ಅಂಕಣಗಳು

Subscribe


 

ಮೌನಾಲಾಪದಲ್ಲಿ ಮೇನಕೆಯ ಮೆಯ್ ಮೂಡಿಸಿದ ನಿರುಪಮ ನಾಟ್ಯ

Posted On: Sunday, April 27th, 2014
1 Star2 Stars3 Stars4 Stars5 Stars (No Ratings Yet)
Loading...

Author: - ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ಅದು ನೃತ್ಯವೇದಿಯೇ ಅಲ್ಲ. ನಾಟ್ಯ ಕೇವಲ ಆನುಷಂಗಿಕ. ‘ನಾನು ಏನು ಅಭಿನಯ ಮಾಡ್ದೇ,.. ಹೇಳಿನೋಡೋಣ..!’ಎಂಬ ಸವಾಲು ಹಾಕುವ ಮಾದರಿಯ ನೃತ್ಯೋದ್ಯೋಗ. ಹೆಚ್ಚೆಂದರೆ ಅರ್ಧಗಂಟೆ ಅವಧಿಯದ್ದು. ಸಂದರ್ಭವೂ ಅತ್ಯಂತ ಪ್ರತಿಷ್ಠಿತವಾದದ್ದೇ. ಪ್ರಪಂಚದ ಮೂಲೆ ಮೂಲೆಯಲ್ಲೂ ಕಣ್ಣಿಗೆಣ್ಣೆ ಸಿಡಿಸಿ ಇಂಟರ್ನೆಟ್ಟಲ್ಲಿ ನೋಡುವ ವೀಕ್ಷಕರೂ ಕಲಾವಿದರ ಕಣ್ಣಾಚೆ ಎಚ್ಚರವಾಗಿರುವ ‘ನೇರಪ್ರಸರಣ’ದ ಕಾರ್ಯಕ್ರಮ. ಅದು ಶತಾವಧಾನಿ ಡಾ.ಆರ್.ಗಣೇಶರ ಸಾವಿರನೇ ಅವಧಾನ.

ಬೆಂಗಳೂರಿನ ಎನ್‍ಎಂಕೆಆರ್‍ವಿ ಕಾಲೇಜಿನ ಭವ್ಯವಾದ ‘ಮಂಗಳಾ’ ಸಭಾಗೃಹ. ಕಿಕ್ಕಿಕ್ಕಿಕ್ಕಿರಿದು ಇಡಿಕಿರಿದ ಸಂಭಾಗಣ. ಅಷ್ಟಾವಧಾನವೇ ಹೌದಾದರೂ, ಸಾವಿರವಾದ್ದರಿಂದ ತುಸು ಭಿನ್ನವಾಗಿರಲೆಂಬ ನಿಟ್ಟಿನಲ್ಲಿ ನಾಟ್ಯಪ್ರಚ್ಛಕತ್ವವನ್ನು ಸೇರಿಸಲಾಗಿತ್ತು. ನಾಟ್ಯಕಲಾವಿದರು ಯಾವುದಾದರೂ ಸನ್ನಿವೇಶವನ್ನು ನಾಟ್ಯದ ಮೂಲಕ ಕಟ್ಟಿಕೊಡಬೇಕು. ಕಲಾವಿದರು ವಸ್ತುವಿನ ಹೂರಣವನ್ನು ಹುದುಗಿಸಿ ಇಟ್ಟಷ್ಟೂ ಕುತೂಹಲ ಕೆನೆಗಟ್ಟುತ್ತದೆ; ಕೆನೆಗಟ್ಟಬೇಕು. ನೃತ್ಯ ಅಭಿನಯಾದಿಗಳನ್ನು, ಅದರ ಅಂತರತಃಸೂಕ್ಷ್ಮಗಳನ್ನು ಕೀಲ್ಗಣ್ಣಾಗಿ ಅವಧಾನಿ ಅವಲೋಕಿಸಿ, ಇಡೀ ನಾಟ್ಯಕಲಾಪದ ಕುರಿತು ಪದ್ಯವನ್ನು ರಚಿಸಬೇಕು. ಇದಿಷ್ಟು ಅಂದಿನ ( 16-02-2014) ನಾಟ್ಯಪ್ರಚ್ಛನದ ಸಂವಿಧಾನ.

deevatige first part   deevatige photos 1 (1)   deevatige photos 1 (2)

ಕಲಾವಿದರು ತೋರುವ ಆಂಗಿಕಗಳ ಮೂಲಕವಷ್ಟೇ ಪಾತ್ರ, ಪರಿಸರ, ಪರಿಸ್ಥಿತಿ, ಪರಿಣಾಮಗಳನ್ನು ಊಹಿಸಬೇಕು. ಯಾಕೆಂದರೆ ನೃತ್ಯಾಭಿನಯಕ್ಕೆ ಪೂರಕವಾಗಿ ಸಾಹಿತ್ಯವಿಲ್ಲ. ಅದೊಂದು ತರಹ ಮೌನನೃತ್ಯ. ಪ್ರಕಟವಾಗಿ ಶಬ್ದವು ಸಾಹಿತ್ಯದಲ್ಲಿ ಕಾಣಿಸಿದರೆ ಕಥಾಗರ್ಭ ನಿರ್ಬೇಧವಾಗುತ್ತದಲ್ಲ! ಇಂತಹ ಸಂಕೀರ್ಣವೂ, ಸಂಕ್ಲಿಷ್ಟವೂ ಆದ ಪಂಥಾಹ್ವಾನವನ್ನು ನಾಟ್ಯಕಲಾವಿದೆಯಾಗಿ ಸ್ವೀಕರಿಸಿ ಕಸೆಕಟ್ಟಿ ಕಣಕ್ಕಿಳಿದದ್ದು ನಿರುಪಮಾರಾಜೇಂದ್ರ.

ಅತ್ಯಂತ ವಿವರವಿವರವಾಗಿ, ವಿರಳ ವಿರಳವಾಗಿ – ವಾಕ್ಯವನ್ನು ಬರೆದರೆ ಅರ್ಧವಿರಾಮ, ಆವರಣಚಿಹ್ನೆ, ಆಶ್ಚರ್ಯಚಿಹ್ನೆ, ಅಡ್ಡಗೆರೆ, ಉದ್ದಗೆರೆ, ಪೂರ್ಣವಿರಾಮ ಇತ್ಯಾದಿ ಹಲವು ಸಂಕೇತಗಳನ್ನು ಬಳಸಿ ಶಾಬ್ದಿಕ ಚಿತ್ರವು ಸ್ಫುಟಗೊಳ್ಳುವಂತೆ – ನಿರುಪಮಾ ತಮ್ಮ ನಾಟ್ಯಸಂಕಥನಕ್ಕೆ ಮೊದಲಿಟ್ಟರು. ಹಿನ್ನೆಲೆಯಲ್ಲಿ ಮಹೇಶ್ ಕೊಳಲು, ಗುರುಮೂರ್ತಿ ಮೃದಂಗ. ಇನ್ನಾವುದೇ ಉಪಕರಣವಿಲ್ಲ. ಬರೇ ಕೊಳಲು ಮೃದಂಗ – ಇವೆರಡೇ Danceನ archestraಕ್ಕೆ enoughಆ? ಅಷ್ಟೇ ಅಲ್ಲ, ಆಗಲೇ ಉಲ್ಲೇಖಿಸಿದಂತೆ ಪ್ರಕಟವಾದ ಸಾಹಿತ್ಯವೇ ಇಲ್ಲ !!! ಆದರೆ ಒಂದು ಶಾಸ್ತ್ರೀಯನೃತ್ಯದ ಎಲ್ಲಾ ಅಂಗಅವಯವಗಳೂ ಜೀವಂತವಾಗಿ ಇದ್ದಾವೆ/ಇರಲೇಬೇಕು. ಪದಾಭಿನಯ,

deevatige photos 1 (3)

ವಾಕ್ಯಾಭಿನಯ, ಜತಿ, ಸ್ವರಕದಂಬ, ನಟ್ಟುವಾಂಗದ ಪಾಟಾಕ್ಷರಪ್ರವಾಹ, ಹೆಜ್ಜೆಗಾರಿಕೆಯ ಝಣಝಣತ್ಕಾರ…ಯಾವುದು ಉಂಟು, ಯಾವುದು ಇಲ್ಲ !!! ಯಾವುದಕ್ಕೂ ಅಕ್ಷರಾಭಿವ್ಯಕ್ತಿ ಇಲ್ಲ, ಕೇವಲ ನಾದಬೋಧ. ಕೊಳಲಿನ ಕೊರಳಿಂದ ಹೊರಹಾರುವ ಮೂಕಸ್ವರಗಳೇ ಕಥಾಗತಿಯ ಊರೆಗೋಲು, ಕೊಳಲು- ಮೃದಂಗ ಪರಿಣಾಮ ಸಂಗೀತದ ಉಪಕರಣಗಳೂ ಹೌದು.

ಇಲ್ಲಿ ಕಲಾವಿದೆ, ತನ್ನ ತಾಲಬದ್ಧ ಚಲನೆಯ ಜೊತೆಜೊತೆಗೇ ಪಾತ್ರಾಭಿನಯಕ್ಕೆ ಹೊಂದುವ ಛಾಯಾಸಾಹಿತ್ಯವನ್ನು ಕಲ್ಪಿಸಿಕೊಳ್ಳುತ್ತಾ ಹೋಗಬೇಕು. ಅಂದರೆ ಆಯಾ ಹೊತ್ತಿನಲ್ಲಿ ಮಾಡಬೇಕಾದ ಅಭಿನಯಕ್ಕೆ ಇಂಬುಗೊಡುವ ಸಾಹಿತ್ಯಿಕ ಶಬ್ದ ಮಿದುಳಲ್ಲಿ ಹುಟ್ಟಿ ಸಾಯುತ್ತಿರಬೇಕು. ಕಲಾವಿದೆಯ ಮುಖಾಭಿನಯ, ಅಂಗಾಭಿನಯಗಳನ್ನು ತೆರೆಗಣ್ಣಲ್ಲಿ ನೋಡುತ್ತಾ ವಾದ್ಯಕಾರ ಸಂವಾದಿಯಾಗಿ ನುಡಿಸಬೇಕು. ಇದಾವುದೂ ಸಿದ್ಧಾನ್ನವಾಗಿರಲು ಸಾಧ್ಯವಿಲ್ಲ. ಕರಡುಕರಡಾಗಿ ಹೊರಗೆರೆಯ ರೂಪಣ (outlines sketch) ಮಾಡಿಕೊಳ್ಳಬಹುದಷ್ಟೇ ಹೊರತು ರಂಗಸಂವಿಧಾನಕ್ಕೆ ನಿಯಮದ ಮೊಳೆ ಹೊಡೆಯಲಿಕ್ಕೆ ಆಗದ ಮಾತು.

ಅಂದು ನಿರುಪಮಾ ಆಯ್ಕೆ ಮಾಡಿಕೊಂಡದ್ದು ಮೇನಕೆ-ವಿಶ್ವಾಮಿತ್ರ ಪ್ರಸಂಗ. (ಅದು ನಮಗೆ ಗೊತ್ತಾಗುತ್ತಾ ಬಂದದ್ದು ಮುಕ್ಕಾಲು ಮುಗಿದ ಮೇಲೆ) ದೇವಲೋಕ-ಮಾನವಲೋಕ-ಅಪ್ಸರಸೆಯ ಅಮತ್ರ್ಯ ಚಲನೆ- ಮಂದಾನಿಲ ಮನ್ಮಥ ವಸಂತರ ಸಾಥ್- ವಿಶ್ವಾಮಿತ್ರನ ಕಾಠೋರ್ಯ-ಮೇನಕೆಯ ಗೆಲುವು- ವಿಶ್ವಾಮಿತ್ರನ ತಪಃಕ್ಷಾತ್ರಕ್ಕೆ ತಾನೇ ಶರಣಾಗುವ ದೇವವೇಶ್ಯೆ-ದೇವಲೋಕದಲ್ಲಿ ದುರ್ಲಭವಾದ ಬಸಿರಭಾಗ್ಯ ತನಗೆ ಸಿಕ್ಕಿದ್ದರಿಂದ ಹೊಂಪುಳಿಹೋಗುವ ಮೇನಕೆ-ಶಿಶು ಶಕುಂತಲೆಯನ್ನು ವಿಶ್ವಾಮಿತ್ರನ ಮಡಿಲಲ್ಲಿ ಮಲಗಿಸಿ ಮೊಗ ಮರೆಮಾಡಿ ಮರುಗಿ ಮರಳುವ ಮೇನಕೆ- ಮತ್ತೆ ಭುವಿಯಿಂದ ಸ್ವರ್ಗದತ್ತ ಏರೇರೇರೇರುತ್ತಾ ತೇಲಿ ತೆರಳುವ ಸ್ವರ್ಗಾಂಗನೆ.

ಇದಿಷ್ಟನ್ನೂ exhibition galleryಯಲ್ಲಿ ಒಂದೊಂದು frameನಲ್ಲಿ ಒಂದೊಂದು ಕಥಾಸೂಕ್ಷ್ಮವನ್ನು ಸೆರೆಹಿಡಿದ ಚಿತ್ರಸರಣಿಯಷ್ಟು ಸ್ಫುಟವಾಗಿ ಸ್ಪಷ್ಟವಾಗಿ ನಿರುಪಮಾ ರಂಗದಲ್ಲಿ ರೇಖಿಸುತ್ತಾ ಹೋದರು. ಅದೆಂತಹ ಓಘ ! ಅದೆಂತಹ ವೇಗ! ಅಂಗರೇಖೆ ಆತ್ಯಂತಿಕವಾಗಿ ಸೂಚೀಸೂಕ್ಷ್ಮದಷ್ಟು ಖಚಿತ. ಕಲಾವಿದೆ ತನುಲತೆಯಾಗಿ ತೂಗಿ ಬಾಗಿ ತೊನೆದು ಬೀಗಿ ಏಗಿ ಸಾಗಿ ನಾಟ್ಯಾಮೃತವರ್ಷಧಾರೆಯನ್ನೇ ಹರಿಹರಿಸಿ ಸಹೃದಯಹೃದಯಾಂಗಣವನ್ನು ತೊಯ್ದು ತೊಪ್ಪೆಯಾಗಿಸಿದರು- ಎಂದರೆ, ಚಂದ್ರನನ್ನು ನೀರಿನ ಬಿಂಬದಲ್ಲಿ ಕಂಡೆ ಅಂದಷ್ಟೇ ಬಿರುಸು; ನಿರುಪಮಾ ಅವರ ಅಂದಿನ ನಾಟ್ಯಪ್ರಯೋಗ, ನಾಟ್ಯರಂಗದಲ್ಲೇ ಒಂದು ಇತಿಹಾಸಾಧ್ಯಾಯವನ್ನು ತೆರೆವಷ್ಟು ಶಕ್ತವಾಗಿತ್ತು; ಸಕ್ತವಾಗಿತ್ತು.

ಒಂದುಕ್ಷಣವೂ ತೆರಪಿಲ್ಲದೆ ಸ್ವರ್ಗಭೂಮಿಗಳ ಗತಿವ್ಯತ್ಯಾಸಗಳನ್ನು ನಾಟ್ಯಶಾಸ್ತ್ರದ ಚರ್ಮಸುವ ಚಾರಿಗಳ ಮೂಲಕ, ನೋಡುಗರ ರೆಪ್ಪೆ ಕೀಲಿಸುವ ರೇಚಿತಗಳ ಮೂಲಕ, ಪ್ರತಿಯೊಂದು ಚಲನೆಗೂ ಅನ್ಯಾನ್ಯ ಕರಣಗಳ ಹದವಾದ ಹಾಳತವಾದ ಸಮೀಕರಣಗಳ ಮೂಲಕ ಇಡೀ ಮೇನಕಾಪ್ರಕರಣವನ್ನು ಉಗುರಷ್ಟೂ ಊನವಿಲ್ಲದೇ ರಂಗದಲ್ಲಿ ಸರ್ವಾಂಗಸುಂದರವಾಗಿ ಕಟೆದು ನಿಲ್ಲಿಸಿದರು ನಿರುಪಮಾರಾಜೇಂದ್ರ.

ಅವರ ಈ ಪ್ರಸ್ತುತಿಯ ಸುಷಮೆಯ ಹಿಂದಿನ ಕಠಿಣ ಪರಿಶ್ರಮ, ಅದರಲ್ಲೂ ಕರಣ-ರೇಚಿತ-ಚಾರಿಗಳ ಪ್ರಮಾಣಬದ್ಧ ಅಭ್ಯಾಸ ಸ್ಪಷ್ಟವಾಗಿ ತೋರಿಬರುತ್ತಿತ್ತು. ಹಾಡಿನ ಹಂಗಿಲ್ಲದಿದ್ದರೇ ನಾಟ್ಯ ಹೆಚ್ಚು ಸೊಗಯಿಸುತ್ತದೇನೋ ಎಂಬ ಕುರುಡಾಸೆ ಮನದ ಮೂಲೆಯಲ್ಲಂತೂ ಹುಟ್ಟಿದ್ದು ಸತ್ಯ. ನಿರುಪಮ ನಾಟ್ಯಕ್ಕೆ ನೂರುನೂರು ನಮನ.

(ಲೇಖಕರು ಭಾರತೀಯ ಸಂಗೀತ-ನೃತ್ಯ-ರಂಗಕಲೆಗಳ ಆಯಾಮಗಳ ಹೃದಯವನ್ನು ಬಲ್ಲ ಕಲಾವಿದ, ಸಹೃದಯಿ, ಕವಿ, ತಜ್ಞ, ವಿಮರ್ಶಾ ವಾಙ್ಮಯಿ, ರಂಗನಟ-ರಾಮಕಥಾ ‘ರೂಪಕ’ ನಿರ್ದೇಶಕ, ಯಕ್ಷಗಾನ ರಚನೆಕಾರ, ಅವಧಾನ ಪೃಚ್ಛಕರು)

(ಮೇಲೆ ಹೇಳಿದಂತೆ ಸಾಹಿತ್ಯದ ಹಂಗೇ ಇಲ್ಲದ ನೃತ್ಯಪ್ರಸ್ತುತಿ ಉಡುಪಿಯಲ್ಲಿ ನಡೆದ ಡಾ.ಆರ್.ಗಣೇಶರ ಸಾವಿರದ ಒಂದನೆಯ ಅಷ್ಟಾವಧಾನದಲ್ಲಿಯೂ(16-03-2014)ತೋರಿಬಂದು ಕಣ್ಮನಗಳಿಗೆ ಸೊಬಗಿನ ಸೋನೆಯನ್ನಿತ್ತಿತು. ಅಲ್ಲಿ ನಿರುಪಮಾ ಆಯ್ದುಕೊಂಡದ್ದು ಸೀತಾಪಹರಣ-ಜಟಾಯು ಕದನ ಹಾಗೂ ರಾಧಾ ಕೃಷ್ಣರ ವೇಷ-ಮಾರುವೇಷದ ಪ್ರಸಕ್ತಿಯನ್ನು. ಕರ್ಣಾಮೃತವಾಗುವ ಮಹೇಶರ ಕೊಳಲು; ನೋಟಕ್ಕೆ ಚೆಲುವೆನಿಸುವ ಕರಣಗಳ ಆಂಗಿಕದ ಲಾವಣ್ಯ, ಜಟಾಯು ಕದನದಲ್ಲಂತೂ ಸ್ವತಃ ಪಕ್ಷಿಶ್ರೇಷ್ಠನ ಆಂಗಿಕವನ್ನೇ ಮೈಯ್ಯಲ್ಲಿ ಮೂಡಿಸಿಕೊಂಡ ನಿರುಪಮಾ ಕುಟುಕು ಜೀವ ಹಿಡಿದು ರಾಮನ ಬರುವಿಕೆಯ ಕ್ಷಣಕ್ಕಾಗಿ ನೆಲಕ್ಕೊರಗಿದ ಜಟಾಯುವನ್ನು ಇಂಚಿಂಚೂ ಸಾಕ್ಷೀಕರಿಸುತ್ತಾ ಮನಮಿಡಿಯುವಂತೆ ಮಾಡುವಲ್ಲಿ ಯಶಸ್ವಿಯಾದರು. ರಾಧೆಯು ಕೃಷ್ಣನ ಮಾರುವೇಷದಲ್ಲಿ ಗೋಪಿಕೆಯರನ್ನು ಮರಳುಮಾಡುತ್ತಾ ಕೃಷ್ಣನನ್ನೇ ದಂಗುಬಡಿಸುವ ಹೃದಯಂಗಮ ಸನ್ನಿವೇಶವಂತೂ ಮತ್ತಷ್ಟು ಹೃದ್ಯವಾಗಿತ್ತು. ಕೊನೆಯಲ್ಲಿ ಕೃಷ್ಣನೂ ರಾಧೆಯ ಕೈಚಳಕಕ್ಕೆ ಆಕೆಯಂತೆಯೇ ಪರಿವೇಷಿತನಾದ ಸಂದರ್ಭವಂತೂ ರಾಧಾಕೃಷ್ಣರದಷ್ಟೇ ಅಲ್ಲ, ನೃತ್ಯದ ರೂಪ-ಸ್ವರೂಪದ ನಡುವಿರಬೇಕಾದ ಅನ್ಯೋನ್ಯ ಬಾಂಧವ್ಯಕ್ಕೆ ಕನ್ನಡಿ ಹಿಡಿದಿತ್ತು. ಮಂಟಪ ಪ್ರಭಾಕರ ಉಪಾಧ್ಯಾಯರ ಏಕವ್ಯಕ್ತಿ ಪ್ರಸ್ತುತಿಯಲ್ಲಿ ತೆರೆಗೆ ಬಂದ ರೌದ್ರಭೀಮ- ದುಶ್ಯಾಸನ ವಧೆ- ರಕ್ತವನ್ನು ತೋಯಿಸಿಕೊಂಡು ದ್ರೌಪದಿಯ ಶ್ರೀಮುಡಿಯ ಬೆನ್ನಿಗೇ ಪಗೆಗೆ ಬಗೆ ಬಗೆದ ಭೀಮನೆಡೆಗೆ ಆಕೆಯಲ್ಲಿ ಅರಳುವ ಧನ್ಯತೆ, ಪ್ರೀತಿಯು ರುದ್ರಭೀಕರ-ಭೀಭತ್ಸ-ಶೃಂಗಾರದ ಸೂಕ್ಷ್ಮಾತಿಸೂಕ್ಷ್ಮ ವರ್ಣಗಳೆಲ್ಲಾ ವಿವಾದಿ ಸ್ವರಗಳ ವೇಣುದರ್ಶನದೊಂದಿಗೆ ಅದ್ಭುತರಮ್ಯವಾಗಿ ಮೂಡಿಬಂತು.

deevatige last part

ಇದೇ ಬಗೆಯಲ್ಲಿ ಶತಾವಧಾನಿ.ಡಾ.ಆರ್.ಗಣೇಶರ ಮುಂದಾಳತ್ವದಲ್ಲಿ ಹಲವು ವರುಷಗಳಿಂದ ನಡೆಯುತ್ತಿರುವ ಕಾವ್ಯ-ಚಿತ್ರ-ಗೀತ-ನೃತ್ಯದಲ್ಲೂ ಇಂತಹ ರಸಪ್ರೀತಿಯ ಪಂಥಾಹ್ವಾನಗಳು ಮೂಡಿಬಂದಿದ್ದು ನೃತ್ಯಜಗತ್ತಿನ ಬಡಕಲು ಸಂವಿಧಾನವನ್ನು ಮುರಿಯುವ ವಿನೂತನ ಸೇರ್ಪಡೆಗಳಾಗಿವೆ. ಕೀರ್ತಿಶೇಷ ಸುಂದರೀ ಸಂತಾನಂ, ಡಾ. ಶೋಭಾ ಶಶಿಕುಮಾರ್‍ರಂತಹ ಪ್ರತಿಭಾವ್ಯುತ್ಪತ್ತಿಯುಳ್ಳ ಕಲಾವಿದರು ತಮ್ಮ ಕಲಾಕೌಶಲದಿಂದ ಸೌಗಂಧ ತುಮ್ಬಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ (23 ಮಾರ್ಚ್ 2014) ಕಾವ್ಯ-ಚಿತ್ರ-ಗೀತ-ನೃತ್ಯದಲ್ಲಿ ಆಶುವಾಗಿ ಹಲವು ಸಂದರ್ಭಗಳನ್ನು ಕೇವಲ ಕೆಲವೇ ನಿಮಿಷಗಳ ಅಂತರದಲ್ಲಿ ಕೊಳಲು-ಮೃದಂಗದ ನೆರವಿನಿಂದ ಪೂರ್ಣ ರಂಗಾನುಭವವಾಗಿ ಕಟ್ಟಿಕೊಟ್ಟರು. ನೃತ್ಯವಿಶೇಷಗಳಿಗೆ ಅನ್ಯಾದೃಶ್ಯವಾದ ಸಂದೇಶ ನೀಡುವಂತೆ ಮೂಡಿದ ರಂಭಾದಿ ಸ್ವರ್ಗೀಯ ತರುಣಿಯರ ಸ್ಪರ್ಧೆ, ವಸಂತೋತ್ಸವ, ಯಶೋದೆಪಾರ್ವತಿಯರ ಸಂವಾದ, ಮೋಹಿನಿಯಾಗಿ ರೂಪಾಂತರಗೊಂಡ ವಿಷ್ಣು ಅಮೃತ ಹಂಚಿದ ಅಭಿನಯಪ್ರಸಕ್ತಿಗಳಂತೂ ಬಹುವಿಶೇಷವಾಗಿದ್ದವು. ಇಂತಹ ಕಲಾಸನ್ನಿವೇಶಗಳು ಇತ್ತೀಚೆಗೆ ಹೆಚ್ಚಾಗುತ್ತಿರುವ ಜಾಳುಸಾಹಿತ್ಯದ ಸಂಕಟಗಳಿಂದ ಬಿಡುಗಡೆ ಹೊಂದುವಲ್ಲಿ, ಹಿಮ್ಮೇಳ ಕಲಾವಿದರ ಸಾರ್ವಭೌಮತ್ವ, ಸೆಡವು, ಅನಿವಾರ್ಯ ಅವಲಂಬನದಿಂದ ತಪ್ಪಿಸಿಕೊಳ್ಳುವಲ್ಲಿ, ತಾಲೀಮಿನ ಅನುಕರಣೆಯ ಕಲಾಪರಿಹಾಸ ಮತ್ತು ರಸಾವೇಶಆಶಾಭಂಗದಿಂದ ಕಳಚಿಕೊಂಡು ಆಶುವಾದ, ಸವಾಲೆನಿಸುವ, ಆಕರ್ಷಕವಾದ, ರಸಾದ್ಭುತವಾದ ಸಹೃದಯವಿಶೇಷವನ್ನು ಕಂಡುಕೊಳ್ಳುವಲ್ಲಿ ಒಂದು ಸುಂದರ ಪರ್ಯಾಯ ಮಾಧ್ಯಮದಂತೆ ತೋರುತ್ತದೆ. ಮಾತ್ರವಲ್ಲ, ನಿಜವಾದ ಕಲಾವಿದ ಮತ್ತು ಕಲೆಯ ಪರಿಚಯವನ್ನೂ ಸೊಗಸಾದ ಆಸ್ಪದವಾಗುತ್ತದೆ. ಇಂತಹ ನೃತ್ಯಾನುಸಂಧಾನದ ಸಂಖ್ಯೆ ಮತ್ತು ಗುಣಮಟ್ಟ ಹೆಚ್ಚಲಿ ಎಂಬುದೇ ಇಲ್ಲಿನ ಆಶಯ. – ಸಂ.)

Leave a Reply

*

code