ಅಂಕಣಗಳು

Subscribe


 

ಹಸ್ತಾಂಗುಲೀಯಕ ಮುದ್ರೆಗಳ ವಿಶೇಷತೆ : ಮರೆಯಾದ ಇತಿಹಾಸದ ಪುಟಗಳಿಂದ…

Posted On: Friday, June 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ಪ್ರೊ.ಎಸ್ ರತ್ನಮ್ಮ-ನಿವೃತ್ತ ಕನ್ನಡ ಉಪನ್ಯಾಸಕರು-ಬೆಂಗಳೂರು

ಸಾಮಾನ್ಯವಾಗಿ ಬಾಯಿಯಿಂದ ಮಾತನಾಡುವ ಮೂಲಕ ನಾವು ನಮ್ಮ ಅಭಿಪ್ರಾಯಗಳನ್ನು, ಅಂತರ್ಗತ ಭಾವಗಳನ್ನು ಇನ್ನೊಬ್ಬರಿಗೆ ತಿಳಿಸುತ್ತೇವೆ. ಆದರೆ ಕೇವಲ ಮಾತಿನಿಂದ ಮಾತ್ರವಲ್ಲದೆ ಬೇರೆ ಬೇರೆ ಬಗೆಯ ಸಂಜ್ಞೆ, ಧ್ವನಿವೈವಿಧ್ಯದ ಮೂಲಕವೂ ನಮ್ಮ ಮನಸ್ಸಿನ ಭಾವನೆಗಳನ್ನು ತಿಳಿಯಪಡಿಸಬಹುದು. ಅಂತಹ ಹಲವಾರು ವಿಧಾನಗಳಲ್ಲಿ ಮುದ್ರೆಗಳ ಮೂಲಕ ಭಾವಾಭಿವ್ಯಕ್ತ ಮಾಡಿಸುವ ವಿಧಾನವೂ ಒಂದು ಮುಖ್ಯ ಸಾಧನಾ ಮಾರ್ಗವೆನಿಸಿದೆ. ಉದಾಹರಣೆಗೆ : ಬಹಳ ಹಿಂದಿನಿಂದಲೂ ಮೂಗರ, ಹುಟ್ಟು ಕಿವುಡರ ವಿದ್ಯಾಭ್ಯಾಸಕ್ಕಾಗಿ ಸಂಜ್ಞಾಭಾಷೆ ಬಳಕೆಯಲ್ಲಿದೆ. ಅಷ್ಟೇ ಏಕೆ; ಮೈಸೂರಿನಲ್ಲಿರುವ ಕಿವುಡ-ಮೂಗರ ಶಾಲೆಯೊಂದು ನೃತ್ಯನಾಟಕಗಳನ್ನು ರಚಿಸಿ ಶಾಲೆಯ ನಿರ್ದೇಶಕ ಡಾ. ಎನ್. ನಟೇಶ್ ಅವರ ಮಾರ್ಗದರ್ಶನದಲ್ಲಿ ರಂಗಪ್ರದರ್ಶನಗಳನ್ನು ನೀಡಿದ್ದಾರೆ.

ಯುದ್ಧಭೂಮಿಯ ಕಾರ್ಯನಿರ್ವಹಣೆಗಾಗಿ ಪ್ರಾಚೀನ ಆರ್ಯಸೇನಾನಾಯಕರು ರಚಿಸಿದ್ದೇ ಈ ಸಂಜ್ಞಾಭಾಷೆ. ಭಯಂಕರ ಘರ್ಜನೆ, ಆಯುಧಸಂಘಟ್ಟನೆಗಳ ಶಬ್ದಘೋಷದಲ್ಲಿ ಪಕ್ಕದಲ್ಲಿದ್ದವರ ಮಾತು ಸಹ ಕೇಳಿಸಂತಾದಾಗ ಈ ಸಂಜ್ಞಾಭಾಷೆಯಲ್ಲಿ ತಮ್ಮ ಅಭಿಪ್ರಾಯ, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದುದನ್ನು ಇತಿಹಾಸದಿಂದ ಗಮನಿಸಬಹುದು. ಇದಕ್ಕೊಂದು ದೃಷ್ಟಾಂತವನ್ನು ಮಹಾಭಾರತದಿಂದ ಉಲ್ಲೇಖಿಸುವುದಿದ್ದರೆ ಮಹಾಭಾರತ ಯುದ್ಧಸಮಯದಲ್ಲಿ ಪ್ರತೀದಿವಸ ಸೂರ್ಯೋದಯಕ್ಕೆ ಮುಂಚೆ ಕೌರವವೀರರು ನಾಯಕನ ಅಪ್ಪಣೆಯಂತೆ ವ್ಯೂಹ ರಚಿಸುತ್ತಿದ್ದರು. ಆ ಹೊತ್ತಿಗೆ ಸರಿಯಾಗಿ ಯಾದವ, ಗೊಲ್ಲಸಾರಥಿ ತನ್ನ ಕುದುರೆಗಳ ಮೈತೊಳೆದು ಮಾಲೀಶು ಮಾಡುತ್ತಾ ಅವುಗಳಿಗೆ ಹುರುಳಿ ಕಡಲೆ ಕಾಯಿಬೆಲ್ಲಗಳನ್ನು ತಿನ್ನಿಸಿ ರಥಕ್ಕೆ ಕಟ್ಟುತ್ತಿದ್ದನು. ಅದೇ ಸಮಯಕ್ಕೆ ಪಾಂಡವಪಕ್ಷದ ಸೇನಾನಾಯಕ ಧೃಷ್ಟದ್ಯುಮ್ನ ತನ್ನ ಸೈನ್ಯವನ್ನು ರೇಖೆಯಿಂದಾಚೆಗೆ ನಿಲ್ಲಿಸಿ ನೆಲ ಪರೀಕ್ಷಿಸುವಂತೆ ರಂಗಕ್ಕೆ ಬಂದು ದೂರದಿಂದಲೇ ಶ್ರೀಕೃಷ್ಣನನ್ನು ನೋಡುತ್ತಿದ್ದನು. ಆಗ ಕೃಷ್ಣ ಹಸ್ತಮುದ್ರೆಗಳಿಂದ ಪ್ರತಿವ್ಯೂಹವನ್ನು ತೋರಿಸುತ್ತಿದ್ದನು. ಇದರಿಂದಾಗಿ ಧೃಷ್ಟದ್ಯುಮ್ನನು ಪ್ರತಿವ್ಯೂಹವನ್ನು ರಚಿಸಿ ಸೈನ್ಯವನ್ನು ಮುನ್ನಡೆಸುತ್ತಿದ್ದನು. ಅಷ್ಟೇ ಅಲ್ಲ, ಜರಾಸಂಧವಧೆಯಲ್ಲಿ ದರ್ಭೆ ಸೀಳಿ ತಲಕೆಳಗಾಗಿ ಬಿಸುಟದ್ದು; ಗಧಾಯುದ್ಧ ಸಂದರ್ಭದಲ್ಲಿ ಎಡತೊಡೆತಟ್ಟಿ ಸನ್ನೆ ಮಾಡಿದ್ದು ಮುಂತಾದ ಘಟನೆಗಳಿವೆ. ಬಹುಷಃ ಸಾಂದೀಪನಿಗುರುಗಳಿಂದ ಇಂತಹ ಕಲೆಯನ್ನು ಕಲಿತಿರಬಹುದು. ಆದ್ದರಿಂದಲೇ ಕೃಷ್ಣನನ್ನು ನಿಸ್ಸಂದೇಹವಾಗಿ ಮುದ್ರಾಪ್ರವೀಣನೆಂದೇ ಕರೆಯಬಹುದು.

ನಂತರದ ದಿನಗಳಲ್ಲಿ ಭರತ ಮುಂತಾದ ಶಾಸ್ತ್ರಕರ್ತರು ಈ ಸಂಜ್ಞಾಭಾಷೆಯನ್ನು ಭಾವಪ್ರದರ್ಶನಕ್ಕಾಗಿ ಅಳವಡಿಸಿದರು. ಶಾಸ್ತ್ರಕರ್ತರು ಅಸಂಯುತ, ಸಂಯುತ ಹಸ್ತಗಳೆಂಬಿತ್ಯಾದಿ ವರ್ಗೀಕರಣಗಳನ್ನೂ ಮಾಡಿದರು. ಹಾಗೆಯೇ ಕೈಗಳ ಬೆರಳುಗಳು ಸಾಲದೆನಿಸಿದಾಗ ಸಂಯೋಜನಾತ್ಮಕವಾಗಿಯೂ ಮುದ್ರೆಗಳನ್ನು ಬಳಸಿದರು. ಉದಾಹರಣೆಗೆ ದುರ್ಗಾದೇವಿಯನ್ನು ಪ್ರದರ್ಶನದಲ್ಲಿ ತೋರಿಸಬೇಕಾದರೆ ಪ್ರಧಾನ ಪಾತ್ರಧಾರಿಯ ಹಿಂದೆ ನರ್ತಕರನ್ನು ಪ್ರೇಕ್ಷಕರಿಗೆ ಕಾಣದಂತೆ ನಿಲ್ಲಿಸಿ ಅವರ ಕೈಗಳನ್ನು ಆಯುಧಗಳೆಂಬಂತೆ ಇಕ್ಕೆಲಗಳಲ್ಲಿ ಹೊಂದಿಸಿ ತೋರಿಸುತ್ತಾರೆ.

ಮೂಡಬಿದಿರೆ ಸಾವಿರಕಂಬದ ಬಸದಿಯ ಹೆಬ್ಬಾಗಿಲ ಮೇಲೆ ಪಂಚನಾರೀ ತುರಂಗ ಮತ್ತು ನವನಾರೀತುರಂಗಗಳೆಂಬ ದಾರುಶಿಲ್ಪಗಳಿವೆ. ಕೋಲಾಟವಾಡುವ ಐದು ಹುಡುಗಿಯರು ಬಂಧ ರಚಿಸಿ ಕುದುರೆಯಂತೆ ನಿಂತಿದ್ದರೆ; ಮತ್ತೊಂದರಲ್ಲಿ ಒಂಭತ್ತು ಹುಡುಗಿಯರು ಸೇರಿ ಆನೆಯಂತೆ ನಿಂತಿದ್ದಾರೆ. ಅವರಲ್ಲಿ ಒಬ್ಬಳ ಮಾರುದ್ದದ ಜಡೆ ಬಾಲವಾಗಿದೆ. ಇನ್ನೊಬ್ಬಳ ಎರಡು ಕೈಗಳ ಆಟದ ಕೋಲುಗಳು ಆನೆಯ ದಂತವಾಗಿವೆ. ಬಹಳ ಮನೋಜ್ಞಗಿರುವ ಈ ಮುಕ್ತಾಯ ಭಂಗಿಗಳು ಕರಣಗಳಲ್ಲ; ಬದಲಾಗಿ ಸಂಸಯುಕ್ತಮುದ್ರೆಗಳ ಪ್ರದರ್ಶನ !

ಡಿ.ವಿ.ಜಿ ಅವರು ಹೇಳಿದಂತೆ ಕಾಣುವ ಕವಿಯ ಕಣ್ಣಿಗೆ ಅನಂತಾರ್ಥಗಳು ಗೋಚರಿಸುತ್ತವೆ. ಅಂತೆಯೇ ಮುದ್ರೆಗಳು ಕೂಡಾ. ಅವು ಸೂಚಿಸುವ ಅರ್ಥಗಳು ಅಪಾರ-ಅನಂತ. ಹಸ್ತಮುದ್ರೆಗಳಿಂದ ಬಹುದೀರ್ಘವಾದ ಉಪಾಖ್ಯಾನಗಳನ್ನು ಸಹ ಪ್ರದರ್ಶಿಸಬಹುದು. ಹಳೆಯ ಮುದ್ರೆಗಳಿಗೆ ಹೊಸ ಅರ್ಥಗಳನ್ನು ಊಹಿಸಬಹುದು.

( ಲೇಖಕರು ನಿವೃತ್ತ ಕನ್ನಡ ಪ್ರೊಫೆಸರ್, ಜೈನ ವಿಚಾರಗಳಲ್ಲಿ ಸಂಶೋಧಕರು, ಬೆಂಗಳೂರು ನಿವಾಸಿ)

Leave a Reply

*

code