ಅಂಕಣಗಳು

Subscribe


 

ನೃತ್ಯದಲ್ಲಿ ಕನ್ನಡಪರವಾದ ಸಾಹಿತ್ಯಚಿಂತನೆ- ತಪ್ಪೇನು?

Posted On: Friday, May 29th, 2015
1 Star2 Stars3 Stars4 Stars5 Stars (No Ratings Yet)
Loading...

Author: Editor

ಕಳೆದ ಸಂಚಿಕೆಯಲ್ಲಿ ಕನ್ನಡಪರವಾದ ಸಾಹಿತ್ಯಚಿಂತನೆ ನೃತ್ಯದಲ್ಲಿ ಬೆಳೆದುಬರಬೇಕೆಂಬ ಆಶಯವನ್ನು ಧ್ವನಿಸುವ ಹೊತ್ತಿಗೇ  ಈ ಸಲ ಕನ್ನಡ ರಾಜ್ಯೋತ್ಸವ ಕಣ್ಣೆದುರಿಗಿದೆ. ಉತ್ಸವದ ಸಂಭ್ರಮಕ್ಕೆ ಸವಾಲೆಸೆಯುವಂತೆ ಸುಪ್ರೀಂಕೋರ್ಟ್ ಪ್ರಾಥಮಿಕ ವಿದ್ಯಾಭ್ಯಾಸದಲ್ಲಿ ಕನ್ನಡ ಭಾಷಾಮಧ್ಯಮ ಕಲಿಕೆ ಹೇರಬರದೆಂದು ನಿರ್ಣಯವನ್ನೂ ಕೊಟ್ಟಿದೆ. ಕರ್ನಾಟಕ ಮತ್ತು ನೆರೆಯ ರಾಜ್ಯಗಳ ನಡುವಿನ ಹಲವು ವಾಗ್ವಾದದ ಕಿಡಿಗಳೂ ಬೇರೆ ಬೇರೆ ವಿಷಯಗಳಿಗಾಗಿ ಹೊತ್ತಿಕೊಂಡಿವೆ. ಈ ಸಂದರ್ಭಕ್ಕೆ ಕಲೆಯಲ್ಲಿ ಭಾಷೆಯ ಕಾಣ್ಕೆಗಳ, ಗೊತ್ತುಗುರಿಗಳ ಕುರಿತು ಕಳೆದ ಸಂಚಿಕೆಯಂತೆಯೇ ಮತ್ತೊಮ್ಮೆ ಮಂಥನ ಮಾಡೋಣವೆಂದು ಈ ಸಂಚಿಕೆಯಲ್ಲಿಯೂ ಕೈಗೆತ್ತಿಕೊಳ್ಳಲಾಗಿದೆ.

ಕೆಲವೊಂದು ಕಪೋಲಕಲ್ಪಿತ ಭಾವನೆಗಳಿವೆ. ಅದನ್ನು ಮೊದಲು ವಿಶ್ಲೇಷಿಸೋಣ. ‘ಭರತನಾಟ್ಯ ತಮಿಳ್ನಾಡಿನ ತವರುನೆಲದ್ದು, ಕರ್ಣಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜರು ತೆಲುಗರು.’ ಅದಕ್ಕೆ ತಕ್ಕಂತೆ ತಮಿಳರೂ ಕೂಡಾ ‘ಭರತನಾಟ್ಯ ನಮ್ಮ ಆಸ್ತಿ’ ಎಂದು ಕರೆದುಕೊಳ್ಳುವುದೂ ಇದೆ. ನಮ್ಮ ನಾಡಿನ ಕೆಲವು ಸಂಗೀತಗಾರರೂ ಕೂಡಾ ತಮಿಳರು, ತೆಲುಗರಂತೆ ನಮ್ಮ ಕನ್ನಡ ಭಾಷೆಯ ಸಾಹಿತ್ಯದ ಉಚ್ಚಾರವನ್ನು ಅ, ಹ, ಶ, ಸಗಳದಿಯಗಿ ವರ್ಣಮಾಲೆಯ ವ್ಯತ್ಯಾಸವಿಲ್ಲದೆ ಹಾಡುವುದೂ ಇದೆ. “ಅವರಂತೆ ನಾವೂ ಆಗಬೇಕು; ನಮ್ಮಲ್ಲಿ ಅವರಂತೆ ಕಲಾವಿದರಿಲ್ಲ” ಎನ್ನುವವರ ಸಂಖ್ಯೆಯೂ ನಮ್ಮಲ್ಲಿ ಅಧಿಕ. ಹಾಗಾಗಿ ‘ಅವರೊಳಗೊಂದಾಗುವ’ ಭರದಲ್ಲಿ ಅನುಕರಣೆಯೇ ಹೆಚ್ಚು.

ಇಂತಹ ಸಂದರ್ಭ ಕಥಕ್, ಕೂಚಿಪುಡಿಯಂತಹ ನೃತ್ಯಪರಂಪರೆಗಳನ್ನೂ ಹಿಂಬಾಲಿಸಿದೆ. ಆದರೆ ಈ ಮಾದರಿಯ ಕಲೆಯೆಂಬುದು ಭಾಷಾಸ್ವತ್ತು ಎಂಬ ಮಟ್ಟಿಗಿನ ಭಾವನೆಗೆ ಆಯಾಯ ಭಾಷೆಗಳಲ್ಲಿ ನೃತ್ಯ, ಸಂಗೀತದ ರಚನೆಗಳು ಹೆಚ್ಚು ಬಂದಿರುವುದೇ ಕಾರಣ ಎನ್ನುವುದನ್ನು ಅರಿಯದೆ ಮಾತನಾಡುವವರೇ ಜಾಸ್ತಿ. ಜೊತೆಗೆ ಸಾಹಿತ್ಯವನ್ನು ಅಧ್ಯಯನ ಮಾಡಿ ಶಬ್ದ ಪ್ರಮಾಣ, ಧ್ವನಿ, ಅರ್ಥ ತಿಳಿದು ಹಾಡುವವರಾಗಲೀ, ನರ್ತಿಸುವವರಾಗಲೀ ಎಲ್ಲೋ ಬೆರಳೆಣಿಕೆಯಷ್ಟು ಮಂದಿ ಅನ್ನುವುದೂ ದಿಟ. ವಿವೇಕಿಗಳಿಗೆ, ಕಲೆಯ ಇತಿಹಾಸ-ರಚನೆ ಬಲ್ಲವರಿಗೆ ಇದೆಲ್ಲಾ ಭಾಷಾ ತಾರತಮ್ಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ಎಂಬುದು ಅರಿಗೆ ಬರದೇ ಏನಲ್ಲ.

ಕಲಾವಿದರನೇಕರು ಹೇಳುತ್ತಲೇ ಬಂದಿದ್ದಾರೆ- ‘ತಮಿಳ್ನಾಡಿನಲ್ಲಿ ಕನ್ನಡ ಸಾಹಿತ್ಯಕ್ಕೆ ನೃತ್ಯವಾಡಿದರೆ ಬೆಲೆಯಿಲ್ಲ, ಬದುಕಿಲ್ಲ. ಅದೇ ಕರ್ನಾಟಕದಲ್ಲಿ ತಮಿಳಿನ ಸಾಹಿತ್ಯಕ್ಕೇ ನೃತ್ಯವಾಡಿದರೆ ಅದಕ್ಕೊಂದು ಘನತೆ !’ ಇಲ್ಲಿ ತಿಳಿದುಬರುವುದಿಷ್ಟೇ – ತಮಿಳರಿಗೆ ತಮಿಳಿನ ಮೇಲೆ, ತೆಲುಗರಿಗೆ ತೆಲುಗಿನ ಮೇಲೆ ಇದ್ದಷ್ಟೇ ಅಭಿಮಾನ, ಪ್ರೀತಿ, ಮಮಕಾರ ನಮ್ಮವರಿಗೆ ಅಂದರೆ ಕನ್ನಡನಾಡಿನವರಿಗೆ ಕನ್ನಡದ ಮೇಲೆಯಿಲ್ಲ. ಇದ್ದರೂ ಅದು ಭಾಷಣ ಬಿಗಿದು ಬೆಂಚು ಕುಟು್ಟುವುದಕ್ಕೋ, ರಾಜಕೀಯ ಲಾಭಕ್ಕೋ, ಕಡತಕ್ಕೋ ಮಾತ್ರ. ಅದನ್ನು ಹೊರತುಪಡಿಸಿದಂತೆ ಸಾಮಾಜಿಕ, ಸಾಂಸ್ಕೃತಿಕ ಬದುಕಿನಲ್ಲಿ ನಮ್ಮವರಿಗೆ ನಮ್ಮ ಭಾಷೆಯ ಮೇಲೆ ಪ್ರೀತ್ಯಾದರಗಳಿಲ್ಲ.

  ಆದ್ದರಿಂದಲೇ ಇಂದಿನ ಅದೆಷ್ಟೋ ಸಂಗೀತ-ನೃತ್ಯಕಚೇರಿಗಳಲ್ಲಿ ನಿರೂಪಣೆಯಿಂದ ಮೊದಲ್ಗೊಂಡು ಸ್ವಾಗತ, ವಂದನಾರ್ಪಣೆ, ಸಾಹಿತ್ಯಬಳಕೆಯಲ್ಲಿಯೂ ಇಂಗ್ಲೀಷ್, ತಮಿಳು, ತೆಲುಗಿನ ಸರ್ವಾಧಿಕಾರವೇ ನಡೆದಿದೆ. ಯಾವುದೇ ನೃತ್ಯಕಾರ್ಯಕ್ರಮ- ಅದು ರಂಗಪ್ರವೇಶವೋ (ಅದೂ ರಂಗಪ್ರವೇಶ ಎನ್ನುವುದಕ್ಕಿಂತ ವೈಯ್ಯಾರದಿಂದ ‘ಅರಂಗೇಟ್ರಂ’ ಎನ್ನುವುದರಲ್ಲೇ ಇನ್ನೂ ಸೊಗಸು !) ಅಥವಾ ನೃತ್ಯೋತ್ಸವವೋ ಇಲ್ಲವೇ ವಾರ್ಷಿಕಾಚರಣೆಯೋ, ಅಲ್ಲಿ ಸೊಗಸಾಗಿ ಇಂಗ್ಲೀಷ್ ಮಾತನಾಡಿದರೆ ಅದರ ಘನತೆಯೇ ಬೇರೆ ಮಟ್ಟದ್ದು ! ಒಂದುವೇಳೆ ಕನ್ನಡಲ್ಲಿ ಅಪ್ಪಿ ತಪ್ಪಿ ನಿರೂಪಣೆಯಿದ್ದರೆ ಅದಕ್ಕೆ ಸಮದಂಡಿಯಾಗಿ ಇಂಗ್ಲೀಷಿನದ್ದೂ ಇರುತ್ತದೆಯೆನ್ನಿ ! ಅದು ‘ಫ್ಯಾಶನ್’!

ಹಾಗೆಂದು ಕನ್ನಡ ನಿರೂಪಣೆಯ ಅಂದಚೆಂದವನ್ನಾದರೂ ಆಸ್ವಾದಿಸೋಣವೆಂದರೆ, ಅದೂ ಕೂಡಾ ಭಗವಂತನಿಗೇ ಪ್ರೀತಿ ! ನಿರೂಪಕರ ಹಳಸಲು ಭಾಷೆ, ಇಂಗ್ಲೀಷ್ಗನ್ನಡದ ತೆವಲು, ಅಪಶಬ್ದ, ಉಚ್ಚಾರದೋಷ… ಒಂದೇ ಎರಡೇ ! ಇಂದು ಕರ್ನಾಟಕದ ಕಲಾಮಾಧ್ಯಮದ ನಿರೂಪಣೆಗಳಲ್ಲಿ ಬಳಸುವ ಬಹುಪಾಲು ಕಲಾಸಂಬಂಧಿ ವಿಷಯಗಳು, ಸಾಲುಗಳು ಏನಿಲ್ಲವೆಂದರೂ 40 ವರುಷಗಳಿಂದ ಪುನರಾವರ್ತಿತವಾಗುವಂತÀವೇ ಆಗಿವೆ ! ಹೊಸ ಮಾದರಿಯ ಶೈಲಿ, ಭಾಷೆ, ಪದ-ವಾಕ್ಯ ಬಳಕೆ ಎಲ್ಲೋ 0.01% ಮಾತ್ರ ! ನಿರೂಪಣೆಯ ನಾಜೂಕಿನ ಮೇಲಣ ಪ್ರೀತಿ ಭಾಷೆಯ ಹಿಡಿತದಲ್ಲಿಲ್ಲ.

ಇದಕ್ಕೆ ಕನ್ನಡಭಾಷೆಯಲ್ಲೇ ಪರಿಹಾರ ಕೊಡಲು ಸಾಧ್ಯವಿಲ್ಲವೇ? ಏಕಿಲ್ಲ. ಇದೆ. ಮನಸ್ಸು ಬೇಕಷ್ಟೇ. ಇಲ್ಲೊಂದು ಸೂಕ್ಷ್ಮವಿದೆ- ನೃತ್ಯಕ್ಕೆ ಬಳಸಿಕೊಳ್ಳುವ ತಮಿಳಿನ, ತೆಲುಗಿನ ರಚನೆಗಳೆಲ್ಲಾ ಈಗಾಗಲೇ ಸಿದ್ಧರೂಪದಲ್ಲಿರುವವು, ಎಲ್ಲರಿಗೂ ನೃತ್ಯಾಭ್ಯಾಸದಲ್ಲಿ ಪರಿಚಿತವಿರುವವು; ಪ್ರಸಿದ್ಧವಾಗಿರುವವು. ಎಷ್ಟೆಂದರೆ ‘ಇಂತಹ ರಾಗದ್ದು’ ಎಂದರೆ ‘ಈ ಸಾಹಿತ್ಯವೋ..’ ಎಂದು ಕೇಳುವ; ಇಲ್ಲವೇ, ಸಾಹಿತ್ಯದ ಸಾಲು ಹೇಳಿದರೆ ‘ಈ ರಾಗದ, ಇವರ ರಚನೆಯಲ್ವೇ’ ಎನ್ನುವ ಮಟ್ಟಿಗೆ ಚಿರಪರಿಚಿತ. ಆ ಮಟ್ಟಿನ ಬಳಕೆ ಕನ್ನಡದ ಸಾಹಿತ್ಯಗಳಿಗಿಲ್ಲ. ದಾಸವರೇಣ್ಯರು, ಡಿವಿಜಿ, ಅಥವಾ ಕೆಲವೊಂದು ಪ್ರಸಿದ್ಧ ಕವಿಗಳ ಕಾವ್ಯವು ಸುಗಮಸಂಗೀತದ ಪರಿವೇಷದಲ್ಲಿ ಪ್ರಸಿದ್ಧಿಯಾದ ಗೀತಗಳನ್ನು ಬಿಟ್ಟರೆ ವರ್ಣ, ಪದ, ಶಬ್ದ, ತಿಲ್ಲಾನ, ಕೌತ್ವದಂತಹ ರಚನೆಗಳಲ್ಲಿ ಕನ್ನಡದ ಸಾಹಿತ್ಯಬಳಕೆ ಇಲ್ಲವೇ ಇಲ್ಲವೆಂಬಷ್ಟರ ಮಟ್ಟಿಗೆ ತಗ್ಗಿದೆ. ವರ್ಣವಂತೂ, ‘ಅದು ಪ್ರೇಕ್ಷಕರಿಗೆ ಅರ್ಥವಾಗದಿದ್ದರೂ ತಮಿಳಿನ ಭಾಷೆಯದ್ದಾಗಿದ್ದರೇನೆ ಅದಕ್ಕೊಂದು ಘನತೆ’ ಎಂಬ ಅಲಿಖಿತ ಶಿಷ್ಟಾಚಾರವೂ ಇದೆ !

ಆದರೆ 1990ರ ದಶಕದಲ್ಲಿ ತಮಿಳ್ನಾಡಿನ ಹೆಸರಾಂತ ಭರತನೃತ್ಯಕಲಾವಿದೆ ಡಾ.ಪದ್ಮಾ ಸುಬ್ರಹ್ಮಣ್ಯಂ ಉಡುಪಿಯಲ್ಲಿ ನೃತ್ಯಕಾರ್ಯಕ್ರಮ ಕೊಡಲು ಸಿದ್ಧವಾಗುವಾಗ ಪುರಂದರದಾಸರ ‘ಹಿಡಕೋ ಬಿಡಬ್ಯಾಡ’ ಎಂಬ ದೇವರನಾಮವನ್ನೇ ವರ್ಣ ಎಂಬ ಸಂಕೀರ್ಣವಾದ ನೃತ್ಯಬಂಧದ ಆವರಣದೊಳಗೆ ಸುಗಮವಾಗಿ ಹೊಂದಿಸಿ ಎಲ್ಲರೂ ಅವಾಕ್ಕಾಗುವಂತೆ ನರ್ತಿಸಿ ಹೊಸ ಲೋಕವನ್ನೇ ಸೃಷ್ಟಿಸಿದ್ದರು ! ಆವರೆಗೆ ಕಲಾಪ್ರಪಂಚದಲ್ಲಿ ಈ ರೀತಿಯ ಸಾಧ್ಯತೆಗಳು ಇವೆ ಎಂಬುದೇ ಕಲಾವಿದರಿಗಾಗಲೀ, ಪ್ರೇಕ್ಷಕರಿಗಾಗಲೀ ತಿಳಿದಿರಲಿಲ್ಲ ಮತ್ತು ಪ್ರಯತ್ನಕ್ಕೂ ಹೋಗಿರಲಿಲ್ಲ. ವರ್ಣದಂತಹ ನೃತ್ಯಬಂಧಕ್ಕೆ ತಮಿಳು ಅದರದ್ದೇ ಆದ ರಚನೆಗಳೇ ಬೇಕು ಎಂಬ ಹಟವಿದ್ದ ಕಲಾವಿದರಿಗೆ ಈ ಬಗೆಯ ಸಾಧ್ಯತೆಯಿದೆ ಎಂದು ಗೊತ್ತಾಗಿದ್ದೇ ಆಗ ! ಇಲ್ಲಿ ಕಲಾವಿದೆಯ ಪ್ರತಿಭೆ, ಚಿಂತನೆ, ಅನ್ವೇಷಣಾ ಸಾಮಥ್ರ್ಯ, ಸಂವಹನಶೀಲ ಅಭಿನಯಶಕ್ತಿ ಪ್ರಧಾನವಾಗಿ ಕೆಲಸ ಮಾಡುತ್ತವೆ ಎನ್ನುವುದು ಗಮನಿಸಬೇಕಾದ ಅಂಶ. ವಿಪರ್ಯಾಸವೆಂದರೆ ಈ ವರ್ಣ ಸಂಯೋಜನೆಯ ಬಳಿಕವೂ ನಮ್ಮ ಪ್ರಾಚೀನರ-ಪಾರಂಪರಿಕರ ಸಾಹಿತ್ಯಕ್ಕೆ ಹೊಸ ಭಾಷ್ಯ ಕೊಡುವ ಸಾಹಸಕ್ಕೂ ನಮ್ಮವರೇ ಕೈ ಹಾಕಲಿಲ್ಲ !

ಹಾಗೆಂದು ಹಲವು ಕನ್ನಡ ವರ್ಣ ರಚನೆಗಳು ಬಂದಿಲ್ಲವೆಂದಲ್ಲ. ಆದರೆ ಉತ್ತಮ ಗುಣಮಟ್ಟದ ಕಾವ್ಯಮೌಲ್ಯವನ್ನು ಉಳಿಸಿಕೊಂಡದ್ದೆ ವಿರಳಾತಿ ವಿರಳ. ಅಂತೆಯೇ ಸಂಗೀತ ಮತ್ತು ನೃತ್ಯಕ್ಕೆ ಬಳಸಿಕೊಳ್ಳುವ ಅವಕಾಶವಿರುವ ಇತ್ತೀಚಿನ ಅದೆಷ್ಟೋ ಕನ್ನಡ ರಚನೆಗಳಲ್ಲಿ (ಅದೆಷ್ಟೇ ಹೊಗಳಿದರೂ) ಲಯ, ಛಂದಸ್ಸಿನ ಲವಲೇಶ ಪರಿಜ್ಞಾನವಾಗಲೀ, ಮನೋಧರ್ಮದ ಸೌಂದರ್ಯವರಳುವ ಅನುಕೂಲವಾಗಲೀ ಇಲ್ಲ. ಆಗೆಲ್ಲಾ ನೃತ್ಯಸಾಹಿತ್ಯವೆನ್ನುವುದು ಭಾಷೆಯ ಸೌಂದರ್ಯವನ್ನೇ ಕಳೆದು ತೊಡಕಾಗಿ ಬೆಳೆಯುತ್ತಿದೆ ಎನ್ನದೆ ದಾರಿಯಿಲ್ಲ. ‘ನೃತ್ಯಕ್ಕೆ ಹೇಗಿದ್ದರೂ ನಡೆÉಯುತ್ತದೆ, ಲಯಕ್ಕೆ ಆಲಾಪನೆ, ಸ್ವರದಲ್ಲಿ ಹೊಂದಿಸಿಕೊಂಡರಾಯಿತು’ ಎಂಬ ಉದಾಸೀನವುಳ್ಳವು; ಇಲ್ಲವೇ ಹೆಚ್ಚಿನವು ತೆಲುಗು ತಮಿಳಿನಿಂದ ಅನುವಾದಿಸಲ್ಪಟ್ಟವು.

ಹಾಗಾಗಿ ಸಾಮಾನ್ಯ ಕಲಾವಿದರೂ ಕವಿಗಳಾಗುತ್ತಾರೆ, ಕಾವ್ಯಮಾಧ್ಯಮದ ನಿಯಮ-ನೀತಿಗಳನ್ನು ಅರಿಯುವ ಗೋಜಿಗೆ ಹೋಗದೆ ಮನಸೋಇಚ್ಛೆ ಬರೆದು ಬಿಸುಡುತ್ತಾರೆ. ಹೊಸ ಪ್ರಯೋಗವೆಂದೆನಿಸಿಕೊಳ್ಳ್ಳುವ ಭರಕ್ಕೆ ಅಥವಾ ತಾವೂ ಕವಿ, ಸಾಹಿತ್ಯ ಬರೆಯಬಲ್ಲೆವು ಎಂದೆನಿಸಿಕೊಳ್ಳುವ ಚಟಕ್ಕೆ ಬಿದ್ದು ಚರ್ವಿತಚರ್ವಣದಲ್ಲೇ ಸುಖವನ್ನು ಕಾಣುತ್ತಿದ್ದಾರೆ. ಎಷ್ಟರಮಟ್ಟಿಗೆಂದರೆ ಯಾವುದಾದರೂ ದೇವರ ಕುರಿತ ರಚನೆಯಿದ್ದರೆ ಅಲ್ಲಿ ಆ ದೇವರಿಗೆ ಇರುವ ಎಲ್ಲಾ ಹೆಸರುಗಳನ್ನು ತುರುಕಿ ಹಾಜರಾತಿ ಕರೆದಂತೆ ಮಾಡುವುದೇ ಇಂದಿನ ನೃತ್ಯಸಾಹಿತ್ಯ !

ಭಾಷೆಯೇ ಕಲೆಯ ಸೌಂದರ್ಯದ ಆಳ-ಅಗಲ ಅಳೆಯುವಲ್ಲಿ ಪರಮೋಚ್ಛವಲ್ಲ. ಹಾಗಂತ ಪ್ರತಿ ಭಾಷೆಗೂ ಅದರದ್ದೇ ಆದ ಚೆಲುವು, ಸೊಗಸಿರುತ್ತದೆ ಮತ್ತು ಅದು ಕಲೆಯ ಬೆಳವಣಿಗೆಗೆ ಕೊಡುಗೆಯನ್ನೂ ನಿಡುತ್ತದೆ. ಇಂತಹ ಸೂಕ್ಷ್ಮಗಳನ್ನು ನಮ್ಮ ಪಾರಂಪರಿಕರು ಸೂಕ್ತವಾಗಿ ಅರ್ಥಮಾಡಿಕೊಂಡಿದ್ದರು. ಆದರೆ ಈ ಔಚಿತ್ಯವನ್ನು ಅರಿಯದೆಯೇ ಭಾಷೆಯ ಸಾಮರಸ್ಯವನ್ನೇ ಒಡೆದು ಪ್ರಪ್ರತ್ಯೇಕ ಅಭಿದಾನ/ಹೆಸರಿನಿಂದ ವರ್ಗೀಕರಣ ಮಾಡಿ ತರತಮ ಭೇಧವೆಣಿಸುವುದು ಅವಿವೇಕಿಗಳ ಕೆಲಸ ಅಂತೆಯೇ ‘ಭಾಷಾವಿರೋಧಿ’ ಎಂದು ಹಾಡದೇ/ಬಳಸದೇ ಇರುವುದು ಕಲೆಗೆ ಮಾಡುವ ದೊಡ್ಡ ಅಗೌರವ.

Leave a Reply

*

code