ಅಂಕಣಗಳು

Subscribe


 

ನಿರೀಕ್ಷಿತ ನಡೆಗಳ ಮಾನಸಾಳ ಭರತನೃತ್ಯ ರಂಗಪ್ರವೇಶ

Posted On: Monday, August 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಮಾನಸಾ ರವಿಕುಮಾರ್

ಶ್ರದ್ಧಾ ಕುಮಾರ್ ಅವರ ಶಿಷ್ಯೆ ಮಾನಸಾ ರವಿಕುಮಾರ್ ಅವರ ಭರತನೃತ್ಯ ರಂಗಪ್ರವೇಶ ಜುಲೈ ೬ ರಂದು ಕೋರಮಂಗಲದ ಸತ್ಯಸಾಯಿ ಸಂಸ್ಕೃತ ಸದನದಲ್ಲಿ ಜರುಗಿತು.

ಕಳೆದ ೧೦ ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿರುವ ಮಾನಸಾ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಜೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಪ್ರಸ್ತುತ ಮಲ್ಯ ಅದಿತಿ ಇಂಟರ್ ನ್ಯಾಶನಲ್ ಸ್ಕೂಲ್‌ನಲ್ಲಿ ಪಿಯುಸಿ ವಿದ್ಯಾರ್ಥಿನಿ.

ರಂಗಪ್ರವೇಶದಲ್ಲಿ ನೃತ್ಯಬಂಧಗಳ ಆಯ್ಕೆ ಸಮಂಜಸವಾಗಿದ್ದು; ರಾಗಾಸ್ವಾದನೆಯಿಂದ ಚೇತೋಹಾರಿಯಾಗಿದ್ದಿತು. ರಾಗಮಾಲಿಕೆಗೆ ಹೆಣೆದ ಪೂರ್ವರಂಗ ಹಾಗೂ ನಾಟ ರಾಗದ ಪುಷ್ಪಾಂಜಲಿಗೆ ರಂಗಕ್ಕೆ ಅಡಿಯಿಟ್ಟ ಮಾನಸಾ, ದ್ವಾರಕೀ ಕೃಷ್ಣಸ್ವಾಮಿ ರಚಿತ ನಳಿನಕಾಂತಿ ಜತಿಸ್ವರಕ್ಕೆ ನೃತ್ತವನ್ನು ವಿನ್ಯಾಸಗೊಳಿಸಿದರು. ಪಂತುವರಾಳಿ ರಾಗದ ಅದ್ಭುತ ನಟನಂ ನಂತರ ಪುರಂದರದಾಸರ ಹಿಡಕೋ ಬಿಡಬ್ಯಾಡ ದೇವರನಾಮಕ್ಕೆ ಶ್ರದ್ಧಾ ಕುಮಾರ್ ಅವರ ಸಂಯೋಜನೆಯಲ್ಲಿ ಮೂಡಿಬಂದ ವರ್ಣವು ವರ್ಣನೃತ್ಯಬಂಧದ ಸಾಧ್ಯತೆಗಳನ್ನು ತಿಳಿಸಿಕೊಟ್ಟಿತಾದರೂ ; ಸಂಯೋಜನೆಯಲ್ಲಿ ಈ ವರ್ಣದ ವಿಭಿನ್ನ ನಡೆ ಹಾಗೂ ಕ್ಲಿಷ್ಟತೆಗೆ ಅನುಗುಣವಾಗಿ ಒಂದಷ್ಟು ನವಿರು ಸ್ಪರ್ಶವನ್ನೀಯುವ ಜತಿ ಮತ್ತು ಅಭಿನಯ ವಿಸ್ತಾರ ನಿರೀಕ್ಷಿತ. ಅಂತೆಯೇ ನೃತ್ತ, ಅಭಿನಯಗಳಿಗೆ ಚಾರಿ, ಕರಣ, ನೃತ್ತಹಸ್ತಗಳನ್ನು ಸೂಕ್ತರೀತಿಯಲ್ಲಿ ಅಳವಡಿಸಲಾಗಿದ್ದರೂ; ಅಂಗಾಗವಿಕ್ಷೇಪಗಳನ್ನು ಸಮರ್ಥವಾಗಿ ವಿನ್ಯಾಸಗೊಳಿಸುವಲ್ಲಿ ದೇಹಶ್ರಮದೊಂದಿಗೆ ಮಾನಸಿಕ ತನ್ಮಯತೆ ನಿರೀಕ್ಷಿತವೂ ಹೌದು. ಈ ಹಿನ್ನಲೆಯಲ್ಲಿ ಅಭ್ಯಾಸ, ಅನುಭವೀ ಅಭಿನಯದ ರೂಢಿಯು ಕಲಾವಿದೆಯ ಉಜ್ಜ್ವಲ ಭವಿಷ್ಯವನ್ನು ರೂಪಿಸುತ್ತದೆ.

ವರ್ಣದ ಆರಂಭಿಕ ತ್ರಿಕಾಲ ಜತಿಗೆ ಕಲಾವಿದೆ ಗತಿಗೆ ಹೊಂದಿಕೊಳ್ಳಲು ಒಂದಷ್ಟು ಶ್ರಮ ಪಡಬೇಕಾಯಿತಾದರೂ; ಮಾನಸಾಳ ದೇಹದ ಕಸುವು ವರ್ಣದ ನಿರೂಪಣೆಯಲ್ಲಿ ಬಿಗಿಯನ್ನಿತ್ತದ್ದೂ ಅಭಿನಂದನೀಯ. ಕೀರವಾಣಿ ರಾಗದಲ್ಲಿ ಹೊಸೆದದೇವಿ ನೀಯೆ ತುಣೈ ಪದ, ಮಿಶ್ರಕಾಫಿ ರಾಗದ ಮೀರಾ ಭಜನ್, ಮಿಶ್ರ ಶಿವರಂಜನಿ ರಾಗದ ತಿಲ್ಲಾನವು ಕಲಾವಿದೆಯಲ್ಲಡಗಿದ ಪ್ರತಿಭೆಯನ್ನು ಊರ್ಧ್ವಮುಖಿಯಾಗಿ ವಿಕಾಸಗೊಳಿಸುತ್ತಾ ಸಾಗಿದವು. ಅದರಲ್ಲೂ ಮೀರಾ ಭಜನ್‌ನಲ್ಲಿ ಕಲಾವಿದೆಯಿಂದ ಮತ್ತಲ್ಲೀ, ಅರ್ಧಮತ್ತಲ್ಲೀ, ಏಡಕಾಕ್ರೀಡಿತ ಚಾರಿ-ಕರಣಗಳು ಸುಂದರವಾಗಿ ವಿನ್ಯಾಸಗೊಂಡು ಸೊಬಗನ್ನಿತ್ತವು.

ನೃತ್ಯ ಕಲಾವಿದರ ದೇಹ ಪುಷ್ಟಿಗೊಂಡರೆ ಕರಣಗಳ ವಿನಿಯೋಗಕ್ಕೆ ಹೆಚ್ಚಿನ ಸೌಂದರ್ಯ ತರಬಹುದು. ಸತತ ಅಭ್ಯಾಸವು ಹೆಜ್ಜೆಗಳ ದೃಢತೆಯನ್ನು ಮತ್ತಷ್ಟು ಹೆಚ್ಚಿಸುವುದಲ್ಲದೆ ಕರಣ, ಅಡವುಕ್ರಮಗಳಲ್ಲಿ ತೋರಿಬರಬಹುದಾದ ಅನೌಚಿತ್ಯ ಬಾಗುಬಳಕುವಿಕೆಗಳನ್ನು ನಿಯಂತ್ರಿಸಬಲ್ಲುದು. ರೌದ್ರ, ಭೀಭತ್ಸಾದಿ ರಸಗಳಿಗೆ ಕುಂಚಿತಾದಿ ಪುತಭೇಧಗಳ (ಕಣ್ಣುಗುಡ್ಡೆ) ವ್ಯತ್ಯಾಸವನ್ನು ಅರಿಯುವುದರಿಂದ ಅಭಿನಯ ಮತ್ತಷ್ಟು ಸ್ಪಷ್ಟ ಮತ್ತು ಪರಿಣಾಮಕಾರಿಯಾಗುತ್ತದೆ. ಶಿವರಂಜಿನಿ ತಿಲ್ಲಾನವು ಲಯದೃಷ್ಟಿಯಿಂದ ಇನ್ನಷ್ಟು ಚುರುಕುಗೊಳ್ಳುವುದು ಅಪೇಕ್ಷಿತ.

ಕಾಂಚನ ಸಹೋದರಿಯರಾದ ಶ್ರೀರಂಜನಿ ಮತ್ತು ಶ್ರುತಿ ರಂಜನಿ ಅವರದ್ದು ನೃತ್ಯಗಾಯನಕ್ಕೆ ಮಾನಸೋಲ್ಲಾಸ ಸ್ಪರ್ಶವನ್ನಿತ್ತಿದೆ. ನಟ್ಟುವಾಂಗದಲ್ಲಿ ಶ್ರದ್ಧಾಕುಮಾರ್, ಮೃದಂಗದಲ್ಲಿ ಹರ್ಷ ಸಾಮಗ, ಪಿಟೀಲಿನಲ್ಲಿ ಜೆ. ಕೆ. ಶ್ರೀಧರ್, ಕೊಳಲಿನಲ್ಲಿ ಕಾರ್ತಿಕ್ ಸಾತವಳ್ಳಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ನೃತ್ಯಸೂಕ್ಷ್ಮಗಳ ಅನಾವರಣದ ಹಿನ್ನಲೆಯನ್ನೀಯುವಲ್ಲಿ ಶತಾವಧಾನಿ ಡಾ. ಆರ್ ಗಣೇಶ್ ಮತ್ತು ಶ್ಯಾಮಲಾ ಭಾವೆ ಅತಿಥಿಗಳಾಗಿ ಆಗಮಿಸಿದ್ದದ್ದು ಕಾರ್ಯಕ್ರಮಕ್ಕೆ ಉತ್ತಮ ನಿಲುವನ್ನು ಕೊಟ್ಟಿತು.

ಮಾನಸಾಳ ಗುರು ಶ್ರದ್ಧಾ ಕುಮಾರ್ ಡಾ. ಪದ್ಮಾಸುಬ್ರಹ್ಮಣ್ಯಂ ಗರಡಿಯಲ್ಲಿ ಪಳಗಿದ, ದಿವಂಗತ ಸುಂದರೀ ಸಂತಾನಂ ಅವರ ಶಿಷ್ಯೆ. ಕರ್ನಾಟಕದಲ್ಲಿ ಭರತನೃತ್ಯದ ಸಮರ್ಥ ಹರಡುವಿಕೆಯಲ್ಲಿ ಸುಂದರೀ ಸಂತಾನಂ ಅವರ ಕೊಡುಗೆ ದೊಡ್ಡದು. ಅವರ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸುವುದರಲ್ಲಿ ಶಿಷ್ಯರಿಗೆ ಹೆಚ್ಚಿನ ಕರ್ತವ್ಯವಿದೆ.

———————-

Leave a Reply

*

code