ಅಂಕಣಗಳು

Subscribe


 

ಕುಮಾರವ್ಯಾಸ ನೃತ್ಯ ಭಾರತ : ವಿಮರ್ಶೆ ಮತ್ತು ಪ್ರತಿ- ಪ್ರತಿಕ್ರಿಯೆ

Posted On: Saturday, February 25th, 2012
1 Star2 Stars3 Stars4 Stars5 Stars (No Ratings Yet)
Loading...

Author: ವಿವಿಧ ಲೇಖಕರು

ಈ ಬಾರಿಯ ಸಂಚಿಕೆ ವಿಮರ್ಶಾಲೋಕದ ವೈವಿಧ್ಯಮಯ ಸರಕನ್ನೇ ನಿಮಗೀಯುತ್ತಿದೆ. ಸಾಮಾನ್ಯವಾಗಿ ವಿಮರ್ಶಕರ ಮೇಲೆ ಕಲಾವಿದರ ಮತ್ತು ಕಲಾವಿದರ ಮೇಲೆ ವಿಮರ್ಶಕರ ನಿಲುವಿನ ಕುರಿತು ಸಾಕಷ್ಟು ಆರೋಪ-ಪ್ರತ್ಯಾರೋಪಗಳಿರುತ್ತವೆ. ಆದರೆ ವಿಮರ್ಶಕರ ನೋಟದೊಂದಿಗೆ ವಿಮರ್ಶೆಗೆ ಪಾತ್ರವಾದ ಕಲಾಕೃತಿಯ ರೂವಾರಿಗಳ ದೃಷ್ಟಿ ಒಟ್ಟಿಗೆ ಕಾಣಬರುವುದು ವಿರಳವೇ ಸರಿ. ಆದ್ದರಿಂದ ವಿಮರ್ಶೆಗಳನ್ನು ಅಭ್ಯಸಿಸುವ ನಿಟ್ಟಿನಲ್ಲಿ ಈ ಬಾರಿಯ ಪತ್ರಿಕೆಯ ಪ್ರಯತ್ನ ವಿನೂತನವಾಗಿ ಹೊರಹೊಮ್ಮಿದೆ. ಪ್ರಯೋಗವೊಂದನ್ನು ಕಾಣುವ ವಿಮರ್ಶಕ ಮತ್ತು ಪ್ರಯೋಗ ಮಾಡುವ ಕಲಾವಿದ- ಇವರೀರ್ವರ ನೆಲೆಗಳನ್ನು; ಆ ಮೂಲಕ ಕೃತಿಯೊಂದರ ಕುರಿತಾಗಿ ಕಲಾವಿದನ ನೋಟವನ್ನು, ರಸಿಕರ ಅಪೇಕ್ಷೆಯನ್ನು ಇಲ್ಲಿ ತುಲನಾತ್ಮಕವಾಗಿ ಅವರವರ ನೆಲೆಯಲ್ಲಿ ಸಮರ್ಥನೀಯವಾಗಿ ಕಂಡುಕೊಳ್ಳಲಾಗಿದೆ. ಇದಕ್ಕೆ ಉತ್ತಮ ಅವಕಾಶವನ್ನಿತ್ತದ್ದು ಅತ್ರಿ ಬುಕ್ ಹೌಸ್‌ನ ಮಾಲೀಕರು, ಸಹೃದಯ ಕಲಾರಸಿಕರೂ ಆದ ಜಿ.ಎನ್.ಅಶೋಕ ವರ್ಧನರ ಬ್ಲಾಗ್‌ನಿಂದಾಯ್ದ ಬರಹ ಮತ್ತು ಅದನ್ನೋದಿ ತಾನಾಗಿಯೇ ಪ್ರತಿಕ್ರಿಯೆಯಿತ್ತ ಭ್ರಮರಿ ಶಿವಪ್ರಕಾಶ್. ಅಂತೆಯೇ ಪ್ರಬುದ್ಧವಾಗಿ ಭಾಷೆಯ ಕಂಪನ್ನು ಹರಡಿಸಿಕೊಂಡ ಕೊರ್ಗಿ ಉಪಾಧ್ಯಾಯರ ವಿಮರ್ಶೆ ಮತ್ತು ನೂಪುರ ಭ್ರಮರಿಯ ಬಳಗದ ಬರೆಹಗಾರರ ಲೇಖನಿಯಿಂದ ಮೂಡಿದ ಭಾಷೆಯನ್ನು ನೇರವಾಗಿ ಬಳಸಿಕೊಂಡ ವಿಮರ್ಶೆ…ಹೀಗೆ ಬರೆವಣಿಗೆಯ ಶೈಲಿ ಒಂದಕ್ಕಿಂತ ಒಂದು ವಿಭಿನ್ನ. ಆಸಕ್ತರಿಗೆ ಅಧ್ಯಯನ ನಡೆಸುವುದರೊಂದಿಗೆ ವಿಮರ್ಶೆಯ ಬಗೆಗಳನ್ನು ಅರಿತು ಬರೆಯಲು, ಓದುಗರಿಗೆ ಚರ್ಚೆಗಳನ್ನು ಮಾಡಲು ಮುಕ್ತ ಅವಕಾಶವಿದೆ.

 

 

ಕುಮಾರವ್ಯಾಸ ನೃತ್ಯ ಭಾರತ : ಕುಬ್ಜ ಚಿತ್ರಕ್ಕೆ ತೋರದ ಚೌಕಟ್ಟು

ಕೆನರಾ ಶಾಲಾ ಸಭಾಂಗಣ, ಉಡುಪಿ                                     ಡಿಸೆಂಬರ್ ೧೮, ೨೦೧೧

ಜಿ.ಎನ್. ಅಶೋಕ ವರ್ಧನ, ಮಂಗಳೂರು.

ಅದೊಂದು ಮಧ್ಯಾಹ್ನ ಅಂಗಡಿ ಬಾಗಿಲಡಿಯಲ್ಲಿ ತೂರಿದ್ದ ಕರೆಯೋಲೆ ಸಿಕ್ಕಿತು – ವಿದುಷಿ ಭ್ರಮರಿ ಶಿವಪ್ರಕಾಶ್ ಪ್ರಸ್ತುತ ಪಡಿಸುವ ‘ಕುಮಾರವ್ಯಾಸ ನೃತ್ಯ ಭಾರತ. ಬೆಂಬತ್ತಿದಂತೆ ಭ್ರಮರಿಯವರ ದೂರವಾಣಿ ಕರೆಯೂ ಬಂತು. ಹೆಚ್ಚಿನ ಒತ್ತಡ ತರುವಂತೆ ಕಾರ್ಕಳದಿಂದ ಪ್ರೊ| ಎಂ. ರಾಮಚಂದ್ರರ ದೂರವಾಣಿ ಅಂದು ನಿಮ್ಮಲ್ಲಿ ಮರುದಿನ ನಮ್ಮಲ್ಲಿ. ಅವಶ್ಯ ನೋಡಿ ಕುಮಾರವ್ಯಾಸ ನೃತ್ಯ ಭಾರತ. ಅಧ್ಯಾಪಕ, ಕವಿ, ಕತೆಗಾರ, ನಾಟಕಕಾರ, ನಟ, ರಂಗನಿರ್ದೇಶಕ ಎಂಬಿತ್ಯಾದಿ ಬಹುಮುಖೀ ಆಸಕ್ತಿಗಳ ಮತ್ತು ಸದಾ ಕ್ರಿಯಾಶೀಲ ಪ್ರೊ| ಉದ್ಯಾವರ ಮಾಧವಾಚಾರ್ಯರ ಮಗಳು ಈ ಭ್ರಮರಿ ಎನ್ನುವುದು ನನಗೆ ತಿಳಿದೇ ಇತ್ತು. ಅಧ್ಯಾಪಕ, ಕವಿ, ಕತೆಗಾರ, ನಾಟಕಕಾರ, ನಟ, ರಂಗನಿರ್ದೇಶಕ ಎಂಬಿತ್ಯಾದಿ ಬಹುಮುಖೀ ಆಸಕ್ತಿಗಳ ಮತ್ತು ಸದಾ ಕ್ರಿಯಾಶೀಲ ಪ್ರೊ| ಉದ್ಯಾವರ ಮಾಧವಾಚಾರ್ಯರ ಮಗಳು ಈ ಭ್ರಮರಿ ಎನ್ನುವುದು ನನಗೆ ತಿಳಿದೇ ಇತ್ತು. ಅವೆಲ್ಲದರ ಮೇಲೆ ನನ್ನ ನೆನಪಿನಾಳದ ನೂರೊಂದು ರಮ್ಯ ಪೌರಾಣಿಕ ರಂಗಪ್ರಸ್ತುತಿಗಳೂ ಮೇಲೆದ್ದು ಪ್ರಭಾವಿಸಿದವು ಎನ್ನುವುದನ್ನೂ ಇಲ್ಲೇ ಹೇಳಿಬಿಡಬೇಕು. ಸುಮಾರು ಎರಡು ದಶಕಗಳ ಹಿಂದೆ ಪದ್ಮಾಸುಬ್ರಹ್ಮಣ್ಯಂ ಕೊಟ್ಟ ರಾಮಾಯ ತುಭ್ಯಂ ನಮಃ ಮತ್ತು ಕೃಷ್ಣಾಯ ತುಭ್ಯಂ ನಮಃ ಉಂಟುಮಾಡಿದ ಧನ್ಯತೆ ಚಿರಂಜೀವಿ. ಮುಂದುವರಿದ ದಿನಗಳಲ್ಲಿ ನೀನಾಸಂ ಕೊಟ್ಟ ಕುಮಾರವ್ಯಾಸ ಭಾರತದ್ದೇ ರಂಗಪ್ರಸ್ತುತಿ – ಸೀಮಿತ ಅವಧಿಯಲ್ಲಿ, ಸಮಗ್ರ ಕಥಾನಿರೂಪಣೆಗೆ ಕೊರತೆ ಬಾರದಂತೆ ಆಯ್ದ ಕಾವ್ಯ ಭಾಗಗಳನ್ನು ಒಂದೂ ಪ್ರಕ್ಷಿಪ್ತ ತಾರದೆ ರಂಗಕ್ಕಳವಡಿಸಿದ್ದು, ನೆನೆಸಿದರೆ ಇಂದೂ ಮೈಮನ ನಲಿಯುವುದು ! ‘ಇದು ರಂಗಪ್ರಯೋಗಕ್ಕಲ್ಲ ಎಂದು ಸ್ವತಃ ಲೇಖಕ ಕುವೆಂಪು ಘೋಷಿಸಿಯೇ ಪ್ರಕಟಿಸಿದ ಶೂದ್ರತಪಸ್ವಿ ನಾಟಕವನ್ನು ರಂಗಸೂಚನೆಗಳೂ ಸೇರಿದಂತೆ ಸಾರಾಸಗಟಾಗಿ ತೆಗೆದುಕೊಂಡು ರಂಗಾಯಣ ಕೊಟ್ಟ ಪ್ರದರ್ಶನ ಇನ್ನೊಂದು ಅದ್ಭುತ ಅನುಭವ. ಈಗಲೂ ನಡೆಯುತ್ತಲೇ ಇರುವ (ನನ್ನೆದುರು ಡಿವಿಡಿಯಲ್ಲಿಯೂ) ‘ಗಣೇಶ್-ಮಂಟಪ ಕಂಬೈನ್ಸ್ ಯಕ್ಷಗಾನ ಏಕವ್ಯಕ್ತಿ ಪ್ರಯೋಗಗಳೂ ವಿಚಾರಪರವಾಗಿ ನೋಡುವ ಯಾರೂ ಮೆಚ್ಚಿ ಅಹುದಹುದೆನ್ನಬೇಕು. ಇನ್ನೂ ಇಂತಹ ಅನೇಕರು ಅವರವರ ಸಿದ್ಧಿಗನುಗುಣವಾಗಿ ನಾಟ್ಯ, ನಾಟಕ, ಕಾವ್ಯ, ಜಾನಪದ, ಸಂಗೀತ, ಮಟ್ಟು ಮುಂತಾದವನ್ನು ಭಾವಸಂವಹನದ ಮಾಧ್ಯಮವಾಗಿ ಬಳಸಿ ಶಿಖರ ದರ್ಶನ ಮಾಡಿಸಿದ್ದಾರೆ. ಈ ಸರಕ್ಕೆ ಹೊಸತೊಂದು ಮುತ್ತು ಪೋಣಿಸುವ ಉತ್ಸಾಹದಲ್ಲಿ ನಾನು ಕೆನರಾ ಹೆಮ್ಮಕ್ಕಳ ಶಾಲೆಯ ಸಭಾಂಗಣಕ್ಕೆ ಅಂದು ಹೋಗಿದ್ದೆ.

ಭಾವಗಾಯಕ, ಗಮಕಿ ಚಂದ್ರಶೇಖರ ಕೆದ್ಲಾಯರು ಪ್ರದರ್ಶನದ ಪೀಠಿಕೆಯಿಂದ ಮಂಗಳದವರೆಗೆ ಸೂಕ್ತ ನಿರೂಪಣೆಯನ್ನು ಕೊಟ್ಟರು, ಎಂದರೆ ತೀರಾ ಗದ್ಯವಾಗುತ್ತದೆ. ಪ್ರತಿ ಸನ್ನಿವೇಶದ ಕಾವ್ಯ ಖಂಡವನ್ನು ಅರ್ಥ ಸ್ಫುಟವಾಗುವಂತೆ ಗಮಕದಲ್ಲಿ ಅರ್ಥ ಸ್ಫುಟತೆಯನ್ನೂ ರಾಗದಲ್ಲಿ ಭಾವ ಸ್ಫುಟತೆಯನ್ನೂ ತುಂಬಿದರು . ಇದು ಸಹಜವಾಗಿ ಕೇಳುಗರ ಮನೋಭೂಮಿಕೆಯನ್ನು ಮತ್ತೆ ಮತ್ತೆ ನಿರೀಕ್ಷೆಯ ಉತ್ತುಂಗಕ್ಕೊಯ್ಯುತ್ತಿತ್ತು. ನೃತ್ಯಗಾತಿಗೆ ಆವಶ್ಯಕವಾದ ಮಧ್ಯಂತರದ ವೇಳೆಯಲ್ಲಿ ಕೆದ್ಲಾಯರು ಕುವೆಂಪು ಕಂಡ ಕುಮಾರವ್ಯಾಸನಿಗೆ (ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ…) ಭಾವಗಾನದಲ್ಲಿ ಮರುಹುಟ್ಟು ಕೊಟ್ಟದ್ದಂತೂ ನಿಜಕ್ಕೂ ಸ್ಮರಣೀಯ. ಆದರೆ ಇವರೆಲ್ಲ ಕಲಾಪಗಳು ನೇರ ರಂಗಪ್ರಸ್ತುತಿಗೆ ಬಳಕೆಯಾಗದೇ ಉಳಿದದ್ದು ಸಂಯೋಜನೆಯ ಕೊರತೆಯಂತೇ ಅನಿಸಿತು.

ಭ್ರಮರಿ, ಶಿವಪ್ರಕಾಶ್ (ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ಪೂರ್ಣ ಮಗಳು, ಅಳಿಯರದೇ ಎಂದು ಸ್ವತಃ ಮಾಧವಾಚಾರ್ಯರು ಕೊನೆಯಲ್ಲಿ ಘೋಷಿಸಿದ್ದರು.) ಕುಮಾರವ್ಯಾಸ ಭಾರತದಿಂದ ಕಥಾಕ್ರಮದಲ್ಲೇ ಐದು ತುಣುಕುಗಳನ್ನು ಆಯ್ದುಕೊಂಡಿದ್ದರು; ಪೂರ್ವಾರ್ಧಕ್ಕೆ ಎರಡು, ಉತ್ತರಾರ್ಧದಲ್ಲಿ ಮೂರು. ಮೊದಲು ದಾಯಾದಿ ದ್ವೇಷದ ಮೊಳಕೆ ತೋರುವಂತೆ ಭೀಮ ದುರ್ಯೋದನರ ಬಾಲ ಜಗಳ ಮತ್ತು ಹಿಡಿಂಬೆಯ ಕಾಮುಕ ನೋಟ (ಸಂವಾದದ ಮಟ್ಟಕ್ಕೇರಲಿಲ್ಲ). ಮುಂದಿನ ಭಾಗದಲ್ಲಿ ಕೀಚಕನ ಪ್ರಣಯ ಭಿಕ್ಷೆ, ಕೃಷ್ಣ ಸಂಧಾನದ ವಿಶ್ವರೂಪ ಮತ್ತು ಯುದ್ಧಾನಂತರದ ಗಾಂಧಾರಿ ವಿಲಾಪ. ಇವುಗಳೆಷ್ಟು ಪ್ರಾತಿನಿಧಿಕ ಎನ್ನುವ ಪ್ರಶ್ನೆ ಹಾಗಿರಲಿ. ಅದಕ್ಕೂ ಮಿಗಿಲಾಗಿ ಆ ತುಣುಕುಗಳೂ ಸ್ವತಂತ್ರ ಸನ್ನಿವೇಶವೊಂದನ್ನು (ಯಕ್ಷ ಭಾಷೆಯಲ್ಲಿ ಹೇಳುವುದೇ ಆದರೆ ಪ್ರಸಂಗದ ವ್ಯಾಪ್ತಿ) ಕಟ್ಟಿಕೊಡುವುದರಲ್ಲಿ ಸೋತವು. ಬಾಲಜಗಳವನ್ನು ಕರ್ಣನ ಅಂಗರಾಜ್ಯಾಭಿಷೇಕದವರೆಗಾದರೂ ಒಯ್ದಿದ್ದರೆ ಒಂದು ತಾರ್ಕಿಕ ಕೊನೆ ಸಿಗುತ್ತಿತ್ತು. ಮತ್ತಿನದರ ಹಿನ್ನೆಲೆ (ಅರಗಿನ ಮನೆ) ಬಿಡಿ, ಕನಿಷ್ಠ ರಕ್ಕಸವಧೆ, ಹಿಡಿಂಬಾ ಕಲ್ಯಾಣಕ್ಕಾದರೂ ವಿಸ್ತರಿಸಿದ್ದರೆ ಪರ್ಯಾಪ್ತವಾಗುತ್ತಿತ್ತು. ಅದು ಕಲ್ಯಾಣವಿಲ್ಲದೆ ಸೋತಂತೆ, ಕೀಚಕನ ತುಣುಕು ವಧೆಯ ನಾಟಕೀಯತೆ ಮುಟ್ಟದೆ ರಸಹೀನ ಗದ್ಯದ ಮಟ್ಟದಲ್ಲುಳಿಯಿತು. ಭಾರತದಲ್ಲಿ ಕೃಷ್ಣ ತೋರುವ ವಿಶ್ವರೂಪದರ್ಶನಗಳಲ್ಲಿ ಗೀತೋಪದೇಶದ ಕೊನೆಯಲ್ಲಿ ಬರುವುದೇ ಹೆಚ್ಚಿನ ಮಹತ್ತ್ವದ್ದು. ಸಂಧಾನ ಕಾಲದ್ದು ಪ್ರಚೋದನೆಯ ಪರಾಕಾಷ್ಠೆಯಲ್ಲಿ ಬೆದರಿಕೆಯ ತಂತ್ರವಾಗಿ ಬರುತ್ತದೆ. ಕುಮಾರವ್ಯಾಸನೇ ಹೇಳಿಕೊಂಡ ಭಾರತ ಎಂದರೆ ಕೃಷ್ಣಕಥೆ ಎಂಬ ಸರ್ವ ವ್ಯಾಪೀ ಭಾವ ಇಲ್ಲಿ ಬರುವುದಿಲ್ಲ. ಗೆದ್ದವ ಸೋತ (ಸೋತವ ಸತ್ತ) ಎಂಬ ಭಾವ ಉದ್ದೀಪಿಸುವ ಗಾಂಧಾರಿ ವಿಲಾಪ ಕೊನೆಯ ತುಣುಕಾಗಿ ಕಾಣಿಸಿದ್ದು ಸರಿಯೇ. ಆದರೆ ಕಥೆಯೇ ನಡೆಯದೆ ಫಲಿತಾಂಶ ಕೇಳಿದ ಹಾಗಾಯ್ತು.

ಕುಮಾರವ್ಯಾಸ ಕಾವ್ಯವನ್ನು ಶಾಸ್ತ್ರೀಯ ನೃತ್ಯಕ್ಕೆ ಹೊಂದಿಸಿದ್ದರಲ್ಲಿ (ರಾಗ ಸಂಯೋಜನೆ ಮತ್ತು ಗಾಯನ ವಿದ್ವಾನ್ ರಮೇಶ ಚಡಗ) ಕವಿಯ ಆಶಯ ಅಥವಾ ಕಾವ್ಯ ಬಂಧದ ಸೌಂದರ್ಯ ದಕ್ಕಲಿಲ್ಲ. ಜತಿಸ್ವರ, ಶಬ್ದಂ, ಪದವರ್ಣ, ಜಾವಳಿ, ತಿಲ್ಲಾನವೇ ಮೊದಲಾದ ನೃತ್ಯ ಪರಿಕರಗಳನ್ನು ಪರಿಣಾಮಕಾರಿಯಾಗಿಸುವಲ್ಲಿ ನಟ್ಟುವಾಂಗದಲ್ಲಿ ಪಾವನಾ ರಾಜೇಂದ್ರ, ಮೃದಂಗದಲ್ಲಿ ಮನೋಹರ ರಾವ್, ವಯೊಲಿನ್‌ನಲ್ಲಿ ಶರ್ಮಿಳಾ ಕೆ. ರಾವ್ ಮತ್ತು ಕೊಳಲಿನಲ್ಲಿ ಬಾಲಕೃಷ್ಣರ ಸಹಕಾರ ಚೆನ್ನಾಗಿಯೇ ಇದ್ದಿರಬೇಕು. ಇವಕ್ಕೆ ಅಳತೆಗೋಲು ನನ್ನಲ್ಲಿಲ್ಲ, ಕ್ಷಮಿಸಿ. ಆದರೆ ಒಟ್ಟು ಪ್ರದರ್ಶನ ಕುಮಾರವ್ಯಾಸ ಭಾರತವನ್ನು ಮೆರೆಸಲಿಲ್ಲ, ಕನಿಷ್ಠ ಕಥಾಶ್ರವಣದ ಸುಖವನ್ನೂ ಕೊಡಲಿಲ್ಲ. ಕುಮಾರವ್ಯಾಸನ ದೊಡ್ಡ ಹೆಸರಿನ ಬಲದಲ್ಲಿ ಸಾಮಾನ್ಯ ನೃತ್ಯಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಂಡ ಹಾಗೇ ಅನ್ನಿಸಿತು. ದಪ್ಪ ಚೌಕಟ್ಟಿನೊಳಗೆ ಕುಬ್ಜ ಚಿತ್ರ ಕೂರಿಸಿದ ಹಾಗನ್ನಿಸಿ ತೀವ್ರ ನಿರಾಶೆಯುಂಟು ಮಾಡಿತು. ಭ್ರಮರಿ, ಶಿವಪ್ರಕಾಶರ ಉತ್ಸಾಹದ ಬುಗ್ಗೆ ಮಾಧವಾಚಾರ್ಯರ ಅಪರಿಮಿತ ಪ್ರಯೋಗಗಳ ಮುನ್ನೆಲೆಯಲ್ಲಿ ಖಂಡಿತವಾಗಿಯೂ ಇದಕ್ಕಿಂತಲೂ ಎತ್ತರದ ರಸಸ್ಥಾನಗಳಿಗೆ ಚಿಮ್ಮಬೇಕೆಂದು ಆಶಿಸುತ್ತೇನೆ.

————-

 

ಕುಮಾರವ್ಯಾಸ ನೃತ್ಯಭಾರತ ಒಂದು ಸಾಧ್ಯತೆಯಾಗಿ…

ಭ್ರಮರಿ ಶಿವಪ್ರಕಾಶ್, ನಾದನೃತ್ಯ ಕಲಾಸಂಸ್ಥೆ, ಮಂಗಳೂರು

 

 

ಗದುಗಿನ ವೀರನಾರಣಪ್ಪ ವಿರಚಿತ ಕರ್ಣಾಟ ಭಾರತ ಕಥಾಮಂಜರಿಯಿಂದ ಆಯ್ದ ಸಾಲುಗಳನ್ನು ಭರತನಾಟ್ಯದ ಶಾಸ್ತ್ರೀಯ ನೃತ್ಯ ಮಾರ್ಗವಾಗಿ ಅಭಿವ್ಯಕ್ತಿಸುವ ನನ್ನ ಪ್ರಯತ್ನದ ಅನುಭವವನ್ನು ಇಲ್ಲಿ ಹಂಚಿಕೊಳ್ಳಬಯಸುತ್ತೇನೆ.

ಈ ನೃತ್ಯ ಪ್ರಸ್ತುತಿಯ ಹಿನ್ನೆಲೆ ಹೀಗಿದೆ – ಮೈಸೂರಿನಲ್ಲಿ ಗುರು ಡಾ| ವಸುಂಧರಾ ದೊರೆಸ್ವಾಮಿ ಅವರಿಂದ ತಮಿಳೋ, ತೆಲುಗೋ ಸಾಹಿತ್ಯಾಭಿನಯದ ಪಾಠ ಮಾಡಿಸಿಕೊಳ್ಳುವಾಗಲೆಲ್ಲ, ಅವುಗಳಿಂದ ಹೊರಹೊಮ್ಮುತ್ತಿದ್ದ ಭಾವ ಸೌಂದರ್ಯಕ್ಕೆ ಮಾರುಹೋಗುತ್ತಿದ್ದೆ. ನರ್ತನ ಕಲೆ, ಸಾಹಿತ್ಯದ ಚೆಲುವನ್ನು ಸ್ಫುರಣಗೊಳಿಸುವ ಪ್ರಭಾವೀ ಮಾಧ್ಯಮ ಎಂಬುದನ್ನು ಮನಗಂಡೆ. ತನ್ಮೂಲಕ, ನಾನು ಖುಷಿಪಟ್ಟದ್ದನ್ನು ಸಹೃದಯರೊಂದಿಗೆ ಹಂಚಿಕೊಳ್ಳುವ ಆಸೆ ನನ್ನದು. ಯಾವುದೇ ನೃತ್ಯ ಕಾರ್ಯಕ್ರಮದಲ್ಲಿ ಸುಮಾರು ಮೂರು ತರಹದ ಪ್ರೇಕ್ಷಕ ವರ್ಗವನ್ನು ನಾನು ಸಂಧಿಸಿದ್ದೇನೆ. ೧) ನೃತ್ಯಕಲೆಯನ್ನೆ ಅಭ್ಯಸಿಸಿ ವೃತ್ತಿಯೋ ಪ್ರವೃತ್ತಿಯೋ ಆಗಿರಿಸಿಕೊಂಡವರು, ಪ್ರಸಕ್ತ ಅಭ್ಯಸಿಸುತ್ತಿರುವವರು, ೨) ಎಲ್ಲ ಪ್ರದರ್ಶನ ಕಲೆಗಳ ತಕ್ಕ ಮಟ್ಟಿನ ಜ್ಞಾನವಿರುವ ಸಹೃದಯರು, ೩) ಇವು ಯಾವುದರ ಹಿನ್ನೆಲೆಯೇ ಇಲ್ಲದ ಸಾಮಾನ್ಯರು/ಭಾವುಕರು. ಕನ್ನಡದ ಮಣ್ಣಿನಲ್ಲಿ ಇಂತಹ ವಿವಿಧ ನೆಲೆಯ ಸಭಿಕ ವರ್ಗದ ಮನಸ್ಸನ್ನು ಮುಟ್ಟುವ ತಟ್ಟುವ ಪ್ರಯತ್ನ ನನ್ನಿಂದ ನಡೆಯಬೇಕೆಂದು ಹಂಬಲಿಸಿದೆ. ತಂದೆ ಪ್ರೊ| ಉದ್ಯಾವರ ಮಾಧವ ಆಚಾರ್ಯ ಅವರ ಸಮೂಹ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅನುಭವ ಮತ್ತು ೨೦೦೬ ರಲ್ಲಿ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ಕನ್ನಡ ಸಾಹಿತ್ಯ ಚರಿತ್ರೆ ಕುರಿತ ಉಪನ್ಯಾಸ ಗದುಗಿನ ಭಾರತವನ್ನು ಕೈಗೆತ್ತಿಕೊಳ್ಳುವಂತೆ ಮಾಡಿತು. ಹೀಗೆ ಕನ್ನಡ ಕಾವ್ಯವೊಂದರ ಪಠಣ, ಅದರಲ್ಲಿರಬಹುದಾದ ನೃತ್ಯ ಸಾಧ್ಯತೆಗಳನ್ನು ಶೋಧಿಸುವ ಗುರಿಯನ್ನು ಹೊತ್ತೆ. ವೈವಿಧ್ಯಮಯ ಸಾಧ್ಯತೆಗಳು ತೋರಿದವು. ಅವುಗಳಲ್ಲಿ ಒಂದು – “ಕುಮಾರವ್ಯಾಸ ಭಾರತವನ್ನು ಶಾಸ್ತ್ರೀಯ ನೃತ್ಯ ಮಾರ್ಗ” ವಾಗಿ ಅರ್ಪಿಸುವುದು. ಪುಷ್ಪಾಂಜಲಿ, ಸ್ವರಜತಿ, ಶಬ್ದಂ, ಪದವರ್ಣ, ಪದಂ, ತಿಲ್ಲಾನ ಇವು ಆರಿಸಿಕೊಂಡ ನೃತ್ಯಬಂಧಗಳಾದವು.

ಗದುಗಿನ ಭಾರತ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ ೭ ಮಾತ್ರೆಯ ಪದಗುಚ್ಛವನ್ನೊಳಗೊಂಡಿದೆ. ಮಂಗಳಾಚರಣೆಯಿಂದ ಹಿಡಿದು ಧರ್ಮರಾಯನ ಪಟ್ಟಾಭಿಷೇಕದವರೆಗೆ ಒಟ್ಟು ಹತ್ತು ಪರ್ವಗಳು. ರೂಪಕ ಅಲಂಕಾರಗಳ ಸಾಗರ.

ಭರತನಾಟ್ಯದ ಸಿದ್ಧ ಶೈಲಿಯ ಮಾರ್ಗ ಪದ್ಧತಿಯ ಎಲ್ಲ ನೃತ್ಯ ಬಂಧಗಳು ಒಂದೇ ದಾರದಲ್ಲಿ ಪೋಣಿಸಿದ ಮುತ್ತುಗಳಾಗದೆ, ಬಿಡಿ ಬಿಡಿಯಾದ ಮುತ್ತುಗಳಾಗಿರುತ್ತವೆ. ಅಂದರೆ ಒಂದು ಪೂರ್ಣ ಕಥಾನಕದ ಅಭಿವ್ಯಕ್ತಿಯಾಗಿರದೆ(ಏಕಾರ್ಥ), ಆರಿಸಿದ ವಸ್ತುಗಳು, ಕಥೆಗಳು, ಸಂದರ್ಭಗಳು ಬೇರೆ ಬೇರೆ(ಪ್ರತಗಾರ್ಥ) ಇರುತ್ತವೆ. ಪೂರ್ಣ ಕಥಾನಕದ “ನಾಟಕೀಯ ಪರಿಣಾಮ” ಮಾರ್ಗದ ವ್ಯಾಪ್ತಿಯಲಿಲ್ಲ. ಸನ್ನಿವೇಶದ ಒಳಗಿನ ಕಥಾ ವಿಸ್ತರಣೆಗೋಸ್ಕರ ಮಾಡುವ ಸಂಚಾರಿ ಭಾವದಲ್ಲಿ ಮಾತ್ರ ಅಲ್ಲಲ್ಲಿ ನಾಟಕೀಯ ಪರಿಣಾಮಗಳ ಬಳಕೆ ಇರುತ್ತದೆ. ಇನ್ನು, ನಾಟಕೀಯ ಚಲನೆಗಳು ನಮಗರಿವಿಲ್ಲದಂತೆ ನೃತ್ಯ ಬಂಧಗಳಲ್ಲಿ ಸೌಹಾರ್ದವಾಗಿ ಸಮ್ಮಿಳಿತಗೊಂಡಿವೆ. ಪ್ರತೀ ನೃತ್ಯ ಬಂಧಕ್ಕೆ ಆಯ್ದ ವಸ್ತುಗಳು ಒಂದು ಕಥೆಯನ್ನು ಪೂರ್ಣವಾಗಿ ಅಭಿವ್ಯಕ್ತಿಸಲೇಬೇಕೆಂದಿಲ್ಲ.

ಹೀಗಾಗಿ ಆಯ್ದುಕೊಂಡ ನೃತ್ಯ ಬಂಧಗಳು ಮತ್ತು ಅವುಗಳ ಲಕ್ಷಣಕ್ಕನುಸಾರವಾಗಿ ವಿವಿಧ ಸನ್ನಿವೇಶಗಳನ್ನು ಆರಿಸಲಾಯಿತು. ಇಡೀ ಕಾರ್ಯಕ್ರಮದ ಓಘಕ್ಕೆ ಅಡ್ಡಿಬರದಂತೆ ಕಥಾಕ್ರಮ ಹಿಂದು ಮುಂದಾಗದಿರಲೆಂದು ಎಚ್ಚರ ವಹಿಸಬೇಕಾಯಿತು. ಹೆಚ್ಚು ಚಾಲ್ತಿಯಲ್ಲಿಲ್ಲದ ಕಥಾ ಸಂದರ್ಭಗಳನ್ನು ಆಯ್ದು ಅದರ ಭಾವರಸವನ್ನು ನಾನುಂಡು ಸಹೃದಯರಿಗೆ ಉಣಬಡಿಸಬೇಕೆಂದು ಆಶಿಸಿದೆ. “ಮಾರ್ಗ”ದ ಕಣ್ಣಿನ ಮೂಲಕ ಗದುಗಿನ ಭಾರತವನ್ನು ನೋಡಲು ಯತ್ನಿಸಿದೆ. ಈ ನಿಟ್ಟಿನಲ್ಲಿ ಪುಷ್ಪಾಂಜಲಿಗಾಗಿ – ಮಂಗಳಾಚರಣೆಯ ದೇವತಾ ಸ್ತುತಿಗಳು, ಸ್ವರಜತಿಗಾಗಿ – ಸೂತ್ರಧಾರಿಯಾದ ಪಾತ್ರಧಾರಿ ಶ್ರೀ ಕೃಷ್ಣನ ವ್ಯಾಪಕತೆ, ಶಬ್ದಂಗಾಗಿ – ಭೀಮ ದುರ್ಯೋಧನರ ಬಾಲ್ಯದಲ್ಲಿ ಕುಡಿಯೊಡೆದ ವೈರ, ಪದವರ್ಣಕ್ಕಾಗಿ – ಕಲಿಭೀಮನಲ್ಲಿ ಆಕರ್ಷಿತಳಾದ ನಾಯಕಿ ಹಿಡಿಂಬೆ ಅಭಿಸಾರಿಕೆಯಾದ ಸನ್ನಿವೇಶ, ಪದಂಗಾಗಿ – ಕೀಚಕ ದ್ರೌಪದಿಯ ಸಂವಾದ, ಕೌರವನ ದೂರ್ತ ಆದರೆ ಸುಪ್ತ ಭಕ್ತಿಯನ್ನು ಕೆರಳಿಸಲು ಕೃಷ್ಣ ತೋರದ ವಿಶ್ವರೂಪ, ತಮ್ಮಿಂದ ತಾವಳಿದ ಘಾತಕ ಪುತ್ರರ ನೆನಪಿನಲ್ಲೇ ಪಾಂಡುಪುತ್ರರನ್ನು ಹರಸುವ ಮತ್ತು ಗದುಗಿನ ವೀರನಾರಾಯಣನ ಮಾಯಾರಚನೆಯ ಸೂಕ್ಷ್ಮವನ್ನು ತಿಳಿಯುವ ಗಾಂಧಾರಿಯ ಸಂದಿಗ್ಧತೆ ಮತ್ತು ತಿಲ್ಲಾನಕ್ಕಾಗಿ – ಪಟ್ಟಾಭಿಷೇಕದ ಮಂಗಳ ಕ್ಷಣ ಮುಂತಾದ ಸನ್ನಿವೇಶಗಳನ್ನು ಆಯ್ದುಕೊಂಡೆ. ಪ್ರತಿಯೊಂದು ನೃತ್ಯ ಬಂಧದ ವ್ಯಾಪ್ತಿಯ ಮಿತಿಯಲ್ಲೇ ಆರಿಸಿದ ಕಥಾನಕಗಳಿಗೆ ಸಂದರ್ಭೋಚಿತ ಕೊನೆ ಕಾಣಿಸಲಾಯಿತು.

ಯಾವುದೇ ಕಥಾನಕದಲ್ಲಿ ಬರುವ ‘ಪಾತ್ರಚಿತ್ರಣ’ ಕವಿಯ ಕಲ್ಪನಾ ಶಕ್ತಿಯ ಮಟ್ಟವನ್ನು ಪರಿಚಯಿಸುವಂಥದ್ದು. ಇದು ಆ ಕಾವ್ಯವನ್ನು ಮಹದೆತ್ತರಕ್ಕೇರಿಸುತ್ತದೆ. ಹೀಗಾಗಿ ಕುಮಾರವ್ಯಾಸ ಭಾರತ ಕನ್ನಡ ಸಾರಸ್ವತ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಸಂಧಾನಕ್ಕಾಗಿ ಬಂದ ಶ್ರೀ ಕೃಷ್ಣನ ದೈವೀಶಕ್ತಿಯನ್ನು ನಿರ್ಲಕ್ಷಿಸಿ, ಪಾಂಡವರಿಗೆ ಮುಳ್ಳು ಮೊನೆಯುಚ್ಚಳಿಪ ಧರಣಿಯನ್ ಇತ್ತೆನಾದೊಡೆ, ನಿನ್ನ ಮೇಲಾಣೆ ಎನ್ನುತ್ತಾನೆ ದೂರ್ತ ಕೌರವ. ಅಷ್ಟು ಮಾತ್ರವಲ್ಲದೆ ಕೃಷ್ಣನನ್ನು ಕಟ್ಟಲು ಪ್ರಯತ್ನಿಸಿದಾಗ ತೋರಿದ ವಿಶ್ವರೂಪ, ಧೃತರಾಷ್ಟ್ರನೂ ಸೇರಿದಂತೆ ಸಭೆಯಲ್ಲಿದ್ದವರಿಗೆಲ್ಲ ಕಂಡರೂ ಕೌರವನಿಗೆ ಮಾತ್ರ ತೋರುವುದಿಲ್ಲ. ತನ್ನ ಅಂತ್ಯಕಾಲದ ತೀವ್ರತೆಯನ್ನರಿತ ಸುಪ್ತ ಶ್ರೀಕೃಷ್ಣ ಭಕ್ತಿಯ ಕೌರವ, ತಾತನಲ್ಲಿ ಹೀಗೆನ್ನುತ್ತಾನೆ. ’ತಾತ ಬೆಚ್ಚಬೇಡ. ಈತನ್ ಅಂತರ್ಯಾಮಿ. ಎನ್ನ ಹೃದಯದೊಳಿರ್ದು ಮುರಿವನ್ ಗನ್ನದಲಿ ಸಂಧಿಯನು. ಮಣಿದು ಬದುಕುವನಲ್ಲ(ಈ ಸುಯೋಧನ). ಕೈ ದಣಿಯೆ ಹೊಯ್ದಾಡುವೆನು. ಕೃಷ್ಣನ ಕೆಣಕಿದಲ್ಲದೆ ವಹಿಲದಲಿ ಕೈವಲ್ಯವಿಲ್ಲೆಂದ! ಎಂಬ ಸಾಲುಗಳಲ್ಲಿ ಕೌರವನ ಸುಪ್ತ ಭಕ್ತಿಯನ್ನು ಅಭಿನಯಿಸುವಾಗಲೆಲ್ಲ ಮೈ ನವಿರೇಳುವಂತಾಯಿತು. ಗೀತೋಪದೇಶದ ವಿಶ್ವರೂಪದರ್ಶನ ಹೆಚ್ಚು ಪ್ರಚಲಿತವಾಗಿದ್ದರೂ, ಕುಮಾರವ್ಯಾಸನ ಸಾಲುಗಳಲ್ಲಿ ಮೂಡಿದ ಕೌರವನ ಈ ರೀತಿಯ ಪಾತ್ರ ಚಿತ್ರಣ ನನ್ನನ್ನು ಆಕರ್ಷಿಸಿತು. ಈ ರೀತಿಯಾಗಿಯೇ ವಿವಿಧ ಸನ್ನಿವೇಶಗಳಲ್ಲಿನ ಅನನ್ಯತೆಯನ್ನರಿಸಿಯೇ ನೃತ್ಯಬಂಧಗಳನ್ನು ಸಂಕಲಿಸಿದೆ.

ಪ್ರತಿಯೊಂದು ನೃತ್ಯ ಬಂಧಕ್ಕೂ ಆಯ್ದ ಸಾಲುಗಳಲ್ಲಿ ನಿರ್ದಿಷ್ಟ ಸ್ಥಾಯೀ ಭಾವ ವ್ಯಕ್ತವಾಗುವಂತೆ ಸಂಕಲಿಸಲಾಯಿತು ಮತ್ತು ಅಭಿವ್ಯಕ್ತಿಸಲಾಯಿತು. ಉದಾ: ಪದವರ್ಣದಲ್ಲಿ ಅಭಿಸಾರಿಕೆಯಾಗಿ ಹಿಡಿಂಬೆಯ ಪ್ರೇಮಯಾಚನೆಯಲ್ಲಿ ’ರತಿ’ ಎಂಬ ಸ್ಥಾಯೀ ಭಾವ ಔತ್ಸುಕ್ಯ, ಉನ್ಮಾದ, ಚಿಂತೆ, ಜಡತೆ ಮುಂತಾದ ಸಂಚಾರೀ ಭಾವಗಳ ಸುತ್ತ ಸಂಚರಿಸಿತು.

ಶ್ರುತಿ ತಾಯಿಯಾದರೆ, ಲಯ ತಂದೆ ಎನ್ನುತ್ತವೆ ನಮ್ಮ ಶಾಸ್ತ್ರಗಳು. ಹಾಗೆ ಕುಮಾರವ್ಯಾಸನ ಷಟ್ಪದಿಗಳಲ್ಲೂ ಒಂದು ನಾದ ಇದೆ. ಲಯ ಇದೆ. ಕಾರ್ಯಕ್ರಮದ ಒಟ್ಟಂದಕ್ಕಾಗಿ ರಾಗ ತಾಳಗಳ ವೈವಿಧ್ಯತೆಗೂ ಆದ್ಯತೆ ನೀಡಬೇಕಾಯಿತು. ಎಲ್ಲ ವಾಗ್ಗೇಯಕಾರರ ಕೃತಿಗಳಲ್ಲಿರುವಂತೆ, ಸಾಹಿತ್ಯದ ಅರ್ಥಕ್ಕೆ ಅಡ್ಡಿ ಬರದಂತೆ ಹೃಸ್ವ ದೀರ್ಘಗಳನ್ನು ಅಳವಡಿಸುವಾಗ ಸಿಕ್ಕ ಅನುಭವ ಅನನ್ಯ. ಶೃಂಗಾರ ಮತ್ತು ಕರುಣ ರಸ ಸೃಷ್ಟಿಗೆ ರಸಿಕಪ್ರಿಯ ಹಾಗೂ ವಾಸಂತಿ ರಾಗಗಳ ಆಯ್ಕೆ, ಆಭಿನಯಿಸುವಾಗಲೆಲ್ಲ ರೋಮಾಂಚನಗೈಯುತ್ತಿತ್ತು.

ಭಾವಗಾಯಕ, ಗಮಕ ಕಲಾವಿದ ವಿದ್ವಾನ್ ಎಚ್ ಚಂದ್ರಶೇಖರ ಕೆದ್ಲಾಯ ಅವರ ಸಾಂದರ್ಭಿಕ ಗಮಕ ನಿರೂಪಣೆ ಆಯ್ದ ಷಟ್ಪದಿಗಳ ಗಮಕ ಸೌಂದರ್ಯವನ್ನು ವಿಶ್ಲೇಷಿಸಿದರೆ, ವಿದ್ವಾನ್ ರಮೇಶ್ ಚಡಗ ಅವರು ಅವೇ ಸಾಲುಗಳನ್ನು ಚಾಲ್ತಿಯ ಆದಿ, ರೂಪಕ, ಖಂಡಛಾಪು, ಮಿಶ್ರಛಾಪು ತಾಳಗಳ ಅಳತೆಯಲ್ಲಿ ಕೇಳಿಸಿದ್ದು ಒಂದು ತೌಲನಿಕ ಅಧ್ಯಯನಕ್ಕೆ ಎಡೆಮಾಡಿಕೊಟ್ಟಿತು.

ನಾಂದಿಯ ಮಂಗಳಾಚರಣೆಯಿಂದ ಹಿಡಿದು ಫಲಶ್ರುತಿಯ ಮಂಗಳಪದ್ಯ ಮುಕುಂದನಿಂದ ಸಿಕ್ಕಿದ್ದು ಆ ಮುಕುಂದನಿಗೇ ಅರ್ಪಣೆಯಾದಾಗ ನನಗರಿವಿಲ್ಲದಂತೆ ಸುಮಾರು ಎರಡೂ ಕಾಲು ತಾಸು ಕಳೆದುಹೋಗಿತ್ತು. ಭಾರತ ಕಥಾ ಶ್ರವಣದ ಫಲದೊಂದಿಗೆ ದರ್ಶನದ ಫಲ, ಪ್ರಸ್ತುತ ಪಡಿಸಿದ ಕಲಾವಿದರೊಂದಿಗೆ ವೀಕ್ಷಿಸಿದ ಎಲ್ಲ ಭಕ್ತ ಭಾವುಕರಿಗೂ ಸಂದಿತು ಎಂಬ ಧನ್ಯತಾ ಭಾವ ತಾಳುವಂತಾಯಿತು. ಪ್ರೋತ್ಸಾಹಪೂರ್ವಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿಕೊಟ್ಟು ಆಶೀರ್ವದಿಸಿದ ಗುರು ಡಾ| ವಸುಂಧರಾ ದೊರೆಸ್ವಾಮಿ ಅವರಿಗೆ ನಾನು ಚಿರ ಋಣಿ. ಮಾಡಿದ ಪ್ರಯತ್ನವನ್ನು ಗಮನಿಸಿ ಧನಾತ್ಮಕ/ಋಣಾತ್ಮಕವಾಗಿ ವಿಮರ್ಶಿಸಿ, ಸಲಹೆ ಸೂಚನೆಗಳನ್ನು ಇತ್ತ ಪಂಡಿತವರ್ಗಕ್ಕೆ ನನ್ನ ಕೃತಜ್ಞತೆಗಳು. ಶಿಲ್ಪಿಯ ಅಸಂಖ್ಯ ಉಳಿಪೆಟ್ಟಿನಿಂದಲೇ ಸುಂದರ ಶಿಲ್ಪಾವಾದಂತೆ ನನ್ನ ಕಲಾಜೀವನ ರೂಪುಗೊಳ್ಳಲಿ, ನಾಟ್ಯಸರಸ್ವತಿಗೆ ನನ್ನ ಕಲಾಸೇವೆಯಾಗಲಿ. ಯಾವುದೇ ಅಭಿವ್ಯಕ್ತಿಗಳಿಗೆ ಇರುವ ಅಪಾರ ಸಾಧ್ಯತೆಗಳಲ್ಲಿ ಇದೂ ಒಂದು ಸಾಧ್ಯತೆ ಎಂದು ವಿನಮ್ರವಾಗಿ ಈ ಕೃತಿಯನ್ನು ಲೋಕಾರ್ಪಣಗೈದಿದ್ದೇನೆ.

—————

Leave a Reply

*

code