ಅಂಕಣಗಳು

Subscribe


 

ರಷ್ಯಾ ಅಧ್ಯಕ್ಷನ ಮುಂದೆ ಕುಣಿದವರು ನಮ್ಮ ವಿಠಲ ಶಾಸ್ತ್ರಿಗಳು!

Posted On: Monday, February 15th, 2010
1 Star2 Stars3 Stars4 Stars5 Stars (2 votes, average: 4.50 out of 5)
Loading...

Author: ರಾಕೇಶ್ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ

‘ಕುರಿಯ ವಿಠಲ ಶಾಸ್ತ್ರಿ’ – ತೆಂಕುತಿಟ್ಟಿನ ಯಕ್ಷಲೋಕದ ಗತ‌ಇತಿಹಾಸ ಗೊತ್ತಿರುವ ಅಷ್ಟೂ ಮಂದಿಗೆ ಈ ಹೆಸರು ಕೇಳಿದಾಗ ರೋಮಾಂಚನವಾಗದಿರದು. ಸಹಸ್ರ ಸಹಸ್ರ ಯಕ್ಷಕಲಾಭಿಮಾನಿಗಳ ಪಾಲಿಗೆ ಅದ್ಭುತ, ಅನನ್ಯ, ಅಬ್ಬರದ ಅಮೋಘ ರಸರಾತ್ರಿಗಳನ್ನು ಉಣಿಸಿದ ಮಹಾನ್ ಕಲಾವಿದ ಅವರು. ವೈಭವೋಪೇತವಾದ ನಡುರಾತ್ರಿಗಳಿಗೆ ಕಾರಣೀಭೂತನಾದ ದೈತ್ಯ ಪ್ರತಿಭೆ! ‘ವೇಷ ಅಂದರೆ ಇದು’ ಅಂತ ಮಹಾಮಹಾ ಯಕ್ಷವಿಮರ್ಶಕರಿಂದ ಹೇಳಿಸಿಕೊಂಡ ವಿಶಿಷ್ಟ ವ್ಯಕ್ತಿ. ಇವರು ಹುಟ್ಟಿದ್ದೇ ಯಕ್ಷಗಾನಕ್ಕಾಗಿ ಅನ್ನುವಂತೆ ರಂಗಸ್ಥಳದಲ್ಲಿ ಮಿಂಚಿದವರು. ಈ ತಲೆಮಾರಿನ ಮಂದಿಗೆ ತಮ್ಮನ್ನು ನೋಡುವ, ಅನುಭವಿಸುವ ಅವಕಾಶ ನೀಡದೆ ದಶಕಗಳ ಹಿಂದೆಯೇ ಮರೆಯಾದವರು!

ಶಾಸ್ತ್ರಿಗಳನ್ನು ರಂಗಸ್ಥಳದಲ್ಲಿ ನೋಡಿದವರಲ್ಲಿ ಶಾಸ್ತ್ರಿಗಳ ಬಗೆಗೆ ಕೇಳಬೇಕು. ಎಲ್ಲಿಂದ ಶುರುಮಾಡುವುದು ಅಂತಲೇ ಶುರುವಿಟ್ಟುಕೊಳ್ಳುತ್ತಾರೆ. ಯಾಕೆಂದರೆ ಶಾಸ್ತ್ರಿಗಳದು ವರ್ಣಿಸಲಾಗದ, ಕೇವಲ ಅನುಭವಕ್ಕೆ ಮಾತ್ರ ನಿಲುಕುವ ಕಲೆ. ಹೋಲಿಸೋಣವೆಂದರೆ ಇನ್ನೊಬ್ಬರಿಲ್ಲ! ವ್ಯಕ್ತಿಯಾಗಿ ಕುಳ್ಳರಾದರೂ ಕಲಾವಿದರಾಗಿ ಬಹಳ ಎತ್ತರಕ್ಕೇರಿದವರು!

ವಿಠಲ ಶಾಸ್ತ್ರಿಗಳಿಗೆ ಭಾರೀ ಹೆಸರು ತಂದುಕೊಟ್ಟ ಪಾತ್ರಗಳೆಂದರೆ ದಕ್ಷಯಜ್ಞದ ಈಶ್ವರ, ಭಸ್ಮಾಸುರ ಮೋಹಿನಿಯ ಭಸ್ಮಾಸುರ, ಅಭಿಮನ್ಯು ಕಾಳಗದ ದ್ರೋಣ ಇತ್ಯಾದಿ. ದಕ್ಷನ ಆಸ್ಥಾನದಲ್ಲಿ ತನ್ನ ಮಡದಿ ದಾಕ್ಷಾಯಿಣಿ ಮಡಿದಳೆಂಬ ಸುದ್ದಿಕೇಳಿ ಶಾಸ್ತ್ರಿಗಳು ರುದ್ರಭೀಕರನಾದಾಗ ಪ್ರೇಕ್ಷಕರ ಸಾಲಿನಲ್ಲಿ ಮುಂದೆ ಕುಳಿತ ಮಕ್ಕಳು ಹೆದರಿ ಅಳುತ್ತಿದ್ದರೆಂದರೆ ಅದೆಂಥ ಅಭಿನಯವಿರಬೇಕು! ಈಗ ನಾವು ಬಹಳ ಹೊಗಳುವ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಶಾಸ್ತ್ರಿಗಳ ಈಶ್ವರನಿಗೆ ಇನ್ನೊಂದಿಲ್ಲ. ‘ಕೆಂಡವೆ ಆಗಲಿ ಲೋಕ’ ಅನ್ನುವ ಹಾಡಿಗೆ ಅವರು ಕುಣಿಯುತ್ತಿದ್ದರೆ ನಿಜಕ್ಕೂ ಅದು ಕೆಂಡವೇ! ಅಂತ ಹೇಳಬೇಕಾದರೆ ಅದೆಂಥ ಮುಖಭಾವವಿರಬೇಡ!

ನಿಮಗೆ ಬಣ್ಣದ ಮಹಾಲಿಂಗ ಎಂದೇ ಖ್ಯಾತರಾದ ಕಲಾವಿದ ಮಹಾಲಿಂಗ ಅವರ ಬಗೆಗೆ ಗೊತ್ತಿರಬಹುದು. ಆರಡಿ ಎತ್ತರದ ಕಟ್ಟುಮಸ್ತಾದ ಆಳು ಅವರು. ಅಲ್ಲಿ ಈಶ್ವರ ಸಿಟ್ಟಿನಿಂದ ದಕ್ಷನ ವಧೆಗಾಗಿ ವೀರಭದ್ರನನ್ನು ಸೃಷ್ಟಿಸುತ್ತಾನಲ್ಲ, ಹಾಗೆ ಶಾಸ್ತ್ರಿಗಳ ಈಶ್ವರ ಸೃಷ್ಟಿಸುವ ವೀರಭದ್ರನಾಗಿ ಕಾಣಿಸಿಕೊಳ್ಳುತ್ತಿದ್ದ ವ್ಯಕ್ತಿ ಇದೇ ಮಹಾಲಿಂಗ. ಹಾಗೆ ಸೃಷ್ಟಿಸಿದ ತಕ್ಷಣ ‘ಬಾರೆನ್ನ ಮಗನೆ ನೀ ಬಾರೆನ್ನ ಮರಿಯಾನೆ’ ಅಂತ ಒಂದು ಹಾಡಿದೆ. ಆ ಹಾಡಿಗೆ ಕುಳ್ಳ ಶಾಸ್ತ್ರಿಗಳು ಅಷ್ಟೆತ್ತರದ ಮಹಾಲಿಂಗ ಅವರನ್ನು ಸೊಂಟದಲ್ಲಿ ಕೂರಿಸಿಕೊಂಡು ರಂಗಸ್ಥಳಕ್ಕೆ ಸುತ್ತು ಬರುತ್ತಿದ್ದರಂತೆ!! ಒಮ್ಮೆ ರಂಗಸ್ಥಳಕ್ಕೆ ಬಂದರೆ ಭಾರ, ನೋವು, ಯಾತನೆ, ವೇದನೆಗಳಾವುವೂ ಶಾಸ್ತ್ರಿಗಳ ಬಳಿ ಸುಳಿಯುತ್ತಿರಲಿಲ್ಲವಂತೆ.

ಹಾಗೆಯೇ ವಿಶ್ವಾಮಿತ್ರ ಮೇನಕೆ ಪ್ರಸಂಗದಲ್ಲಿ ಅವರದು ವಿಶ್ವಾಮಿತ್ರ. ಮನ್ಮಥ ಐದು ಪುಷ್ಪಸರಗಳನ್ನೆಸೆಯುವ ದೃಶ್ಯದಲ್ಲಿ ಧ್ಯಾನಸ್ಥನಾಗಿರುವ ವಿಶ್ವಾಮಿತ್ರ (ವಿಠಲ ಶಾಸ್ತ್ರಿಗಳು) ಆ ವಿಶಿಷ್ಟ ಯಾತನೆಯನ್ನು ಅನುಭವಿಸುವ ಅವಸ್ಥೆಯನ್ನು ಶಾಸ್ತ್ರಿಗಳು ಭಲೇ ಸೊಗಸಾಗಿ ಸಂವಹನಗೊಳಿಸುತ್ತಿದ್ದರು. ಮನ್ಮಥ ಮೊದಲ ಬಾಣ ಎಸೆದಾಗ ಕುಳಿತಿದ್ದಲ್ಲೇ ತನ್ನ ಎಡಸ್ತನವೊಂದನ್ನು ಮಾತ್ರ ಒಮ್ಮೆ ಅಲುಗಾಡಿಸುತ್ತಿದ್ದರು. ಎರಡನೆಯ ಬಾಣ ಬಿಟ್ಟಾಗ ಕೇವಲ ಬಲಸ್ತನವನ್ನಷ್ಟೇ ಕುಲುಕಿಸುತ್ತಿದ್ದರು. ಮೂರನೆಯದಕ್ಕೆ ಎಡಹುಬ್ಬು ಮಾತ್ರ ತುಸು ಚಲಿಸುತ್ತಿತ್ತು. ನಾಲ್ಕನೆಯದಕ್ಕೆ ಬಲಹುಬ್ಬು! ಐದನೆಯದು ಪ್ರಯೋಗವಾಯಿತೋ ಶಾಸ್ತ್ರಿಗಳು ಕಣ್ಣು ತೆರೆಯುತ್ತಾರೆ ಮತ್ತು ಎದುರು ಕುಳಿತ ಮಕ್ಕಳು ಹಿಂದೆ ಓಡುತ್ತಾರೆ!! ಹೀಗಂತ ಆ ವೈಭವವನ್ನು ಕಣ್ಣಿನಲ್ಲಿ ಕಟ್ಟಿಕೊಂಡ ಭಾಗ್ಯಶಾಲಿಗಳು ವಿವರಿಸುತ್ತಾರೆ.

ಹಾಂ, ಶಾಸ್ತ್ರಿಗಳು ಕಡಿಮೆ ಆಸಾಮಿಗಳೇನಲ್ಲ. ಅರವತ್ತರ ದಶಕದಲ್ಲಿ ರಷ್ಯಾ ಅಧ್ಯಕ್ಷ ಕೃಶ್ಚೇವ್ ಭಾರತಕ್ಕೆ ಬಂದಾಗ, ಆತ ಮತ್ತು ಅಂದಿನ ಪ್ರಧಾನಿ ನೆಹರೂ ಅಲ್ಲದೆ ಇತರ ರಾಜಕಾರಣಿಗಳ ಸಮ್ಮುಖದಲ್ಲಿ, ಸಂಸತ್ತಿನಲ್ಲಿ ತಮ್ಮ ತಂಡದೊಂದಿಗೆ ಕುಣಿದು ಸೈ ಸೈ ಎನಿಸಿಕೊಂಡವರು! ತನ್ಮೂಲಕ ತೆಂಕುತಿಟ್ಟಿನ ರಂಗವೈಭವವನ್ನು ರಾಜಧಾನಿಯಲ್ಲೂ ಸಾಕ್ಷಾತ್ಕರಿಸಿದವರು. ತೆಂಕುತಿಟ್ಟೇನು, ಇಡೀ ಯಕ್ಷಲೋಕಕ್ಕೇ ತಿಲಕಪ್ರಾಯರಾದವರು.

ಈಗ ಹೇಳಿ ವಿಠಲ ಶಾಸ್ತ್ರಿಗಳು ಅಂದ್ರೆ ಸುಮ್ನೇನಾ?

1 Response to ರಷ್ಯಾ ಅಧ್ಯಕ್ಷನ ಮುಂದೆ ಕುಣಿದವರು ನಮ್ಮ ವಿಠಲ ಶಾಸ್ತ್ರಿಗಳು!

  1. ಪ.ರಾಮಚಂದ್ರ- ರಾಸ್ ಲಫ್ಫಾನ್, ಕತಾರ್.

    ಪ್ರಖ್ಯಾತ ಯಕ್ಷಗಾನ ಕಲಾವಿದ ಕುರಿಯ ವಿಠಲ ಶಾಸ್ತ್ರಿಯವರ ಬಗ್ಗೆ “ರಷ್ಯಾ ಅಧ್ಯಕ್ಷನ ಮುಂದೆ ಕುಣಿದವರು ನಮ್ಮ ವಿಠಲ ಶಾಸ್ತ್ರಿಗಳು!” ಲೇಖನ ಬರೆದ ಶ್ರೀಯುತ ರಾಕೇಶ್ ಕುಮಾರ್ ಕಮ್ಮಜೆ ಅವರಿಗೆ ವಂದನೆಗಳು.

    ರಷ್ಯಾ ದೇಶದ (ಆಗಿನ ಯು.ಎಸ್.ಎಸ್.ಆರ್.) ಪ್ರಧಾನ ಮಾರ್ಶಲ್ ಬುಲ್ಗಾನಿನ್ ಮತ್ತು (ಸರ್ವೋಚ್ಛ ಮುಖಂಡ) ಕಾಮ್ರೇಡ್ ಕ್ರುಶ್ಚೇವ್ ಬೆಂಗಳೂರಿಗೆ ಭೇಟಿ ನೀಡಿದ್ದು ದಿನಾಂಕ 26 ನವಂಬರ್ 1955 ರಂದು.

    “ದಕ್ಷಯಜ್ಞ ನೋಡಿ‌ ಖುದ್ದು ಕ್ರುಶ್ಚೇವ್ ಕೈಕುಲುಕಿದ್ದರು!” ಲೇಖನದಲ್ಲಿ ಈ ಘಟನೆಯ ಹೆಚ್ಚಿನ ವಿವರಗಳು ಲಭ್ಯವಿದೆ. ಲೇಖನ ಓದಲು ಈ ಕೊಂಡಿ ನೋಡಿ.

    http://kannada.webdunia.com/entertainment/yakshagana/article/1105/14/1110514031_1.htm

    ವಂದನೆಗಳು.

    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್.

Leave a Reply

*

code