ಅಂಕಣಗಳು

Subscribe


 

ಮಹಾಭಾರತದಲ್ಲಿ ಪಿತಾಪುತ್ರ ಸಂಬಂಧ-ಭಾಗ 5

Posted On: Friday, December 26th, 2014
1 Star2 Stars3 Stars4 Stars5 Stars (No Ratings Yet)
Loading...

Author: Vidwan Korgi Venkateshwara Upadhyaya, Kateel

ಜರತ್ಕಾರುವೆಂಬ ಸಾಯಾಗೃಹಮುನಿ (ಎಲ್ಲಿ ಕತ್ತಲಾಗುತ್ತದೋ ಅಲ್ಲಿ ಉಳಿದುಕೊಳ್ಳುವವ) ಮಹಾತಪಸ್ವಿಯು ತನ್ನ ಪಿತೃಗಳ ಆಶಯಕ್ಕೆ ಮಣಿದು ತನ್ನದೇ ಹೆಸರನ್ನುಳ್ಳ ಜರತ್ಕಾರು ಎಂಬ ವಾಸುಕಿ ಎಂಬ ನಾಗಮುಖ್ಯನ ತಂಗಿಯನ್ನು ಕೆಲವು ನಿಬಂಧನೆಗೊಳಪಟ್ಟು ಮದುವೆಯಾಗುತ್ತಾನೆ. ಪತ್ನಿಯನ್ನು ತ್ಯಜಿಸಿ ತೆರಳುವ ವೇಳೆ ಆಕೆಗೆ ಪುತ್ರಪ್ರಾಪ್ತಿಯ ವರವನ್ನು ಅನುಗ್ರಹಿಸುತ್ತಾನೆ. ಈತ ಪುತ್ರನನ್ನು ಪಡೆದದ್ದು ಪಿತೃಗಳಿಗಾಗಿಯೇ ಹೊರತು ತನ್ನ ಸಂತಾನದ ಬಗೆಗೆ ಯಾವುದೇ ವಾತ್ಸಲ್ಯವಿರುವುದಿಲ್ಲ ಎಂದು ಮಹಾಭಾರತದ ಆದಿಪರ್ವ ತಿಳಿಸುತ್ತದೆ.

ರಾಜಾಪರೀಕ್ಷಿತನು ಧ್ಯಾನಮಗ್ನನಾಗಿದ್ದ ಶಮೀಕಮಹರ್ಷಿಯ ಕೊರಳಿಗೆ ಸತ್ತುಬಿದ್ದ ಹಾವನ್ನು ಹಾಕಿದ್ದರ ಸಮಾಚಾರ ತಿಳಿದ ತಕ್ಷಣವೇ ಮಹರ್ಷಿಯ ಮಗ ಶೃಂಗಿಯು ತಂದೆಯ ಮೇಲಿನ ಅತಿಶಯವಾದ ಪ್ರೀತ್ಯಾದರಾಭಿಮಾನಗಳಿಂದ ಸಿಟ್ಟಿಗೆದ್ದು ಪರೀಕ್ಷಿತ ರಾಜನ ಸಾವನ್ನು ಹೇಳುವ ಶಾಪ ಕೊಡುತ್ತಾನೆ. ಆಗ ಧರ್ಮೈಕದೃಷ್ಟಿಯುಳ್ಳ ಜ್ಞಾನಿಯಾದ ಶಮೀಕನು ಇದನ್ನು ಮೆಚ್ಚಿಕೊಳ್ಳದೆ ಹೀಗೆ ಹೇಳುತ್ತಾನೆ-

ಪಿತಾಪುತ್ರೋವಯಸ್ಥೋಪಿ ಸತತಂವಾಚ್ಯ ಏವತು
ಯಥಾಸ್ಯಾದ್ಗುಣಸಂಯುಕ್ತಃ ಪ್ರಾಪ್ನುಯಾಚ್ಚಮಹದ್ಯಶಃ ||
ಮಗನು ವಯಸ್ಕನಾಗಿದ್ದರೂ, ಪ್ರಬುದ್ಧನೂ, ವಿದ್ವಾಂಸನೂ ಆಗಿದ್ದರೂ ಆತನು ಗುಣವಂತನೂ, ಯಶೋವಂತನೂ ಆಗುವಂತೆ ಮಗನಿಗೆ ಬುದ್ಧಿ ಹೇಳಬೇಕು. ಮಗನು ಸರ್ವಜ್ಞನೇ ಆಗಿದ್ದರೂ ತಂದೆಯ ಮಾತನ್ನು ವಿನಯದಿಂದ ಕೇಳಬೇಕೆಂದು ಬುದ್ಧಿಹೇಳಿ ನೀನು ಧರ್ಮಾತ್ಮನಾದ ರಾಜನನ್ನು ಶಪಿಸಿದ್ದು ಸರಿಯಲ್ಲವೆಂದು ತಿಳುಹಿ ಶಿಷ್ಯರ ಮೂಲಕ ಶೃಂಗಿಯ ಶಾಪವನ್ನು ಅರಸನಿಗೆ ಹೇಳಿಕಳುಹಿಸುತ್ತಾನೆ.

ಯಯಾತಿ ಶುಕ್ರರಿಂದ ಶಪಿತನಾಗಿ ಅವರ ಕಾಲಿಗೆ ಬಿದ್ದು ಕಣ್ಣೀರಿಟ್ಟ. ವಾರ್ಧಕ್ಯ ಯೌವನಗಳನ್ನು ಮಕ್ಕಳಿಂದ ವಿನಿಮಯ ಮಾಡಿಕೊಳ್ಳುವ ಆನುಕೂಲ್ಯ ಪಡೆದ. ಆದರೆ ಪುರುವನ್ನು ಬಿಟ್ಟು ಬೇರಾರೂ ತಾರುಣ್ಯವನ್ನಿತ್ತು ಮುಪ್ಪನ್ನು ಪರಿಗ್ರಹಿಸುವುದಕ್ಕೆ ಮುಂದಾಗಲಿಲ್ಲ. ಇದರಿಂದ ಕ್ರುದ್ಧನಾಗಿ ಯದು-ತುರ್ವಸು-ಅನು-ದ್ರುಹ್ಯುಗಳಿಗೆ ಶಾಪವಿತ್ತ. ಪುರುವಿನಿಂದ ತಾರುಣ್ಯ ಪಡೆದು ಮುಪ್ಪನ್ನಿತ್ತ. ಆತನ ಮೇಲೆ ಪ್ರಸನ್ನನಾಗಿ ವರಗಳನ್ನಿತ್ತ. ಪುರು ಒಬ್ಬನೇ ಸಾಮಾಜ್ಯಾಧಿಕಾರಿಯಾದರೆ, ಉಳಿದ ಸೋದರರು ಅಲೆಮಾರಿಗಳಾಗಿ ರಾಜ್ಯಭ್ರಷ್ಟರಾಗಿಹೋದರು.

ವಸ್ತುತಃ ಯಯಾತಿಯು ತನ್ನ ಮಗನ ತಾರುಣ್ಯದಿಂದ ಶರ್ಮಿಷ್ಠೆಯನ್ನೂ, ದೇವಯಾನಿಯನ್ನೂ ಉಪಭೋಗಿಸುತ್ತಾನೆ. ಅರ್ಥಾತ್ ಶರ್ಮಿಷ್ಠೆ ತನ್ನ ಮಗನ ತಾರುಣ್ಯವನ್ನು ಅನುಭವಿಸುತ್ತಾಳೆ. ದೇವಯಾನಿಯೂ ಹಾಗೆಯೇ. ಒಟ್ಟಿನಲ್ಲಿ ಇದೊಂದು ಬಗೆಯ ವಿಚಿತ್ರಸಂಬಂಧವಾಗಿ ಏರ್ಪಡುತ್ತದೆ.

ವಿಶ್ವಾಮಿತ್ರ ಶಕುಂತಲೆಯರು ಶಿಶು ಶಕುಂತಲೆಯನ್ನು ಮೈಯ ಬಟ್ಟೆ ಕಳಚಿಕೊಳ್ಳುವಷ್ಟು ಹಗುರಾಗಿ ಕಾಡನಲ್ಲಿ ಬಿಟ್ಟುಹೋಗುತ್ತಾರೆ. ಕಣ್ವರು ವಾತ್ಸಲ್ಯದಿಂದ ಸಾಕುತ್ತಾರೆ. ಬೇಟೆಗೆ ಬಂದ ದುಷ್ಯಂತನೊಂದಿಗೆ ಕಣ್ವರ ಅನುಪಸ್ಥಿತಿಯಲ್ಲಿ ಗಾಂಧರ್ವವಿವಾಹವಾಗುತ್ತದೆ. ಪಟ್ಟಣಕ್ಕೆ ಶೀಘ್ರದಲ್ಲೇ ಕರೆಸಿಕೊಳ್ಳುವುದಾಗಿ ಹೇಳಿಹೋದ ದೊರೆ ಮತ್ತೆ ಬರುವುದೇ ಇಲ್ಲ. ದುಷ್ಯನ್ತ ಶಕುಂತಲೆಯರ ವಿವಾಹವನ್ನು ಕಣ್ವರು ಆಕ್ಷೇಪಿಸುವುದಿಲ್ಲ. ಶಕುಂತಲೆ ಗರ್ಭವತಿಯಾಗಿ ಸರ್ವದಮನನನ್ನು ಹೆರುತ್ತಾಳೆ.

ವೀರ ಪರಾಕ್ರಮಶಾಲಿಯಾದ ಆತನಿಗೆ ಜಾತಕರ್ಮಾದಿ ಸಂಸ್ಕಾರಗಳನ್ನು ಕಣ್ವರೇ ಮಾಡಿಸುತ್ತಾರೆ. ಬಹುಕಾಲ ತಂದೆಯ ಮನೆಯಲ್ಲಿ ಮದುವೆಯಾದ ಮಗಳು ಇರಬಾರದೆಂದು ಮಗನೊಂದಿಗೆ ದುಷ್ಯನ್ತನೆಡೆಗೆ ಕರೆದೊಯ್ದು ಬಿಟ್ಟುಬರಲು ಮುನಿಕುಮಾರರಿಗೆ ಹೇಳುತ್ತಾರೆ. ಇತ್ತ ಅಪ್ಪನಿಂದ ಬೀಳ್ಕೊಂಡು ಬಂದ ಶಕುಂತಲೆಗೆ ದುಷ್ಯನ್ತನಿಗೆ ಸರ್ವದಮನನನ್ನು ತೋರಿಸಿ ‘ಇವನು ನಿನ್ನ ಮಗ. ಯುವರಾಜನಾಗಿ ಪರಿಗ್ರಹಿಸು’ ಎಂದು ಹೇಳಿದರೂ ತಿರಸ್ಕಾರದ ನುಡಿಗಳನ್ನು ಕೇಳಬೇಕಾಗುತ್ತದೆ. ಶಕುಂತಲೆ ಎಷ್ಟೇ ವಾದಿಸಿ, ನೆನಪಿಸಿ, ಗುರುತು ಹೇಳಿದರೂ  ದುಷ್ಯನ್ತ ‘ನಪುತ್ರಮಭಿಜಾನಾಮಿತ್ವಯಿಜಾತಂಶಕುಂತಲೇ’ ಎಂದು ಹೇಳಿ ಸರ್ವದಮನ ತನ್ನ ಮಗನಲ್ಲವೆಂದು ಮುಖ ತಿರುಗಿಸುತ್ತಾನೆ. ಆದರೆ ಅಶರೀರವಾಣಿಯೊಂದು ಭರ್ತವ್ಯೋಯಂ ತ್ವಯಾಯಸ್ಮಾದಸ್ಮೇಕಂ ವಚನಾದಪಿ
ತಸ್ಮಾದ್ಭವತ್ವಯಾಂ ನಾಮ್ನಾ ಭರತೋನಾಮತೇನುತಃ (ಆದಿಪರ್ವ, ಅಧ್ಯಾಯ 74) – ಈತ ನಿನ್ನ ಮಗ. ಈತನನ್ನು ಭರಿಸು ಎಂದ ಬಳಿಕವಷ್ಟೇ ಮಗನನ್ನೂ ಮಡದಿಯನ್ನು ಪರಿಗ್ರಹಿಸಿದ. ಅಂತಃಪುರದ ಒಳಗೆ ಬಂದ ಶಕುಂತಲೆಯಲ್ಲಿ ದುಷ್ಯಂತ ಹೀಗೆ ಹೇಳುತ್ತಾನೆ.

ಕೃತೋಲೋಕ ಪರೋಕ್ಷೋಯಂ ಸಂಬಂಧೋವೈತ್ವಯಾನಹ
ತಸ್ಮಾದೇತನ್ಮಯಾ ದೇವಿ ತ್ವಚ್ಛುಧ್ಯರ್ಥಂ ವಿಚಾರಿತಂ – ನನ್ನ ನಿನ್ನ ಸಂಬಂಧ ಪ್ರಜೆಗಳ ಎದುರಿಗೆ ನಡೆಯದಿದ್ದುದರಿಂದ ನಾನು ಒಪ್ಪಿದರೂ ಪ್ರಜೆಗಳು ನಿನ್ನ ಮಗನನ್ನು ಯುವರಾಜನೆಂದು ಒಪ್ಪಬೇಡವೇ? ಯಾವಳೋ ಪುತ್ರವತಿಯಾದ ಹೆಣ್ಣನ್ನು ದೊರೆ ಸ್ವೀಕರಿಸಿದನೆಂಬ ಅಪವಾದ ಬರಕೂಡದು. ನಿನ್ನ ಚಾರಿತ್ರ್ಯಶುದ್ಧಿಯ ಸಂಸ್ಥಾಪನೆಗಾಗಿಯೇ ನಾನು ಮರೆವಿನ ನಾಟಕ ಮಾಡಿದೆ ಎನ್ನುತ್ತಾನೆ. ವಸ್ತುತಃ ಈ ಪ್ರಕರಣವನ್ನು ದುಷ್ಯಂತನ ಪರವಾಗಿ ಸಮರ್ಥಿಸುವುದಕ್ಕಾಗದು.

ಅದಕ್ಕಾಗಿಯೇ ಕಾಲಿದಾಸ ಉಂಗುರ ಕಳೆದುಹೋಗುವುದು ಮತ್ತು ದೂರ್ವಾಸರ ಶಾಪ ಮುಂತಾದ್ದನ್ನು ಆರೋಪಿಸಿ ಕಥನವನ್ನು ರಸಮಯವಾಗಿ ಮಾಡುವುದರೊಂದಿಗೆ ಲೋಪ ಸರಿ ಮಾಡುವ ಪ್ರಯತ್ನವನ್ನು ಸ್ತುತ್ಯರ್ಹವಾಗಿಯೇ ಮಾಡಿದ್ದಾನೆ. ಒಟ್ಟಿನಲ್ಲಿ ಈ ಪ್ರಕರಣದಲ್ಲಿ ಪಿತಾಪುತ್ರ ಸಂಬಂಧಕ್ಕೆ ಸಾಮಾಜಿಕರ ಅಧಿಕೃತ ಮುದ್ರೆ ಬೀಳಬೇಕಾದದು ಅತ್ಯವಶ್ಯವೆಂಬುದನ್ನು ಗಮನಿಸಬಹುದು.

ತನ್ನ ಕಾರ್ಯವನ್ನು ಪ್ರಶ್ನಿಸಿದಂದು; ತನ್ನ ಇಷ್ಟಕ್ಕೆ ವಿರೋಧವಾಗಿ ವರ್ತಿಸಿದಂದು ನಾನು ನಿನ್ನನ್ನು ಬಿಟ್ಟುಹೋಗುತ್ತೇನೆಂಬ ನಿಬಂಧನೆಯೊಂದಿಗೆ ಶಾಂತನುಚಕ್ರವರ್ತಿಯ ಮಡದಿಯಾಗಿ ಬಂದ ಗಂಗಾದೇವಿ ತಾನು ಹೆತ್ತ ಏಳೂ ಮಕ್ಕಳ ಕತ್ತು ಹಿಸುಕಿ ಗಂಗಾನದಿಗೆ ಎಸೆದಾವಾಗಲೂ ಎಲ್ಲಿ ತಾನು ಪ್ರತಿಭಟಿಸಿದರೆ ಗಂಗೆ ತನ್ನನ್ನು ಬಿಟ್ಟುಹೊರಟಾಳು ಎಂಬ ಭಯದಿಂದ ಪ್ರತೀಬಾರಿ ಸಂತಾನಲತೆಯ ಕುಡಿ ಚಿವುಟುತ್ತಿದ್ದಾಗಲೂ ನಾಲಗೆ ಬಿದ್ದವರಂತೆ ನೀರವವಾಗಿ ನಿಲ್ಲುತ್ತಾನೆ ಶಾಂತನು. ಎಂಟನೇ ಬಾರಿಗೂ ಪುರನಾರವರ್ತನೆಯಾದಾಗ ತಾಳ್ಮೆಗೆಟ್ಟು ಕಟುವಾಗಿ ಏಕೆ ಹೀಗೆ ಶಿಶುಹತ್ಯೆ ಮಾಡುತ್ತಿದ್ದೀ? ನಿನಗೆ ಪುತ್ರಹತ್ಯಾ ಪಾತಕವು ಬಂತು. ಈ ಬಾರಿ ಖಂಡಿತಾ ಮಗುವನ್ನು ಕೊಲ್ಲಲು ಬಿಡಲಾರೆ. ಈ ಮಗುವನ್ನಾದರೂ ಕೊಲ್ಲದೇ ಉಳಿಸು ಎಂದು ಗೋಗರೆಯುತ್ತಾನೆ.

ಮಾವಧೀಃ ಕಸ್ಯ ಕಾಸೀತಿ ಕಿಂಹಿನತ್ಸಿ ಸುತಾನಿತಿ
ಪುತ್ರಘ್ನೀ ಸುಮಹತ್ವಾಪಂ ಸಂಪ್ರಾಪ್ತಂ ತೇನುಗರ್ಹಿತಮ್
ಆಗ ತಾನು ಗಂಗೆಯೆಂದು; ತನಗೆ ಜನಿಸಿದ ಮಕ್ಕಳೆಲ್ಲಾ ವಸುಗಳೆಂದು; ತನ್ನ ಹಾಗು ವಸುಗಳ ಶಾಪನಿವಾರಣೆಯಾಯಿತೆಂದು; ಗಂಗಾದತ್ತನಾದ ಈ ಶಿಶುವನ್ನು ತಾನು ಕರೆದುಕೊಂಡು ತೆರಳಿ ಯೋಗ್ಯಶಿಕ್ಷಣ ಕೊಡಿಸಿ ಪ್ರಬುದ್ಧನಾದ ಬಳಿಕ ತಂದೊಪ್ಪಿಸುವೆನೆಂದು ಆಶ್ವಾಸನೆಯಿತ್ತು ಅಂತರ್ಧಾನಳಾಗುತ್ತಾಳೆ. ತಾಯ್ನತನದ ಹೊಣೆಯನ್ನು, ವಾತ್ಸಲ್ಯಸುಧೆಯನ್ನು ನೀಡುವ ಜವಾಬ್ದಾರಿಯನ್ನು ಪೂರ್ಣವಾಗಿ ನಿರ್ವಹಿಸಿದ ರೀತಿ ತಾಯಿಮಕ್ಕಳ ಸಂಬಂಧದ ಸಾಂದ್ರತೆಯನ್ನು ತಿಳುಹುತ್ತದೆ.

ಇದೇ ಮಗನಿಂದಲೇ ಶಾಂತನು ಸತ್ಯವತಿಯನ್ನು ಮೋಹಿಸಿ ವರಿಸುವ ಇಚ್ಛೆ ಪೂರ್ಣಗೊಳ್ಳುತ್ತದೆ. ದೇವವ್ರತನ ತ್ಯಾಗ ಮತ್ತು ಭೀಷಣ ಪ್ರತಿಜ್ಞೆಗೆ ತಂದೆಯಿಂದ ಇಚ್ಛಾಮರಣದ ವರವೂ ದೊರಕುತ್ತದೆ. ನಂತರದ ಮಹಾಭಾರತದ ಕಥೆಗಳಲ್ಲಿ ಪಿತನು ಪುತ್ರರಿಗೆ ತಿಳಿಹೇಳದೆ ಸರಿದಾರಿಯಲ್ಲಿ ತಿದ್ದದೆ ಪುತ್ರಪ್ರೇಮಾಂಧನಾಗಿ ಹೋದುದರ ಫಲವನ್ನು ಧೃತರಾಷ್ಟ್ರನು ಜೀವಿತದ ಕೊನೆಯವರೆಗೂ ಅನುಭವಿಸುವಂತಾಗುತ್ತದೆ.
(ಮುಗಿಯಿತು)

Leave a Reply

*

code