ಅಂಕಣಗಳು

Subscribe


 

ಕೆರೆಮನೆ ರಾಷ್ಟ್ರೀಯ ನಾಟ್ಯೋತ್ಸವ

Posted On: Thursday, March 26th, 2015
1 Star2 Stars3 Stars4 Stars5 Stars (No Ratings Yet)
Loading...

Author: G.N.Ashokavardhana, Mangalore

ಕೆರೆಮನೆ ರಾಷ್ಟ್ರೀಯ ನಾಟ್ಯೋತ್ಸವ- ಗುಣವಂತೆಯಂತಹ ಒಂದು ಹಳ್ಳಿಯ ಆವರಣದಲ್ಲಿ ನಡೆಸುವ ಈ ಉತ್ಸವ ತನ್ನ ಗುಣಮಟ್ಟದ ಮೇಲ್ಮೆ, ಮನೆಯ ವಾತಾವರಣ ನೆನಪಿಸುವ ಹೃದಯಸ್ಪರ್ಶಿ ಆತಿಥ್ಯ, ಬಹುಆಯಾಮದ ಕಲಾ ದೃಷ್ಟಿಕೋನಗಳಿಂದ ಐದು ನಾಟ್ಯೋತ್ಸವಗಳಲ್ಲೇ ದೇಶದ ಎಲ್ಲ ಬಗೆಯ ಕಲಾಪ್ರಪಂಚವನ್ನು ತನ್ನತ್ತ ಸೆಳೆದಿದೆ. ಹಾಗೆ ನೋಡಿದರೆ ಪುಟ್ಟ ಹಳ್ಳಿಯಲ್ಲಿಯೂ ಜಗತ್ತನ್ನು ಬೆರಗು ಬಿಡುಗಣ್ಣಿನಿಂದ ನೋಡುವ ಅನಾದೃಶ್ಯ ಪರಿಕಲ್ಪನೆಗೆ ಕಾರಣಿಭೂತರಾದ ಎಲ್ಲ ಹಿರಿಯ ಜೀವಗಳೂ ಧನ್ಯರು, ಮಾನ್ಯರು. ಆದ್ದರಿಂದ ಈ ಬಾರಿಯ ಆರನೇ ನಾಟ್ಯೋತ್ಸವದಲ್ಲಿಯೂ (ಫೆಬ್ರವರಿ 6ರಿಂದ 10, 2015) ಪ್ರಬುದ್ಧ ಕಲಾವಿದರು-ವಿಮರ್ಶಕರು-ಸಮಾಜದ ವಿವಿಧ ಸ್ತರದ ಗಣ್ಯರು-ರಾಜಕಾರಣಿಗಳ ದಂಡೇ ನೆರೆದಿದ್ದದ್ದು ಅತಿಶಯವೇನಲ್ಲ.

ಭರತನಾಟ್ಯ, ಕೂಚಿಪೂಡಿ, ಕಥಕ್, ಸತ್ರಿಯಾದಂತಹ ನೃತ್ಯಗಳು, ತೆಂಕು-ಬಡಗು ಯಕ್ಷಗಾನಗಳು, ಮೇಲತ್ತೂರು ಭಾಗವತ ಮೇಳ, ಕೂಡಿಯಾಟ್ಟಂ, ಕೂಚಿಪೂಡಿ ಯಕ್ಷಗಾನದಂತಹ ನಾಟ್ಯಪ್ರಬೇಧಗಳು, ನಾಟಕ, ಪುರುಲಿಯಾ ಛಾವು, ವಾದ್ಯ ಜುಗಲ್‍ಬಂದಿ, ವೀಣಾವಾದನ, ಕಬೀರ್ ಮತ್ತು ದ್ರುಪದ್ ಗಾಯನದಂತಹ ಸಂಧ್ಯಾಸಂಭ್ರಮಗಳೊಂದಿಗೆ ಪ್ರತೀ ದಿನದ ಬೆಳಗ್ಗಿನ ಹೊತ್ತು ಪ್ರಾತ್ಯಕ್ಷಿಕೆ, ಉಪನ್ಯಾಸ, ಸಂಜೆಯಲ್ಲಿ ಪ್ರಶಸ್ತಿ ಪ್ರದಾನ, ಸನ್ಮಾನಗಳು.. ಹೀಗೆ ಕಲಾಂಗಣದ ಎಲ್ಲ ಬಗೆಯ ಆಸ್ವಾದರಮ್ಯತೆಯನ್ನೂ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಬಗೆದುಣಿಸುವಂತೆ ಯೋಜಿತವಾಗಿತ್ತು ಐದುದಿನಗಳ ನಾಟ್ಯೋತ್ಸವ. ಬರೆಯಹೊರಟರೆ ಪ್ರಬಂಧದ ಪುಟಗಳೂ ಸಾಲವು. ನೋಡಿಯೇ ಕಣ್ ತಣಿಯಬೇಕು.

ಆ ನಾಟ್ಯೋತ್ಸವದ ಎರಡನೇ ದಿನದ ( ಫೆಬ್ರವರಿ 7) ವಸ್ತುನಿಷ್ಠ ವಿಮರ್ಶೆಯೊಂದನ್ನು ವಿಮರ್ಶಕರಾದ ಜಿ.ಎನ್.ಅಶೋಕವರ್ಧನರು ನೂಪುರ ಭ್ರಮರಿಯೊಂದಿಗೆ ಹಂಚಿಕೊಂಡಿದ್ದಾರೆ. ಅಂತೆಯೇ ಒಂದಷ್ಟು ನಾಟ್ಯೋತ್ಸವದ ಹಿರಿಮೆ-ಗರಿಮೆಗಳನ್ನು ನೆನಪಿಸುವ ಮಾತು-ಛಾಯೆಗಳ ಗುಚ್ಛವೂ ಜೊತೆಗಿದೆ. ಸಂಪಾದಕರ ಡೈರಿಯ ಕೆಲವು ಸಾಲುಗಳೂ ಇದಕ್ಕಾಗಿಯೇ ಮೀಸಲಿವೆ. ಒಟ್ಟಿನಲ್ಲಿ ಹಳ್ಳಿಯೊಂದರ ಹಸಿರಿನೊಳಗೆ ನಾಟ್ಯೋತ್ಸವದ ನೆಪದಲ್ಲಿ ಹಲವು ಕಲಾಕೋನಗಳು ಅನಾವರಣವಾಗಲು ಆಧಾರಸ್ವರೂಪರಾದ ಕೆರೆಮನೆ ಶಿವಾನಂದ ಹೆಗಡೆ ಮತ್ತು ಅವರ ಕುಟುಂಬ, ಶ್ರೀಮಯ (ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ) ಪ್ರಮುಖರು ನಿಜಕ್ಕೂ ಅಭಿನಂದನಾರ್ಹರು.

…ದಿನದ ಮೊದಲ ಗೋಷ್ಠಿ – ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರದಲ್ಲಿ- ಎಸ್.ಎನ್. ಪಂಜಾಜೆಯವರು ಉದ್ಘಾಟಿಸಿದ ಆ ಗೋಷ್ಠಿಯಲ್ಲಿ, ಉತ್ಸವದ ಪೂರ್ಣ ಸಮರ್ಪಣೆಗೆ ಪಾತ್ರರಾದ ಡಾ.ಮಾಯಾರಾವ್ (- ಬಿ.ಎನ್. ಮನೋರಮಾ) ಅಲ್ಲದೆ, ಯು. ಆರ್. ಅನಂತಮೂರ್ತಿ (- ಕೆ.ವಿ ಅಕ್ಷರರ ಲಿಖಿತ ಭಾಷಣ, ಓದಿದವರು ಲಕ್ಷ್ಮೀ ನಾರಾಯಣ ಕಾಶಿ), ಮೂಡ್ಕಣಿ ನಾರಾಯಣ ಹೆಗಡೆ (- ನಾರಾಯಣ ಭಟ್ಟ ಸಂತೆಗುಳಿ) ಹಾರಾಡಿ ರಾಮ ಗಾಣಿಗರ (- ಕೆ.ಎಂ. ಉಡುಪ) ಸಾರ್ಥಕ ಸ್ಮರಣೆಯಾದಂತಿತ್ತು. ಅಪೂರ್ವ ಪೂರ್ವ ಸ್ಮರಣದ ಕೊನೆಯ ಕಲಾಪವಾಗಿ ಹೊಸ್ತೋಟ ಮಂಜುನಾಥ ಭಾಗವತರ ಅಧ್ಯಕ್ಷೀಯ ಭಾಷಣ ನಡೆದಿತ್ತು.

ಮೊದಲ ರಂಗಕಲಾಪ – ಕೂಡಿಯಾಟ್ಟಂ, ಗೋಷ್ಠಿಯನ್ನು ಹಿಂಬಾಲಿಸಿದಂತೆ ಅದೇ ಒಳಾಂಗಣದಲ್ಲಿ ನಡೆಯಿತು. ಕೇರಳದಿಂದ ಬಂದಿದ್ದ ಕಲಾಮಂಡಲಂ ಸಂಗೀತ ಚಾಕ್ಯಾರ, ಯುಕ್ತ ಹಿಮ್ಮೇಳದೊಂದಿಗೆ ಏಕವ್ಯಕ್ತಿ ಪ್ರದರ್ಶನವನ್ನು (ಈ ಪ್ರಸಂಗದಲ್ಲಿ ಮೂರು – ರಾವಣ, ಶಿವ ಮತ್ತು ಪಾರ್ವತಿ ಪಾತ್ರಾಭಿನಯ ಇತ್ತು) ಸಮರ್ಥವಾಗಿ ನಡೆಸಿಕೊಟ್ಟರು. ಪ್ರಸಂಗ – ಕೈಲಾಸೋದ್ಧರಣಂ (ರಾವಣ ಗರ್ವಭಂಗ); ಕೈಲಾಸ ಎತ್ತುವ ಸರಳ ಭಾಗ ಮಾತ್ರ. ಅದರ ಕಲಾಪ ವಿವರಗಳನ್ನು ಸಂಘಟಕರು ಮೊದಲೇ ಕನ್ನಡದಲ್ಲಿ ಹೇಳಿದ್ದುದರಿಂದ ನಾಟ್ಯಭಾಷೆಯ ಅಶಿಕ್ಷಿತರಿಗೂ ಆಂಗಿಕಗಳನ್ನು ಅರ್ಥೈಸಿಕೊಂಡು ಸಂತೋಷಿಸುವುದು ಸಾಧ್ಯವಾಯ್ತು.

ಕೂಡಿಯಾಟ್ಟಂನ ಹಿಮ್ಮೇಳದಲ್ಲಿ ಶ್ರುತಿವಾದ್ಯವಿಲ್ಲ, ಸನ್ನಿವೇಶಕ್ಕೆ ಪೂರಕವಾದ ಮಾಧುರ್ಯ ಗುಂಜಿಸುವ ಧ್ವನಿಗಳೇ ಇಲ್ಲ. ಇದರ ಗಾಯನ ಹಾಗೂ ಮಾತಿಲ್ಲದ ಕಲಾಪ ನನ್ನ ಯಕ್ಷ-ಪ್ರೇಕ್ಷಣೆಯ ಸಂಸ್ಕಾರಕ್ಕೆ ಕೂಡಿಯಾಟ್ಟಂನ ಬಹಳ ದೊಡ್ಡ ಕೊರತೆಯಾಗಿಯೇ ತೋರಿತು. ಇವರ ಮುಖ್ಯ ತಾಳವಾದ್ಯ –  ಮಿಝವು, ಪುಟ್ಟ ಕಡಾಯಕ್ಕೆ ಮುಚ್ಚಿಗೆ ಹಾಕಿದಂತಿರುವ ವಾದ್ಯ. ಪ್ರದರ್ಶನದ ಬಹುಭಾಗದಲ್ಲಿ ಜೋಡಿ ಮಿಝವುಗಳ ಸದ್ದು, ನಾದರಹಿತ ಚಂಡೆಯಂತೆ ಅಥವಾ ಭರತನಾಟ್ಯ ಶಿಕ್ಷಣದಲ್ಲಿ ಗುರುಗಳು ಕುಟ್ಟುವ ಕೊರಡಿನಂತೆಯೇ ಕರ್ಣ ಕಠೋರವಾಗಿತ್ತು. ನಮ್ಮ ಚಂಡೆಯ ಜತೆಗಿನ ಮದ್ದಳೆಯಂತೆ, ಇಲ್ಲೊಂದು ಪುಟ್ಟ ಡೋಲು ಇದೆ. ಕೋಲಿನಲ್ಲಿ ನುಡಿಸುವ ಅದು ಪರಿಣಾಮದಲ್ಲಿ ಮದ್ದಳೆಯ ಸುಖದ ಹತ್ತಿರವೂ ಸುಳಿಯುವುದಿಲ್ಲ. ಮಿಝವನ್ನು ಪೂರ್ಣಹಸ್ತದಲ್ಲಿ ಅಕ್ಷರಶಃ ಬಡಿಯುತ್ತಾರೆ. ಚಂಡೆ, ಮದ್ದಳೆ, ಮೃದಂಗಾದಿ ವಾದ್ಯಗಳಂತೆ ಬಿಡಿನುಡಿತಗಳ ಅಥವಾ ಬೆರಳುಗಳ ಚಮತ್ಕಾರ ಇದರ ವಾದನದಲ್ಲಿಲ್ಲ. ಕೇವಲ ಲಯವಿನ್ಯಾಸ ಹಾಗೂ ಧ್ವನಿಯ ಏರಿಳಿತದಲ್ಲಷ್ಟೇ ನಡೆಯುವ ಭಾವಪೋಷಣೆ ನನಗಂತೂ ರಸವೈವಿಧ್ಯಕ್ಕೆ ಕುತ್ತಾಗಿಯೇ ಕಾಣಿಸಿತು.

5 bhavabangi  4. himmela  3 koodiyattam

ಕೂಡಿಯಾಟ್ಟಂನ ವೇಷ ಕಥಕ್ಕಳಿಯದ್ದನ್ನು ಹೋಲುತ್ತದೆ. ಪಾತ್ರದ ಉಡುಗೆತೊಡುಗೆ ಮತ್ತು ಬಣ್ಣಗಾರಿಕೆಗಳಲ್ಲಿ ಮುಂಭಾಗದಿಂದ ಕಾಣುವ ವೈಭವ, ಬೆನ್ನು ಹಾಕಿದಾಗ ನೀರಸವಾಗುತ್ತದೆ- ಒಂದು ನಿಟ್ಟಿನಲ್ಲಿ ಹಾಸ್ಯಾಸ್ಪದವಾಗಿಯೇ ಕಾಣುತ್ತಿತ್ತು. ಇವೆಲ್ಲಕ್ಕೆ ಹೊರತಾಗಿ ನಿಂತದ್ದು – ಒಟ್ಟು ತಂಡದ ಶಿಸ್ತು, ನಿರ್ವಹಣಾ ಗಾಂಭೀರ್ಯ ಮತ್ತು ವೇಷಧಾರೀ ಕಲಾವಿದ. ಅತಿ ವಿಳಂಬ ಗತಿಯಲ್ಲಿ ಮತ್ತು ಬಹಳ ನವಿರಾಗಿ ಸಂಗೀತ ಚಾಕ್ಯಾರ್ ಕೊಟ್ಟ ಅಭಿನಯ ಅದ್ವಿತೀಯ. ಆದರೂ ಕೂಡಿಯಾಟ್ಟಂ ನೋಡುವ ಇನ್ನೊಂದು ಅವಕಾಶವನ್ನು ನಾನು ಬಯಸದಷ್ಟು ಶಕ್ತವಾಗಿದೆ ನಮ್ಮ (ತಿಟ್ಟುಗಳ ಬೇಧವಿಲ್ಲದೆ) ಯಕ್ಷಗಾನ ಎಂದು ಇಲ್ಲೇ ಹೇಳುವಲ್ಲಿ ನನಗೆ ಯಾವ ಸಂಕೋಚವೂ ಇಲ್ಲ.

ದಿನದ ಮೂರನೆಯ ಬೈಠಕ್ಕು – ಸಂಮಾನ, ಐದು ಗಂಟೆಯ ಸುಮಾರಿಗೆ ಬಯಲು ರಂಗಮಂದಿರದಲ್ಲಿ ತೊಡಗಿತು. ಶತಮಾನಕ್ಕೂ ಮಿಕ್ಕ ಇತಿಹಾಸವಿರುವ ಬೆಳೆಯೂರಿನ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ಸಾಂಸ್ಥಿಕ ಸಂಮಾನಕ್ಕೆ ಗುರುತಿಸಿದ್ದರು. ಉಳಿದಂತೆ ಸುಗಮ ಸಂಗೀತದಲ್ಲಿ ಹೆಸರಾಂತ ಹಿರಿಯ ಕಲಾವಿದ ರಾಘಣ್ಣ ಗರ್ತಿಕೆರೆ, ಸಂಗೀತ ಗುರುಗಳಾದ ಎಸ್.ಎಂ. ಭಟ್ಟ್ ಕಟ್ಟಿಗೆ, ಹಿರಿಯ ಹಿಂದೂಸ್ಥಾನೀ ಗಾಯನಪಟು ಜಿ. ಆರ್. ಭಟ್ ಬಾಳೆಗದ್ದೆ ಮತ್ತು ಉತ್ತಮ ಸಂಘಟಕನ ನೆಲೆಯಲ್ಲಿ ಹಿರಿಯ ಪತ್ರಕರ್ತ ಜೀಯು ಭಟ್ಟ ಹೊನ್ನಾವರರೂ ಸಂಮಾನಪಂಚಕದಲ್ಲಿದ್ದರು. ನಾಟ್ಯೋತ್ಸವದ ಗಹನತೆಗೋ ಪ್ರಾದೇಶಿಕ ಅನಿವಾರ್ಯತೆಗೋ ಮುಖ್ಯ ಅತಿಥಿಗಳ ಪಟ್ಟಿಯಲ್ಲೂ ಏಳು ಮಂದಿಯಿದ್ದರು. ಅಧ್ಯಕ್ಷತೆಯನ್ನು ಮೈಸೂರಿನ ಜಿ.ಎಸ್.ಭಟ್ಟರು ವಹಿಸಿದ್ದರು.

ದಿನದ ಕೊನೆಯ ಕಲಾಪ – ಸಾಂಸ್ಕೃತಿಕ ಪ್ರದರ್ಶನ, ಇದರಲ್ಲಿ ಎರಡು ಭಾಗಗಳಿದ್ದುವು. ಮೊದಲನೆಯದ್ದನ್ನು ಬೆಂಗಳೂರಿನ ಅನನ್ಯ ಸಂಸ್ಥೆಯ ರಾಘವೇಂದ್ರರು ಸಂಘಟಿಸಿ ಪ್ರಸ್ತುತಪಡಿಸಿದ್ದರು. ಅನುರಾಧಾ ವಿಕ್ರಾಂತ, ಶಮಾಕೃಷ್ಣ ಮತ್ತು ದಿವ್ಯಾರವಿಯವರ ಭರತನಾಟ್ಯ, ಕೂಚಿಪುಡಿಗಳ ನಾಲ್ಕೆಂಟು ಸಂಯೋಜನೆಗಳು. ಧ್ವನಿಮುದ್ರಿತ ಹಿಮ್ಮೇಳದೊಂದಿಗೆ ಮೂಡಿದ ಈ ಕಲಾಪಗಳು ಗುಣವಂತೆಯಂಥ ಹಳ್ಳಿಮೂಲೆಯ ಪ್ರೇಕ್ಷಕರನ್ನು ತಣಿಸಿದ್ದಿರಬಹುದು. ಆದರೆ ವಠಾರಕ್ಕೊಂದು ನಾಟ್ಯಶಾಲೆ, ವರ್ಷಕ್ಕೆಂಟು ಹುಚ್ಚುಚ್ಚು ರಂಗಪ್ರವೇಶಗಳು, ನೂರೆಂಟು ಅನ್ಯ ನೆಪದ ಪ್ರಯೋಗ-ಪ್ರದರ್ಶನ ಹಾಗೂ ಸಂಯೋಜನಾ ಕೂಟಗಳಿಂದ ದೂರ ಉಳಿದರೂ ಆಮಂತ್ರಣ, ಪತ್ರಿಕಾ ವರದಿಗಳ ಮೂಲಕ ಅನುಭವಿಸುತ್ತಲೇ ಬಂದ ಮಂಗಳೂರಿಗನಾದ ನನಗೆ ವಿಶೇಷವಾಗಲಿಲ್ಲ.

ತೆಲುಗು ವಲಯದಿಂದ ಯಾವುದೋ ಐತಿಹಾಸಿಕ ಕಾರಣಕ್ಕೆ, ಎಂದೋ ತಮಿಳುನಾಡಿನ ಮೇಲಟ್ಟೂರಿಗೆ ವಲಸೆಗೊಂಡರೂ ಮೂಲ ಭಾಷೆಯೊಡನೆ ಸಾಂಪ್ರದಾಯಿಕ ಆರಾಧನಾ ಕಲೆಯನ್ನು ಉಳಿಸಿಕೊಂಡು ಬಂದದ್ದು ಭಾಗವತರ ಮೇಳ. ನಾಲ್ಕೈದು ಹಾಡುಗಾರರು, ಹಲವು ವಾದ್ಯ ವೈವಿಧ್ಯಗಳೊಂದಿಗೆ ಸಜ್ಜಾದ ಹಿಮ್ಮೇಳ, ಭರ್ಜರಿ ನಾಟಕೀಯ ವೇಷಭೂಷಣ ಹಾಗೂ ಪಾತ್ರಗಳೊಂದಿಗೆ ರಂಗ ತುಂಬುವ ಮುಮ್ಮೇಳ. ಇದೂ ನಮ್ಮ ಯಕ್ಷಗಾನದಂತೇ ಇಡಿಯ ರಾತ್ರಿಯನ್ನಾವರಿಸುವ ಕಲೆಯಂತೆ. ಆದರೆ ಪ್ರಸ್ತುತ ನಾಟ್ಯೋತ್ಸವದ ಅನುಕೂಲಕ್ಕಾಗಿ ಸುಮಾರು ನಾಲ್ಕು ಗಂಟೆಗಳ ಸಮಯಮಿತಿಯನ್ನಳವಡಿಸಿಕೊಂಡು `ಶ್ರೀ ಕೃಷ್ಣ ಜನನಂ, ಕಂಸ ವಧ’ ಪ್ರಸಂಗದ ಪ್ರದರ್ಶನ ಕೊಟ್ಟರು.

ಸಂಗೀತದ ಅಂಶ ಬಹುತೇಕ ಶುದ್ಧ ಕರ್ನಾಟಕ ಶಾಸ್ತ್ರೀಯ ಸಂಪ್ರದಾಯಕ್ಕೆ ಶರಣಾದಂತಿದೆ – ಕೇಳಲು ಹಿತಕರವಾಗಿತ್ತು. ಝಗಮಗಿಸುವ ವೇಷಭೂಷಣಗಳಲ್ಲೇನೂ ಸಾಂಪ್ರದಾಯಿಕತೆ ಉಳಿದಂತಿಲ್ಲ. ಸಾತತ್ಯವಿಲ್ಲದ ಬಿರುಸಿನ ಕುಣಿತ ಹಾಗೂ ಕಥಾ ಸಂವಹನಕ್ಕಷ್ಟೇ ಮಿತಗೊಂಡ ಮಾತುಗಳು ವಿಶೇಷ ಕಲಾನುಭೂತಿಯನ್ನೇನೂ ಕೊಡುವಂತಿರಲಿಲ್ಲ. ಕೃಷ್ಣ ಜನನದವರೆಗೆ ಕುಳಿತೆವಾದರೂ ಕಥನ ಕುತೂಹಲವೇನೂ ಉಳಿಯಲಿಲ್ಲ.

ದಿವಂಗತ ಕೆರೆಮನೆ ಶಂಭು ಹೆಗಡೆಯವರೇ ಜೀವಿತಾವಧಿಯಲ್ಲಿ ಕಟ್ಟಿ ನಡೆಸಿದ್ದು – ಶ್ರೀಮಯ ರಂಗ ಶಿಕ್ಷಣ ಕೇಂದ್ರ ಮತ್ತು ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರ. ಅವಕ್ಕೆ ಸಮರ್ಥ ಉತ್ತರಾಧಿಕಾರಿಯಾಗಿಯೇ ಒದಗಿದ ಅವರ ಮಗ ಕೆರೆಮನೆ ಶಿವಾನಂದ ಹೆಗಡೆ, ಇಂದು ಶಂಭು ಹೆಗಡೆ ಬಯಲುರಂಗಮಂದಿರ ಹಾಗೂ ಯಕ್ಷ ವಿಗ್ರಹರಚನೆಯ ವೈವಿಧ್ಯಗಳನ್ನು ಸೇರಿಸಿದ್ದಾರೆ. ವಾರ್ಷಿಕ ನಾಟ್ಯೋತ್ಸವವನ್ನಂತೂ ಇದೀಗ ಆರನೇ ಸಲ ರಾಷ್ಟ್ರೀಯ ಮಟ್ಟದ ವೈಭವದಲ್ಲಿ ನಡೆಸುತ್ತಿದ್ದಾರೆ.

ಉತ್ಸವದ ಅಂಗವಾಗಿ ಸಭಾಭವನದ ಜಗುಲಿಯಲ್ಲಿ ಚಿತ್ರ ಪ್ರದರ್ಶನ ಏರ್ಪಡಿಸಿದ್ದರು. ಗಣ್ಯ ಪ್ರೇಕ್ಷಕರನ್ನೂ ಒಳಗೊಂಡಂತೆ ಎಲ್ಲ ಭಾಗಿಗಳಿಗೆ ಕಾಲಕಾಲಕ್ಕೆ ಹಿತವಾದ ಪಾನೀಯ, ತಿನಿಸುಗಳನ್ನು ಆತ್ಮೀಯವಾಗಿಯೇ ಒದಗಿಸಿದ್ದು ನಮಗಂತೂ ಅಪ್ಯಾಯಮಾನವಾಗಿತ್ತು. ಇಡಗುಂಜಿ ಮೇಳದ ಎಂಟನೇ ದಶಕದ ನಡೆ, ಮೂರನೇ ತಲೆಮಾರಿನ ಆಡಳಿತ (ನಾಲ್ಕನೆಯದಕ್ಕೂ ಮುಂದುವರಿಯುವ ಸೂಚನೆ – ಸಕ್ರಿಯರಾಗಿದ್ದ ಶಿವಾನಂದರ ಎರಡೂ ಮಕ್ಕಳಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು) ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದು ನಾವು ಮನಸಾರೆ ಹಾರೈಸುತ್ತೇವೆ.

Leave a Reply

*

code