ಅಂಕಣಗಳು

Subscribe


 

ನರ್ತಿಸಿದಳು ಸ್ವರಸುರನಾರಿ

Posted On: Monday, February 16th, 2009
1 Star2 Stars3 Stars4 Stars5 Stars (No Ratings Yet)
Loading...

Author: ಕುವೆಂಪು

ಶಿಶಿರ ಶೃಂಗಾರಕ್ಕೆ ಕುವೆಂಪು ವಿರಚಿತ ‘ಕದರಡಕೆ’ ಕವನ ಸಂಕಲದಿಂದಾಯ್ದ ಕವನ ನರ್ತಿಸಿದಳು ಸ್ವರಸುರನಾರಿ..ಇದೋ ನಿಮ್ಮ ಓದಿಗೆ….
ನರ್ತಿಸಿದಳು ಸ್ವರಸುರನಾರಿ
ಲಾಸ್ಯವಿನ್ಯಾಸದ ವೈಯಾರಿ
ಕೇಳಿರೆ ಕಿವಿ, ಕಂಡನು ಕವಿ,
ರಸ ಸಂಚಾರಿ!

ಪೀತಾಂಬರದುಡೆ, ಹೂ ತುಂಬಿದ ಜಡೆ,
ದಂತದಿ ಕೈಗಯ್ದಿಹ ಮೈ,
ಗೆಡೆಹಾವಿನ ಹೆಡೆ ಎಣೆಯಾಡುವ ನಡೆ,
ತೈತಕತೈಗುಲಿಯುವ ಕೈ!

ಧಮು ಧುಮು ಧುಮು ಕೇಳ್: ಜಲಪಾತದ ಬೀಳ್!
ಕಾಣ್ ಅದೊ ಗಿರಿಯಿಂದುರುಳ್ವ ಝರಿ!
ಬೆಳ್ಳಂಗೆಡೆವುದು ಬೆಳ್‌ನೆಯ್ಯಂದದಿ,
ಮಂಜಾಗಲ್ ಮಲೆಪಸುರ್‌ದರಿ!

ದೂರದ ಮೊರೆ: ಏನದು? ಕಡಲಿನ ಕರೆ;
ತೆರೆ ತೆರೆ ತೆರೆ ಬಂದುದು ಬಳಿಸಾರಿ
ಸುಳಿ, ನೊರೆ, ತುಂತುರು, ನೀಲ ಅನಂತತೆ:
ಬಂದಪ್ಪಿತು ಸುಖರಸ ಲಯವಾರಿ!

ಕಣ್ ಮುಚ್ಚಿತು ನಿಶೆ, ಕಣ್‌ದೆರೆಯಿತು ಉಷೆ,
ಇಂದ್ರಿಯ ದಿಗಂತದೊಳದೊ ಸೂರ್ಯೋದಯ!
ನೀಲಾಂಬರ ರಮೆ ಮೇಘತಿಲೋತ್ತಮೆ:
ಆಲಿಸು! ನಂದನವನ ಖಗಹೃದಯ!

ಶಿಲೆ ಶಿಲೆ ಶಿಲೆ ಸೇರಿ, ತರು ತರು ತರು ಏರಿ,
ಶೈಲಾರಣ್ಯಧ್ಯಾನವ ತೋರಿ,
ಪರ್ವಿದವದೊ ಪರ್ವತ ಪಂಕ್ತಿ
ರಾಶಿ ರಾಶಿ ದಿಗ್ದಂತಿ!

ಬಂದನುಭವ ಬರುವನುಭವ
ಭವ ಭವ ಭವದನುಭವ ಸಾಗರದಿ
ದೇವಾಸುರೆ ಫಣಿಮಂದಿರೆ
ಮೋಹಿನಿಯೋಲಮೃತದ ಕರದಿ:
ನರ್ತಿಸಿದಳು ಸ್ವರ ಸುರನಾರಿ:
ಲಾಸ್ಯವಿನ್ಯಾಸದ ವೈಯಾರಿ:
ಕೇಳಿರೆ ಕಿವಿ, ಕಂಡನು ಕವಿ,
ರಸ ಸಂಚಾರಿ!

Leave a Reply

*

code