ಅಂಕಣಗಳು

Subscribe


 

ಮಹಾತ್ಮಾಗಾಂಧಿ ಮತ್ತು ನೃತ್ಯಕಲೆ

Posted On: Friday, December 16th, 2011
1 Star2 Stars3 Stars4 Stars5 Stars (No Ratings Yet)
Loading...

Author: ವೇಮಗಲ್ ಸೋಮಶೇಖರ್, ಬೆಂಗಳೂರು.

ಆಗಿನ್ನೂ ನೃತ್ಯವು ತನ್ನ ಕತ್ತಲೆಯ ಯುಗದಿಂದ ಬಿಡುಗಡೆ ಪಡೆದುಕೊಳ್ಳುವ ಹಾದಿಯಲ್ಲಿತ್ತು. ನೃತ್ಯಕ್ಕೆ ಮುಕ್ತಸ್ವಾತಂತ್ರ್ಯ ಒದಗುತ್ತಲಿತ್ತಷ್ಟೇ ! ಮಹಾತ್ಮಾಗಂಧೀಜಿ ೧೯೩೫ರಲ್ಲಿ ತಮ್ಮ ವಾರ್ಧಾ ಆಶ್ರಮದಲ್ಲಿದ್ದಾಗ ಒಬ್ಬ ಅಸ್ಸಾಮಿನ ನೃತ್ಯಾಚಾರ್ಯರು ಆಗಮಿಸಿ ಅಲ್ಲಿನ ವಿದ್ಯಾರ್ಥಿನಿಲಯದ ಆವರಣದಲ್ಲಿ ನೃತ್ಯವನ್ನು ಪ್ರದರ್ಶಿಸಿದರು. ಗಾಂಧಿಯೂ ಸೇರಿದಂತೆ ಆಶ್ರಮದಲ್ಲಿದ್ದವರೆಲ್ಲರೂ ಆ ನೃತ್ಯವನ್ನು ವೀಕ್ಷಿಸಿದರು. ಅಂದು ಗಾಂಧಿಯವರ ಮೌನದಿನವಾದ್ದರಿಂದ( ಸೋಮವಾರ) ನೃತ್ಯ ಕಾರ್ಯಕ್ರಮದ ತರುವಾಯ ಏನೂ ಮಾತನಾಡಲಿಲ್ಲ. ಮರುದಿನ ಒಬ್ಬ ಆಶ್ರಮವಾಸಿಯು ಸಂಜೆ ಪ್ರಾರ್ಥನೆಯಾದ ನಂತರ ಮಹಾತ್ಮರ ಬಳಿ ಹೋಗಿ ನಿನ್ನೆ ಆಶ್ರಮದಲ್ಲಿ ನೃತ್ಯ ಪ್ರದರ್ಶನ ನಡೆಯಿತಲ್ಲ, ಅದು ಸರಿಯೇ? ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ. ಮಹಾತ್ಮರು ಅದಕ್ಕೆ ಉತ್ತರವಾಗಿ ಹೀಗೆ ನುಡಿದರು.


ನಿನ್ನ ತಿಳಿವಳಿಕೆಯಲ್ಲಿ ನಿನ್ನೆ ನಡೆದ ನೃತ್ಯವು ಆಶ್ರಮಕ್ಕೆ ತಕ್ಕುದಲ್ಲ. ಇತ್ತೀಚೆಗೆ ಜನರ ಮನಸ್ಸಿನಲ್ಲಿ ನೃತ್ಯಕಲೆಯ ವಿಷಯದಲ್ಲಿ ಒಂದು ದುರ್ಭಾವನೆಯು ಉಂಟಾಗಿದೆ. ನರ್ತನ, ಗಾನ ಇವು ಕೀಳ್ತರಗತಿಯ ಜನರ ಚರ್ಯೆಯೆಂದೂ, ಸಭ್ಯರಾದವರು ಇದರಲ್ಲಿ ಭಾಗವಹಿಸುವುದು ಅಗೌರವವೆಂದೂ ತಿಳಿದಿದ್ದೇವೆ. ಇದಕ್ಕೆ ಕಾರಣವೇನೆಂದರೆ ನಮ್ಮ ದೇಶದಲ್ಲಿ ಹಲವು ವರ್ಷಗಳಿಂದ ನೃತ್ಯ, ಗಾನ, ಅಭಿನಯಗಳು ದುರಾಚಾರದ ಜೊತೆಯಲ್ಲಿ ಬೆರೆತುಹೋಗಿದೆ. ಇದರಿಂದಲೇ ಅನೇಕಜನರು ಅದರ ಮಾತೆತ್ತುತ್ತಲೇ ಗಾಬರಿಗೊಳ್ಳುತ್ತಾರೆ. ಆದರೆ ವಸ್ತುತಃ ವಿಚಾರ ಮಾಡಿದರೆ ಈ ಗಾಬರಿಗೆ ಕಾರಣವಿಲ್ಲ.

ಸಂಗೀತವು ಮಾನವ ಜೀವನದ ಸುಂದರ ಹಾಗೂ ಮಹತ್ತ್ವಪೂರ್ಣವಾದ ವಸ್ತು. ನಮ್ಮ ವಿದ್ವಾಂಸರು ಸಂಗೀತ, ಸಾಹಿತ್ಯ ಕಲಾವಿಹೀನನಾದ ಮನುಷ್ಯನು ಬಾಲವಿಲ್ಲದ ಒಂದು ಪಶು ಮಾತ್ರ ಎಂದು ಹೇಳಿದ್ದಾರೆ. ನೃತ್ಯವು ಸಂಗೀತದ ಬಹು ಮುಖ್ಯವಾದ ಅಂಗ. ನೃತ್ಯಕಲೆಯು ಒಂದು ಸ್ವರ್ಗೀಯ ಕಲೆ. ಸಂಗೀತದಲ್ಲಿ ಹೇಗೆ ಕಾಲವು ಮುಖ್ಯವೋ ಹಾಗೆಯೇ, ಏಕೆ ಇನ್ನೂ ಹೆಚ್ಚಾಗಿ ನೃತ್ಯಕಲೆಯಲ್ಲಿಯೂ ಕಾಲಕ್ಕೆ ಪ್ರಮುಖತೆಯುಂಟು. ನಮ್ಮ ಜೀವನದಲ್ಲಂತೂ ತಾಳವ್ಯವಸ್ಥೆಯ ಮಹತ್ತ್ವವು ಅಷ್ಟಿಷ್ಟಲ್ಲ. ಪ್ರಗತಿಶೀಲವಾದ ಜೀವನಕ್ಕೆ ತಾಳಬದ್ಧವಾದ ಕ್ರಿಯೆಗಳು ಅತ್ಯಾವಶ್ಯಕ. ನೃತ್ಯಕಲೆಯ ಮುಕದಿಂದ ಮನುಷ್ಯನು ಈ ಗುಣವನ್ನು ಗ್ರಹಿಸಬೇಕಾಗಿದೆ.

ಎರಡನೆಯದೆಂದರೆ ನೃತ್ಯಕಲೆಯು ಶರೀರ ವಿಕಾಸಕ್ಕೆ, ಅಂಗಗಳ ಸುಸಂಘಟನೆಗೆ ತುಂಬಾ ಅಗತ್ಯ. ನೃತ್ಯಕಲೆಯನ್ನು ಕಲಿಯುವ ಸ್ತ್ರೀ ಅಥವಾ ಪುರುಷನ ಶರೀರದಲ್ಲಿ ಒಂದು ಬಗೆಯ ದಾರ್ಢ್ಯ, ಸ್ಫೂರ್ತಿ, ಸ್ವಾಧೀನ ಅಧಿಕವಾಗಿರುತ್ತದೆ. ಸ್ತ್ರೀಯರಿಗೆ ಇದು ವಿಶೇಷ ಲಾಭವನ್ನುಂಟುಮಾಡುವುದು. ಆದರೆ ಈ ದಿನ ನಮ್ಮ ದೇಶದಲ್ಲಿ ಹಾಗೂ ಸಮಾಜದಲ್ಲಿ ಜನರು ನೃತ್ಯಕಲೆಯನ್ನು ಉಪೇಕ್ಷಿಸುವರು. ಇಂಥವರು ಮನೆಯಲ್ಲಿ ತಮ್ಮ ಮಕ್ಕಳಿಗೆ ನರ್ತನ, ಗಾನ, ಅಭಿನಯಗಳನ್ನು ಕಲಿಸಲು ಹೆದರುತ್ತಾರೆ. ಮಕ್ಕಳೆಲ್ಲಿ ದುರಾಚಾರದಲ್ಲಿ ಅಡಿಯಿಡುವರೋ ಎಂದು ಅವರಿಗೆ ಭಯವಿರುತ್ತದೆ. ಆದರೆ ನನ್ನ ತಿಳಿವಿನಲ್ಲಿ ಈ ಬಗೆಯ ಭಯಕ್ಕೆ ಕಾರಣವಿಲ್ಲ. ಮಾನವಜೀವನದ ಪೂರ್ಣವಿಕಾಸಕ್ಕೆ ಸಂಗೀತ ಮತ್ತು ಅದರ ಮುಖ್ಯಾಂಗವಾದ ನೃತ್ಯಕಲೆಯ ಜ್ಞಾನವು ಅತ್ಯಾವಶ್ಯಕ.

ಜಪಾನ್, ಜರ್ಮನಿ ಮುಂತಾದ ದೇಶಗಳಲ್ಲಿ ನೃತ್ಯಕಲೆಯು ತುಂಬಾ ಅಭಿವೃದ್ಧಿಗೆ ಬಂದಿದೆ. ಅಲ್ಲಿಯ ಸ್ತ್ರೀಪುರುಷರು ಅದರ ಮೂಲಕ ಆನಂದವನ್ನೂ, ಆತ್ಮವಿಕಾಸವನ್ನೂ ಹೊಂದುತ್ತಿದ್ದಾರೆ. ಎಲ್ಲಾ ಕಡೆಗಳಲ್ಲಿಯೂ ಹೀಗೆಯೇ ಆಗುವುದಿಲ್ಲವೆಂಬ ಮಾತು ನಿಶ್ಚಯ. ಹಲವೆಡೆಗಳಲ್ಲಿ ಜನರು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ನೃತ್ಯವನ್ನು ವಿಷಯವಾಸನೆ, ಭೌತಿಕಸುಖಗಳಿಗೆ ಸಾಧನವನ್ನಾಗಿ ಮಾಡಿಕೊಂಡಿದ್ದಾರೆ.ಆದರೆ ನಮಗೆ ಅವರ ಸಂಬಂಧ ಬೇಡಎಂದರು.

ಇಷ್ಟರಲ್ಲೇ ಆತನು ಮತ್ತೆ ಒಂದು ಪ್ರಶ್ನೆಯನ್ನು ಕೇಳಿದ- ಬಾಪೂಜಿಯವರೇ, ತಾವು ಹಿಂದೆ ಹೊರದೇಶದ ಸಮ್ಚಾರಸಮಯದಲ್ಲಿ ನಾಟಕಾದಿಗಳನ್ನು ನೊಡುವುದನ್ನು ನಿಷೇಧಿಸಿದ್ದಿರಿ; ಅಲ್ಲದೆ ನಾಟಕ ನೊಡಿದ್ದರಿಂದ ತಮಗೆ ಬೇಸರ ಉಂಟಾಯಿತು. ಅದಕ್ಕೆ ಕಾರಣವೇನು? ನಾಟಕದಲ್ಲೂ ಒಳ್ಳೆಯ ನೃತ್ಯ, ಗಾನ, ಅಭಿನಯಗಳು ಇರುವುದಿಲ್ಲವೇ? ಅದನ್ನು ನೋಡುವುದರಿಂದ ತಪ್ಪೇನು?

ಆಗ ಮಹಾತ್ಮರು ನಾನು ಶೋಕಿಗಾಗಿ ಆಡುವ ನಾಟಕಗಳಿಗೆ ವಿರೋಧಿ.ನನಗೆ ಶೋಕಿಗಾಗಿ ಆಡುವವರನ್ನು ಕಂದರೆ ಸೇರದು. ಅದಕ್ಕೆ ಕಾರಣವೇನೆಂದರೆ ಅವರ ನಾಟಕಗಲಲ್ಲಿ ಕಲೆಯು ಕಲಾವಶೇಷವಾಗಿ ಹೋಗಿರುವುದು. ಮೇಲಿನ ರಂಗು, ಥಳುಕು-ಬೆಡಗು ಇವೇ ಹೆಚ್ಚಿದ್ದು ಇದಕ್ಕೆ ಪ್ರಾಧಾನ್ಯ ಕೊಡುವರು. ಆದ್ದರಿಂದ ನಾವು ಅಂಥ ನಾಟಕಗಳನ್ನು ಬಿಡಬೇಕು. ಆ ನಾಟಕಗಳನ್ನು ನೋಡುವುದರಿಂದಲೇ ನಮ್ಮ ವಿಕಾರ, ವಿಷಯವಾಸನೆ ಇವು ಉತ್ತೇಜಿತವಾಗುವವು. ಮನಸ್ಸು ನಮ್ಮನ್ನು ಮಹಾಪತನಕ್ಕೆ ಒಯ್ಯುವುದು. ಆಶ್ರಮದಲ್ಲಿ ನಾವು ಇಂಥ ವರ್ತನೆಗಳಿಗೆ ವಿರುದ್ಧವಾದ ಇಂದ್ರಿಯ ನಿಗ್ರಹ, ಸಾತ್ತ್ವಿಕತೆ ಮುಂತಾದವುಗಳನ್ನು ಹೊಂದಲು ಯತ್ನಿಸುತ್ತಿದ್ದೇವೆ. ಹೀಗಿರುವಾಗ ಅಂತಹ ‘’ಬಜಾರಿ ನಾಟಕಗಳು’’ ಖಂಡಿತ ನಮಗೆ ತ್ಯಾಜ್ಯವಾದವು. ಯಾವ ನಾಟಕದ ಧ್ಯೇಯವು ನಿಜವಾದ ಕಲೆಯನ್ನು ತೋರಿಸುವುದೋ, ವಸ್ತವಿಕವಾದ ಆನಂದವನ್ನುಂಟುಮಾಡುವುದೋ, ಸಾತ್ತ್ವಿಕವಾದ ಮನೋರಂಜನೆಯನ್ನುಂಟುಮಾಡುವುದೋ ಅಂತಹ ನಾಟಕಗಳು ನಮಗೆ ಯೋಗ್ಯವಾದವು. ನಾವು ಆ ನಾಟಕಗಳಿಗೆ ಸ್ವಾಗತಕೊಟ್ಟು ಬರಮಾಡಿಕೊಳ್ಳುತ್ತೇವೆ.

ಕಲ್ಕತ್ತೆಯಲ್ಲಿ ಕಾಂಗ್ರೆಸ್ ಮಹಾಸಭೆಯು (೧೯೨೮)ನಡೆದ ಸಮಯದಲ್ಲಿ ಕವಿವರ್ಯ ರವೀಂದ್ರನಾಥ ಠಾಗೋರರ ಪೋಸ್ಟ್ ಆಫೀಸ್ (ಢಾಕ್ ಘರ್) ನೃತ್ಯರೂಪಕ ನಾಟಕವನ್ನು ಪ್ರದರ್ಶಿಸಿದರು. ಆ ನಾಟಕದಲ್ಲಿ ಸ್ವತಃ ಠಾಗೋರರೇ ರಂಗಭೂಮಿಯ ಮೆಲೆ ಬಂದು ತಮ್ಮ ಅಸಾಧಾರಣವಾಗಿ ಅಭಿ‌ಅನಯಿಸಿದಾಗ ದರ್ಶಕರಲ್ಲಿ ಶಾಂತಿಯು ನೆಲೆಸಿತ್ತು. ಪ್ರತಿಯೊಬ್ಬರೂ ಮಂತ್ರಮುಗ್ಧರಾಗಿ ಆ ಅಲೌಕಿಕ ಭಾವದ ರಸಾಸ್ವಾದನೆಯನ್ನು ಮಾಡುತ್ತಿದ್ದರು. ನಾನೂ ಬೆಪ್ಪಾಗಿ ಅವರ ಆ ಅದ್ಭುತ ಕಲಾನೈಪುಣ್ಯವನ್ನು ನೋಡುತ್ತಿದ್ದೆ. ಇಂಥ ನೃತ್ಯ ಅಭಿನಯಗಳೇನು ತ್ಯಾಜ್ಯವೇ? ಇಲ್ಲ, ಎಂದಿಗೂ ಇಲ್ಲ. ಕವಿವರ್ಯರ ನೃತ್ಯವನ್ನು ನೋಡಿ ಯಾರ ಮನಸ್ಸು ತಾನೇ ರೂಪಾಂತರವಾಗದು? ಯಾರ ಮನದಲ್ಲಿಯೂ ವಿಷಯವಾಸನೆಯು ಜಾಗೃತವಾಗದು.

ಭಕ್ತ ಶಿರೋಮಣಿ ಮೀರಾಬಾಯಿಯು ತನ್ನ ದೇವರಲ್ಲಿ ತಲ್ಲೀನಳಾಗಿ ಭಕ್ತಿಯಿಂದ ನರ್ತಿಸುತ್ತಿದ್ದಾಗ ಅಲ್ಲಿ ವಿಷಯವಾಸನೆಯು ಯಾರಿಗೂ ಕಾಣದು. ಅದನ್ನು ನೋಡಿ ಯಾರ ಮನಸ್ಸು ತಾನೇ ಪೂತ(ಸ್ವಚ್ಛ)ವಾಗದಿರದು? ಆಕೆಯ ಆ ಭಕ್ತ ನರ್ತನದಲ್ಲಿ ಮೇಲ್ತರಗತಿಯ ಸಾತ್ತ್ವಿಕತೆ, ತಲ್ಲೀನತೆಗಳಿದ್ದವು. ಕಲೆಯಂತೂ ತಾನೇ ತಾನಾಗಿ ಎದ್ದು ಕಾಣುತ್ತಿತ್ತು. ಇಂತಹ ಉತ್ತಮ ಕಾಲಾದ್ಯೋತಕವಾದ ನರ್ತನವು ತ್ಯಾಜ್ಯವೂ, ಉಪೇಕ್ಷಣೀಯವೂ ಎಂತಾದೀತು? ನಾವು ಕಲೆಯ ಸ್ವರೂಪವನ್ನೂ, ಉತ್ತಮ ನಾಟ್ಯಗೀತಗಳನ್ನೂ ಅರಿತು ಮೀರಾಬಾಯಿಯಂತೆ ಭಕ್ತಿಯಲ್ಲಿ ತಲ್ಲೀನರಾಗಿ ಕುಣಿಯೋಣ ಬನ್ನಿ, ಎಲ್ಲರನ್ನೂ ಸೇರಿಸುತ್ತಾ ನಿಂತು ಕಾಲಬದ್ಧವಾಗಿ, ಲಯಬದ್ಧವಾಗಿ ಕುಣಿಯೋಣ ಎಂದರು.

( ಲೇಖಕರು ಹಿರಿಯ ಚಿಂತಕರೂ, ಬೆಂಗಳೂರು ನಿವಾಸಿ.)


( ಆಧಾರ : ರಂಗಭೂಮಿ ಮಾಸಪತ್ರಿಕೆ. ಜನವರಿ ೧೯೩೬. ಪುಟ ೬೫-೬೭,

ಸಂಪಾದಕರು : ಎಂ.ಎಸ್.ಸುಬ್ರಹ್ಮಣ್ಯ ಶಾಸ್ತ್ರಿಗಳು)

 


Leave a Reply

*

code