ಅಂಕಣಗಳು

Subscribe


 

ಕಲಹಾಂತರಿತ

Posted On: Tuesday, October 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ಆರ್. ಗಣೇಶ್

ಅಷ್ಟನಾಯಿಕೆಯರ ಅವಸ್ಥೆಗಳಿಗೆ ಪ್ರತಿಕ್ರಿಯಾತ್ಮಕವಾಗಿ ಅಷ್ಟನಾಯಕಾವಸ್ಥೆಯನ್ನು ರೂಪಿಸಬಹುದಾಗಿದ್ದರೂ ಯಾವ ಲಾಕ್ಷಣಿಕರೂ ಅಂತಹ ಅಭೂತಪೂರ್ವ ಸಾಹಸಕ್ಕೆ ಕೈಹಾಕಿರಲಿಲ್ಲ. ಆದರೆ ಶತಾವಧಾನಿ ಡಾ. ಆರ್. ಗಣೇಶರು ನಾಯಕರ ಸಾಲಿಗೆ ಹೊಸ ಸಂವಿಧಾನವನ್ನೇ ನೀಡಿದ್ದು ; ನಾಯಕಭಾವಕ್ಕೆ ಲಕ್ಷಣಗಳನ್ನೂ, ಲಕ್ಷ್ಯಗೀತಗಳನ್ನೂ ರಾಗ-ತಾಳಬದ್ಧವಾಗಿ ರಚಿಸಿದ್ದಾರೆ. ಈಮೂಲಕ ಇದುವರೆವಿಗೂ ಲಕ್ಷಣಬದ್ಧವಾಗದ ಆದರೆ ಲಕ್ಷಣೀಕರಿಸಲು ವಿಫುಲಾವಕಾಶವಿರುವ ಅಂಶಗಳನ್ನು ಕ್ರೋಢೀಕರಿಸಲಾಗಿದೆ. ರಾಗ-ತಾಳಗಳನ್ನೂ ಸ್ವತಃ ಶತಾವಧಾನಿ ಗಣೇಶರೇ ಸಂಯೋಜಿಸಿದ್ದು ; ನಾಯಕರ ಕುರಿತಾಗಿ ಕಾಡುತ್ತಿರುವ ಸಾಹಿತ್ಯದ ಕೊರತೆಯನ್ನು ತುಂಬಿಕೊಡುವಲ್ಲಿ ಇದು ನಿಜಕ್ಕೂ ಅಸಾಧಾರಣ ಪ್ರಯತ್ನವೇ ಸರಿ. ಇದು ಸಾಂಸ್ಕೃತಿಕ ಪತ್ರಿಕಾಲೋಕದಲ್ಲಿ ಹಿಂದೆಂದೂ ಇಲ್ಲದಂತೆ ನೂಪುರಭ್ರಮರಿಯ ಪಾಲಿಗೆ ವಿಶೇಷವಾಗಿ ಒದಗಿದ್ದು ನಿಜಕ್ಕೂ ಒಂದು ಹೆಮ್ಮೆ ಮತ್ತು ಅಪೂರ್ವ ಅವಕಾಶ. ಪಾಂಥ, ಭಾಮೀನೀಭೀತ, ಅಭಿಸಾರಕ, ನಿರೀಕ್ಷಕ, ವಿರಹಿಯ ನಂತರ ಇದೀಗ ನರ್ಮ ಪ್ರಸಾದಕ ಮತ್ತು ಕಲಹಾಂತರಿತರ ಸರದಿ. ನಮ್ಮ ಈ ಪ್ರಯತ್ನ ನಿಮ್ಮಿಂದ ಸದ್ವಿನಿಯೋಗವಾಗಲಿ…

ಇಲ್ಲಿ ರತಿ ಸ್ಥಾಯಿಭಾವ. ನಾಯಕನ ಪ್ರಿಯೆ ಇಲ್ಲಿನ ಆಲಂಬನ ವಿಭಾವ. ಆಕೆಯ ಹಿಂದಿನ ಪ್ರೀತಿ-ನಡವಳಿಕೆ, ಇಂದಿನ ಬೇಸರ-ಕ್ರೋಧ, ಸುತ್ತಮುತ್ತಲ ಪ್ರಕೃತಿ, ಉಳಿದವರ ನಡವಳಿಕೆಗಳು ಈತನಿಗೆ ಉದ್ದೀಪನ ವಿಭಾವ. ದೈನ್ಯ, ಚಿಂತನ, ಸ್ಮೃತಿ, ಔತ್ಸುಕ್ಯ, ಹರ್ಷ, ಅವಹಿತ್ಥ, ವಿತರ್ಕ ಈತನ ವ್ಯಭಿಚಾರಿಭಾವಗಳು. ವಿವೇಕದ ವರ್ತನೆ, ವ್ಯಥೆ, ನಿರೀಕ್ಷೆ, ವಿಷಾದ, ಕಣ್ಣೀರು, ನಿಟ್ಟುಸಿರು, ನಿರುತ್ಸಾಹ, ಪ್ರಲಾಪ, ನಿಶ್ಶಕ್ತಿ, ನಿರಾಶೆ, ಮುನಿಸು, ಗೊಂದಲ, ಹಿಂದಿನ ಸ್ಮರಣೆ, ಭ್ರಾಂತಿ, ಸಂತಾಪ ಇತ್ಯಾದಿ ಈತನಲ್ಲಿ ಕಂಡುಬರಬಹುದಾದ ಕ್ರಿಯೆಗಳು. ಇವೆರಡೂ ಅವಸ್ಥೆಯ ಅಂತ್ಯಕ್ಕೆ ದೂತಿಯ ಮುಖಾಂತರವೋ ಅಥವಾ ನಾಯಿಕೆಯ ಪುನಾರಾಗಮನದ ನಿರೀಕ್ಷೆಯೋ ಉಂಟಾಗಿ ಗಂಡ ಹೆಂಡಿರ ಜಗಳ ಉಂಡು ಮಲಗುವ ವರೆಗೆ ಎಂಬ ಉಕ್ತಿಗೆ ಪೋಷಣೆಯನ್ನೂ ದೊರಕಿಸಬಹುದು. ಇಲ್ಲಿನ ಸಾಹಿತ್ಯವು ಕಂದಪದ್ಯದಿಂದ ಪ್ರಾರಂಭವಾಗಿ ನಾಯಕನ ಲಕ್ಷಣಗಳನ್ನು ವ್ಯಾಖ್ಯಾನಿಸುತ್ತದೆ. ನಂತರದ ಲಕ್ಷ್ಯಗೀತೆಯಲ್ಲಿ ನಾಯಕನಿಗೆ ಸಂಬಂಧಿಸಿದ ಉದ್ದೀಪನ ವಿಭಾವಗಳ ಸೂಕ್ಷ್ಮಗಳಿವೆ.

ನಾಯಿಕೆಯು ತನ್ನ ಪ್ರಿಯಕರನೊಂದಿಗೆ ಮುನಿಸಿಕೊಂಡು, ಜಗಳವಾಡಿದ್ದನ್ನೇ ನೆಪ ಮಾಡಿಕೊಂಡ ನಾಯಕನು ತನ್ನ ಸ್ವಭಾವಸಹಜ ಪೌರುಷ ವರ್ತನೆಗೆ ಅಪಚಾರವಾಯಿತೆಂದು ತಿಳಿದು, ಬೇಡಿಕೆಗಳಿಗೆ ಬೆಲೆಯಿಲ್ಲದಂತೆ ಮಾಡಿದ ಆಕೆಯ ಮೇಲೆ ಖಿನ್ನನಾಗಿ, ಕುಪಿತನಾಗುತ್ತಾನೆ. ಅದನರಿತು ನಾಯಿಕೆ ಪುನಾ ಬಂದು ರಮಿಸಿ ಬೇಡಿಕೊಂಡರೂ ಆಕೆಯನ್ನು ತಿರಸ್ಕರಿಸುತ್ತಾನೆ. ಆದರೆ ಈ ಘಟನೆಗಳ ತರುವಾಯ ತನ್ನ ವರ್ತನೆಯನ್ನು ಗ್ರಹಿಸಿ, ಕೃತ್ಯಕ್ಕೆ ಮರುಗಿದ ಆತನಲ್ಲಿ ಪಶ್ಚಾತ್ತಾಪದ ಬಿಸಿಯುಸಿರು ಕಾಣಿಸಿಕೊಳ್ಳುತ್ತದೆ. ಅದುವೇ ಆತನನ್ನು ಕಲಹಾಂತರಿತ ನಾಯಕನನ್ನಾಗಿಸುತ್ತದೆ. ಒಂದರ್ಥದಲ್ಲಿ ಈ ನಾಯಕನು ಕಲಹಾಂತರಿತ ನಾಯಿಕೆಯ ಸಂವಾದಿ, ಸಮಾನದುಃಖಿಯಾಗಿಯೇ ಕಾಣಿಸಿಕೊಳ್ಳುತ್ತಾನೆ. ತಳಮಳಿಸಿ ನೋಯ್ವ, ಬೇಯ್ವ ಈತ ತನ್ನ ಪ್ರಿಯೆಯ ತಪ್ಪಿಗೆ ಅಥವಾ ಪ್ರಮಾದಕ್ಕೆ ತಾನು ನೀಡಿದ ಶಿಕ್ಷೆ ದೊಡ್ಡದಾಯಿತೆಂದು ಹಲುಬುತ್ತಾನೆ. ಈ ಪರಿತಾಪ ಆತನ ಸ್ನೇಹಿತರ ಉಪದೇಶದಿಂದಲೂ ಉಂಟಾಗಬಹುದು.

ಪ್ರಿಯೆಯೊಂದಿಗಿನ ಕಲಹದ ಬಳಿಕ ನಾಯಕನ ಮನಸ್ಥಿತಿಯನ್ನು ಈ ಪ್ರಭೇದ ಸ್ಪಷ್ಟವಾಗಿ ನಿರೂಪಿಸುತ್ತದೆ. ಕಲಹಾಂತರಿತನಿಗೆ ಇದೀಗ ಯಾವುದರಲ್ಲೂ ಆಸಕ್ತಿಯಿಲ್ಲದಂತಾಗಿದೆ. ವೇಷಭೂಷಣಗಳು ಅವ್ಯವಸ್ಥಗೊಂಡಿವೆ. ತಾನೇಕೆ ಇಷ್ಟು ಬಿರುಸಿನಿಂದ, ನಿಷ್ಠುರದಿಂದ ವರ್ತಿಸಿದೆನೋ ಎಂದು ವಿಲಪಿಸುತ್ತಾನೆ. ತನ್ನ ವರ್ತನೆ, ಕಳ್ಳಾಟದ ಬಗೆಗೆ ಆತನಿಗೆ ನಾಚಿಕೆಯಾಗುತ್ತದೆ. ಪ್ರಿಯೆ ಮುಗ್ಧೆ, ಬಾಲೆ, ಅಪ್ರಬುದ್ಧೆಯೆಂದೆಲ್ಲಾ ಆಕೆಯನ್ನು ನೆನೆದು, ತನ್ನ ಅದಟು ಅಂತಹವಳ ಮೇಲೆ ಅತಿಯಾಯಿತು ಎಂದು ನೊಂದುಕೊಳ್ಳುತ್ತಾನೆ. ತನ್ನ ಮೇಲೆ ಪ್ರೀತಿಯಿಟ್ಟು ಬಂದ ಅವಳ ಮೇಲೆ ಕೋಪಿಸಿಕೊಂಡು ಕಳಿಸಿರುವುದು ಅತಿಯಾಯಿತೆಂದು ಗ್ರಹಿಸುತ್ತಾನೆ. ಅವಳೊಂದಿಗಿನ ವಾದದಲ್ಲಿ ತನಗೆ ಸೋಲಾದರೆ, ಅದನ್ನೇ ಕಾರಣವಾಗಿಸಿ ಅವಳ ಬಳಿ ತಾನು ಸಿಡಿಲಿನಂತೆ ವರ್ತಿಸುವುದು ಎಷ್ಟರಮಟ್ಟಿಗೆ ಸರಿ ಎಂದು ತನ್ನನ್ನೇ ಪ್ರಶ್ನಿಸಿಕೊಳ್ಳುತ್ತಾನೆ. ಕಾರ್ಯಾರ್ಥವನ್ನೇ ಮುಂದುಮಾಡಿಕೊಂಡು ವಂಚಿಸಿದ್ದನ್ನು ಆಕೆಯಿಂದ ಮರೆಸಿದ್ದಕ್ಕೆ, ಪ್ರತಿಯಾಗಿ ಅವಳಾಡಿದ ಮಾತುಗಳಿಗೆ ತಾನು ಇಷ್ಟು ಪ್ರತಿಕ್ರಿಯಿಸಿರುವುದು ಅತಿಯಾಯಿತು ಎಂದು ಹಳಹಳಿಸುತ್ತಾನೆ. ಪಾಪ, ಅವಳಂತಹ ಮುಗ್ಧೆ ನನ್ನ ಮನಸ್ಸಿನ ಹುಳುಕುಗಳನ್ನು ಹೇಗೆ ತಿಳಿದಾಳು? ಎಲ್ಲರಿಗಿಂತಲೂ ಒಳ್ಳೆಯ ಪತಿಯೆಂಬ ಅಗ್ಗಳಿಕೆಯನ್ನು ಹೊಂದಿರುವ ಅವಳ ಮನಸ್ಸಿನ ನಮ್ಬಿಕೆಗಳನ್ನು ದೂರ ಮಾಡುವುದೇ? ತನ್ನ ವರ್ತನೆ ಇನ್ನು ಮೇಲೆ ಹೇಗಿರಬೇಕು ಎಂದೆಲ್ಲಾ ಹೊಯ್ದಾಡುತ್ತಾನೆ.

ಆದಾಗ್ಯೂ ಮನಸ್ಸಿನಲ್ಲೇ ದೃಢನಿರ್ಧಾರ ಮಾಡಿಕೊಳ್ಳುತ್ತಾ ಜಗದಲ್ಲಿ ದುಡುಕದವರ‍್ಯಾರಿದ್ದಾರೆ? ಪ್ರಣಯದಲ್ಲಿ ಬೇಸರಿಸಿಕೊಳ್ಳದೇ ಇರುವುದುಂಟೇ? ಎಂದು ತಾನೇ ಸಮಾಧಾನಿಸಿಕೊಳ್ಳುತ್ತಾನೆ. ಸಿಡುಕು-ಸೆಡವುಗಳನ್ನು ಬಿಡದಿದ್ದರೆ ಸುಮಧುರ ಸಂಸಾರ ಹೇಗೆ ಸಾಧ್ಯವೆಂಬ ವಿವೇಕದ ನೆರಳು ಅವನಲ್ಲಿ ಮೂಡುತ್ತದೆ. ಒಳಿತಿನ ಆಶಯದ ಅಪೇಕ್ಷೆ, ನಿರೀಕ್ಷೆಯ ಮನಸ್ಸು ಅವನದ್ದಾಗುತ್ತದೆ.

 

ರಾಗ : ಮಾರುಬಿಹಾಗ್; ತಾಳ : ಆದಿ

 

ಲಲಿತಾಂಗಿ ಕಾಂತೆ ಮುನಿಯಲ್

ಕಲಿತಾಮರ್ಷಂ ತಿರಸ್ಕರಿಸಿ ಪೌರುಷದಿಂ |

ವಿಲಪಿಸಿ ಪಶ್ಚಾತ್ತಪಿಪಂ

ಕಲಹಾಂತರಿತಾಖ್ಯನಲ್ತೆ ನಾಯಕನೀತಂ ||

 

ನಾನೇಕೆ ಬಿರುಸಾದೆನೋ -ಪ್ರಕೋಪಿಸಿ |

ಮಾನಿಷ್ಠನೆನೆ ಮೆರೆದನೋ ||ಪ||

 

ಆ ಮುಗ್ಧೆ, ಆ ಬಾಲೆ  ಅಪ್ರಬುದ್ಧೆ

ಸ್ವಾಮಿತ್ವವನು ತೋರೆ ಮುನಿವುದೇ ? || ಅ.ಪ||

 

ಲೀಲಾಖೇಲನಕೌತುಕದಲ್ಲಿ

ಸೋಲಾಗಲು, ಸಿಡಿಲಾಗುವುದೇ ?

ಕೀಲಿಸಿ ಕೆಲಸದ ಜಾಲದೆ, ಮತ್ಪರಿ-

ಶೀಲವ ಮರೆಯಲು ಮುದುಡುವುದೇ ? ||೧||

 

ನನ್ನೀ ಚಿತ್ತದ ಕುತ್ತುಗಳನ್ನಾ

ಚೆನ್ನೆಯು ತಿಳಿಯುವುದೆಂತು ?

ಪನ್ನತಿಕೆಯ ಪತಿಯೆಂಬಗ್ಗಳಿಕೆಯ

ಬನ್ನಗೊಳಿಸುವುದೆ ನಾನಿಂತು ? ||೨||

 

ದುಡುಕದವರಾರು ಈ ಜಗದಲ್ಲಿ

ಮಿಡುಕದವರಾರು ಪ್ರಣಯದಲ್ಲಿ?

ಸಿಡುಕು-ಸೆಡವುಗಳನೆಲ್ಲವನ್ನೂ

ಸಡಲಿಸದಿರೆ ಸಂಸಾರವಿದೇನು ? ||೩||

Leave a Reply

*

code