ಅಂಕಣಗಳು

Subscribe


 

ನೃತ್ಯ ಲೋಕದಿಂದ ಮರೆಯಾದ ಮಾಣಿಕ್ಯ ಪ್ರೊ|| ಜಯಾ

Posted On: Friday, February 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ಸುಧೀರ್ ಕುಮಾರ್ ಎ.ಎನ್, ಬೆಂಗಳೂರು

1

ಛಲಬೇಕು ಮನುಜಂಗೆ…… ಎಂಬ ಶರಣರ ನುಡಿಯಂತೆ ಬದುಕಿನುದ್ದಕ್ಕೂ ತನ್ನ ಗುರಿಯತ್ತ ಆಶಾವಾದಿಯಾಗಿ ಆರ್ಥಿಕ ಸಂಕಷ್ಟದಲ್ಲೂ ಸ್ವಪ್ರಯತ್ನ, ಸತತ ಸಾಧನೆಯಲ್ಲಿ ವಿಶ್ವಾಸವಿಟ್ಟು ನೃತ್ಯಕಲೆಯನ್ನೇ ತನ್ನ ಸರ್ವಸ್ವವೆಂದು, ಅದಕ್ಕಾಗಿ ಅಕ್ಷರಶಃ ತನ್ನ ಜೀವನವನ್ನೇ ಮುಡಿಪಾಗಿಟ್ಟ ದಿಟ್ಟಮಹಿಳೆ ವಿದುಷಿ ಜಯ. ನೃತ್ಯಕ್ಷೇತ್ರದಲ್ಲಿನ ಎಲ್ಲಾ ಸವಾಲುಗಳನ್ನು ಎದುರಿಸುತ್ತ ಒಂದೊಂದೇ ಮೆಟ್ಟಿಲನ್ನು ಏರುತ್ತ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನಕಲಾವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆಸಲ್ಲಿಸಿ, ಬಳಿಕ ಜೈನ್ ಯೂನಿವರ್ಸಿಟಿಯಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ ಪ್ರೊ|| ಜಯಾ ತನ್ನ ಕಾರ್ಯದಕ್ಷತೆಯಿಂದಾಗಿ ಅದೇ ವಿಶ್ವವಿದ್ಯಾಲಯದಲ್ಲಿ ಸಂಗೀತ-ನೃತ್ಯದ ಸ್ನಾತಕೋತ್ತರಪದವಿ ವಿಭಾಗದಲ್ಲಿ ಮುಖ್ಯಸ್ಥರಾದವರು. ಹೀಗೆ ಕರ್ನಾಟಕ ನೃತ್ಯ ಕ್ಷೇತ್ರವೇ ಹುಬ್ಬೇರಿಸುವಂತೆ ಬೆಳೆದುನಿಂತ ಹಳ್ಳಿಯಹುಡುಗಿ, ಸಾಧನೆಯ ಮಾರ್ಗಮಧ್ಯದಲ್ಲಿಯೇ ದಿನಾಂಕ ೨೨-೧೨-೨೦೧೨ ರಂದು ವಿಧಿವಶರಾದುದು ಕರ್ನಾಟಕ ನೃತ್ಯ ಕ್ಷೇತ್ರಕ್ಕೆ ಭರಿಸಲಾಗದ ನಷ್ಟವೇ ಸರಿ.

ವೈಕುಂಠ ಏಕಾದಶಿಯ ಹಿಂದಿನ ದಿನವದು. ಅಂದು ತಮ್ಮ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿರುವುದು ತಮ್ಮ ಗಮನಕ್ಕೆ ಬಂದಿದ್ದರೂ ಕೂಡ ಅಂದಿನ ಪರೀಕ್ಷಾಕರ್ತವ್ಯವನ್ನು ಮುಗಿಸಲು ಹಿಂದೇಟು ಹಾಕಿರಲಿಲ್ಲ. ಕಳೆದ ನಾಲ್ಕೈದು ದಿನಗಳಿಂದಲೂ ಅನ್ನ ಸೇರುತ್ತಿರಲಿಲ್ಲ ಎಂದು ದೇಹಾಲಸ್ಯದ ತೊಂದರೆಗಳನ್ನು ಸ್ನೇಹಿತರು, ಸಹೋದ್ಯೋಗಿಗಳಲ್ಲಿ ಹೇಳಿಕೊಂಡಿದ್ದರೂ ವೈದ್ಯರನ್ನು ಕಾಣಬೇಕೆಂಬ ಸಲಹೆಗೆ ಕಿವಿಕೊಟ್ಟಿರಲಿಲ್ಲ. ಕೆಲಸವನ್ನೆಲ್ಲಾ ಮಾಡಿಮುಗಿಸಿದ ನಂತರವೇ ತನಗೆ ವಿಶ್ರಾಂತಿ ಎಂದಿದ್ದರೂ ಕೂಡಾ. ಜೊತೆಗೆ ಮರುದಿನ ನಡೆಯಲಿದ್ದ ನೃತ್ಯ ಕಾರ್ಯಕ್ರಮದ ರಿಹರ್ಸಲ್ ಮುಗಿಸಿ, ಸಂಜೆ ಮನೆಯಲ್ಲಿ ನೃತ್ಯ ತರಗತಿಯನ್ನು ಹಾಗೂ ಮತ್ತೊಂದು ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಿದ್ದಾಕೆ ಕುಸಿದು ಬಿದ್ದಾಗಲೂ ಬಹುಷಃ ಅವರಿಗೇ ಅರಿವಿತ್ತೋ ಇಲ್ಲವೋ ಹೃದಯ ಪುಟಿಯುವುದನ್ನು ನಿಲ್ಲಿಸಲಿದೆ ಎಂದು ! ಆಸ್ಪತ್ರೆ ತಲುಪುವ ವೇಳೆಗಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ಒಟ್ಟಿನಲ್ಲಿ ಕೊನೆಯ ಗಳಿಗೆಯವರೆಗೂ ತಮ್ಮ ಆರೋಗ್ಯ, ವೈಯಕ್ತಿಕ ಬದುಕು, ಜೀವಕ್ಕಿಂತ ಕರ್ತವ್ಯನಿಷ್ಠೆಯನ್ನು ಪ್ರತಿಪಾದಿಸಿ ಸಾರ್ಥಕ ಬದುಕನ್ನು ಕಂಡ ಸಾಧಕಿ ಅವರು. ಒಂದರ್ಥದಲ್ಲಿ ಕೊನೆಯ ಉಸಿರಿರುವವರೆಗೂ ನೃತ್ಯಕ್ಷೇತ್ರಕ್ಕಾಗಿಯೇ ತನ್ನನ್ನು ಸಮರ್ಪಿಸಿಕೊಂಡು ನೃತ್ಯದ ಸಾಮೀಪ್ಯದಲ್ಲೇ ಅಂತ್ಯವನ್ನು ಕಂಡ ಅಪರೂಪದ ಕಲಾವಿದರಲ್ಲಿ ಇವರೂ ಒಬ್ಬರು.ಶಾಸ್ತ್ರೋಕ್ತವಾಗಿ ನೃತ್ಯ ಕಲಿಯಬೇಕೆಂಬ ಹೆಬ್ಬಯಕೆಯಿದ್ದರೂ ಅವಕಾಶಗಳಿಂದ ವಂಚಿತರಾಗಿದ್ದರು. ಕುಟುಂಬದ ಹಿನ್ನೆಲೆಯಲ್ಲಿ ಕಲೆಯ ಬಗೆಗಿನ ಅರಿವು, ಆಸಕ್ತಿ, ಒಲವಿನ ಕೊರತೆ. ಇಂತಹ ವಾತಾವರಣದಲ್ಲಿ ತನ್ನ ಕಾಲಮೇಲೆ ತಾನು ನಿಂತುಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯಿಂದ ಊರಿನಲ್ಲಿ ಹಿಂದಿಭಾಷೆಯನ್ನು ಕಲಿಸುವ ಪ್ರಯತ್ನವನ್ನು ಮಾಡಿದ್ದರು. ಆ ಕಾಲದಲ್ಲಿ ಶಿಕ್ಷಣದಲ್ಲಿ ಹಿಂದಿವಿರೋಧ ಚಳುವಳಿಗಳು ನಡೆಯತ್ತಿದ್ದು ಊರಿನಲ್ಲಿ ಪ್ರೋತ್ಸಾಹ ದೊರೆಯದೆ ಅಲ್ಲಿಯೂ ಯಶಸ್ಸನ್ನು ಸಾಧಿಸಲಾಗಲಿಲ್ಲ. ದೂರದ ಊರಿನಲ್ಲಿ ಹಿಂದಿ ಶಿಕ್ಷಕಿಯಾಗಿ ನೌಕರಿ ದೊರೆತಿದ್ದು ಹೆಣ್ಣುಮಗಳನ್ನು ಅಷ್ಟುದೂರ ಕಳುಹಿಸಲು ಕುಟುಂಬದವರು ಮನಸ್ಸು ಮಾಡಲಿಲ್ಲ. ಈ ಎಲ್ಲ ಕಟ್ಟುಪಾಡುಗಳಿಂದ ತಾನು ಹೊರಬರದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದ ಜಯ ತಮ್ಮ ಕುಟುಂಬದ ಪ್ರಬಲ ವಿರೋಧದ ನಡುವೆ ಉದ್ಯೊಗ, ಶಿಕ್ಷಣ, ಕಲೆಯನ್ನು ಅರಸಿ ಮಂಗಳೂರಿಗೆ ಪ್ರಯಾಣ ಬೆಳೆಸಿದರು. ಈ ದಿಟ್ಟ ನಿರ್ಧಾರವೇ ಜಯಾರವರ ಬದುಕಿನ ಚಿತ್ರಣವನ್ನೇ ಬದಲಾಯಿಸಿತು.ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೋಕಿನ ಅರೆಹಳ್ಳಿ ಎಂಬ ಪುಟ್ಟಗ್ರಾಮದಲ್ಲಿ ಸಂಪ್ರದಾಯಸ್ಥ ಮಧ್ಯಮವರ್ಗದ ವೀರಶೈವ ಜಂಗಮ ಸಮುದಾಯದಲ್ಲಿ ಗೌರಮ್ಮ, ಗುರುಪಾದಯ್ಯ ದಂಪತಿಗಳ ನಾಲ್ಕುಜನ ಮಕ್ಕಳಲ್ಲಿ ಎರಡನೆಮಗಳಾಗಿ ಜನಿಸಿದವರೇ ಜಯಾ. ತಮ್ಮ ಊರಿನಲ್ಲಿ ಎಸ್.ಎಸ್.ಎಲ್.ಸಿ. ಶಿಕ್ಷಣದೊಂದಿಗೆ ಹಿಂದಿ ಭಾಷಾವಿಷಾರದ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿಕೊಂಡರು. ಬಳಿಕ ಹೆಚ್ಚಿನ ಶಿಕ್ಷಣವನ್ನು ಪಡೆಯುವ ಗುರಿಯನ್ನು ಹೊಂದಿದ್ದರೂ ಮನೆಯಲ್ಲಿ ಮದುವೆಯ ಪ್ರಸ್ತಾಪ, ತಂದೆಯ ಮರಣ, ಬಾಲ್ಯದಿಂದಲೇ ನೃತ್ಯ ಮತ್ತು ನಾಟಕಗಳತ್ತ ಹೆಚ್ಚಿನ ಒಲವು. ಸಂಪ್ರದಾಯಸ್ಥರ ವಿರೋಧದ ನಡುವೆ ಶಾಲಾದಿನಗಳಲ್ಲಿ ವಾರ್ಷಿಕೋತ್ಸವ ಇತರ ಉತ್ಸವಗಳಲ್ಲಿ ನೃತ್ಯ, ನಾಟಕಗಳಲ್ಲಿ ಅಭಿನಯಿಸುವುದು, ಇತರ ಮಕ್ಕಳಿಗೂ ಕಲಿಸಿಕೊಡುವ ಪ್ರಯತ್ನಗಳು ನಡೆದಿದ್ದವು.22

ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕ್ಕ ಉದ್ಯೋಗ ಒಂದನ್ನು ಪಡೆದುಕೊಳ್ಳುವಲ್ಲಿ ಜಯಾ ಯಶಸ್ವಿಯಾದರು. ತನ್ನ ಚುರುಕುತನ, ಜಾಣ್ಮೆ, ವಹಿಸಿದ ಕೆಲಸದಲ್ಲಿನ ಶ್ರದ್ಧೆ, ಜವಾಬ್ದಾರಿ, ಶಿಸ್ತು, ಅಚ್ಚುಕಟ್ಟು ಈ ಎಲ್ಲ ಆದರ್ಶಗುಣಗಳಿಂದ ಆಡಳಿತ ಮಂಡಳಿಗೆ ಅಚ್ಚುಮೆಚ್ಚಿನವರಾದರು; ಬಲು ಬೇಗನೆ ಅದೇ ಅಸ್ಪತ್ರೆಯ ನಿರ್ವಹಣೆಯ ಜವಾಬ್ದಾರಿಯನ್ನು ತಮ್ಮ ಹೆಗಲಿಗೇರಿಸಿಕೊಂಡರು. ಇಷ್ಟಕ್ಕೇ ತೃಪ್ತರಾಗದೆ ಅರ್ಧದಲ್ಲಿ ನಿಂತ ಶಿಕ್ಷಣವನ್ನು ಮುಂದುವರಿಸಿದರು. ಪಿ.ಯು.ಸಿ. ಶಿಕ್ಷಣವನ್ನು ಮುಗಿಸಿ ಪದವಿಯನ್ನು ಪೂರೈಸಿದರು. ಶಿಕ್ಷಣದೊಂದಿಗೆ ಹಿರಿಯ ನೃತ್ಯ ಗುರುಗಳಾದ ಜಯಲಕ್ಷ್ಮಿ‌ಆಳ್ವ ಇವರಲ್ಲಿ ನೃತ್ಯ ಶಿಕ್ಷಣವನ್ನು ಪ್ರಾರಂಭಿಸಿದರು. ಇತಿಹಾಸ ಹಾಗೂ ಕನ್ನಡಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ನೃತ್ಯಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲು ಬೆಂಗಳೂರನ್ನು ಆಯ್ದುಕೊಂಡರು. ತಮ್ಮ ಸಹೋದರಿಯರ ಹಾಗೂ ತಾಯಿಯ ಸಹಕಾರದೊಂದಿಗೆ ಎಂಬತ್ತರ ದಶಕದ ಕೊನೆಯಲ್ಲಿ ಬೆಂಗಳೂರಿಗೆ ಬಂದು ನೆಲೆಸಿದರು.

ನೃತ್ಯವನ್ನು ನಂಬಿಕೊಂಡು ಜೀವನವನ್ನು ನಿರ್ವಹಿಸುವುದು ಕಷ್ಟ ಎಂಬ ಸಹೋದರಿಯರ ಒತ್ತಾಯ ಹಾಗೂ ಪ್ರಯತ್ನದ ಮೇರೆಗೆ ನಾಲ್ಕಾರು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಮುಖ್ಯನಿರ್ವಾಹಕರಾಗಿ ಉದ್ಯೋಗ ದೊರೆಯಿತಾದರೂ ಪರಿಪೂರ್ಣಳಾಗಿ ತನ್ನನ್ನು ನೃತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಅಸಾಧ್ಯಎಂಬ ಕಾರಣದಿಂದಾಗಿ ಆ ಉದ್ಯೋಗವನ್ನು ತಿರಸ್ಕರಿಸಿದರು. ಅಲ್ಲದೆ ತನ್ನ ಸಾಧನೆಗೆ ಅಡ್ಡಿಯಾಗಬಹುದೆಂಬ ಕಾರಣಕ್ಕಾಗಿ ಕುಟುಂಬವರ್ಗದವರ ಅಸಮಾಧಾನವನ್ನು ಲೆಕ್ಕಿಸದೆ ವೈವಾಹಿಕ ಜೀವನವನ್ನು ತ್ಯಾಗಮಾಡಿದರು.

ವಿದುಷಿ ಜಯಾ ಬೆಂಗಳೂರಿಗೆ ಬಂದ ನಂತರ ಭತರನಾಟ್ಯದಲ್ಲಿ ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಯನ್ನು ಪೂರೈಸಿಕೊಂಡರು; ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೃತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದರು. ಪ್ರಾರಂಭದ ದಿನಗಳಲ್ಲಿ ನೃತ್ಯ ಕ್ಷೇತ್ರದಲ್ಲಿ ತಮ್ಮ ಗುರುತನ್ನು ಮೂಡಿಸುವುದು ಅಷ್ಟು ಸುಲಭವಾಗಿರಲಿಲ್ಲ. ತಮ್ಮ ಒಡವೆಗಳನ್ನು ಮಾರಿ ಜೀವನವನ್ನು ನಿರ್ವಹಿಸುವ ಅನಿವಾರ್ಯತೆಯನ್ನು ಲೆಕ್ಕಿಸದೆ ನಾಟ್ಯ ದರ್ಪಣ ಸಂಸ್ಥೆಯನ್ನು ಹುಟ್ಟುಹಾಕಿದರು. ಹಲವಾರು ಬಡಾವಣೆಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ನೃತ್ಯತರಗತಿಗಳನ್ನು ಪ್ರಾರಂಭಿಸಿದರಲ್ಲದೆ ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯವನ್ನು ಬೋಧಿಸಿದರು. ಹಲವಾರು ವರುಷಗಳ ಕಾಲ ಭರತನಾಟ್ಯವನ್ನು ಬೇಸಿಗೆಶಿಕ್ಷಣ ಶಿಬಿರದಲ್ಲಿ ಹೇಳಿಕೊಡುವ ಪದ್ಧತಿಯನ್ನು ಪರಿಚಯಿಸಿದರು. ದೇಶ ವಿದೇಶಗಳಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ನೃತ್ಯಕಾರ್ಯಕ್ರಮಗಳನ್ನು ನೀಡಿದ್ದಷ್ಟೇ ಅಲ್ಲದೆ; ವಚನಸಾಹಿತ್ಯವನ್ನಾಧರಿಸಿದ ವಚನಾಂಜಲಿ, ಬಾಹುಬಲಿವಿಜಯ, ರಾಮಾಯಣ, ಮೊದಲಾದ ನೃತ್ಯ ನಾಟಕಗಳನ್ನು ಸಂಯೋಜಿಸಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ತಾವು ರಂಗಪ್ರವೇಶವನ್ನು ಮಾಡದಿದ್ದರೂ ಇವರ ಮಾರ್ಗದರ್ಶನದಲ್ಲಿ ೨೦ ವಿದ್ಯಾರ್ಥಿಗಳು ರಂಗಪ್ರವೇಶವನ್ನು ಮಾಡಿಸಿದ್ದಾರೆ. ಅದರಲ್ಲಿ ಬಹಳಷ್ಟು ಮಂದಿ ಆರ್ಥಿಕವಾಗಿ ಹಿಂದುಳಿದವರೇ ಆಗಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ.

ಪ್ರೊ|| ಜಯ ವ್ಯಕ್ತಿತ್ವದಲ್ಲಿನ ವಿಶೇಷತೆ ಎಂದರೆ ಅವರ ನೇರನುಡಿ. ಕಾರ್ಯನಿರ್ವಹಣೆಯಲ್ಲಿ ರಾಜಿಮಾಡಿಕೊಳ್ಳದ ಕರ್ತವ್ಯ ಬದ್ಧತೆ. ನೃತ್ಯಕ್ಕೆ ಸಂಬಂಧಿಸಿದಂತೆ ತಮಗೆ ತಪ್ಪು ಎನಿಸಿದ್ದನ್ನು ಯಾವುದೇ ಮುಲಾಜಿಲ್ಲದೆ ನೇರ ನುಡಿಗಳಿಂದ ಸಮರ್ಥವಾಗಿ ಖಂಡಿಸುವ ಗುಣ, ತಮ್ಮ ಕಾರ್ಯಸಾಧನೆಗಾಗಿ ಇತರರನ್ನು ಓಲೈಸದ ತಮ್ಮ ಧೋರಣೆ ಇವುಗಳಿಂದ ಜಯಾರವರು ನೃತ್ಯಕ್ಷೇತ್ರದಲ್ಲಿ ಕೆಲವರ ವಿರೋಧವನ್ನು ಕಟ್ಟಿಕೊಂಡಿರಬಹುದು; ಆದರೆ ಇದೆಲ್ಲಕ್ಕಿಂತ ಮಿಗಿಲಾಗಿ ಜಯಾಮೇಡಂ ನೃತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಬೇಕು.

ನೃತ್ಯಕ್ಷೇತ್ರದ ಪ್ರಾಯೋಗಿಕ ಹಾಗೂ ಶಾಸ್ತ್ರ ವಿಭಾಗಗಳೆರಡರಲ್ಲೂ ಪಾಂಡಿತ್ಯವನ್ನು ಹೊಂದಿದ್ದ ಜಯಾರವರು; ನೃತ್ಯದ ಸಮಗ್ರ ವಿಚಾರಗಳನ್ನು ತಿಳಿದುಕೊಳ್ಳುವ ಉದ್ಧೇಶದಿಂದಾಗಿ ಸಂಸ್ಕೃತ, ತಮಿಳು ಭಾಷೆಗಳನ್ನು ಅಧ್ಯಯನ ಮಾಡಿದ್ದರು. ಇದರೊಂದಿಗೆ ಇಂಗ್ಲೀಷ್ ಭಾಷೆಯ ಮೇಲಿನ ಉತ್ತಮವಾದ ಹಿಡಿತ, ಕೊಂಕಣಿ, ತುಳು, ಮಲೆಯಾಳಂ, ಕನ್ನಡ ಭಾಷಾಜ್ಞಾನದೊಂದಿಗೆ ಹಿಂದಿ ಭಾಷಾವಿಶಾರದ ಪದವಿಯನ್ನು ಜಯಾ ನೃತ್ಯಕಲೆಗೆ ಸಂಬಂಧಿಸಿದ ಅಧ್ಯಯನ, ಲೇಖನ ಹಾಗೂ ಪುಸ್ತಕಗಳನ್ನು ಮಂಡಿಸುವಲ್ಲಿ ಸಾರ್ಥಕವಾಗಿ ಬಳಸಿಕೊಂಡಿದ್ದಾರೆ. ನೃತ್ಯಕ್ಷೇತ್ರದಲ್ಲಿ ಪ್ರಚಲಿತವಿರುವ ಸಾಕಷ್ಟು ಇತರ ಭಾಷೆಗಳ ರಚನೆಗಳಿಗೆ ನಿಖರವಾದ ಅರ್ಥವನ್ನು, ರಚನೆಯ ಹಿನ್ನೆಲೆಯಲ್ಲಿನ ತರ್ಕಗಳನ್ನು, ಕಥಾಸಾರಾಂಶವನ್ನು, ಭಿನ್ನಾಭಿಪ್ರಾಯಗಳನ್ನು ಕುರಿತು ಬಹಳಷ್ಟು ಮಾಹಿತಿಗಳನ್ನು ಕಲೆಹಾಕಿದ್ದರಲ್ಲದೆ ; ಮಾಹಿತಿಗಳನ್ನು ಯಾಚಿಸಿದವರಿಗೆ ವಿವರವಾಗಿ ತಿಳಿಸಿಕೊಡುತ್ತಿದ್ದರು. ಸಂಗೀತವನ್ನು ಅಭ್ಯಾಸ ಮಾಡಿದ್ದು ನಟುವಾಂಗದ ನಿರ್ವಹಣೆಯಲ್ಲಿಯೂ ಸಿದ್ಧಹಸ್ತರಾಗಿದ್ದರು; ವಿದ್ಯಾರ್ಥಿಗಳಿಗೆ ನೃತ್ಯ ವಿದ್ಯಾಭ್ಯಾಸದ ಹಲವು ಆಯಾಮಗಳ ಬಗ್ಗೆ ಹೊಸ ಕನಸುಗಳನ್ನೂ ಕಟ್ಟಿದ್ದರು.

246ಜಯಾ ಅವರು ಬರೆದ ಭರತನಾಟ್ಯ ಪರೀಕ್ಷಾ ಮಾರ್ಗದರ್ಶಿ ಪುಸ್ತಕವು ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಮುದ್ರಿತವಾಗಿದ್ದು; ಕರ್ನಾಟಕದ ಉದ್ದಗಲಕ್ಕೂ ಪರಿಚಿತವಾಗಿದೆ. ವಿಶೇಷವೆಂದರೆ ಈವರೆಗೆ ಕರ್ನಾಟಕದಲ್ಲಿ ಹೆಚ್ಚು ಮಾರಾಟವಾದ ಕಲೆಗೆ ಸಂಬಂಧಿಸಿದ ಪುಸ್ತಕವು ಇದೇ ಆಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಜೂನಿಯರ್, ಸೀನಿಯರ್, ವಿದ್ವತ್‌ದರ್ಜೆ ಹಾಗೂ ಎಂ.ಎ. ನೃತ್ಯ ಪದವಿಯ ಪಠ್ಯಕ್ರಮವನ್ನು ಆಧರಿಸಿ ಸಮಗ್ರ ಮಾಹಿತಿಯನ್ನು, ಪ್ರಶ್ನೋತ್ತರದ ಮಾದರಿಯನ್ನು ಹೊಂದಿರುವ ಈ ಪುಸ್ತಕವನ್ನೇ ಹೆಚ್ಚಿನ ನೃತ್ಯಗುರುಗಳು ವಿದ್ಯಾರ್ಥಿಗಳು ಕೈಪಿಡಿಯಂತೆ ಅನುಸರಿಸುತ್ತಿರುವುದು ಜಯಾ ಅವರ ಹೆಚ್ಚುಗಾರಿಕೆ. ಈ ಪುಸ್ತಕ ಕರ್ನಾಟಕದಾದ್ಯಂತ ನೃತ್ಯಕ್ಷೇತ್ರಕ್ಕೆ ಜಯಾರವರನ್ನು ಪರಿಚಯಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದೆ. ಇವರು ಬರೆದ ಮತ್ತೊಂದು ಪುಸ್ತಕ ನೃತ್ಯ ಲಕ್ಷಣಂ ಗ್ರಂಥಕ್ಕೆ ಪ್ರತಿಷ್ಠಿತ ರಾಜ್ಯ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿದೆ. ಇದರೊಂದಿಗೆ ನೃತ್ಯ ಕ್ಷೇತ್ರಕ್ಕೆ ವಚನಕಾರರ ಕೊಡುಗೆ ಎಂಬ ಗ್ರಂಥವನ್ನು ಬರೆದಿದ್ದಾರೆ; ಮಲೇಶಿಯಾ, ಸಿಂಗಪೂರ್, ಥೈಲ್ಯಾಂಡ್, ಟರ್ಕಿ ಸೇರಿದಂತೆ ಹಲವಾರು ದೇಶಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಸೆಮಿನಾರ್‌ಗಳಲ್ಲಿ ಸಂಶೋಧನ ಲೇಖನಗಳನ್ನು ಮಂಡಿಸಿದ್ದಾರಲ್ಲದೆ, ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ನೃತ್ಯ ಕ್ಷೇತ್ರಕ್ಕೆ ೧೨ನೇ ಶತಮಾನದ ವಚನಕಾರರ ಕೊಡುಗೆ  ಈ ಸಂಶೋಧನಾ ಪಿ‌ಎಚ್‌ಡಿ ಮಹಾಪ್ರಬಂಧವನ್ನು ಮಂಡಿಸುವ ಹಂತದಲ್ಲಿದ್ದರೂ ಕೂಡಾ !

ಜಯಾ ಇವರ ನೃತ್ಯ ಕ್ಷೇತ್ರದ ಮಹತ್ತರ ಕೊಡುಗೆಯನ್ನು ಗುರುತಿಸಿದವರು ಬಹಳ ಕಡಿಮೆ. ಅವರ ಧೋರಣೆಗಳನ್ನು ವೈಯಕ್ತಿಕವಾಗಿ ದ್ವೇಷಿಸಿದವರೇ ಹೆಚ್ಚು, ಅವರ ಸಾಧನೆಯನ್ನು ಗುರುತಿಸಿ ಸಾಕಷ್ಟು ಸಂಘ-ಸಂಸ್ಥೆಗಳು ಅವರಿಗೆ ಪ್ರಶಸ್ತಿಗಳನ್ನು, ಸನ್ಮಾನಗಳನ್ನು ನೀಡಿ ಗೌರವಿಸಿವೆ. ಆದರೆ ಸರ್ಕಾರದಿಂದ ಲಭಿಸಲೇಬೇಕಾದ ಪ್ರಶಸ್ತಿಗಳು ಲಭಿಸಲಿಲ್ಲ. ಕಡೆಯಪಕ್ಷ ನೃತ್ಯ ಅಕಾಡೆಮಿಯ ಪ್ರಶಸ್ತಿಯೂ ಜಯರನ್ನು ಅರಸಿ ಬರಲಿಲ್ಲ. ಕೊನೆಗೆ ಅವರ ನಿಧನದ ವಾರ್ತೆಯೂ ಪತ್ರಿಕೆಗಳಲ್ಲಿ ಕಾಣಿಸಲಿಲ್ಲ. ಶ್ರದ್ಧಾಂಜಲಿ ಸಭೆಗಳೂ ನಡೆಯಲಿಲ್ಲ !

ಇನ್ನಾದರೂ ಕಲೆಯ ಕ್ಷೇತ್ರ ವೈಯಕ್ತಿಕದ್ವೇಷ-ಸಂಕುಚಿತ ಮನೋಭಾವನೆಗಳನ್ನು ಬಿಟ್ಟು ಇವರ ಸಾಧನೆಯನ್ನು, ಕೊಡುಗೆಯನ್ನು ಪರಿಗಣಿಸಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಪತ್ರಿಕಾ ಪ್ರಚಾರದಲ್ಲಿದ್ದವರು ಮಾತ್ರವೇ ಸಾಧಕರೆಂಬ ಭ್ರಮಾಲೋಕದಿಂದ ಹೊರಬಂದು ನರ್ತಕಿಯಾಗಿ, ಸಂಶೋಧಕಿಯಾಗಿ, ದಕ್ಷ ಆಡಳಿತಗಾರಳಾಗಿ, ಲೇಖಕಿಯಾಗಿ, ಅದೂ ಯಾವುದೇ ಹಿನ್ನಲೆಯಿಲ್ಲದೆ ಇಷ್ಟು ಎತ್ತರಕ್ಕೆ ಬೆಳೆದ ಸಾಧಕಿಯ ಸಾಧನೆಯನ್ನು ಸ್ಮರಿಸುವ ಮೂಲಕ ಗೌರವಿಸುವುದು ಎಲ್ಲ ನೃತ್ಯಕಲಾವಿದರ ಕರ್ತವ್ಯವೂ ಹೌದು. ತನ್ಮೂಲಕ ಅಬ್ಬರದ ಪ್ರಚಾರವಿಲ್ಲದೆ ತೆರೆಯ ಮರೆಯಲ್ಲಿ ನೃತ್ಯ ಸೇವೆಯನ್ನು ಮಾಡುತ್ತಿರುವ ಅದೆಷ್ಟೋ ಕಲಾವಿದರಿಗೆ ಬೆಳಕಿಮ್ಡಿಯನ್ನಾದರೂ ತೋರಿಸಿದಂತಾಗುತ್ತದೆ.

Leave a Reply

*

code