ಅಂಕಣಗಳು

Subscribe


 

ಸಿನಿಮಾ ನೃತ್ಯ ಮತ್ತು ಶಾಸ್ತ್ರೀಯತೆ- ಭಾಗ 2

Posted On: Tuesday, October 15th, 2013
1 Star2 Stars3 Stars4 Stars5 Stars (No Ratings Yet)
Loading...

Author: Editor

ಚಲನಚಿತ್ರಗಳಲ್ಲಿ ಕಂಡುಬರುವ ನೃತ್ಯಗಳಲ್ಲಿ ಶಾಸ್ತ್ರೀಯತೆ ಇದೆಯೋ, ಇಲ್ಲವೋ ಎಂಬುದು ಒತ್ತಟಿಗಿರಲಿ; ಆದರೆ ಸಿನೆಮಾ ನೃತ್ಯಗಳು ಪ್ರೇಕ್ಷಕರಲ್ಲಿ ಸಾಕಷ್ಟು ಅಭಿರುಚಿಯನ್ನು ಕೆರಳಿಸಿದ್ದು ಸತ್ಯ. ಇಂತಹ ಸಿನೆಮಾ ನೃತ್ಯಗಳ ಇತಿಹಾಸ, ಶೈಲಿ, ಸಮಕಾಲೀನ ಸತ್ಯಗಳ ಕುರಿತಂತೆ ಕಳೆದ ಸಂಚಿಕೆಯ ಸಂಪಾದಕೀಯದಲ್ಲಿ ಒಂದು ನೋಟವನ್ನು ಹಾಯಿಸಿದ್ದು ತಮಗೆ ನೆನಪಿದೆಯಷ್ಟೇ ! ಆದರಿಂದ ಈ ಸಲವೂ ಮಂಜೀರದ ಮೂಲಕವಾಗಿ ಒಂದಷ್ಟು ಗಂಭೀರ ಚಿಂತನೆಯನ್ನು ಕಾಯ್ದುಕೊಳ್ಳೋಣ.

ನಿರ್ದೇಶಕನ ಅಭಿರುಚಿ, ನೃತ್ಯದೆಡೆಗಿನ ಅರಿವು, ಕಲಾವಿದರ ಮತ್ತು ನೃತ್ಯ ನಿರ್ದೇಶಕರ ಆಯ್ಕೆ, ಚಿತ್ರಕಥೆಯ ನಿರೂಪಣೆ, ಸಿನೆಮಾದ ಕಥಾವಸ್ತು ಸಾಧಿಸಬೇಕಾದ ಉದ್ದೇಶಗಳು ಸಿನೆಮಾನೃತ್ಯದ ಪ್ರಧಾನ ಗುಣ-ದೋಷಗಳನ್ನು ಕಾಣುವಲ್ಲಿ ಕಾರಣವಾಗುತ್ತವೆ. ಅದರಲ್ಲೂ ಸಿನಿಮಾದಲ್ಲಿ ಶಾಸ್ತ್ರೀಯತೆಯ ಆಧಾರವಿಟ್ಟುಕೊಂಡು ಹೊಸದನ್ನು ಸೃಷ್ಟಿಸಬೇಕಾದ ಅಗತ್ಯ, ಜಾಣ್ಮೆ ಎರಡೂ ಇದೆ. ಅದನ್ನು ಸಾಧಿಸಲು ನೃತ್ಯನಿರ್ದೇಶಕನಿಗೆ ಕ್ಯಾಮೆರಾ ಬಗೆಗಿನ ಜ್ಞಾನ, ತಾಳಜ್ಞಾನ, ಸೃಜನಶೀಲ ಮನೋಧರ್ಮ, ಚಿಕ್ಕ ಚಿಕ್ಕ ವಿಷಯಗಳಿಗೂ ಸ್ಪಂದಿಸುವ ಸಾಮರ್ಥ್ಯ ಇರಬೇಕು. ಜೊತೆಗೆ ನೃತ್ಯನಿರ್ದೇಶಕ ಹಲವು ಹೊಂದಾಣಿಕೆಗೆ ಮಣಿಯಬೇಕಾಗುವ ಸಂಭವನೀಯತೆಗಳು, ತಾರಾಮೌಲ್ಯದ ಹಿನ್ನೆಲೆಯಲ್ಲಿ ತಲೆಬಾಗಬೇಕಾದ ಸಮಸ್ಯೆಗಳೂ ಎದುರಾಗುತ್ತವೆ.

ಆದರೆ ಇಂತಹ ಹಲವು ತೊಂದರೆಗಳನ್ನು, ಕೊರತೆಗಳನ್ನು ಸಿನೆಮಾಟೋಗ್ರಫಿಯ ಮುಖಾಂತರ ಆದಷ್ಟೂ ತುಂಬಿಕೊಡುವ ಸಾಧ್ಯತೆಗಳಿರುವುದರಿಂದ ಒಟ್ಟು ಚಲನಚಿತ್ರದ ಕಥೆಯ ಓಟಕ್ಕೆ, ರಸೈಕ ದೃಷ್ಟಿಗೆ ಧಕ್ಕೆಯಾಗುವುದಿಲ್ಲವೇನೋ ನಿಜ. ಆದರೆ ಇದ್ಯಾವುದೂ ಪಾರಂಪರಿಕ ನೃತ್ಯಗಳ ಬಳಕೆಯನ್ನು ಅರ್ಥೈಸಿಕೊಳ್ಳುವುದಕ್ಕಾಗಲೀ ಅಥವಾ ಅದರ ಪ್ರಯೋಗ-ವಿನ್ಯಾಸಕ್ಕಾಗಲೀ, ಕಲಿಕೆಗಾಗಲೀ ಸಕಾರಾತ್ಮಕವಾಗಿ ಪರಿಣಮಿಸಿಲ್ಲ ಎಂಬುದು ಗಮನಾರ್ಹವಾದ ವಿಚಾರ.

ಅಖಂಡ ಭಾರತದ ಎಲ್ಲಾ ನೃತ್ಯಗಳು ಭರತನ ನಾಟ್ಯಶಾಸ್ತ್ರಕ್ಕೆ ಋಣಿಯಾದರೂ; ಕಾಲ-ದೇಶಕ್ಕೊಳಪಟ್ಟು ನಿಯಮ, ನಿರ್ಬಂಧ, ವ್ಯತ್ಯಾಸಗಳನ್ನು ಕಂಡುಕೊಂಡು ತಮ್ಮ ಶೈಲಿಯ ವಿಶಿಷ್ಟ ಸ್ವರೂಪದಿಂದಲೇ ಗುರುತಿಸಲ್ಪಡುತ್ತವೆ. ಅದರಲ್ಲೂ ನಿರ್ದಿಷ್ಟ ನೃತ್ಯಪರಂಪರೆಯ ವೇಷಭೂಷಣಾದಿಗಳನ್ನು ಧರಿಸಿದ ಮಾತ್ರಕ್ಕೇ ಅದು ಇಂಥದ್ದೇ ನೃತ್ಯವೆನ್ನುವ ಕಲ್ಪನೆ ಬರುವುದು ಸಹಜ. ಆದರೆ ಇತ್ತೀಚೆಗಿನ ದಶಕಗಳ ಸಾಕಷ್ಟು ಚಲನಚಿತ್ರಗಳಲ್ಲಿ ಶಾಸ್ತ್ರೀಯ ನೃತ್ಯವೆನಿಸಿಕೊಂಡವುಗಳ ಅದರಲ್ಲೂ ಭರತನಾಟ್ಯ, ಕೂಚಿಪುಡಿಯ ವೇಷಭೂಷಣಗಳನ್ನು ಧರಿಸಿ ಸನ್ನಿವೇಶ, ಹಾಡುಗಳಿಗೆ ಅನುಸಾರವಾಗಿಯೋ, ವೈಭವದ ದೃಶ್ಯ ಪ್ರಸ್ತುತಿಗೋ ಮನಬಂದಂತೆ ನರ್ತಿಸುವ ಪರಿಪಾಠ ಬಹಳ ವರ್ಷಗಳಿಂದ ಚಾಲ್ತಿಯಲ್ಲಿದೆ. ಫಲವಾಗಿ ನೃತ್ಯದ ಶಾಸ್ತ್ರೀಯ ಚಲನೆಗಳ ಅಂಶವೇ ಗೌಣವಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ ನರ್ತನವು ನೃತ್ಯದ ಪೋಷಾಕಿಗಷ್ಟೇ ಸೀಮಿತವಾಗಿ ಉಳಿದ ಅವಶ್ಯ ಚಲನೆಗಳು ಬದಿಗೆ ಸರಿಯುತ್ತಿವೆ.

ಒಮ್ಮೆ, ಇಂದಿನ ನೃತ್ಯಸಂಬಂಧಿತ ರಿಯಾಲಿಟಿ ಶೋ ಸ್ಪರ್ಧೆಗಳತ್ತ ಒಮ್ಮೆ ದೃಷ್ಟಿ ಹಾಯಿಸಿ. ಅಥವಾ ಪೋಷಕರು/ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಗಮನಿಸಿ; ಸಾಕು, ನೃತ್ಯದ ಸಹಜ, ಸತ್ಪರಿಣಾಮ, ಸಾಂದರ್ಭಿಕ ಒಳನೋಟಗಳ ಬದಲಾಗಿ ಅತಿರಂಜಿತ, ಅಪಸವ್ಯಗಳನ್ನೇ ಇತ್ತೀಚೆಗಿನ ದಶಕಗಳ ಸಿನೆಮಾಗಳು ಸಾಕಷ್ಟು ಸಲ ಬೊಟ್ಟು ಮಾಡಿರುವ ಪರಿಣಾಮ ತಿಳಿಯುತ್ತದೆ. ಉತ್ಸಾಹಿತ ತರುಣರು, ಮಕ್ಕಳು ಶಾಸ್ತ್ರೀಯ ನೃತ್ಯಗಳನ್ನು ಕಲಿಯಲು ಮುಂದೆ ಬರುತ್ತಿದ್ದಾರೆ ಎಂದೆಲ್ಲಾ ಬೆನ್ನು ತಟ್ಟಿಕೊಳ್ಳಬಹುದಾದರೂ; ಸಿನೆಮಾ ರಂಗದ ಕಲಾವಿದರು, ತಜ್ಞರುಗಳಿಂದಾಗಿ ಶಾಸ್ತ್ರೀಯ ನರ್ತನರಂಗದ ಕಲಿಕೆ, ವಿನ್ಯಾಸದಲ್ಲಿ ಹಲವು ತೊಂದರೆಗಳೂ ಒದಗಿವೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಸಿನೆಮಾನೃತ್ಯಗೀತೆಗಳಿಗೆ ನರ್ತಿಸಲು ಬೇಕಾದ ಅಭ್ಯಾಸ, ಪ್ರದರ್ಶನ ಮತ್ತು ಅನುಕೂಲಗಳನ್ನೇ ನೆಚ್ಚಿ ಅದೇ ನೃತ್ಯಾಭ್ಯಾಸದ ಪರಮೋಚ್ಛ ನೆಲೆ ಎನ್ನುವ ಮನೋಭಾವನೆ ವ್ಯಾಪಕವಾಗುತ್ತಲಿದೆ.

ಶಾಸ್ತ್ರೀಯನೃತ್ಯಗಳನ್ನು ಕಥಾವಸ್ತುವಾಗಿ ಆಯ್ಕೆ ಮಾಡಿಕೊಂಡ ಚಿತ್ರಗಳು ಪಾತ್ರಗಳ ಆಯ್ಕೆಯಲ್ಲಿ ವೃತ್ತಿಪರ ಅಥವಾ ನೃತ್ಯಕ್ರಮದಲ್ಲಿ ಒಂದಷ್ಟು ನಿಯಮಿತ ಅಭ್ಯಾಸಗಳನ್ನು ಹೊಂದಿದ ಕಲಾವಿದರನ್ನೇ ಆಯ್ಕೆ ಮಾಡಿಕೊಂಡಿವೆಯೆಂದು ಸಮಾಧಾನ ಮಾಡಿಕೊಳ್ಳಬಹುದು. ಆದರೆ, ನೃತ್ಯವನ್ನು ಕಥೆಯ ಸಂದರ್ಭಕ್ಕೆ ಅನುಕೂಲಕರವಾಗಿ ದುಡಿಸಿಕೊಂಡ ಬಹುತೇಕ ಚಿತ್ರಗಳು ವೃತ್ತಿಪರ ಕಲಾವಿದರನ್ನು ಪಾತ್ರಗಳಿಗೆ ಆಯ್ಕೆ ಮಾಡಿಕೊಳ್ಳುವ ಗೋಜಿಗೆ ಹೋಗಿಲ್ಲ. ಬದಲಾಗಿ ಪ್ರಧಾನ ಪಾತ್ರಧಾರಿಗಳಾದ ಹೆಸರಾಂತ ನಟ ನಟಿಯರಿಗೆ ನೃತ್ಯವನ್ನು ತಕ್ಕಮಟ್ಟಿಗೆ ಕಲಿಸಿ ಪ್ರದರ್ಶಿಸುವ ಪ್ರತಿಭೆ ತೋರುತ್ತಿವೆ ! ಫಲವಾಗಿ ಹಸ್ತ-ಪಾದ-ಮುಖಜಾಭಿನಯದ ಕೆಲವು ಚಲನೆಗಳನ್ನು ಮಾತ್ರ ಬಿಂಬಿಸಿ ಒಟ್ಟು ನೃತ್ಯಪರಿಣಾಮದ ಸೌಂದರ್ಯವನ್ನು ಮಸುಕುಮಾಡಿರುವ ಉದಾಹರಣೆಗಳು ಸಾಲುಸಾಲಾಗಿ ಸಿಗುತ್ತವೆ.

ಇಂತಹ ಅವಸ್ಥೆಯಲ್ಲಿ ನಟ/ನಟಿಯ ನರ್ತನಕ್ಕಿಂತಲೂ ದೇಹದ ಕುಲುಕು/ಬಳುಕುವಿಕೆಗಳು/ ಗಿಮಿಕ್‌ಗಳೆಡೆಗೇ ಅನಿವಾರ್ಯವಾಗಿ ವಾಲಬೇಕಾದ ಮತ್ತು ಅದನ್ನೇ ಸಮರ್ಥಿಸಬೇಕಾದ ಸನ್ನಿವೇಶಗಳೇ ಕಾಣುವುದು ಸಹಜ. ಪರಿಣಾಮ ನರ್ತಕಿಯ ಅಂಗಾಂಗ-ಮುಖಸೌಂದರ್ಯ, ಹಾವಭಾವಗಳು ನರ್ತನದ ಚೆಲುವನ್ನು ಹೆಚ್ಚಿಸುತ್ತವೆ ಎಂಬ ಭ್ರಮೆ ಹೆಚ್ಚುತ್ತಾ ರಸನಿಷ್ಠ ಕಲೆಯನ್ನು, ಕಲಾವಿದರನ್ನು ಬದಿಗೆ ಸರಿಸುವ ಸಂದರ್ಭಗಳೂ ವ್ಯಾಪಕವಾಗಿ ಜರುಗಿವೆ. ವಿಪರ್ಯಾಸವೆಂದರೆ ಪ್ರಧಾನ ಪಾತ್ರಗಳೊಂದಿಗೆ ಸ್ಪರ್ಧಿಸಿ ಸೋತುಹೋಗುವ ಬಹುತೇಕ ಪಾತ್ರಗಳಲ್ಲಿ ಅಭಿನಯಿಸಿರುವುದು ನೃತ್ಯಾಭ್ಯಾಸ ಮಾಡಿಕೊಂಡ ವೃತ್ತಿಪರ ಕಲಾವಿದರೇ ! ಫಲವಾಗಿ ನೃತ್ಯದ ಎಲ್ಲಾ ಆಯಾಮಗಳು ಬಿಂಬಿತವಾಗದೆ ಶಿಸ್ತುಳ್ಳ ನೃತ್ಯಕ್ಕೆ ಬೆಲೆಯಿಲ್ಲವೆಂಬ ಭಾವನೆಗೆ ಎಡೆ ಮಾಡಿಕೊಡುವುದೂ ಇದೆ. ಉದಾಹರಣೆಗೆ : ಗಾಡ್‌ಫಾದರ್ ಸಿನೆಮಾದಲ್ಲಿ ನರ್ತಕನ ನಡವಳಿಕೆ ಪುರುಷ ಸಹಜ ಗಾಂಭೀರ್ಯವನ್ನು ಬಿಂಬಿಸದೆ ಹೆಣ್ಣಿಗನಂತೆ ಸಮಾಜ ನೋಡಬಹುದಾದ ಅಪಾಯಕ್ಕೆ ದೂಡುತ್ತದೆ. ಮತ್ತು ನರ್ತಕರೆಡೆಗೆ ಪ್ರೇಕ್ಷಕರು ಹಾಸ್ಯಾಸ್ಪದವಾದ ಓರೆನೋಟವನ್ನು ಬೀರುವಂತೆ ಮಾಡುತ್ತದೆ. ಉಳಿದ ಭಾಷೆಯ ಚಲನಚಿತ್ರಗಳಿಗೆ ಹೋಲಿಸಿದರೆ ಕನ್ನಡ ಚಲನಚಿತ್ರಗಳ ಪಾಲುದಾರಿಕೆಯೇ ಇಂತಹ ಅಬದ್ಧಗಳಲ್ಲಿ ಹೆಚ್ಚು ಎಂದರೆ ಖಂಡಿತಾ ಅತಿಶಯವಲ್ಲ.

ನೃತ್ಯಾಧಾರಿತ ಸಿನೆಮಾಗಳನ್ನು ನಿರ್ಮಿಸುವ ಮೊತ್ತಮೊದಲ ಪ್ರಯತ್ನ ಕನ್ನಡ ಚಿತ್ರರಂಗದಿಂದ ಆರಂಭವಾಯಿತೇನೋ ನಿಜ. ಆದರೆ ನಂತರದ ದಶಕಗಳಲ್ಲಿ ಇತರೆ ಚಿತ್ರರಂಗದವರಂತೆ ಕನ್ನಡ ಸಿನೆಮಾ ಪ್ರಪಂಚ ಚಿಗಿತುಕೊಳ್ಳಲಿಲ್ಲ. ಇಂದಿಗೂ ನೆರೆಯ ತಮಿಳು, ತೆಲುಗು ಚಲನಚಿತ್ರಗಳಿಗೆ ಹೋಲಿಸಿದರೆ ಕನ್ನಡದಲ್ಲಿ ನೃತ್ಯಪ್ರಧಾನ ಚಲನಚಿತ್ರಗಳು ಕಡಿಮೆಯೇ ಹೌದು. ಹೀಗಾಗಿ ೧೯೪೦-೫೦ನೇ ದಶಕದಲ್ಲೇ ಕನ್ನಡದಲ್ಲಿ ನೃತ್ಯಾಧಾರಿತ ಸಿನೆಮಾಗಳು ತಮ್ಮ ಅಡಿಪಾಯ ಹಾಕಿಕೊಂಡರೂ ನಂತರದಲ್ಲಿ ತಮಿಳು, ತೆಲುಗು ಚಿತ್ರಗಳ ಪ್ರೇರಣೆ ಪಡೆದೋ ಅಥವಾ ಅದರ ಓಘಕ್ಕೆ ತಮ್ಮ ಓಟವೂ ಇರಲೆಂದೋ ಚಲನಚಿತ್ರಗಳನ್ನು ತಯಾರಿಸಿದ್ದೇ ಹೆಚ್ಚು. ಅದರಲ್ಲೂ ಉಳಿದ ಭಾಷೆಯ ಶಾಸ್ತ್ರೀಯ ನೃತ್ಯಾಧಾರಿತ ಸಿನಿಮಾಗಳೊಂದಿಗೆ ಹೋಲಿಸಿದರೆ ಕನ್ನಡದಲ್ಲಿ ಅಷ್ಟಾಗಿ ಇಂತಹ ಸಿನೆಮಾಗಳು ಪ್ರಸಿದ್ಧಿಗೊಳ್ಳಲಿಲ್ಲ ಎಂಬುದು ಸಖೇದಾಶ್ಚರ್ಯದ ವಿಚಾರ. ಸಾಗರ ಸಂಗಮಂ, ಶಂಕರಾಭರಣಂ, ಸಿರಿವೆನ್ನಲ, ಸಿರಿಸಿರಿ ಮುವ್ವ ಚಿತ್ರಗಳ ಯಶಸ್ಸಿನಂತೆ ಕನ್ನಡದಲ್ಲಿ ನೃತ್ಯಪ್ರಧಾನ ಚಿತ್ರಗಳು ಮೇಲೇಳಲೇ ಇಲ್ಲ.

ಹಾಗೆಂದು ಮೇಲಿನ ಮಾತಿಗೆ ಅಪವಾದವೆನಿಸುವ ಒಳ್ಳೆಯ ಉದಾಹರಣೆಗಳ ಸಂಖ್ಯೆ ಇಲ್ಲವೇ ಇಲ್ಲವೆಂದೇನಿಲ್ಲ. ಆದರೆ ಅವುಗಳ ಸಂಖ್ಯೆ ಬೆರಳೆಣಿಕೆಯದ್ದಷ್ಟೇ ! ಇಂದಿಗೂ ಹಲಕೆಲವು ಚಿತ್ರಗಳ ಹಾಡು-ನೃತ್ಯ, ಅದರೊಂದಿಗೇ ನರ್ತಕರ ಹಾವಭಾವಭಂಗಿಗಳು ತಮ್ಮ ಸಾತ್ತ್ವಿಕಾಭಿನಯದ ಮೂಲಕವಾಗಿ ಪ್ರಸಿದ್ಧಿಯಾಗಿ ಜನಮಾನಸದಲ್ಲಿ ಉಳಿದಿರುವುದಿದೆ. ಆದರೆ ಅವುಗಳಲ್ಲಿ ನೃತ್ಯಪ್ರಧಾನ ಚಿತ್ರಕಥೆಗಳ ಸಂಖ್ಯೆ ಇಲ್ಲವೆಂಬಷ್ಟಿದೆ ಎನ್ನುವುದು ಖೇದದ ವಿಚರ

ಸಿನೆಮಾ ನೃತ್ಯಗಳ ಬಹುಪಾಲು ಗೀತೆಗಳು ಸಿನೆಮಾಕ್ಕೆಂದೇ ರಚಿತವಾಗಿದ್ದರೂ ಅವುಗಳ ಮಟ್ಟ ಇನ್ನಾವುದೇ ಭಕ್ತಿಗೀತೆ ಅಥವಾ ದಾಸ/ವಚನಕಾರರ ಗೀತೆಗಳಿಗಿಂತ ಕಡಿಮೆಯವೇನಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದು ೧೯೬೦-೮೦ದಶಕದೊಳಗಿನ ಚಲನಚಿತ್ರಗಳು. ಹಾಗೆ ನೋಡಿದರೆ ಇಂತಹ ಹಾಡುಗಳು ನೃತ್ಯವನ್ನೇ ಮುಖ್ಯವಸ್ತುವಾಗಿಟ್ಟುಕೊಂಡ ಸಿನೆಮಾಗಳದ್ದೇನೂ ಆಗಿರಲಿಲ್ಲ. ಬದಲಾಗಿ ಒಂದೋ ಪೌರಾಣಿಕ ಅಥವಾ ಐತಿಹಾಸಿಕವೇ ಆಗಿರುತ್ತಿದ್ದವು. ಸಾಮಾಜಿಕ ಸಿನೆಮಾಗಳಲ್ಲಿ ನೃತ್ಯಗಳ ಶಾಸ್ತ್ರೀಯತೆಯನ್ನು ತೋರಿಸುತ್ತಿದ್ದ ಸನ್ನಿವೇಶಗಳು ಕೆಲವು ಕ್ಷಣಗಳಿಗಷ್ಟೇ ಸೀಮಿತವಾಗಿದ್ದುದ್ದರಿಂದ ನೃತ್ಯದ ಮೂಲಕವಾಗಿ ಗಮನಾರ್ಹವಾದ ಸಂದೇಶ ರವಾನೆಯಾಗುವುದೂ ಅಪರೂಪವಾಗಿತ್ತು. ನಾಯಕನನ್ನು ಸೆಳೆಯುವ ನಾಯಕಿಯ ನರ್ತನದಲ್ಲೋ, ಆಸ್ಥಾನ ನರ್ತಕಿಯರಲ್ಲೋ, ಯುಗಳ ಗೀತೆಗಳಲ್ಲೋ, ದೇವಪೂಜಾಮಂದಿರಗಳ ನರ್ತನಕ್ಕೋ/ವೇಶ್ಯಾವಾಟಿಕೆ ಸಂಬಂಧಿತ ನೋಟಕ್ಕೋ/ಸಭಾನರ್ತನಗಳಿಗೋ/ಹಬ್ಬಹರಿದಿನ ಸಮಾರಂಭ ಸಂತೋಷ ಕೂಟಗಳಿಗೋ/ನಾಯಕಿಯ ಶೋಷಣೆಯ ಸಂದರ್ಭಕ್ಕೋ ನೃತ್ಯಗಳ ಶಾಸ್ತ್ರೀಯಾಂಶಗಳು ಸೀಮಿತವಾಗಿದ್ದದ್ದು ಚಾಲ್ತಿ. ಹಾಗೆ ಗಮನಿಸಿದರೆ ನೃತ್ಯದ ಶಾಸ್ತ್ರೀಯಾಂಶವನ್ನೇ ಕಥಾವಸ್ತುವಿನೊಳಗೆ ಅಳವಡಿಸಿದ ಪ್ರಯೋಗಗಳು ಸಾಮಾಜಿಕ ಚಲನಚಿತ್ರಗಳಲ್ಲೇ ಮೂಡಿಬಂದಿವೆ. ಇದು ಕನ್ನಡ ಮಾತ್ರವಲ್ಲದೆ ನೆರೆಯ ತಮಿಳು, ತೆಲುಗು ಚಿತ್ರರಂಗದಿಂದಲೂ ಅರಿವಿಗೆ ಬರುವ ವಿಚಾರ.

ಹಲವು ಸಲ ತಂತ್ರಜ್ಞಾನವೇ ಪ್ರತಿಭಾ-ವ್ಯುತ್ಪತ್ತಿಯನ್ನು ಕಸಿದುಕೊಂಡಿತೇ ಎಂದು ಭಾಸವಾಗದೇ ಇರದು. ಕಾರಣ, ನೃತ್ಯಗಳು ಕೊಂಚ ಶಾಸ್ತ್ರೀಯ ಅಭಿವ್ಯಕ್ತಿಗೆ ಪೂರಕವಾಗಿ ಧ್ವನಿಸುತ್ತಿದ್ದದ್ದು ಕಪ್ಪು-ಬಿಳುಪಿನ ಸಿನೆಮಾಗಳಲ್ಲೇ. ಆದರೆ ವರ್ಣಮಯ ಚಿತ್ರಗಳ ಕಾಲಕ್ಕೆ ತಂತ್ರಜ್ಞಾನ ಮುಂದುವರಿದರೂ ನೃತ್ಯಗಳನ್ನು ಗಮನಾರ್ಹವಾಗಿ ಬಿಂಬಿಸುವಲ್ಲಿ ಪ್ರಯತ್ನಗಳು ಅಷ್ಟೇನೂ ಸಮಾಧಾನಕಾರಿಯಾಗಿ ತೋರುವುದಿಲ್ಲ. ಸಂಖ್ಯಾತ್ಮಕವಾಗಿ ೨೦೧೦ರ ದಶಕವು ಹೆಚ್ಚಿನ ಸಂಖ್ಯೆಯ ನೃತ್ಯಸಂಬಂಧಿತ ಪಾತ್ರಗಳು ಮತ್ತು ಆಶಯದ ಹಿನ್ನೆಲೆಯ ಸಿನೆಮಾಗಳನ್ನು ಕನ್ನಡ ಚಲನಚಿತ್ರರಂಗಕ್ಕೆ ನೀಡಿದೆಯೇನೋ ನಿಜ. ಆದರೆ ಅದರಲ್ಲಿ ಗುಣಮಟ್ಟದ ಅಂಶ ಕ್ಷೀಣವಾಗಿದೆ. ಈ ಹಿನ್ನೆಲೆಯಲ್ಲಿ ನೃತ್ಯಚಲನೆಗಳನ್ನು ಬಳಸಿದ ಸಿನೆಮಾಗಳ ಒಟ್ಟು ಇತಿಹಾಸವನ್ನು, ಶಾಸ್ತ್ರೀಯ ನೃತ್ಯಾಧಾರಿತ ಚಲನೆಗಳಿಗೆ ಇದ್ದ ಹೆಚ್ಚಿನ ಬೇಡಿಕೆ ಮತ್ತು ನೃತ್ಯವನ್ನು ದುಡಿಸಿಕೊಂಡ ಗುಣಾತ್ಮಕವಾದ ಪ್ರಯೋಗ ಮತ್ತು ಅಭಿವ್ಯಕ್ತಿಯನ್ನು ಪರೀಕ್ಷಿಸಿದರೆ ೧೯೬೦-೧೯೯೦ರ ವರೆಗಿನ ಕಾಲವನ್ನು ಸುವರ್ಣ ಕಾಲವೆಂದೇ ಕರೆಯಬಹುದು.

ಇವೆಲ್ಲದ್ದರಿಂದಲೋ ಏನೋ ಶಾಸ್ತ್ರೀಯ ನೃತ್ಯಪ್ರದರ್ಶನಗಳಲ್ಲಿ ನೃತ್ಯಾಧಾರಿತ ಚಲನಚಿತ್ರಗಳ ಅಥವಾ ಪೌರಾಣಿಕ ಹಾಡುಗಳ ಅಭಿವ್ಯಕ್ತಿ ಅಷ್ಟೇನೂ ಗಾಢ ಪರಿಣಾಮ ಬೀರಿದಂತೆ ತೋರುವುದಿಲ್ಲ. ೧೯೯೦ರ ದಶಕದ ನಂತರವಂತೂ ಮಲಯಮಾರುತ,ಕೊಲ್ಲೂರು ಶ್ರೀ ಮೂಕಾಂಬಿಕೆಶಬರಿಮಲೆ ಸ್ವಾಮಿ ಅಯ್ಯಪ್ಪ ದಲ್ಲಿನ ನೃತ್ಯಸಂಬಂಧಿತ ಹಾಡುಗಳು ಶಾಸ್ತ್ರೀಯ ನೃತ್ಯಪ್ರದರ್ಶನಗಳಿಗೆ ಆಕರವಾದ ಉದಾಹರಣೆಗಳನ್ನು ಬಿಟ್ಟರೆ, ಮತ್ತ್ಯಾವುದೂ ಗಮನಾರ್ಹವಾಗಿ ಸೆಳೆದಿಲ್ಲ. ಆದಾಗ್ಯೂ ಪ್ರಸ್ತುತ ದಶಕದ ಸಿನೆಮಾಗಳ ನೃತ್ಯಗಳು ಜನಪ್ರಿಯವಾಗುವುದಿದೆ. ಆದರೆ ಅವು ತಮ್ಮ ಸಾತ್ತ್ವಿಕಾಭಿನಯದಿಂದಲ್ಲ. ಬದಲಾಗಿ ಪ್ರೇಕ್ಷಕರನ್ನು ಸೆಳೆಯುವ ವ್ಯವಸ್ಥಿತ ಗಿಮಿಕ್‌ನ ಪ್ರಯತ್ನಗಳಿಂದ. ಇಂದು ನೃತ್ಯವೆನ್ನುವುದು ಸರ್ಕಸ್ ಆಗುತ್ತಿರುವುದಕ್ಕೆ ಇದು ಬೆನ್ನುಡಿ.

ಈ ಎಲ್ಲದರ ಹಿನ್ನೆಲೆಯಲ್ಲಿ ಶತಾವಧಾನಿ ಡಾ. ಆರ್. ಗಣೇಶರ ಮಾತುಗಳು ಅರ್ಥಪೂರ್ಣ. ಜನರಿಗೆ ಇಷ್ಟವಾಗಬೇಕೆಂಬ ಒಂದೇ ಉದ್ದೇಶದಿಂದ ಭಾಷೆ, ಭಾವ, ಬಂಧ ಹಾಗೂ ಔಚಿತ್ಯಗಳಲ್ಲಿ ಅಸಾಂಸ್ಕೃತಿಕವೂ ಕಲೇತರವೂ ಆದ ಹೊಂದಾಣಿಕೆಯನ್ನು ಮಾಡಿಕೊಳ್ಳುವುದರಿಂದ ಸಿನೆಮಾ ಸಾಹಿತ್ಯ-ಸಂಗೀತ-ನೃತ್ಯದ ಸೊಗಸು ಹಾಳಾಗುತ್ತದೆ. ..ಸಿನೆಮಾ ಹಾಡುಗಳ, ಸಂಭಾಷಣೆಗಳ, ನೃತ್ಯದ ಮೌಲ್ಯದ ಬಗೆಗೆ ಗಂಭೀರಾಧ್ಯಯನ-ಸಂಶೋಧನೆಗಳು ವಿಶ್ವವಿದ್ಯಾಲಯದ ಮಟ್ಟದಲ್ಲಿ ಸಾಗಬೇಕಾಗಿದೆ. ಕಲೆಗೆ ಮಡಿತನದ ಮುಸುಕು ಹಾಕಬೇಕಿಲ್ಲ ಹಾಗೆಂದು ಅದು ಮೈಲಿಗೆಯ ಬೆತ್ತಲುತನಕ್ಕೂ ಜಾರಬೇಕಿಲ್ಲ. ಅದಕ್ಕೆ ಬೇಕಾದದ್ದು ಸಂಸ್ಕಾರದ ಸೆರಗು, ಔಚಿತ್ಯದ ಅರಿವು(ವೆ)ಮಾತ್ರ.

ಪ್ರೀತಿಯಿಂದ

ಸಂಪಾದಕರು

 

Leave a Reply

*

code