ಅಂಕಣಗಳು

Subscribe


 

ನರ್ತನ ಜಗತ್ತಿಗೊಂದು ಪರಿಭ್ರಮಣ (ಪ್ರಾರಂಭದ ದಿನಗಳಲ್ಲಿ)

Posted On: Monday, January 30th, 2012
1 Star2 Stars3 Stars4 Stars5 Stars (2 votes, average: 3.00 out of 5)
Loading...

Author: ಮನೋರಮಾ. ಬಿ.ಎನ್

ನೂಪುರ ಭ್ರಮರಿಯ ಪ್ರಥಮ ಸಂಚಿಕೆ ಅನಾವರಣಗೊಂಡದ್ದು ಮಡಿಕೇರಿಯಲ್ಲಿ ಶಿವರಾತ್ರಿಯಂದು. ಶಕ್ತಿದೈನಿಕದ ಸಹ ಸಂಪಾದಕ ಶ್ರೀಯುತ ಬಿ. ಜಿ. ಅನಂತಶಯನ, ಆಯುರ್ವೇದ ವೈದ್ಯ, ಸಾಹಿತಿ ನಡಿಬೈಲು ಉದಯಶಂಕರ, ಹಾಗೂ ನೃತ್ಯ ಮಂಟಪದ ಶ್ರೀಮತಿ ರೂಪಾ ಶ್ರೀಕೃಷ್ಣ ಉಪಾಧ್ಯ ಅವರು ಪತ್ರಿಕೆಯನ್ನು ಮೊದಲು ತೆರೆದಿಟ್ಟವರು. ಒಂದು ಶುಭ ಸಂದರ್ಭದಲ್ಲಿ ಶುಭಾಂಸನೆ ಪಡೆದುಕೊಂಡ ನೂಪುರ ಭ್ರಮರಿಯ ಯಾತ್ರೆ ನಿರಂತರವಾಗಿ ನಡೆಯಬೇಕೆಂಬುದು ನಮ್ಮೆಲ್ಲರ ಕನಸು.
ವಾರ್ಷಿಕ ಸಂಭ್ರಮ ನೆರವೇರಿದ್ದು ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ. ಯಕ್ಷಗಾನ ಕಲಾವಿದ ಸರ್ಪಂಗಳ ಈಶ್ವರ ಭಟ್ ಅವರ ಅಧ್ಯಕ್ಷತೆಯಲ್ಲಿ ಖ್ಯಾತ ಸಾಹಿತಿ, ವಿಮರ್ಶಕ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರು ವೆಬ್‌ಸೈಟಿಗೆ ಚಾಲನೆಯನ್ನಿತ್ತರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಭಾಸ್ಕರ ಹೆಗಡೆ ವಾರ್ಷಿಕ ವಿಶೇಷ ಸಂಚಿಕೆಯನ್ನು ಅನಾವರಣಗೊಳಿಸಿದರೆ, ಲೇಖಕಿ ಮನೊರಮಾ ಬಿ.ಎನ್ ಅವರು ಬರೆದ ಇತಿಹಾಸ ಪುಸ್ತಕ ಶ್ರೀ ಓಂಕಾರೇಶ್ವರ ದೇವಾಲಯದ ಇತಿಹಾಸದ ಪರಿಷ್ಕೃತ ಎರಡನೇ ಆವೃತ್ತಿಯನ್ನು ಭಾರತೀಯ ವಿದ್ಯಾಭವನದ ಮಡಿಕೇರಿ ಶಾಖೆಯ ಉಪಾಧ್ಯಕ್ಷ ಕೆ. ಎಸ್. ದೇವಯ್ಯ ಅನಾವರಣಗೊಳಿಸಿದರು.
ದ್ವಿತೀಯ ವಾರ್ಷಿಕ ಸಂಭ್ರಮಕ್ಕೆ ಸಾಕ್ಷಿಯಾದವರು ಮಂಗಳೂರಿನ ಸಹೃದಯರು. ಭರತ ನೃತ್ಯ ಸಭಾ ಮತ್ತು ಸನಾತನ ನಾಟ್ಯಾಲಯ ಇವರ ಸಹಭಾಗಿತ್ವದಲ್ಲಿ ನಡೆದ ಮಂತಪ ಪ್ರಭಾಕರ ಉಪಾಧ್ಯಾಯ ಅವರ ಏಕವ್ಯಕ್ತಿ ಯಕ್ಷಗಾನ ಸರಣಿಯ ಕಾರ್ಯಕ್ರಮ ಉದ್ಘಾಟನೆಯನ್ನು ನೂಪುರ ಭ್ರಮರಿಯ ವರ್ಣಮಯ ವಾರ್ಷಿಕ ವಿಶೆಷ ಸಂಚಿಕೆಯು ಖ್ಯಾತ ಯಕ್ಷಗಾನ ವಿಮರ್ಶಕ, ಕಲಾವಿದ ಡಾ. ಪ್ರಭಾಕರ ಜೋಷಿ ಅವರು ಅನಾವರಣಗೊಳಿಸಿ ಶುಭ ಹಾರೈಸಿದರೆ, ವೇದಿಕೆಯಲ್ಲಿ ಆಸೀನರಾಗಿದ್ದ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರ್ ರಾವ್, ಹಿರಿಯ ಭರತನಾಟ್ಯ ಗುರು ಮುರಳೀಧರ ರಾವ್, ಭರತನೃತ್ಯ ಸಭಾ ಮತ್ತು ಸನಾತನ ನಾಟ್ಯಾಲಯದ ಅಧ್ಯಕ್ಷ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಶೆಟ್ಟಿ, ಗುರು ಶಾರದಾಮಣಿ ಶೇಖರ್ ಪತ್ರಿಕೆಯನ್ನು ಹೃನ್ಮನಪೂರ್ವಕವಾಗಿ ಹಾರೈಸಿ, ಶ್ಲಾಘಿಸಿ, ಅಭಿನಂದಿಸಿದರು.

ಮೂರನೇ ವಾರ್ಷಿಕ ಸಂಭ್ರಮವು ಮಡಿಕೇರಿಯಲ್ಲಿ ಸರಳವಾಗಿ ನೆರವೇರಿತಾದರೂ, ಅದಕ್ಕೆ ಪೂರ್ವಭಾವಿಯಾಗಿ ಮುದ್ರಾರ್ಣವದ ಅನಾವರಣದ ಸಡಗರದ ಕಾರ್ಯಕ್ರಮ ವರುಷದಿಂದ ವರುಷಕ್ಕೇರುತ್ತಿರುವ ಮೆಟ್ಟಿಲಿಗೆ ಸಾಕ್ಷಿ ಹೇಳಿತು.

೪ನೇ ವಾರ್ಷಿಕ ಸಂಭ್ರಮವು ದಿನಾಂಕ ೧೩ ಫೆಬ್ರವರಿ ೨೦೧೧ ರಂದು ನಯನ ಸಭಾಂಗಣ’ , ಕನ್ನಡ ಭವನ, ಜೆ.ಸಿ ರಸ್ತೆ , ಬೆಂಗಳೂರಿನಲ್ಲಿ ನೆರವೇರಿತು. ಪ್ರಧಾನ ಅತಿಥಿಗಳಾಗಿ ಪ್ರಧಾನ್ ಗುರುದತ್, ಅಧ್ಯಕ್ಷರು, ಕರ್ನಾಟಕ ಅನುವಾದ ಅಕಾಡೆಮಿ; ಡಾ. ಶಂಕರ್, ಮನಶಾಸ್ತ್ರಜ್ಞರು ಮತ್ತು ಅಷ್ಟಾವಧಾನಿಗಳು; ಡಾ||ಜಿ.ಬಿ. ಹರೀಶ್, ವಿಮರ್ಶಕರು ಹಾಗೂ ಪ್ರಾಧ್ಯಾಪಕರು, ತುಮಕೂರು ವಿ.ವಿ; ಮುರಳೀಧರ್ ರಾವ್, ಹಿರಿಯ ನಾಟ್ಯಾಚಾರ್ಯ, ಮಂಗಳೂರು; ಹಾಗೂ ಧಾರವಾಢದ ಯಕ್ಷಗಾನ ಸಾಹಿತಿ ಮತ್ತು ಕವಿಗಳಾದ ದಿವಾಕರ ಹೆಗಡೆ ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ಮನೋರಮಾ ಬಿ. ಎನ್ ಅವರ ನೃತ್ಯ ಮಾರ್ಗ ಮುಕುರ – ಭರತನಾಟ್ಯದ ಐತಿಹಾಸಿಕ ಬೆಳವಣಿಗೆ ಮತ್ತು ನೃತ್ಯಬಂಧಗಳ ದಾಖಲೆಯುಳ್ಳ ಅಧ್ಯಯನ ಕೃತಿ ಅನಾವರಣಗೊಂಡಿತು.

ದಿನದಿಂದ ದಿನಕ್ಕೆ ಸಾಂಸ್ಕೃತಿಕ ರಂಗದ ಅದರಲ್ಲೂ ನರ್ತನ ಕ್ಷೇತ್ರದ ವಿಮರ್ಶಾಪರಂಪರೆ ಕುಸಿಯುತ್ತಿರುವಾಗ ವಿಮರ್ಶಕರನ್ನು ಗುರುತಿಸಿ, ಗೌರವಿಸುವ ದೃಷ್ಟಿಯಿಂದಷ್ಟೇ ಅಲ್ಲದೆ, ಈ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವರ್ಷದ ಶ್ರೇಷ್ಠ ನೃತ್ಯ ವಿಮರ್ಶೆ ಪ್ರಶಸ್ತಿಯನ್ನು ಕರ್ನಾಟಕದಲ್ಲೇ ಮೊತ್ತ ಮೊದಲಬಾರಿಗೆ ನೂಪುರ ಭ್ರಮರಿ ಆರಂಭಿಸಿದ್ದು ಈ ಪ್ರಶಸ್ತಿಗೆ ಮೊದಲು ಭಾಜನರಾದವರು. ಶ್ರೀಮತಿ ಪ್ರಿಯಾ ರಾಮನ್.

ಗುರು ಮುರಳೀಧರ ರಾವ್ ಮತ್ತು ದಿವಾಕರಹೆಗಡೆಯವರನ್ನು ಈ ಸಂದರ್ಭ ಅಭಿವಂದಿಸಲಾಯಿತು. ದೂರದರ್ಶನ ಕಲಾವಿದೆ ವಿದುಷಿ ಶ್ರೀಮತಿ ಐಶ್ವರ್ಯಾ ನಿತ್ಯಾನಂದ ಅವರಿಂದ ಡಿ.ವಿ.ಜಿ. ಅಂತಃಪುರ ಗೀತೆಗಳ ಕುರಿತ ಭರತನಾಟ್ಯ ಕಾರ್ಯಕ್ರಮವೂ ಈ ಸಂದರ್ಭ ಜರುಗಿತು. ಈ ಸಂದರ್ಭ ನೂಪುರ ಭ್ರಮರಿಯ ಸಂಪಾದಕಿ ಮನೋರಮಾ ಬಿ.ಎನ್, ಸಾನ್ನಿಧ್ಯ ಪ್ರಕಾಶನದ ಅಧ್ಯಕ್ಷ ಬಿ.ಜಿ.ನಾರಾಯಣ ಭಟ್, ಚೈತ್ರರಶ್ಮಿ ಸಂಪಾದಕ ರಾಮಚಂದ್ರ ಹೆಗಡೆ ಉಪಸ್ಥಿತರಿದ್ದರು.

೫ನೇ ವರ್ಷ ಪೂರ್ಣಗೊಳಿಸಿದ ಸಂಭ್ರಮ ನಿಜಕ್ಕೂ ಸ್ಮರಣೀಯ. ಕರ್ನಾಟಕದಲ್ಲೇ ಮೊತ್ತ ಮೊದಲ ಬಾರಿಗೆ ನೂಪುರ ಭ್ರಮರಿ ಪ್ರತಿಷ್ಠಾನವು ಸಂಘಟಿಸಿದ  ನೃತ್ಯ ಸಂಶೋಧನಾ ವಿಚಾರಸಂಕಿರಣವು ಜಯಭೆರಿಯನೇ ಗಳಿಸಿತ್ತಲ್ಲದೆ ಸಂಶೋಧನಾ ಸಂಗ್ರಹಸೂಚಿ, ಪುಸ್ತಕ-ಪತ್ರಿಕಾ ಸೂಚಿಯನೊಳಗೊಂಡ ಹಲವು ಬಗೆಯ ಲೇಖನ, ವಿಮರ್ಶಾ ಮಾರ್ಗದರ್ಶಿಯ ವಿಶೇಷ ಸಂಕಲನವು ಅನಾವರಣಗೊಂಡಿತು. ನಾಲ್ಕು ಪ್ರಬುದ್ಧ ಸಂಶೋಧನಾ ಪ್ರಬಂಧವಾಚನ, ೩ ವಿಶೇಷ ಉಪನ್ಯಾಸ, ವಿದ್ವಾಂಸರೊಂದಿಗೆ ಸಂವಾದ, ಪ್ರತಿಭಾ ಸಾಮಗರಿಗೆ ವಿಮರ್ಶಾ ಪ್ರಶಸ್ತಿ, ಶತಾವಧಾನಿ ಡಾ.ಆರ್.ಗಣೇಶ್, ಎಚ್.ಎಸ್.ಗೋಪಾಲರಾವ್, ಪ್ರೊ.ಶೇಷ ಶಾಸ್ತ್ರಿ,ಖ್ಯಾತ ನೃತ್ಯಕಲಾವಿದ ಶ್ರೀಧರ್, ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ರಂತಹ ಹಿರಿಯರಿಂದ, ಸಂಶೋಧಕರಿಂದ ಆಶೀರ್ವಾದದೊಂದಿಗಿನ ಬೆಂಬಲ-ಉಪಸ್ಥಿತಿ, ಚಿಂತನ-ಮಂಥನ, ಸಂಶೋಧನಾಧಾರಿತ ನೃತ್ಯ ಕಾರ್ಯಕ್ರಮ ಮತ್ತು ಎಲ್ಲಾ ಪ್ರಯತ್ನಕ್ಕೂ ಭವಿತವ್ಯದಲ್ಲಿ ಸಿದ್ಧ ಅಡಿಪಾಯ ನೀಡುವಂತೆ ಒಲುಮೆಯ ಗೆಳೆಯರ ಸದಾಶಯದೊಂದಿಗೆ ಪ್ರಾರಂಭವಾದ ನೃತ್ಯ ಸಂಶೋಧಕರ ಒಕ್ಕೂಟವೆಂಬ ಸಂಶೋಧನೆ-ನೃತ್ಯದ ತಂತುಗಳನ್ನು ಬೆಸೆಯುವ ಕೆಲಸ.. ಒಟ್ಟಿನಲ್ಲಿ ಎಲ್ಲಾ ಹಂತಗಳನ್ನು ಬರೆಯಹೊರಟರೆ ಪುಟಗಟ್ಟಲೆ ಸಾಲದು.

ಕಳೆದ 5 ವರ್ಷಗಳಲ್ಲಿ, ಕೆಲವೇ ಕೆಲವು ಸಂಚಿಕೆಗಳಲ್ಲೇ ಪ್ರಬುದ್ಧ ಗುರು-ಕಲಾವಿದರು, ಹೆಸರಾಂತ ವಿದ್ವಾಂಸರು, ಸಂಶೋಧಕರು ಮತ್ತು ಓದುಗರ ಹರಕೆ-ಹಾರೈಕೆ- ಆಶೀರ್ವಾದ -ಮಾನ್ಯತೆ ಪಡೆದಿರುವ ನೂಪುರ ಭ್ರಮರಿಯನ್ನು ಗಮನಿಸಿದರೆ ಗುಣಮಟ್ಟದ ಸಮಗ್ರ ಕಲ್ಪನೆ ಇದಿರು ನಿಲ್ಲುತ್ತದೆ.ಈಗಾಗಲೇ ಅದೆಷ್ಟೋ ಶಿಕ್ಷಣ ಸಂಸ್ಥೆಗಳು, ನೃತ್ಯ ವಿದ್ಯಾಲಯಗಳು ತಾವೇ ಸ್ವಾಗತವನ್ನಿತ್ತು ತೆರೆದ ಹೃದಯದಿಂದ ಸ್ವೀಕರಿಸಿವೆ. ಕಏವಲ ಒಂದು ನಿಯತಕಾಲಿಕೆಯಷ್ಟೇ ಆಗಿರದೆ ಪರಾಮರ್ಶನದ ಜರ್ನಲ್ ಆಗಿ, ಹಲವು ಮಂದಿ ವಿದ್ವಂಸರು ಕಾತರದಿಂದ ನಿರೀಕ್ಷಿಸಿ ಓದಲ್ಪಡುವ  ಪತ್ರಿಕೆಯಾಗಿ ಬೆಳೆದಿದೆ. ಜೊತೆಗೆ ನೂಪುರ ಭ್ರಮರಿಯೆಂಬುದು ಈಗ ಸಂಶೋಧನಾ ಪ್ರತಿಷ್ಠಾನವೂ ಹೌದು, ನೃತ್ಯ ಸಂಶೋಧಕರ ಒಕ್ಕೂಟವೂ ಹೌದು.ಇವೆಲ್ಲವೂ ಸಾಧ್ಯವಾಗುತ್ತಿರುವುದು ಶ್ರಮ, ಸಹಕಾರ, ಪ್ರೋತ್ಸಾಹದಿಂದ. ನಿಮ್ಮ ಬೆಂಬಲ ಅನವರತ ನಮ್ಮನ್ನು ಕಾಯಲಿ.

 

Leave a Reply

*

code