ಅಂಕಣಗಳು

Subscribe


 

ಗಿರಿಜಾ ಕಲ್ಯಾಣ- ರೂಪಕ

Posted On: Tuesday, December 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ದಿವಾಕರ ಹೆಗಡೆ, ಕವಿಗಳು, ಆಕಾಶವಾಣಿ ಉದ್ಯೋಗಿ, ಧಾರವಾಡ

ಗಿರಿಜಾ ಕಲ್ಯಾಣವೆಂಬ ಪೌರಾಣಿಕ ಕಥಾ ವಸ್ತು ಕಾವ್ಯ-ನಾಟ್ಯ-ನೃತ್ಯ-ಜಾನಪದಾದಿಯಾಗಿ ಹಲವು ಸನ್ನಿವೇಶಗಳಿಗೆ ಅದ್ಭುತವೆನಿಸುವ ವಸ್ತು. ಮತ್ತೊಮ್ಮೆ ಈ ಲಲಿತ ಮನೋಹರವಾದ ಸೊಗದಿಂದೊಡಗೂಡಿದ ‘ಗಿರಿಜಾ ಕಲ್ಯಾಣ’ ವನ್ನು ತಮ್ಮ ಕಾವ್ಯ ಲಹರಿಯಲ್ಲಿ ನಿಮ್ಮ ಮುಂದಿರಿಸಿದ್ದಾರೆ ಧಾರವಾಡದಲ್ಲಿ ಆಕಾಶವಾಣಿ ಮಾಧ್ಯಮದಲ್ಲಿ ವೃತ್ತಿಯಲ್ಲಿರುವ, ಪ್ರವೃತ್ತಿಯಲ್ಲಿ ಕವಿಯೂ, ರೂಪಕ ರಚನೆಯಲ್ಲಿ ಛಂದಸ್ಸು-ಪ್ರಾಸಗಳ ಸಮಯೋಚಿತ ಬಳಕೆಯೊಂದಿಗೆ ಸೃಷ್ಟಿಶೀಲರೆನಿಸಿದ ದಿವಾಕರ ಹೆಗಡೆ.

ಓದಿ ಆನಂದಿಸಿ, ಕೇಳಿ ಖುಷಿಯಾಗಿ, ನಲಿದು ನಾಟ್ಯವಾಡಿ.

(ನೃತ್ಯ-ನಾಟ್ಯಗಳ ಕುರಿತಾಗಿ ಕಾವ್ಯ ಬರೆಯುವ, ಲಹರಿ ನುಡಿಸುವ ಸರ್ವ ಸಹೃದಯರಿಗೂ ಈ ಅಂಕಣಕ್ಕೆ ಬರೆಯುವ ಅವಕಾಶ ಮುಕ್ತವಾಗಿದೆ.)

ನಿರೂಪಕ : ಲಯದಿ ಲಾಸ್ಯ ತಾ ನಲಿದು ಕುಣಿದ ಘನದಾಲಯ ಕೈಲಾಸ |

ವ್ಯಯದ ನಾಟ್ಯ ಭವ ಭಯವನು ಕಳೆದಿದೆ ಈಶ್ವರ ಸಹವಾಸ ||

ದಕ್ಷ ತನಯೆ ತಾನರಿಯದೆ ಬಂದಳು ಈಶ ರಹಿತ ಯಾಗ |

ಶಿಕ್ಷೆಯೆನುತ ಬೆಂದಳಿದಳು ಉರಿಯಲಿ ಕುದಿದನೀಶನಾಗ ||

ಮುಕ್ಕಣ್ಣನು ಮುಡಿಬಡಿಯೆ ಮೂಡಿದನು ವೀರಭದ್ರ ಘೋರ |

ಸೊಕ್ಕಿದ ದಕ್ಷನ ತಲೆಯ ತರಿದು ತಾ ಮಿಕ್ಕಿ ಮೆರೆದ ವೀರ ||

ಶಿವ ವಿರಹದ ಉರಿ ತಪದಲಿ ತಣಿಯಿತು ಭವಳಿದನುಭಾವ |

ಕವಿದ ದೈತ್ಯ ತಾರಕನಿಗೆ ವರವಿದೆ ಶಿವ ಸಂತಾಽನದಿ ಸಾವ ||

ಪರ್ವತ ಯಜ : ಪರ್ವತನ ಯಜದಲಿ ಪಾವಕನ ಮುದವೇನು |

ಸರ್ವಜನ ಸಮ್ಮುದದಿ ಶ್ರ್ರಾವ್ಯ ಸಂಪದವೇನು |

ಪಾರ್ವರೊಂದಾದ ನುಡಿ ವೇದ ವೈಭವವೇನು |

ಪರ್ವಕಾಲದಿ ಪಡೆದ ದೈವ ಬೆಂಬಲವೇನು ||

ಮಗಳು ಹುಟ್ಟಿದಳು ಸೊಗವು ಹೆಚ್ಚಿದುದು ಗಿರಿರಾಜಗೆ ತೋಷ |

ಅಗಜೆ ಬೆಳೆದಳು ಬಗೆ ಬಗೆ ನಿಲುವು ರತಿ ತಳೆದಳೆ ವೇಷ ||

ಪಾರ್ವತಿಯ ಪ್ರವೇಶ : ಬಾಲೆ ಗಿರಿಜೆಯು ಲೋಲ ಲೋಚನೆ |

ತಾಳದಲಿ ನಡೆ ಹಂಸ ಗಮನೆಯು |

ಲೀಲೆಯಲಿ ಕಾಲವನು ಕುಣಿಸುವ |

ವ್ಯಾಳವೇಣಿ ||

ನೀರ ನೀರೆ ನಾಚಿದಂತೆ ಗಿರಿಜೆ ಮಜ್ಜನ |

ನಾರಿ ಸೀರೆಯುಟ್ಟುದೊಂದು ಬಗೆ ವಿನೂತನ|

ನೀಳ ಕೇಶಿ ಜಡೆಯ ಹೆಣೆದರೇನು ಸೊಗಸದು |

ನೀಲವರ್ಣ ನಾಗವೇಣಿ ತೂಗಿ ತೊನೆವುದು ||

ಕಣ್ಣ ಕಪ್ಪ ತಿದ್ದಿ ತೀಡಿ ಒಪ್ಪವಿಡುವಳೋ |

ಚಿನ್ನದೊಡವೆ ಇಟ್ಟು ನಲಿವಳೇನು ಚೆಲುವೆಯೋ ||

ಗಂಧ ಚೆಂದ ಚಂದನಗಳನಂದು ಪೂಸಲು |

ಸೂಂದರಾಂಗಿ ಚೆಲುವಿದೆಲ್ಲ ಶಿವಗೆ ಮೀಸಲು ||

-೨-

ಮಾಲೆ ಮಾಲೆ ಕುಸುಮ ಬಾಲೆ ಹೂವ ಮುಡಿದಳು |

ನಾಳೆ ನಾಳೆ ಎನುವ ಕಾಲ ನಿಂತು ನೋಡಲು ||

ಮುಕುರುವಿಡಿದು ಮುಖವ ನೋಡೆ ನಾಚಿ ನಿಂತಳು |

ಸುಖದ ಜೀವ ಸೊಗದ ಕನಸು ಹಾಡಿ ಕುಣಿದಳು ||

ಶಿವ ವಿರಹದಿ ಗಿರಿಜಾತೆಯು ಬಳಲುತ ಗತಿವಿಡಿದಳು ಶೀಲೆ

ಜವದಲಿ ಪರ್ವತವೇರುವ ಸಾಹಸ ಹಿಮವಂತನ ಬಾಲೆ

ಶಿವ : ಧ್ಯಾನದಲಿ ಮರವಟ್ಟು ಮೈಮರೆತನೇ ಶಿವನು |

ಜಾನದಲಿ ಲೋಕವನು ನೋಡದಾದನೆ ಭವನು |

ಹಿಮದಲ್ಲಿ ಹಿಮವಾದ ದಮದಲ್ಲಿ ದೊರೆಯಾದ |

ಶಮೆಯಲ್ಲಿ ವಿರಹವನು ಜಯಿಸಿ ಮೆರೆದ ||

ಪಾರ್ವತಿ : ಬಂದು ಕಂಡಳು ಸ್ಥಾಣು ತಪವನು |

ನಿಂದು ನೋಡುತ ಹರನ ವಿಭವವ |

ಕುಂದಿರದ ತಾಪಸಿಯ ನೆನೆದಳು |

ಅಂದದಿಂದ ||

ಹೃದಯದಲಿ ಹೊತ್ತವಳು ಶಿವನ ತಾ ಸುತ್ತಿದಳು |

ಮುದವಿರದ ಕೈಲಾಸಕೆಸವ ಸೊಗ ಬಿತ್ತಿದಳು |

ಹದದಿ ಹರ ನೊಲವ ಬಯ ಬಯಸಿ ಮುಂದೊತ್ತಿದಳು|

ಅದನದನೆ ಹಂಬಲಿಸಿ ಹತ್ತಿರದಿ ನಿತ್ತಿಹಳು ||

ಪರಮ ಶಿವನ ಪರಿಯಿದೇನು ಹರನು ಹೊರಗ ಕಾಣನೇನು

ಕರೆದು ನುಡಿಸೆ ಮಾತನಾಡ ಸರಿದು ನಿಲ್ಲೆ ತೆರೆದು ನೋಡ

ಕರದ ಬಳೆಯ ನಾದಕಿಲ್ಲ ಕಾಲಗೆಜ್ಜೆ ಉಲಿಯನೊಲ್ಲ

ತೆರೆಯಲಾರನಿವನು ಕಣ್ಣ ನೋಡಲಾರನೆನ್ನ ಬಣ್ಣ

ಬರಿದೆಬಂದು ಕೆಟ್ಟೆನೇನು ಹೊರಳಿ ಹೋಗಲಾರೆ ನಾನು

ಸ್ಮರನ ಭಾವ ಇವನಿಗಿಲ್ಲ ಹರನೆ ನಿನ್ನ ಒಲಿದೆನಲ್ಲ

ಸುರರು ನೋಡಿರೆನ್ನ ಕಷ್ಟ ಸುಡುವ ಕಾಮನೇನು ದುಷ್ಟ.

ಕಾಮ, ರತಿ : ಹಿಮವಂತನ ಪುತ್ರಿ | ನಾನೇ | ಕಾಮನು ಇವಳು ರತಿ ||

ಸುಮನಸರಸನು ಕಳುಹಿದನೆಮ್ಮನು |

ನಿಮಗನುಕೂಲದ ಕಾರ್ಯವನೆಸಗಲು ||

ಕಾಮ : ಶಿವನನು ಭವ ಕಾನಿಳಿಸುವೆನು |

ಪಂಚಬಾಣ ಸಂಭ್ರಮಿಸುವೆನು |

ತವಕದೆಸುಗೆಯಲಿ ಕೈಲಾಸದಿನಾ |

ನವ ಪಲ್ಲವ ಸೌಂದರ್ಯವ ಕಾಣಿಸಿ ||

-೩-

ಗೌರಿ : ಕಾಮನಬಿಲ್ಲಿಗೆ ಬಣ್ಣಗಳೇಳಿವೆ |

ತಾಮನ ಮಾಡಿದ ಮಂದಾನಿಲನು |

ಈ ಮರ ಆ ಮರ ಪುಷ್ಫಗಳೈಸಿರಿ |

ಸೀಮೆಯ ತುಂಬಿದ ಹೂಗಂಧ ಪರಿ ||

ಗೌರಿ ಮತ್ತು ರತಿ : ಮನಸಿಜನೆಸುಗೆಯ ಹದವೇನು |

ಮಸಣದಿ ಮಲ್ಲಿಗೆ ಮುದವೇನು |

ಹೊಸದಾಯಿತು ಕೈಲಾಸದ ಪರಿಸರ |

ಬೆಸೆವಂಬಿನ ಪರಿ ಸಾಸಿರ ಸಾಸಿರ |

.

ಕುಸುಮ ಶರನ ಹತಿ ಭಸಿತಾಂಗಗೆ ಖತಿ |

ಎಸುಗೆಯೊಳಾರತಿ ಶಿವನ ಕೆಣಕಿತತಿ |

ಹಸಿವೆಯ ಹಂಬಲ ತಪೋನಿರತ ಮತಿ |

ಜಸವಿದು ಜೀವಕೆ ಮಿಸುಕಿದ ಪಶುಪತಿ |

ತಾಂಡವ : ಫಡ ಫಡ ಬಡ ಬಡ ಗಡ ಗಡ ಗಡ ಗಡ

ಧಡ ದಢ ಎನ್ನುವ ಭೈರವ ತಾಂಡವ

ಸೆಡಿವಿನ ನಡೆ ಅಡಿ ಅಡಿಯಲಿ ಮೆರೆದಿದೆ

ಜಡೆ ಮುಡಿಯಲಿ ರೋಷವೆ ಹೆಡೆಯಾಡಿದೆ

ಹಿಡಿದ ಡಮರು ಗುಡು ಗುಡು ಗುಡು ಗುಡುಗಿದೆ

ಬಿಡೆನೆನ್ನುವ ಮೃಡ ಜಗ ತಾ ಬೆದರಿದೆ

ಸಿಡಿಲು ಬಡಿದು ಮಿಂಚೊಡದಾಘಾತಕೆ

ಕಡಲ ಕಡೆದ ಬಡಬಾಗ್ನಿಯ ಭೀತಕೆ

ಸುಡುವೆ ಜಗವನೆಂದಾರ್ಭಟಿಸುತ್ತಿರೆ

ಒಡೆಯಿತು ಹಣೆ ಮೂಡಿತು ಮಾರಕ್ಷಿಯು

ಉಕ್ಕಿದ ಕೋಪಕೆ ಸಿಕ್ಕಿದ ಕಾಮನ |

ಮುಕ್ಕಿದ ಮುಕ್ಕಣ್ಣ ||

ಮಿಕ್ಕಿದ ತಪ ಸುಮಶರನನು ನೆಕ್ಕಿತು |

ಬಿಕ್ಕಿದ ರತಿರನ್ನ ||

ಸುಟ್ಟವನ ಬೂದಿಯನು ಥಟ್ಟನೇ ಹಣೆಗಿರಿಸಿ |

ದಿಟ್ಟಿಸದೆ ಪಾರ್ವತಿಯ ಮತ್ತೆ ತಪಕಿಳಿದ ||

(ಮುಂದುವರೆಯುವುದು…)

Leave a Reply

*

code