ಅಂಕಣಗಳು

Subscribe


 

ಖಂಡಿತಾ ನಾಯಿಕೆ

Posted On: Thursday, December 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ವಿವಿಧ ಲೇಖಕರು

(ಕಳೆದ ಸಂಚಿಕೆಯಿಂದ ಮುಂದುವರೆದುದು…)

ಕಾಯುತ್ತಾ ಕಂಗೆಟ್ಟ ನಾಯಕಿಯ ಮನಸ್ಸು ಹದಗೆಡುತ್ತಿರುವಾಗ ಬರುವ ನಾಯಕನನ್ನು ಕಂಡು ಆತನು ಅನ್ಯಾಸಕ್ತನೆಂದು ಆರೋಪಿಸಿಯೋ, ಅನುಮಾನಿಸಿಯೋ; ಇಲ್ಲವೇ ಆತನು ಮತ್ತೋರ್ವ ಸ್ತ್ರೀಯೊಡನೆ ಇರುವುದನ್ನು ತಿಳಿದೋ ತೀವ್ರವಾಗಿ ಆಘಾತಗೊಂಡು ಖಂಡಿಸುವ ನಾಯಿಕೆ ಖಂಡಿತೆ. ನಾಯಕನಲ್ಲಿರುವ ನಿರುತ್ಸಾಹ, ಖಿನ್ನತೆ, ನಿದ್ರೆ, ಆಲಸ್ಯ, ಇನ್ನೊಬ್ಬಳೊಡನೆ ಇಲ್ಲವೇ ಸವತಿಯ ಜೊತೆ ಸರಸವಾಗಿ ವರ್ತಿಸಿದ ಕುರುಹುಗಳು, ಅಂಗವಿಕಾರ, ಪರಸ್ತ್ರೀಯನ್ನು ಅತಿಯಾಗಿ ಓಲೈಕೆ ಮಾಡುತ್ತಿರುವುದೋ ಕಂಡು ವಂಚಕನೆಂದು ಕುದಿದು ಮನಸ್ಸು ಕೆಡಿಸಿಕೊಂಡು ಸಂಘರ್ಷಕ್ಕಿಳಿಯುತ್ತಾಳೆ. ತನ್ನ ಸ್ವಭಾವಕ್ಕೆ ಸಹಕರಿಸದಂತಿರುವ ಆತನ ವಿಪರೀತ ಸ್ವಭಾವಕ್ಕೆ ಜಗಳಕ್ಕಿಳಿಯುತ್ತಾಳೆ; ತನ್ನ ಪ್ರೇಮಕ್ಕೆ ಇಂಥ ವಿಶ್ವಾಸಘಾತಕನು ಅರ್ಹನಲ್ಲವೆಂದು ನಿಷ್ಠುರವಾಗಿ ವರ್ತಿಸುತ್ತಾಳೆ; ನೋಟದಿಂದ, ಮಾತಿನಿಂದ ತಿವಿಯುತ್ತಾಳೆ. ಈಕೆ ನಾಯಕನನ್ನು ಹೊರಟುಹೋಗುವಂತೆ ಆದೇಶಿಸುವ ಈಕೆಯ ಸಂಚಾರಿ ಭಾವಗಳು ಅಳು, ಗರ್ವ, ಅಲಕ್ಷ್ಯ, ಆಕ್ಷೇಪಣೆ, ದೂಷಣೆ, ಹೆದರಿಸುವುದು, ಹೊಡೆಯುವುದು, ಗೊಂದಲ, ಮೌನ, ವ್ಯಥೆ, ಅಸಹ್ಯ, ಅಸೂಯೆ, ಧಿಕ್ಕರಿಸುವಿಕೆ, ಅಪ್ರಿಯತೆ, ಕ್ರೋಧ ಇತ್ಯಾದಿ.

ಈ ನಾಯಿಕೆಯಲ್ಲೂ ಉತ್ತಮ, ಮಧ್ಯಮ, ಅಧಮ ಅಥವಾ ಸ್ವೀಯಾ, ಪರಕೀಯ, ಸಾಮಾನ್ಯವೆಂಬ ಬೇಧಗಳಿದ್ದು ಅದು ಈಕೆಯ ಅವಸ್ಥೆಗಳನ್ನು ಅವಲಂಬಿಸಿರುತ್ತದೆ. ಸಹಜವಾಗಿ ಉತ್ತಮ ನಾಯಿಕೆಯದ್ದು ಹೆಚ್ಚೇನೂ ಅಭಿನಯಕ್ಕೆ ಅವಕಾಶ ನೀಡದ ಆದರೆ; ಉನ್ನತ ಮಟ್ಟದ, ಗಂಭೀರ, ಮೃದು ವರ್ತನೆಯುಳ್ಳ ಭಾವಪ್ರಕಾಶ. ಮಧ್ಯಮವು ಮನುಷ್ಯ ಸಹಜ ಮಿಶ್ರ ಭಾವನೆಗಳ ಪ್ರತಿರೂಪ. ಅಧಮನಾಯಿಕೆಯು ನೀಚ ಇಲ್ಲವೇ ಭಾವನೆಯನ್ನು ಹಿಡಿತವಿರಿಸದೆ ಯಥಾಸ್ಥಿತಿಯಲ್ಲಿ ಹರಿಬಿಡುವ, ಅಥವಾ ಗೌರವಯುತ ನಡವಳಿಕೆಗಳ ಬದಲಾಗಿ ಎಂದಿನಂತೆಯೇ ಇದ್ದು ; ಅನೌಚಿತ್ಯಕರವಾಗಿ ಕಾಣಿಸಿಕೊಳ್ಳುವವಳು. ಉತ್ತಮ ಖಂಡಿತೆಯಲ್ಲಿ ಲಘುವಾದ ಕೋಪವಿದ್ದರೆ; ಮಧ್ಯಮಳದ್ದು ಕಾಂತನ ತಪ್ಪಿಗೆ ಅನುಸಾರವಾದ ಅಷ್ಟೇ ಗಾಢ ಕೋಪ; ಅಧಮಳದ್ದು ಅತಿಶಯ ಕೋಪ. ಇದರೊಂದಿಗೆ ಇತರೆ ನಾಯಿಕಾಬೇಧಗಳಾದ ಧೀರಾ, ಅಧೀರಾ, ವಕ್ರೋಕ್ತಿಗರ್ವಿತಾಗಳ ಲಕ್ಷಣಗಳಲ್ಲೂ ಈಕೆಯ ಅವಸ್ಥೆಗಳನ್ನು ವಿಭಾಗಿಸಬಹುದು.

ಸ್ವೀಯಾ ಅಂದರೆ ಪತಿಗೆ ನಿಷ್ಠಳಾದ ಪತ್ನಿ. ಪರಕೀಯಳು ಪತಿಯ ಹೊರತಾಗಿಯೂ ಇನ್ನೊಬ್ಬರಲ್ಲಿ ಅನುರಾಗ ಹೊಂದಿರುವವಳು, ಸಾಮಾನ್ಯೆಯು ವೇಶ್ಯೆಯೇ ಆಗಿರುತ್ತಾಳೆ. ಇಷ್ಟೇ ಅಲ್ಲದೆ ಅಷ್ಠವಿಧ ನಾಯಿಕೆ ಅಥವಾ ಮೇಲ್ಕಂಡ ಮೂವರು ಶೃಂಗಾರ ನಾಯಿಕೆಯರು ಮುಗ್ಧಾ, ಮಧ್ಯಾ ಮತ್ತು ಪ್ರಗಲ್ಭ ಸ್ಥಿತಿಯ ಪೈಕಿ ಯಾವುದಾದರೂ ಒಂದು ವರ್ಗಕ್ಕೆ ಸೇರಿರುವುದೂ ಇದೆ. ಮುಗ್ಧಾ ನಾಯಿಕೆಯು ಮುಗ್ಧೆ, ಬಾಲ್ಯ ಯೌವನಗಳ ಸಂಧಿಕಾಲದಲ್ಲಿರುವವಳು. ಲಜ್ಜೆಯ ವರ್ತನೆ, ಅನುರಾಗದ ಕುರಿತಾಗಿ ಅಷ್ಟೇನೂ ಅರಿವಿಲ್ಲದ ಮೃದು ಸ್ವಭಾವದವಳಾಗಿರುತ್ತಾಳೆ. ಆಕೆಗೆ ಎಲ್ಲವೂ ಹೊಸತು, ಮೊದಲು. ಮಧ್ಯಾ ನಾಯಿಕೆಯು ಮುಗ್ಧಾಳಿಗಿಂತ ಕೊಂಚ ಹೆಚ್ಚಾದ ಅರಿವಿರುವ ಯೌವನಾವಸ್ಥೆ ವ್ಯಾಪಿಸಿರುವವಳು. ಹೆಚ್ಚು ಲಜ್ಜೆ ಮತ್ತು ಕಾಮವಿಕಾರವುಳ್ಳ ಈಕೆಯದ್ದು ಚಾತುರ್ಯಭರಿತ ವರ್ತನೆ. ಪ್ರಗಲ್ಭೆಗೆ ಕಾಮಾಸಕ್ತಿ ಹೆಚ್ಚು, ರತಿಕ್ರೀಡೆಗಳಲ್ಲಿ ಪ್ರವೀಣಳು. ಲಜ್ಜೆ ಅತೀಕಡಿಮೆ. ಇವುಗಳೊಳಗೂ ಧೀರ, ಅಧೀರ, ಧೀರಾಧೀರ ಹಾಗೂ ಜ್ಞಾತ, ಅಜ್ಞಾತ, ಪ್ರೌಢ, ನವೋಢ, ಲಘು, ಗುರುವೆಂಬ ಹಲವಾರು ಬೇಧಗಳಿದ್ದು; ಸುಮಾರು ೫೦,೨೨೦ರಷ್ಟು ನಾಯಿಕಾಬೇಧಗಳಿವೆ ಎಂದಿದ್ದಾರೆ ಪ್ರಾಜ್ಞರು!! ಒಟ್ಟಿನಲ್ಲಿ ನಾಯಿಕೆಯ ಸಂಸ್ಕಾರ-ವಯಸ್ಸು-ಸಾಮಾಜಿಕಸ್ಥಾನಮಾನ-ಸೌಶೀಲ್ಯದಿಂದ ಆಕೆಯ ವರ್ತನೆ ಮೃದುವೋ, ಕಟುವೋ, ಮಧ್ಯಮವೋ ಎಂಬುದು ನಿರ್ಧಾರವಾಗುತ್ತದೆ.

ಇಲ್ಲಿ ನೀಡಲಾಗಿರುವ ಶತಾವಧಾನಿ ಡಾ. ಗಣೇಶರ ಕಾವ್ಯ ಮತ್ತು ಮಂಟಪರ ಭಾವಾಭಿವ್ಯಕ್ತಿಯಲ್ಲಿ ನೀಡಲಾಗಿರುವ ನಾಯಿಕೆಯು ಉತ್ತಮ-ಮಧ್ಯಮ ಗುಣವುಳ್ಳ; ಸ್ವೀಯಾ, ಮಧ್ಯಾ, ಜ್ಞಾತ, ಪ್ರೌಢ ಸ್ವಭಾವವುಳ್ಳವಳಾಗಿದ್ದು; ನರ್ತನದಲ್ಲಿ ಅಭಿನಯಕ್ಕೆ ಹೆಚ್ಚು ವಿಸ್ತಾರವನ್ನು ಕಲ್ಪಿಸಿಕೊಡುವ ಮತ್ತು ಮಾದರಿಯ ಜೀವನದ ಆಯಾಮವಿರುವುದರಿಂದ; ಈ ಅಷ್ಟನಾಯಿಕಾ ಚಿತ್ತವೃತ್ತಿಯ ಹಾದಿಯಲ್ಲಿ ಮಧ್ಯಮನಾಯಿಕೆಯನ್ನೇ ಪ್ರಧಾನವಾಗಿ ಎಲ್ಲಾ ನಾಯಿಕೆಯರಿಗೂ ಅಳವಡಿಸಿ ಸಾಹಿತ್ಯವನ್ನು ನೀಡಲಾಗಿದೆ. ಧಾರವಾಡ ಆಕಾಶವಾಣಿಯ ಉದ್ಯೋಗಿ, ಕವಿ, ಯಕ್ಷಗಾನ ಅರ್ಥಧಾರಿ ದಿವಾಕರ ಹೆಗಡೆಯವರ ಕವಿತ್ವವು ಭೂಮಿ, ಪ್ರಕೃತಿ, ಮಳೆ, ಬಾನು ಇತ್ಯಾದಿ ಪ್ರಾಕೃತಿಕವಾಗಿ ನಿರೂಪಿಸಲ್ಪಟ್ಟ ಸೆಲೆಯನ್ನು ಹೊಂದಿದೆ. ಶರದ್ ಋತುವಿನಿಂದಾರಂಭಿಸಿ ಗ್ರೀಷ್ಮ ಋತುವಿನವರೆಗೆ ಭೂಮಿಯ ಮೇಲ್ಮೈಯಲ್ಲಾಗುವ ಬದಲಾವಣೆಗಳನ್ನೇ ನಾಯಿಕೆಯ ಅವಸ್ಥೆಗಳನ್ನಾಗಿಸಿ ಚಿತ್ರಿಸುವ ಕಾವ್ಯದಲ್ಲಿ ಮೇದಿನಿ ಅಷ್ಟನಾಯಿಕಾ ಭಾವದಲ್ಲಿ ಮೇಘನಿಗಾಗಿ ಕಾಯುತ್ತಾಳೆ. ಭಾವಕ್ಕೆ ಒತ್ತಾಸೆಯಾಗಿ ನಿಲ್ಲುವ ಲಯಲಾಲಿತ್ಯ ಕಾವ್ಯಕ್ಕೆ ಹದ ನೀಡುವ ಪದಮೈತ್ರಿ ಇದರ ವಿಶೇಷ.

ಬನ್ನಿ, ನಮ್ಮ ಕಲ್ಪನಾ ಸಾಮರ್ಥ್ಯ, ಅನುಭವ-ಅನುಭಾವ, ವಿಶ್ಲೇಷಣೆ, ನಾಟ್ಯದ ಆಯಾಮ, ಸವಾಲು-ಸಾಧನ, ಅಭಿವ್ಯಕ್ತಿಯ ಕ್ಷಿತಿಜ, ರಸದೃಷ್ಟಿ, ಕಾವ್ಯದೃಷ್ಟಿ ಮತ್ತು ಅರಿವಿನ ಹರಹುವಿನ ವಿಸ್ತಾರದಲ್ಲಿ ಕೈಜೋಡಿಸೋಣ. ನಿಮ್ಮ ಕಲ್ಪನೆ-ಚಿಂತನೆಗಳಿಗೆ ಇದು ಮುಕ್ತ ವೇದಿಕೆಯಾಗಲಿ.

 

ಭಾಮಿನೀ

ಶತಾವಧಾನಿ ಡಾ. ಆರ್. ಗಣೇಶ್

 

ರಾಗ ಅಠಾಣ : ಚಂಪಕಮಾಲಾ ವೃತ್ತ

ವಿರಹವಿದೀರ್ಣೆಯಂ ಸ್ಮರಶರಪ್ರಖರಪ್ರಕಟಪ್ರಹಾರದಿಂ

ನರಳುವ ನಲ್ಲೆಯಂ ರಜನಿಯಂತ್ಯದ ಮುನ್ನಮದೆಂತೊ ಧೂರ್ತತಾ

ವಿರಚನೆಯಿಂದೆ ತುಯ್ದು ತನುವಂ ಮನಮಂ ಮಿಗೆ ಕುಂಚಿಸುತ್ತೆ ಬಂ

ದಿರೆ ಶಮಿಸಲ್ಕೆ ಸಿರ್ರನವನೊಳ್ ಮುನಿದೇಳ್ವಳಡರ್ದು ಖಂಡಿತೆ ||

(ವಿರಹಿಣಿಯಾದ ಪತ್ನಿಯತ್ತ ಅಳುಕುತ್ತ ಬಂದ ಶಂಕಿತನಾದ ನಾಯಕನನ್ನು ಕಂಡು ಅವನಲ್ಲಿ ಸಿಡಿದು ಮುನಿದೇಳುವ ನಾಯಿಕೆಯೇ ಖಂಡಿತೆಯೆನಿಸುತ್ತಾಳೆ.)

ರಾಗ ಬಿಲಹರಿ ಅಷ್ಟ, ಏಕ, ತ್ರಿಪುಟ ತಾಳಗಳು

ನೆನಪಾಯಿತೇ? ಈಗ ಮನವಾಯಿತೇ?

ಅನುಕೂಲದಾಂಪತ್ಯ ಬೇಕಾಯಿತೇ? ||ಪ||

ಅನುರಾಗವತಿಯರು ಅನುಗಾಲ ನಿಮಗಿರ

ಲೆನಗಾಗಿ ಬರುವಂಥ ಶ್ರಮವೇತಕೆ? ವಿಭ್ರಮವೇತಕೆ? || ಅ.ಪ||

ಹಾದಿ ತಪ್ಪಿದರೇನು? ಹಾವ-ಭಾವಗಳೇನು ?

ಸಾಧು-ಸಜ್ಜನಿಕೆಯು ಸಾಕಿನ್ನು |

ಆ ದಿನಗಳ ರಸಮೋದಗಳೆಲ್ಲವ

ನಾದಿನೀಗಿದಿರಿಂದು ನಗಲೇನು ? ||

ಕನ್ನಡಿ ತರಲೇ? ಕಯ್ಯೊಳೆ ತೋರಲೆ ?

ಇನ್ನೀ ನಿಮ್ಮಯ ಚಾತುರಿಗೆ |

ಮನ್ನಿಸೆ ನಾನು- ಭಿನ್ನಿಸೆ ನೀವು

ಬಿನ್ನಾಣವಿದೇ ಸಿರಿದೊರೆಗೆ ||

ನಿನ್ನ ನಂಬಿದ ನನ್ನನೀ ಪರಿ

ಚಿಮ್ಮಿ ಚೆಲ್ಲಿದ ಚಮತ್ಕೃತಿಯೋ |

ಹಮ್ಮಿನಾಕೆಯು ಬಳಸಿ ಬಿಸುಟೀ

ನೆಮ್ಮಲಾಗದ ಪುರಸ್ಕೃತಿಯೋ ||

 

 

ಮೇಘಮೇದಿನಿ

ದಿವಾಕರ ಹೆಗಡೆ, ಧಾರವಾಡ

ಬಾರದೆಲ್ಲಿಗೆ ಪೋದ ಮಾರ ರೂಪದ ಮೋದ |

ಕಾರಣವೇನೀಗ ಸಾರಸ ಗುಣ ಶೋಧ |

ಯಾರ ಕಣ್ಣಂಚಲಿ ಮಿಂಚು ಹೊಳೆಯಿತೊ ಕಾಣೆ |

ಯಾರ ಮಂಚದಿ ಗುಡುಗು ಅಡಗಿರಬಹುದೋ |

ದೂರದಂಚಲಿ ನಿಂತು ವಂಚನೆಗೈವನೆ |

ನೂರು ಸಂಚಿನ ನೀರ ದೂರಾಗು ನೀಬೇಡ ||

 

 

ಭಾಮಿನಿಯ ಭಾವಾಭಿವ್ಯಕ್ತಿ

-ಮಂಟಪ ಪ್ರಭಾಕರ ಉಪಾಧ್ಯ

 

…ಭಾರವಾದ ಎದೆಯ ಬಡಿತ. ನಿದ್ರೆಯೇ ನನ್ನ ಪಾಲಿನ ಸಂಜೀವಿನಿ ಎಂದು ನಿದ್ರೆ ಮಾಡಲು ಕಣ್ಣು ಮುಚ್ಚಿದೆ. ಸುತ್ತಲಿನ ಪ್ರಪಂಚ ನನ್ನನ್ನು ಯಾಕೆ ನುಂಗಬಾರದು ಎಂದು ಕಣ್ಣು ಬಿಟ್ಟು ನೋಡಿದೆ. ಊರಿನಿಂದ ಬಹಿಷ್ಕಾರ ಹಾಕಿ ಎಲ್ಲರೂ ಊರ ಹೊರಗೆ ಹಾಕಿದವಳಂತೆ ಅನ್ನಿಸಿತು. ಯಾರೂ ನನ್ನ ಜೊತೆ ಇಲ್ಲವೇ ಎಂಬ ನನ್ನ ಹೃದಯದ ಕೂಗಿಗೆ ಆಗಲೇ ಪರಿಚಿತಧ್ವನಿಯ ಸೇರ್ಪಡೆ. ಅದೇ ಗಾಡಿಯ ಸಪ್ಪಳ. ಇದರ ಲಯವನ್ನು ಗಮನಿಸಿದಾಗ ಅದು ನನ್ನವನದ್ದೇ. ಸಪ್ಪಳದ ಧ್ವನಿ ಏರಿದಂತೆ ನನ್ನ ಹೃದಯದ ಬಡಿತವೂ ಅದಕ್ಕೆ ಸೇರಿಕೊಂಡಿತು. ನಾನೂ ಸಪ್ಪಳದ ದಾರಿ ಹಿಡಿದೆ. ದೂರದಲ್ಲಿ ಮಸುಕಬೆಳಕಿನಲ್ಲಿ ಗಾಡಿ ನೋಡಿದೆ. ಗಾಡಿಗೆ ಕಟ್ಟಿದ ದೀಪ ಆರಿಸಿಲ್ಲವಾಗಿತ್ತು. ಸ್ವಲ್ಪದೂರದಲ್ಲೇ ಗಾಡಿ ನಿಂತಿತ್ತು. ಇನ್ಯಾರೋ ಗಾಡಿಯಲ್ಲಿ ಇರುವಂತೆ ಕಂಡಿತು. ಯಾರೆಂದು ತಿಳಿಯದಿದ್ದರೂ ಹೆಣ್ಣೆಂದು ತಿಳಿಯಿತು. ನಿರಾಸೆ ಆಯ್ತು. ನನ್ನವನ ಗಾಡಿ ಅಲ್ಲ ಎಂದು ತಿರುಗುವಾಗ ನನ್ನವನ ಧ್ವನಿ ಕೇಳಿಸಿತು. ಮತ್ತೆ ತಿರುಗಿ ಆಲಿಸಿದೆ. ದಿಟ್ಟಿಸಿದೆ. ಗರಬಡಿದು ನಿಂತೆ.

ನನ್ನವನು ಗಾಡಿಯಿಂದ ಸಲುಗೆಯಲ್ಲಿ ಆಕೆಯ ಕೈಹಿಡಿದು ಇಳಿಸುತ್ತಿದ್ದ. ಏನೇನೋ ಸಾಂತ್ವನ-ಮುದ್ದು ಮಾತುಗಳಿಂದ ಹರಟೆ ಹೊಡೆಯುತ್ತಿದ್ದ. ನನಗಂತೂ ಆಕೆ ಅಪರಿಚಿತಳು. ಆಕೆಯೋ ನನ್ನ ನಲ್ಲನ ಸಲುಗೆಯನ್ನು ಹಕ್ಕಿನಿಂದ ಪಡೆಯುತ್ತಿದ್ದಳು. ನನಗಾಗಲೇ ಮೈಯ್ಯೆಲ್ಲಾ ಕಾದಿತ್ತು. ಹಲ್ಲುಗಳನ್ನು ಕಡಿದುಕೊಂಡೆ. ಹಲ್ಲು ಪುಡಿಯಾಗದೇ ಇದ್ದದ್ದು ನನ್ನ ಪುಣ್ಯ. ನನ್ನ ನಂಬಿಕೆಯೇ ಸುಳ್ಳಾಯ್ತು. ನಾನೊಬ್ಬಳೇ ರತಿ ಎನ್ನುತ್ತಿದ್ದ ಆತನ ಮಾತು ನನ್ನ ಪಾಲಿಗೆ ಅಸಹ್ಯವಾಗಿ ಚುಚ್ಚಿತು. ಆತನಿಗಾಗಿ ನಾನು ಪಟ್ಟ ಶ್ರಮವೆಲ್ಲಾ ವ್ಯರ್ಥವೆನಿಸಿ ನನ್ನ ಹತಾಶೆಯ ವಿರಹದಿಂದ ಶಕ್ತಿಗುಂದಿದ ನನ್ನಲ್ಲಿ ಕೋಪದ್ವೇಷಗಳು ಸೇರಿ ಶಕ್ತಿವಂತಳಾಗಿ ಸೆಟೆದು ನಿಂತೆ. ನನ್ನ ಸಿಟ್ಟಿನ ಅವತಾರವನ್ನು ಪ್ರದರ್ಶಿಸಬೇಕೆಂದು ಆತನ ಬಳಿಗೆ ಹೊರಟೆ. ಆದರೆ ಇನ್ನೊಂದು ಹೆಣ್ಣಿನ ಬಲ ಇರುವ ಆತನಲ್ಲಿ ನನ್ನ ಕೋಪಕ್ಕೆ ಬೆಲೆ ಇರದು ಎಂಬ ವಿವೇಕದಿಂದ ಹಿಂದೆ ಸರಿದೆ.

ಕೈಕೈ ಹಿಸುಕಿಕೊಂಡೆ. ನನ್ನ ತಲೆಗೆ ಏನೂ ಹೊಳೆಯಲಿಲ್ಲ. ಆತನಿಗಾಗಿ ತಂದ ಹೂಮಾಲೆಯನ್ನು ಹರಿದು ಬಿಸುಟೆ. ನನಗೇ ಸಲ್ಲಬೇಕಾದ ಎಲ್ಲವೂ ನಾಚಿಗೆಗೆಟ್ಟವಳಿಗೆ ಸಿಗುವುದನ್ನು ಕಂಡು ನಾನು ಎಚ್ಚರವಾಗಿರಬೇಕೆಂದು ಜಾಗೃತಳಾದೆ. ನನ್ನ ವಿರೋಧ ಇಲ್ಲಿ ಅನುಕೂಲ ಅಲ್ಲ. ಹೀಗೆ ಮುಂದುವರಿದರೆ ನನ್ನ ಸ್ಥಾನಕ್ಕೂ ಸ್ಥಳಕ್ಕೂ ಸಂಚಕಾರ ಬಂದೀತೆಂದು ನನ್ನ ಮನೆ ಸೇರಲು ಹೊರಟೆ. ನನಗೇ ಸೇರಿದ ಮನೆಗೆ ಇನ್ನಾರೂ ಬರಕೂಡದು ಎಂದು ಬುಸುಗುಡುತ್ತಾ ಬಾಗಿಲು ಜಡಿದೆ. ಬರುತ್ತಲೇ ರಂಗವಲ್ಲಿಯನ್ನು ತುಳಿದೆ. ಓರಣವಾಗಿರುವ ಮನೆಯು ನನ್ನನ್ನು ನೋಡಿ ಅಣಕಿಸುವಂತಾಯ್ತು. ಎಲ್ಲವುಗಳ ಮೇಲೆ ನನ್ನ ರೌದ್ರವತಾರದ ದರ್ಶನ ಆಯ್ತು. ನನ್ನ ಕೋಪ ಮಾತ್ರ ಇಳಿಯಲೇ ಇಲ್ಲ.

ಆಗಲೇ ಬಾಗಿಲು ಬಡಿದ ಸದ್ದಾಯ್ತು. ಅದೂ ಒಳ್ಳೆಯ ಲಯಬದ್ಧ, ನಯವಾದ ಸದ್ದಿನೊಂದಿಗೆ. ನನ್ನ ಕಿವಿಗೆ ಮಾತ್ರ ಕರ್ಕಶವಾಗಿತ್ತು. ಸಹಿಸಲಾರದೆ ಬಾಗಿಲು ತೆರೆದೆ. ಅವನೇ ಪತಿರಾಯ ನಗುಮೊಗದ ವೇಷದಿಂದ ನನ್ನ ಮೇಲೆ ಬೀಳಲು ಮುಂದಾದ. ಅರ್ಧಕ್ಕೆ ಬಾಗಿಲಿನಿಂದ ನೂಕಿ ತಡೆದು ಇಣುಕಿದೆ. ಆ ಮಾನಗೆಟ್ಟವಳೂ ಇಲ್ಲಿಗೆ ಬಂದಳೇ ಎಂದು. ಸದ್ಯ ಆಕೆ ಎಲ್ಲೂ ಕಾಣಿಸಲಿಲ್ಲ. ದುರುಗುಟ್ಟಿ ಅಸಹ್ಯದಿಂದ-ಸಿಟ್ಟಿನಿಂದ- ತಿರಸ್ಕಾರದಿಂದ ಅವನನ್ನು ಕಂಡೆ. ಯಾವ ಬದಲಾವಣೆಯೂ ಇಲ್ಲದೆ ಮಾನಗೆಟ್ಟವನಂತೆ ಕಂಡ. ತಕ್ಷಣ ಬಾಗಿಲನ್ನು ಬಿಟ್ಟು ಒಳಗೆ ಬಂದೆ. ಆಧಾರ ತಪ್ಪಿ ಆತ ನೆಲದ ಮೇಲೆ ಉರುಳಿದ. ಕ್ಷಣವೂ ಹಿಂದೆ ನೋಡದೆ ಒಳಗೆ ಬಂದೆ.

ನನ್ನ ವರ್ತನೆಯಿಂದ ವಿಚಲಿತನಾಗದೆ ಆತ ನಿಧಾನವಾಗಿ ನನ್ನನ್ನು ರಮಿಸಲು ಮುಂದಾದ. ಅವನಲ್ಲಿ ನನ್ನ ಮಾತೇ ಇಲ್ಲ. ಅವನೋ ನನಗಿಂತ ಜಾಣ. ನನ್ನನ್ನು ಎಲ್ಲೆಲ್ಲಿ ಕೆಣಕಬೇಕೋ ಅಲ್ಲಲ್ಲಿಯೇ ಕೆಣಕುತ್ತಿದ್ದ. ತಲೆಕೆಡಿಸಿಕೊಂಡು ಬುಸುಗುಡುತ್ತಿರುವ ನನ್ನ ತಲೆಬಿಸಿ ತಣಿಸಲು ಮಲ್ಲಿಗೆಯ ಮಾಲೆ ಮುಡಿಸಲು ಮುಂದಾದ. ಪೇಟೆಯಿಂದ ತಂದ ತಂಪಾದ ರೇಷ್ಮೆಸೀರೆಯನ್ನು ಬಿಸಿಯಾದ ನನ್ನ ದೇಹಕ್ಕೆ ಹೊದೆಸಿದ. ಮಂಚದಿಂದ ಇಳಿಬಿಟ್ಟ ನನ್ನ ಕಾಲ್ಗಳಿಗೆ ಬೆಳ್ಳಿಯ ಗೆಜ್ಜೆ ತಾನಾಗಿಯೇ ತೊಡಿಸಿದ. ಆಗೆಲ್ಲ ಹೆಣದಂತೆ ನಟಿಸಿದ ನನ್ನನ್ನು ಕೆಣಕಲು ನನ್ನ ಜಡೆಯನ್ನು ಎಳೆದು ತನ್ನ ರಸಿಕತನದ ಆಟಕ್ಕೆ ಮುಂದಾದ. ನಾನೋ ಮಹಾಕಾಳಿಯಾಗಿಯೇ ಇದ್ದೆ. ನನ್ನ ಆಳದ ಕೋಪ ತಿಳಿದ ಆತ ತನ್ನ ಬಾಹುಗಳಿಂದ ನನ್ನನ್ನು ಆಲಿಂಗಿಸಲು ಮುಂದಾದ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆತನ ಕೈ ಬೆರಳಿನ ಸ್ಪರ್ಶ ನನ್ನನ್ನು ಬಿಗಿದ ವೀಣೆಯ ತಂತಿಯ ಮೇಲೆ ಬೆರಳಾಡಿಸಿದಾಗ ಉಂಟಾಗುವ ಸ್ವರನಾದಗಳಂತೆ ನನ್ನ ಸಿಟ್ಟು ಇಳಿದೂ ಇಳಿಯದೆ ಹಲವು ಪ್ರಶ್ನೆಗಳನ್ನು ಕೇಳಲು ಮುಂದಾಯ್ತು. ಅಂದರೆ ನಾನು ಮಾತನಾಡಲು ಮುಂದಾದೆ. ನನಗೋ ಉತ್ತರಬೇಕಿಲ್ಲವಾಗಿತ್ತು. ಕೋಪದಿಂದಲೇ ಕೇಳಿದ ಪ್ರಶ್ನೆಗಳು ಆತನ ಪ್ರತ್ಯಭಿನಯದಿಂದ ಪ್ರಶ್ನೆಗಳು ಸೋಲುತ್ತಲೇ ಇದ್ದುವು. ಆದರೂ ಸೋಲು ಕಾಣಿಸದೇ ಆತನನ್ನು ಕೆಣಕುತ್ತಲೇ ಇದ್ದೆ ; ಚುಚ್ಚುತ್ತಲೇ ಇದ್ದೆ.

ಏನು ರಾಯರೇ, ತಮ್ಮ ಸವಾರಿ ದಾರಿತಪ್ಪಿ ಈ ಕಡೆ ಬಂದಿರಾ? ನನಗಾಗಿ ಬರುವ ಶ್ರಮ ಬೇಕಿತ್ತಾ? ನನಗಿಂತ ಸುಂದರಿಯರು ಮನ್ಮಥನಿಗೆ ಸಿಗಲೇ ಇಲ್ಲವೇ? ಛೆ ! ಛೆ ! ತುಂಬಾ ತೊಂದರೆಪಟ್ಟಿರಿ. ನಿಮಗಾಗಿ ಅದೆಷ್ಟು ಸುಂದರಿಯರು ಕಾದಿರುತ್ತಾರೋ! ಹಾಗಿರುವಾಗ ಬಡವಿಯಾದ ನನ್ನಲ್ಲಿಗೆ ಬಂದು ಉಪಕಾರ ಆಯ್ತು. ಧನ್ಯಳಾದೆ. ತಾವಿನ್ನು ತೆರಳಬಹುದು ಹೀಗೆ ಹಲವು ವಿಧಗಳಲ್ಲಿ ಚುಚ್ಚಿದೆ. ಆತ ಮಾತ್ರ ತನ್ನ ಒಂದೇ ತೆರದ ಅಭಿನಯದಲ್ಲೇ ಇದ್ದ. ಅಬ್ಬಾ ! ನಿನ್ನ ಅಭಿನಯ ನೋಡಿದರೆ ಯಾವ ನಟನೂ ನಾಚಬೇಕು. ಸಾಕುಮಾಡು ನಿನ್ನ ನಟನೆ. ಹಿಂದಿನ ನನ್ನ ರಸಮಯದ ಸವಿಯನ್ನೆಲ್ಲಾ ಒಂದೇ ಕ್ಷಣದಲ್ಲಿ ಕಹಿ ಮಾಡಿ ಅನಿಸಿಕೆಯ ರತಿಯಂತೆ ನಾನು ಈ ಜನ್ಮದಲ್ಲಿ ನಾನಾಗಿರಲಾರೆ ಎಂದು ಪರೋಕ್ಷವಾಗಿ ಗಾಡಿಯಿಂದ ಇಳಿಸಿದ ಬಿನ್ನಾಣಗಿತ್ತಿಯ ಪ್ರಸ್ತಾಪಮಾಡಿದೆ.

ಸೂಕ್ಷ್ಮಮತಿಯಾದ ಆತ ಅಯ್ಯೋ ನೀನು ತಪ್ಪು ತಿಳಿದಿದ್ದಿ ಎಂದು ಸಮಜಾಯಿಷಿ ನೀಡಲು ಮುಂದಾದ. ತನ್ನ ಶುದ್ಧತೆಯನ್ನು ಸಾಬೀತು ಮಾಡಲು ಮುಂದಾದಾಗ ಕೋಪ ಹೆಚ್ಚಿತು. ಆ ಹೆಣ್ಣು ಮುಡಿದ ಹೂವಿನ ದಳ ಆತನ ತಲೆಯ ಮೆಲೆ ಪ್ರಸಾದ ಇಟ್ಟುಕೊಂಡಂತೆ ಕಂಡಿದ್ದನ್ನು ತೋರಿಸಿದೆ. ಆಕೆಯ ನೀಳಕೇಶದ ತುಂಡೊಂದು ಈತನ ಶಾಲಿನ ಮೇಲೆ ಇರುವುದನ್ನು ತೋರಿಸಿದೆ. ಇನ್ನು ಆಕೆಯ ಮೈಗೆ ಹಚ್ಚಿಕೊಂಡ ಅತ್ತರು ಇವನ ದೇಹದಲ್ಲಿ ಸಾಕ್ಷಿಯಾಗಿ ಪಸರಿಸುತ್ತಿತ್ತು. ಎಲ್ಲವಕ್ಕೂ ಒಂದೊಂದು ಕಾರಣ ಹೇಳಿ ತಟ್ಟಿಹಾರಿಸಿದ. ಕನ್ನಡಿ ತಂದು ತೋರಿಸಲೇ? ಎಂದಾಗ ಇನ್ನು ತನ್ನ ಆಟ ಸಾಗದು ಎಂದು ಪುಣ್ಯಾತ್ಗಿತ್ತಿ ಸ್ವಲ್ಪ ನಿಧಾನಿಸು. ಹೊರಗಿನವರು ಕಂಡರೆ ಏನೆಂದಾರು? ಎಂದು ನನ್ನನ್ನು ಮರ್ಯಾದೆಯ ಆವರಣದೊಳಗೆ ದೂಡಲು, ಸ್ವರ ಏರಿಸಿ ಗದರಿಸುವುದಕ್ಕೆ ಮುಂದಾದರೂ ತಕ್ಷಣ ಅದರ ಪ್ರಯೋಜನ ಆಗಲಾರದು ಎಂದು ಗ್ರಹಿಸಿ ನನ್ನನ್ನು ರಮಿಸುತ್ತಲೇ ಒಳಗೆ ನೂಕುತ್ತಾ ನನ್ನ ಕಾಲು ಹಿಡಿಯಲು ಮುಂದಾದ. ನಾನು ಬಿಟ್ಟೇನಾ? ಪ್ರತ್ಯಕ್ಷವಾಗಿ ಸಿಕ್ಕಿದ ಕಳ್ಳನ ನಾಟಕವೆಂದು ಬಗೆದು ಎಲ್ಲವನ್ನು ತಿರಸ್ಕರಿಸಿದೆ. ಬೀಗಿದೆ, ಏರಿದೆ.

ನನ್ನ ಪಾವಿತ್ರ್ಯದ ಪ್ರೀತಿಯನ್ನು ಮುಂದಿಟ್ಟುಕೊಂಡು ನನ್ನಂಥವಳಿಗೇ ನೀ ಹೀಗೆ ಮಾಡಿದ್ದಿಯಲ್ಲೋ, ನಿನ್ನಂತಹವನನ್ನು ಕ್ಷಮಿಸಲಾರೆ. ಇನ್ನೊಂದು ಹೆಣ್ಣನ್ನು ಬಯಸಿದ ನಿನ್ನನ್ನು ನಾ ಸ್ವೀಕರಿಸಲಾರೆ. ಇನ್ನೊಬ್ಬರು ಮುಡಿದ ಹೂವನ್ನು ಹೇಗೆ ಮುಡಿಯಲಾಗದೋ ಹಾಗೆಯೇ ನೀನು ನನ್ನ ಪಾಲಿಗೆ ದೂರ. ನಿನ್ನಂತಹವನನ್ನು ಪುರಸ್ಕರಿಸಿದರೆ ನನ್ನಂತಹ ಹೆಣ್ಣಿಗೆ ಇದು ನಿರಂತರ ಶಾಪ. ನನ್ನಂತಹವಳಿಂದಲೇ ಗಂಡಿಗೆ ಇದು ತಿಳಿಯಲಿ ಎಂದು ಹೇಳಿ ಹಜ್ಜೆ ಹಜ್ಜೆಗೂ ಇನ್ನೇನೋ ಹೇಳಬಯಸುತ್ತಾ ನನ್ನ ಬಳಿ ಬರುವ ಆತನನ್ನು ದೂರತಳ್ಳುತ್ತಾ ಒಮ್ಮೆಲೇ ಬಾಗಿಲಿನಿಂದ ಹೊರಹಾಕಿದೆ. ಗೆದ್ದ ಆವೇಶದಿಂದ ಸೋಲುಂಡ ನಾನು ಸಿಟ್ಟಿನಿಂದ ಬಾಗಿಲನ್ನು ಹಾಕಿ ಅಗಳಿ ಹಾಕಿದೆ.

ಆತನನ್ನು ಹೊರಹಾಕುವಲ್ಲಿ ಗೆದ್ದೆನಾದರೂ ನನ್ನನ್ನು ಗೆಲ್ಲಲಾರದೆ ಕುಸಿದೆ, ಕಂಪಿಸಿದೆ. ನನ್ನ ಸಿಟ್ಟು ಇಳಿಯಲೇ ಇಲ್ಲ. ನನ್ನ ಕಿಡಿದೃಷ್ಟಿ ಮೂಲೆಯಲ್ಲಿದ್ದ ನೀರಿನ ಗಡಿಗೆ ಮೆಲೆ ನೆಟ್ಟಿತು. ಒಂದು ಪಾತ್ರೆಯಿಂದ ಬಾಯಿಗೆ ನೀರನ್ನು ಸುರಿದುಕೊಂಡೆ. ತಂಪಾಗಲಿಲ್ಲ. ಗಡಿಗೆಯ ನೀರನ್ನೇ ತಲೆಯ ಮೇಲೆ ಸುರಿದುಕೊಂಡೆ. ಯಾವುದೇ ಬದಲಾವಣೆ ಆಗದೆ ಸಿಟ್ಟು ಮಾತ್ರ ಹಾಗೆಯೇ ಏರುತ್ತಿತ್ತು. ಸಿಟ್ಟೆಲ್ಲಾ ಗಡಿಗೆಯ ಮೇಲೆ ಹರಿಹಾಯ್ದು ಗಡಿಗೆಯನ್ನು ನೆಲಕ್ಕೆ ಚಚ್ಚಿದೆ. ಗಡಿಗೆ ನುಚ್ಚು ನೂರಾಯ್ತು. ಸಿಟ್ಟು ಇಳಿಯಿತು. ದಾಹ ಇಳಿಯಲಿಲ್ಲ. ನೋಡಲು ನೀರಿನ ದಾಹ ಆದರೂ ಹೃದಯದಲ್ಲಿಯ ಪ್ರೀತಿಯ ದಾಹಕ್ಕೆ ನೀರು ಸಿಗಲೇ ಇಲ್ಲ…

Leave a Reply

*

code