ಅಂಕಣಗಳು

Subscribe


 

ಯಕ್ಷಲೋಕದ ಸುತ್ತಲೆಲ್ಲಾ ಗಟ್ಟಿ ‘ಗೋಡೆ’ಗಳ ಭದ್ರತೆ!

Posted On: Tuesday, February 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ರಾಕೇಶ್ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ

ದು ಯಾವುದೇ ರಂಗ ಇರಬಹುದು ; ಅಲ್ಲಿ ಎರಡು ರೀತಿಯ ವ್ಯಕ್ತಿತ್ವವನ್ನು ನಾವು ಗಮನಿಸಬಹುದು. ಮೊದಲನೆಯದಾಗಿ ರಂಗದಲ್ಲಿ ಇರುವಾಗ ಮಾತ್ರ ಜೀವಂತವಾಗಿರುವವರು. ಎರಡನೆಯವರು ರಂಗದಿಂದ ನಿವೃತ್ತರಾಗಿಯೂ, ಇಹಲೋಕ ತ್ಯಜಿಸಿಯೂ ಜನಮಾನಸದಲ್ಲಿ ಸಜೀವವಾಗಿರುವವರು. ಆದರೆ ಇಂಥವರು ಕಾಣಸಿಕ್ಕುವುದು ಯಾವತ್ತೂ ಕಡಿಮೆಯೇ!. ಈ ಕಡಿಮೆ ವ್ಯಕ್ತಿಗಳ ಸಾಲಿಗೆ ನಮ್ಮ ಕುರಿಯ ವಿಠಲ ಶಾಸ್ತ್ರಿ, ಶೇಣಿ ಗೋಪಾಲಕೃಷ್ಣ ಭಟ್, ಕೆರೆಮನೆ ಶಿವರಾಮ ಹೆಗಡೆ ಮೊದಲಾದ ಮಹಾ ಮಹಿಮರು ಸೇರಿಕೊಳ್ಳುತ್ತಾರೆ. ಹಾಗೆಯೇ ಈ ಪಟ್ಟಿಗೆ ಸೇರಲೇಬೇಕಾದ ಇನ್ನೊಂದು ಹೆಸರು ಭಾಗವತ ಗುಂಡ್ಮಿ ಕಾಳಿಂಗ ನಾವಡ.

ಕಾಳಿಂಗ ನಾವಡರನ್ನು ನೆನೆದಷ್ಟೂ ಕೊನೆಯಾಗುವುದಿಲ್ಲ. ನಮಗೆಲ್ಲಾ ಗೊತ್ತಿರುವಂತೆ ಸ್ವರ್ಗಸ್ಥರಾದ ನಂತರವೂ ಅಭಿಮಾನಿಗಳನ್ನು ಹುಟ್ಟುಹಾಕಿಕೊಳ್ಳುತ್ತಿರುವ, ಪ್ರಾಯಶಃ ಏಕೈಕ ಭಾಗವತ ಅವರು. ಅದಕ್ಕೇ ಇರಬೇಕು ದಕ್ಷಿಣ ಕನ್ನಡದ ಉಜಿರೆಯಲ್ಲಿ, ಕಾಳಿಂಗ ನಾವಡರು ಗತಿಸಿ ಇಪ್ಪತ್ತು ವರ್ಷಗಳಾದ ಹಿನ್ನಲೆಯಲ್ಲಿ ನಾವಡ ವಿಂಶತಿ ಸಂಸ್ಮರಣಾ ಸಮಿತಿಯೊಂದು ಅಸ್ತಿತ್ವಕ್ಕೆ ಬಂದಿದೆ. ಆ ಸಮಿತಿಯ ವತಿಯಿಂದ ಅದೇ ಉಜಿರೆಯಲ್ಲಿ ಬಡಗು ತಿಟ್ಟಿನ ಯಕ್ಷಗಾನ ವೈಭವ ಸಾಕ್ಷಾತ್ಕಾರಗೊಂಡಿದೆ. ಸರಣಿಯ ಆರಂಭದಲ್ಲಿ ಚಿಟ್ಟಾಣಿ ರಾಮಚಂದ್ರ ಹಗಡೆ ಹಾಗೂ ಗೋಡೆ ನಾರಾಯಣ ಹೆಗಡೆ ಆಕರ್ಷಣೆಯ ಕೀಚಕ ವಧೆ ಹಾಗೂ ಗದಾಯುದ್ಧ ಪ್ರಸಂಗಗಳು ಸಂಪನ್ನಗೊಂಡವು.

ಚಿಟ್ಟಾಣಿ, ಗೋಡೆಯವರೆಲ್ಲಾ ಇನ್ನೂ ಕುಣಿಯುತ್ತಿರುವುದು ನಮ್ಮ ಅದೃಷ್ಟವೇ. ಆದರೆ ಅವರಿಗೆಲ್ಲಾ ವಯಸ್ಸಾಯಿತೆನ್ನುವುದು ನಮ್ಮ ದುರದೃಷ್ಟ!

ಈ ನಡುವೆ ನನಗೆ ತಮಾಷೆಯೆನಿಸಿದ್ದು, ಅಚ್ಚರಿಯೆನಿಸಿದ್ದು ಈ ಮೇಲಿನ ಯಾವ ವಿಷಯಗಳೂ ಅಲ್ಲ. ಉಜಿರೆಯಲ್ಲಿ ನಡೆದ ಆ ಯಕ್ಷಗಾನಗಳಲ್ಲಿ ಚಿಟ್ಟಾಣಿಯವರು ಕೀಚಕ ವಧೆಯ ಕೀಚಕನಾಗಿ ಕಾಣಿಸಿಕೊಂಡರು. ನಂತರದ ಗದಾಯುದ್ಧದ ಕೌರವನಾಗಿ ರಂಗಪ್ರವೇಶಿಸಿದವರು ಗೋಡೆ ನಾರಾಯಣ ಹೆಗಡೆ. ಹಾಂ, ಇದೂ ತಮಾಷೆಯ ಸಂಗತಿಯಲ್ಲ!, ವಿಷಯ ಮುಂದಿದೆ.

ಈ ಚಿಟ್ಟಾಣಿಯವರಾಗಲೀ, ಗೋಡೆಯವರಾಗಲೀ ಸುಮಾರು ೬೦-೬೫ರವರೆಗೂ ಸುಸ್ತೇ ಕಾಣದೆ ಕುಣಿದಂತಹವರು. ಒಂದೇ ಪದ್ಯದ ಒಂದೊಂದು ಸಾಲನ್ನೂ ಭಾಗವತರಿಂದ ಮತ್ತೆ ಮತ್ತೆ ಹಾಡಿಸಿ ಕುಣಿಯುತ್ತಿದ್ದವರು. ಅವರನ್ನು ಆ ವಯಸ್ಸಿನಲ್ಲಿ ರಂಗದ ಮೇಲೆ ನೋಡಿದವರಿಗೆ ಈ ವಿಷಯಗಳು ಗೊತ್ತಿವೆ. ಒಂದೊಮ್ಮೆ ಭಾಗವತರೇ ಮುಂದಿನ ಸಾಲನ್ನು ಹಾಡಲು ಹೊರಟರೂ ಇವರುಗಳು ಹಿಂದಿನ ಸಾಲನ್ನೇ ಪುನ ಪುನಃ ಎತ್ತಿಕೊಡುತ್ತಿದ್ದುದೂ ಉಂಟು. ಹಾಗಾಗಿ ಹಿಂದಿನ ಭಾಗವತರುಗಳಿಗೂ ಅದು ಅಭ್ಯಾಸವಾಗಿಬಿಟ್ಟಿದೆ. ಆದರೆ ಈಗ ಗೋಡೆ ನಾರಾಯಣ ಹೆಗಡೆಯಂತಹವರು ಕುಣಿಯುವುದೇ ಅಪರೂಪ. ಹೀಗಾಗಿ ಈಗಿನ ಭಾಗವತರುಗಳಿಗೆ ಹಿಂದಿನ ಕಲಾವಿದರುಗಳಿಗೆ ಹೇಗೆ ಹಾಡಬೇಕೆಂಬುದೇ ಗೊತ್ತಿರುವುದಿಲ್ಲ. ಅರ್ಥಾತ್ ಒಂದು ಹಾಡನ್ನು ಎಷ್ಟು ಬಾರಿ ಪುನರುಚ್ಚರಿಸಬೇಕು. ಅವರು ಎಷ್ಟು ವಿಧದಲ್ಲಿ ಕುಣಿಯುತ್ತಾರೆ ಇತ್ಯಾದಿಗಳು ತಿಳಿದಿರುವುದಿಲ್ಲ. ತಿಳಿಯುವುದಕ್ಕೆ ಸಾಧ್ಯವೂ ಇಲ್ಲ.


ಮೊನ್ನೆ ಉಜಿರೆಯಲ್ಲಿ ಆದದ್ದೂ ಇದುವೇ. ಹೊಸ ತಲೆಮಾರಿನ ಭಾಗವತರೊಬ್ಬರು ಗದಾಯುದ್ಧಕ್ಕೆ ಭಾಗವತಿಕೆ ಮಾಡುತ್ತಿದ್ದರು. ಈಗಾಗಲೇ ಹೇಳಿರುವಂತೆ ಗೋಡೆಯವರ ಕೌರವ. ಗದಾಯುದ್ಧದಲ್ಲಿ ಆರಂಭದ ಕುರುರಾಯ ಇದನೆಲ್ಲ ಕಂಡು… ಎಂಬ ಹಾಡಿನಿಂದ ತೊಡಗಿ ಆದೊಡೆಲೆ ಸಂಜಯನೆ ನೀ ಕೇಳು…, ಮಂತಾದ ಹಾಡುಗಳಲ್ಲದೆ ನಿನ್ನಯ ಬಲುಹೇನು?,ನೋಡಿರಿ ಧರ್ಮಜ…, ಕಪಟ ನಾಟಕ ರಂಗ… ಮೊದಲಾದ – ಭಾವನೆಗಳಿಗೆ, ಅಭಿನಯಗಳಿಗೆ ವಿಶಾಲಾವಕಾಶ ಇರುವಂತಹ ಹಾಡುಗಳಿವೆ. ಅಂತಹ ಹಾಡಿನ ಸಂದರ್ಭದಲ್ಲಿ ಭಾಗವತರು ಪ್ರತಿ ಸಾಲನ್ನೂ ಒಂದೆರಡು ಬಾರಿ, ಕೆಲವೊಮ್ಮೆ ಮೂರು, ನಾಲ್ಕು ಬಾರಿ ಹಾಡಿ ನಂತರ ಮುಂದಿನ ಸಾಲಿಗೆ ಹೊರಟು ಬಾಯಿ ತೆರೆಯುವಷ್ಟರಲ್ಲಿ ಗೋಡೆಯವರು ಪುನಃ ಅದೇ ಸಾಲನ್ನು ಎತ್ತಿ ಕೊಟ್ಟು ಭಾಗವತರಿಗೆ ಅಚ್ಚರಿ ಉಂಟುಮಾಡುತ್ತಿದ್ದರು. ನೋಡಿರಿ ಧರ್ಮಜ ಫಲುಗುಣಾದಿಗಳು ಅನ್ನುವ ಸಾಲನ್ನು ಮೂರ‍್ನಾಲ್ಕು ಬಾರಿ ಹಾಡಿ ನಂತರ ರೂಢಿಯೊಳನಿಲಜ ಅಂತ ಮುಂದುವರೆಸಹೊರಟರೆ ಗೋಡೆಯವರು ಪುನಃ ನೋಡಿರಿ ಧರ್ಮಜ ಅಂತ ಎತ್ತಿ ಕೊಡುತ್ತಿದ್ದ ರೀತಿ ವಿಶೇಷತೆಗೆ ಸಾಕ್ಷಿಯಾಗಿತ್ತು.

ಹಾಂ, ಗೋಡೆಯವರ ಬಗೆಗೆ ಹೇಳುತ್ತಾ ಹೊರಟರೆ; ಅವರ ಬ್ರಹ್ಮ ಕಪಾಲದ ಬ್ರಹ್ಮ, ಉತ್ತರನ ಪೌರುಷದ ಉತ್ತರ, ರಾಮ ನಿರ್ಯಾಣದ ಲಕ್ಷ್ಮಣ, ಗದಾಯುದ್ಧದ ಕೌರವ ಹಾಗೂ ಭೀಮ, ಭಸ್ಮಾಸುರ ಮೋಹಿನಿಯ ಈಶ್ವರ, ಕಾರ್ತವೀರ್ಯಾರ್ಜುನದ ರಾವಣ ಮೊದಲಾದ ಪಾತ್ರಗಳು ಈಗಲೂ ಹಿರಿಯ ಕಲಾರಸಿಕರ ನೆನಪಿನ ರಂಗಸ್ಥಳದಲ್ಲಿ ಅಚ್ಚಾಗಿ ನಿಂತಿವೆ. ಅಂದ ಹಾಗೆ ಗದಾಯುದ್ಧದ ಸಂಜಯನ ಪಾತ್ರವೂ ಆರಂಭಿಕ ದಿನಗಳಲ್ಲಿ ಅವರಿಗೆ ವಿಶೇಷ ಹೆಸರು ತಂದುಕೊಟ್ಟಿತ್ತು!


ಬಿಡಿ, ಯಕ್ಷಲೋಕವನ್ನು ಪ್ರವೇಶಿಸಿ ಸುತ್ತ ನೋಡಿದರೆ ಇಂತಹ ಅನೇಕಾನೇಕ ಗಟ್ಟಿ ಗೋಡೆಗಳು ಕಾಣಿಸುತ್ತಲೇ ಇರುತ್ತವೆ ಮತ್ತು ಇಂತಹ ಗೋಡೆಗಳೇ ಯಕ್ಷರಂಗಕ್ಕೊಂದು ಕಳೆ ತರುವುದು !

Leave a Reply

*

code