ಅಂಕಣಗಳು

Subscribe


 

ಸಾಯಿಸುತೆ ಅವರ ‘ನಾಟ್ಯಸುಧಾ’

Posted On: Friday, November 29th, 2013
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ ಬಿ.ಎನ್

(ಕಳೆದ ಸಂಚಿಕೆಯಿಂದ ಮುಂದುವರಿದುದು…)

ಸಾಯಿಸುತೆ ಅವರ ನಾಟ್ಯಸುಧಾ ಕಾದಂಬರಿಯು ಜನಪ್ರಿಯ ಮಾದರಿಯನ್ನು ಅನುಸರಿಸಿದೆ. ನಾಟ್ಯವನ್ನೇ ಆರಾಧಿಸುವ ಕವಿತಾ ಎಂಬ ಯುವತಿಯ ಸುತ್ತ ಹರಡಿಕೊಳ್ಳುತ್ತಾ ಹೋಗುವ ಇದರ ಕಥಾನಕ ಒಂದರ್ಥದಲ್ಲಿ ದಶಕಗಳ ಹಿಂದಿನ ಸಾಮಾಜಿಕ ಕನ್ನಡದ ಸಿನಿಮಾ ತಂತ್ರಗಳಿಗೆ ಸೂಕ್ತವಾಗಿ ಹೊಂದುವ ಕಾದಂಬರಿಯಾಗಿ ನಿರೀಕ್ಷಿತ ಘಟನಾವಳಿಗಳನ್ನು ನಿರೂಪಿಸುತ್ತದೆ ಎಂದರೂ ತಪ್ಪಾಗಲಾರದು.

ಕಾದಂಬರಿಯ ಉದ್ದೇಶ ನಾಟ್ಯವನ್ನು ಸಮಾಜ ನೋಡುವ ಕೀಳು ನೋಟವನ್ನು ದಾಖಲಿಸುವುದು ಮತ್ತು ಅದಕ್ಕೆ ಕಲಾವಿದರ ಪ್ರತಿಕ್ರಿಯೆ ಮತ್ತು ಅವರ ಜೀವನದ ಸ್ಥಿತಿಗತಿಗಳಲ್ಲಿ ಏರುಪೇರುಗಳನ್ನು ತಿಳಿಸುವುದೇ ಆಗಿದೆ. ಇಲ್ಲಿಯೂ ನೃತ್ಯದ ಕುರಿತಾಗಿ ಜನಸಾಮಾನ್ಯರ ಭಾವನೆಗಳು, ಕಲಾವಿದರ ತುಮುಲಗಳು, ಪೋಷಕರ ವರ್ತನೆ, ನೃತ್ಯವನ್ನು ಮುಂದುವರಿಸಲಾಗದ ಅನಿವಾರ್ಯತೆ, ಮಧ್ಯಮ ವರ್ಗದ ಸಾಮಾಜಿಕ ಸಂರಚನೆಯ ವ್ಯತ್ಯಾಸಗಳು, ಕಲಾವಿದರಿಗೆ ದೊರಕಬೇಕಾದ ಪ್ರೋತ್ಸಾಹದ ಒತ್ತಾಸೆ, ಪ್ರಸಿದ್ಧಿ-ಹಣದಾಸೆ ಬಂದಾಕ್ಷಣ ಬದಲಾಗುವ ಕಲಾವಂತಿಕೆ, ಪ್ರೇಕ್ಷಕರ ಅಭಿರುಚಿಯ ಸಾಧ್ಯತೆ, ಮದುವೆಯೆಂಬ ತಡೆಗೋಡೆ, ಕಲೆಯನ್ನು ಅಭಿಮಾನಿಸದ ಸಂಗಾತಿಯಿಂದ ಸಾತ್ವಿಕ ಕಲಾವಿದೆಯ ಕಲಾಜೀವನದ ಅಂತ್ಯ, ಆಕೆಯ ಕಲಾತೃಷೆಯನ್ನು ಅಡಗಿಸಿಡಲಾಗದ ಸಂಕಟವನ್ನು ಇಲ್ಲಿ ಸಾದ್ಯಂತವಾಗಿ ನಿರೂಪಿಸಲಾಗಿದೆ.

ಕಾಮ-ಪ್ರೇಮಗಳ ಇತ್ಯಾತ್ಮಕ ಮತ್ತು ನೇತ್ಯಾತ್ಮಕ ದೃಷ್ಟಿಕೋನಗಳೆರಡನ್ನೂ ನಾಟಕೀಯವಾಗಿ ಈ ಕಾದಂಬರಿ ಬಳಸಿಕೊಂಡಿದೆ. ಸಾತ್ತ್ವಿಕಗುಣದ ಪ್ರತಿಫಲನ ಹೆಚ್ಚು. ಇಲ್ಲಿನ ಪ್ರಧಾನ ಪಾತ್ರದಲ್ಲಿ ಸಾತ್ತ್ವಿಕ ಅಭಿನಯವನ್ನೂ; ಉಪಪಾತ್ರಗಳಲ್ಲಿ ಆಂಗಿಕವನ್ನೂ ಕಾದಂಬರಿಕಾರರು ಚರ್ಚಿಸಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಸಂದೇಶ, ಕಲಾಮೀಮಾಂಸೆ, ನಾಟ್ಯ ವರ್ಣನೆ, ಕಲೆಯ ಹಿರಿಮೆ, ಹೊಯ್ಸಳರ ದೇವಾಲಯ ಭೇಟಿ ಮತ್ತು ಆಸ್ವಾದನೆ..ಹೀಗೆ ಅಗತ್ಯ ಪೂರಕ ಹಿನ್ನಲೆಗಳನ್ನು ಕಾದಂಬರಿ ಅಳವಡಿಸಿಕೊಂಡಿದ್ದು; ಕೇವಲ ಒಂದೂವರೆ ದಶಕಗಳ ಹಿಂದೆ ಬರೆದಿರುವ ಕಾದಂಬರಿಯಾದರೂ ಇಲ್ಲಿ ಪ್ರಸ್ತಾಪವಾಗುವ ನೃತ್ಯದ ಕುರಿತ ಹೇಳಿಕೆ ಮತ್ತು ವರ್ಣನೆಗಳು ನೃತ್ಯವನ್ನು ಕೀಳಾಗಿ ಕಾಣುತ್ತಿದ್ದ ದಶಕಗಳ ಕಥೆಯನ್ನು ಹೇಳಿದಂತೆ ಭಾಸವಾಗುತ್ತದೆ.

ಹಾಗಾಗಿ ಕೆಲವೊಂದು ಘಟನೆಗಳ ವಿನಾ ಬಹುಪಾಲು ಕಥಾ ಎಳೆಯು ನೃತ್ಯದ ಕುರಿತ ನಂಬಿಕೆಗಳಿಗೆ ಪ್ರಸ್ತುತವೆಂಬಂತೆ ತೆರೆದುಕೊಳ್ಳುವುದಿಲ್ಲ ಮತ್ತು ನೃತ್ಯದ ಕುರಿತಾದ ಮುಕ್ತ ಮತ್ತು ಮಡಿವಂತಿಕೆಯ ನಿಯಮಗಳ ನಿರೂಪಣೆಗಿಂತಲೂ ಹೆಚ್ಚಾಗಿ ನೃತ್ಯದ ಕುರಿತಾದ ಸಮಾಜ, ಕುಟುಂಬದ ಮುಕ್ತ ಮತ್ತು ಕಟ್ಟುಪಾಡಿನ ನಿಯಮಗಳನ್ನು ಈ ಕಾದಂಬರಿಯು ವಿವೇಚಿಸುತ್ತಾದ್ದರಿಂದ ಈ ಹಿಂದಿನ ಸಂಚಿಕೆಗಳಲ್ಲಿ ವಿವರಿಸಿದ ಕಾದಂಬರಿಗಳ ಸ್ವರೂಪಕ್ಕಿಂತ ವಿಭಿನ್ನವಾದ ಆಯಾಮ ಇದಕ್ಕಿದೆ. ಈ ಕಾದಂಬರಿಯು ಬೌದ್ಧಿಕ ಚರ್ಚೆಗಳ ಪ್ರಾತ್ಯಕ್ಷಿಕೆಯನ್ನಾಗಲೀ, ಚಿಂತನಕ್ಕೆ ಹಚ್ಚುವಂತ ಪಾತ್ರಗಳನ್ನಾಗಲೀ, ಸಾಂದ್ರವಾದ ನಿರೂಪಣೆಯನ್ನಾಗಲೀ ಹೊಂದದೆ ಕಥೆಯನ್ನಷ್ಟೇ ಬೆಳೆಸುವ ಮತ್ತು ಅದರಿಂದ ಒಂದಷ್ಟು ಪ್ರಸ್ತುತ ಸವಾಲು-ಸಮಸ್ಯೆಗಳನ್ನು ನಿರೂಪಿಸುವಲ್ಲಿ ನೇರವಾದ ಹಾದಿಯನ್ನು ಹಿಡಿದಿದೆ.

ಕಥಾನಾಯಕಿ ಕವಿತಾ ನಾಟ್ಯಪ್ರವೀಣೆ, ನಾಟ್ಯಸುಧಾ ಎಂಬ ಬಿರುದು ಪಡೆದವಳು; ಚೆಲುವೆ; ನರ್ತನವನ್ನೇ ತನ್ನ ಆಂತರಂಗಿಕ ಭಾಷೆಯನ್ನಾಗಿಸಿಕೊಂಡ ಮೃದು ಮಧುರ ಸ್ವಭಾವದ ಹುಡುಗಿ. ಆದರೆ ಅವಳ ಮನೆಯವರದ್ದು ವ್ಯತಿರಿಕ್ತ ವರ್ತನೆ. ನೃತ್ಯವು ಕುಲೀನ ಮನೆತನದವರಿಗಲ್ಲ, ಅದೊಂದು ವೇಶ್ಯೆಯರು ಅಳವಡಿಸಿಕೊಳ್ಳಬೇಕಾದ ಕೆಳಮಟ್ಟದ ಕಲೆಯೆಂದು ದ್ವೇಷಿಸುವ ತಂದೆ, ಮಗಳ ಕಲೆಗೆ ನೀರೆರೆಯುವ ನಿಸ್ಸಹಾಯಕ ತಾಯಿ, ಕಲಾಸಕ್ತನಾಗಿದ್ದರೂ ದೊಡ್ಡವರ ಮುಂದೆ ನಿರುತ್ತರನಾಗಬೇಕಾದ ಒಬ್ಬ ಅಣ್ಣ, ಕಲೆಯ ಬಗೆಗೆ ತಿಳಿವಳಿಕೆಯೇ ಇಲ್ಲದೆ ತಂದೆಯ ಪಡಿಯಚ್ಚಿನಂತಿರುವ ಮತ್ತೀರ್ವರು ಅಣ್ಣಂದಿರು, ಕವಿತಾಳ ಅಂತಃಪ್ರತಿಭೆ ಕಂಡು ತನ್ನ ಸಕಲ ವಿದ್ಯೆಯನ್ನು ಧಾರೆಯೆರೆದು ಆಕೆಯನ್ನು ಪ್ರಸಿದ್ಧಿಗೆ ತರಲು ತವಕಿಸುವ ಗುರು ರಾಜಮ್ಮ, ಆಕೆಯ ಪ್ರತಿಭೆ ಕಂಡು ಕರುಬಿದರೂ ಅವಳಿಗೆ ಪ್ರೋತ್ಸಾಹ, ಇಂಬು ನೀಡುವ ಆಕೆಯ ನೃತ್ಯ ಗೆಳತಿ ಪೂರ್ಣಿಮಾ, ಕವಿತಾಳ ನರ್ತನಕ್ಕೆ ಅಭಿಮಾನಿಯಾಗಿ ಆರಾಧಿಸುತ್ತಾ ಪ್ರೇಮಿಸಿ, ಕ್ರಮೇಣ ಆಕೆಯನ್ನು ಮರೆಯಲು ನೃತ್ಯ, ಕಥಕಳಿಯ ಮೊರೆಹೋಗಿ ಅದರಲ್ಲಿ ತನ್ನ ಸಂತೋಷ, ನೆಮ್ಮದಿ ಹಾಗೂ ಕವಿತಾಳನ್ನು ಕಂಡುಕೊಂಡು ಕಲಾವಿದನಾಗುವ ನಟರಾಜ, ಮಡದಿಯನ್ನು ಪ್ರೀತಿಸಿದರೂ ನೃತ್ಯ ಪ್ರದರ್ಶನ ನೀಡಲು ಒಪ್ಪದಿರುವ ಗಂಡ ಚಂದ್ರಶೇಖರ..ಹೀಗೆ ಜನಪ್ರಿಯ ಕಥಾ ಮಾದರಿಯನ್ನು, ಒಂದರ ಹಿಂದೊಂದು ಹಿಂಬಾಲಿಸುವ ಹೆಚ್ಚೇನೂ ಸಂಭಾಷಣೆಗಳಿಲ್ಲದ, ಪರಿಸ್ಥಿತಿಯನ್ನು ಪುಟ್ಟಪುಟ್ಟ ವಾಕ್ಯಗಳಲ್ಲಿ ಹೇಳಿ ಮುಗಿಸುವ ನಾಟಕೀಯವೆನಿಸುವ ಘಟನೆಗಳ ಸರಣಿಯನ್ನು ಈ ಕಾದಂಬರಿಯು ತನ್ನ ಗರ್ಭದೊಳಗೆ ಹುದುಗಿಸಿಕೊಂಡಿದೆ.

ಗುರು ರಾಜಮ್ಮ ಶಿಷ್ಯರ ಉನ್ನತಿಗಾಗಿ ದುಡಿಯುವ, ಕಲಿಸುವ ಆದರ್ಶ ಗುರುವಿನ ಪ್ರತೀಕ. ಕವಿತಾ ಉದಾತ್ತ ಯೋಚನೆಗಳ, ನಿರ್ವಂಚನೆಯ ಪ್ರತಿಬಿಂಬವಾದರೆ ಪೂರ್ಣಿಮಾ ನೃತ್ಯದ ವ್ಯಾಪಾರೀಕರಣಕ್ಕೆಳೆಸುವ ವಿರೋಧ ವ್ಯಕ್ತಿತ್ವವಾಗಿ ಕಾಣಿಸುತ್ತಾಳೆ. ವ್ಯಾಪಾರೀಕರಣ, ಅಸೂಯೆ, ಶ್ರೀಮಂತಿಕೆಯ ಜೀವನಾಸಕ್ತಿಗೆ ಆಕರ್ಷಿತಳಾಗಿ ನೈತಿಕ ಅಧಃಪತನಕ್ಕಿಳಿಯುವ ಪೂರ್ಣಿಮಾಳ ಪಾತ್ರವನ್ನು ಅನಪೇಕ್ಷಿತವೆಂಬಂತೆ ಕಾಣಿಸಲಾಗಿದೆ. ಪೂರ್ಣಿಮಾ ಅಸೂಯೆ, ಸಾಧನೆ, ನೈತಿಕ ಅಧಃಪತನದ, ನಟರಾಜ ಪ್ರೇಮೋದ್ವೇಗಗಳಿಗೆ ಬದುಕಿನ ವಿವಿಧ ಬೇಕು/ಬೇಡದ ಹಂತಗಳಿಗೆ ಏರುವ ಇಳಿಯುವ ಕಲಾವಿದರ ಪ್ರತೀಕವಾಗುತ್ತಾರೆ.

ಆದರೆ ಕಲಾವಿದರ ನೇತ್ಯಾತ್ಮಕ ಮತ್ತು ಇತ್ಯಾತ್ಮಕ ದೃಷ್ಟಿಕೋನಗಳಿಂದ ನೋಡಿ ಅವರನ್ನು ಮನುಷ್ಯ ಸಹಜವಾಗಿ ಚಿತ್ರಿಸಲು ಸಾಧ್ಯವಾಗದೆ ಇಲ್ಲಿ ಪಾತ್ರಗಳು ಮತ್ತು ಘಟನಾವಳಿಗಳು ಸದಾ ಅವಸರದಲ್ಲಿರುವಂತೆ ಚಿತ್ರಿತವಾಗಿದೆ. ಹೀಗಾಗಿ ಪಾತ್ರಗಳನ್ನು ಪೂರ್ಣವಾಗಿ ಅರಿಯುವ ಮುಂಚೆಯೇ ಅದರ ಕುರಿತ ವಿವರಣೆಗಳು ಮುಕ್ತಾಯವಾಗಿ ಬರೀ ಕವಿತಾಳ ಗುಣ, ರೂಪ, ನಡವಳಿಕೆಗಳ ವೈಭವೀಕರಣದಲ್ಲೇ ಕಥೆ ಮುಂದುವರಿದು ಉಳಿದ ಪಾತ್ರಗಳು ಸವಕಲೆನಿಸಿದೆ. ಕವಿತಾಳು ಬದುಕಿಗಾಗಿ ಕಲೆಯ ವಿಷಯದಲ್ಲಿ ಸಾಕಷ್ಟು ರಾಜಿ ಮಾಡಿಕೊಂಡು ವೈಯಕ್ತಿಕ ಜೀವನವನು ಕಲೆಗಾಗಿ ಮುಡಿಪಿಡುತ್ತಾಳೆ. ಕವಿತಾ ಪಾತ್ರಕ್ಕೆ ಅನಿವಾರ್ಯತೆಗಳ ಸರಪಳಿಗಳು ಕಟ್ಟಿ ಹಾಕಿವೆ.

ಒಂದರ್ಥದಲ್ಲಿ ಬದುಕಿನ ಸಾತ್ತ್ವಿಕತೆಯನ್ನು ಅರಿತರೂ ಅದರ ನಾಟಕೀಯ ಆರೋಪಣೆ ಕಾದಂಬರಿಕಾರರಿಂದ ಒದಗಿದೆ. ಅಂತೆಯೇ ನೃತ್ಯಗಾತಿಯ ಬದಲಾವಣೆಗಳಿಗೆ ಸಮರ್ಥನೆ ನೀಡುವ ಸಂದರ್ಭಗಳೂ ಇಲ್ಲಿ ಕಾಣಸಿಗುವುದಿಲ್ಲ. ಇದರಿಂದಾಗಿ ಈರ್ವರು ನೃತ್ಯಗಾತಿಯರಾದರೂ; ಕೌಟುಂಬಿಕ ಒತ್ತಡಕ್ಕೆ ಸಿಲುಕಿ ನೃತ್ಯಾಭ್ಯಾಸ ತ್ಯಜಿಸಿದ ಕವಿತಾ ಇಲ್ಲಿ ನಾಯಕಿಯಾಗಿಯೂ, ಪೂರ್ಣಿಮಾ ಓರ್ವ ಸಾಧಾರಣ ವ್ಯಕ್ತಿಯಾಗಿಯೂ ಕಾಣಿಸಿಕೊಳ್ಳುತ್ತಾರೆ. ಇದರೊಂದಿಗೆ ಸ್ತ್ರೀಸಹವಾಸದಿಂದಾಗಿ ನಟರಾಜನ ಬದುಕಿನ ವ್ಯಂಗ್ಯ ಮತ್ತು ಪೂರ್ಣಿಮಾಳ ಕೀಳುಕಾಮನೆಗಳ ಫಲವಾಗಿ ಅವಳ ಅಧಃಪತನವನ್ನು ಕಾಣಿಸಿಕೊಡುವುದರಿಂದ ಒಂದರ್ಥದಲ್ಲಿ ಪೂರ್ಣಿಮಾ, ನಟರಾಜರಂತೆ ಬದುಕುವುದಕ್ಕಿಂತ ಕವಿತಾ ನಾಟ್ಯಜೀವನವನ್ನೇ ತ್ಯಜಿಸಿ ಒಳಿತನ್ನೇ ಮಾಡಿದ್ದಾಳೆ, ಅವಳು ಪತನವಾಗದೆ ಪವಿತ್ರ ಮಾರ್ಗ ಆಯ್ದುಕೊಂಡಿದ್ದಾಳೆ ಎಂಬ ಭಾವನೆಯನ್ನು ಕಾಣಿಸಲಾಗಿದೆ. ಆದರೂ ಒಂದು ಹಂತಕ್ಕೆ ನಟರಾಜನನ್ನು ಅನುಕಂಪ, ಕಲಾಜೀವನದ ಅನಿವಾರ್ಯತೆ ಮತ್ತು ಪ್ರಮಾದಗಳನ್ನೆಸಗುವ ವ್ಯಕ್ತಿತ್ವವೆಂಬುದಕ್ಕೆ ಸೀಮಿತವಾಗಿಸಲಾಗಿದೆ. ಕೆಲವೊಂದೆಡೆ ಬದುಕಿನ ಪಾಠ ಹೇಳುವಂತೆಯೂ ಬಿಂಬಿಸಲಾಗಿದೆ. ಹಾಗಾಗಿ ಆತ ಹಲವೆಡೆ ಕಥಾನಾಯಕನಂತೆಯೇ ಕಾಣಿಸಿಕೊಳ್ಳುತ್ತಾನೆ.

ಒಟ್ಟಾರೆಯಾಗಿ ಕಾದಂಬರಿಕಾರರಲ್ಲಿ ಹುದುಗಿರಬಹುದಾದ ಸಾಕಷ್ಟು ಗೊಂದಲಗಳು, ಮುಕ್ತಾಯ-ಆರಂಭಗಳಲ್ಲಿ ಸಾಕಷ್ಟು ನಾಟಕೀಯ ಬೆಳವಣಿಗೆಗಳಾಗಿ ಗೋಚರಿಸುತ್ತವೆ.
ನೃತ್ಯವನ್ನು ಸಂಸ್ಕೃತಿಯೆಂದೂ, ಆಧುನಿಕ ವಸ್ತ್ರವಿನ್ಯಾಸ, ನಡವಳಿಕೆಗಳನ್ನು ಅಸಂಸ್ಕೃತಿಯೆಂದೂ ಅಪರೋಕ್ಷವಾಗಿ (ಚಂದ್ರಶೇಖರನ ತಾಯಿಯ ಪಾತ್ರ-ಸುಲೋಚನಾ) ತಿಳಿಸುವುದರಿಂದ ನೃತ್ಯದ ಆಧುನಿಕತೆಗಿಂತಲೂ ಆಧುನಿಕವೆನಿಸಿದ ಸಮಾಜದ ನಡವಳಿಕೆಗಳು, ವ್ಯಂಗ್ಯಗಳು ಶಾಸ್ತ್ರೀಯ ನೃತ್ಯವನ್ನು ನಡೆಸಿಕೊಳ್ಳುವ ರೀತಿ ಇಲ್ಲಿನ ಕಥಾ ಹಂದರದಲ್ಲೊಂದು. ಹಾಗೆ ನೋಡಿದರೆ ಮಗಳಿಗೆ ಸಂಬಂಧ ಕುದುರಲಿಲ್ಲವೆಂಬ ನೆಪಕ್ಕೆ ಸೋಮಶೇಖರಯ್ಯ ಮನೆ ಬಿಟ್ಟು ಹೋಗುವುದು, ಕವಿತಾಳಿಗೆ ಮದುವೆ ನಿಶ್ಚಯವಾದಾಕ್ಷಣ ವಾಪಾಸ್ಸು ಬರುವುದು, ಚಂದ್ರಶೇಖರ(ಕವಿತಾಳ ಪತಿ)ನ ಸಮರ್ಥನೀಯವಲ್ಲದಂತೆ ಕಾಣುವ ಕಾರಣ ರಹಿತ ನಡವಳಿಕೆಗಳು, ಜೊತೆಗೆ ಹೊಯ್ಸಳರ ಕಲೆ- ನೃತ್ಯಮಾದರಿಗಳನ್ನು, ಮಡದಿಯ ಕಲಾಸೃಷ್ಟಿಯನ್ನು ವೈಯಕ್ತಿಕವಾಗಿ ನೋಡಿ ಆರಾಧಿಸುವ ಚಂದ್ರಶೇಖರನು ; ವೇದಿಕೆಯಲ್ಲಿ ನರ್ತಿಸುವುದು ಎಂದರೆ ಅಂಗಾಂಗ ಪ್ರದರ್ಶನ ಮಾಡುವುದು ಎಂಬ ವೈರುಧ್ಯಮಯ ವರ್ತನೆಯನ್ನು ತೋರುವಲ್ಲಿಗೆ ಅವನನ್ನು ನಾಯಕನೆಂಬಂತೆ ಬಿಂಬಿಸುವುದು, ನಟರಾಜನನ್ನು ವಶೀಕರಿಸಿಕೊಂಡು ತನ್ನ ನೃತ್ಯತಂಡದಲ್ಲಿ ಉಳಿಸಿಕೊಳ್ಳುವ ಹುನ್ನಾರ ಹೂಡುವ ಪೂರ್ಣಿಮಾ ನೃತ್ಯವನ್ನು ಕಸುಬಾಗಿಸಿ ಹಣ ಸಂಪಾದನೆಗೆ, ಆಡಂಬರಕ್ಕೆ, ಶ್ರೀಮಂತ ಜೀವನಕ್ಕೆ ಹೆಚ್ಚು ಒತ್ತು ಕೊಡುವುದು, ನಟರಾಜ ಸುಖಲೋಲುಪತೆಗಳ ಅಮಲಿನಲ್ಲಿ ತನ್ನ ಸಾತ್ವಿಕಪ್ರಜ್ಞೆಯನ್ನು ಕಳೆದುಕೊಂಡು ವಿಚಿತ್ರ ಗಂಭೀರತೆ, ಅಹಂಕಾರಿಯಾಗಿ ಸ್ತ್ರೀಲಂಪಟನಾಗುವುದು, ಆದರೂ ಅವನಿಗೆ ಇರುವ ಕವಿತಾಳ ಕುರಿತ ಸೆಳೆತ ಮತ್ತು ಅಭಿಮಾನ, ಕಡಿಮೆಯಾಗದ ವಿಮುಖತೆ, ಇವರೊಂದಿಗೆ ಪರಿಮಳ ಮುಂತಾದ ಕಲಾವಿದರು ತಮ್ಮ ನೈತಿಕತೆಯನ್ನು ಕಳೆದುಕೊಳ್ಳುವುದು, ಪೂರ್ಣಿಮಾಳ ತಾಯಿ ಆರುಂಡಾಳ್ ತಮ್ಮ ಮಗಳನ್ನು ತುಚ್ಛವಾಗಿ ಕಾಣುವ ಮೂಲಕ ನಾಟಕೀಯತೆಯನ್ನು ಕಾಣಿಸಿಕೊಟ್ಟು ಕೊನೆಯ ಕ್ಷಣಗಳಲ್ಲಿ ಕವಿತಾಳ ನೃತ್ಯ ನೋಡಬೇಕೆಂಬ ಆಶಯ ವ್ಯಕ್ತಪಡಿಸಿ ಅದನ್ನು ನೋಡುತ್ತಲೇ ಮರಣಿಸುವುದು, ನೃತ್ಯವನ್ನು ನೋಡುವ ಬಹುಪಾಲು ಮಂದಿ ಕಲಾವಿದರ ಸೌಂದರ್ಯವನ್ನೇ ಆರಾಧಿಸುವರೆಂಬ ಚಿಂತನೆ, ನಟರಾಜ ತನ್ನ ಅವಗುಣಗಳಿಂದ ಪೂರ್ಣ ನಿಶ್ಯಕ್ತನಾಗಿ ನೃತ್ಯವಾಡದ ಸ್ಥಿತಿಗೆ ಬಂದಾಗ, ಪೂರ್ಣಿಮಾ ಚಂದ್ರಶೇಖರನಿಗೆ ನಟರಾಜನ ಪ್ರೇಮ ತಿಳಿಸಿ ಅವನ ಮುಂದೆ ಕವಿತಾಳನ್ನು ನೃತ್ಯವಾಡಲು ಕೇಳಿಕೊಳ್ಳುವುದು, ಅವಳು ನರ್ತಿಸಿದಾಕ್ಷಣ ಅವನಲ್ಲಿನ ಚೈತನ್ಯ ಉದ್ದೀಪನಗೊಂಡು ಅವನು ಆರೋಗ್ಯವಾಗುವುದು, ಮಡದಿಯನ್ನು ನಟರಾಜನಿಗೆ ತ್ಯಾಗ ಮಾಡಿ ಅವಳ ನಾಟ್ಯಜೀವನ ಉದ್ಧರಿಸುವ ಯೋಚನೆ ಬಂದಾಗ ಕವಿತ ಚಂದ್ರಶೇಖರನನ್ನೇ ನೆಚ್ಚಿಕೊಳ್ಳುವುದು ಮುಂತಾದವುಗಳಿಂದಾಗಿ ಪಾತ್ರಗಳನ್ನು ವಿನಾಕಾರಣ ಉತ್ಪ್ರೇಕ್ಷೆಗೊಳಿಸಲಾಗಿದೆ ಎಂದು ಭಾಸವಾಗಿ ಕಥಾ ಹಂದರವು ಅಲ್ಲಲ್ಲಿ ದುರ್ಬಲವೆನಿಸಿ ಸಿನಿಮೀಯ ಕಲ್ಪನೆಗಳನ್ನು ಮಾತ್ರ ಕೊಡುತ್ತ್ತದೆ.

ಕವಿತಾಳ ಸುತ್ತ ಕಥೆ ಹೆಣೆದರೂ ನೃತ್ಯಜೀವನಕ್ಕೆ ಸಂಬಂಧವಿಲ್ಲವೆಂಬಂತೆ ಅಲ್ಲಲ್ಲಿ ನಿರೂಪಿತವಾಗುವ ಕೌಟುಂಬಿಕ ಘಟನೆಗಳು ಕಾದಂಬರಿಯ ವಸ್ತುವಿನ ಸಾಂದ್ರತೆಯನ್ನು ಮಂಕಾಗಿಸಿ, ಬೇಕೆಂದೇ ಕಥೆಯನ್ನು ಎಳೆದಿದ್ದಾರೆ ಎಂಬ ಭಾವನೆ ಮೂಡಿಸುತ್ತದೆ. ಹಾಗಾಗಿ ಕವಿತಳನ್ನುಳಿದು ಉಳಿದವರ ಪಾತ್ರಪೋಷಣೆ ಅಷ್ಟೊಂದು ಗಮನಾರ್ಹವಾಗಿ ಆಗಿಲ್ಲವೆಂದು ತೋರುವುದು ಸಹಜ. ಆದರೂ ಇಂದಿಗೂ ಮಸುಕಾಗಿ ತೋರುವ ಕೆಲವು ನೃತ್ಯದ ಕುರಿತಾದ ಸಾಮಾಜಿಕ ನಡವಳಿಕೆಗಳನ್ನು, ಮಡಿವಂತಿಕೆಯನ್ನು, ನೃತ್ಯ ಕಲಾವಿದರ ಎರಡು ಮುಖಗಳನ್ನು ಕಾಣಿಸಿಕೊಡುವಲ್ಲಿ ಕಾದಂಬರಿಯು ಪ್ರಮುಖವೆನಿಸುತ್ತದೆ.

ಕಾದಂಬರಿಕಾರರಿಗೆ ನೃತ್ಯಕಲಾವಿದೆ ಕವಿತಾ ಪಾತ್ರಕ್ಕೆ ಸರಿಯಾದ ನ್ಯಾಯ ಒದಗಿಸಿ ಕೊಡಲಿಲ್ಲ ಎನ್ನುವ ಗೊಂದಲವಿರುವುದು ಸ್ಪಷ್ಟವಾಗಿದ್ದು; ಒಂದುವೇಳೆ ತಡವಾಗಿ ಕಾದಂಬರಿಯನ್ನು ಬರೆದಿದ್ದರೆ ಆರಂಭ ಮತ್ತು ಮುಕ್ತಾಯ ವಿಭಿನ್ನ ರಿತಿಯಲ್ಲಿ ಇರುತ್ತಿತ್ತು ಎಂಬ ಭಾವನೆಯನ್ನು ; ‘ಶಾಸ್ತ್ರೀಯವಾದ ಪರಂಪರೆಯನ್ನು ಅದರ ಶುದ್ಧ ಶೈಲಿಗೆ ಧಕ್ಕೆಯಾಗದಂತೆ, ಆಧುನಿಕ ಜನಜೀವನಕ್ಕೆ ಅನುಗುಣವಾಗಿ ರೂಪಿಸಿಕೊಳ್ಳಲು ಸಾಧ್ಯವೇ ಎಂಬ ಪರಿಶೀಲನಾರ್ಹ ಪ್ರಶ್ನೆಯನ್ನು ಸ್ವತಃ ಸಾಯಿಸುತೆಯವರೇ ತಮ್ಮ ಕಾದಂಬರಿಯ ಬೆನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ.

ಬಂಡ್ರಿಕರಣಂ ಸತ್ಯನಾರಾಯಣ ರಾವ್ ಅವರ ‘ಅಭಿನೇತ್ರಿ’

ಕಾದಂಬರಿಯು ದೇವದಾಸಿಯೊಬ್ಬಳ ಮಗಳು ತಾಯಿಯಂತಾಗದೆ ತನ್ನ ನಾಟ್ಯಪ್ರತಿಭೆಯಿಂದ ಚಿತ್ರತಾರೆಯಾಗಿ ಅಲ್ಲಿನ ಸ್ವಚ್ಛಂದ ಬದುಕಿನೊಂದಿಗೆ ರಾಜಿ ಮಾಡಿಕೊಳ್ಳದೆ ತನ್ನ ಪ್ರಸಿದ್ಧಿಯ ವರ್ತಮಾನದಲ್ಲೇ ಆ ರಂಗದಿಂದ ನಿರ್ಗಮಿಸಿ, ತನ್ನ ಆದರ್ಶದ ಕಲಾರಂಗಕ್ಕೆ ಮರಳಿ ಬಂದು ಅಲ್ಲೂ ಸುಖಿಯಾಗದೆ ಸಂಶಯದಿಂದ ಮನೋರೋಗಿಯಾಗಿ ಸಾವನ್ನಪ್ಪುವ ದುರಂತ ಕಥಾನಕವನ್ನು ಹೊಂದಿದೆ.

ಇದೂ ಕೂಡಾ ನಾಟ್ಯಸುಧಾದಂತೆ ಜನಪ್ರಿಯ ಬರಹ ಶೈಲಿಯನ್ನು ಅವಲಂಬಿಸಿದ್ದು ಸಿನಿಮೀಯ ಘಟನೆಗಳೊಂದಿಗೆ ಮುಕ್ತಾಯ ಕಾಣುತ್ತದೆ. ಮಧುಮತಿಯ ತಾಯಿ ದೇವದಾಸಿ ನರ್ತಕಿಯಾಗಿ ಬದುಕಿನ ಕಹಿ ಉಂಡವಳು. ಆದರೆ ಆಕೆಯ ಮಗಳು ಕಥಾನಾಯಕಿ ಮಧುವಂತಿ ಜೀವನದ ಸಾಫಲ್ಯ ಬಯಸುವವಳು. ಆದರೆ ಮಧುಮತಿಯ ಸಮರ್ಪಣಾ ಭಾವ, ನಾಟ್ಯಪ್ರಾವೀಣ್ಯತೆ, ಅಹಂಕಾರ-ಯೌವನದಿಂದ ಮದೋನ್ಮತ್ತಳಾಗಿ ತನ್ನ ಉನ್ನತಿಗೆ ಕಾರಣರಾದವರನ್ನು ಮರೆತು ಬೆಳೆದು, ಕೊನೆಗೆ ತನ್ನ ತಪ್ಪಿನ ಅರಿವಾಗಿ, ಪಶ್ಚಾತ್ತಾಪ ಪಟ್ಟು ಜೀವನವನ್ನು ಸರಿಪಡಿಸಿಕೊಳ್ಳುತ್ತಾಳೆ. ತನ್ನ ಪತಿ ಗೋಪಿ ಮತ್ತು ಯಶೋದಾ ಪತ್ರಗಳನ್ನು ಸಂದೇಹಿಸಿದುದರ ಫಲವಾಗಿ, ಯಶೋದಾ ಆತ್ಮಹತ್ಯೆ ಮಾಡಿಕೊಂಡಾಗ ಮನೋವಿಕಾರದಿಂದ ಬಳಲಿ ಸಾಯುವುದರ ಮೂಲಕವಾಗಿ ನೃತ್ಯಗಾತಿಯ ಬದುಕನ್ನು ಚಿತ್ರಿಸುವುದರ ಜೊತೆಗೆ ಸಂಶಯ, ವಿಕಾರದಿಂದ ಮನುಷ್ಯನ ಅವಸಾನವಾಗುವ ಸಂದೇಶ ನೀಡುತ್ತಾರೆ.

‘ನರ್ತನ ವಿದ್ಯೆ ಎಲ್ಲರಿಗೂ ಸುಲಭವಾಗಿ ದಕ್ಕುವುದಲ್ಲ. ಹಲವಾರು ವರುಷಗಳ ಕೃಷಿ ಬೇಕು. ವಂಶಪಾರಂಪರ್ಯವಾಗಿ ಬಂದ ಕಲೆ ನಾಟ್ಯವಿದ್ಯೆಯಲ್ಲಿ ಕೀರ್ತಿ ಶಿಖರವನೇರಿಸುತ್ತದೆ. ಯಾವ ಕಾಲಕ್ಕೂ ಧನಮದ, ಕೀರ್ತಿಮದ, ಯೌವನ ಮದ, ಅಧಿಕಾರ ಮದ ಆವರಿಸದಿರಲಿ, ನಾಟ್ಯದ ಕುರಿತು ಸಮರ್ಪಣಾಭಾವ ಹೆಚ್ಚಾಂದತೆಲ್ಲಾ ಅಹಂಕಾರ, ಗರ್ವ ಬೆರು ಸಹಿತ ಕಿತ್ತು ಬೀಳುತ್ತದೆ. ಆಗ ನೃತ್ಯದಲ್ಲಿ ಸಂಪೂರ್ಣತೆ ಲಭಿಸುತ್ತದೆ’ (ಪು.18) ಎಂಬ ನೃತ್ಯ ಗುರು ಭಾಗವತರ ಹಿತವಚನ ನೃತ್ಯದ ಕುರಿತ ನೋಟಗಳನ್ನು ಕಾದಂಬರಿಯು ಕೊಡುತ್ತದಾದರೂ ಗುರು ಭಾಗವತರ ಪ್ರಾಮುಖ್ಯತೆ ಗಮನಾರ್ಹವಾಗಿ ತೋರಿಬಂದಿಲ್ಲ; ಮತ್ತು ನಿರೂಪಣೆ ಮತ್ತು ವಾಕ್ಯನಿರ್ಮಾಣದಲ್ಲಿ ಬಿಗಿಯಿಲ್ಲದಿರುವಿಕೆಯಿಂದಾಗಿ ಕಾದಂಬರಿಯ ಕಥೆ, ನಿರೂಪಣೆ ಪೇಲವವೆನಿಸಿ ನೃತ್ಯಕ್ಕೆ ಕಾದಂಬರಿಯಲ್ಲಿ ನೀಡಬಹುದಾಗಿದ್ದ ಉತ್ತಮ ಅವಕಾಶಗಳು ಕೈತಪ್ಪಿದಂತಾಗಿದೆ. ಕಥಾಸಂದರ್ಭಕ್ಕೆ ಪೂರಕವಾಗಿ ದೇವಾಲಯದ ಚಿತ್ರಣ, ಸ್ವಲ್ಪ ಮಟ್ಟಿಗೆ ದೇವದಾಸಿಯ ಬದುಕು, ಜನರ ದೃಷ್ಟಿಯನ್ನು ನಿರೂಪಿಸಿದ್ದರೂ ಕತೆಯನ್ನು ನಿರೂಪಿಸುವ ಹಂತಗಳೂ ಅಷ್ಟೊಂದು ಪರಿಣಾಮಕಾರಿಯಾಗದೆ ನೃತ್ಯವೆಂಬುದು ಕೇವಲ ಒಂದು ಕಥಾ ನಿರೂಪಣೆಯ ವಿಸ್ತಾರದಲ್ಲಿ ಒಂದು ಕೊಂಡಿಯಂತಷ್ಟೇ ಬಳಕೆಯಾಗಿರುವುದನ್ನು ನೋಡಬಹುದು.

ಇಲ್ಲಿ ಪ್ರೇಮವು ಕಲಾವಿಮುಖವಾಗಿ ಸಾಗುವ ಮನಸ್ಸನ್ನು ಹಿಡಿದಿರಿಸುವ ಸಂಕೇತದಂತೆ ತೋರುತ್ತದೆ. ನರ್ತಕಿಯರು ಮಹತ್ವಾಕಾಂಕ್ಷಿಗಳಾಗಿ ಮನೋರೋಗಿಯ ಮಟ್ಟಕ್ಕೆ ಹೋಗುವುದನ್ನೂ ಚಿತ್ರಿಸಲಾಗಿದೆ. ಹಾಗಾಗಿ ಕಾದಂಬರಿ ತಾತ್ತ್ವಿಕ ಮಟ್ಟದ ವಿಮರ್ಶೆ, ಘರ್ಷಣೆಗಳನ್ನಷ್ಟೇ ಸ್ಪರ್ಶಿಸುತ್ತದೆ. ಸಿನಿಮೀಯವಾದ, ಅತಿರಂಜಿತವೆನಿಸುವ ಪಾತ್ರಾಭಿವ್ಯಕ್ತಿ ಮತ್ತು ನೃತ್ಯ ವಿವರಣೆಗಳು ಹೆಚ್ಚಿಗೆ ಲಭ್ಯವಾಗುವುದರಿಂದಾಗಿ ನರ್ತಕರ ಬದುಕು ನೃತ್ಯ ವಿವರಣೆಗಳ ಮೇಲೆ ಪಾರಮ್ಯ ನಡೆಸುವಂತೆ ಭಾಸವಾಗುತ್ತದೆ. ಹಾಗಾಗಿ ‘ಅಭಿನೇತ್ರಿ’ಯಲ್ಲಿ ಎಲ್ಲಾ ಅಭಿನಯಾಂಗಗಳ ಅಂಶಗಳೂ ಸೊರಗಿದೆ.

ಸಮಾರೋಪ : ಕನ್ನಡ ಸಾಹಿತ್ಯದಲ್ಲಿ ನೃತ್ಯಾಧಾರಿತ ಚಿತ್ರಣಗಳು ಸದೃಢವಾಗಿ ತೆರೆದುಕೊಂಡಿರುವುದು ತೀರಾ ವಿರಳ ಎಂಬುದನ್ನು ಈವರೆಗಿನ ಕಾದಂಬರಿಗಳ ವಿಶ್ಲೇಷಣೆಯಲ್ಲಿ ಕಂಡುಕೊಳ್ಳಬಹುದಾಗಿದೆ. ಅದರಲ್ಲೂ ನೃತ್ಯವನ್ನೇ ವಸ್ತುವಾಗಿ ಆಧರಿಸಿದ ಸಾಮಾಜಿಕ ಕಾದಂಬರಿಗಳು ಬೆರಳೆಣಿಕೆಯಷ್ಟು. ಉಳಿದಂತೆ ಅಲ್ಲೊಂದು ಇಲ್ಲೊಂದು ಎಂಬಂತೆ ಬಂದುಹೋಗುವ ವಿವರಣೆಗಳು, ಪೂರಕ ಘಟನೆಗಳೇ ಹೆಚ್ಚು. ಒಟ್ಟಾರೆಯಾಗಿ ಈವರೆಗೆ ಬಂದಿರುವ ಕಾದಂಬರಿಗಳಲ್ಲಿ ನೃತ್ಯದ ಮತ್ತು ನರ್ತಕರು ಅನುಸರಿಸಬೇಕಾದ ಉದಾತ್ತತೆಯನ್ನು ಪ್ರತಿಪಾದಿಸುವುದರೊಂದಿಗೆ ವಿಚಾರ ಮಂಥನ, ಬದುಕು, ಬವಣೆ, ಸವಾಲು, ಸಮಸ್ಯೆ, ಸ್ಪರ್ಧೆ, ದೌರ್ಬಲ್ಯ, ಕಲಿಕೆಯ ಮಟ್ಟ, ಬದಲಾವಣೆಯ ಬೀಸುವಿಕೆಗಳ ಚಿತ್ರಣ ಪ್ರಧಾನವಾಗಿ ಕಂಡುಬರುತ್ತದೆ.

ನೃತ್ಯಾಧಾರಿತ ಐತಿಹಾಸಿಕ ಕಾದಂಬರಿಗಳ ಅಧ್ಯಯನವೂ ಈ ನಡೆಯಲ್ಲಿ ಹೊಸ ಅನ್ವೇಷಣೆಗಳನ್ನು ಕಾಣಿಸಿಕೊಡುತ್ತದೆ. ಆದರೆ ಈಗಾಗಲೇ ಹೊರಬಂದಿರುವ ಐತಿಹಾಸಿಕ ಕಾದಂಬರಿಗಳು ನಾಟ್ಯರಾಣಿ ಶಾಂತಲೆಯನ್ನೇ ಪ್ರಧಾನವಾಗಿಸಿ ಬಂದಿರುವುದರಿಂದ ವಿವಿಧ ವಸ್ತುಗಳ ಕುರಿತು ಬರೆಯಲ್ಪಡುವ ಕಾದಂಬರಿಗಳು ಸಾಹಿತ್ಯದ ಗದ್ಯಭಾಗಕ್ಕೆ ನೀಡುವ ಐತಿಹಾಸಿಕ ದೃಷ್ಟಿಕೋನವನ್ನು ಮತ್ತಷ್ಟು ವಿಸ್ತೃತವಾಗಿಸುತ್ತದೆ. ಇದರ ಹೊರತಾಗಿಯೂ ಭಾರತದ ಎಲ್ಲಾ ಭಾಷೆಗಳ ಸಾಹಿತ್ಯದಲ್ಲಿ ಬಂದಿರುವ ನೃತ್ಯದ ಕುರಿತ ಕಾದಂಬರಿಗಳ ಅಧ್ಯಯನವು ಭಾರತೀಯ ಸಾಹಿತ್ಯವು ನೃತ್ಯವನ್ನು ದುಡಿಸಿಕೊಂಡ ರೀತಿ ಮತ್ತು ಆ ಮೂಲಕವಾಗಿ ನೃತ್ಯ ಮತ್ತು ಸಾಹಿತ್ಯದ ಸಮಾನಮುಖೀ ಬೆಳವಣಿಗೆಗಳ ಕುರಿತು ಹೆಚ್ಚಿನ ಬೆಳಕು ಚೆಲ್ಲಲು ಸಾಧ್ಯವಿದೆ.

ಆದಾಗ್ಯೂ ನೃತ್ಯ ಅಥವಾ ಕಲಾ ಜಗತ್ತಿನ ಒಳಸುಳಿ, ಹರಿವು, ಒಳತೋಟಿ, ಅಂತರಂಗವನ್ನು ಚಿಂತನಾರ್ಹವಾಗಿ ವಿವಿಧ ಬಗೆಯಲ್ಲಿ ಕಾಣಿಸುವ ಕಾದಂಬರಿಗಳು ಹೊರಬರಬೇಕಾಗಿದೆ. ಕಾದಂಬರಿಗಳ ವಸ್ತು ಮತ್ತು ನಿರೂಪಣಾ ತಂತ್ರಗಳು ಬಿಗಿಯಾಗಿದ್ದಷ್ಟೂ ಅದನ್ನು ವಿವಿಧ ಮಾಧ್ಯಮಗಳಾದ ರಂಗಭೂಮಿ, ಸಿನಿಮಾಗಳಲ್ಲಿ ಅನ್ವಯಿಸಿ ಉತ್ತಮ ಪ್ರತಿಫಲನ ಮತ್ತು ಸ್ಪರ್ಶವನ್ನು ಕಂಡುಕೊಳ್ಳಬಹುದು.

(ಮುಗಿಯಿತು)

Leave a Reply

*

code