ಅಂಕಣಗಳು

Subscribe


 

’ಬಲೆ’ ಬೀಸುವ ಕಲೆಯ ನೆಲೆ

Posted On: Sunday, September 16th, 2012
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ನಿವೇದಿತಾ ಶ್ರೀನಿವಾಸ್, ಸಂಶೋಧಕರು, ನೃತ್ಯ ಕಲಾವಿದರು, ’ಸ್ತುತಿ ನಾಟ್ಯಶಾಲೆ’, ಬೆಂಗಳೂರು.

ನಮ್ಮ ನೃತ್ಯಶಾಲೆಯ ಈ ಬಾರಿಯ ವಾರ್ಷಿಕೋತ್ಸವಕ್ಕೆ ಗಿಲಿಗಿಲಿ ಮ್ಯಾಜಿಕ್ ತಂಡವನ್ನು ಕರೆಸಿದ್ದೆವು. ಮಕ್ಕಳಲ್ಲದೆ ವಯೋವೃದ್ಧರೂ ಸಹ ಅವರ ಪ್ರದರ್ಶನ ಮೆಚ್ಚಿದರು. ತಂಡದ ಮುಖ್ಯಸ್ಥರಾದ ಶಂಕರ್ ಮತ್ತು ಜೂನಿಯರ್ ಶಂಕರ್ ಅಥವಾ ತೇಜಸ್ವಿ ಅವರು ಪ್ರದರ್ಶನದ ನಂತರ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದರು. ಅವರು, ಕೆಲವು ಪ್ರತಿಷ್ಠಿತ ರಂಗಮಂದಿರಗಳಲ್ಲಿ ಇಂದ್ರಜಾಲಕ್ಕೆ ಅವಕಾಶವೇ ಕೊಡುವುದಿಲ್ಲ, ಏಕೆಂದರೆ ಅವರ ಪ್ರಕಾರ ಇದು ಒಂದು ಕಲೆಯೇ ಅಲ್ಲಎಂದು ಬೇಸರಿಸಿದರು. ಹಾಗಾದರೆ, ಯಾವುದನ್ನು ಕಲೆ ಎನ್ನೋಣ? ಕಲೆ ಎನಿಸಿಕೊಳ್ಳಲು ಅದಕ್ಕಿರಬೇಕಾದ ಅರ್ಹತೆ, ಮಾನದಂಡಗಳೇನು? ಅವು ಇಂದ್ರಜಾಲದಲ್ಲಿ ಇಲ್ಲವೇ?

ಕಲೆಯನ್ನು ಅನೇಕರು ಅನೇಕ ರೀತಿ ವ್ಯಾಖ್ಯಾನಿಸಿದ್ದಾರೆ. ಕೆಲವರಿಗೆ ಇದು ಆಸ್ವಾದನೆ ನೀಡುವ ವಸ್ತುವಾದರೆ, ಮತ್ತೆ ಕೆಲವರಿಗೆ ಪ್ರಕೃತಿಯ ಪ್ರತಿಕೃತಿ. ಹಲವರಿಗೆ ಮನೋರಂಜನೆಯ ಸಾಧನವಾದರೆ, ಇನ್ನು ಹಲವರಿಗೆ ಜೀವನವೇ ಒಂದು ಕಲೆ! ಒಟ್ಟಾರೆ ಹೇಳುವುದಾದರೆ, ಒಬ್ಬ ಕಲಾವಿದನ ಪ್ರತಿಭೆಯು ಸ್ಪೂರ್ತಿಗೊಳಪಟ್ಟಾಗ ಒಂದು ಮಾಧ್ಯಮದ ಮೂಲಕ ಹೊರಹೊಮ್ಮಿ ಒಂದು ರೂಪ ಪಡೆದುಕೊಳ್ಳುವುದನ್ನು ಕಲೆ ಎನ್ನಬಹುದು. ಸಹೃದಯನು ಅದನ್ನು ಆಸ್ವಾದಿಸುತ್ತಾನೆ. ಇಲ್ಲಿ, ಕಲಾವಿದ ತನಗಾದ ಆಸ್ವಾದನೆಯನ್ನು ಒಂದು ಮಾಧ್ಯಮದ ಮೂಲಕ ಸಹೃದಯನಿಗೆ ವರ್ಗಾಯಿಸುತ್ತಾನೆ. ಸಹೃದಯನ ಕಡೆಯಿಂದ ಅವಲೋಕಿಸಿದಾಗ, ಅವನಿಗೆ ಆ ವಸ್ತುವು ಉಳಿದವಕ್ಕಿಂತ ಭಿನ್ನವಾಗಿದೆ, ವಿಶೇಷವಾಗಿದೆ ಎನಿಸುತ್ತದೆ. ಆ ವಿಶೇಷತೆಯು ಬಾಹ್ಯ ಇಂದ್ರಿಯಗಳಿಗೆ ಮೊದಲು ಮೆಚ್ಚುಗೆಯಾಗುತ್ತದೆ. ಒಳಹಾದು ಮನಸ್ಸಿಗೆ ಮುಟ್ಟುವುದು ಅದರ ಆಳ, ತೀವ್ರತೆಯನ್ನವಲಂಬಿಸಿರುತ್ತದೆ. ಕೆಲವು ನಮ್ಮ ಮನಃಪಟಲದಲ್ಲಿ ಕೆಲಕಾಲ ಮಾತ್ರ ನಿಂತರೆ; ಮತ್ತೆ ಕೆಲವು ದೀರ್ಘಕಾಲ ಅಚ್ಚಳಿಯದೇ ಉಳಿಯುತ್ತವೆ. ಹಿಡಿದಿಟ್ಟುಕೊಳ್ಳುವ ಗುಣ ಯಾವುದರಲ್ಲಿದೆಯದೆಯೋ, ಯಾವುದರಿಂದ ನಮ್ಮನ್ನು ನಾವು ಮರೆಯುತ್ತೇವೋ, ಎಲ್ಲಿ ಕಲಾವಿದ, ಸಹೃದಯ ಒಂದೇ ಆಗಿರುತ್ತಾರೋ, ಅಂತಹ ಸೃಷ್ಟಿಯು ಉನ್ನತ ಮಟ್ಟದ ಕಲೆಯೆನಿಸಿಕೊಳ್ಳುತ್ತದೆ.

ಪ್ರಸ್ತುತ ಪ್ರಶ್ನೆಯ ವಿಷಯವಾಗಿರುವ ಇಂದ್ರಜಾಲದ ಹಿನ್ನೆಲೆಯನ್ನೊಮ್ಮೆ ಪರೀಕ್ಷಿಸಿ ಮುಂದುವರೆಯೋಣ. ನಮ್ಮ ಸಂಸ್ಕೃತಿಯಲ್ಲಿ ಮಾಯೆ, ಮಾಟ-ಮಂತ್ರ, ಮೋಡಿ, ವಶೀಕರಣ ಇತ್ಯಾದಿಗಳು ಹೊಸದೇನಲ್ಲ. ರಾಮಾಯಣ-ಮಹಾಭಾರತಗಳಲ್ಲಿ, ಪುರಾಣಗಳಲ್ಲಿ, ನೀತಿಕಥೆಗಳಲ್ಲಿ ಇದರ ಉಲ್ಲೇಖ ಹೇರಳವಾಗಿ ಕಾಣಬಹುದು. ದೇವತೆಗಳ ಮುಖಂಡನಾದ ಇಂದ್ರನು ತನ್ನ ಮಾಯಾಶಕ್ತಿಗೆ ಖ್ಯಾತಿ ಪಡೆದವನು. ಆ ಶಕ್ತಿಯ ಪ್ರಯೋಗದಿಂದ ಜಾಲ ಅಥವಾ ಬಲೆ ಬೀಸಿ ಹಿಡಿಯುವುದು ಎಂಬರ್ಥದಲ್ಲಿ ಇಂದ್ರಜಾಲವೆಂಬ ಹೆಸರು ಪ್ರತೀತಿಗೆ ಬಂದಿದೆ. ಉಪದೇವತೆಗಳಾದ ಯಕ್ಷರೂ ಇದನ್ನು ಬಳಸುತ್ತಿದ್ದರಿಂದ ಯಕ್ಷಿಣಿವಿದ್ಯೆ ಎಂದೂ ಕರೆಯುವುದುಂಟು. ಸೋಮೇಶ್ವರನ ಮಾನಸೋಲ್ಲಾಸ, ವಾತ್ಸ್ಯಾಯನನ ಕಾಮಸೂತ್ರದಂಥ ಕೆಲವು ಗ್ರಂಥಗಳಲ್ಲಿ ಈ ವಿದ್ಯೆಯ ಬಗ್ಗೆ ವಿವರಣೆಯಿದೆ. ಅಲ್ಲಿಂದ ಪ್ರದರ್ಶನ ಮಟ್ಟಕ್ಕೆ ಆಗುವಾಗಿನ ಬೆಳವಣಿಗೆಗೆ ಸಿಗುವ ಆಧಾರಗಳು ಪ್ರವಾಸಿಗಳು ತಮ್ಮ ಪ್ರವಾಸಕಥನಗಳಲ್ಲಿ ಪ್ರಸ್ತಾಪಿಸಿರುವ, ರಾಜರ ಆಸ್ಥಾನಗಳಲ್ಲಿ ಕಂಡ ಪ್ರದರ್ಶನಗಳ ವಿವರ. ಇಷ್ಟನ್ನು ಹೊರತುಪಡಿಸಿದರೆ, ಬೇರೆ ಪುರಾವೆ ಸಿಗದಿರುವುದಕ್ಕೆ ಕಾರಣ ದಾಖಲೀಕರಣವಾಗದಿರುವುದು. ಆದರೆ ಇಂದು ನಾವು ರಂಗಮಂದಿರಗಳಲ್ಲಿ ಕಾಣುವ ಇಂದ್ರಜಾಲದ ಚಟುವಟಿಕೆಗಳು, ಹಿಂದೆ ಬೀದಿಗಳಲ್ಲಿ ಪ್ರದರ್ಶಿತವಾಗುತ್ತಿದ್ದುದರ ಪರಿಷ್ಕೃತ ರೂಪವೆಂಬುದಂತೂ ನಿಜ. ಗೋಗಿಯ ಪಾಷ, ಪಿ.ಸಿ.ಸರ್ಕಾರ್, ಕೆ.ಲಾಲ್ ಮುಂತಾದವರು ಇದರ ಜನಪ್ರಿಯತೆಗೆ ಕಾರಣರಾದವರು ಎಂಬುದು ತಿಳಿದುಬರುವ ವಿಷಯ.

ಇನ್ನು, ಇಂದಿನ ಇಂದ್ರಜಾಲ ಪ್ರದರ್ಶನದಲ್ಲಿ ಏನಾಗುತ್ತದೆ ನೋಡೋಣ. ಇದರಲ್ಲಿ ಪ್ರೇಕ್ಷಕನು ಆಶ್ಚರ್ಯಚಕಿತನಾಗುತ್ತಾನೆ, ನಿಬ್ಬೆರಗಾಗುತ್ತಾನೆ, ಮೂಕವಿಸ್ಮಿತನಾಗುತ್ತಾನೆ, ಹಲವೊಮ್ಮೆ ಭಯಭೀತನಾಗುವುದೂ ಉಂಟು, ಕಡೆಯಲ್ಲಿ ಉಲ್ಲಸಿತನಾಗುವುದೂ ನಿಜ. ಹೊಸತೇನನ್ನೋ ಕಾಣುವ ನಿರೀಕ್ಷೆ, ಕುತೂಹಲ ಅವನಲ್ಲಿ ಇದ್ದೇ ಇರುತ್ತದೆ. ಇವಿಷ್ಟು ಪ್ರೇಕ್ಷಕನ ಪ್ರತಿಕ್ರಿಯೆಯಾದರೆ, ಕ್ರಿಯಾಶೀಲನಾದ ಯಕ್ಷಿಣಿಗಾರನೂ ಏನನ್ನಾದರೂ ಅನುಭವಿಸುತ್ತಿರಬೇಕಲ್ಲವೇ? ಇತರ ಮಾಧ್ಯಮಗಳಂತೆ ಇವನೂ ಸತತ ಅಭ್ಯಾಸ ಮಾಡುತ್ತಿರಬೇಕಲ್ಲವೇ? ಒಂದಷ್ಟು ಪ್ರತಿಭೆಯೂ ಇರಬೇಕಲ್ಲವೇ? ಹೊಸತೇನಾದರೂ ಸೃಷ್ಟಿಸುವ ಪ್ರಯತ್ನ ನಡೆದೇ ಇರುತ್ತದಲ್ಲವೇ? ಉತ್ತರಕ್ಕಾಗಿ ತೇಜಸ್ವಿ ಅವರನ್ನೇ ಕೇಳಿದರೆ- ನಾಲ್ಕು ವರ್ಷದವರಿದ್ದಾಗಲೇ ವಿಶ್ವದ ಅತಿ ಕಿರಿಯ ಮೆಜಿಷಿಯನ್ ಎಂಬ ಪ್ರಶಸ್ತಿಗೆ ಭಾಜನರಾಗಿದ್ದ, ಗಿನ್ನೆಸ್ ದಾಖಲೆಗೂ ನೇಮಕಗೊಂಡ, ನಮ್ಮ ದೇಶವಲ್ಲದೆ ಹೊರದೇಶಗಳಲ್ಲೂ ಹೆಸರು ಮಾಡಿರುವ ಇವರ ಸಾಧನೆ, ಪರಿಶ್ರಮ, ಅನುಭವ ಅಪಾರ. ಪತ್ರಮುಖೇನ ಕಳಿಸಿದ ಪ್ರಶ್ನಾವಳಿಗೆ ಪ್ರಾಮಾಣಿಕವಾಗಿ ಉತ್ತರಗಳನ್ನು ನೀಡುವ ಮೂಲಕ ರಹಸ್ಯಮಯ ಪ್ರಪಂಚದ ಬಾಗಿಲನ್ನೇ ತೆರೆದಿಟ್ಟಿದ್ದಾರೆ.

ಇಂದ್ರಜಾಲದ ಪ್ರತಿಯೊಂದು ಕ್ರಿಯೆಯೂ ವೈಜ್ಞಾನಿಕ ಸಂಶೋಧನೆಯ ಫಲವೇ ಹೊರತು ಮತ್ತೇನಲ್ಲ. ಯಕ್ಷಿಣಿಗಾರನು ಜನರನ್ನು ಮೋಡಿ ಮಾಡಲು ಕಲೆಯ ಸಹಾಯ ಪಡೆಯುತ್ತಾನಷ್ಟೆ. ಸಂಗೀತ, ಭಾವಾಭಿನಯ, ಮೋಡಿಗೊಳಿಸುವ ಮಾತು, ನೃತ್ಯ ಸಂಯೋಜನೆ ಇತ್ಯಾದಿಗಳು ಅವನ ಕ್ರಿಯೆಗೆ ನೆರವಾಗುತ್ತವೆ. ಹಾಗಾಗಿ, ಇಂದ್ರಜಾಲವು ವಿಜ್ಞಾನದ ಕಲಾತ್ಮಕ ಅಭಿವ್ಯಕ್ತಿ ಎಂಬುದು ಸ್ಪಷ್ಟ. ಹಾಗಲ್ಲದೆ, ಸಂಶೋಧನೆಯನ್ನು ಯಥಾವತ್ತಾಗಿ ಪ್ರದರ್ಶಿಸಿದರೆ ರಂಜನೆಯಾಗುವುದೇ? ಇನ್ನುಳಿದಂತೆ, ಯಕ್ಷಿಣಿಗಾರನೂ ಸಹ ಒಳ್ಳೆಯ ಪ್ರದರ್ಶಕನಾಗಿರುವುದು ಅತಿ ಮುಖ್ಯ. ಒಂದು ಸಣ್ಣ ಚೇಷ್ಟೆಯನ್ನೂ ಪರಿಣಾಮಕಾರಿಯಾಗಿ ಸಾದರಪಡಿಸುವ ಕುಶಲತೆ ಹೊಂದಿರಬೇಕು. ಇತರ ಕಲೆಗಳ ಜ್ಞಾನದ ಜೊತೆಗೆ ಅವನು ರಸಾಯನ ಶಾಸ್ತ್ರ, ಯಂತ್ರಶಾಸ್ತ್ರಗಳಂಥ ವಿದ್ಯೆಗಳ ಅಂಶಗಳನ್ನೂ ತಿಳಿದಿದ್ದರೆ ಉತ್ತಮ.

ಇನ್ನು ರಸದ ವಿಷಯಕ್ಕೆ ಬಂದಾಗ, ಇಂದ್ರಜಾಲವು ಅದ್ಭುತ ಮತ್ತು ಹಾಸ್ಯ ರಸಗಳ ಅನುಭವ ನೀಡುತ್ತದೆ. ಯಕ್ಷಿಣಿಗಾರನ ಉದ್ದೇಶವೂ ಸಹ ಹಾಗೆ ರಂಜಿಸುವುದೇ ಆಗಿರುತ್ತದೆ. ಆದರೆ, ಕೆಲವು ಕ್ರಿಯೆಗಳಿಂದ ಭಯಾನಕವೂ, ದೇಹ ತುಂಡರಿಸುವಂಥ ಪ್ರದರ್ಶನದಿಂದ ಭೀಭತ್ಸದಂಥ ರಸಗಳೂ ಉದ್ಭವಿಸುವಂತೆ ಮಾಡಲಾಗುತ್ತದೆ. ಅಲ್ಲದೆ, ವಿಷಯಾಧಾರಿತ ರಂಗಪ್ರಸ್ತುತಿಗಳಲ್ಲಿ ವೀರ, ಕರುಣ, ಶಾಂತದಂಥ ರಸಗಳನ್ನೂ ಕಾಣಬಹುದು. ಆದರೆ ಇದಕ್ಕೆ ಪ್ರೇಕ್ಷಕನು ತನ್ನಅಹಂ ಅನ್ನು ಸಮರ್ಪಿಸಲೇ ಬೇಕು. ಹಲವರಿಗೆ ತಾವು ಇಂದ್ರಜಾಲದ ಕ್ರಿಯೆಯಿಂದ ಮೂರ್ಖರಾದೆವೆಂದು ಹೇಳಿಕೊಳ್ಳಲು ನಾಚಿಕೆ. ಆದರೆ ನಿಜಾರ್ಥದಲ್ಲಿ ಆ ಅನುಭವ ಪಡೆದವನ ಬುದ್ಧಿಯೇ ಆರೋಗ್ಯದಿಂದಿರುವುದು! ಅಲ್ಲದೆ, ಯಕ್ಷಿಣಿಗಾರನೂ ತಾನೂ ಆಸ್ವಾದಿಸುತ್ತಾ ತನ್ಮಯತೆಯಿಂದ ಕಾರ್ಯದಲ್ಲಿ ತೊಡಗಿದ್ದಾಗ ಮಾತ್ರ, ಪ್ರೇಕ್ಷಕನೂ ಅದರಲ್ಲಿ ಮುಳುಗಲು ಸಾಧ್ಯ. ಇಲ್ಲದಿದ್ದರೆ ಅದು ಕೇವಲ ಒಂದು ಯಾಂತ್ರಿಕ ಕ್ರಿಯೆಯಾಗುತ್ತದೆ.

ಪ್ರೇಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವಂತೆ ಕೇಳಿದಾಗ ಹೊರಬಂದ ಉದ್ಗಾರಗಳು ಇವು. ಯಾವುದೋ ಲೋಕಕ್ಕೆ ಹೋದಂತಾಯಿತು!ಆತ ಮಾಡಿದ್ದೆಲ್ಲಾ ಭ್ರಮೆ, ಸತ್ಯವಲ್ಲ ಎಂದು ಗೊತ್ತಿದ್ದರೂ ಏನೋ ಪುಳಕ ಉಂಟಾಗುತ್ತಿತ್ತು!ಅವರ ತಮಾಷೆಯ ನಡೆ-ನುಡಿಗೆ ನಕ್ಕೂ ನಕ್ಕೂ ಸಾಕಾಯಿತುಅರೆ! ಹೇಗೆ ಮಾಡಿದರಪ್ಪಾ ಎಂದು ಪ್ರತಿ ಸಲ ಆಶ್ಚರ್ಯವಾಗುತ್ತಿತ್ತು ಆತನನ್ನು ನೋಡುವುದೇ ಆನಂದ. ಎಂಥ ಆಕರ್ಷಕ ವ್ಯಕ್ತಿತ್ವ ಅವನದ್ದು!. ಈ ಪ್ರತಿಕ್ರಿಯೆಗಳ ಜೊತೆಗೆ ತೇಜಸ್ವಿಯವರ ನಿರೂಪಣೆ ಮತ್ತು ಅದರ ಮುಂಚಿನ ಸಾಲುಗಳಲ್ಲಿ ಮಾಡಿರುವ ಕಲೆಯ ಅವಲೋಕನ, ಇವೆರಡರಲ್ಲೂ ಹೊಂದಾಣಿಕೆ ಕಾಣುತ್ತಿದ್ದರೂ, ಇನ್ನಷ್ಟು ಪೂರಕ ಅಂಶಗಳನ್ನು ಒದಗಿಸುವ ಪ್ರಯತ್ನ ಮುಂದೆ ಮಾಡಲಾಗಿದೆ.

ಸಂಗೀತ, ಕಾವ್ಯಾದಿಗಳಲ್ಲಿ ಕಾಣುವ ಆದಿ-ಬೆಳವಣಿಗೆ-ಉತ್ತುಂಗ-ಅಂತ್ಯ ಈ ಅಂಶಗಳನ್ನು ಇಂದ್ರಜಾಲದಲ್ಲಿಯೂ ಕಾಣಬಹುದು. ಇವು ಯಕ್ಷಿಣಿಗಾರನ ಒಂದೊಂದು ಸಣ್ಣ ಕ್ರಿಯೆಯಲ್ಲೂ ಇರುತ್ತವೆ. ಆದ್ದರಿಂದಲೇ ಪ್ರೇಕ್ಷಕನಿಗಾಗುವ ಅನುಭವವೂ ಸಹ ಕ್ಷಣಿಕವಾದದ್ದು, ತಾತ್ಕಾಲಿಕ ಆನಂದ ಕೊಡುವಂಥದ್ದು. ಅಂದರೆ ಪೋಷಣಶಕ್ತಿ ಕಡಿಮೆಯುಳ್ಳದ್ದು. ಆದಾಗ್ಯೂ ರಸದ ಕ್ಷಣಗಳನ್ನಂತೂ ಒದಗಿಸುತ್ತದಲ್ಲ. ಇನ್ನು ಪ್ರೇಕ್ಷಕನು ಸಹೃದಯನಾಗಿರಬೇಕೇ ಎಂದು ಪ್ರಶ್ನಿಸಿದರೆ, ಯಾವುದನ್ನೇ ಆಗಲಿ, ಅನುಭವಿಸಿ ಆನಂದಿಸಲು ಅದಕ್ಕೆ ಬೇಕಾದ ಕಣ್ಣು, ಕಿವಿ ಮತ್ತು ಮನಸ್ಸು ಇರಲೇಬೇಕಲ್ಲವೆ?

ಇಷ್ಟಲ್ಲದೆ, ಪ್ರೊ. ಶಂಕರ್ ಅವರು ಈ ಮಾಧ್ಯಮದ ಮೂಲಕವೇ ಮಕ್ಕಳಿಗೆ ನೀತಿತತ್ವಗಳ ಬೋಧನೆ, ಗ್ರಾಮವಾಸಿಗಳಿಗೆ ಬ್ಯಾಂಕಿನ ಯೋಜನೆಗಳ ಅರಿವು, ದುಶ್ಚಟ ನಿವಾರಣೆಗಳಂಥ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇದರಿಂದ ಈ ವಿದ್ಯೆಯ ವ್ಯಾಪ್ತಿಯನ್ನರಿಯಬಹುದು. ನಾಟ್ಯವೇದದ ಸೃಷ್ಟಿಯ ಸಮಯದಲ್ಲಿ ಬ್ರಹ್ಮನು ಅದರ ಗುರಿಯ ಕುರಿತು ಹೇಳಿದ ಲೋಕೋಪದೇಶದ ಮಾತನ್ನು ಇಲ್ಲಿ ಸ್ಮರಿಸಬಹುದು. ಇವಿಷ್ಟೂ ವಿಶ್ಲೇಷಣೆಯ ನಂತರ, ಇನ್ನಾದರೂ ಇಂದ್ರಜಾಲವೂ ಒಂದು ಕಲಾಪ್ರಕಾರ ಎಂದು ಒಪ್ಪಬಹುದಲ್ಲವೇ?

ಅಂತ್ಯವಾಕ್ಯ: ಪ್ರೊ.ಸಾ.ಕೃ.ರಾಮಚಂದ್ರರಾವ್ ಅವರ ಭರತಮುನಿಯ ನಾಟ್ಯಶಾಸ್ತ್ರ ಕೃತಿಯಲ್ಲಿ ಕಾವ್ಯ, ನಾಟಕಗಳ ಸಾಮರ್ಥ್ಯವನ್ನು ವಿಶ್ಲೇಷಿಸುತ್ತಾ ಹೀಗೆನ್ನುತ್ತಾರೆ. ಅನುಭವಕ್ಕೆ ಬರದೆ ರಸವೇ ಅಲ್ಲ. ರಸ ಇರುವುದು ಅನುಭವದಲ್ಲೇ . ಅಂದ ಮೇಲೆ ರಸದ ಅನುಭವ ಕೊಡುವಂಥದ್ದು ಕಲೆಯೆನಿಸಿಕೊಳ್ಳದೇ?

Leave a Reply

*

code