ಅಂಕಣಗಳು

Subscribe


 

ಮಲ್ಪೆ ರಾಮದಾಸ ಸಾಮಗ

Posted On: Thursday, June 17th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

* ಜನನ : ೨೦-೬-೧೯೨೬

* ತಂದೆ : ಮಲ್ಪೆ ಲಕ್ಷ್ಮೀನಾರಾಯಣ ಸಾಮಗ

* ತಾಯಿ : ಲಕ್ಷ್ಮೀ ಅಮ್ಮ

* ಅಣ್ಣ : ಮಲ್ಪೆ ಶಂಕರನಾರಾಯಣ ಸಾಮಗ

* ವಿದ್ಯಾಭ್ಯಾಸ : ಮಲ್ಪೆ ಎಲಿಮೆಂಟರಿ ಶಾಲೆ, ಕೊಡವೂರು ಹಾಯರ್ ಪ್ರೈಮರಿ ಶಾಲೆ. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಮೆಟ್ರಿಕ್ಯುಲೇಶನ್ ಪಾಸ್. ನಂತರ ಉಡುಪಿ ಸಂಸ್ಕ್ರತ ಕಾಲೇಜಿನಲ್ಲಿ ವಿದ್ಯಾರ್ಜನೆ.

* ವಿವಾಹ : ೧೯೪೭ರಲ್ಲಿ ನಾಗರತ್ನ ಇವರೊಂದಿಗೆ

* ಐವರು ಮಕ್ಕಳು : ವಾರಿಜಾ, ಪ್ರಸಿದ್ಧ ಯಕ್ಷಗಾನ ಕಲಾವಿದ ವಾಸುದೇವ ಸಾಮಗ, ಅಶೋಕ (ದಿವಂಗತ), ಮಾಲಿನಿ, ಹಾಸ್ಯಲೇಖಕಿ ಟಿ.ಎಸ್. ಅಂಬುಜಾ

* ನಿಧನ : ೨೭-೪-೨೦೧೦ – ಮಣಿಪಾಲ ಆಸ್ಪತ್ರೆಯಲ್ಲಿ

* ದೇಹಸಂಸ್ಕಾರ : ೨೮-೪-೨೦೧೦, ಬೆಳಿಗ್ಗೆ ೯-೪೫, ಕೊಡವೂರು ಗ್ರಾಮದ ಮೂಡಬೆಟ್ಟು ಸ್ವಗೃಹ.

ಪ್ಪತ್ತನೇ ಶತಮಾನದ ಯಕ್ಷಗಾನ ಲೋಕ ಇಬ್ಬರು ಹಿರಿಯ ಕಲಾವಿದರನ್ನು ಕಂಡಿದೆ. ಅವರು ದೊಡ್ಡ ಸಾಮಗ ಅಂದರೆ ಮಲ್ಪೆ ಶಂಕರನಾರಾಯಣ ಸಾಮಗ ಮತ್ತೊಬ್ಬರು ಸಣ್ಣ ಸಾಮಗರೆಂದೇ ಖ್ಯಾತರಾದ ಅವರ ತಮ್ಮ ಮಲ್ಪೆ ರಾಮದಾಸ ಸಾಮಗ. ದೊಡ್ಡ ಸಾಮಗರು ಸ್ವಾತಂತ್ರ್ಯ ಹೋರಾಟಗಾರರಾಗಿ, ಕಲಾವಿದನಾಗಿ ಅಸಾಧಾರಣ ಕೊಡುಗೆಯನ್ನಿತ್ತು ಯಕ್ಷರಂಗವನ್ನು ಸುಮಾರು ೪ ದಶಕಗಳ ಕಾಲ ಆಳಿ ಹೋದವರು. ಸ್ವತಃ ಶೇಣೀ ಗೋಪಾಲಕೃಷ್ಣ ಭಟ್ಟರೂ ಕೂಡಾ ಅವರನ್ನು ‘ಗುರು’ ಎಂದೇ ಸಂಬೋಧಿಸುತ್ತಿದ್ದರು. ಅವರ ತಮ್ಮ ಸಣ್ಣ ಸಾಮಗರೋ ಶೇಣಿ ಅವರೊಂದಿಗಿನ ತಾಳಮದ್ದಲೆಗಳಿಗೆ ಒಳ್ಳೆಯ ಜೊತೆ.

ಸಣ್ಣ ಸಾಮಗರನ್ನು ಹರಿದಾಸ ಮಲ್ಪೆ ರಾಮದಾಸ ಸಾಮಗರೆಂದು ಸಂಬೋಧಿಸುವುದರಲ್ಲಿ ಹೆಚ್ಚು ಅರ್ಥವಿದೆ. ಹಾಗೇ ನೋಡಿದರೆ, ಸಾಮವೇದದಲ್ಲಿನ ಅಸಾಧಾರಣವಾದ ಜ್ಞಾನವನ್ನು ಕಂಡ ಶೃಂಗೇರಿ ಜಗದ್ಗುರುಗಳು ೧೯ನೇ ಶತಮಾನದಲ್ಲಿ ಇವರ ಕುಟುಂಬಕ್ಕೆ ಇತ್ತ ಬಿರುದು ‘ಸಾಮಗ ‘. ಅದಕ್ಕೆ ತಕ್ಕಂತೆಯೇ ನಡೆದುಕೊಂಡವರು ಈರ್ವರು ಸಹೋದರರು.

ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಣ್ಣ ಸಾಮಗರು ಮೊನ್ನೆ ಮೊನ್ನೆ ಏಪ್ರಿಲ್ ೨೭ ರ ಮಂಗಳವಾರ ಮರೆಯಾಗುವ ಹೊತ್ತಿಗೆ ಅವರಿಗೆ ೮೪ ವರ್ಷ ವಯಸ್ಸಾಗಿತ್ತು. ಎರಡು ವರುಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ, ಒಂದು ಕಾಲನ್ನು ಕಳೆದುಕೊಂಡ ನಂತರ ಪತ್ನಿ ನಾಗರತ್ನ ಅವರ ಆಸರೆಯಾಗಿದ್ದರು.

ಯಕ್ಷಗಾನ, ಹರಿಕಥೆ, ತಾಳಮದ್ದಳೆ, ಬಯಲಾಟಗಳಲ್ಲಿ ಸುಮಾರು ಐದಾರು ದಶಕಗಳ ಕಾಲ ಮಿಂಚಿ, ಅಪ್ರತಿಮ ಮಾತುಗಾರನಾಗಿ, ಅಪೂರ್ವ ವಿದ್ವತ್ತಿನಿಂದ ಮೆರೆದವರು ಸಣ್ಣ ಸಾಮಗರು. ಅವರು ಚಲಿಸುವ ಜ್ಞಾನಕೋಶ ಎಂದರೆ ತಪ್ಪಾಗಲಾರದು. ತೆಂಕು-ಬಡಗು ತಿಟ್ಟುಗಳ ಕುರಿತ ಅಪೂರ್ವವೆನಿಸುವ ಅರಿವು ಅವರದ್ದು. ಮಾತ್ರವಲ್ಲ ತುಳು ಯಕ್ಷಗಾನ ಲೋಕವನ್ನು ಸುಮಾರು ೨ ದಶಕಗಳ ಕಾಲ ಆಳಿದವರು. ಅವರ ಕಾಂತು ಪೂಂಜನ ಪಾತ್ರವಂತೂ ಮರೆಯಲಸಾಧ್ಯ. ಉಡುಪಿಯ ರಾಜಾಂಗಣದಲ್ಲಿ ೨೦೦೮ರಲ್ಲಿ ನಡೆದ ಮೂರನೆ ಅಖಿಲ ಭಾರತ ಯಕ್ಷಗಾನ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅಚ್ಚರಿಯೆಂಬಂತೆ ಯಕ್ಷಗಾನದ ‘ಯಕ್ಷದಂಪತಿಗಳು’ ಎಂದೇ ಖ್ಯಾತರಾದ ಸಾಮಗರು ಮತ್ತು ಕೋಳ್ಯೂರು ರಾಮಚಂದ್ರ ರಾಯರಿಗೆ ಜೊತೆಯಾಗಿಯೇ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಒಲಿದಿತ್ತು. ಯಕ್ಷಗಾನದ ಹಿರಿ-ಕಿರಿಯ ಅದೆಷ್ಟೋ ಕಲಾವಿದರಿಗೆ ಸಮಕಾಲೀನರಾಗಿ ಅವರು ಆದರ್ಶಪ್ರಾಯರೂ ಹೌದು. ಸಂಸ್ಕೃತ, ಕನ್ನಡ, ಸಾಹಿತ್ಯ, ಸಂಗೀತ ಕ್ಷೇತ್ರದ ಆಳ ವಿದ್ವತ್ ಹೊಂದಿದ ಸಾಮಗರು, ತನ್ನ ಪಾತ್ರಗಳ, ವಿಶಿಷ್ಟ ಬಗೆಯ ವಾಗ್ಝರಿಯ ಮೂಲಕ ಯಕ್ಷಗಾನ ಲೋಕಕ್ಕೆ ಕೊಟ್ಟ ಕೊಡುಗೆ ಅವಿಸ್ಮರಣೀಯ. ಅವರ ಅಗಲುವಿಕೆ ಕಲಾದಿಗಂತದ ಕಪ್ಪುಚುಕ್ಕೆ.

Leave a Reply

*

code