ಅಂಕಣಗಳು

Subscribe


 

ರಂಗಭೂಮಿಯ ಬದಲಾದ ಕಾಲಘಟ್ಟದಲ್ಲಿ ಹಾಸ್ಯ ರಸ

Posted On: Saturday, June 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ವೈಕಾರ್ಯವೇ ಹಾಸ್ಯದ ಜೀವಧಾತು. ಸಬ್ಬವಕಾರನಿಗಿರುವ ರಂಗಸ್ವಾತಂತ್ರ್ಯ ಬೇರಾವ ವಿಭಾಗದ ನಟನಿಗೂ ಇರುವ ಸಾಧ್ಯತೆ ಇಲ್ಲ. ಅತಿಕರಣ, ಅನೌಚಿತ್ಯ, ಅಸಹಜತೆಯಂತಹ ಅಸಂಬದ್ಧತೆಗಳಿಂದ ಲೋಕಸಾಮರ್ಥ್ಯವನ್ನು ಪುನಃಸೃಷ್ಟಿ ಮಾಡಿದರಷ್ಟೇ ಪ್ರೇಕ್ಷಕನಲ್ಲಿ ಕಚಗುಳಿಯ ಹಿತಾನುಭವ ಉಂಟುಮಾಡಲು ಸುಲಭ ಹಾಗೂ ಸಾಧ್ಯ. ಹಾಸ್ಯಕಾರನಿಗೆ ಮಾತ್ರ ಕಾಲ-ದೇಶ- ಪಾತ್ರವನ್ನು ಮೀರಿ ಅಥವಾ ಅತಿಕ್ರಮಿಸಿ ಆಂಗಿಕ-ವಾಚಿಕಾದಿಗಳನ್ನು ಬಳಸುವ ಸ್ವಾತಂತ್ರ್ಯವಿರುವುದರಿಂದ ಅತ್ಯಭಿನಯವನ್ನೋ ವಾಚಾಟತನವನ್ನೋ ಹಾಸ್ಯವೆಂದೇ ಪ್ರೇಕ್ಷಕ ಸ್ವೀಕರಿಸಿ ರಸಾಭಾಸವನ್ನೂ ಮರೆಯುತ್ತಾನೆ ಅಥವಾ ಮನ್ನಿಸುತ್ತಾನೆ. ನಿರ್ಮಯಾರ್ದವಾದ ಈ ಅವಕಾಶ ಹಾಸ್ಯದ ಮಿತಿಯೂ ಆಗುವುದರಿಂದ ಹಾಸ್ಯ/ಹಾಸ್ಯಕಾರ ಪ್ರಧಾನ ಭೂಮಿಕೆಗೆ ಬರುವ ಸಂಭವ ವಿರಳ. ಅಲ್ಲದೇ ಹಾಸ್ಯೋತ್ಸರ್ಜನಕ್ಕೆ ಮೈ ಮತ್ತು ದನಿಯ ವಕ್ರತಾಸಾಮರ್ಥ್ಯವೂ ಅತ್ಯಗತ್ಯ. ಅದು ಎಲ್ಲರಿಗೂ ದಕ್ಕುವಂಥದಲ್ಲ. ಹೀಗಾಗಿ ಬೆರಳೆಣಿಕೆಯ ಹಾಸ್ಯನಟರು ಹಾಗೇ ಉಳಿಯುವುದು ಅನಿವಾರ್ಯ.

ಸಮಯಪ್ರಜ್ಞೆಗಿಂತಲೂ ಪ್ರತ್ಯುತ್ಪನ್ನಮತಿತ್ವ ವಿದೂಷಕ ನಟನಿಗೆ ಇರಲೇಬೇಕಾದದ್ದು. ಇದು ಬರುವುದು ಲೋಕಾವಲೋಕನ ವಿಚಕ್ಷಣತೆಯಿಂದ. ಕಂಡ ತಕ್ಷಣ ಗ್ರಹಿಸುವ, ಗ್ರಹಿಸಿ ಆತ್ಮಸಾತ್ ಮಾಡಿಕೊಳ್ಳುವ ಜಾಣ್ಮೆ ಚುರುಕುತನ ಇದ್ದರಷ್ಟೇ ಹಾಸ್ಯವನ್ನು ಹುಟ್ಟಿಸಬಹುದು; ಉಕ್ಕಿಸಬಹುದು. ಸಾಮಾನ್ಯ ಪ್ರೇಕ್ಷಕನ ಮನಸ್ಸು ಮುಟ್ಟುವುದು ಮೊತ್ತಮೊದಲಿಗೆ ಹಾಸ್ಯವನ್ನೇ ಆದ್ದರಿಂದ, ನಟ ಯಶಸ್ಸಿಗೆ ಇನ್ನಿಲ್ಲದಂತೆ ಹೆಣಗಬೇಕಾಗುತ್ತದೆ. ಸನ್ನಿವೇಶದ ಮೂಲಕ, ಮಾತಿನ ಮೂಲಕ, ಅಭಿನಯದ ಮೂಲಕ ಹಾಸ್ಯವನ್ನು ಪರಿನಿರ್ಮಿಸಬಹುದಾಗುತ್ತದೆ. ಆದರೆ ಮೇಲೆ ಹೇಳಿದಂತೆ, ಪ್ರೇಕ್ಷಕನ ಅಭಿಜ್ಞಾನವನ್ನು ಅಳಿಸಿ ಹೊಸದೆಂಬಂತೆ ಭ್ರಾಂತಿ ಹುಟ್ಟಿಸಿ ಹಾಸ್ಯದ ಹಳಿಯಲ್ಲಿ ಕರೆದೊಯ್ಯುವುದು ಅಸುಲಭಸಾಧ್ಯ. ಹಾಗಾಗಿ ಹಾಸ್ಯವೇ ಪ್ರಧಾನರಸವೆಂದು ಘೋಷಿಸುವುದೂ ಸಾಹಸ ಆದೀತು.

ಹಾಸ ಸ್ಥಾಯೀಭಾವವಾಗಿ ಉಳ್ಳ ಹಾಸ್ಯರಸ ಬಹುತೇಕ ಪರಾಧೀನವೃತ್ತಿ ಇರುವಂತಹದ್ದಾಗಿರುವುದರಿಂದ ಮೊದಲಿನಿಂದಲೂ ನಮ್ಮಲ್ಲಿ ಶೃಂಗಾರರಸದ ಸಹಚರನಾಗಿ ಹಾಸ್ಯರಸವನ್ನು ಬಳಸಲಾಗುತ್ತಿದೆ. ರಾಜರಸ ಎಂಬ ಅಗ್ಗಳಿಕೆಯ ಶೃಂಗಾರ, ಉಳಿದೆಲ್ಲಾ ರಸಗಳನ್ನು ತನ್ನಲ್ಲಿ ಅಡಕಿಸಿಕೊಳ್ಳಬಲ್ಲುದು. ವೀರ-ಕರುಣಾದಿ ರಸಗಳನ್ನು ಶೃಂಗಾರದ ಪಾತಳಿಯಲ್ಲಿ ಹೊಮ್ಮಿಸಲು ಸಾಧ್ಯ. ಅಂದರೆ ಅದರ ತಾಳಿಕೆಯ ಮಿತಿ ಹೆಚ್ಚು. ಅದೇ ಹಾಸ್ಯ, ತನ್ನದಲ್ಲದ ರಸವನ್ನು ಸ್ವಯಂಪುಷ್ಟಿಯಿಂದ ಪೂರ್ಣಶಃ ಅಭಿವ್ಯಕ್ತಿಸಲಾರದು. ಅಲ್ಲದೇ ನಾಟ್ಯರಂಗವು ಲೋಕಾನುಕೀರ್ತನದ ಪ್ರದರ್ಶನಾಂಗಣವಾದ್ದರಿಂದ, ಲೋಕಸಹಜ ವ್ಯಾಪಾರವೇ ಅಲ್ಲಿ ಪಡಿಮೂಡುತ್ತದೆ. ಸಹೃದಯ ಪ್ರೇಕ್ಷಕನಲ್ಲಿ ನಿರಂತರ ಭಾವನಿಮಗ್ನತೆಯನ್ನು ಉಂಟುಮಾಡುವಷ್ಟು ದಾರ್ಢ್ಯ ಹಾಸ್ಯದಲ್ಲಿ ಇಲ್ಲದಿರುವುದರಿಂದ ಹಾಗೂ ತತ್ಕಾಲೀನ ಸ್ಫೋಟವೇ ಅದರ ಜೀವಾಳವಾಗಿರುವುದರಿಂದ ಅದು ಸಹಚರಿಯಾಗಿ ಅನಿವಾರ್ಯತೆ ಉಳಿಸಿಕೊಂಡಿದೆ.

ಹಾಸ್ಯ-ನಗೆ-ಮನುಷ್ಯನ ನೈಸರ್ಗಿಕ ಪ್ರವೃತ್ತಿ. ಆದರೆ ಧ್ವನಿ ಹಾಗೂ ಅಂಗವಿಕಾರಗಳೇ ಮೂಲದ್ರವ್ಯವಾದ ಹಾಸ್ಯಾಭಿನಯಕ್ಕೆ ಸ್ತ್ರೀಯ-ತತ್ರಾಪಿ ಭಾರತೀಯ ಸ್ತ್ರೀಯ ವ್ಯಕ್ತಿತ್ವದ ಶೀಲಶಿಲ್ಪವೇ ತೊಡಕು. ಹಾಸ್ಯರಸ ನಿರ್ಮಾಣದಲ್ಲಿ ಅಂಗದ ವಿಕಾರವಿನ್ಯಾಸಗಳು ಅಶ್ಲೀಲವಾಗುವ ಅಪಾಯವಿದೆ. ಇನ್ನು ಸ್ತ್ರೀಯ ಧ್ವನಿಯ ಸಹಜಕೋಮಲತೆ ಎಷ್ಟೇ ಹರಸಾಹಸ ಮಾಡಿದರೂ ನಾನಾತ್ವವನ್ನು ಪಡೆಯಲು ಎರಡು ಹೆಜ್ಜೆ ಹಿಂದುಳಿಯುತ್ತದೆ. ಆದ್ದರಿಂದಲೇ ಜನಪದ ಮತ್ತು ವೃತ್ತಿ ರಂಗಭೂಮಿಗಳಲ್ಲಿ ಸ್ತ್ರೀ ವಿದೂಷಕರು ವಿರಳಾತಿ ವಿರಳ. ಆದರೆ ಹಾಸ್ಯಕ್ಕೂ ಸ್ತ್ರೀಯರಿಗೂ ಮೂಲತಃ ನಂಟಿಲ್ಲವೆಂಬ ಮಾತಲ್ಲಿ ಹುರುಳಿಲ್ಲ. ಹಾಸ್ಯವಲ್ಲದ ವಿನೋದ ಭೂಮಿಕೆಯಲ್ಲಿ ಸ್ತ್ರೀಯರಿಗೆ ಅವಕಾಶ ವಿಫುಲ. ಅದನ್ನೇ ನೈಪುಣ್ಯದಿಂದ ನಿರ್ವಹಿಸಿದಲ್ಲಿ ಹಾಸ್ಯಕ್ಕೆ ಸರಿಮಿಗಿಲಾಗಿ ನಾಟ್ಯವನ್ನು ನಿಭಾಯಿಸಬಹುದು. ಆ ನಿಟ್ಟಿನಲ್ಲಿ ನಾಟಕಕಾರ, ನಿರ್ದೇಶಕರು ಪ್ರವರ್ತಿಸಿದರೆ ಒಳ್ಳೆಯದು.

ಹಾಸ್ಯದಲ್ಲಿ ತಲ್ಲೀನತೆ ಎಂಬುದೇ ಇಲ್ಲ. ಅತ್ಯಂತ ಸ್ಥಿತಿಸ್ಥಾಪಕಗುಣವೂ ಅದಕ್ಕಿದೆ. ಆದ್ದರಿಂದ ಕಾರ್ಯಕಾರಣಸಂಬಂಧದ ನಿಖರತೆಯಾಗಲೀ ತಾರ್ಕಿಕಬದ್ಧತೆಯಾಗಲೀ ಹಾಸ್ಯಕ್ಕೆ ಇರುವುದಿಲ್ಲ. ಈ ವಿಶೃಂಖಲತೆಯೇ ವಿಡಂಬನೆಯು ವಿಜೃಂಭಿಸಲು ಆಸ್ಪದವನ್ನು ಮಾಡಿಕೊಡುತ್ತದೆ. ಆದರೆ ವಿಡಂಬನ ಹಾಸ್ಯದ ಪ್ರಧಾನ ಕಲ್ಪವಲ್ಲ. ಆದರೆ ಸಾಧಾರಣೀಕರಣಕ್ಕೆ ಮೊದಲ ಮಣೆ ಹಾಕುವ ನಟ ವಿಡಂಬನೆಯತ್ತ ವಾಲಬಹುದು. ವಿಡಂಬನೆ ವಾಚಿಕದಲ್ಲಾಗಲೀ ಆಂಗಿಕದಲ್ಲಾಗಲೀ ತನ್ನ ಚುಚ್ಚುವ ಗುಣಶೀಲತೆಯನ್ನು ಇನ್ನಿನ್ನೂ ಹರಿತಗೊಳಿಸಿಕೊಳ್ಳತೊಡಗಿದಾಗ, ಪ್ರೇಕ್ಷಕನ ಅಂತರಂಗದ ಪ್ರತಿಕೂಲಾತ್ಮಕವಾದ ಅಹಂಕಾರ ಸ್ವಯಂ ಬಿಡುಗಡೆಯ ಖುಷಿಯನ್ನು ಅನುಭವಿಸುತ್ತದೆ. ತನ್ನ ಲೋಕಾನುಭವದ ಹದದೊಂದಿಗೆ ನಟನ ಅಭಿನಯವನ್ನು ಪ್ರೇಕ್ಷಕ ಸಮೀಕರಿಸುತ್ತಾ ಹೋಗುವುದರಿಂದ ವಿಡಂಬನದಂತಹ ರಸಭಾವವಿದೂರತೆ ಯಾವ ಭಾರವನ್ನೂ ಅವನಲ್ಲಿ ಹೊರಿಸದೆ ನಿರಾಳವಾಗಿಸುವ ಕಾರಣ, ವಿಡಂಬನ ಪ್ರೇಕ್ಷಕಕರ್ಷಣಕ್ಕೆ ಉದಾರವಾಗಿ ಒದಗಿಬರುತ್ತದೆ. ವಿನೋದಕ್ಕಿಂತಲೂ ವಿಡಂಬನೆಯು ಬಲು ಬೇಗ ಒಳಬಗೆಯನ್ನು ಎಡತಾಕುವುದರಿಂದ ಹಾಗೂ ಲೋಕಾಚಾರದ ಅಂಕುಡೊಂಕುಗಳಿಗೆ ಮೈಯಾಗುವುದರಿಂದ ವಿಡಂಬನೆ ಹಾಸ್ಯದ ಮುಖಲೇಪವಾಗಿ ಕಾಣಿಸಿಕೊಂಡಿದೆ. ಸಮಾಜದ ವಾಸ್ತವಿಕತೆ ಚಿತ್ರಿಸುವಲ್ಲಿ ಇಂತಹ ಹಾಸ್ಯದೃಶ್ಯಗಳೇ ರಂಗಭೂಮಿಯ ವಾತಾವರಣವನ್ನು ಪೋಷಿಸುತ್ತಾ ; ಹಾಸ್ಯನಟರು ಸದಾ ಸಮಯಸ್ಫೂರ್ತಿ ಉಳ್ಳವರಾಗಿ, ನಾಟಕದ ವಸ್ತು ಯಾವುದೇ ಇದ್ದರೂ ಸಮಕಾಲೀನತೆಗೆ ಸ್ಪಂದಿಸುತ್ತಾ ಬಂದಿದ್ದಾರೆ.

ಪ್ರಯೋಗಶೀಲತೆಗೆ ಆತುಕೊಂಡು ಜೋತುಬಿದ್ದ ಪ್ರಜ್ಞಾಪ್ರಘಾತಕ್ಕೆ ರಂಗಭೂಮಿಯಲ್ಲಿ ಹಾಸ್ಯ ಮಾತ್ರವಲ್ಲ- ಅಗದೀ ಭಾವವೇ- ಬತ್ತಿ ಬರಡಾಗಿದೆ. ಕಾಳಿದಾಸನ ಮಾತು- ಹಳತಾದರೂ ಈಗಲು ಪ್ರಸ್ತುತ; ಅನ್ವೇಯ. ನಾಟ್ಯಂ ಭಿನ್ನರುಚೇಃಜನಸ್ಯ– ಭಿನ್ನ ವಿಭಿನ್ನ ಅಭಿರುಚಿಯ ಪ್ರೇಕ್ಷಕರಿಗೆ ಅನ್ನುವ ಹೇಳಿಕೆ ಗಮನಾರ್ಹ. ಭಿನ್ನರುಚಿತ್ವವೆಂಬುದು ನಮ್ಮ ಪೂರ್ವಗ್ರಹದಿಂದ ಕತ್ತರಿಸಿ ಕೆಡಹುವಂಥದಲ್ಲ. ರುಚಿವೈವಿಧ್ಯವನ್ನು ಬುಡಮಟ್ಟ ಅಳಿಸಿ ಅಭಾರತೀಯ ತತ್ತ್ವಪ್ರಣಾಳಿಯನ್ನು ಕಾಷ್ಠಗಾಂಭೀರ್ಯದಲ್ಲಿ ಕಕ್ಕಿದರೆ, ಶುದ್ಧ ಭಾರತೀಯ ಸಂವೇದನೆಯ ರಸ-ಭಾವದ ಸೆಲೆ ಎಲ್ಲಿ ತೋರಿತು? ಭಾವವನ್ನು ರಸದ ಸ್ತರದಲ್ಲಿ ಆನಂದವಾಗಿ ಅನುಭವಿಸುವ ಅವಧಾನಪರತೆ ಪ್ರೇಕ್ಷಕರಲ್ಲಿ ಕಡಿಮೆ ಆಗುತ್ತಿರುವುದು ; ಕ್ಷಿಪ್ರಪರಿಣಾಮವನ್ನಷ್ಟೇ ನೆಚ್ಚುವುದು; ದೈನಂದಿನ ಜಾಡ್ಯ-ದಂದುಗ ( )ಗಳಿಂದ ಬಿಡುಗಡೆ ಬೇಕೆಂಬ ತುರ್ತಿಗೆ ಆತುಕೊಳ್ಳುವುದು ಪ್ರೇಕ್ಷಕರ ಸಹಜಲಕ್ಷಣವಾಗಿ ಮಾರ್ಪಡುತ್ತಿರುವುದರಿಂದ ಏನಕೇನ ಮಾರ್ಗದಿಂದ ಹಾಸ್ಯದ ವ್ಯಾಪ್ತಿವಿಸ್ತಾರವನ್ನು ಉಲ್ಲಂಘಿಸಿ ಜನರ ಸದ್ಯದ ಖುಷಿಯ ಮೇಲೇ ಕಣ್ಬಿಟ್ಟು ಹಾಸ್ಯಾಂಶದ ಪಾಲನ್ನು ಪೇರಿಸುವ ಪರಿಪಾಠ ಮೊದಲಿಟ್ಟಿತು. ತನ್ನ ದುಗುಡ ಕಲ್ಲವಿಲಗಳಿಗೆ ಒಂದು ಹೊರಕಿಂಡಿ ಸಿಗುತ್ತದೆ ಎಂಬ ಧಾರಾಳತನದಲ್ಲಿ ಪ್ರೇಕ್ಷಕರೂ ಹಾಸ್ಯವನ್ನು ರಸದ ಹೊರಗಿಟ್ಟೇ ಚಪ್ಪರಿಸುತ್ತಿದ್ದರು. ಜೊತೆಗೆ ಅಭಿನಯ ಮಾತು ಸೂಕ್ಷ್ಮವಾಗಿರಬೇಕೆಂಬ ಅಪೂರ್ವಸಿದ್ಧಾಂತವು ಮೈಕ್ರೋಸ್ಕೋಪಿ ಹಂತ ತಲುಪಿ ಏನೇನೂ ಅಭಿನಯ ಮಾಡದಿರುವ ಮಟ್ಟ ಮುಟ್ಟಿದ್ದರಿಂದ, ಹವ್ಯಾಸಿ ರಂಗಾವರಣದಲ್ಲಿ ಉಳಿದ ರಸಗಳಂತೆ ಹಾಸ್ಯವೂ ಕಸಬರಿಕೆಯ ಕೊಲೆಗೇಡಿತನಕ್ಕೆ ಕೊರಳೊಡ್ಡಿತು. ಚರ್ಚೆ-ಚಿಂತನೆ-ಪ್ರಯೋಗ-ಪ್ರಶಂಸೆಗಳೆಲ್ಲ ಕೇವಲ ಬೌದ್ಧಿಕ ಅಸ್ಮಿತೆಯ ತುರಾಯಿಯಾಗಿ ಅಂತಹ ವಲಯದವರಿಂದಲೇ ನಾಟಕದ ನಿರ್ಮಾಣ ಅಂತಾದ್ದರಿಂದ ಹಾಸ್ಯವೂ ಬಳಲಿದ್ದು ಸತ್ಯ.

ನವ್ಯ ನವ್ಯೋತ್ತರ ನಾಟಕಯಾನದಲ್ಲಿ ಚಿತ್ತವಿಶ್ರಾಂತಿ (ನಾಟ್ಯಶಾಸ್ತ್ರೀಯವಾದ ಆನಂದ)ಗಿಂತಲೂ ಬೌದ್ಧಿಕರತಿ ಪ್ರತಿಷ್ಠೆ ಎನಿಸಿದ್ದರಿಂದಾಗಿ ಎಪ್ಪತ್ತರ ದಶಕದ ನಂತರ ಮೊನಚಾದ ಮಾತು, ವ್ಯಂಗ್ಯ, ಕಟಕಿಗಳು ಹೆಚ್ಚಾಯಿತು. ರಸಾನುಭೂತಿ ಎಂಬ ಸಾಮಾನ್ಯಧರ್ಮವನ್ನೇ ಅಲ್ಲಗಳೆದು, ಕಲೆ ಖುಷಿಗಾಗಿ ಅಲ್ಲ ಬೌದ್ಧಿಕವಿಕಾಸಕ್ಕೆ ಎಂಬ ವಿಚಿತ್ರವೂ ವಿಕಾರವೂ ಆದ ಧೋರಣೆ ಪ್ರತಿಪಾದಿಸಿದ್ದರಿಂದ, ಹಾಸ್ಯವಷ್ಟೇ ಅಲ್ಲ- ಅಗದೀ ಭಾವಶೀಲತೆಯೇ ಬರಡೆಮ್ಮೆಯಾಗಿ ಹೋಯಿತು. ಭಾವವಿವಶತೆ ಒಂದು ದೌರ್ಬಲ್ಯ ಎನ್ನುವ ಪ್ರತಿಪಾದನೆ ಕಲಾರಂಗವನ್ನೂ ಪ್ರೇಕ್ಷಕನನ್ನೂ ಒಣಗಿಸಿತು. ಅದೊಂದು ಹವಾಕ್ಕೆ ಬೀಸುಬಿದ್ದ ಹವ್ಯಾಸಿತಂಡಗಳು, ಇಂತಹ ಹುಸಿಪ್ರತಿಷ್ಠೆಯ ಪೈಪೋಟಿಗೆ ಬಲಿಬಿದ್ದುದರಿಂದ, ಅದರ ಬೀಸುಗತ್ತಿಗೆ ಉರುಳಿದ ಕೊರಳು ಹಾಸ್ಯದ್ದು. ಆದರೆ ಶಾಲಾಕಾಲೇಜುಗಳ ಆವರಣದಲ್ಲಿ ಬುದ್ಧಿಜೀವಿಕೆಯ ಹೇರಾಟ ಹೊಗುತ್ತಿರಲಿಲ್ಲ, ಹೊಕ್ಕರೂ ಸಲ್ಲುತ್ತಿರಲಿಲ್ಲ. ಅಲ್ಲಿಯ ವಿದ್ಯಾರ್ಥಿದೆಶೆಯ ವಯಃಸಹಜವಾದ ಕೀಟಲೆಕಿಡಿಗೇಡಿತನ-ಅಣಕು-ಕೆಣಕುಗಳಿಗೆ ಮೊದಲ ಗುಕ್ಕಾಗಿ ಸಿಗುತ್ತಿದ್ದುದು ಹಾಸ್ಯನಾಟಕಗಳೇ ! ಅಪ್ರಬುದ್ಧತೆಯೇ ಹಾಸ್ಯನಾಟಕದ ಆಯ್ಕೆಯ ಲಕ್ಷಣ ಅಂತ ಅರಿವುಳ್ಳವರು ವ್ಯವಸ್ಥಿತವಾಗಿ ಚರ್ಚೋತ್ಸವದಲ್ಲಿ ತೊಡಗಿದ್ದರಿಂದ ಹಾಸ್ಯವೂ ಸೇರಿದಂತೆ ಭಾವಜಲ ಬತ್ತಿಹೋಯಿತು.

ಗಂಭೀರನಾಟಕಸಮಸ್ಯೆಯ ಚಿತ್ರಣಕ್ರಾಂತಿಸಂದೇಶ– ಇಂತಹ ಬುದ್ಧಿನಿಷ್ಠವಾದ ನಿಲವಿನ ಅತಿರೇಕ, ಕಲೆಯ ಇತರ ಕ್ಷೇತ್ರಕ್ಕಿಂತಲೂ ನಿಜರಂಗವಾದ ನಾಟಕಭೂಮಿಯನ್ನು ಗಾರುಗೆಡಿಸಿದೆ. ಈ ರೀತಿಯ ಸಮಾಜರಿಪೇರಿಗೆ ನಾಟಕದ ಸುತ್ತಿಗೆ ಹಿಡಿದು ಹೊರಟಿದ್ದರಿಂದಲೇ ಭಾವಶಾದ್ವಲ(ಹುಲ್ಲುಗಾವಲು) ಆಗಬೇಕಾಗಿದ್ದ ರಂಗಭೂಮಿ ಶುಷ್ಕಮರುಭೂಮಿಯಂತಾಗಿ ಹೋಯಿತು. ಈ ಸಂದರ್ಭದಲ್ಲಿ ನ ಹಿ ರಸಾದೃತೇ ಕಶ್ಚಿದರ್ಥಃ ಪ್ರವರ್ತತೇ ( ರಸವಿಲ್ಲದೆ ಬೇರಾವ ಪ್ರಯೋಜನವೂ ಇಲ್ಲ) ಎಂಬ ಭಾರತೀಯ ಕಲಾದೃಷ್ಟಿ ಇಂದಿಗೂ ಚರ್ಚನೀಯ ಎನಿಸುತ್ತದೆ. ಉಳಿದೆಲ್ಲ ರಸಕ್ಕಿಂತ ಹಾಸ್ಯ ತನ್ನ ಕುಚೇಷ್ಟೆ-ಕುಚೋದ್ಯಗಳಿಂದ ಪ್ರೇಕ್ಷಕನ ಒಳಮನಸ್ಸಲ್ಲಿ ಸುಳಿದಾಡಿ ಪುಟಿದೆಬ್ಬಿಸುವುದರಿಂದ, ಹಾಸ್ಯನಾಟಕಗಳ ಅಬ್ಬರದೆದುರು ಉಳಿದವು ದನಿಯೊಣಗಿಸಿಕೊಳ್ಳುತ್ತವೆ. ಹಾಗೇ ಹಾಸ್ಯವೇ ಇಡೀ ನಾಟಕವನ್ನು ಅಮರಿಕೊಳ್ಳುವುದೂ ಅತಿರೇಕವೇ !

ಹಾಸ್ಯಕ್ಕೆ ಪ್ರಧಾನಸ್ಥಾನ ಲಭಿಸುವ ಸಂಭವನೀಯತೆಗಳಿದ್ದಾವೆಯೇ?- ಅದಕ್ಕೆ ಕಾಲದ ಕುಲುಮೆಯೇ ಉತ್ತರಿಸಬೇಕು. ತಾನೇ ತಾನಾಗಿ ಮುಂಚೂಣಿಗೋ ಹಿಂಚೂಣಿಗೋ ಹೋಗಲು ಹಾಸ್ಯ ವ್ಯಕ್ತಿಯೂ ಅಲ್ಲ;ವ್ಯವಸ್ಥೆಯೂ ಅಲ್ಲ. ಮುಖ್ಯವಾಗಿ ರಂಗಭೂಮಿ, ಪ್ರೇಕ್ಷಕರಿಂದ ದೂರಾಗದಂತೆ, ಮರೆಯಾಗದಂತೆ ಕಣ್ಬಿಟ್ಟು ಕಾಪಿಡಬೇಕಾದ ತುರ್ತಂತೂ ಇದೆ. ಇದೇಹೊತ್ತಿನಲ್ಲಿ ಜನರನ್ನು ರಂಗಭೂಮಿಯತ್ತ ಸೆಳೆಯಲು ಈಗೀಗ ಯಕ್ಷಗಾನದಂತಹ ಶಿಷ್ಟ ಪ್ರಕಾರವೂ ಸೇರಿ ಹಾಸ್ಯ-ಒಂದು ಚಿಮ್ಮುಹಲಗೆ ಆಗಿದೆ. ಹೆಚ್ಚುಕಮ್ಮಿ ೩೬೦ ದಿನವೂ ಪ್ರೇಕ್ಷಕರ ಜನಜಂಗುಳಿಯ ನಡುವೆಯೇ ಮೆರೆಯುವ ಕರಾವಳಿಯ ಯಕ್ಷಗಾನ, ತನ್ನಿಂದ ಪ್ರೇಕ್ಷಕ ಕಳಚಿಕೊಂಡು ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಆತುಕೊಳ್ಳುತ್ತಿದ್ದಾನೆ ಅಂತ ವಾಸನೆ ಬರುತ್ತಿದ್ದ ಹಾಗೆ, ಹಾಸ್ಯವನ್ನು ಮುನ್ನೆಲೆಯಲ್ಲಿ ಏರಿಸಿ ಅಷ್ಟೂ ಪ್ರೇಕ್ಷಕರನ್ನು ಬಾಚಿ ಸೆಳೆದ ಸಂಗತಿ ಕಣ್ಣ ಮುಂದಿದೆ. ಬೆಂಗಳೂರಿನಲ್ಲಿ ಒಂದೋ ಎರಡೋ ರಂಗಸ್ಥಳ ಬಿಟ್ಟರೆ ಉಳಿದೆಡೆ ನಾಟಕಕ್ಕೆ ಲಾರಿಯಲ್ಲಿ ತುಂಬಿಕೊಂಡು ಬಂದರೂ ಬರುವ ಮಂದಿ ಅಷ್ಟಕಷ್ಟೇ ! ರಂಗಭೂಮಿಯ ಜೀವಂತಿಕೆಯ ಸತ್ತ್ವ ಏನು ಎಂಬುದನ್ನು ನೇರಾನೇರ ಸಂವಹಿಸುವ ಸಾಮರ್ಥ್ಯವನ್ನು ತೋರಿಸಬೇಕು. ಫ್ರಿಜ್ಜಿನ ಹಾಲು ಕುಡಿಯುವವರಿಗೆ ಮನೆ ಎದುರು ಹಸು ನಿಲ್ಲಿಸಿ ನೊರೆನೊರೆ ಕರೆದು ಕೈಗಿಟ್ಟು ರುಚಿ ತೋರಿಸಬೇಕು. ಅದಕ್ಕೆ ಶರತ್ತಿಲ್ಲದೇ ಮೊದಲು ಒದಗಿಬರುವ ರಸಭಾವ -ಹಾಸ್ಯದ್ದು. ಅದಕ್ಕೆ ಅದರ ನಮನೀಯತೆಯೇ ಕಾರಣ. ಆ ನಿಟ್ಟಿನಲ್ಲಿ ಶ್ರಮಿಸುವ ರಂಗಜೀವಿಗಳಲ್ಲಿ ಸದ್ಭಾವಸಂಪನ್ನವಾದರೆ ಕ್ರಮೇಣ ಹಾಸ್ಯವೆಂದರೆ ಏನು ಎಂಬ ಶಾಸ್ತ್ರೀಯ ಚರ್ಚೆ ಮಾಡೋಣ…

(ಲೇಖಕವಿದ್ವಾಂಸರು ಕವಿ, ಹೆಸರಾಂತ ವಿಮರ್ಶಕ, ಅವಧಾನ ಪೃಚ್ಛಕ, ನಾಟಕಕಾರರು)

Leave a Reply

*

code