ಅಂಕಣಗಳು

Subscribe


 

ರಂಗಪ್ರವೇಶ- ಎಡಬಿಡಂಗಿತನದ ಪ್ರದರ್ಶನ ಸರಕೇ?

Posted On: Saturday, August 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಇತ್ತೀಚಿನ ಭರತನಾಟ್ಯ ರಂಗಪ್ರವೇಶಗಳನ್ನೂ ಸೇರಿಸಿದಂತೆ ನೃತ್ಯಗಳ ರಂಗಪ್ರವೇಶದ ಕಲ್ಪನೆಯೇ ಹೊಲಸೆದ್ದು ಹೋಗಿದೆ. ರಂಗಪ್ರವೇಶಗಳ ಅಸ್ತಿತ್ವದ ಹಿಂದಿನ ಕಾರಣಗಳು ಆಡಂಬರ, ಪ್ರತಿಷ್ಠೆಯ ಮೂಸೆಯೊಳಗೆ ಕಾಣೆಯಾಗಿದೆ. ಇಂತಹ ಕಣ್ಣುಮುಚ್ಚಾಲೆಯ ನಡುವೆಯೇ ಅದೊಂದು ದಿನ ಎಳೆಯ ಹುಡುಗಿಯ ರಂಗಪ್ರವೇಶದ ಭರ್ಜರಿ ಆಹ್ವಾನ ನನ್ನ ಕೈಸೇರಿತ್ತು. ನೋಡೋಣವೆಂದು ಹೋದರೆ ಅದು ‘ಶಾಸ್ತ್ರೀಯ ನೃತ್ಯ ರಂಗಪ್ರವೇಶ’ ! ಭರತನಾಟ್ಯ, ಕಥಕ್, ಮೋಹಿನಿಯಾಟ್ಟಂ, ಕೂಚಿಪುಡಿ, ಒಡಿಸ್ಸಿ, ಮಣಿಪುರಿ..ಹೀಗೆ ಎಲ್ಲಾ ನೃತ್ಯಸಂಪ್ರದಾಯಗಳ ಒಂದೊಂದು ತುಣುಕುಗಳ ಬಫೆ ! ಗುರುಗಳು ಕಲಿತ ಯಥಾವತ್ ಗಿಣಿಪಾಠದ ಹೊಸಪ್ರಯೋಗ ಶಿಷ್ಯೆಯಿಂದ ! ಸಾಂಪ್ರದಾಯಿಕ ಮಾರ್ಗ ಪದ್ಧತಿಯನ್ನು ಅನುಸರಿಸುವುದು ಬಿಡಿ, ರಸಾನುಭವದ ಒಂದು ಮೆಟ್ಟಿಲನ್ನೂ ಏರಲಾಗದ ಭಂಡತನ! ಒಂದು ರೀತಿಯಲ್ಲಿ ಎಲ್ಲೂ ಇಲ್ಲದ, ತಂತ್ರಗಳಿಲ್ಲದೇ ಅತಂತ್ರವಾದ ಎಡಬಿಡಂಗಿತನ ! ಪ್ರಬುದ್ಧತೆಯ ಮಟ್ಟ ನಿರ್ಧಾರ ಮಾಡುವುದರಲ್ಲಿ ಪ್ರತಿಷ್ಟೆಯ ಮಾನದಂಡವಿರುವುದಾದರೂ ಇಂತಹ ಚೌಕಾಸಿ ಬುದ್ಧಿ ಬೇಕೇ ಎಂದು ಕಂಡದ್ದಂತೂ ಹೌದು ! ಬಹುಷಃ ಕಥಕ್ಕಳಿಯ ಆಹಾರ್ಯ ( ವೇಷಭೂಷಣ) ಮತ್ತು ಕಲಿಕಾ ಸಂವಿಧಾನವೂ ಸುಲಭವಾಗಿರುತ್ತಿದ್ದರೆ ಅದನ್ನೂ ಬಿಡುತ್ತಿರಲಿಲ್ಲವೇನೋ !

ಕಲಾಸಿಂಧುವಿನಿಂದ ನಾವು ತೆಗೆದುಕೊಳ್ಳುವುದು ಕೇವಲ ಬಿಂದುಗಳನ್ನಷ್ಟೇ ! ಆಯ್ದ ಆ ಬಿಂದುವನ್ನು ಸರಿಯಾಗಿ ಪಡೆದುಕೊಳ್ಳುವ ಜಾಣ್ಮೆ, ಉಳಿಸಿಕೊಳ್ಳುವ ತಾಳ್ಮೆ ನಮ್ಮಲಿಲ್ಲ. ದಿನ ಬೆಳಗಾಗುವ ಮೊದಲು ಎಲ್ಲವನ್ನೂ ಕಲಿತು ಎಲ್ಲದರಲ್ಲೂ ಉತ್ಕೃಷ್ಟರೆಂದು ಹೇಳಿಸಿಕೊಳ್ಳುವ ಚಪಲ. ಕೊನೆಗೆ ಎಚಿಛಿಞ oಜಿ ಂಟಟ ಎಂದು ಹೇಳಿಸಿಕೊಳ್ಳುವ ಹಟದಲ್ಲಿ ಒಚಿsಣeಡಿ oಜಿ ಓoಟಿe!

ಲಲಿತಕಲೆಗಳನ್ನು ಕಲಿಯಬೇಕಾದದ್ದು ಮಾನವನ ಸಾಂಸ್ಕೃತಿಕ, ಮತ್ತು ಸಂಸ್ಕಾರದ ಸಲುವಾಗಿನ ಅವಶ್ಯಕತೆಗಳಲ್ಲೊಂದು. ಅದರಲ್ಲೂ ಸೋದರ ಕಲೆಗಳ ಕುರಿತಾದ ಜ್ಞಾನ ಮತ್ತು ಅವುಗಳ ಕಲಿಯುವಿಕೆ ಅಪೇಕ್ಷಣೀಯ ಅಂಶವೇ ಹೌದು. ಕಲೆಯೊಂದರ ಇತಿಹಾಸ, ಸ್ಥಿತ್ಯಂತರ, ಪ್ರಭಾವ ಮತ್ತು ಸಮಕಾಲೀನ ಪ್ರಜ್ಞೆಯನ್ನು ಅರಿತುಕೊಳ್ಳಬೇಕೆಂದರೆ ಅದು ಅಗತ್ಯವೂ ಕೂಡಾ.

ಒಂದು ಕಲೆಯ ವಿಸ್ತಾರವನ್ನು ಅಭ್ಯಸಿಸಲು, ಕಲಿಸಲು ಕನಿಷ್ಟಪಕ್ಷ ೧೦ ವರ್ಷಗಳನ್ನಾದರೂ ತೆಗೆದುಕೊಳ್ಳಬೇಕು ಎಂಬುದನ್ನು ಪೋಷಕರಾದಿಯಾಗಿ ಗುರುಗಳೂ ಮನದಟ್ಟು ಮಾಡಿಕೊಂಡಿಲ್ಲ. ಹೀಗಿರುವಾಗ ನೃತ್ಯ ತರಗತಿ ಸೇರಿದ ೪-೫ ವರ್ಷಗಳಲ್ಲೇ ಏಳೆಂಟು ನೃತ್ಯಪ್ರಕಾರಗಳಲ್ಲಿ ಪಾಂಡಿತ್ಯರಾಗಬೇಕೆಂದರೆ ಸುಲಭದ ಮಾತೇ? ಒಂದೋ ಅಂತಹ ಕಲಾವಿದೆ ಅಭಿನವ ಸರಸ್ವತಿಯಾಗಿಯೇ ಜನ್ಮ ತಾಳಿರಬೇಕು. ಇಲ್ಲವೇ ಬೃಹಸ್ಪತಿಯೇ ಆಗಿರಬೇಕು.

ಒಂದನೇ ಕ್ಲಾಸೋ, ನಾಲ್ಕನೇ ಕ್ಲಾಸೋ ಕಲಿಯುವ ಮಗುವನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಸುವುದೆಂದರೆ ಎಷ್ಟು ಹಾಸ್ಯಾಸ್ಪದ ಅಲ್ಲವೇ? ಬೌದ್ಧಿಕ ಸಾಮರ್ಥ್ಯದ ಮಾತಿದ್ದರೆ ಅದು ಒತ್ತಟ್ಟಿಗಿರಲಿ. ಆದರೆ ಕಲಿಯುವ ಮಕ್ಕಳೆಲ್ಲರೂ ಅದನ್ನೇ ಆಚರಿಸಬೇಕೆಂದರೆ ಅದು ಮೂಢತನವನ್ನಲ್ಲದೆ ಬೇರೇನೆಂದು ಹೇಳಲು ಸಾಧ್ಯ ? ಕಲೆಗಳ ನಿಟ್ಟಿನಲ್ಲೂ ಮಕ್ಕಳನ್ನು ತಯಾರು ಮಾಡುತ್ತಿರುವುದು ನಾವು ಹೀಗೆಯೇ ! ಕಲೆಯೊಂದರ ಸಂತೃಪ್ತ ಅನುಭವಗಳಿಗೆ ತೆರೆದುಕೊಳ್ಳುವಷ್ಟೂ ಸಮಯ ಒದಗಿಸದೇ ಹೋಗುವುದು ಬೆಳವಣಿಗೆಯ ನಿಟ್ಟಿನಲ್ಲಿ ಆಗುವ ದುರಂತ. ಒಟ್ಟಿನಲ್ಲಿ ‘ಇಂತಿಷ್ಟು ವರ್ಷದಲ್ಲಿ ಇಷ್ಟೆಲ್ಲಾ ಕಲಾಪ್ರಕಾರಗಳನ್ನು ಕಲಿತಿದ್ದಾರೆ’ ಎಂದು ಹೇಳಿಕೊಳ್ಳುವ ತೆವಲಿಗೆ ಬೆಲೆ ತೆರಬೇಕಾಗುವುದು ಕೊನೆಗೆ ಕಲೆಯೇ ! ಪರಿಣಾಮ ಅಂತ್ಯಕ್ಕೆ ದೊರಕುವುದು ಅದರ ಛಿದ್ರಗೊಂಡು ಹೋದ ಅಸ್ತಿಗಳು ಮಾತ್ರ !

ಅಷ್ಟಕ್ಕೂ ಕಲೆ ನೆಲೆಯನ್ನು ಕಟ್ಟಿಕೊಂಡು ಮಾಡಬೇಕಾಗಿರುವುದೇನು ಎಂಬ ನಿರ್ಧರಿತ ನಿರ್ಲಕ್ಷ್ಯವೇ ನಮ್ಮ ಕೊಂಡಿಗಳನ್ನು ಕಳಚುವಂತೆ ಮಾಡುತ್ತದೆ. ಕೊನೆಗೆ ಹೊಂಡಕ್ಕೆ ಬಿದ್ದರೂ ಆಶ್ಚರ್ಯವಿಲ್ಲ. ಒಂದು ಕಲೆಯನ್ನು ಒಂದಿಷ್ಟು ಪ್ರೌಢತೆಯ ಹಂತಕ್ಕೂ ಕಲಿಯದೆ ಎಲ್ಲವನ್ನೂ ಒಮ್ಮೆಲೇ ಕಲಸಿ ಬಾಯಿಗೆ ತುರುಕಿಕೊಳ್ಳುವ ಧಾವಂತದಲ್ಲ್ಲಿ ನಾವು ಮಾಡುತ್ತಿರುವುದು ಏನು ತಿನ್ನುತ್ತಿದ್ದೇವೆಂದೇ ತಿಳಿಯದ ಅವಸರ ಊಟ ! ಎಲೆಯಲ್ಲಿ ಬಡಿಸಿದ ಷಡ್ರಸೋಪೇತ ಭೋಜನದ ಭಕ್ಷ್ಯಗಳನ್ನು ನೋಡುವ, ಸವಿಯುವ ರಸಿಕತೆಯಾಗಲೀ, ಭಾಗ್ಯವಾಗಲೀ ಇಲ್ಲ. ಸುಳಿವು ಕಂಡದ್ದೇ ತಡ ರಾಕ್ಷಸರಂತೆ ತುಂಬಿಕೊಂಡು ತಿಂದು, ಜೀರ್ಣವಾಗಲೂ ಬಿಡದೆ ಅರೆಬರೆಯಾಗಿ ಕಾರಿಕೊಳ್ಳುವುದೊಂದೇ ಇಂದಿನ ಪ್ರತಿಭೆ ! ಎಷ್ಟು ದಿನ ಉಳಿದೀತು ಆರೋಗ್ಯ?

ಕಲೆಯನ್ನು ಪ್ರತಿಷ್ಠೆಗಾಗಿ ಬಳಸಿಕೊಳ್ಳುವ ಹುಂಬತನದಲ್ಲಿ ಮತ್ತೊಂದೆಡೆ ನಾವು ಕೊಲ್ಲುತ್ತಿರುವುದು ಮಕ್ಕಳ ಬಾಲ್ಯವನ್ನು ! ಈ ಕಾರಣಕ್ಕೋ ಏನೋ ಮಹಾನಗರಿಗಳನ್ನೂ ಒಳಗೊಂಡಂತೆ ಪುಟ್ಟ ಪುಟ್ಟ ಪಟ್ಟಣಗಳಲ್ಲೂ ಮಕ್ಕಳು ಪೋಷಕರಿಂದಲೇ ಹಿಂಸೆಗೊಳಗಾಗುತ್ತಾರೆ. ವಯೋಸಹಜ ಆಸಕ್ತಿಗಳನ್ನು ಕೊಂದುಕೊಂಡು ಮತ್ತೊಬ್ಬರ ಸಂತೃಪ್ತಿಗೆ, ಒತ್ತಡಕ್ಕೆ ಬದುಕುತ್ತಾರೆ. ಚಿತ್ರಕಲೆ, ಡ್ಯಾನ್ಸ್, ಸಂಗೀತ, ಜಾನಪದ, ಕರಾಟೆ…, ಹೀಗೆ ತಮ್ಮ ಮಕ್ಕಳು ಕಲಿಯುವ ಪಟ್ಟಿಗಳನ್ನಿಡುವ, ಪೋಷಕರ ಕಣ್ಣಿಗೆ ಮಕ್ಕಳ ಬಾಲ್ಯ ನಗಣ್ಯವಾಗಿ ಹೋಗುತ್ತಿದೆ. ಬಾಲಪ್ರತಿಭೆಗಳೆಂದು ಕರೆಸಿಕೊಳ್ಳುವ ಕೆಟ್ಟ ಹಸಿವು ಅದು ! ಪರಿಣಾಮ, ಕಲೆಯ ಮಾರಾಟ ! ಮುಂದೊಮ್ಮೆ ರಸಾನುಭವವೇ ಕಾಣೆ !

ಆದಾಗ್ಯೂ ಇಂದಿನ ಮಕ್ಕಳಲ್ಲಿ, ಯುವಕರಲ್ಲಿ ; ಅಲ್ಲಲ್ಲಿ ವಿವಿಧ ಕಲಾಪ್ರಕಾರಗಳ ಒಳನೋಟಗಳನ್ನು ಅರಗಿಸಿಕೊಳ್ಳುವ ತುಡಿತವಿದೆ ಎಂಬುದೇ ಒಂದು ಸಮಾಧಾನ.

ಕಾಲ ಯಾರಿಗೂ ನಿಲ್ಲುವುದಿಲ್ಲ. ಅಂತೆಯೇ ಕಲೆಯೂ ನಿಂತ ನೀರಲ್ಲ. ಅವರವರ ಅಭಿರುಚಿಗಳಿಗನುಸಾರವಾಗಿ ಅವರವರ ಅನುಕೂಲಗಳಲ್ಲಿ, ಕಲೆಯ ಕುರಿತಾದ ಸಮಗ್ರ ದೃಷ್ಠಿಯಿದ್ದಾಗಲಷ್ಟೇ ಅದರೆಡೆಗಿನ ಪ್ರತಿಯೊಂದು ನೋಟಗಳೂ ಸುಂದರವೆನಿಸೀತು. ಒಳ-ಹೊರಗನ್ನು ಸೂಕ್ಷ್ಮವಾಗಿ ನೋಡಿದಾಗಲೇ ಪ್ರತಿಯೊಂದು ಕಲೆಯಲ್ಲೂ ಆಹ್ಲಾದ ಕಂಡೀತು. ಇರುವುದನ್ನು ಇದ್ದ ಹಾಗೆ ಸಮಯೋಚಿತ ಬದಲಾವಣೆಗಳನ್ನನ್ನುಸರಿಸಿ ಒಪ್ಪಿಕೊಂಡರಂತೂ ವಿಶ್ವಸನೀಯ ಮನೋಭಾವ ಬೆಳೆಯಲು ಸಾಧ್ಯ. ಇಲ್ಲದಿದ್ದರೆ ಕಲೆಯೆಡೆಗೆ ಕೊಂಚ ದೃಷ್ಠಿ ಹರಿಸುವ ಅವಕಾಶವನ್ನೂ ಕಳೆದುಕೊಳ್ಳುತ್ತೇವೆ. ಕಿರೀಟವನ್ನು ತೊಟ್ಟುಕೊಳ್ಳುವ ಭರದಲ್ಲಿ ಅಡಿಪಾಯiವೇ ಕುಸಿದುಹೋಗಿರುತ್ತದೆ. ನೆಲೆಯನ್ನು ಗಟ್ಟಿ ಮಾಡಿಕೊಳ್ಳುವ ಹಂತಕ್ಕೆ ನಿಂತ ನೆಲವೇ ಬಾಯ್ಬಿಟ್ಟಿರುತ್ತದೆ.

-ಸಂಪಾದಕರು

manorama@noopurabhramari.com

Leave a Reply

*

code