ಅಂಕಣಗಳು

Subscribe


 

ಯಕ್ಷ ಆಹಾರ್ಯಾನುಸಂಧಾನಿ ದೇವಕಾನ ಕೃಷ್ಣ ಭಟ್

Posted On: Saturday, June 15th, 2019
1 Star2 Stars3 Stars4 Stars5 Stars (No Ratings Yet)
Loading...

Author: ಮನಮೋಹನ ಎಸ್, ಮಾಡಾವು

ಜನನ : ೧೧-೦೧-೧೯೪೭ ; ನಿಧನ : ಮೇ ೨೯, ೨೦೧೯

ಕ್ಷಗಾನ ವೇಷಧಾರಿಗಳು ನಮ್ಮಲ್ಲಿ ಅನೇಕ. ಅವರ ಅಭಿಮಾನಿಗಳ ಸಂಖ್ಯೆಯೂ ಅಸದಳ. ಆದರೆ ಕಲಾವಿದರ ಕಲಾವಂತಿಕೆಯನ್ನು ಪ್ರಕಾಶಿಸುವ ಪ್ರಸಾಧನ, ಆಹಾರ್ಯ ಪರಿಕರಗಳನ್ನು ಯೋಜಿಸುವವರ ಸಂಗತಿಯನ್ನು ನೆನಪಿಡುವವರೇ ಕಡಿಮೆ. ಹಾಗೆ ನೋಡಿದರೆ ಯಕ್ಷಗಾನದ ಐಡೆಂಟಿಟಿಯೇ ಅದರ ಆಹಾರ್ಯ. ಅಂತಹ ವಿಶಿಷ್ಟವಾದ ಕೆಲಸವನ್ನು ಪ್ರವೃತ್ತಿಯಾಗಿಸಿಕೊಂಡೇ ವೃತ್ತಿಪರರಂತೆ ವ್ರತಿಗಳಾದ ದೇವಕಾನ ಕೃಷ್ಣಭಟ್ಟರಿಗೆ ಇದೋ ನುಡಿನಮನ ಅಂಜಲಿ.

– ಸಂಪಾದಕಿ

ದೇವಕಾನ ಕೃಷ್ಣ ಭಟ್ಟರು ಇನ್ನಿಲ್ಲ ಎಂಬ ಸುದ್ದಿ ನನ್ನನ್ನು ಒಮ್ಮೆ ಅಧೀರನನ್ನಾಗಿಸಿತ್ತು. ವಯೊಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಕಿವಿಗೆ ಬಿದ್ದಿತ್ತಾದರೂ ಇಷ್ಟು ದಿಢೀರನೆ ಅಸ್ತಂಗತದ ಸುದ್ದಿ ಬಂದೆರಗಬಹುದು ಎಂದು ಎಣಿಸಿರಲಿಲ್ಲ.

ದಿನಕ್ಕೊಂದು ಸೋಗು ಹಾಕಿ ಬಣ್ಣ ಬಣ್ಣದ ಮಾತುಗಳ ಬಲೆಯಿಂದ ಹತ್ತಿರವಾಗಲು ಯತ್ನಿಸುವ ವ್ಯಕ್ತಿಗಳ ಜಗತ್ತಿನಲ್ಲಿ ಬಣ್ಣವನ್ನೇ ಜೀವನ ಮಾಡಿಕೊಂಡೂ ನೇರವಂತಿಕೆಯನ್ನು ಉಳಿಸಿಕೊಂಡವರು ದೇವಕಾನ ಕೃಷ್ಣ ಭಟ್ಟರು. ಇದ್ದದ್ದನ್ನು ಇದ್ದ ಹಾಗೆ ಹೇಳುವ ಸ್ವಭಾವದ ಕೃಷ್ಣ ಭಟ್ಟರು ಮೃದುಹೃದಯಿ. ಮೊದಲ ಭೇಟಿಯಲ್ಲೇ ಹೃದಯಕ್ಕೆ ಹತ್ತಿರವಾಗುತ್ತಿದ್ದ ಅವರು ತಾಂಬೂಲಪ್ರಿಯರು ಕೂಡಾ. “ನಿನಗೆ ಎಲೆ ತಟ್ಟೆ ಬೇಡ ಅಲ್ವಾ..” ಎಂದು ಹೇಳುತ್ತಾ ತಾಂಬೂಲದ ಪೆಟ್ಟಿಗೆಯನ್ನು ಚಾಚುವ ದೇವಕಾನರು ಹಾಸ್ಯಚಟಾಕಿಗಳನ್ನು ಹಾರಿಸುತ್ತಾ ವಿನೋದಪ್ರಿಯತೆಗೆ ಹೆಸರಾದವರು.

ಕೃಷ್ಣಭಟ್ಟರಿಗೆ ಶಾಲಾ ದಿನಗಳಿಂದಲೂ ಪಠ್ಯೇತರ ಚಟುವಟಿಕೆಗಳಲ್ಲಿ ಅತೀವ ಅಭಿರುಚಿ, ಆಸಕ್ತಿ. ಕೆಲವು ವಿಶೇಷ ದಿನ, ಉತ್ಸವಗಳಲ್ಲಿ ಶಾಲೆಯಲ್ಲಿ ಮಕ್ಕಳಿಂದ ಯಕ್ಷಗಾನದ ತುಣುಕನ್ನು ಪ್ರದರ್ಶಿಸುವ ಪರಿಪಾಠವಿದ್ದಾಗೆಲ್ಲಾ ಭಾಗವಹಿಸುತ್ತಿದ್ದರಂತೆ. ಪದವಿಪೂರ್ವ ಶಿಕ್ಷಣದ ಅನಂತರ ಪೈವಳಿಕೆಯಲ್ಲಿ ದೇವಕಾನರೂ ಸೇರಿದಂತೆ ಕೆಲವು ಸಮಾನಾಸಕ್ತ ಯುವಕರು ಸೇರಿಕೊಂಡು ವಾರಕ್ಕೊಂದು ತಾಳಮದ್ದಳೆಯನ್ನು ಕೇವಲ ಕಲಿಯುವ ಉದ್ದೇಶದಿಂದ ಏರ್ಪಡಿಸುತ್ತಿದ್ದರು. ಇದರಿಂದ ತಾಳಮದ್ದಳೆಯಲ್ಲಿ ಅರ್ಥ ಹೇಳುವ ಅನುಭವ ಬೆಳೆಯಿತು. ೧೯೬೯ರಲ್ಲಿ ಹಳೆವಿದ್ಯಾರ್ಥಿಗಳಿಂದ ಯಕ್ಷಗಾನ ಕಾರ್ಯಕ್ರಮವನ್ನು ಶಾಲಾ ವಾರ್ಷಿಕೋತ್ಸವವೊಂದರಲ್ಲಿ ಸಂಯೋಜಿಸಲಾಗಿತ್ತು. ಗುಂಪಿನಲ್ಲಿ ಅರ್ಥಧಾರಿಯಾಗಿ ಗುರುತಿಸಿಕೊಂಡ ದೇವಕಾನ ಕೃಷ್ಣ ಭಟ್ಟರಿಗೆ ಇಂದ್ರಜಿತು ಕಾಳಗದ ‘ಇಂದ್ರಜಿತು’ ಪಾತ್ರ ಅಯಾಚಿತವಾಗಿ ಒಲಿಯಿತು. ಆ ಪಾತ್ರನಿರ್ವಹಣೆಗೆ ಪ್ರಶಂಸಿಸಲ್ಪಟ್ಟದ್ದೇ ವೇಷಧಾರಿಯಾಗುವ ಆಸೆ ಬಲಿಯಿತು. ವೇಷಧಾರಿಗೆ ಅವಶ್ಯಕವಾದ ನಾಟ್ಯವನ್ನು ಪೂರ್ತಿಯಾಗಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಪಡೆದರು. ಕಲಿಕೆಯ ನಂತರ ಅಧ್ಯಾಪಕನಾಗಿ ವೃತ್ತಿಜೀವನವನ್ನು ಕೂಡ ಆರಂಭಿಸಿದ್ದರು. ಆಮೇಲೆ ಅಲ್ಲಲ್ಲಿ ಹವ್ಯಾಸಿ ವೇಷಧಾರಿಯಾಗಿ ಭಾಗವಹಿಸುತ್ತಿದ್ದರು.

ಪೈವಳಿಕೆ ಶಾಲೆಯಲ್ಲಿ ಅಧ್ಯಾಪಕನಾಗಿದ್ದಾಗ ಕುಬಣೂರು ಶ್ರೀಧರ ರಾವ್ ಅವರು ಯಕ್ಷಗಾನದ ವೇಷಭೂಷಣಗಳನ್ನು ಒಟ್ಟುಗೂಡಿಸಿ ಪ್ರದರ್ಶನಕ್ಕೆ ನೀಡುತ್ತಿದ್ದರು. ದೇವಕಾನ ಕೃಷ್ಣಭಟ್ಟರು ಬಣ್ಣಗಾರಿಕೆಗೆ ಅಂದರೆ ‘ಮೇಕಪ್’ಗೆ ವೇಷಭೂಷಣಗಳ ಜೊತೆ ಹೋಗುತ್ತಿದ್ದರು. ಶಾಲಾ ಅಧ್ಯಾಪಕನಾಗಿದ್ದರಿಂದ ವಾರ್ಷಿಕೋತ್ಸವಗಳಲ್ಲಿ ನಾಟಕ, ನೃತ್ಯಗಳಿಗೆ ಮೊದಲೇ ‘ಮೇಕಪ್’ ಮಾಡುತ್ತಿದ್ದರು. ಆದರೆ ಯಕ್ಷಗಾನದ್ದೇ ‘ಮೇಕಪ್’ ಅನುಭವ ಶ್ರೀಧರರಾಯರ ವೇಷಭೂಷಣಗಳ ಜೊತೆಯಲ್ಲಿ ಆಗಿತ್ತು. ಆಮೇಲೆ ಕುಬಣೂರು ಅವರು ಸ್ವಂತ ಮೇಳ ಮತ್ತು ಮೇಳದ ಕಲಾವಿದರಾಗಿ ಮುಂದುವರಿದ ಮೇಲೆ ದೇವಕಾನ ಕೃಷ್ಣ ಭಟ್ಟರು ಅಧ್ಯಾಪಕ ವೃತ್ತಿಯ ಜೊತೆಗೆ ‘ಮೇಕಪ್’ ಕೂಡಾ ಮಾಡುತ್ತಿದ್ದರು. ಉಪ್ಪಳ ಕೃಷ್ಣ ಮಾಸ್ತರ್‌ರ ನೇತೃತ್ವದಲ್ಲಿ ಎಡನೀರು ಕ್ಷೇತ್ರದಲ್ಲಿ, ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಜೊತೆ, ಕೋಡಪದವು ವೀರಾಂಜನೇಯ ಸಂಘದಲ್ಲಿ, ಕೋಟೂರಿನಲ್ಲಿ ಶ್ರೀ ಪೆರಡಂಜಿ ಗೋಪಾಲಕೃಷ್ಣ ಭಟ್ಟರ ನೇತೃತ್ವದಲ್ಲಿ ಯಕ್ಷಗಾನ ಸಂಘ ಹೀಗೆ ಹಲವಾರು ಯಕ್ಷಗಾನ ಸಂಘಗಳ ಜೊತೆ ‘ಮೇಕಪ್’ಗೆ ಹೋಗುತ್ತಾ ಅವರೊಬ್ಬ ಪ್ರಸಾಧನನಿಷ್ಣಾತರಾದರು. ಇದರ ಜೊತೆಗೆ ಹವ್ಯಾಸಿಯಾಗಿ ಹಲವಾರು ಪಾತ್ರಗಳನ್ನೂ ಮಾಡುತ್ತಿದ್ದಾಗಲೂ ಅವರಿಗೆ ಜನಮೆಚ್ಚುಗೆಯೂ ಸಿಕ್ಕಿತ್ತು. ‘ಮೇಕಪ್’ಗೆ ಸಂಭಾವನೆಗಾಗಿ ಹೋಗುತ್ತಿದ್ದರೂ ವೇಷಧಾರಿಯಾಗಿ ಸಂಭಾವನೆಯನ್ನು ಅವರು ಅಪೇಕ್ಷೆಪಟ್ಟವರೇ ಅಲ್ಲ. ಕಲಾವಿದರ ಕೊರತೆಯಾದಲ್ಲಿ ‘‘ಕೃಷ್ಣಣ್ಣ, ಸೋತು ಹೋಯ್ತಲ್ಲ, ಈಗ ಕೊನೆಗೆ ಇಂದ್ರಜಿತು ಒಂದು ಮಾಡ್ಬೇಕಲ್ಲ’’ ಎಂದು ಸಂಘಟಕರು ಹೇಳಿದಾಗ ಇನ್ನೊಬ್ಬರಿಗೆ ಮಾಡುವ ಮೇಕಪ್‌ನ್ನು ಅವರಿಗೇ ಮಾಡಿಕೊಂಡು ರಂಗಕ್ಕಿಳಿದ ಹಲವಾರು ನಿದರ್ಶನಗಳಿವೆ. ಹಾಗೆಂದು ಆ ವೇಷಕ್ಕೆ ಪ್ರತ್ಯೇಕ ಸಂಭಾವನೆಯನ್ನೂ ನಿರೀಕ್ಷೆ ಅವರು ಮಾಡಿದ್ದಿಲ್ಲ.

ಸುಮಾರು ೧೯೮೫ನೇ ಇಸವಿಯಲ್ಲಿ ದೇವಕಾನ ಕೃಷ್ಣಭಟ್ಟರಿಗೆ ‘ಯಾಕೆ ನನಗೇ ಒಂದು ಸ್ವಂತ ಯಕ್ಷಗಾನದ ವೇಷಭೂಷಣಗಳ ಸಂಗ್ರಹ ಮಾಡಬಾರದು?’ ಎಂದು ಅನಿಸಿತಂತೆ. ಹಲವಾರು ಸಂದರ್ಭಗಳಲ್ಲಿ ಅವರು ಎದುರಿಸಿದ ವೇಷಭೂಷಣಗಳ ಕೊರತೆಗಳು ಮತ್ತು ಅನುಭವಿಸಿದ ಕೆಲವೊಂದು ಹೇಳಲಾರದ, ಹೇಳಬಾರದ ಕುಂದುಕೊರತೆ, ನೋವಿನ ಸಂಗತಿಗಳಿಂದ ಮನಸ್ಸಿನಲ್ಲಿ ಸ್ಪಷ್ಟವಾದ ನಿರ್ಧಾರವೊಂದು ರೂಪು ತಳೆಯಿತು. ಆ ಯೋಚನೆಯನ್ನು ಕಾರ್ಯರೂಪಕ್ಕಿಳಿಸಿದಾಗ ಹುಟ್ಟಿದ ಸಂಸ್ಥೆಯೇ ಶ್ರೀ ಗಣೇಶ ಕಲಾವೃಂದ, ಪೈವಳಿಕೆ.

ನಿರ್ಧಾರವೇನೋ ಗಟ್ಟಿಯಾಯಿತು. ಆದರೆ ಆರ್ಥಿಕ ಅಡಚಣೆ ! ಹಣ ಹೊಂದಿಸುವ ದಾರಿ ತಿಳಿಯಲಿಲ್ಲ. ಅಂತೂ ಇಂತೂ ಅವರಿವರಿಂದ ಸಾಲ ಮಾಡಿ, ಇನ್ನೊಂದಷ್ಟು ಬ್ಯಾಂಕ್ ಸಾಲವನ್ನೂ ಪಡೆದು ಕಷ್ಟದಿಂದಲೇ ಹಣ ಹೊಂದಿಸಿ ಮೂವತ್ತು ಸಾವಿರದ ಬಂಡವಾಳಕ್ಕೆ ಬಾಡಿಗೆ ವೇಷಭೂಷಣಕ್ಕೆ ವ್ಯವಸ್ಥೆ ಮಾಡಿದರು. ಹಾಗೆಂದು ಸಂಬಳ, ಇತರ ಖರ್ಚುಗಳನ್ನು ಲೆಕ್ಕಹಾಕುವುದಿದ್ದರೆ ಇದೊಂದು ಲಾಭದಾಯಕ ಉದ್ಯಮವಲ್ಲ. ಸ್ವತಃ ದುಡಿದರೆ ಮಾತ್ರ ಲಾಭ. ಅಧ್ಯಾಪನ ವೃತ್ತಿಯ ಜೊತೆ ದೇವಕಾನ ಕೃಷ್ಣ ಭಟ್ಟರಿಗೆ ಅದು ಸಾಧ್ಯವೂ ಆಗುತ್ತಿರಲಿಲ್ಲ. ಆಡಿess mಚಿಣeಡಿiಚಿಟsಗಳ ಬೆಲೆ, ಹೊಲಿಯುವ ಯಂತ್ರಗಳ ದುರಸ್ತಿ, ನಿರ್ವಹಣೆ, ಸಂಬಳ ಹೀಗೆ ಖರ್ಚನ್ನು ಲೆಕ್ಕಹಾಕಿದರೆ ಉಳಿಯುವ ಮೊತ್ತ ಕಡಿಮೆ. ಮೇಲಾಗಿ ವೇಷಭೂಷಣಗಳ ಬಾಡಿಗೆ ತುಂಬಾ ಕಡಿಮೆ ಇದ್ದ ಕಾಲ. ಸಂಸ್ಥೆಯಲ್ಲಿ ಐದಾರು ಮಂದಿ ಖಾಯಂ ಕೆಲಸಗಾರರಿದ್ದರೆ ಮಾತ್ರ ಈ ಬಗೆಯ ಜವಾಬ್ದಾರಿಯನ್ನು ಸರಿತೂಗಿಸಿಕೊಂಡು ಹೋಗಲಾದೀತು. ಹಾಗೆಂದು ಅವರಿಗೆ ವರ್ಷಪೂರ್ತಿ ಅಂದರೆ ಯಕ್ಷಗಾನ ಮೇಳತಿರುಗಾಟವಿಲ್ಲದ ಮಳೆಗಾಲದಲ್ಲಿಯೂ ಉದ್ಯೋಗವಿರುವಂತೆ ನೋಡಿಕೊಳ್ಳಬೇಕು. ಹಾಗೆಂದೇ ಮಳೆಗಾಲದಲ್ಲಿ ವೇಷಭೂಷಣ ತಯಾರಿಗಿಟ್ಟುಕೊಳ್ಳುತ್ತಿದ್ದರು. ಉಳಿದಂತೆ ಯಕ್ಷಗಾನ ಪ್ರದರ್ಶನಗಳಿಗೆ ಸಹಾಯಕರಾಗಿ ಮತ್ತು ಮೇಕಪ್‌ಗೆ ಹೋಗಲು ಕೆಲಸಗಾರರು ಬೇಕಾಗಿತ್ತು. ಇಂತಹ ಸಮಯದಲ್ಲಿ ಅವರ ನೆರವಿಗೆ ಬಂದವರು ಸ್ವತಃ ಪ್ರಸಾಧನ ತಜ್ಞರಾದ ಕಡಬ ಸಾಂತಪ್ಪ ಮತ್ತು ರಘುಪುರುಷ ಸಜಂಕಿಲ ಅವರು. ಅವರ ಗರಡಿಯಲ್ಲಿ ದೇವಕಾನ ಕೃಷ್ಣಭಟ್ಟರು ಮತ್ತಷ್ಟು ಪಳಗಿದರು.

“ಅಧ್ಯಾಪಕ ವೃತ್ತಿ ನನಗೆ ಪ್ರಿಯವಾದದ್ದು. ೩೩ ವರ್ಷ ಸೇವೆ ಸಲ್ಲಿಸಿದ್ದೇನೆ. ಶನಿವಾರ ಮತ್ತು ಆದಿತ್ಯವಾರದ ರಜಾ ಹಾಗೂ ಎಪ್ರಿಲ್ ಹಾಗೂ ಮೇ ತಿಂಗಳುಗಳ ರಜೆಗಳಿಂದೆಲ್ಲಾ ನನಗೆ ಯಕ್ಷಗಾನದ ವೇಷಭೂಷಣ, ಬಣ್ಣಗಾರಿಕೆಯ ಕುರಿತು ಗಮನಹರಿಸಲು ಸಾಧ್ಯವಾಯಿತು. ಆದರೂ ಮನಸ್ಸಿಗೆ ಏನೋ ಒಂದು ಕೊರತೆ ಕಾಡುತ್ತಿತ್ತು. ಯಕ್ಷಗಾನದ ಕಮ್ಮಟ, ಕಾರ್ಯಾಗಾರಗಳು, ಸಮ್ಮೇಳನಗಳೇ ಮೊದಲಾದ ಕಾರ್ಯಕ್ರಮಗಳಲ್ಲಿ ಮನಸೋ ಇಚ್ಛೆ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ೧೯೯೨ರ ವರೆಗೆ ತೀರ್ಥರೂಪರು ಕೃಷಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ನಂತರಕ್ಕೂ ಹಿರಿಯರಿಂದ ಬಂದ ಕೃಷಿಯನ್ನು ಉಳಿಸಿಕೊಂಡಿದ್ದೇನೆ. ಹಾಗೆಂದು ಲಾಭದಾಯಕವೋ ಅಥವಾ ನಾನೊಬ್ಬ ಮಾದರಿ ಕೃಷಿಕನೋ ಅಲ್ಲ. ಯಕ್ಷಗಾನ ಎನ್ನುವುದು ನನ್ನ ಅಭಿರುಚಿಯ ಕ್ಷೇತ್ರ. ಅಧ್ಯಾಪನ ಎನ್ನುವುದು ನನ್ನ ವೃತ್ತಿ. ಹಾಗೆಂದು ಮೇಕಪ್ ಮಾಡುವ ಈ ಕಲೆಯನ್ನು ನಾನು ಕಲಿತು ಬಂದದ್ದು. ಹಿರಿಯರಿಂದ ಕೇಳಿ ತಿಳಿದು ರೂಢಿಸಿಕೊಂಡದ್ದು.. ಎರಡು ದೋಣಿಯ ಮೇಲೆ ಕಾಲಿಡುವುದು ಬೇಡವೆಂದು ವೃತ್ತಿಯಾಗಿ ಯಕ್ಷಗಾನ ವೇಷಧಾರಿಯಾಗಲಿಲ್ಲ. ” ಎಂದು ದೇವಕಾನ ಕೃಷ್ಣಭಟ್ಟರುನುಡಿದಿದ್ದರು.

ಅಂತೂ ಹಲವು ಸವಾಲುಗಳನ್ನು ಎದುರಿಗಿಟ್ಟ್ಟುಕೊಂಡೇ ೧೯೮೫ರಲ್ಲಿ ಪ್ರಾರಂಭವಾದ ವೇಷಭೂಷಣಗಳ ಸಂಸ್ಥೆ ಇಂದಿಗೆ ಯಶಸ್ವೀ ೩೩ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ೧೯೯೩ರಲ್ಲಿ ಜಪಾನಿನಲ್ಲಿ ನಡೆದ ಏಷ್ಯನ್ ದೇಶಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಾರತದಿಂದ ಭರತನಾಟ್ಯ ಮತ್ತು ಯಕ್ಷಗಾನವನ್ನು ಆಯ್ಕೆ ಮಾಡಿದಾಗ ಒಟ್ಟು ಆರು ಪ್ರದರ್ಶನಗಳ ಕಲಾಕಾರ್ಯಕ್ರಮಕ್ಕೆ ಆಹಾರ್ಯ ಪರಿಕರಗಳನ್ನು ಹೊಂದಿಸಲು ಆಯ್ಕೆಯಾದ ಸಂಸ್ಥೆ ‘ಶ್ರೀ ಗಣೇಶ ಕಲಾವೃಂದ ಪೈವಳಿಕೆ’ ಎಂದರೆ ಆಹಾರ್ಯ ಪರಿಕರಗಳ ಗುಣಮಟ್ಟವನ್ನೊಮ್ಮೆ ಅಂದಾಜಿಸಬಹುದು. ಮೂಡಬಿದಿರೆಯ ಆಳ್ವಾಸ್ ಸಂಸ್ಥೆ, ಮುಂಬೈಯ ಬಂಟರ ಸಂಘ, ಪೂನಾ ಮೊದಲಾದವೆಡೆಗಳಿಗೆ ವೇಷಭೂಷಣಗಳನ್ನು ತಯಾರಿಸಿಕೊಟ್ಟಿದ್ದಾರೆ. ಇಂದಿಗೆ ಎಡನೀರು ಮೇಳ ಮತ್ತು ಹನುಮಗಿರಿ ಮೇಳಗಳಿಗೆ ವೇಷಭೂಷಣಗಳ ತಯಾರಿಯನ್ನು ಶ್ರೀ ಗಣೇಶ ಕಲಾವೃಂದ ಪೈವಳಿಕೆ ಮಾಡಿಕೊಟ್ಟಿದೆ. ೨೦೧೭-೧೮ ರಲ್ಲಿ ೩೦೦ಕ್ಕೂ ಹೆಚ್ಚು ಕಾರ್ಯಕ್ರಮಗಳಿಗೆ ಡ್ರೆಸ್ ಒದಗಿಸಿದ ಹೆಮ್ಮೆ ಇವರದ್ದು. ಒಂದೇ ದಿನದಲ್ಲಿ ೭ ಕಾರ್ಯಕ್ರಮಗಳಿಗೆ ಏಕಕಾಲಕ್ಕೆ ವೇಷಭೂಷಣ ಒದಗಿಸಿದ್ದು ಇವರ ಕಾರ್ಯಕ್ಷಮತೆಗೆ ನಿದರ್ಶನ. ಯಕ್ಷಗಾನ ಆಹಾರ್ಯಾಭಿನಯದ ಕುರಿತು ಹಲವು ಉಪನ್ಯಾಸ, ಬರೆಹಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ.

ಪ್ರಸಾಧನ ತಜ್ಞವೇಷಭೂಷಣ ಸಂಸ್ಥೆಯನ್ನು ಹುಟ್ಟುಹಾಕುವ ಕೆಲಸ ಸಾಮಾನ್ಯವಾದುದೇನಲ್ಲ. ಅವರ ಉತ್ತರಾಧಿಕಾರಿಗಳಾಗಿ ಅವರ ಸುಪುತ್ರರು ಸಮರ್ಥವಾಗಿ ಈ ಸಂಸ್ಥೆಯನ್ನು ಮುನ್ನಡೆಸಬಹುದು. ಆದರೆ ಕೃಷ್ಣಭಟ್ಟರು ಹಾಕಿಕೊಟ್ಟ ಮೇಲ್ಪಂಕ್ತಿ ನಿಜಕ್ಕೂ ಓರ್ವ ಸಾಮಾನ್ಯ ಕಲಾಸಕ್ತನಿಗೂ ಆದರ್ಶಪ್ರಾಯ.

Leave a Reply

*

code