ಅಂಕಣಗಳು

Subscribe


 

ಅಭಿನವ ಶನೈಶ್ಚರ ಜಲವಳ್ಳಿ ವೇಂಕಟೇಶ್‌ರಾವ್

Posted On: Saturday, June 15th, 2019
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

(ನವೆಂಬರ್ ೧, ೧೯೩೩-ಮಾಚ್ ೫, ೨೦೧೯)

ಲವಳ್ಳಿಯಂತಹ ತೀರ ಹಿಂದುಳಿದ ಗ್ರಾಮದಲ್ಲಿ ಜನಿಸಿ ವುಂದೊಮ್ಮೆ ಅದೇ ಗ್ರಾಮದ ಹೆಸರನ್ನು ಲೋಕಪ್ರಸಿದ್ಧ ಮಾಡಿ ಯಕ್ಷಶೈಲಿಯೊಂದನ್ನೇ ಹುಟ್ಟುಹಾಕಿಸಿzವರು ವೆಂಕಟೇಶ್ವರರಾವ್. ಚಿಕ್ಕಂದಿನಲ್ಲೇ ತಂದೆಯನ್ನೂ ಕಳೆದುಕೊಂಡು ಕಡುಬಡತನದ ಕಾರಣದಿಂದ ೨ನೆಯ ತರಗತಿಯವರೆಗೆ ಮಾತ್ರವೇ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿ ಸೂಕ್ತ ಅವಕಾಶವಿಲ್ಲದ ಕಾಲದಲ್ಲಿ ಲಾಭದಾಯಕವಲ್ಲದ ಯಕ್ಷಗಾನ ಕಲೆಯತ್ತ ೧೬ನೆಯ ವಯಸ್ಸಿನಲ್ಲಿ ಆಕರ್ಷಿತರಾಗಿ ಯಕ್ಷಗಾನ ಕಲಾವಿದನಾಗುವ ಹಂಬಲದೊಂದಿಗೆ ಬೆನ್ನು ಹತ್ತಿ ಜೀವನದ ಬಹುಭಾಗವನ್ನು ಯಕ್ಷಗಾನಕ್ಕಾಗಿ ಸಮರ್ಪಿಸಿಕೊಂಡವರು. ಅದಕ್ಕೂ ಮೊದಲೇ ಬೇರೆಯವರ ಮನೆಯಲ್ಲಿ ಕೂಲಿ ಮಾಡಿಕೊಂಡು ತಿಂಗಳಿಗೆ ೧೫ ರೂಪಾಯಿಗಳ ಸಂಬಳ ಪಡೆವಷ್ಟು ಬಡತನ ಅವರನ್ನು ಕಾಡಿತ್ತು. ಜೊತೆಗೆ ಯಕ್ಷಗಾನದ ವೀಕ್ಷಣೆಗೆ ಸಾಕಷ್ಟು ಮಡಿವಂತಿಕೆ, ಪೂರ್ವಾಗ್ರಹಗಳಿದ್ದ ಕಾಲಕ್ಕೆ ‘ಆಟ’ ನೋಡಲು ಅವರ ತಾಯಿಯ ಕಣ್ಣು ತಪ್ಪಿಸಿಹೋಗುತ್ತಿದ್ದರಂತೆ. ನಂತರ ಕೇವಲ ತನ್ನ ಸಾಮರ್ಥ್ಯವನ್ನೇ ಬಂಡವಾಳವಾಗಿರಿಸಿಕೊಂಡು, ಸತತ ಸಾಧನೆ, ಶ್ರಮದಿಂದ ಏನೆಲ್ಲವನ್ನೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟು ಉಭಯತಿಟ್ಟುಗಳಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದ್ದು ಇತಿಹಾಸ.

ತೆಂಕಿನ ಸುರತ್ಕಲ್ ಮೇಳದಲ್ಲಿ ಮೊಟ್ಟ ಮೊದಲ ದಿನ ವೇಷ ಮಾಡುವ ಮುನ್ನ ಯೋಚಿಸುತ್ತಾ ಬಡಗಿನಿಂದ ತಿಳಿವಳಿಕೆಯಿಲ್ಲದೆ ಬಂದೆನೋ ತೆಂಕಿಗೆ ಎಂದು ಆತಂಕಗೊಂಡು ಅರಿವಿಲ್ಲದಂತೆಯೇ ಕಣ್ಣಿಂದ ನೀರು ಹನಿಸಿದರಂತೆ. ಸೂಕ್ಷ್ಮಮತಿ ಡಾ| ಶೇಣಿ ಗೋಪಾಲಕೃಷ್ಣ ಭಟ್ಟರು ಅಲ್ಲಿಯೇ ವೇಷ ಹಾಕಲೆಂದು ಕುಳಿತವರು ಇದನ್ನು ಗಮನಿಸಿ ಬಳಿ ಬಂದು ಧೈರ್ಯತುಂಬಿ ‘ನಾನಿದ್ದೇನೆ. ನೀನು ಗೆಲ್ಲಬೇಕು, ನಾನು ಗೆಲ್ಲಿಸುತ್ತೇನೆ ಎಂದರಂತೆ. ತಿಟ್ಟುಗಳ ಕ್ರಮ ಬೇರಾಗಿದ್ದಿರಬಹುದು. ಆದರೆ ಪ್ರಾಮಾಣಿಕ ಕಲಾವಿದರಲ್ಲಿ ಕಲೆಯ ಗೆಲುವೇ ಮುಖ್ಯ ಗುರಿ ಎಂಬುದನ್ನು ಬೇರೆ ಹೇಳಬೇಕಿಲ್ಲ.

ಜಲವಳ್ಳಿಯವರು ಉತ್ತಮ ನೃತ್ಯಪಟು ಎಂದು ಇಂದಿನವರಂತೆ ಎಲ್ಲಿಯೂ ಗುರುತಿಸಿಕೊಂಡವರಲ್ಲ. ರಂಗದಲ್ಲಿ ವೈವಿಧ್ಯಮಯ ಹೆಜ್ಜೆ ಬಳಸುವ ಪರಿಪಾಠ ಅವರಲ್ಲಿರಲಿಲ್ಲ. ಆದರೂ ಅದೆಂದೂ ಅವರಿಗೆ ಕೊರತೆಯಾದದ್ದಿಲ್ಲ. ಬದಲಾಗಿ ರಂಗಸ್ಥಳದಲ್ಲಿ ‘ಎರಡು ಸುತ್ತು-ಮೂರು ಗತ್ತು’ ಎಂಬುದು ಜಲವಳ್ಳಿಯವರ ವಿಶಿಷ್ಟ ಶೈಲಿಗೆ ಸಂದ ಮರ್ಯಾದೆ. ಯಾವುದೇ ಒಂದು ಶೈಲಿಗೆ ಅಂಟಿಕೊಳ್ಳದೇ ಮುಖಮುದ್ರೆ, ಅಭಿನಯ, ಗಂಭೀರ ನಿಲುವು, ನಡೆಯ ಕ್ರಮ, ಇವುಗಳಲ್ಲೇ ಸಹೃದಯನನ್ನು ಮೋಡಿ ಮಾಡಿ ತನ್ನದೇ ಆದ ‘ಜಲವಳ್ಳಿ ಶೈಲಿ’ಯನ್ನು ಹುಟ್ಟುಹಾಕಿದ ಪ್ರತಿಭಾಶೀಲ.

ಯಕ್ಷಗಾನದಲ್ಲಿ ಹುಬ್ಬನ್ನು ಬರೆಯುವ ಕ್ರಮ ಉಳಿದ ಕಲಾಪ್ರಕಾರಗಳಂತಲ್ಲ. ಆದರೆ ಜಲವಳ್ಳಿಯವರು ಹುಬ್ಬನ್ನು ಬರೆಯುವ ಕ್ರಮವೇ ಉಳಿದವರಿಗಿಂತ ಭಿನ್ನವಾಗಿತ್ತಂತೆ ! ಸಹಜ ಹುಬ್ಬಿರುವ ಜಾಗದಲ್ಲಿ ಬಣ್ಣ ಹಚ್ಚುತ್ತಿದ್ದ ಕಾರಣ ಕಣ್ಣಿನ ಚಲನೆ ನೀಡುತ್ತಿದ್ದ ಪರಿಣಾಮ ವಿಶಿಷ್ಟವಾಗಿರುತ್ತಿತ್ತು. ಕಡಿಮೆ ಮಾತಿನಲ್ಲಿ ಹೆಚ್ಚು ಪರಿಣಾಮ ಕೊಡುವ ವಾಕ್ಸಿದ್ಧಿ, ಪದ್ಯಗಳ ಅರ್ಥವನ್ನು ಸರಳವಾಗಿ ಮಂಡಿಸುವಲ್ಲಿ ಧ್ವನಿ ಏರಿಳಿತ, ಪ್ರಯೋಗಕೌಶಲ್ಯ ಅವರಿಗಿತ್ತಾದ್ದರಿಂದ ವಾಚಿಕಾಭಿನಯದ ಗರಿಷ್ಟ ಸಾಧ್ಯತೆಯನ್ನು ಸುಲಭವಾಗಿ ತಲುಪುತಿದ್ದರು.

ಅಭಿನವ ಶನಿ ಎಂದೇ ಖ್ಯಾತಿ ಗಳಿಸಿದ್ದ ಅವರ ಶನಿಯ ಪಾತ್ರಪ್ರಭಾವ ಎಷ್ಟೆಂದರೆ ರಾಜಾ ವಿಕ್ರಮನನ್ನು ಕಾಡುವ ಅವರ ಶನಿಯ ಪಾತ್ರವನ್ನು ನೋಡಿದ ಹಲವು ಪ್ರೇಕ್ಷಕರು ಶನಿ ಪ್ರದೋಷ ಪೂಜೆ ನಡೆಸಿರುವ ಸಂಗತಿಗಳು ಇವೆ. ಕಲಾವಿದನ ಪಾತ್ರಪರಿಣಾಮವೆಂದರೆ ಹೀಗಿರಬೇಕು !

Leave a Reply

*

code