ಅಂಕಣಗಳು

Subscribe


 

ಕಾಂತಾವಿಧೇಯ

Posted On: Wednesday, January 29th, 2014
1 Star2 Stars3 Stars4 Stars5 Stars (No Ratings Yet)
Loading...

Author: Shatavadhani Dr.R.Ganesh

ಕಾಂತಾವಿಧೇಯನು ಸ್ವಾಧೀನಪತಿಕಾ ನಾಯಿಕೆಗೆ ಸಮ ಅಂತರದಲ್ಲಿರುವವನು. ಮುನಿದ ನಾಯಿಕೆ (ಖಂಡಿತಾ ನಾಯಿಕಾ)ಯನ್ನು ಸಮಾಧಾನಿಸುವ ನರ್ಮಪ್ರಸಾದಕನೆಂಬ ನಾಯಕನ ಛಾಯೆಯೂ ಇಲ್ಲಿ ಇಣುಕುವುದಿದೆ. ಕಾರಣ ನಾಯಿಕೆಯೊಂದಿಗಿನ ಮನಸ್ತಾಪಕ್ಕೆ ಮಂಗಳ ಹಾಡಿ ಆಕೆಯನ್ನು ಸರಸ ಸಂಭಾಷಣೆಗಳಿಂದ ರಮಿಸುತ್ತಾ ಕಾಂತಾವಿಧೇಯನಾಗುತ್ತಿದ್ದಾನೆ ನಾಯಕ. ಆದರೆ ಖಂಡಿತೆಯನ್ನು ಒಲಿಸಿಕೊಳ್ಳುವ ಮಟ್ಟಿನ ನರ್ಮಪ್ರಸಾದಕನ ಶ್ರಮ, ಶಂಕೆಗಳು ಇಲ್ಲಿಲ್ಲ. ಜೊತೆಗೆ ಸತಿ-ಪತಿಯರು ತಾವಾಡಿದ ಕಲಹದ ನಂತರದಲ್ಲಿ ಪಶ್ಚಾತ್ತಾಪಗಳಿಂದ ನೊಂದು-ಬೆಂದು ಮತ್ತೊಮ್ಮೆ ಅನುರಕ್ತರಾಗುವ ಸಂಭವಗಳು ಕಾಂತಾವಿಧೇಯನ ಸಂದರ್ಭದಲ್ಲಿ ಹೆಚ್ಚು. ಹಾಗಾಗಿ ನಾಯಿಕೆಯ ಬಳಿ ಮುನಿಸಿಗೆ ಕಾರಣಗಳನ್ನು ಅರಸುತ್ತಾ, ಪರಿತ್ಯಕ್ತನಾಗಬೇಕಾದ ಪರಿಸ್ಥಿತಿಗೆ ಪ್ರಶ್ನೆಗಳನ್ನೆಸೆಯುತ್ತಾ ಭರವಸೆಯನ್ನುಂಟು ಮಾಡಲು ಪರಿತಪಿಸುತ್ತಿರುವ ನರ್ಮಪ್ರಸಾದಕನಿಗಿಂತ- ಭಿನ್ನವಾದ, ಅದಾಗಲೇ ಉತ್ತರಗಳನ್ನು ಹೊಂದಿ ದೃಢ ನಂಬಿಕೆಯನ್ನೂ, ವಿಶ್ವಾಸವನ್ನೂ ಪ್ರತಿಷ್ಠಾಪಿಸುವ ಪಾತ್ರವೈವಿಧ್ಯ ಕಾಂತಾವಿಧೇಯನದ್ದು. ಸ್ವಾರಸ್ಯವೆಂದರೆ, ಮುನಿಸಿಕೊಂಡ ಕಾಂತೆಯನ್ನು ಸಮಾಧಾನಗೊಳಿಸುವಲ್ಲಿ ಪ್ರಯತ್ನಶೀಲನಾದರೂ ವೈಫಲ್ಯದ ಅಂಚಿನಲ್ಲಿರುವ ನರ್ಮಪ್ರಸಾದಕನ ಬಳಿ ನಾಯಿಕೆಯು ಸ್ವಾಧೀನಪತಿಕೆಯಾಗಿ ಕಾಣಿಸಿಕೊಂಡರೆ ನಲ್ಲನಲ್ಲಿ ಕಾಂತಾವಿಧೇಯನ ಚೆಲುವನ್ನು, ಬಗೆಯೊಲವನ್ನೂ ಅರಳಿಸುವ ಸಾಧ್ಯತೆ ದಟ್ಟವಾಗಿದೆ.

ಈ ನಾಯಕನೊಳಗೂ ಉತ್ತಮ/ಮಧ್ಯಮ/ಸಾಧಾರಣ ಪ್ರವೃತ್ತಿಯ ನೆಲೆಯಲ್ಲಿ ಹಲವು ಬಗೆಯ ವರ್ತನೆಗಳ ಛಾಯೆಯನ್ನೂ ಗುರುತಿಸಬಹುದು. ಸತಿ-ಪತಿಯರ ನಡುವಿನಲ್ಲಿದ್ದ ಕಲಹ-ಭ್ರಮೆ-ಶಂಕಾವಹಗಳು ತೊಲಗಿ ಪರಸ್ಪರ ಪ್ರೀತಿ ಉಕ್ಕೇರಿದಾಗಲೂ ಆತ ಕಾಂತಾವಿಧೇಯನಾಗಬಹುದು. ಇಲ್ಲವೇ ನೊಂದಿರುವ ಹೆಂಡತಿಯನ್ನು ಸಮಾಧಾನ ಮಾಡುವ ನಿಟ್ಟಿನಲ್ಲಿಯೂ ಅಪರಿಹಾರ್ಯವಾಗಿ ವಿಧೇಯನೆಂದೆನಿಸಿಕೊಳ್ಳುವ ಸಾಧ್ಯತೆಗಳಿವೆ. ಅಥವಾ ‘ಹಳೆ ಹೆಂಡತಿಯ ಪಾದವೇ ಗತಿ’ ಎಂಬಂತೆ ಲೋಕಾಪವಾದಕ್ಕೆ ಬೆದರಿಯೋ, ತನ್ನ ದುರ್ವರ್ತನೆಗಳ ಅರಿವಾಗಿಯೋ, ಪಶ್ಚಾತ್ತಾಪದಿಂದಲೋ ನಾಯಕನು ಕಾಂತಾ ವಿಧೇಯನೆಂದೆ ನಿಸಿಕೊಳ್ಳಬಹುದು. ಆಸೆ-ಆಕಾಂಕ್ಷೆಗಳನ್ನು ಪೂರೈಸಲು ಅಸಮರ್ಥನಾದ ಪತಿಯ ಮೇಲೆ ಮುನಿದ ಪತ್ನಿಯನ್ನು ಸಂತೈಸಲೂ ಈ ಹಾದಿ ಹಿಡಿಯಬಹುದು. ಇಲ್ಲವೇ ಗಯ್ಯಾಳಿ ಪತ್ನಿಯ ವಾಚಾಳಿತನಕ್ಕೆ ಬೆದರಿ ಮರ್ಯಾದಾಪುರುಷನಾಗುವ ನಿಟ್ಟಿನಲ್ಲಿಯೂ ಆತನ ವರ್ತನೆ ಕಾಂತಾವಿಧೇಯನನ್ನಾನಾಗಿಸಬಹುದು.

ಸತಿಯಿಂದ ಸೇವೆ ಪಡೆದುಕೊಳ್ಳುವಂತೆಯೇ ಪತ್ನಿಯ ಪ್ರೇಮಭಿಕ್ಷೆಗಾಗಿ ಸೇವೆ ಮಾಡಲೂ ಬಲ್ಲ ಜಾಣನಿವ. ಮುಗ್ಧಮುಖದಿಂದ ಕ್ಷಮೆ ಬೇಡುತ್ತಲೇ ಆಪ್ತನಾಗುವ ಹವಣಿಕೆಯೂ ಇಲ್ಲದಿಲ್ಲ ! ಆಕೆಯ ಹುಸಿಮುನಿಸನ್ನು ಗುರುತಿಸಿ ಮುದ್ದು ಮುಖದ ಪೆದ್ದು ನುಡಿಗಳಿಂದ ಮಗುವಿನಂತಾಗಬಲ್ಲ. ಹಾಗೆಂದು ನಿರ್ವಂಚನೆಯ ನಡೆಯಲ್ಲಿ ಅಳುವ, ಕಾಲಿಗೆರಗುವ, ಉಣಿಸುವ, ಉಡಿಸುವ, ಹಾಡುವ, ನರ್ತಿಸುವ, ಅಭಿನಯಿಸುವ ಸನ್ನಿವೇಶಗಳೆದುರಾದರೂ ಸರಿಯೇ, ಆಕೆಯ ಮನಸೋಲ್ಲಾಸಕ್ಕಾಗಿ ಮುದ್ದುಗರೆದು ಮೊದ್ದುಮನಸ್ಸಿನ ಹುಡುಗಿಗೆ ಮದ್ದು ಮಾಡುವನೀತ. ಸತಿಯ ಬೇಡಿಕೆಗಳಿಗೆ ಅನುಸಾರವಾಗಿ ನಡೆದುಕೊಳ್ಳಲು ಒಂದಿಂಚೂ ಹಿಂದಕ್ಕೆಳೆಸದೆ ಆಜ್ಞಾನುವರ್ತಿಯಾಗಬಲ್ಲ ಭೂಪನೀತ.

ಅಚ್ಚರಿ ನೀಡುವ ಉಡುಗೊರೆಗಳಿಂದ ಮನೆ-ಮನದಲ್ಲಿ ಉಲ್ಲಾಸ ತರುವ ಪ್ರಯತ್ನ ಈತನದ್ದು. ಆಕೆಯ ಇಚ್ಛೆಗನುಸಾರವಾದ ವರ್ತನೆಯಿಂದ ನೆಮ್ಮದಿಯ ನಿಟ್ಟುಸಿರನ್ನು, ಸಮಸ್ಪಂದಿಯಾದ ಸಂವೇದನೆಯನ್ನು ಹೊಂದುವ ಆತುರದಲ್ಲಿರುತ್ತಾನೆ. ಈ ಹಿನ್ನೆಲೆಯಲ್ಲಿ ನಾಯಿಕೆಯ ಮನಸ್ಸು, ಗುಣ, ವರ್ತನೆ, ಮಾತುಗಳೂ ಕೂಡಾ ಈ ನಾಯಕನ ಭಾವನಿರ್ಮಾಣದಲ್ಲಿ ಪೂರಕವಾಗಿ ಕೆಲಸ ನಿರ್ವಹಿಸುತ್ತವೆ.

ಪ್ರಸ್ತುತ ಕಾವ್ಯದಲ್ಲಿರುವ ಕಾಂತಾವಿಧೇಯನ ಮನಸ್ಸು ಆವರೆಗೆ ಆದ ಕಲಹಗಳಿಂದ ಕಳಚಿಕೊಂಡು ಈಗಷ್ಟೇ ಶಾಂತವಾಗಿ ಸತಿಯ ಅನುರಾಗಕ್ಕೆ ಪಾತ್ರವಾಗುತ್ತಲಿದೆ. ಈ ಹೊತ್ತಿಗೆ ತನ್ನ ಮನದನ್ನೆಗೆ ಯಾವುದೆಲ್ಲ ಪ್ರಿಯವೋ ಅದೇ ಈತನಿಗೂ ಪ್ರಿಯ. ನೆಚ್ಚಿ ಬಳಿ ಬಂದ ಕಾಂತೆಗೆ ಸುವಿಧೇಯನಾಗಿ ನಡೆದುಕೊಳ್ಳುತ್ತಿರುವ ನಾಯಕನು ಆಕೆಯ ಮನಸ್ಸಿಗೆ ಘಾಸಿ ಮಾಡಲಾರೆನೆಂದೂ, ನೆರಳಾಗಿ ಹಿಂಬಾಲಿಸುವೆನೆಂದೂ, ಆಕೆಯೆಳೆದ ಗೆರೆಯನ್ನೂ ಮೀರಲಾರೆನೆಂದೆಲ್ಲಾ ವಚನ ಕೊಡುತ್ತಿದ್ದಾನೆ.

ಈ ಕುರಿತಾಗಿ ‘ಅಮ್ಮಾವ್ರ ಗಂಡ’ ಎಂದು ಲೋಕವೆಲ್ಲ ಗೇಲಿ ಮಾಡಿದರೂ ಸರಿಯೆ, ಅವರ ಮಾತಿಗೆ ಕಿವುಡಾಗಿರುತ್ತೇನೆ; ಚಿಂತೆ ಮಾಡಬೇಡ ಎಂಬ ಭರವಸೆಯನ್ನೀಯುತ್ತಿದ್ದಾನೆ. ಜೊತೆಗೆ ಬೇರೆ ನಾರಿಯರ ಮುಖದ ಪರಿಚಯವೂ ತನಗಿಲ್ಲ; ಸಬೂಬುಗಳನ್ನು ಹೇಳಲಾರೆ; ಕಪಟತಂತ್ರಗಳನ್ನೂ ಅರಿಯೆನು; ಧೂರ್ತಮಿತ್ರರ ಸಹವಾಸ ಮಾಡುವುದಿಲ್ಲ; ನೀತಿ ನಿಜಾಯಿತಿಗಳೇ ತನ್ನೊಲವು ಎಂದೆಲ್ಲಾ ತನ್ನ ಪೂರ್ವವರ್ತನೆಗೆ, ಘಟಿಸಿದ ಸಂದೇಹಸ್ಪಾದ ಸಂಗತಿಗಳಿಗೆ ತಕ್ಕ ಸಮಜಾಯಿಷಿಯನ್ನು ನೀಡುವಲ್ಲಿಯೂ ಉದ್ಯುಕ್ತ. ಒಟ್ಟಿನಲ್ಲಿ ಕಾಂತೆಯ ಮನಸ್ಸಿಗೆ ಪ್ರೀತನಾಗಿ ಆಕೆಯ ತೃಪ್ತಿಯಲ್ಲಿ ತನ್ನ ತೃಪ್ತಿಯನ್ನು ಕಾಣುತ್ತಾ; ತನ್ನ ತೃಪ್ತಿಯನ್ನು ಆಕೆಯಲ್ಲೂ ಕಂಡುಕೊಳ್ಳುತ್ತಾ ‘ತನ್ನವನೆಂಬ’ ಹೆಮ್ಮೆಯನ್ನೂ ಆಕೆಗೂ, ‘ತನ್ನವಳೆಂಬ’ ಆನಂದವನ್ನು, ಸಂಭ್ರಮಸಂತೋಷವನ್ನೂ ನೀಡುವಂತಿರುತ್ತದೆ ಕಾಂತಾವಿಧೇಯನ ಸ್ಥಿತಿ-ಗತಿ.

ಇಲ್ಲಿ ರತಿ ಸ್ಥಾಯಿಭಾವ. ನಾಯಕನ ಪ್ರಿಯೆ ಇಲ್ಲಿನ ಆಲಂಬನ ವಿಭಾವ. ಆಕೆಯ ಬೇಸರ-ಪಶ್ಚಾತ್ತಾಪ, ಪ್ರೀತಿ-ನಡವಳಿಕೆ, ಮನೆಯ ಪರಿಸರ, ಸುತ್ತಮುತ್ತಲ ಪ್ರಕೃತಿ ಈತನಿಗೆ ಉದ್ದೀಪನ ವಿಭಾವ. ರೋಮಾಂಚ, ಹರ್ಷ, ಸ್ಮೃತಿ, ಧೃತಿ ಈತನ ವ್ಯಭಿಚಾರಿಭಾವಗಳು. ಪಶ್ಚಾತ್ತಾಪ, ಓಲೈಕೆ, ಸತೀಪ್ರೇಮ, ವಿನಂತಿ, ವಿಷಯ ನಿವೇದನೆ, ಕ್ಷಮೆ, ಊಹೆ, ಮುಗ್ಧ ವರ್ತನೆ ಇತ್ಯಾದಿ ಈತನಲ್ಲಿ ಕಂಡುಬರಬಹುದಾದ ಕ್ರಿಯೆಗಳು. ಇಲ್ಲಿನ ಸಾಹಿತ್ಯವು ಕಂದಪದ್ಯದಿಂದ ಪ್ರಾರಂಭವಾಗಿ ನಾಯಕನ ಲಕ್ಷಣಗಳನ್ನು ವ್ಯಾಖ್ಯಾನಿಸುತ್ತದೆ. ನಂತರದ ಲಕ್ಷ್ಯಗೀತೆಯಲ್ಲಿ ನಾಯಕನಿಗೆ ಸಂಬಂಧಿಸಿದ ಉದ್ದೀಪನ ವಿಭಾವಗಳ ಸೂಕ್ಷ್ಮಗಳಿವೆ.

ರಾಗ :ಕುಮುದ್ ; ತಾಳ : ಮಿಶ್ರಛಾಪು

ಚಿಂತಾರಹಿತಂ ಪತ್ನೀ
ಸಂತತಸಂಗಾನುರಾಗರಂಜಿತಲೋಲೋ-
-ದಂತಂ ಲಲಿತವಿನೀತಂ
ಕಾಂತಾಸುವಿಧೇಯನೆಂಬ ನಾಯಕನೀತಮ್ ||

ನಿನಗಾವುದಿಷ್ಟವೊ ನನಗದಭೀಷ್ಟವೇ |
ಅನುರಾಗದಿಷ್ಟೆ! ಪ್ರಿಯೆ ! ಹೃದಿಷ್ಟೇ || ಪ ||

ನಿನ್ನಯ ನೆರಳಾಗಿ- ನಿನ್ನಲ್ಲಿ ಮರುಳಾಗಿ
ಮನ್ನಣೆಯನು ಹೊಂದುವೆ- ಮನೋಹರೆ || ಅ.ಪ ||

ಬೇರೆ ನಾರಿಯರ ಮೋರೆಯನರಿಯೆ
ಚಾರುತಂತ್ರಗಳ ಛಲವರಿಯೆ |
ಮೀರಲರಿಯೆ ನೀನೆಳೆದ ರೇಖೆಯನು
ಹೇ ! ರಮಣೀ! ಮತ್ಪ್ರಾಣಮಣೀ || 1 ||

ಕೈತವವಿದ್ಯಾಕೂಟವನರಿಯೆನು
ನೀತಿಯದೊಂದೇ ನಿನ್ನೊಲವು !
ಮಾತ ಕೇಳೆನಾ ಧೂರ್ತಮಿತ್ರರ
ಪ್ರೀತಿ ನಿನದೆನ್ನಲ್ಲಿರಲಿ || 2 ||

ಲೋಕವೆಲ್ಲವು ಗೇಲಿಮಾಡಲಿ
ಕಾಂತೆಗಿವನಡಿಯಾಳೆನುತ್ತಲಿ |
ನಾ ಕಿವುಡನಾ ಗುಲ್ಲಿಗೆಂದೂ
ಚಿಂತೆಯೇತಕೆ ನೀನಿರೆ ? || 3 ||

Leave a Reply

*

code