ಅಂಕಣಗಳು

Subscribe


 

ಮಂತ್ರಮಥನ- ಗಣಪತ್ಯಥರ್ವಶೀರ್ಷ

Posted On: Friday, September 10th, 2021
1 Star2 Stars3 Stars4 Stars5 Stars (No Ratings Yet)
Loading...

Author: ಡಾ. ಮನೋರಮಾ ಬಿ. ಎನ್.

ಶಾಂತಿಮಂತ್ರ

ವೇದವು ಹೇಳುವ ಲೋಕಪಾಲಕರೂ, ವಿಶ್ವಶಕ್ತಿಗಳೂ ಆದ ಬೆಳಕು, ಶಕ್ತಿ, ಜ್ಞಾನದ ಅಧಿದೇವತೆಗಳೆನಿಸುವ ಇಂದ್ರ, ಸೂರ್ಯ, ಗರುಡ, ಬೃಹಸ್ಪತಿ ಮೊದಲಾದ ವಿಶ್ವಶಕ್ತಿಗಳನ್ನು ಪ್ರಾರ್ಥಿಸುವ ಈ ವೇದಮಂತ್ರವು ಲೋಕವನ್ನೀಕ್ಷಿಸುವ ಕಿವಿ, ಕಣ್ಣೆಂಬ ಪ್ರಧಾನ ಇಂದ್ರಿಯಗಳು ಶುದ್ಧವಾಗಿಯೂ, ಶುಭವಾಗಿಯೂ ಪವಿತ್ರವಾಗಿಯೂ ಇರುವಂತೆ ಕೇಳಿಕೊಳ್ಳುತ್ತದೆ; ಲೋಕಕ್ಷೇಮವನ್ನು ಹಾರೈಸುತ್ತದೆ.

 

ಗಣಪತಿ-ಯಾರು?

ಗಣಪತಿ ಎನ್ನುವ ಇಲ್ಲಿನ ದೇವತೆ ಪುರಾಣಲೋಕದಲ್ಲಿ ಬಹು ಪ್ರಚಲಿತನಾಗಿರುವ ಶಿವ-ಪಾರ್ವತೀಸುತ ಬೆನಕ, ಲಂಬೋದರ, ವಕ್ರತುಂಡ, ಮೂಷಕವಾಹನನೆಂದುಕೊಳ್ಳುವುದು ಅನ್ವಯ. ಆರನೇಯ ಶತಮಾನದಲ್ಲಿ ಬಹುವಾಗಿ ಪ್ರಚಲಿತದ್ದಲಿದ್ದ ಗಾಣಪತ್ಯಾಗಮದಲ್ಲಿ ಗಣಪತಿಯೇ ಅಧಿದೇವತೆ, ಪರಬ್ರಹ್ಮಸ್ವರೂಪನೂ ಕೂಡಾ. ಹಾಗೆಂದೇ ಈ ಗಣಪತ್ಯಥರ್ವಶೀರ್ಷವು ಗಾಣಪತ್ಯಾಗಮದಲ್ಲೇ ಪ್ರವರ್ಧಿಸಿದ ಇತಿಹಾಸವನ್ನು ವಿದ್ವಾಂಸರು ಸೂಚಿಸುವುದಿದೆ. ಅದಾಗಿ ದೈವಾಧಿಪತ್ಯದ ಮತಗಳಲ್ಲಿನ ತಿಕ್ಕಾಟವನ್ನು ಹದಕ್ಕೆ ತರುವಂತೆಯೂ, ನೇಪಥ್ಯಕ್ಕೆ ಸರಿಯುತ್ತಿದ್ದ ಗಾಣಪತ್ಯರ ಸಂಪ್ರದಾಯವನ್ನು ಉಳಿಸುವಂತೆಯೂ ಆಚಾರ್ಯ ಶಂಕರರು ಏರ್ಪಡಿಸಿಕೊಟ್ಟ ಪಂಚಾಯತನ ಪೂಜೆಯಲ್ಲಿ ಆದ್ಯ ಉಪಾಸ್ಯ ದೇವತೆಯೆನಿಸಿಕೊಂಡ- ಗಣಪ.

ಸೊಂಡಿಲ ಮೊಗದ ಗಣಪತಿಯ ಕುರಿತಾದ ಪೂಜಾಪ್ರಸಕ್ತಿಗಳ ಹೆಚ್ಚಿನ ಉಲ್ಲೇಖವಿರುವುದು ಪುರಾಣಗಳಲ್ಲೇ. ಗಣಪತಿಯನ್ನೇ ಪ್ರಧಾನವಾಗಿ ಚಿತ್ರಿಸಿದ ಗಣೇಶ ಮತ್ತು ಮುದ್ಗಲ ಪುರಾಣಗಳೇ ಇದ್ದು; ಇಂದಿಗೆ ಪ್ರಚಲಿತದಲ್ಲಿರುವ ಗಣಪತಿಯ ಬಹಳಷ್ಟು ಕತೆಗಳಿಗೆ ಆಧಾರ ಪುರಾಣವೇ ಆಗಿದೆ. ವೈದಿಕ ಸಾಹಿತ್ಯದ ಗಣಪತಿಯ ಕಲ್ಪನೆಗಿಂತಲೂ ಹೆಚ್ಚಾದ ಭಾವಪ್ರಪಂಚವನ್ನು, ಬಗೆಬಗೆಯ ಮೂರ್ತಿಕಲ್ಪನೆಯನ್ನೂ ಬೆಳೆಸಿ ಪ್ರಣವಮಂತ್ರಸ್ವರೂಪನನ್ನಾಗಿಸಿ, ದ್ವಾದಶನಾಮಗಳ ಮೂಲಕ ನಮಗೆ ಆಪ್ತವಾಗಿಸಿದ್ದು ಪುರಾಣಗಳೇ. ಹಾಗೆಂದೇ ಗಣೇಶ ಪುರಾಣವು ತತ್ತ್ವಮಸಿ– ವಾಕ್ಯದ ಪ್ರತಿಪಾದ್ಯ ಪರವಸ್ತುವು ಗಣೇಶ ಎಂಬ ಮೂರು ಅಕ್ಷರದಲ್ಲೇ ನೆಲೆಸಿದೆಯೆಂದೂ ಹೇಳುತ್ತದೆ.

ಇಂಥ ಪ್ರಮಥಪತಿ ಹಾಸ್ಯರಸಕ್ಕೆ ಅಧಿಪತಿ (ನಾಟ್ಯಶಾಸ್ತ್ರ) ಎನ್ನುವುದನ್ನು ಅವಲೋಕಿಸಿದರೆ ಆತನ ವಿಚಿತ್ರಾಕಾರವು ಲಘುವಲ್ಲದ ನಗುವಿನ ಸ್ರೋತ ಎಂಬುದಷ್ಟೇ ಅಲ್ಲ; ಬದುಕಿನೊಳಗಿನ ನಗುವನ್ನು ಚಿಮ್ಮಿಸುವ ಕೆಲಸ ಆತನದ್ದೇ ಎಂಬುದೂ ವೇದ್ಯವಾಗುತ್ತದೆ; ಇಲ್ಲವಾದರೆ ಬಾಳು ವಿಘ್ನಬಾಧೆಯಿಂದ ನಗೆಪಾಟಲಿಗೀಡಾಗುತ್ತದೆ ಎನ್ನುವುದಕ್ಕೆ ಹಲವು ಕತೆಗಳೇ ಇವೆ.

ಅದಲ್ಲದೇ ವೈದಿಕ ಸಾಹಿತ್ಯಕ್ಕೆ ನಿಕಟವಾಗಿ ಅರ್ಥೈಸಿಕೊಳ್ಳುವುದಾದರೆ; ಗಣಪತಿ ಎಂಬ ಶಬ್ದದ ಗಣವು ಸಮೂಹ, ಗೋಷ್ಠಿ ಎಂಬ ಅರ್ಥದಲ್ಲಿ ಮನುಷ್ಯರಿಗೂ, ದೇವತೆಗಳಿಗೂ, ಮಂತ್ರಗಳಿಗೂ ಅನ್ವಯವಾಗುತ್ತದೆ. ಹಾಗೆಂದೇ ಇಲ್ಲಿ ಗಣಗಳಿಗೆ ಒಡೆಯನಾದವನು, ಶಾಸನರೂಪ ಎಂದಾಗಿ ಆಲೋಚಿಸಿದರೆ ಮಂತ್ರವು ಏಕದಂತನಿಗೆ ಅನ್ವಯವಾದಂತೆಯೇ ಶಿವ, ಇಂದ್ರನಿಗೂ ಸ್ತುತಿಯೇ ಆಗಿದೆ. ಗಾಣಪತ್ಯವೆಂದರೂ ಪಶುಪತಿತ್ವವೇ ಆಗಿದ್ದು, ಅವರು ಲಿಂಗಪೂಜಕರಾಗಿದ್ದ ವಿಚಾರವಿರುವುದರಿಂದ ಮಂತ್ರದಲ್ಲಿ ಶಿವ ಸನ್ನಿಹಿತನಾಗುತ್ತಾನೆ. ವೇದಕಾಲದಲ್ಲಿ ಇಂದ್ರನೇ ಗಣಗಳ ಅಧಿಪತಿಯೂ ಹೌದು ಎಂಬುದನ್ನೂ ಗಮನಿಸಿಕೊಂಡಾಗ ಇಂದ್ರಪ್ರಾರ್ಥನೆಯೂ ಹೌದು. ಅಗ್ನಿ-ಬೃಹಸ್ಪತಿಗೆ ಹಸ್ತಿವರ್ಚಸ್ ಎಂಬ ಸಂಬೋಧನೆಯಿರುವುದರಿಂದ ಗಣಪತಿ ಶಬ್ದವು ಅವರಿಗೂ ಸಲ್ಲುತ್ತದೆ.

ಇವೆಲ್ಲದಕ್ಕಿಂತ ಮಿಗಿಲಾಗಿ, ಮಂತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೇವಲಾದ್ವೈತ ಸಚ್ಚಿದಾನಂದ ಬ್ರಹ್ಮಸ್ವರೂಪವನ್ನೇ ಚಿಂತಿಸುವುದು ಅಥವಾ ಗುರುತಿಸಿಕೊಳ್ಳುವುದು ಮತ್ತೂ ಹೆಚ್ಚಿನ ಸ್ವಾರಸ್ಯ. ಆ ಬ್ರಹ್ಮವಾದರೋ ರೂಪಭೇದಗಳಿದ್ದರೂ ತತ್ತ್ವವನ್ನು ನಿತ್ಯವೂ ಪ್ರಕಟಪಡಿಸುತ್ತದೆ, ಅನುಗ್ರಹಿಸುತ್ತದೆ. ಆ ಬ್ರಹ್ಮವೇ ಚಿರಂತನಸತ್ಯ, ನಿತ್ಯನೂತನ, ಸನಾತನ, ಸದಾತನವೂ ಹೌದು. ಒಟ್ಟಿನಲ್ಲಿ ತಂತ್ರವಾಗಿ, ತತ್ತ್ವವಾಗಿ, ಆಧಿದೈವಾತ್ಮಕವಾಗಿ, ಅಧ್ಯಾತ್ಮದ ನೆಲೆಯಲ್ಲಿಯೂ ಈ ಮಂತ್ರವು ಅಧಿಭೂತಕ್ಕೆ ಪ್ರಕಾಶ ಕೊಡುವಂತದ್ದಾಗಿದೆ.

 

ತ್ವಮೇವ ಪ್ರತ್ಯಕ್ಷಂ ತತ್ತ್ವಮಸಿ…

ತತ್ತ್ವ ಎಂದರೇನು? – ಎಲ್ಲದರೊಳಗಿರುವ ಸತ್ವ, ಹೂರಣ. ಉದಾಹರಣೆಯಾಗಿ: ಒಂದು ಹಣ್ಣಿನ ಆವರಣವಷ್ಟೇ ಹಣ್ಣೇ? ಅದರ ರುಚಿ, ಸ್ವಾದವನ್ನು ನಿರ್ದಿಷ್ಟಪಡಿಸುವುದು ಅದರೊಳಗಿನ ತಿರುಳು. ಹಣ್ಣಿನೊಳಗಿನ ತತ್ತ್ವವದು. ಹಾಗೆಂದು ಅದು ಆವರಣವನ್ನು ಬಿಟ್ಟು ಇಲ್ಲ ಕೂಡಾ. ಆದರೆ ಆವರಣವೇ ಅದರ ಯಥಾರ್ಥತೆ ಅಲ್ಲ. ಹಾಗಿದ್ದರೂ ಬಾಹ್ಯಚಕ್ಷುವಿಗೆ ಈ ಆವರಣ ಬೇಕು. ಈ ಆವರಣವೇ ಅದರ ಪೂರ್ಣಸ್ವರೂಪವಲ್ಲ. ರೂಪವಷ್ಟೇ. ಅಂದರೆ ಒಂದು ವಸ್ತುವಿನ ಸ್ವಂತಿಕೆ, ತನ್ನತನವೇ ಈ ತತ್+ತ್ವ – ಅಂದರೆ ಅದುವೇ ಪರಮಾರ್ಥ. ಯಾವುದನ್ನು ತಿಳಿದುಕೊಂಡರೆ, ಯಾವುದನ್ನು ಸವಿದರೆ ಎಲ್ಲವನ್ನೂ ತಿಳಿದಂತಾಗುತ್ತದೋ, ಯಾವುದು ಎಲ್ಲವೂ ಆಗಿದೆಯೋ ಅದು ತತ್ತ್ವ. ಯಾವುದರ ಅನುಭವದಿಂದ ಎಲ್ಲವೂ ದಕ್ಕುವುದೋ ಅದು ತತ್ತ್ವ,. ಅಂತಹ ತತ್ತ್ವವೇ ನೀನಾಗಿದ್ದಿ ಎಂಬ ಚಿಂತನೆ ಇದು.

ತತ್ತ್ವಮಸಿ – ಯನ್ನು ತತ್+ತ್ವಂ+ಅಸಿ ಎಂದು ಪದಚ್ಛೇದ ಮಾಡಿಕೊಂಡಾಗ ದೊರಕುವುದೇ- ತ್ವಂ ಅಂದರೆ ನೀನು. ಆದರೆ ನೀನು – ಎಂಬಲ್ಲಿ ಬ್ರಹ್ಮವನ್ನೇ ಸಂಬೋಧಿಸಿದರೂ ಆ ಬ್ರಹ್ಮ ಎಲ್ಲಿದೆ ಎಂದು ಗುರುತಿಸಿಕೊಳ್ಳುವುದು ಬೇಕಷ್ಟೇ. ಹಾಗಿದ್ದಾಗಲೇ ಈ ಪರಮಾರ್ಥವನ್ನು ಅರಿತುಕೊಳ್ಳುವುದಾದರೂ ಯಾಕೆ ಎನ್ನುವುದು ಪ್ರಕಾಶವಾಗುತ್ತದೆ.

ಹಾಗೆಂದು ಈ ಪ್ರಕಾಶವು ಒಬ್ಬಿಬ್ಬರಿಗೆ ಮಾತ್ರ ದಕ್ಕುವಂಥದ್ದಲ್ಲ, ಸೀಮಿತವೂ ಅಲ್ಲ. ಯಾರು ಇದನ್ನು ಅರಿತುಕೊಳ್ಳಲು ಇಚ್ಛಿಸುತ್ತಾರೋ ಅಂತವರೆಲ್ಲರಿಗೂ ಪ್ರತ್ಯಕ್ಷರೂಪವು.

ಹಾಗಾದರೆ ನನ್ನೊಳಗೆಯೇ ಇದೆಯೇ ಆ ಬ್ರಹ್ಮ?- ಇದರ ವಿವೇಚನೆಯೇ ಬ್ರಹ್ಮವಿದ್ಯೆ. ಮತ್ತು ಯಾವುದೇ ಶಿಕ್ಷಣವೂ ವಿದ್ಯೆಯೆನಿಸಿಕೊಳ್ಳುವುದು ಈ ಬ್ರಹ್ಮಜಿಜ್ಞಾಸೆಯ ಸಾಕಾರತ್ವವನ್ನು ಪಡೆದಾಗಲೇ. ಈ ಹಿನ್ನೆಲೆಯಲ್ಲಿ ಗಣಪತಿಯು ವಿದ್ಯಾಧಿಪ ಎಂಬ ಅನ್ವಯವೂ ಸೂಕ್ತವೇ ಆಗಿದೆ.

 

ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ…

ಬ್ರಹ್ಮವು ಎಲ್ಲಿದೆ? ಆಕಾಶದಲ್ಲಿದೆಯೇ? ಕಾಣದ ಲೋಕದಲ್ಲಿಯೇ? ಪಾತಾಳದಲ್ಲಿದೆಯೇ ಅಥವಾ ನಮ್ಮೊಳಗೇ ಇದೆಯೇ?  ಈ ಪ್ರಶ್ನೆ ಎಂಥವರಿಗೂ ಸಹಜ. ಅದಕ್ಕೆ ಉತ್ತರವೇ- ಬ್ರಹ್ಮವು ಆವರಿಸಿಕೊಳ್ಳದ ಜಾಗವೆಲ್ಲಿದೆ ಎಂಬ ಪುನರ್ಪ್ರಶ್ನೆ. ಬ್ರಹ್ಮವು ಸರ್ವವ್ಯಾಪಕ. ಅದಿಲ್ಲದ ಜಗತ್ತಿಲ್ಲ. ಅಣು-ರೇಣು-ತೃಣ-ಕಾಷ್ಠಗಳಲ್ಲಿಯೂ ಅಡಗಿರುವ ವಿಶ್ವಶಕ್ತಿಯೇ ಬ್ರಹ್ಮ. ಪಂಚಭೂತಗಳೆಲ್ಲವೂ ಅದರಲ್ಲೇ ಅಡಗಿವೆ. ಅದೇ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣ.

ಆದರೆ ಅದನ್ನು ಅರಿತುಕೊಳ್ಳುವುದು ಹೇಗೆ? ಕಾಣುವ ಕಣ್ಣು, ಕೇಳುವ ಕಿವಿಯ ಸಹಿತ ಇಂದ್ರಿಯಗಳೆಲ್ಲವೂ ಶುದ್ಧವಾಗಿದ್ದರೆ ಈ ವಿಶ್ವರೂಪವನ್ನು ನಮ್ಮ ನಮ್ಮ ಹೃದಯದಲ್ಲಿಯೇ ಅರಿತುಕೊಳ್ಳಲು ಸಾಧ್ಯ. ಅದನ್ನೇ ಶಾಂತಿಮಂತ್ರ ಆರಂಭದಲ್ಲಿ ಪ್ರಾರ್ಥನೆಗೆಂದು ಸೂಚಿಸುತ್ತದೆ. ನಮ್ಮನ್ನು ನಾವು ಸೂಕ್ಷ್ಮವಾಗಿ ಕಂಡುಕೊಳ್ಳುತ್ತಾ ನಮ್ಮೊಳಗನ್ನು ಆಪ್ತವಾಗಿ ಪರೀಕ್ಷಿಸುತ್ತಾ ಹೋದಂತೆಲ್ಲಾ ಈ ತತ್ತ್ವದರ್ಶನ ಸುಲಭವಾಗುತ್ತದೆ.

ಬ್ರಹ್ಮವು ಹೇಗೆ ಸಮಷ್ಟಿ ಚೈತನ್ಯವೋ ಅಂತೆಯೇ ವ್ಯಷ್ಟಿಯೊಳಗಡೆಯೂ, ಅಂದರೆ ನಿತ್ಯವೂ ಶಾಶ್ವತವೂ ಆದ ಎಲ್ಲರೊಳಗಿರುವ ಆತ್ಮಸ್ವರೂಪಿಯೂ ಆಗಿದೆ. ಈ ಆತ್ಮವಾದರೋ ಇಂದ್ರಿಯಗೋಚರವಾದುದಲ್ಲ. ಹಾಗಿದ್ದೂ ಇಂದ್ರಿಯಗಳ ಶುದ್ಧತೆ ಏಕೆ ಬೇಕು? – ಹಣ್ಣಿನ ಹೊರಗಿನ ಕವಚ ಕ್ಷೇಮವಾಗಿದ್ದಷ್ಟೂ ಸಮಯ ಒಳಗಿನ ತಿರುಳು ಭ್ರಷ್ಟವಾಗಲಾರದಷ್ಟೇ! ಅಂತೆಯೇ ದೇಹವೆಂಬ ಆವರಣವನ್ನು ಶುದ್ಧವಾಗಿರಿಸಿದಷ್ಟೂ (ಆವರಣ ಶುದ್ಧವು ಕೇವಲ ಸ್ನಾನಾದಿಗಳಿಂದ ಬರತಕ್ಕದ್ದಲ್ಲ. ಶುಚಿತ್ವ ದೇಹಕ್ಕೆ ಎಷ್ಟು ಅವಶ್ಯವೋ ಹಾಗೆಯೇ ದೇಹವನ್ನು ನಿರ್ಮಿಸಿದ ಪದಾರ್ಥ, ಅದರೊಳಗಿನ ಬಿಡಿಭಾಗಗಳಿಗೂ ಶುಚಿತ್ವ ಬೇಕು. ದೇಹ ಕಲ್ಮಷವಾದರೆ ಹೇಗೆ ರೋಗಬಾಧೆಗಳೆಂಬ ಸೋಂಕು ತಾಗುತ್ತದೆಯೋ ಅಂತೆಯೇ ದೇಹದ ಅಂತರಿಂದ್ರಿಯವು ಶುಚಿಯಾಗಿಲ್ಲದಿದ್ದರೆ ಬ್ರಹ್ಮದರ್ಶನ ಎಂಥವನಿಗೂ ಅಸಾಧ್ಯ. ದೇಹದ ಬಿಡಿಭಾಗಗಳನ್ನು ತುಕ್ಕು ಹಿಡಿಸುವಂಥ ಸಂಗತಿಗಳಿಂದ ಆದಷ್ಟೂ ದೂರವಿರಬೇಕೆಂದು ಇದನ್ನೇ ಹೇಳುವುದು) ತತ್ತ್ವಪ್ರಕಾಶ ಸುಲಭವಾಗುತ್ತದೆ, ಸಹಜವಾಗುತ್ತದೆ. ಇಂಥ ದೇಹದ ಮಲಿನತೆಯನ್ನು ಕಡಿಮೆಗೊಳಿಸುವುದು ಹೇಗೆ – ಸಾಧನಚತುಷ್ಟಯಗಳನ್ನು ಆರ್ಜಿಸಿಕೊಳ್ಳುವುದು (ಶಮ-ದಮ-ತಿತಿಕ್ಷಾ-ಉಪರತಿ-ಸಮಾಧಾನ-ಶ್ರದ್ಧಾಗಳೆಂಬ ಷಟ್ಕಸಂಪತ್ತಿ, ನಿತ್ಯಾನಿತ್ಯವಿವೇಕ, ಇಷಾಮುತ್ರಫಲಭೋಗವೈರಾಗ್ಯ, ಮುಮುಕ್ಷತ್ವ). ಋತಂ ವಚ್ಮಿ, ಸತ್ಯಂ ವಚ್ಮಿ- ಹಾಗೆಂದೇ ಋತ, ಸತ್ಯದ ಅನುಭವಮಾರ್ಗ ನಮ್ಮದಾಗಬೇಕು, ಅದನ್ನೇ ನಾವು ಮಾಡುತ್ತೇವೆ ಎಂಬ ಸಂಕಲ್ಪವಿದೆ ಮಂತ್ರದಲ್ಲಿ.

ಹೀಗೆ ನಿತ್ಯ ಬ್ರಹ್ಮಜಿಜ್ಞಾಸೆ ಮಾಡುವವರನ್ನು, ಕೇಳುವವರನ್ನು, ಮಾತಾಡುವವರನ್ನು, ಧ್ಯಾನಿಗಳನ್ನು, ಸೇವಿಸುವವರನ್ನು, ಆ ವಿಚಾರದಲ್ಲಿ ದಾನಾದಿಗಳನ್ನು ಮಾಡುತ್ತಾ ಉಪಕರಿಸುತ್ತ್ತಾ ತನ್ನಂತೆಯೇ ಮತ್ತೊಬ್ಬರನ್ನು ತಿಳಿದು ನಡೆಯುವನೋ ಅಂಥವನನ್ನು ನಾಲ್ಕು ದಿಕ್ಕುಗಳಿಂದಲೂ, ಮುಂದೆ-ಹಿಂದಿನಿಂದಲೂ, ಮೇಲೆ-ಕೆಳಗಿನಿಂದಲೂ, ಭೂತ-ವರ್ತಮಾನ-ಭವಿಷ್ಯತ್‌ಗಳಲ್ಲಿಯೂ ಅವನ ಧರ್ಮವೇ ರಕ್ಷಿಸುತ್ತದೆ. ಅಂದರೆ ಅದೇ ಅಧ್ಯಾತ್ಮವು ಅಧಿದೈವಾತ್ಮಕವಾಗಿ ಒದಗಿಬರುತ್ತದೆ; ಆತ್ಮಸ್ವರೂಪಿಯಾದ ಇಷ್ಟದೈವದ ಮೂಲಕ ಧರ್ಮವೇ ರಕ್ಷಿಸುತ್ತದೆ. ಹಾಗಾಗುವಂತೆ ಮಾಡು ಎನ್ನುವ ಬ್ರಹ್ಮಪ್ರಾರ್ಥನೆ ಹಾಗೂ ಧರ್ಮಚಿಂತನೆಯು ಈ ಭಾಗದಲ್ಲಿ ವೇದ್ಯವಾಗುತ್ತದೆ.

 

ತ್ವಂ ವಾಙ್ಮಯಸ್ತ್ವಂ ಚಿನ್ಮಯಃ…

ಸಮಸ್ತ ವಾಙ್ಮಯವಿಡೀ ವ್ಯಾಪಿಸಿರುವ ಚಿನ್ಮಯವೇ ಬ್ರಹ್ಮ ಅಂದರೆ ಎಲ್ಲಾ ಬಗೆಯ ವೇದ-ಜ್ಞಾನಪ್ರಪಂಚದ ಮೂಲ ಧ್ಯೇಯವೂ, ವ್ಯಾಪಕತ್ವವೂ, ಅಂತಿಮ ಸಾಧನೆಯೂ ಬ್ರಹ್ಮವೇ ಆಗಿದೆ. ಅದು ಮಾತಿನಲ್ಲಿರಲಿ ಅಥವಾ ಕೃತಿಯಲ್ಲಿರಲಿ; ಅರಿವಿನಲ್ಲಿರಲಿ ಅಥವಾ ಪ್ರಯೋಗದಲ್ಲಿರಲಿ – ಎಲ್ಲದರೊಳಗಿನ ಚೈತನ್ಯವನ್ನು ಕಂಡುಕೊಳ್ಳುವುದು, ಸಾಧಿಸಿಕೊಳ್ಳುವುದೇ ಪರಮಲಕ್ಷ್ಯವೂ ಆಗಿರಬೇಕು ಕೂಡಾ. ಈ ಬ್ರಹ್ಮವೋ ಸತ್+ಚಿತ್+ಆನಂದಸ್ವರೂಪಿ (ಇರವು+ಅರಿವು+ನಲವು). ಎರಡನೇಯದ್ದಿಲ್ಲದ ಅದ್ವಿತೀಯ, ಎಲ್ಲವನ್ನೂ-ಎಲ್ಲದನ್ನೂ ಬಲ್ಲ, ಎಲ್ಲದಕ್ಕೂ ಕಾರಣೀಭೂತವಾದುದೇ ಬ್ರಹ್ಮ. ಹುಟ್ಟಿದ್ದೂ ಬ್ರಹ್ಮದಲ್ಲಿಯೇ, ಇರುವುದೂ ಬ್ರಹ್ಮದಲ್ಲಿಯೇ, ಅಳಿಯುವುದೂ ಬ್ರಹ್ಮದಲ್ಲಿಯೇ.

ಹೀಗೆ ಇಡಿಯ ವಾಕ್ ಸ್ವರೂಪವು ಇರುವುದು ನಾಲ್ಕು ಬಗೆಯಾಗಿ- ಪರಾ, ಪಶ್ಯಂತೀ, ಮಧ್ಯಮಾ, ವೈಖರೀ- ತ್ವಂ ಚತ್ವಾರಿ ವಾಕ್ಪದಾನಿ. ಎಲ್ಲದರೊಳಗೂ ಇದೆ ಮತ್ತು ಇವು ನಾಲ್ಕರ ಸಮಗ್ರರೂಪವೂ ಬ್ರಹ್ಮವೇ ಆಗಿದೆ. ಈ ನಾಲ್ಕರೊಳಗೇ ಇಡಿಯ ಸೃಷ್ಟಿರಹಸ್ಯವಿರುವುದನ್ನು ವೇದಾಂತವಷ್ಟೇ ಅಲ್ಲದೆ; ಪಾಣಿನಿದರ್ಶನ, ಶ್ರೀವಿದ್ಯಾದರ್ಶನ (ಲಲಿತಾಸಹಸ್ರನಾಮ- ಪರಾ ಪ್ರತ್ಯಕ್ಚಿತೀ ರೂಪಾ ಪಶ್ಯಂತೀ ಪರದೇವತಾ | ಮಧ್ಯಮಾ ವೈಖರೀ ರೂಪಾ ಭಕ್ತಮಾನಸಹಂಸಿಕಾ ||) ಮೊದಲಾದ ಮಾರ್ಗಗಳು ಸ್ಪಷ್ಟಪಡಿಸಿವೆ. ಸುಲಭವಾಗಿ ಅರ್ಥೈಸಿಕೊಳ್ಳುವುದಾದರೆ; ಇದು ಲೋಕಕಾರಣವಾದ ದೇಶ-ಕಾಲಾತೀತವಾದ ಶಬ್ದಬ್ರಹ್ಮ. ಈ ನಾಲ್ಕು ವಾಕ್ಕುಗಳಿಗೆ ಅನೇಕ ಅನ್ವಯಗಳನ್ನು ಕೊಡಬಹುದು. ವೈಖರೀ  ಲೋಕಮುಖವಾದ ವ್ಯಕ್ತ ವರ್ಣನಾಭಾಷೆ, ಆಹತನಾದ ಅಥವಾ ಹೊರಗೆ ಪ್ರಕಟಗೊಂಡ ಸ್ಪಷ್ಟಮಾತು. ಮಧ್ಯಮಾ-ಚಿಂತನೆಯ ಹಂತದ್ದು, ಸ್ಪಷ್ಟತೆಯ ಹಾದಿಯೊಳಗೆ ಏರ್ಪಟ್ಟಿರುವಂಥದ್ದು.; ಪಶ್ಯಂತಿ- ಚೈತನ್ಯರೂಪವಾದದ್ದು; ಪರಾ- ಬೀಜಸ್ವರೂಪವಾದದ್ದು, ಸೂಕ್ಷ್ಮವಾದ ಅನಾಹತನಾದ, ಅಕ್ಷರವು ಜನಿಸುವ ಹಂತಕ್ಕಿಂತಲೂ ಮುಂಚಿನದ್ದು, ಅದುವೇ ನಂತರದ ಮೂರಕ್ಕೂ ಕಾರಣವಾದ ಮೂಲಶಕ್ತಿಯೂ ಕೂಡಾ. ಹೀಗೆ ಅತೀ ಸೂಕ್ಷ್ಮದಿಂದ ಅತಿ ಸ್ಥೂಲದವರೆಗೂ ವ್ಯಾಪಿಸಿಕೊಂಡಿರುವ ವಾಕ್ಸ್ವರೂಪವೇ ಬ್ರಹ್ಮ.

ಆತ್ಮವೂ ಬ್ರಹ್ಮಸ್ವರೂಪವೇ. ಹಾಗಿದ್ದಾಗ ಈ ವಾಕ್ಕುಗಳು ನಮ್ಮಲ್ಲಿಯೂ ಏರ್ಪಡಲೇಬೇಕಲ್ಲವೇ! ಹೌದು. ನಮ್ಮ ವ್ಯಕ್ತಿತ್ವ, ಚರ್ಯೆ, ಮಾತು, ಲೋಕ ಪ್ರತಿಯೊಂದರಲ್ಲೂ ಈ ನಾಲ್ಕು ವಾಕ್ಕುಗಳ ಕರ್ತವ್ಯ ನಿತ್ಯವೂ ಘಟಿಸುತ್ತಲೇ ಇರುತ್ತದೆ. ಸೂಕ್ಷ್ಮವಾಗಿ ಪರಿಭಾವಿಸಿದಾಗಲಷ್ಟೇ ಅವುಗಳ ಹಂತಗಳು ನಮ್ಮ ಅರಿವಿಗೆ ಬರುತ್ತವೆ. ಮಾತ್ರವಲ್ಲ, ಕ್ರಮೇಣ ನಮ್ಮ ಮಾತು-ಕೃತಿಗಳೆಲ್ಲದರಲ್ಲೂ ಮಿತಿ-ನಿಯಮ-ನಿರ್ದಿಷ್ಟತೆ-ಆಳವಾದ ಚಿಂತನೆ ಸಾಧ್ಯವಾಗುತ್ತದೆ. ಫಲವಾಗಿ ನಮ್ಮೊಳಗಿನ, ನಮ್ಮ ಸುತ್ತಮುತ್ತಲಿನ ಶಬ್ದಪ್ರಪಂಚವೆಲ್ಲವೂ ಪರಿಶುದ್ಧವಾಗಿರುತ್ತದೆ, ನಮ್ಮ ಕರ್ತವ್ಯಗಳು ನಿರ್ಮಲವಾಗಿರುತ್ತವೆ. ತಲೆತಲೆಮಾರಿಗೂ ವಾಕ್‌ದೋಷಗಳು ಯಾರಿಂದಲೂ ಘಟಿಸಲಾರವು. ಋಷಿಮುನಿಗಳ ಮಾತಿನ ಸ್ವರೂಪ, ನೆಲೆಯನ್ನು ಗಮನಿಸಿಕೊಂಡಾಗ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ.

ಒಟ್ಟಿನಲ್ಲಿ ನಮ್ಮ ಬದುಕಿನ/ಆತ್ಮದ ಸ್ವರೂಪ/ದೇಹಚರ್ಯೆಗಳನ್ನು ಬಹಳ ಸೂಕ್ಷ್ಮವಾಗಿ ಪ್ರತಿಯೊಂದಕ್ಕೂ ಪರಿಭಾವಿಸುವ, ಚಿಂತಿಸುವ ಮೂಲಕ ನಾನ್ಯಾರು ಎಂದು ಕಂಡುಕೊಳ್ಳುವ ಸೂತ್ರಗಳಿವು.

 

ತ್ವಂ ಗುಣತ್ರಯಾತೀತಃ…

ಲೋಕವು ಸತ್ತ್ವ, ರಜಸ್ಸು, ತಮಸ್ಸು ಎಂಬ ತ್ರಿಗುಣಗಳ ಮೇಲಾಟಗಳಿಂದ ಆಗಿರುವಂಥದ್ದು. (ಸಾಂಖ್ಯದರ್ಶನವು ಇದನ್ನೇ ಪ್ರಧಾನವಾಗಿ ವಿವಕ್ಷಿಸಿದೆ.) ಹಾಗೆಂದೇ ಬ್ರಹ್ಮವು ಇಷ್ಟದೈವ ರೂಪದಿಂದ ಸಗುಣವೂ ಹೌದು. ಅಂತೆಯೇ ತತ್ತ್ವರೂಪದಲ್ಲಿ ನಿರ್ಗುಣವೂ ಹೌದು. ತ್ರಿಗುಣಸ್ವರೂಪ. ತ್ರಿಗುಣಾತೀತ.

ವೇದಾಂತದ ಪ್ರಧಾನ ವಿವೇಚನೆಗಳಲ್ಲಿ ಅವಸ್ಥಾತ್ರಯಚಿಂತನೆಯೂ ಒಂದು. ಜಾಗೃತ್, ಸ್ವಪ್ನ, ಸುಷುಪ್ತಿ ತ್ರಿವಿಧ ಅವಸ್ಥೆಗಳು. ಇವುಗಳ ಮೇಳಾಪಾಕದಿಂದಲೇ ಸಮಸ್ತ ಜೀವ-ಜಗತ್ತಿನ ಪ್ರಪಂಚಗಳು ನಡೆಯುತ್ತವೆ. ಸುಷುಪ್ತ್ಯಾವಸ್ಥೆಯನ್ನು ಮಾನವನು ನಿತ್ಯವೂ ಹೊಂದುತ್ತಾನಷ್ಟೇ. ಆದರೆ ಆ ಫಲದ ಅನುಭವವನ್ನು ಮತ್ತೆ ಜಾಗೃದವಸ್ಥೆ ಕಾಣುತ್ತದೆಯಷ್ಟಲ್ಲದೆ; ಸುಷುಪ್ತಿಯ ಅನುಭವ ಪ್ರತ್ಯಕ್ಷವಲ್ಲ. ಜಾಗೃದವಸ್ಥೆಯಲ್ಲಿ ಕರ್ತೃತ್ವ-ಭೋಕ್ತೃತ್ವಗಳ ಪ್ರಜ್ಞೆಯಿದೆ. ಅದೇ ಸ್ವಪ್ನಾವಸ್ಥೆಯಲ್ಲಿಯೂ ಜಾಗೃದವಸ್ಥೆಯಷ್ಟಲ್ಲದಿದ್ದರೂ ತಕ್ಕಮಟ್ಟಿಗೆ ಭೋಕ್ತೃತ್ವವುಂಟು. ಅದೇ ಸುಷುಪ್ತ್ಯಾವಸ್ಥೆಯಲ್ಲಿರುವ ವ್ಯಷ್ಟಿರೂಪದಲ್ಲಿರುವ ಪ್ರಾಜ್ಞನಿಗೆ ಕರ್ತೃತ್ವವೂ ಇಲ್ಲ ಭೋಕ್ತೃತ್ವವೂ ಇಲ್ಲ. ಆದರೆ ವಿಶ್ರಾಂತಿಯಿರುತ್ತದೆ. ಸುಖವನ್ನು ಮೀರಿದ ಸ್ಥಿತಿ. ಅದೇ ಆನಂದ. ಅದನ್ನು ಜಾಗೃತ್ ಸ್ವರೂಪದಂತೆಯೇ ಅನುಭವಿಸಲು ಸಾಧ್ಯವಾಗುವುದು ಬ್ರಹ್ಮಕ್ಕೆ, ಬ್ರಹ್ಮಸ್ವರೂಪವನ್ನು ಗುರುತಿಸಿಕೊಂಡವನಿಗೆ. ಆ ಆನಂದಾತ್ಮಕವಾದ ಪೂರ್ಣ ಅರಿವಿನ ಪ್ರಕಾಶವಿರುವ ಹಂತವೇ ತುರೀಯಾವಸ್ಥೆ.

ಈ ಬ್ರಹ್ಮವು ಸ್ಥೂಲ (ಎಲ್ಲರ ಕಣ್ಣಿಗೆ ಕಾಣುವ ಅವಯವ, ಇಂದ್ರಿಯಲಬ್ಧವಾದ ಪ್ರತ್ಯಕ್ಷಶರೀರ), ಸೂಕ್ಷ್ಮ (ಪಂಚಪ್ರಾಣ, ಅಂತಃಕರಣಯುತವಾದದ್ದು), ಕಾರಣ (ಎಲ್ಲ ಕಾರ್ಯಕಾರಣವನ್ನು ತನ್ನೊಳಗೆ ಅಡಗಿಸಿಕೊಂಡಿರುವ ಕೇವಲ ಚೈತನ್ಯ- ಸುಷುಪ್ತ್ಯಾವಸ್ಥೆಯ ಪ್ರತಿನಿಧಿ) ಶರೀರಗಳಿದ್ದೂ ಈ ದೇಹತ್ರಯದಿಂದಲೂ ಅತೀತ. ಬ್ರಹ್ಮವು ಸಗುಣ ಅಭಿಧಾನಕ್ಕೊಪ್ಪುವ ಸಮಷ್ಟಿ ಜೀವಾತ್ಮವಾಗಿ ಈಶ್ವರನೂ ಹೌದು.

ಬ್ರಹ್ಮವು ಭೂತ-ವರ್ತಮಾನ-ಭವಿಷ್ಯವೆಂಬುದಾಗಿ ಇಲ್ಲವೇ ಪ್ರಾತಃ-ಮಧ್ಯಾಹ್ನ-ಸಾಯಂ/ರಾತ್ರ ಎಂಬ ಕಾಲಗಳಿಗೆ ಮೀರಿದ್ದು ಕೂಡಾ. ಕಾಲವೆಂಬುದು ಬ್ರಹ್ಮಕ್ಕೆ ಸಾಪೇಕ್ಷ ಸಂಗತಿ. ಇದೆಯೆಂಬುದು ಎಷ್ಟು ಸತ್ಯವೋ ಬ್ರಹ್ಮದ ಕೊಂಡಿಯಿಲ್ಲದಿದ್ದರೆ ಅದು ಇಲ್ಲವೆಂಬುದು ಸತ್ಯ. ಬ್ರಹ್ಮ-ವಿಷ್ಣು-ಈಶ್ವರವೆಂಬ ಸಗುಣರೂಪಕವಾದ ಶಕ್ತಿಗಳೆಲ್ಲವೂ (ಇಚ್ಛಾ-ಜ್ಞಾನ-ಕ್ರಿಯಾ ಅಥವಾ ಸೃಷ್ಟಿ-ಸ್ಥಿತಿ-ಲಯ) ಇಂದ್ರಾದಿ ದಿಕ್ಪಾಲಕ ರೂಪಗಳು ಅದರೊಳಗೇ ಅಡಗಿದೆ. ಅ-ಉ-ಮ ಎಂಬುದರ ಅಂತಃಸಂಯೋಜನೆಯೊಳಡಗಿದ ಓಂಕಾರ ಪ್ರಣವನಾದಸ್ವರೂಪವೇ ಆಗಿದೆ. ಎಲ್ಲವೂ ಒಂದೇ ಶಕ್ತಿ/ವಸ್ತುವಿನ ವಿವಿಧ ರೂಪಗಳು. ಹಾಗೆಂದೇ ನಿತ್ಯ ಓಡುವ ಅನಿತ್ಯವಾದ ಕಾಲದಲ್ಲಿ ಕಾಣಬೇಕಾದದ್ದು ಏನು? ಧ್ಯಾನಿಸಬೇಕಾದದ್ದು ಏನು? ಕ್ಷಣಿಕವಾದ ಸುಖಗಳನ್ನೇ? ಅಥವಾ ಅಕ್ಷಯವಾದ ಸತ್ಯವನ್ನೇ? ಯೋಗಿಗಳು ಧ್ಯಾನಿಸುವುದು ಇದೇ ಬ್ರಹ್ಮವನ್ನೇ ! ಬ್ರಹ್ಮ ಭೂರ್ಭುವಸ್ಸುವರೋಮ್.

ಜೀವಜಗತ್ತಿನ ಮೂಲಾಧಾರಶಕ್ತಿಯೇ ಬ್ರಹ್ಮದಲ್ಲಿದೆ. ಅದೇ ಭೂತತ್ತ್ವದ ಕೇಂದ್ರವೂ. ದೇಹವನ್ನಾಧರಿಸಿ ನಿಂತಿರುವ ಆತ್ಮಶಕ್ತಿಯೂ ಮೂಲಾಧಾರವಾದ ಬ್ರಹ್ಮವೇ ಆಗಿದೆ. ಅಂತೆಯೇ ಷಟ್ಚಕ್ರನಿರೂಪಣೆಯಲ್ಲಿರುವ ಒಂದೊಂದು ಚಕ್ರಗಳ ಅಧಿದೇವತೆಗಳ ಪೈಕಿ ಇಷ್ಟದೈವ ಗಜವದನನು ಅಧಿಷ್ಠಿತನಾಗಿರುವುದು ಮೂಲಾಧಾರದಲ್ಲಿಯೇ ಎನ್ನುತ್ತದೆ ಗ್ರಂಥಗಳು. ಈ ಚಕ್ರದ ವರ್ಣ ಕೆಂಪು. ಹಾಗೆಂದೇ ಆತ ರಕ್ತ ವರ್ಣದವನು, ಸಿಂಧೂರಪ್ರಿಯನು.

 

ಗಣಾದಿಂ ಪೂರ್ವಮುಚ್ಚಾರ್ಯ…

ಲೇಖಿಕೆಯ ಅಭಿಮತದಂತೆ ಸ್ತುತಿಯ ನಂತರದಲ್ಲಿ ಬರುವ ಈ ಭಾಗವು ಕೊಂಡಿಯಾಗಿ ಸೇರಿಸಲ್ಪಟ್ಟಿರುವಂಥದ್ದು. ಇದಕ್ಕಿಂತ ಮೊದಲಿನ ಭಾಗದ ಸ್ತುತಿಯಾದರೋ ಇಡಿಯ ವೇದವಾಙ್ಮಯದ ತಿರುಳೆಂಬಂಥ ತತ್ತ್ವಭಾಗ. ಅದರ ನಂತರದ ಈ ಭಾಗದಲ್ಲಿ ಆಧಿದೈವಾತ್ಮಕವಾದ ಸಗುಣಪರಬ್ರಹ್ಮದ ವಿವೇಚನೆಯೇ ಸ್ತುತಿಯ ರೂಪದಲ್ಲಿದೆ. ಅಧ್ಯಾತ್ಮ/ತತ್ತ್ವಾನುಷ್ಠಾನ ಆಧಿದೈವಾತ್ಮಕ, ಆದಿಭೂತಾತ್ಮಕವಾಗಿಯೇ ನೆರವೇರಬೇಕಷ್ಟೇ !

ಧ್ಯಾನವಿಧಿಯ ಆರಂಭಕ್ಕೆ ಯಾರು ಗಣಗಳಿಗೆಲ್ಲ ಅಧಿಪತಿಯೋ ಅಂಥವನ ಹೆಸರಿನ ಗಂ ಅಕ್ಷರ-ಛಂದಸ್ಸು ಜಿಜ್ಞಾಸೆ, ಅದು ಒಳಗೊಂಡ ಸ್ವರೂಪ, ದೇವತೆ, ವಿನಿಯೋಗ, ಅದನ್ನು ಸಾಕ್ಷಾತ್ಕರಿಸಿ ಲೋಕಕ್ಕೆ ಹೇಳಿದ ಮುನಿಯ ವಿಚಾರದ ಭಾಗವಿದು. ಆ ಋಷಿಯ ಹಾದಿಯಲ್ಲಿ ಮುನ್ನಡೆಯಬೇಕೆಂಬ ಆಶಯದಲ್ಲಿ ಗಣಕ‌ಋಷಿಯನ್ನು ಸ್ಮರಿಸಿ ಧ್ಯಾನವಿಧಿಯನ್ನು ಕೈಗೊಳ್ಳಲಾಗುತ್ತದೆ. ಪೂರ್ವಸೂರಿಗಳಾದ ಮಹಾತ್ಮರನ್ನು ನೆನೆದೇ ಎಲ್ಲಾ ವಿಧಿಗಳೂ ಆರಂಭಗೊಳ್ಳುವುದು ನಾವು ಸಲ್ಲಿಸುವ ಕೃತಜ್ಞತೆಯ ದ್ಯೋತಕವೂ ಆಗಿದೆ.

ಗಂ ಆದರೋ ಓಂ ಕಾರದ ಅಕ್ಷರಜಿಜ್ಞಾಸೆಯಂತೆಯೇ ನಾದಾನುಸಂಧಾನಕ್ಕೆ ಹೇತುವಾಗಿರುವಂಥ ಬೀಜಾಕ್ಷರ. ಗಣಪತಿಯ ಆವಾಹನೆ, ಧ್ಯಾನ, ಪೂಜಾ, ಹವನಗಳಲ್ಲಿ ಇದೇ ಬೀಜಾಕ್ಷರದೊಂದಿಗೆ ಮೊದಲ್ಗೊಳ್ಳುತ್ತದೆ.

 

ಏಕದಂತಾಯ ವಿದ್ಮಹೇ…

ಗಣಪತಿಯೆಂಬ ಪರಬ್ರಹ್ಮಸ್ವರೂಪನ ವರ್ಣನಾತ್ಮಕವಾದ ಧ್ಯಾನವು ಉಪಾಸಕರಿಗೆ ಪ್ರಾರ್ಥನಾರೂಪವಾದ, ಸಿದ್ಧಿದಾಯಕವಾದ ಅಕ್ಷರಶಕ್ತಿ. ಇದು ಗಣಪತಿಗಾಯತ್ರೀ ಎಂಬುದರಿಂದ ಸಾಕಾರಗೊಳ್ಳುತ್ತದೆಯೆನ್ನುವುದು ಸಾಧಕರ ನುಡಿ. (ಈ ಮಂತ್ರಕ್ಕೆ ನಿಕಟವಾದ ವೇದಮಂತ್ರ ತೈತ್ತಿರೀಯ ಅರಣ್ಯಕದಲ್ಲಿದೆ. ಏಕದಂತಾಯದ ಬದಲಿಗೆ ತತ್ಪುರುಷಾಯ ಪದಪ್ರಯೋಗವಿದೆ.) ಈ ಗಣೇಶಗಾಯತ್ರೀಯ ಕ್ರಮವತ್ತಾದ ನಿರ್ದಿಷ್ಟ ಸಂಖ್ಯೆಯ ಉಪಾಸನೆಯಿಂದ ಹಲವು ಸಿದ್ಧಿಗಳನ್ನು ಪಡೆಯುವ ವಿಚಾರವನ್ನೂ ತಂತ್ರಭಾಗಗಳಲ್ಲಿ ಕಾಣಬಹುದು. ನಮ್ಮ ಎಲ್ಲಾ ಆಚರಣೆಗಳು ತರ್ಕಪಾದಕ್ಕಿಂತ ಮಿಗಿಲಾಗಿ ಬಹ್ವಂಶ ಕ್ರಿಯಾಪಾದವೇ (ಆಚರಣೆಯ ಮೂಲಕ ತಾಪತ್ರಯ ನಿವಾರಣೆ) ಆಗಿರುವುದನ್ನು ಗಮನಿಸಿಕೊಂಡರೆ ತತ್ತ್ವವಾಗಿರಲಿ, ತಂತ್ರವಾಗಿರಲಿ- ಪ್ರತಿಯೊಂದರಲ್ಲಿಯೂ ಉದ್ಬೋಧಕವಾದ ಸಂಗತಿಗಳೇ ಪ್ರಕಾಶವಾಗುತ್ತದೆ.

 

ಏತದಥರ್ವಶೀರ್ಷಂಯೋಧೀತೇ…

ಮಾನವನ ಸ್ವಭಾವಸಹಜ ಗುಣವೇ ಪ್ರಯೋಜನವನ್ನು ಹುಡುಕುವುದು. ಇಷ್ಟಾರ್ಥ ಸಿದ್ಧಿಯ ಕಾಮನೆ ಒಬ್ಬೊಬ್ಬನಿಗೂ ಒಂದೊಂದು. ಅದು ಜನ್ಮದಿಂದ ಮರಣದವರೆಗೂ ಹರಿಯುವ ನಿತ್ಯಪ್ರವಾಹ. ಅದರ ಸುಗಮ ಹರಿವಿಗೆಂದೇ ಎಲ್ಲರದ್ದೂ ಪ್ರಾರ್ಥನೆ. ಇಂಥ ಇಷ್ಟಾರ್ಥವಾದರೋ ಲೌಕಿಕದಿಂದ ಅಲೌಕಿಕದವರೆಗೂ ವಿಸ್ತರಿಸಲ್ಪಡುತ್ತಲೇ ಇರುತ್ತವೆ. ಹಾಗೆಂದೇ ವೇದದ ನಂತರದ ಕಾಲದಲ್ಲಿ ಬಂದವೆಂದೂ, ವೇದದ ಸರಳರೂಪವೆಂದೇ ಖ್ಯಾತವಾದ ಪುರಾಣಾದಿಗಳು ಫಲಶ್ರುತಿಯ ಭಾಗವನ್ನು ಹೆಚ್ಚುಹೆಚ್ಚಾಗಿ ನಿರ್ದಿಷ್ಟಪಡಿಸುತ್ತವೆ. ಭಯ-ಭಕ್ತಿಯ ಮೂಲಕವಾದರೂ ಸ್ವಭಾವತಃ ಕ್ರೂರಿಯೂ, ಒರಟನೂ ಆದ ಮಾನವನ ಹೃದಯ-ಭಾವನೆ-ಕರ್ತವ್ಯ-ಕರ್ಮಗಳು ಉಳಿದವರ ಕ್ಷೇಮಕ್ಕೂ ಹೆದ್ದಾರಿಯಾಗಿರಲಿ, ಸ್ವಹಿತವು ಲೋಕಕ್ಷೇಮಕ್ಕೂ ನಾಂದಿಯಾಗಲಿ ಎನ್ನುವುದು ಇದರ ಮರ್ಮ. ಇದನ್ನು ವೇದಾಂತಮುಖವಾಗಿ ಕಂಡುಕೊಂಡರೆ; ಯಾವುದೇ ಜೀವಿಯ ಯಾವುದೇ ಆಚರಣೆ, ಅನುಷ್ಠಾನಗಳ ಹಿಂದೆಯೂ ಕಾದಿರುವ, ಜನ್ಮ ಜನ್ಮಾಂತರಗಳಿಗೂ ವಿಸ್ತರಿಸುವ ಪ್ರತ್ಯಕ್ಷ ಮತ್ತು ಪರೋಕ್ಷವಾದ ಕರ್ಮಫಲಗಳ ನೆಲೆಯನ್ನು ಗುರುತಿಸಬಹುದು. ಹೀಗೆ ನಾವು ಯಾವುದನ್ನು ಮಾಡುತ್ತೇವೆಯೋ ಅದಕ್ಕೆ ದೊರಕುವ ಪ್ರತಿಫಲವನ್ನು ಹೇಳುವ ಭಾಗಗಳು ಮಂತ್ರಗಳ ಅಂತ್ಯಕ್ಕೂ ದೊರೆಯುತ್ತವೆ. ಅಂತೆಯೇ ಈ ಗಣಪತ್ಯಥರ್ವಶೀರ್ಷವನ್ನು ನಿತ್ಯವೂ ತ್ರಿಕಾಲಗಳಲ್ಲಿ ಧ್ಯಾನಿಸುವವರಿಗೆ ದೊರಕುವ ಫಲಶ್ರುತಿಯ ಭಾಗವನ್ನು ಅಂತ್ಯದಲ್ಲಿ ಉಲ್ಲೇಖಿಸಲಾಗಿದೆ.

ಧರ್ಮಪಾಲನೆಯ ರೀತಿಯನ್ನು ಉಪದೇಶದಂತೆ ಹೇಳಿದರೆ ಅದು ಸಮಾಜದಲ್ಲಿ ಸುಲಭವಾಗಿ ಜಾರಿಯಾಗಲಾರದಷ್ಟೇ. ಹಾಗೆಂದೇ ಮಂತ್ರದ ಮೂಲಕವಾಗಿ ವಿದ್ಯೆಯ ಸದಾಚಾರ ಹೇಗಾಗಬೇಕು, ದುರಾಚಾರವೆಸಗಿದರೆ ಏನಾಗುತ್ತದೆ, ಎಷ್ಟು ಶ್ರದ್ಧೆಯಿಂದ ಹೇಗೆ ಮಾಡಬೇಕು ಎಂಬುದನ್ನು ಕಠಿಣವಾಗಿಯೇ ಬೋಧಿಸುವುದಾಗುತ್ತದೆ. ಆಗಲೇ ಇದು ರವಷ್ಟೂ ತಪ್ಪದೆ ನಡೆಯುವ ಪ್ರಭುಸಮ್ಮಿತೆಯೆಂಬ ಹಾದಿಯಲ್ಲಿ ನಿಷ್ಠ, ನಿರ್ದಿಷ್ಟ, ಕಠಿಣ ನಿಯಮವಾಗಿ ಕ್ಷೇಮವನ್ನು ಪಾಲಿಸುತ್ತದೆ. ಅಂತೆಯೇ ಮಂತ್ರದ ಮೂಲಕ ಹವನ-ಪೂಜಾದಿಗಳೆಂಬ ತಂತ್ರಭಾಗಕ್ಕೂ ಒಂದು ಸಾಧನಾಮಾರ್ಗ ಉಪಾಸಕರಿಗೆ ದೊರಕುತ್ತದೆ. ತತ್ಫಲವಾಗಿ ದೊರಕುವ ಸೌಖ್ಯದ ಬಾಳ್ವೆಯನ್ನು ಲೋಕವೂ, ಪ್ರಕೃತಿಯೂ ಇದನ್ನು ಆನಂದಿಸುತ್ತದೆ.

ಬದುಕಿನ ಸಾರ್ಥಕತೆಯಿರುವುದೇ ಚತುರ್ವಿಧಪುರುಷಾರ್ಥಗಳನ್ನು ಪರಿಣಾಮಕಾರಿಯಾಗಿ ದುಡಿಸಿಕೊಳ್ಳುವುದರಲ್ಲಿ. ಅದು ಸುಲಭದ ವಿಚಾರವಲ್ಲವಷ್ಟೇ. ಅದರಲ್ಲೂ ಎಲ್ಲರೂ ಬಯಸುವ ಮೋಕ್ಷಕ್ಕೆ ಹಾದಿಯಿರುವುದೇ ಈ ಅರ್ಥ, ಕಾಮಗಳಲ್ಲಿ. ಅದು ಧರ್ಮವನ್ನಾಶ್ರಯಿಸಿ ದುಡಿದರೆ ಈ ಸಂಪತ್ತಿ ಸಾಧ್ಯ. ಪಾಪ-ಪುಣ್ಯಗಳೂ ಇವುಗಳ ಉತ್ತಮ- ಅಧಮ ಅನುಸಂಧಾನದಿಂದಲೇ ದೊರಕುತ್ತವೆ. ಅಂಥಹುದರ ಸಿದ್ಧಿ ಈ ಅಥರ್ವಶೀರ್ಷದ ನಿತ್ಯಜಿಜ್ಞಾಸೆಯಿಂದ ಏರ್ಪಡುತ್ತದೆ ಎನ್ನುವುದೇ ಫಲಶ್ರುತಿಭಾಗದ ಪ್ರಧಾನಗರ್ಭ. ಅರ್ಥವಂತಿಕೆಯ ಬದುಕು, ಧರ್ಮಾಚರಣೆಯನ್ನು ಉದ್ದೀಪಿಸುವುದೇ ಸನಾತನಧರ್ಮದ, ವೇದಗಳ ಆಶಯ, ಆಚರಣೆ, ಅನುಗ್ರಹ. ವ್ಯಷ್ಟಿ ಸಮಷ್ಟಿಗೆ ಹೇತುವಾಗುವ ದರ್ಶನವಿದು.

 

——-

 (ಆರ್ಷವಿದ್ಯೆಯ ಬೆಳಕು ತೋರಿ ಮುನ್ನಡೆಸುತ್ತಾ ಬಂದಿರುವ ಶತಾವಧಾನಿ ಡಾ. ರಾ. ಗಣೇಶ್ ಮತ್ತು ಮಂತ್ರಪಾಠಗೈದ ಗುರು ವೇದವಿಚಕ್ಷಣರಾದ ಶ್ರೀ ವೆಂಕಟೇಶ ಶಾಸ್ತ್ರಿಗಳಿಗೆ ಲೇಖಿಕೆ ಋಣಿಯಾಗಿದ್ದಾರೆ.)

Leave a Reply

*

code