ಅಂಕಣಗಳು

Subscribe


 

ಮದುವೆ ಕಲಾವಂತಿಕೆಗೆ ಅಡ್ಡಿಯೇ?

Posted On: Monday, December 15th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ತ್ತೀಚೆಗೆ ಮತ್ತೊಮ್ಮೆ ಕಾರ್ಯಕ್ರಮವೊಂದರಲ್ಲಿ ಈ ಮಾತುಗಳು ಪ್ರತಿಧ್ವನಿಸಿದವು. ’ಮದುವೆಯಾದ ನಂತರ ಸ್ತ್ರೀಯರು ನೃತ್ಯ ಮಾಡುವುದು, ಪ್ರದರ್ಶನ ನೀಡುವುದು ಅಷ್ಟು ಸಮಂಜಸವಲ್ಲ ಎಂಬ ಮನಸ್ಸು ಇಂದಿಗೂ ಇದೆ. ಬೇಕಾದರೆ ಗುರುವಾಗಿ ಮುಂದುವರಿಯಬಹುದೇನೋ ! ಒಂದು ವೇಳೆ ಪ್ರದರ್ಶನ ಕೊಟ್ಟರೂ ಕೂಡಾ, ’ ಅವಳಾ ! ಕುಣೀತಾಳೆ, ಕೊಣಿಪ್ಪೆ( ಪ್ರಾದೇಶಿಕ ಶಬ್ದ) ಎಂಬ ಬಿರುದಾವಳಿ !’ ಮನಸ್ಸು ಯಾಕೋ ಚುಳ್ಳೆನಿಸಿತು…

ಅಲಿಖಿತ ಸಂಪ್ರದಾಯಗಳು ಎಷ್ಟೋ ಪ್ರತಿಭಾವಂತ ಕಲಾವಿದರನ್ನು ಮನಸ್ಸಿನಲ್ಲೇ ಕೊರಗುವಂತೆ ಮಾಡುತ್ತಿರುವುದು ಹೌದು. ಹಾಗಾಗಿ ರಂಗಕ್ಕೆ ಬರುವ ಕಲಾವಿದರಿಗಿಂತಲೂ ಪ್ರತಿಭೆ ಇದ್ದರೂ ತೆರೆಮರೆಯಲ್ಲೇ ಸರಿದು ಒಂದು ಕಾಲಕ್ಕೆ ’ನಾನೂ ಹಿಂದೊಮ್ಮೆ ಡ್ಯಾನ್ಸ್ ಕಲಿತಿದ್ದೆ’ ಎಂದು ಹೇಳುವವರ ಸಂಖ್ಯೆಯೇ ಅಧಿಕ. ವಿದ್ಯಾಭ್ಯಾಸ-ಎಸ್‌ಎಸ್‌ಎಲ್‌ಸಿ- ಪಿಯುಸಿ ಪರೀಕ್ಷೆಗಳ ನೆಪವೊಡ್ಡಿಯೋ, ’ಅಷ್ಟು ಬೆಲೆ ಬಾಳುವ ಕಲೆ ನಮ್ಮಂತವರಿಗಲ್ಲ. ನಮ್ಮಿಂದ ಸುಧಾರಿಸಲಿಕ್ಕಾಗಲಿಕಿಲ್ಲ’ ಎಂಬ ಅಸಹಾಯಕತೆಯನ್ನು ಮುಂದುಮಾಡಿಯೋ, ’ವಯಸ್ಸಾಯಿತು. ನೋಡಿವರು ಏನೆಂದಾರು? ಅಷ್ಟಕ್ಕೂ ಮಧ್ಯ ವಯಸ್ಸು ಕಳೀತು ಅಂದರೆ ಡ್ಯಾನ್ಸ್ ಮಾಡ್ಲಿಕಾಗುತ್ತಾ ! ಮುಖ ನೆರಿಗೆ ಕಟ್ಟಿ, ಸೊಂಟದ ಸುತ್ತ ಟಯರ್ ಬಂದ ಮೇಲೆ ಮಾಡಲಿಕ್ಕಾದ್ರೂಮೈ ತಿರುಗಬೇಕೇ ! ಮಾಡಿದ್ರೂ ಮುದುಕಿಯರ ಡ್ಯಾನ್ಸ್ ನೋಡೋರ್ಯಾರು’ ಎಂಬ ಅಸಡ್ಡೆಯಿಂದಲೋ ಹರೆಯ, ವಯಸ್ಸಿನ ಕಾರಣವೊಡ್ಡಿ ಹೆಣ್ಣು ಮಕ್ಕಳನ್ನು ಹಿಂದಕ್ಕೆಳೆಸುವ ಪ್ರವೃತ್ತಿ ಇಂದಿಗೂ ಬೇರೂರಿದೆ. ಎಷ್ಟೋ ಬಾರಿ ರಂಗಪ್ರವೇಶ ಮಾಡಿ ಶಹಬ್ಭಾಸ್ ಅನ್ನಿಸಿಕೊಂಡವರೂ, ನೃತ್ಯದಲ್ಲಿ ಡಿಗ್ರಿ ಪಡೆದವರೂ, ಉತ್ತಮ ಅಭಿವ್ಯಕ್ತಿವುಳ್ಳವರೂ ಸಮಾಜ-ಕುಟುಂಬಗಳಲ್ಲಿನ ಕಿರಿಕಿರಿಗಳಿಂದಾಗಿ ಬತ್ತಿ ಹೋಗುತ್ತಿದ್ದಾರೆ.

ಹೀಗಾಗಿ ನಮ್ಮ ಕಣ್ಣ ಮುಂದೆಯೇ ನೃತ್ಯವನ್ನು ಒಂದಲ್ಲ ಒಂದು ರೀತಿಯಲ್ಲಿ ಇಂದಿಗೂ ಕಾಡುತ್ತಿರುವ ಒಂದಷ್ಟು ಮರೆಯಲ್ಲಿರುವ ಅಸ್ಪೃಶ್ಯತೆಗೆ ಎಷ್ಟೋ ಹೆಣ್ಣು ಮಕ್ಕಳು ಪ್ರತಿಭೆಯಿದ್ದರೂ ಸೊರಗುತ್ತಿದ್ದಾರೆ. ಕೊನೆಗೆ, ಅಪರೂಪಕ್ಕೆಂಬಂತೆ ಸ್ತ್ರೀಯರು ಗುರುಗಳಾಗಿ ಮಾತ್ರ ಉಳಿದುಕೊಳ್ಳುತ್ತಾ, ಅವರಲ್ಲಿರುವ ಕಲಾವಿದರ ಅಭಿವ್ಯಕ್ತಿಗೆ ಪುಷ್ಠಿ ದೊರೆಯದಿರುವುದು ಕಲೆಯ ದೃಷ್ಟಿಯಿಂದ ಹಿಮ್ಮುಖ ಬೆಳವಣಿಗೆಯೇ ಹೌದು. ಆದರೆ ಇದರ ಬಿಸಿ ಮೇಲ್ಮಧ್ಯಮ ವರ್ಗ ಮತ್ತು ಅದರಾಚೆಗಿನ ಶ್ರ್ರೀಮಂತ ವರ್ಗವನ್ನು ಅಷ್ಟಾಗಿ ಕಾಡುತ್ತಿಲ್ಲ.

ಈ ಪ್ರವೃತ್ತಿ ಗಂಡು ಮಕ್ಕಳನ್ನು ಬಿಟ್ಟಿಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯ ನೃತ್ಯವಾದರೆ ಸರಿ, ಇಲ್ಲವೇ ಅಷ್ಟಾಗಿ ಹೆಸರಿಗೆ ಬಾರದೆ ಶಾಸ್ತ್ರೀಯ ನೃತ್ಯಪಟುಗಳಾಗಿ ನೃತ್ಯವಾದರೆ ಸರಿ, ಇಲ್ಲವೇ ಅಷ್ಟಾಗಿ ಹೆಸರಿಗೆ ಬಾರದೆ ಶಾಸ್ತ್ರೀಯ ನೃತ್ಯಪಟುಗಳಾಗಿ ಚಾಲ್ತಿಯಲ್ಲಿದ್ದರೆ, ಲೇವಡಿ ಮಾಡುವವರ ಗುಂಪೇ ಹೆಚ್ಚಿದೆ. ನೃತ್ಯದ ಪ್ರಧಾನ ಅಂಗವಾದ ಲಾಸ್ಯಕ್ಕೆ ಮೈಯನ್ನು ಒಗ್ಗಿಸುವಾಗ ಕುಚೇಷ್ಟೇಯ ನಗು ಬೀರುವವರಿಗೇನೂ ಕಡಿಮೆಯಿಲ್ಲ. ಅಷ್ಟೇ ಅಲ್ಲದೆ ಕಲಾವಿದರ ವೈಯಕ್ತಿಕ ಜೀವನವನ್ನೂ ಕೆದಕಿ ರಾಡಿ ಮಾಡುವ, ಮಾತಾಡುವ ಪ್ರವೃತ್ತಿಯಿಂದಾಗಿ ಬೇಸತ್ತವರು ಒಂದಡೆಯಾದರೆ, ಅಗತ್ಯ ಪ್ರೋತ್ಸಾಹ ಸಿಗದೇ ನೊಂದು, ತಮಗಾಗದೆಂದು ಹಿಂದೆ ಸರಿದುಹೋದವರು ಸಾಕಷ್ಟು ಮಂದಿ.

ಈ ಮನೋಭಾವ, ಕರ್ನಾಟಕದ ಕಲೆ ಯಕ್ಷಗಾನವನ್ನೂ ಗಾಢವಾಗಿ ತಟ್ಟಿದೆ. ಇದರಿಂದಾಗಿ ಭವಿಷ್ಯದ ದಿನಗಳಲ್ಲಿ ಭರವಸೆಯ ಕಲಾವಿದರು ಬೆಳೆಯುವುದು ಅಪರೂಪವಾಗಬಹುದೆಂಬ ಶಂಕೆ ಹಿರಿಯ ಕಲಾವಿದರನ್ನು ಕಾಡದೇ ಬಿಟ್ಟಿಲ್ಲ. ಈಗಾಗಲೇ ಹವ್ಯಾಸಿಗಳಾಗುತ್ತಾ ಹೊಗುವ ಕಲಾವಿದರನ್ನು ಮತ್ತು ಸ್ತ್ರೀಯರು ಯಕ್ಷಗಾನವನ್ನು ಕಲಿತರೂ ಹಲವು ಮನಸ್ಥಿತಿ, ಕಾಲ ಅಭಿಪ್ರಾಯದಿಂದಾಗಿ ಮುಂದುವರಿಯಲು ಸಾಧ್ಯವಾಗದಿರುವುದನ್ನು ನೋಡಿದಾಗ, ಮುಂದೊಮ್ಮೆ ಯಕ್ಷಗಾನ ಮೇಳಗಳ ತಿರುಗಾಟದ ಸಹಿತ ಕಲೆಯು ಕೇವಲ ಗ್ರಂಥಗಳಲ್ಲಿ ಇತಿಹಾಸವಾಗಿಯೋ, ಚಿತ್ರಪಟದ ವಸ್ತುವಾಗಿಯೋ ಹೋದರೆ ಆಶ್ಚರ್ಯವಲ್ಲ.

ಇವೆಲ್ಲದನ್ನೂ ಮೀರಿ ನಿಂತು ಶ್ರದ್ಧೆಯಿಂದ ಕಲಿತು ಸಾಧಿಸುವವರು ಬಹಳ ವಿರಳ. ಅದಕ್ಕೆ ಪ್ರತಿಭೆಯೊಂದಷ್ಟೇ ಅಲ್ಲ, ಕಾಲ, ದೇಶ, ಮನಸ್ಸು, ಅನುಕೂಲ, ಸಹಕಾರ, ಕೊನೆಗೆ ಅದೃಷ್ಟ ಕೈ ಹಿಡಿದರೆ ಮಾತ್ರ ಕಲೆ ಒಲಿದೀತು ಎನ್ನುವುದು ಖಂಡಿತವಾಗಿಯೂ ಸತ್ಯ. ಅದರಲ್ಲೂ ನೃತ್ಯ ಕಲಿಕೆ ಮತ್ತು ಸಾಧನೆಯ ಪಾಲಿಗಂತೂ ಇದು ಪಲಾಯನಾವಾದದ ಮಾತಾಗಲಿಕ್ಕಿಲ್ಲ.

ಕಲೆಯ ಚಲನೆಯಲ್ಲಿ ನೂರೆಂಟು ವಿಘ್ನಗಳು ಬರುವುದು ಸಹಜ. ಆದರೆ ಕಲಾರಾಧನೆಯಲ್ಲಿ ನಿಜಕ್ಕೂ ಅಚಲ ಮನಸ್ಸಿದ್ದರೆ ಕಲೆ ಖಂಡಿತಾ ಕೈ ಬಿಡದು. ಮಾತ್ರವಲ್ಲ, ಇನ್ನಾವುದೇ ಕ್ಷೇತ್ರ ನೀಡದಷ್ಟು ತೃಪ್ತಿ, ಹರಕೆ-ಹಾರೈಕೆ-ಅಭಿಮಾನಗಳನ್ನು ನೀಡುವ ಶಕ್ತಿ ಕಲೆಗೊಂದೇ ಸರಿ ! ಹಾಗಾಗಿಯೇ ಹಿರಿಯರು ಹೇಳುವುದಿದೆ, ’ ಕಲೆಗೆ ಎಂದಿದ್ದರೂ ಬೆಲೆಯಿದೆ.’ ಏಕೆಂದರೆ ಕಲೆ ವಿಶ್ವ ಭಾಷೆ ! ಮೂಕನನ್ನೂ ಮಾತಾಡಿಸಬಲ್ಲ ವಿಶಿಷ್ಟ ಜಗತ್ತು.

ಎಲ್ಲಾ ಕ್ಷೇತ್ರಗಳಿಗೂ ತನ್ನದೇ ಆದ ವ್ಯಪ್ತಿ, ಮಿತಿಗಳಿವೆ. ಆದರೆ ಕಲೆ ಜೀವನದ ಅನಂತ ಸಾಧ್ಯತೆಗಳನ್ನು ತನ್ನಲ್ಲಿ ಒಗ್ಗಿಸಿಕೊಳುತ್ತಾ, ಹಿಗ್ಗಿಸಿಕೊಳ್ಳುತ್ತಾ ಹೋಗುತ್ತಿರುತ್ತದೆ. ಜೀವನದ ಪ್ರತಿಯೊಂದು ಆಯಾಮಕ್ಕೂ ಅದರಲ್ಲಿ ಅಭಿವ್ಯಕ್ತಿಯಿದೆ, ಮಾನ್ಯತೆಯಿದೆ. ಜೀವ ಮತ್ತು ಜೀವನದ ಮೂಲ ಹಾಗೂ ಬೆಳವಣಿಗೆಯಲ್ಲಿ ಅದರ ಕೈವಾಡವಿದೆ. ಜೀವನವನ್ನೇ ಆಧರಿಸಿ ಬೆಳೆದು ಬಂದ ನೆಲೆಯಲ್ಲಿ ಅನನ್ಯತೆಯಿದೆ. ಅದರೊಂದಿಗೇ ಬೆಳೆದು ನಲಿದರೆ ಜೀವನಕ್ಕೊಂದು ಆನಂದವಿದೆ. ಆದ್ದರಿಂದ ಆದಷ್ಟೂ ಪೂರ್ವಾಗ್ರಹಗಳನ್ನು ಬಿಟ್ಟು ನಮ್ಮ ಪುಟ್ಟ ಅಂಗೈಯೊಳಗೆ ಆದಷ್ಟೂ ತುಂಬಿಕೊಳ್ಳೋಣ. ಆಗದೇ ?

ಪ್ರೀತಿಯಿಂದ,

ಸಂಪಾದಕಿ

Leave a Reply

*

code