ಅಂಕಣಗಳು

Subscribe


 

೨ ವರುಷ ತುಂಬಿದ ಸಂಭ್ರಮ

Posted On: Sunday, February 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಜ಼ೆರಾಕ್ಸ್ ಪ್ರತಿಯಾಗಿ ನಮ್ಮ ಕೈಗಳಲ್ಲಿ ಕಣ್ಣು ತೆರೆದಿತ್ತು ಮೊದಲ ತಿಂಗಳ ನೂಪುರ ಭ್ರಮರಿ. ಅಂದು ಫೆಬ್ರವರಿ ೧೦, ೨೦೦೭. ಅದೇ ತಿಂಗಳ ಶಿವರಾತ್ರಿಯ ಹೊತ್ತಿಗೆ ನರ್ತನ ಜಗತ್ತಿನ ಸಾಧ್ಯತೆಗಳನ್ನು ಬಿಡುಗಣ್ಣುಗಳಿಂದ ನೋಡಿ. ಕ್ರಮೇಣ ಪಿಡಿ‌ಎಫ್ ಪ್ರತಿಯಾಗಿ, ನಂತರ ಮುದ್ರಿತಗೊಳ್ಳುವ ಹೊತ್ತಿಗೆ ಒಂದು ವರ್ಷ ಸಂದಿದ್ದವು.
ಮತ್ತದೇ ಫೆಬ್ರವರಿ, ೧೦ನೇ ದಿನ. ವರುಷ ತುಂಬಿದ ಸಂಭ್ರಮಕ್ಕೆ ಸಾಕ್ಷಿ ಯಾದದ್ದು ೨೦೦೮. ಅಂಬೆಗಾಲಿಕ್ಕಿ ಬಂದ ಹಾದಿಯನ್ನು ಒಮ್ಮೆ ಹಿಂತಿರುಗಿ ನೋಡುವ ಪ್ರಯತ್ನ- ಮಡಿಕೇರಿಯ ಭಾರತೀಯ ವಿದ್ಯಾ ಭವನದಲ್ಲಿ. ಜೊತೆಗೊಂದು ಓದುಗರ, ಬಳಗದ ಹಾರ್ದಿಕ ಸಮ್ಮಿಲನ. ಕಾರ್ಯಕ್ರಮ ಮುಗಿಯುವ ವೇಳೆಗೆ ವೆಬ್‌ಸೈಟ್ ಎಂಬ ಅಂಗಿ ತೊಟ್ಟ ಕಿಶೋರಿಗೆ ಅಭಿನಂದನೆಗಳ ಮಹಾಪೂರ ಬೆನ್ನುತಟ್ಟಿ ಹರಸಿತ್ತು.
ಸದಭಿರುಚಿಯ ಸಾಧನೆಗೆ ತೊಡಕುಗಳು ಹಲವಾರು. ಆದರೂ ನಂತರದ ಪಯಣಕ್ಕೆ ಹೊಸ ಮಿತ್ರರು, ಹೊಸ ಬಳಗ ಜೊತೆಯಾಗಿ ನಿಂತು ಕೈಜೋಡಿಸಿದ್ದರು. ಆತ್ಮೀಯತೆಯಿಂದ ಬರಮಾಡಿಕೊಂಡವರು ಪರಸ್ಪರ ಕೊಡುಕೊಳ್ಳುವಿಕೆಯ ಅಗತ್ಯ, ಅನಿವಾರ್ಯತೆಗಳಿಗೆ ಸ್ಪಂದಿಸಿದರು. ಮೂದಲಿಕೆ, ಅನಗತ್ಯ ಸಲಹೆಗಳು, ಸ್ವಹಿತಾಸಕ್ತಿಗಳಿಗೆ ಬಳಸಿಕೊಳ್ಳುವ ಹುನ್ನಾರ, ತಪ್ಪು ತಿಳಿವಳಿಕೆ, ಔಪಚಾರಿಕ ಮನ್ನಣೆಗಳ ಪ್ರಪಾತವನ್ನು ದಾಟಿ ಹೋಗುವಲ್ಲಿ ಮನಸು ಮನಸ್ಸಿಗೆ ಸೇತು ಕೂಡಿಸಿದವರು ಕನಸಿನ ವ್ಯಾಪ್ತಿಯನ್ನು ಹಿರಿದುಗೊಳಿಸಿದರು. ಉದಾಸೀನವೋ, ನಿರ್ಲಕ್ಷ್ಯವೋ- ಒಟ್ಟಿನಲ್ಲಿ ಪ್ರತಿಕ್ರಿಯಿಸುವವರ ಕೊರತೆಯ ನಡುವೆಯೂ ಅರಿವಿನ ಕಿಚ್ಚಿಗೆ ಎಣ್ಣೆ ಎರೆಯುತ್ತಲೇ ಬಂದ ಹಲವರು ಬೆಂಗಾವಲಾಗಿ ನಿಂತರು. ಅವರಲ್ಲೆರೂ ಸ್ಮರಣಿಯರು.
ಅನುಭವವು ಸವಿಯಲ್ಲ. ಅದರ ನೆನಪೇ ಸವಿಯು…
 ಕೆಲವು ತಪ್ಪುಗಳಿರಬಹುದು, ಒಪ್ಪುಗಳಿರಬಹುದು. ತರ್ಕ-ವಿತರ್ಕ, ವಾದ, ಟೀಕೆ-ಟಿಪ್ಪಣಿಗಳಿರಬಹುದು. ಹೀಗೆ, ಬೆಳವಣಿಗೆಯ ಹಾದಿಗೆ ಬೇಕಾದ ಹೊಸ ದಿಕ್ಕನ್ನು ಹುಡುಕಿಕೊಳ್ಳುವಲ್ಲಿ ಭಿನ್ನತೆಯ ನಡುವೆಯೂ ಭಾವನೆಗಳು ಬೆಸೆದಿತ್ತು. ಕಟ್ಟಿದ ಕನಸುಗಳ ಕದಡುವಿಕೆ ಮತ್ತು ಕಣ್ಣೀರಿನ ಬೆಲೆ ತೆರಬೇಕಾಗಿ ಬಂದಾಗಲೂ, ಸಿದ್ಧಾಂತಗಳಿಗೆ ರಾಜಿ ಮಾಡಿಕೊಳ್ಳದೇ ಇದ್ದ ನೆಮ್ಮದಿ ಸಮಾಧಾನ ನೀಡಿತ್ತು. ಎಷ್ಟೋ ಬಾರಿ ನಾವಾಗೇ ಕಟ್ಟಿಕೊಂಡ ಭ್ರಮೆಗಳು ಕಳಚಿ ಬೀಳುವವರೆಗೂ, ಬಿದ್ದ ಭ್ರಮೆಗಳು ಭರವಸೆಯ ಕುಡಿಗಳಾಗಿ ಚಿಗುರೊಡೆಯುವವರೆಗೂ ಸಾಕಷ್ಟು ಏಳುಬೀಳು, ನೋವು ನಲಿವುಗಳನ್ನು ಕಂಡುಕೊಂಡಳು ನೂಪುರ ಭ್ರಮರಿ.
ಹೌದು, ಈ ೨೦೦೯ರ ಫೆಬ್ರವರಿಗೆ ಎರಡು ವಸಂತ ಕಳೆದು ಮೂರನೇ ಸಂವತ್ಸರಕ್ಕೆ ಕಾಲಿಡುವ ಸಂಭ್ರಮ !
 ಕಲೆಯ ಕುರಿತಾಗಿ ಈಗಾಗಲೇ ಹಲವು ಸದಭಿರುಚಿಯ ಗುರಿ, ಉದ್ದೇಶಗಳನ್ನಿಟ್ಟುಕೊಂಡು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವ ಪತ್ರಿಕೆಗಳಿವೆ. ಅವುಗಳ ಸಾಲಿನಲ್ಲಿ ನೂಪುರವನ್ನು ನೋಡುವ ಆಲೋಚನೆಯಿದೆ, ಆದರೆ ಅವುಗಳೆಲ್ಲವನ್ನು ಹಿಂದಿಕ್ಕಿ ಪ್ರಭುತ್ವ ಸಾಧಿಸಬೇಕೆಂಬ ಹಟ ಹೊತ್ತು ಹೊರಟದ್ದಲ್ಲ ನೂಪುರದ ಪಯಣ.
ಇಂದಿನ ಕಾಲಕ್ಕೆ ಆರೋಗ್ಯಕರ ಸ್ಪರ್ಧೆಯ ಹಿಂದೆಯೂ ಒಂದಷ್ಟು ಮೇಲಾಟಗಳು ಸಾಮಾನ್ಯ. ಆದ್ದರಿಂದ ಪ್ರಾರಂಭಗೊಂಡ ಹಂತದಿಂದಲೂ ಭ್ರಮರಿಯ ಈವರೆಗಿನ ಬೆಳವಣಿಗೆಯುದ್ದಕ್ಕೂ ಇದ್ದದ್ದು- ತನ್ನನ್ನು ತಾನು ಮೀರಿ ಬೆಳೆಯಬೇಕೆನ್ನುವ ಹಂಬಲ. ಆ ಹಂಬಲದಲ್ಲೇ ಭವಿಷ್ಯಕ್ಕೆ ಭರವಸೆಯ ಗೋಪುರವನ್ನು ಕಟ್ಟುತ್ತಿದ್ದೇವೆ. ಕಲೆಯ ಕನವರಿಕೆಯಲ್ಲಿ ಕೈಮರವಾಗುವ ಪುಟ್ಟ ಸ್ವಾರ್ಥ. 
ಸೃಜನಶೀಲ ಆಯಾಮದಲ್ಲಿ ವಿನ್ಯಾಸ, ಬರೆಹ, ಶೈಲಿ ಎಲ್ಲದರಲ್ಲೂ ಪರಿಣಾಮಕಾರಿಯಾಗಿ ಬೆಳೆಯುತ್ತಾ, ಹೂರಣದೊಂದಿಗೆ ಆವರಣವನ್ನು ಹಿಗ್ಗಿಸಿಕೊಂಡು ಹೋಗುವ ಸಂಕಲ್ಪ ; ವಿಶಾಲ ವೈವಿಧ್ಯಮಯ ನರ್ತನ ಜಗತ್ತನ್ನು ಕಂಡುಕೊಳ್ಳುವ ರೀತಿ ಅಷ್ಟು ಸುಲಭವಲ್ಲವಾದರೂ ಕಲೆಯ ವಿವಿಧ ಆಯಾಮಗಳತ್ತ, ಜೊತೆಗೆ ನಮ್ಮೊಳಗಿನ ಪ್ರಜ್ಞೆಯನ್ನು ಎಚ್ಚರಿಸುತ್ತಾ ಸಾಗುವ ನಿಲುವು. ಏಕಕಾಲಕ್ಕೇ ಗುರುಹಿರಿಯರನ್ನೂ, ಕಲಾವಿದರನ್ನೂ, ಅಭ್ಯಾಸಿಗಳನ್ನೂ, ಎಳೆಯರನ್ನು ಮತ್ತು ಸಮಕಾಲೀನ ಮನಸ್ಸುಗಳನ್ನು ತಲುಪಬೇಕೆಂಬ ನಿತ್ಯ ಒಲವಿನಲ್ಲಿರುವ ಭ್ರಮರಿಗೆ ಆಯಾಯ ಕಾಲದ ಅಗತ್ಯಗಳನ್ನು ಪೂರೈಸುವುದು ಸವಾಲಿನ ವಿಷಯವೇ ಹೌದು.
ಗುರಿಯನ್ನು ಮುಟ್ಟುವ ತೃಪ್ತಿಗಿಂತಲೂ ಅದನ್ನು ತಲುಪುವ ಹಾದಿಯಲ್ಲಿನ ಪಯಣವೇ ರೋಮಾಂಚಕ ಮತ್ತು ಸವಾಲಿನ ಜೀವನಾನುಭವ.
ಈ ದಿಸೆಯಲ್ಲಿ ಕಲೆಯ ಮತ್ತು ಅದರೊಂದಿಗಿನ ಜೀವನಪ್ರೀತಿಯನ್ನು ಪೋಷಿಸುವ ಮತ್ತು ನಿತ್ಯ ನವೀಕರಿಸಿಕೊಳ್ಳುವ ದೃಷ್ಟಿಯಿಂದ ಮುನ್ನಡೆದರಷ್ಟೇ, ನಮ್ಮ ಕಾರ್ಯಗಳು ಜೀವನಮುಖಿಯೆನಿಸಿಕೊಳ್ಳುತ್ತವೆ. ಬದಲಾವಣೆಯ ಕಾಲಘಟ್ಟಕ್ಕೆ ಪೂರಕವಾಗಿ ನಡೆಯಬೇಕೆಂಬ ಉದ್ದೇಶಗಳನ್ನಿಟ್ಟು ನಡೆದರೆ ; ಕಲೆಯು ಕೇವಲ ಸಾಂಪ್ರದಾಯಿಕ, ಸಾಂಸ್ಕೃತಿಕ  ಅಗತ್ಯಗಳನ್ನಷ್ಟೇ ಪೂರೈಸುವುದಕ್ಕೆ ಸೀಮಿತವಾಗದೆ ಸಾಮಾಜಿಕ ಅಗತ್ಯ ಮತ್ತು ಪ್ರಜ್ಞೆಯನ್ನು ಪೂರೈಸಿಕೊಂಡು, ಪ್ರಸ್ತುತವೆನಿಸುತ್ತದೆ. ಪರಂಪರೆಯ ಜೊತೆಗೆ ವಿನೂತನ ನಡೆಯನ್ನು ಮುಕ್ತವಾಗಿ ಒಪ್ಪಿ, ತಿದ್ದಿ ನಡೆಯುವ, ಅದರೊಂದಿಗೆ ಚಲನಶೀಲತೆ ಮತ್ತು ಗುಣಮಟ್ಟದ ಬದಲಾವಣೆಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇರುವವರೆಗೆ ಕಲೆಯ ಕಡೆಗೆ ನೋಡುವ ಪ್ರತೀ ದೃಷ್ಠಿಯೂ ಹೊಸತೆನಿಸುತ್ತದೆ.
ಕಲೆ ಎಲ್ಲರಿಗೂ ಅರ್ಥವಾಗಬಲ್ಲ ವಿಶ್ವಭಾಷೆ. ಆದರೆ ಕಲೆಯ ವ್ಯಾಕರಣ ಒಂದಷ್ಟು ತಾಂತ್ರಿಕ. ಆದ್ದರಿಂದಲೇ ನಿರ್ದಿಷ್ಟ ವರ್ಗಕ್ಕೆ ಸೀಮಿತ ಎಂಬ ಭಾವನೆ ಎಲ್ಲೋ ಗುರು ಕಲಾವಿದ ಪ್ರೇಕ್ಷಕರಾದಿಯಾಗಿ ಆಳದಲ್ಲಿ ಬೇರೂರಿದೆ. ಆದರೂ ಸರಳೀಕರಿಸಿಕೊಳ್ಳ್ಳುವ ಹಸಿವು. ಅದಷ್ಟು ಸುಲಭವಲ್ಲದಿದ್ದರೂ ಆಸಕ್ತ ಕಲಾರಸಿಕರ, ಪ್ರೇಕ್ಷಕರ ಬಳಿಗೊಯ್ದು ಮುಟ್ಟಿಸಬೇಕೆಂಬ ಹಟ. ಅದೇ ಕನಸು ಕಂಗಳ ಜಾತ್ರೆ ಪ್ರತೀಕ್ಷಣಕ್ಕೂ ನನಸಿನ ರಥವೇರಬೇಕೆಂಬ ಅದಮ್ಯ ಆಸೆ. ಇಂತಹ ಆಸೆಯ ಮೂಟೆ ಹೊತ್ತ ಬಳಗ ಪ್ರತೀ ಸಂಚಿಕೆಯ ಪ್ರಸವಕ್ಕೂ ಆಗ ತಾನೇ ಹುಟ್ಟಿದ ಮಗುವಿನ ಅಳುವನ್ನು ಸಮಧಾನಿಸುವ ಹೊಸ ತಾಯಿಯಾಗುತ್ತಿರುವುದು, ಆರೈಕೆ ಬೇಡುವ ಕಂದಮ್ಮನಿಗೆ ಇರುವ ಅನುಕೂಲಗಳ ನಡುವೆಯೇ ಸಾರ್ಥಕ್ಯ ಕಾಣಿಸುವ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ಧನ್ಯತೆಯ ಕ್ಷಣ.
ಕಿರಿಯವಳೆನ್ನುತ್ತಲೇ ತನ್ನ ವ್ಯಾಪ್ತಿ ಸಾಧ್ಯತೆಗಳನ್ನು ಹಿಗ್ಗಿಸಿಕೊಳ್ಳುವ ಹಂತದಲ್ಲಿರುವ ನೂಪುರ ಭ್ರಮರಿಯ ಅಂಗಳ, ಮೂರು ವರ್ಷದ ಸಂಭ್ರಮಕ್ಕೆ ಮತ್ತಷ್ಟು ತುಂಬಿದೆ. ಒಳ್ಳೆಯ ಲೇಖನಗಳು, ಚಿಂತನ-ಮಂಥನಗಳು ಭ್ರಮರಿಯ ಮಡಿಲನ್ನು ಸಮೃದ್ಧವಾಗಿಸಿದೆ. ನಾಟ್ಯ ಜಗತ್ತಿನ ವಿಸ್ಮಯ ಗಳಿಗೆ `ಸಾಥ್’ ಕೊಟ್ಟು ನುಡಿದವರ ಅಂತರಂಗದ ದನಿಯಿದೆ. ಇನ್ನು ಬೇಕಿರುವುದು ನಿಮ್ಮ ಬೆಂಬಲ, ಪ್ರೋತ್ಸಾಹ, ಆಶೀರ್ವಾದ. ಅದಿರುವವರೆಗೂ ತುಡಿತ-ಮಿಡಿತಗಳ ಈ ಪಯಣ ನಿರಂತರ. 
ಪ್ರೀತಿಯಿಂದ,
 ಸಂಪಾದಕರು

Leave a Reply

*

code