ರಶೇಖರ ಶೆಟ್ಟಿ ಅವರಂತಹ ಸದಸ್ಯರು, ಪೃಥ್ವಿರಾಜ್ ಕವತ್ತಾರು ಅವರಂತಹ ಮಾಧ್ಯಮದ ಕಲಾಸಕ್ತರು ಎಂಬುದು ಹೊಗಳಿಕೆಯಲ್ಲ.

ಮುಂದಿನ ದಿನಗಳಲ್ಲಿ ಇಂತಹುದೇ ಮಾದರಿಯ ಶಿಬಿರದ ದಿನಗಳು ವಿಸ್ತೃತವಾಗಿ ಯುವಕರಿಗೆ ಮಾತ್ರವಲ್ಲ, ವೃತ್ತಿ ಕಲಾವಿದರೆಲ್ಲರಿಗೂ ಲಭ್ಯವಾಗಿ, ಶಾಸ್ತ್ರೀಯವಾಗಿ ಸ್ವಚ್ಛವಾಗಿ ಪರಂಪರೆಗಳನ್ನು ಬಿಡದೇ ಆಧುನಿಕತೆಯನ್ನೂ ರೂಢಿಸಿ ಯಕ್ಷಗಾನ ಕಲೆಯ ಬೆಳವಣಿಗೆಗೆ , ಕಲಾವಿದರ ಉಳಿವಿಗೆ ಕಾರಣವಾಗಲಿ ಎಂದು ಬಯಸುತ್ತೇನೆ.

ಆದುದರಿಂದಲೇ ‘ಭೇಷ್ ಕರ್ನಾಟಕ ಯಕ್ಷಗಾನ ಅಕಾಡೆಮಿ’ ಎಂಬುದು ಶಿಬಿರಾರ್ಥಿಗಳ ಒಕ್ಕೊರಲ ನುಡಿ.

Leave a Reply

*

code