ಅಂಕಣಗಳು

Subscribe


 

ವಿ|| ಕುದ್ಕಾಡಿ ವಿಶ್ವನಾಥ ರೈ

Posted On: Tuesday, December 18th, 2018
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಹಿರಿಯ ನಾಟ್ಯಗುರು, ಕರ್ನಾಟಕ ಕಲಾಶ್ರೀ ಬಿರುದಾಂಕಿತ ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ (೮೬)

ಜನನ : ೧೯೩೨ರಲ್ಲಿ

ನಿಧನ : ಪುತ್ತೂರಿನ ಟೌನ್ ಬ್ಯಾಂಕ್ ಹಾಲ್‌ನಲ್ಲಿ ನಡೆದ ಪುಸ್ತಕ ಹಬ್ಬದಲ್ಲಿ ಭಾಗವಹಿಸಿ, ಸನ್ಮಾನ ಸ್ವೀಕರಿಸಿ ಭಾಷಣವನ್ನೂ ಮಾಡಿದ ಅವರು, ನಂತರ ಮನೆಗೆ ಹಿಂತಿರುಗುವಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತ್ತು. ಸುಳ್ಯಪದವಿನಲ್ಲಿ ಬಸ್ ಇಳಿದು ನಡೆದು ಹೋಗುತ್ತಿರುವಾಗ ಕುಸಿದು ಬಿದ್ದ ಅವರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿಸೆಂಬರ್ ೧೬ರ ರಾತ್ರಿ ಹೃದಯಾಘಾತದಿಂದ ನಿಧನ.

ತಂದೆತಾಯಿ : ದಿ| ದೇವಸ್ಯ ಕುಂಞಣ್ಣ ರೈ, ಕುದ್ಕಾಡಿ ಜಾಕಮ್ಮ

ಶಿಕ್ಷಣ : ಬಡಗನ್ನೂರು, ಈಶ್ವರಮಂಗಲದಲ್ಲಿ ಪ್ರಾಥಮಿಕ ಶಿಕ್ಷಣ, ಸಂತ ಫಿಲೋಮಿನಾದಲ್ಲಿ ಪ್ರೌಢ ಶಿಕ್ಷಣ, ಕಾಸರಗೋಡಿನ ಮೈಪಾಡಿಯಲ್ಲಿ ಶಿಕ್ಷಕ ತರಬೇತಿ, ಖಾಸಗಿಯಾಗಿ ಬಿ‌ಎ, ಎಂಎ ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಬಿ‌ಎಡ್ ಪದವಿ.ವಿದ್ವಾನ್ ಎ. ಎನ್. ನಾಗರಾಜನ್, ಶ್ರೀ ರಾಜನ್ ಅಯ್ಯರ್, ಕೆ.ಎಸ್. ರಾಜಗೋಪಾಲ್, ಕಾಂಚೀಪುರಂ ಜಿ. ಎಳ್ಳಪ್ಪನ್, ಡಾ. ಕೆ. ವೆಂಕಟಲಕ್ಷ್ಮಮ್ಮ ಮುಂತಾದವರಿಂದ ಭರತನಾಟ್ಯ, ಕಥಕ್ಕಳಿ, ಓರಿಯಂಟಲ್ ನೃತ್ಯ ಅಭ್ಯಾಸ. ಇಂಡೋ-ಸಿಲೋನ್ ಸಾಂಸ್ಕೃತಿಕ ವಿನಿಮಯ ಯೋಜನೆಯಲ್ಲಿ ೨ ವರ್ಷಗಳ ಕಾಲ ಸಿಂಹಳಿ ನೃತ್ಯ ಅಭ್ಯಾಸ.

ಆಸಕ್ತಿ, ವೃತ್ತಿ, ಅನುಭವ : ದರ್ಬೆ ಸಂತ ಫಿಲೋಮಿನಾದಲ್ಲಿ ಶಿಕ್ಷಕ ವೃತ್ತಿ. ಮೃದಂಗ ಹಾಗೂ ಹಾಡುಗಾರಿಕೆಯಲ್ಲೂ ಪರಿಣತಿ ಇತ್ತು. ಲಂಕಾದರ್ಶನ, ದೇವಿ ಅಬ್ಬಕ್ಕರಾಣಿ, ಅಬ್ಬಕ್ಕಬ್ಬೆ ಮುಂತಾದ ೨೪ ಕೃತಿಗಳನ್ನು ರಚಿಸಿದ ಇವರು ಹಲವು ನೃತ್ಯನಾಟಕಗಳನ್ನು ನಿರ್ದೇಶಿಸಿದ್ದಾರೆ. ತುಳು ಅಕಾಡೆಮಿಯ ಸದಸ್ಯರಾಗಿಯೂ ದುಡಿದಿದ್ದಾರೆ. ಪುಸ್ತಕ ಪ್ರಕಟಣೆ, ನಟನೆಯಲ್ಲೂ ಆಸಕ್ತಿ ಹೊಂದಿದ್ದ ಇವರು ನೃತ್ಯ ಕಲಾವಿದರಿಗೆ ಕೃತಿಗಳನ್ನು ರಚಿಸಿದ್ದಾರೆ. ವಿಶ್ವ ಕಲಾನಿಕೇತನ ಎಂಬ ಹೆಸರಲ್ಲಿ ನೂರಾರು ವಿದ್ಯಾರ್ಥಿಗಳಿಗೆ ವಿದ್ವಾನ್ ಕುದ್ಕಾಡಿ ರಾಮಕೃಷ್ಣ ಆಶ್ರಮ, ಪಂಜ, ಬುಶ್ರಾ, ಲಿಟ್ಲ ಫ್ಲವರ್ ಹೀಗೆ ಅನೇಕ ಕಡೆಗಳಲ್ಲಿ ನೃತ್ಯತರಗತಿಗಳನ್ನು ಆರಂಭಿಸಿದ್ದರು.

ಪ್ರಶಸ್ತಿ-ಪುರಸ್ಕಾರ : ‘ಲಲಿತಕಲಾ ಪ್ರವೀಣ’, ‘ನರ್ತನ ಕಲಾ ಚತುರ’ ಮುಂತಾದ ಬಿರುದುಗಳಿಂದ ಸನ್ಮಾನಿತರು. ಕೆಲವು ಕೃತಿಗಳಿಗೆ ತುಳು ಸಾಹಿತ್ಯ ಅಕಾಡೆಮಿಯ ಬಹುಮಾನಗಳು ಲಭಿಸಿವೆ. ೨೦೦೦-೦೧ನೇ ಸಾಲಿನ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ, ಲೋಕನಾಯಕ ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ರತ್ನ ಪುರಸ್ಕಾರ, ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ, ಕನ್ನಡ ರಂಗಭೂಮಿ ವಿಮರ್ಶ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ ಬಂಗಾರದ ಪದಕ, ತುಳು ಕೂಟ ನವಭಾರತ ನಾಟಕ ಸ್ಪರ್ಧಾ ಬಹುಮಾನ, ಸಂಕ್ರಾಂತಿ ಪ್ರಾತಿನಿಧಿಕ ನಾಟಕ ರಚನೆಗೆ ರಾಜ್ಯ ಮಟ್ಟದ ಪ್ರಥಮ ಬಹುಮಾನ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಟ್ಯ ಕಲಾಪಯೋನಿಧಿ ರಾಜ್ಯ ಶಾಸ್ತ್ರೀಯ ನೃತ್ಯ ಕಲಾವಿದರ ಸಮಾವೇಶ ಪ್ರಶಸ್ತಿ, ಗಡಿನಾಡ ಕನ್ನಡಿಗ ಪ್ರಶಸ್ತಿ, ಸಂದೇಶ ತುಳು ಸಾಹಿತ್ಯ ಪ್ರಶಸ್ತಿ, ಬಹರೈನ್ ಕುವೈಟ್ ಬಂಟ ಸಮಾಜದ ಗೌರವ, ಬಹರೈನ್ ತುಳು ಸಮ್ಮೇಳನದ ಅಧ್ಯಕ್ಷತೆ, ಪುತ್ತೂರು ತಾಲೂಕು ೯ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಸುಮಸೌರಭ ಪ್ರಶಸ್ತಿ, ರುಕ್ಮಿಣಿ ಬಾಯಿ ಸ್ಮಾರಕ ಪ್ರಶಸ್ತಿ, ಒಡಿಯೂರು ತುಳು ಮಾನದಿಗೆ ಗೌರವ ಸೇರಿದಂತೆ ಹಲವು ಗೌರವಗಳು.

ಕುಟುಂಬ : ಕಲಾ ಜೀವನದ ಉತ್ಸುಕತೆಯನ್ನು ಜೀವನದ ಕೊನೆಯ ಕ್ಷಣಗಳ ವರೆಗೂ ಉಳಿಸಿಕೊಂಡಿದ್ದ ಶ್ರೀಯುತರು ಹಿರಿಯ ಕಲಾವಿದೆ ಹಾಗೂ ಪತ್ನಿ ವಿದುಷಿ ನಯನಾ ವಿ. ರೈ, ಇಬ್ಬರು ಪುತ್ರಿಯರು -ವಿದುಷಿ ಸ್ವಸ್ತಿಕಾ ಆರ್. ಶೆಟ್ಟಿ, ವಿದುಷಿ ಆಸ್ತಿಕಾ ಎಸ್. ಶೆಟ್ಟಿ ಸೇರಿದಂತೆ ಅಪಾರ ಬಂಧು ಮಿತ್ರರು ಮತ್ತು ಶಿಷ್ಯವೃಂದ

ಕುದ್ಕಾಡಿ ಅವರು ನೂಪುರ ಭ್ರಮರಿಯನ್ನು ಮೆಚ್ಚಿ ೨೦೦೯ರಿಂದ ೨೦೧೩ರ ಅವಧಿಯಲ್ಲಿ ಬರೆದ ಕೆಲವು ಬರೆಹ, ಅಭಿಪ್ರಾಯಗಳ ಸಾಲುಗಳನ್ನು ಅವರ ಕಲಾಕೈಂಕರ್ಯದ ಕೊಡುಗೆಯನ್ನು ಸ್ಮರಿಸುತ್ತಾ ಇಲ್ಲಿ ಹಂಚಿಕೊಳ್ಳಲಾಗುತ್ತಿದೆ.

೧) ನೂಪುರ ಭ್ರಮರಿಯ ಮಂಜೀರದಿಂದ ಪ್ರೇರಿತನಾಗಿ ನಾನು ಬರೆದ ಲೇಖನವಿದು. ಪ್ರಾಥಮಿಕ ಶಿಕ್ಷಣ ಮಗುವಿನ ಮಾತೃಭಾಷೆಯಲ್ಲಾಗುವಂತೆ ಕಲೆಯ ಪ್ರಾಥಮಿಕ ಶಿಕ್ಷಣವೂ ಮಾತೃಭಾಷೆಯಲ್ಲಾದರೆ ಆ ಪ್ರದೇಶದ ಹೆಚ್ಚಿನ ಪ್ರೇಕ್ಷಕರೂ ಶಿಕ್ಷಿತರಾಗುತ್ತಾರೆ ಎಂಬುದನ್ನು ನಾನು ಅನುಮೋದಿಸುತ್ತೇನೆ. ಎಲ್ಲದರೊಳಗೂ, ಪ್ರತಿಯೊಬ್ಬರಲ್ಲೂ ‘ತನ್ನತನ’ ಇರುತ್ತದೆ. ಅದು ಸಹಜ. ಅದನ್ನು ಸಾರ್ವರ್ತಿಕವಾಗಿ ಒಂದಾಗಿ ಹೇಳುವುದು ಅಸಾಧ್ಯವಾದರೂ ‘ನಮ್ಮತನ’ ಎಂದು ಗುಂಪು ಮಾಡಿಕೊಂಡು ಸಾಧನೆಯನ್ನು ಮುಂದುವರೆಸಲಾಗುವುದು. ಉದಾಹರಣೆಗೆ, ಪ್ರತಿಯೊಬ್ಬ ಗುರುಗಳೂ ಭರತನಾಟ್ಯದ ಪರೀಕ್ಷೆಗಳಿಗೆ ಶಿಷ್ಯರನ್ನು ಅಧ್ಯಯನ ಮಾಡಿಸುವಾಗ ಅವರವರ ಭರತನಾಟ್ಯದ ಪರಂಪರೆಗಳಿಗೆ ಅನುಸಾರವಾಗಿ ಬಗ್ಗಿಸಿ ಒಗ್ಗಿಸಲು ಶ್ರಮವಹಿಸುತ್ತಾರೆ. ಅವರು ತಮ್ಮ ಪರಂಪರೆಯಲ್ಲಿ ಎಷ್ಟು ಸಾಧನೆ ಮಾಡಿದ್ದಾರೆ ಮತ್ತು ಎಷ್ಟು ಸಾಧಿಸಿದ್ದಾರೆ ಎಂಬ ಅಳತೆ ಸುಲಭ ಸಾಧ್ಯವಲ್ಲ. ಆದರೆ ಒಬ್ಬ ಪ್ರತಿಭಾವಂತ ಮೂಲ ವ್ಯಕ್ತಿಯಿಂದ ಪರಂಪರೆ ಸಂಪ್ರದಾಯಕ್ಕೆ ಮಹತ್ತ್ವ ಬಂದು ಅದು ಆ ಸಮಾಜದ ಒಟ್ಟು ಗೌರವಕ್ಕೆ ಪಾತ್ರವಾಗಿ ಬೆಳೆಯುತ್ತದೆ ಎಂಬುದು ಸ್ಪಷ್ಟ. ಈ ವ್ಯವಹಾರವನ್ನು ನಮ್ಮ ನೃತ್ಯ ಸಂಗೀತ ಮೊದಲಾದ ಲಲಿತಕಲೆಗಳಿಗೆ ಅನ್ವಯಿಸಿ ಹೇಳುವಾಗ ಈ ಬಾನಿ, ಮಟ್ಟು, ತಿಟ್ಟುಗಳು ಗೋಚರಿಸುತ್ತವೆ. ಇವು ಒಂದು ವ್ಯವಸ್ಥೆಗೆ ಒಳಪಟ್ಟಾಗ ಬೇರೆ-ಬೇರೆ ಪ್ರಭಾವ, ಪ್ರಚಾರಗಳ ಕಾರಣದಿಂದ ಕೆಲವು ತಾತ್ಕಾಲಿಕವಾಗಿ ಬೆಳೆಯುತ್ತವೆ ಮತ್ತು ಅಳಿದು ಹೋಗುತ್ತವೆ. ಪರಸ್ಪರ ಪ್ರಭಾವ ಪಡೆಯುವಂತಹ ಕೊಡು-ಕೊಳ್ಳುವಿಕೆಗಳು ಇರುವುದಿದೆ. ಈ ಉಳಿಯುವಿಕೆ-ಅಳಿಯುವಿಕೆಗೆ ಜನಾಶ್ರಯ, ಅಧಿಕಾರದ ಆಶ್ರಯ, ಕಲಾವಿದರ ಆರಾಧನೆಯ ಶ್ರಮದಾನ ಮುಖ್ಯ ಹೇತು.

ನಮ್ಮತನದೊಳಗಿನ ತನ್ನತನಕ್ಕೆ ಉದಾಹರಣೆಯಾಗಿ : ಡಾ. ಶಿವರಾಮ ಕಾರಂತರ ‘ಸೋಮಿಯ ಸೌಭಾಗ್ಯ’ ಗೀತರೂಪಕವಾಗಿ ಕನ್ನಡದಲ್ಲಿ ರಂಗದ ಮೇಲೆ ಬಂದುದನ್ನು ‘ಚುಲ್ಲೆಲ್ ತುಲ್ಲೆಲ್’ (ಮದುವೆಯ ಕುಣಿತ) ಎಂಬುದಾಗಿ ಕಾರಂತರ ಒಪ್ಪಿಗೆ ಪಡೆದು ತುಳುವಿನಲ್ಲಿ ಭಾಷಾಂತರಿಸಿ ನೃತ್ಯರೂಪಕವಾಗಿ ‘ದುಡಿ’ಯ ಹಿಮ್ಮೇಳದಲ್ಲಿ ಭರತನಾಟ್ಯ ಕಲಾವಿದರು ತುಳುನಾಡಿನ ಜಾನಪದ ಶೈಲಿಯಲ್ಲಿ ಪ್ರದರ್ಶನಗಳನ್ನಿತ್ತಾಗ ಅದೊಂದು ಹೊಸ ಶೈಲಿಯ ಪ್ರದರ್ಶನವಾಯಿತು. ಅಂತೆಯೇ ಅದೇ ಸಾಹಿತ್ಯವನ್ನು ಪ್ರದರ್ಶಿಸುವ ಬೇರೆ ಬೇರೆ ತಂಡಗಳು, ಬೇರೆ ಬೇರೆ ನಿರ್ದೇಶಕರ ಕಲ್ಪನೆಯೊಂದಿಗೆ, ಬೇರೆ-ಬೇರೆ ಸ್ಥಳಗಳಲ್ಲಿ ಪ್ರದರ್ಶಿಸಿದಾಗ ಪ್ರೆಕ್ಷಕರನ್ನು ಅನುಸರಿಸಿಯೂ ಅದರ ಪ್ರಭಾವ ಬೇರೆಯಾಗಿರುತ್ತದೆ. ಅಂತೆಯೇ ಜಯದೇವನ ಗೀತಗೋವಿಂದವನ್ನು ಶಾಸ್ತ್ರೀಯವೆನ್ನುವ ಮಾನ್ಯತೆ ಪಡೆದುಕೊಂಡ ಏಳು ನೃತ್ಯ ಸಂಪ್ರದಾಯಗಳಲ್ಲಿ ಪ್ರಯೋಗ-ಪ್ರದರ್ಶನವಾದಾಗಲೂ ಇದೇ ಬಗೆಯಲ್ಲಿ ವಿವಿಧತೆಯಿದೆ. ಅಂತೆಯೇ ಒಂದೇ ಗುರುಗಳಲ್ಲಿ ಕಲಿತ ಹತ್ತು ಮಂದಿ ಕಲಾವಿದರಲ್ಲಿ ಸ್ವಲ್ಪ ಸ್ವಲ್ಪವಾದರೂ ಭಿನ್ನತೆ ಇದ್ದೇ ಇರುತ್ತದೆ. ಆದರೆ ನರ್ತನವನ್ನು ಸಮೂಹವಾಗಿ ರಂಗದ ಮೇಲೆ ತಂದಾಗ ಈ ಭಿನ್ನತೆಯನ್ನು ಅಭಿನಯz ಇತರ ಪರಿಕರಗಳು ಕಡಿಮೆ ಮಾಡಿಸಿಕೊಡುತ್ತದೆ.

ಒಬ್ಬನ ಹಾಗೆ ಇನ್ನೊಬ್ಬ ಇರುವುದಿಲ್ಲ. ಒಂದರ ಹಾಗೆ ಇನ್ನೊಂದು ಇರುವುದಿಲ್ಲ. ಒಬ್ಬನ ಬುದ್ಧಿ ಮಟ್ಟದಂತೆ ಇನ್ನೊಬ್ಬನದಿರುವುದಿಲ್ಲ. ಒಬ್ಬನ ದೇಹರಚನೆಯಂತೆ ಇನ್ನೊಬ್ಬನ ದೇಹವಿರುವುದಿಲ್ಲ. ಆದರೂ ಮಾನವರೆಲ್ಲಾ ಒಂದೇ ಎಂಬುದು ಕಲ್ಪನೆ. ಆದರೆ ಇಂತಹ ಭಿನ್ನತೆ, ಬೇರೆ ಬೇರೆ ಜಾತಿ, ಜನಾಂಗ, ಬುಡಕಟ್ಟು, ಬಣ್ಣ, ದೇಶ, ಭಾಷೆ, ರಚನೆ, ಧರ್ಮ, ಕರ್ಮಗಳಿಗನುಸಾರವಾಗಿ ಪ್ರತ್ಯೇಕಿಸಿ ನೋಡುವುದು ನಾವು ಗುರುತಿಸಿಕೊಳ್ಳುವ ಸೌಕರ್ಯಕ್ಕಾಗಿ. ಅಂತೆಯೇ ಕಾಲಕ್ಕೆ ಅನುಸಾರವಾಗಿ ಈ ಗುರ್ತಿಸುವ ಹೆಸರುಗಳು ಬದಲಾವಣೆಗೊಳ್ಳುತ್ತಾ ಬೇರೆ ಹೆಸರನ್ನು ಪಡೆಯುತ್ತದೆ. ಮೇಲ್ವರ್ಗ, ಕೆಳವರ್ಗ, ಶ್ರೀಮಂತ, ಬಡವ ಎಂದು ಸ್ಥಾನಗಳು ಮುಂದೆ-ಹಿಂದೆ ಸರಿಯುವುದೂ ಆಗುತ್ತದೆ. ಇದು ಮನುಷ್ಯನ ಹುಡುಕುವಿಕೆಯ ಫಲ.

೨) ಮಂಜೀರದಲ್ಲಿ ತಿಳಿಸಿದಂತೆ ಭಾರತಕ್ಕೆ ಲಲಿತಕಲೆಗಳ ಸಾಂಪ್ರದಾಯಿಕ ಗುರುಪರಂಪರೆ ಯೊಂದಿಗೆ ಕಾಲಘಟ್ಟದ ಡಿಗ್ರಿ, ಸರ್ಟಿಫಿಕೇಟುಗಳ ಮಾನ್ಯತೆಯೂ ಬೇಕು ಎಂಬುದು ನನ್ನ ಅಭಿಪ್ರಾಯ. ಚೂರ್ಣಿಕೆ ಸಂಸ್ಕೃತದಲ್ಲಿ ಮಾತ್ರವಲ್ಲ, ಪ್ರಾದೇಶಿಕ ಭಾಷೆಗಳಲ್ಲೂ ದೇವರ, ಆಶ್ರಯದಾತರ ಹೊಗಳಿಕೆಯಾಗಿ; ಮನೋರಮಾ ಅವರು ಹೇಳಿದ ಸಂದರ್ಭಗಳಲ್ಲಿಯೂ ರೂಢಿಯಲ್ಲಿವೆ. ವಚನಗಳೂ ಪದ್ಯಗಂಧಿ ಗದ್ಯ ಸಾಹಿತ್ಯ. ರಾಗ, ತಾಳ, ಸಂಗೀತ ಅಳವಡಿಸಿ, ಜೀವನದ ಹಲವು ಅನುಭವಗಳನ್ನು ನೃತ್ಯಗಾರರು ಅಭಿನಯಿಸುತ್ತಾರೆ. ಮುದ್ರೆಗಳ ಲಕ್ಷಣವನ್ನು ಬೇರೆಬೇರೆ ಕಡೆಗಳಿಂದ ಸಂಗ್ರಹಿಸಿ, ವಿಸ್ತರಿಸಿ ಹೆಚ್ಚಿನ ಓದಿಗೆ-ತಿಳಿವಳಿಕೆಗೆ ದಾರಿಯಾಗುತ್ತದೆ ತಮ್ಮ ಕೊಡುಗೆ.

೩) ನೂಪುರ ಭ್ರಮರಿಯ ಚರ್ಚೆಯ ವಿಷಯಗಳು, ಮತ್ತು ಮೂಡಿ ಬರುವಂತಹ ಅಭಿಪ್ರಾಯಗಳು ಆರೋಗ್ಯದಾಯಕವಾಗಿವೆ. ಈ ಪತ್ರಿಕೆ ದಾಖಲೆಗೆ ಯೋಗ್ಯವಾದ ವಿಷಯಗಳನ್ನು ನೀಡುತ್ತಿದೆ. ಕಳೆದ ಸಂಚಿಕೆಯ ಮಂಜೀರದಲ್ಲಿ ಸಂಪಾದಕರು ಪ್ರೀತಿಯಿಂದ ಬರೆದ ಕಹಿಗುಳಿಗೆಗಳು ಕಲೆಯ ಸಾಧನೆ, ಆರಾಧನೆ, ಬೋಧನೆಯ ನಿಟ್ಟಿನಲ್ಲಿ ಆರೋಗ್ಯದಾಯಕವಾದವುಗಳು. ಚಿಂತನೆಗೆ ಗ್ರಾಸವಾಗಿದೆ. ರಂಗಭ್ರಮರಿಯಲ್ಲಿ ನೃತ್ಯಸ್ಪರ್ಧೆಗಳಲ್ಲಿ ಭಾಗವಹಿಸುವ ಪುಟ್ಟ ಮಕ್ಕಳ ಪ್ರದರ್ಶನದ ನ್ಯೂನತೆ, ಗುರುಗಳು, ಹೆತ್ತವರು, ಮಾಧ್ಯಮಗಳು ವಹಿಸಬೇಕಾದ ಕರ್ತವ್ಯಗಳನ್ನು ಸೂಚಿಸಿರುವುದು ವೈಯಕ್ತಿಕ ಅಭಿಪ್ರಾಯವಾದರೂ ಇಲ್ಲಿಯೂ ಹಲವು ಅಂಶಗಳು ಗಮನೀಯವಾಗಿವೆ. ಅಷ್ಟನಾಯಕಿಯರ ಚಿತ್ತವೃತ್ತಿಗಳನ್ನು ಮಂಟಪ ಪ್ರಭಾಕರ ಉಪಾಧ್ಯರು ಪ್ರದರ್ಶಿಸುವ ಸಾಧನೆ, ಯಕ್ಷಗಾನ ಅಭಿನಯ ಕ್ಷೇತ್ರದ ಒಂದು ಹೊಸ ಆಯಾಮ. ಅವರೊಬ್ಬ ಅಪೂರ್ವ ಕಲಾವಿದರು. ಯಕ್ಷಗಾನ ಪುನಶ್ಚೇತನಾ ಶಿಬಿgದ ಲೇಖನ ತೆಂಕು+ಬಡಗು ತಿಟ್ಟುಗಳ ವೃತ್ತಿಪರ ಕಲಾವಿದರು ಕಲಿಯಬೇಕಾದುದು ತುಂಬಾ ಇದೆ ಎಂಬ ಪ್ರಜ್ಞೆ ಮೂಡಿಸಿದೆ. ಇನ್ನಷ್ಟು ಯಕ್ಷಗಾನ ತಿಟ್ಟುಗಳನ್ನು ಸೇರಿಸಿ ಇಂತಹ ಪುನಶ್ಚೇತನಾ ಶಿಬಿರಗಳು ಆಗುವುದು ಅಗತ್ಯ. ಅದರಿಂದ ಯಾವುದೇ ತಿಟ್ಟು ಕೆಡಲಾರದು.ಇದು ನನ್ನ ಕಲಾಬದುಕಿನ ವಿನೀತ ನಂಬಿಕೆ. ಹಸ್ತಮುದ್ರಿಕೆಗಳ ವಿಸ್ತಾರವಾದ ವಿನಿಯೋಗದ ’ಹಸ್ತಮಯೂರಿ’ಗೆ ಎಲ್ಲಾ ನೃತ್ಯವಿದ್ಯಾರ್ಥಿ ಪರಿವಾರದ ಪರವಾಗಿ ಅಭಿನಂದನೆ ಹೇಳುತ್ತೇನೆ. ಇದು ನಾಟ್ಯಸಂಪ್ರದಾಯದ ವಾರಸುದಾರರೆಂಬುವರು ಗಮನಿಸಬೇಕಾದ ಅಂಶ. ಹೊಸ ಮಾರ್ಗ. ’ಶಿಕ್ಷಣದಲ್ಲಿ ಯಕ್ಷಗಾನ ಪಾಠಪಟ್ಟಿ’ ಕ್ರೀಡಾ ಮನೋಭಾವನೆಯಿಂದ ಸಾಗಲಿ ಎಂಬುದು ನಮ್ಮ ಆಶಯ. ’ಮಣ್ಣ್‌ತ ಪುಚ್ಚೆ ಆವಡ್ ಮಯನೊತ ಪುಚ್ಚೆ ಆವಡ್ ಎಲಿಪತ್ತೊಡು’ ಅಂತ ತುಳುವಿನ ಗಾದೆ ಇದೆ. ಯಕ್ಷಗಾನ ನಾಟ್ಯ ಮತ್ತು ತಾಳವಾದ್ಯಗಳ ಕಲಾಪರೀಕ್ಷೆಗಳನ್ನು ಪ್ರೌಢ ಶಿಕ್ಷಣ ಪರೀಕ್ಷ ಮಂಡಳಿಯ ಪರೀಕ್ಷೆಗಳ ವಿಷಯವಾಗಿ ಪರಿಗಣಿಸುವಂತೆ ಮಾರ್ಗಸೂಚಿ ಕೈಪಿಡಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರನ್ನು ಕೇಳಲಾಗಿದೆ. ಜೊತೆಗೆ ಶಿವರಾಮ ಕಾರಂತರ ಬಾಲವನದಲ್ಲಿ ಯಕ್ಷಗಾನ ಸಂಶೋಧನಾ ತರಬೇತಿ ಕೇಂದ್ರವಾಗುವಂತೆ, ಯಕ್ಷಗಾನ ಅಕಾಡೆಮಿಯು ಬೆಂಗಳೂರಿನಿಂದ ಕರಾವಳಿಗೆ ಬರುವಂತೆ ಪ್ರಯತ್ನ ಸಾಗಬೇಕು. ಭಾರತದ ಶಾಸ್ತ್ರೀಯ ನಾಟ್ಯವಾಗಿ ಯಕ್ಷಗಾನ ಮಾನ್ಯತೆ ಪಡೆಯುವ ಅರ್ಹತೆ ಹೊಂದಿದೆ. ನಮ್ಮ ರಾಜಕೀಯ ಮುಂದಾಳುಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಯಕ್ಷಗಾನ ನಾಟ್ಯಪ್ರಕಾರಕ್ಕೆ ಗೌರವ ತಂದುಕೊಡಲಿ ಎಂಬುದು ನಮ್ಮ ಹಾರೈಕೆ.ಉತ್ತಮ ನೃತ್ಯ ಕಾರ್ಯಕ್ರಮ ಯಾವುದು, ಹೇಗಿರಬೇಕೆಂಬುದು ಸಂಪಾದಕೀಯದಲ್ಲಿ ಪ್ರೀತಿಪೂರ್ವಕವಾಗಿ ತಿಳಿಸಿದ್ದೀರಿ. ಎಲ್ಲಾ ಅಂಕಣಗಳು ಉತ್ತಮವಾಗಿವೆ. ಕಲೆ, ಸಾಹಿತ್ಯ, ಭರತ ಸಂಸ್ಕೃತಿಯ ವಿವಿಧ ಮಜಲುಗಳ ವಿವರ ಹೀಗೆಯೇ ಚೆನ್ನಾಗಿ ಮೂಡಿಬರುತ್ತಿರಲಿ. ಭಾರತಮಾತೆಯ ಸರ್ವಾಂಗಸುಂದರಿಯಾಗಿ ನೂಪುರ ಸುಶೋಭಿಸಲಿ.

– ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ

ವಿಶ್ವಕಲಾನಿಕೇತನ, ಪುತ್ತೂರು, ದ.ಕ

Leave a Reply

*

code