Author: ಸಂಪಾದಕರು & ಉಳ್ಳಾಲ ಮೋಹನ್ ಕುಮಾರ್ ಮಾಸ್ಟರ್
‘ಮಾಸ್ಟರ್’ ಅಭಿದಾನಕ್ಕೆ ತಕ್ಕುದೆನಿಸುವ ಸಣ್ಣದೇಹ, ‘ಮಾಸ್ತರ್’ ಎನ್ನಲು ಅನುರೂಪವಾಗಿ ಹೊಂದಿಕೆಯಾಗುತ್ತಿದ್ದ ಕಾಂತಿಯುತ ಕಣ್ಣಿನೊಳಗಿನಿಂದುವ ಸೂಸುವ ಅಗಾಧ ಪ್ರೇಮ, ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರೂ ಅವಕಾಶ ಸಿಕ್ಕಾಗಲೆಲ್ಲಾ ಮಂಗಳೂರಿನ ನೃತ್ಯಸಭಾಂಗಣಗಳಲ್ಲಿ ನಿಧಾನವಾಗಿ ನಡೆದುಬಂದು ಹಮ್ಮುಬಿಮ್ಮಿನ ಸುಳಿವಿಲ್ಲದಂತೆ ಕುಳಿತು ಭರತನಾಟ್ಯ ಕಾರ್ಯಕ್ರಮಗಳನ್ನು ಕಣ್ತುಂಬಿ ಹರಸುತ್ತಿದ್ದ ಕಲಾಪ್ರೀತಿ, ಭರತನಾಟ್ಯಾದಿ ನೃತ್ಯಗಳೆಂದರೆ ಸಾಕು ಭಾವೋದ್ವೇಗದಿಂದ ಕಣ್ತುಂಬುವ ಧನ್ಯತೆ, ಮೆಲುಮಾತು, ಮುಗ್ಧ ನಡೆ, ಮುದ್ದಾದ ಬರೆವಣಿಗೆ. ಅವರು ಕರಾವಳಿಯ ನೃತ್ಯಕ್ಷೇತ್ರದ ಪಾಲಿಗೆ ಹಿರಿಯಜ್ಜ; ಮಹಿಳೆಯರಷ್ಟೇ ಸೀಮಿತವಾಗಿದ್ದ ಕಾಲಕ್ಕೆ ಹುಡುಗನಾಗಿ ನೃತ್ಯಕಲಿತವರು- ಅವರೇ ತನು-ಮನಗಳೆರಡರಲ್ಲೂ ಮಂಗಳೂರಿನವರೇ ಆಗಿಹೋಗಿದ್ದ ಮಾಸ್ಟರ್ ವಿಠಲ್.
ಎಳೆಯ ಪ್ರಾಯದಲ್ಲಿ ತಂದೆ ದೇವಪ್ಪ ಶೆಟ್ಟಿ, ತಾಯಿ ವಿಟ್ಟಮ್ಮರನ್ನು ಕಳೆದುಕೊಂಡು ತಬ್ಬಲಿಗಳಾದರೂ ತಮ್ಮ ಸ್ವಂತ ಪರಿಶ್ರಮದ ಸಾಧನೆಯಲ್ಲೇ ಶಿಕ್ಷಣ ಪಡೆದು ಕಲಾವಿದರಾದವರು ವಿಠಲ್ ಮಾಸ್ತರ್. ಕೊಡಿಯಾಲ್ ಬೈಲಿನಲ್ಲಿ ನೆಲೆಸಿದ್ದ ಅವರ ವಾಸ್ತವ್ಯ ಕ್ರಮೇಣ ಕಾರಣಾಂತರದಿಂದ ಕಾವೂರಿಗೆ ವರ್ಗಾಯಿಸಲ್ಪಟ್ಟಿತು. ೫ ಮಂದಿ ಗಂಡುಮಕ್ಕಳಲ್ಲಿ ಹಿರಿಯರಾಗಿದ್ದ ವಿಠಲರು ಪ್ರೌಢಶಿಕ್ಷಣವನ್ನು ಪೂರೈಸಿ ಜೀವನೋಪಾಯಕ್ಕಾಗಿ ಶಾರದಾಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕ್ರಮೇಣ ಆ ಮುದ್ರಣಾಲಯದ ಕೆಲಸವನ್ನು ತಮ್ಮನಿಗೆ ವರ್ಗಾಯಿಸಿ ನೃತ್ಯ ಕಲಿಯುವ ನಿರ್ಧಾರಕ್ಕೆ ಬಂದರು.
ಆಗಿನ ಕಾಲಕ್ಕೆ ಕರಾವಳಿಯ ಆಸಕ್ತ ಮನಸ್ಸುಗಳ ಪಾಲಿಗೆ ವರಪ್ರದಾಯಕವೆನಿಸಿದ್ದ ಕೇರಳದ ರಾಜನ್ ಅಯ್ಯರ್ ಅವರ ಬಳಿ ನೃತ್ಯ ಅಭ್ಯಾಸವನ್ನು ಆರಂಭಿಸಿದ್ದರು ವಿಠಲ್ ಮಾಸ್ತರ್. ಅದಾಗಿ ೧೯೫೬ರಲ್ಲಿಯೇ ತಮ್ಮ ಮೊದಲ ಶಿಷ್ಯೆ-ಶಿಷ್ಯರನ್ನು ನೃತ್ಯಪ್ರದರ್ಶನಕ್ಕೆ ಅಣಿಗೊಳಿಸಿದ್ದರು. ಕ್ರಮೇಣ ೧೯೬೪ರಲ್ಲಿ ‘ನೃತ್ಯಕೌಸ್ತುಭ’ ಎಂಬ ಶಾಲೆ ತೆರೆದು ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಅರಂಭಿಸಿದರು. ಕಷ್ಟದಲ್ಲಿ ಕಲಿತ ಕಲೆಯ ಬೆಲೆ ಏನೆಂದು ಅರಿತಿದ್ದವರು ಮಾಸ್ಟರ್. ಹಾಗಾಗಿಯೇ ಕಲೆಯನ್ನು ಇಷ್ಟಪಟ್ಟವರಿಗೆ ಧಾರೆಯೆರೆಯಬೇಕು ಎಂಬ ನಿಶ್ಚಯವುಳ್ಳವರಾಗಿದ್ದರು. ಇದೇ ಕಲಾಪ್ರೇಮದ ದಿಶೆಯಲ್ಲಿ ದಾಂಪತ್ಯದೆಡೆಗೆ ಹೊರಳಿಕೊಳ್ಳುವ ಧಾವಂತವನ್ನು ಕೊನೆವರೆಗೂ ಅವರು ತೋರಲಿಲ್ಲ !
ಹೀಗೆ ವಿಠಲ್ ಮಾಸ್ತರರ ಗರಡಿಯಲ್ಲಿ ಪಳಗಿ ೧೯೫೩ರ ದಶಕದಲ್ಲೇ ನೃತ್ಯಕಲಿತ ಉಳ್ಳಾಲ ಮೋಹನ್ ಕುಮಾರರು ಅನೇಕ ಗುರು/ಶಿಕ್ಷಕರನ್ನು ನಾಡಿಗೆ ಧಾರೆಯೆರೆದ ನಾಟ್ಯಕಲಾತಿಲಕ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ವರ್ಯು ಡಾ. ಮೋಹನ್ ಆಳ್ವರು ನುಡಿಸಿರಿ, ವಿರಾಸತ್‌ನಂತಹ ಸಾಂಸ್ಕೃತಿಕ ಕ್ರಾಂತಿಯ ಜನಕ. ಅದರರ್ಥ ಮಾಸ್ಟರ್ ವಿಠಲ್ ಅವರ ಗುರುತನದಲ್ಲಿ ಒಂದು ಗಟ್ಟಿತನವಿತ್ತು, ಆಶೀರ್ವಾದದಲ್ಲಿ ಕಾಣ್ಮೆ-ಕಾಣಿಕೆಗಳಿತ್ತು. ಸ್ವತಃ ಡಾ.ಮೋಹನ್ ಆಳ್ವರ ನೃತ್ಯಕಾರ್ಯಕ್ರಮಗಳಲ್ಲಿ ನಟುವನ್ನಾರ್ ಆಗಿ ಆಳ್ವರನ್ನೇ ಕುಣಿಸುತ್ತಿದ್ದ ಮಾಸ್ಟರ್ ವಿಠಲರು ತಮ್ಮ ಇಳಿವಯಸ್ಸಿನ ಅದಮ್ಯ ಉತ್ಸಾಹ, ಬತ್ತದ ಶಕ್ತಿಯನ್ನೂ ಆಳ್ವರ ಸಾಂಸ್ಕೃತಿಕ ಜಾಗೃತಿ, ನೃತ್ಯಪ್ರೇಮದ ಆಶಯಗಳಿಗೆ ಧಾರೆಯೆರೆದಿದ್ದಾರೆ.
ಮಾಸ್ಟರ್ ವಿಠಲ್ ಅಂತಃಕರಣದಲ್ಲಿ ಬತ್ತದ ಚಿಲುಮೆ. ಮಿನುಗುತಾರೆ ಕಲ್ಪನಾ ಕನ್ನಡ ಚಿತ್ರೋದ್ಯಮದಲ್ಲಿ ನಟಿಯಾಗಿ ಹೆಸರು ಪಡೆಯುವುದಕ್ಕಿಂತ ಮುಂಚಿನ ಕಾಲವದು. ಆಗ ಕಲ್ಪನಾಗೆ ಜೀವನೋಪಾಯಕ್ಕೆ ಬೇರಾವುದೇ ಆದಾಯವಿದ್ದಿರಲಿಲ್ಲ. ಆಗ ಆಕೆಯ ನೃತ್ಯ ಪ್ರದರ್ಶನಗಳನ್ನೂ ಕಳೆಗಟ್ಟಿಸಿದವರು ಮಾಸ್ತರ್ ವಿಠಲ್. ‘ಶಿಲ್ಪಿಯ ಸ್ವಪ್ನ’ ನೃತ್ಯರೂಪಕದಲ್ಲಿ ಕಲ್ಪನಾ ಅವರು ಶಿಲಾಬಾಲಿಕೆಯಾಗಿ, ಮಾಸ್ಟರ್ ವಿಠಲ್ ಶಿಲ್ಪಿಯಾಗಿ ನೀಡಿದ ಅಭಿನಯ ಅಂದಿನಕಾಲಕ್ಕೇ ಬಹುಮೆಚ್ಚುಗೆ ಗಳಿಸಿತ್ತು. ಆದರೆ ಕಲ್ಪನಾ ಯಾವಾಗ ಚಿತ್ರೋದ್ಯಮಕ್ಕೆ ಕಾಲಿಟ್ಟು ಪ್ರಸಿದ್ಧಿ ಪಡೆದರೋ ತಮ್ಮ ಶ್ರೇಯಸ್ಸಿಗೆ ಕಾರಣರಾದ ಗುರುವಿನೆಡೆಗೆ ಹಿಂತಿರುಗಿಯೂ ನೋಡಲಿಲ್ಲ! ಆದಾಗ್ಯೂ ವಿಠಲ್ ಮಾಸ್ತರ್ ನೊಂದುಕೊಂಡವರಲ್ಲ.
ಹಾಗೆಂದು ವಿಠಲ್ ಮಾಸ್ಟರ್ ಅವರನ್ನು ಚಿತ್ರೋದ್ಯಮ ಕೈಬೀಸಿ ಕರೆಯದೇ ಉಳಿದಿರಲಿಲ್ಲ! ಆದರೆ ಬಂದ ಅವಕಾಶವನ್ನು ತಮ್ಮ ನೃತ್ಯಪ್ರೀತಿಯ ದೆಸೆಯಿಂದ ಕೈಬಿಟ್ಟು ಇದ್ದುದರಲ್ಲಿಯೇ ತೃಪ್ತಿ, ನೆಮ್ಮದಿ ಕಂಡುಕೊಂಡವರು. ನೃತ್ಯದ ಶಾಸ್ತ್ರೀಯತೆ ಮತ್ತು ಪ್ರದರ್ಶನದ ವಿಚಾರ ಬಂದಾಗಲೆಲ್ಲಾ ಶುದ್ಧ ಶಾಸ್ತ್ರೀಯ ಸಂವಿಧಾನದಲ್ಲೇ ಕಲೆಯು ಬಳಿ ಬೆಳಗಬೇಕು ಎಂಬುದು ಅವರ ಆಗ್ರಹ. ಆದಾಗ್ಯೂ ಕಾಲಾನುಕ್ರಮದಲ್ಲಿ ಕೆಲವು ಪ್ರಭಾವಗಳು ತೋರಿದರೆ ಅದರಿಂದ ತಪ್ಪೇನೂ ಇಲ್ಲ, ಅದನ್ನು ಶೈಲಿ ಎಂದು ಕರೆಯಬಹುದು ಎಂದು ಕಾಲದ ನಡೆಗೆ ಜೊತೆಗೂಡುತ್ತಿದ್ದ ಸಂಯಮಿ. ನೃತ್ಯದ ಕುರಿತು ಮತನಾಡಿದರೂ ಸಾಕು ಉದಾಹರಣೆ, ಪ್ರಾತ್ಯಕ್ಷಿಕೆ ಸಮೇತ ವಿವರಿಸುವಷ್ಟು ನೃತ್ಯಪ್ರೀತಿ ಅವರದ್ದು. ಯಕ್ಷಗಾನಕಲೆಯಲ್ಲೂ ಅವರಿಗಿದ್ದ ಆಸಕ್ತಿ ಅದಮ್ಯ. ಮಂಟಪ ಪ್ರಭಾಕರ ಉಪಾಧ್ಯಾಯರ ಏಕವ್ಯಕ್ತಿಯಕ್ಷಗಾನದ ಸಪ್ತಾಹಸಂದರ್ಭದಲ್ಲಿ ದಿನವೊಂದನ್ನು ತಪ್ಪಿಸದೆ ಬಂದು ಮುಂದಿನ ಸಾಲಿನಲ್ಲಿ ಆಸೀನರಾಗುತ್ತಿದ್ದ ಮಾಸ್ಟರ್‌ರ ಕಲಾಸಕ್ತಿ ಎಂಥವರಿಗೂ ಬೆರಗು ಹುಟ್ಟಿಸಿತ್ತು !
ಇಂದಿನ ಭರತನಾಟ್ಯ ನೃತ್ಯರೂಪಕಗಳ ಜಾಯಮಾನಕ್ಕೆ ಹೋಲಿಸಿದರೆ ಮಾಸ್ಟರ್ ವಿಠಲರು ಕಲಿತು, ಅಳವಡಿಸಿಕೊಂಡ ನೃತ್ಯರೂಪಕಗಳ ನೆಲೆಗಟ್ಟಿಗೆ ಸಾಕಷ್ಟು ಅಂತರಗಳಿದ್ದವು. ಆದ್ದರಿಂದಲೇ ಅವರ ನೃತ್ಯರೂಪಕ ನಿರ್ದೇಶನದಲ್ಲಿ ವೈಶಿಷ್ಟ್ಯವಿತ್ತು. ಇತಿಹಾಸ, ಪುರಾಣದ ಸಾಂಗತ್ಯದಲ್ಲಿ ಮಹಾಭಾರತ, ರಾಮಾಯಣ, ಬೈಬಲ್‌ನ ಅದೆಷ್ಟೋ ಕತೆಗಳಿಗೆ ಹೊಸ ಆಯಾಮ ನೀಡಿದ್ದರು. ೧೯೮೦ರಲ್ಲಿ ಸ್ವೀಡನ್ ದೇಶದ ಸ್ಕಾನೇಷಿಯಾ ವರ್ಲ್ಡ್ ಟೂರ್ಸ್ ಎಂಬ ಸಂಸ್ಥೆ ಅವರನ್ನು ಮೂರುತಿಂಗಳ ಕಾಲ ನೃತ್ಯನಿರ್ದೇಶನಕ್ಕಾಗಿ ಆಮಂತ್ರಿಸಿತ್ತು. ಇದಷ್ಟೇ ಅಲ್ಲದೆ ಪೃಥ್ವಿರಾಜ ಸಂಯುಕ್ತೆ, ಸುಕೋಮಲೆ ಸೋಫಿಯಾಳ ಸುವರ್ಣ ಸ್ವಪ್ನ, ಚಿತ್ರಾಂಗದ, ಶಾಕುಂತಲಾ, ತ್ರಿಕಿಂಗ್ಸ್, ಮೋಹಿನಿ ಭಸ್ಮಾಸುರ, ಕಿತ್ತೂರ ಚೆನ್ನಮ್ಮ, ಭರತ ಬಾಹುಬಲಿ, ಸಂತ ಲಾರೆನ್ಸ್ ಸೇರಿದಂತೆ ಅನೇಕ ರೂಪಕಗಳಿಗೆ ನೃತ್ಯಸಂಯೋಜನೆ ಮಾಡಿದ್ದರು. ಕರ್ನಾಟಕ ಸರ್ಕಾರದ ನಾಟ್ಯಶಾಂತಲಾ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ, ಮಂಗಳೂರಿನ ಸಂದೇಶ ಪ್ರಶಸ್ತಿ, ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್‌ನಿಂದ ಶಿವರಾಮ ಕಾರಂತ ಪ್ರಶಸ್ತಿ, ನೂರಾರು ಸಂಘಸಂಸ್ಥೆಗಳಿಂದ ಸನ್ಮಾನ, ನಾಟ್ಯಚಕ್ರವರ್ತಿ, ನಾಟ್ಯ ಕೌಸ್ತುಭ, ನಾಟ್ಯಕಲಾನಿಧಿ, ನೃತ್ಯಕಲಾಸಿಂಧು ಬಿರುದುಗಳು ಅವರಿಗೆ ಸಂದಿದ್ದವು.
ಅವರ ಬರೆವಣಿಗೆಯ ಶೈಲಿಯೂ, ಅಕ್ಷರ ಜೋಡಣೆಯ ರೀತಿಯೂ ಗೆಜ್ಜೆಗಳ ಪಲುಕಿನಂತೆ ಲಾಲಿತ್ಯಮಯವಾದದ್ದು. ನೂಪುರ ಭ್ರಮರಿಯೊಂದಿಗಿನ ಅವರ ಸಂಬಂಧವೂ ಹಾಗೆಯೇ!! ಕಳೆದ ಹಲವು ವರುಷಗಳಿಂದ ಪತ್ರಿಕೆಯ ಖಾಯಂ ಓದುಗರಾಗಿ ಪ್ರತೀ ಸಂಚಿಕೆಯನ್ನೂ ಪೂರ್ಣವಾಗಿ ಓದಿ ಮುಗಿಸಿ, ಎಲ್ಲಾ ಲೇಖನಗಳ ಬಗೆಗೂ ತಮ್ಮ ಪ್ರತಿಕ್ರಿಯೆ ಕೊಡುತ್ತಿದ್ದ ನಿಜವಾದ ಅರ್ಥದ ಕಲಾಪ್ರೇಮಿ ಗುರು. ಬಹುಷಃ ಪ್ರತಿಕ್ರಿಯಿಸಿದಷ್ಟೂ ಸಲ ಪತ್ರಿಕೆಯನ್ನೂ, ಸಂಪಾದಕರನ್ನೂ ಕೊಂಡಾಡದೆ ಹೋದ ಒಂದೇ ಒಂದು ಪತ್ರಸಂದರ್ಭವೇ ಉಳಿದಿರಲಿಕ್ಕಿಲ್ಲ !
ತಾನು ಚಂದಾದಾರರಾಗದೆ ಓದುತ್ತಿದ್ದೇನೆ, ಆದರೆ ಈ ಓದಿಗಾಗಿ ತಾನೆಂದಿಗೂ ಋಣಿಯೆಂದು ಬಾಯ್ತುಂಬಾ ಧನ್ಯತೆಯ ಮಾತನಾಡುತ್ತಿದ್ದ ಮಾಸ್ಟರ್ ವಿಠಲ್ ಇಂದಿಗಿಲ್ಲ. ವಯೋಸಹಜ ಆನಾರೋಗ್ಯಬಾಧೆಗೆ ಒಳಗಾಗಿ ತಮ್ಮ ಕಿರಿಯ ಸಹೋದರ ಶಾಂತಾರಾಮ ಅವರ ಮನೆಯಲ್ಲಿ ಕೊನೆಯುಸಿರೆಳೆದ ಮಾಸ್ಟರ್ ವಿಠಲ್ ಇಂದಿಗೆ ನೆನಪು ಮಾತ್ರ. ಆದರೆ ಅವರ ಕೈಯಾರೆ ಬರೆದ ಬರೆಹಗಳ ಮುದ್ದಾದ ಸರಣಿಗಳಿವೆ, ಅಕ್ಷರಗಳ ಝಣಝಣತ್ಕಾರವಿದೆ, ನೆನಪುಗಳ ಮೆರವಣಿಗೆಯಿದೆ. ಅದನ್ನು ನಿಮ್ಮೊಂದಿಗೆ ಮತ್ತೊಮ್ಮೆ ಸಂಗ್ರಾಹ್ಯರೂಪದಲ್ಲಿ ಇರಿಸುತ್ತಾ ಇದೋ ಅವರಿಗೆ ಮನದಾಳದ ನಮನ.
ಬಾಂಬೆಯಲ್ಲಿದ್ದ ರಾಜನ್ ಅಯ್ಯರ್ ಅವರನ್ನು ಮಂಗಳೂರಿಗೆ ಕರೆದುಕೊಂಡು ಬಂದದ್ದು ಬಹುಷಃ ಮುರಳಿ ಮಾಸ್ಟರ್ ಇರಬೇಕು. ಅವರ ಬಳಿಯಲ್ಲಿ ಮಧ್ಯಸ್ಥರು, ಮುರಳೀ ಮಾಸ್ಟರ್, ಪುತ್ತೂರಿನ ರಾಧಾಕೃಷ್ಣ ಮಾಸ್ಟರ್, ರಜನಿ, ವಿಠಲ್ ಮಾಸ್ಟರ್ ಶಿಷ್ಯರಾಗಿ ಕಲಿತರು. ನಂತರ ರಾಜನ್ ಅಯ್ಯರ್ ಮಂಗಳೂರಿನಿಂದ ವಾಪಾಸು ಕೇರಳಕ್ಕೆ ಹೋದಮೇಲೆ ಮಾಸ್ಟರ್ ವಿಠಲ್ ಮತ್ತು ರಜನಿ ಇಬ್ಬರೂ ತಾಜ್‌ಮಹಲ್ ಹೋಟೆಲ್ ಬಳಿಯ ಸ್ಟುಡಿಯೋ ಹತ್ತಿರ ಒಂದು ಕೋಣೆಯಲ್ಲಿ ನೃತ್ಯತರಗತಿಗಳನ್ನು ಪ್ರಾರಂಭಿಸಿದರು. ನೃತ್ಯಪ್ರದರ್ಶನ ನೀಡಲು ತುಂಬಾ ಆಹ್ವಾನಗಳೂ ಬರುತ್ತಿದ್ದುದರಿಂದ ಒಟ್ಟಿಗೇ ಪ್ರದರ್ಶನವನ್ನೂ ನೀಡುತ್ತಿದ್ದರು. ಅದೇ ಸಮಯದಲ್ಲಿ ನಾನು, ಸಂಜೀವ ಮಾಸ್ಟರ್, ಪ್ರೇಮನಾಥ್ ಒಟ್ಟಿಗೇ ಒಂದೇ ದಿನ ವಿಠಲ್ ಮಾಸ್ಟರ್ ಅವರ ಶಿಷ್ಯತ್ವ ಸ್ವೀಕರಿಸಿದ್ದೆವು. ನಮ್ಮೊಂದಿಗೆ ಕಲ್ಪನಾ ಕೂಡಾ ಕಲಿಯುತ್ತಿದ್ದಳು. ಒಳ್ಳೆ ಅಭಿನಯವನ್ನೂ ಕೊಡುತ್ತಿದ್ದಳು. ವಿಠಲ್ ಮಾಸ್ಟರರ ಬಳಿ ಸೀತಾ ಟೀಚರ್, ನಾಟಕದಲ್ಲಿ ಪಾತ್ರ ಮಾಡುತ್ತಿದ್ದ ರೋಹಿಣಿ ಕೂಡಾ ಕಲಿತಿದ್ದರು.
ಆಗೆಲ್ಲ ಭರತನಾಟ್ಯದ ಶಾಸ್ತ್ರ ಎಂಬುದು ಇಂದಿನಂತೆ ವ್ಯಾಪಕವಾಗಿರಲಿಲ್ಲ. ಶಬ್ದ, ವರ್ಣ, ತಿಲ್ಲಾನಗಳ ಪರಿಚಯ ಅಷ್ಟಾಗಿ ಇರುತ್ತಿರಲಿಲ್ಲ. ಹಾಗಾಗಿ ಅಲರಿಪು, ಜತಿಸ್ವರ, ಬೇಡರ ನೃತ್ಯ, ನವಿಲು ನೃತ್ಯ, ಪೂಜಾನೃತ್ಯಗಳಂತವೇ ಹೆಚ್ಚಿದ್ದವು. ವಿಠಲ್ ಮಾಸ್ಟರ್ ಕೂಡಾ ಇಂತಹುದೇ ಕಲಿಸುತ್ತಿದ್ದರು. ಹಾಗಾಗಿ ಇನ್ನೂ ಹೆಚ್ಚಿನ ಕಲಿಕೆಗೆ ನಾನು ರಾಜನ್ ಅಯ್ಯರ್ ಬಳಿ ತೆರಳಿದೆ. ಅವರ ಮಾರ್ಗದರ್ಶನದಂತೆ ಕಲಾಮಂಡಲಂನಲ್ಲಿದ್ದ ರಾಜರತ್ನಂ ಪಿಳ್ಳೈ ಅವರಲ್ಲಿ ಶಿಷ್ಯತ್ವಕ್ಕೆ ಸೇರಿಕೊಂಡೆ. ಆದರೆ ಮೊದಲ ಗುರುವಾಗಿ ವಿಠಲ್ ಮಾಸ್ಟರ್ ನನಗೆ ಆಪ್ಯಾಯಮಾನರು. ಅವರು ನೀಡಿದ ನಟರಾಜನ ವಿಗ್ರಹವನ್ನು ಈಗಲೂ ಭಕ್ತಿಯಿಂದ ತಮ್ಮ ಬಳಿ ಇಟ್ಟುಕೊಂಡಿದ್ದೇನೆ.
– ಕರ್ನಾಟಕ ಕಲಾತಿಲಕ ಉಳ್ಳಾಲ ಮೋಹನ್ ಕುಮಾರ್ ಮಾಸ್ಟರ್, ಮಂಗಳೂರು.
ಮಾಸ್ಟರ್ ವಿಠಲ್ ಅವರ ಬರೆವಣಿಗೆಯ ಕುಸುಮಗಳಲ್ಲಿ ನೂಪುರ ಭ್ರಮರಿ…
ಸರಸ್ವತೀ ಸಮಾನರು ತಾವು. ನೃತ್ಯದ ಬಗ್ಗೆ ಅಪಾರ ಅರಿವನ್ನು ಮೂಡಿಸುವ ನಿಮ್ಮ ಈ ಯತ್ನ ಶ್ರೀ ಶಾರದಾಮಾತೆಯ ಕರುಣಕಟಾಕ್ಷದಿಂದಲೇ ಸೃಷ್ಟಿಗೊಂಡಿದೆ. ನೃತ್ಯದಿಂದಲೇ ಒಂದು ಪತ್ರಿಕೆಯನ್ನು ಓದುವಂತೆ ಮಾಡಬಹುದು ಎಂಬ ನಿದರ್ಶನವಿದು. ಮನೋರಮಾರ, ಸಾನಿಧ್ಯ ಪ್ರಕಾಶನದ ಸಾರಥ್ಯದಲ್ಲಿ ನೃತ್ಯಕಲಾವಿದರಿಗೆ ತುಂಬುಹೃದಯದ ಕಾಣಿಕೆಯಾಗಿ ನೀಡುತ್ತಿರುವ ನಿಮ್ಮ ಪತ್ರಿಕಾಸೇವೆ ಒಂದು ಉತ್ತಮದಾನವೇ ಸರಿ. ನನ್ನ ಸಂಬಂಧಿಗಳು ಯಾರೇ ಬಂದರೂ ಆತಿಥ್ಯಕ್ಕಿಂತಲೂ ಮೊದಲು ತಮ್ಮ ‘ನೂಪುರ ಭ್ರಮರಿ’ಯ ಪರಿಮಳವನ್ನು ನೀಡುವುದು ನನಗಿಷ್ಟವಾಗುವಂಥ ಸತ್ಕಾರ್ಯ. ಕನ್ನಡ ಮಾತ್ರವಲ್ಲ, ಇತರ ಭಾಷೆಗಳಲ್ಲೂ ಪ್ರಕಟವಾಗಲಿ, ಓದುಗರ ಸಂಖ್ಯೆ ಹೆಚ್ಚಾಗಲೆಂದು ಪ್ರಾರ್ಥಿಸುವೆ.
ಸಹೋದರಿ, ಅಪಾರ ವಾರ್ತಾವೈಖರಿ ‘ನೂಪುರ ಭ್ರಮರಿ’ ಪುಸ್ತಕರೂಪದಲ್ಲೇ ತನ್ನನ್ನು ತಾನು ಶ್ರೀಮಂತಗೊಳಿಸಿದೆ. ಸಾಹಿತ್ಯದ ಸತ್ರ ನಡೆಯುತ್ತಿದೆ. ಸಾಹಿತ್ಯಸಂಪತ್ತನ್ನು ಎಲ್ಲೆಡೆಗೂ ವ್ಯಾಪಿಸಿ ಕೀರ್ತಿಗಳಿಸಿದ್ದೀರಿ. ದೀರ್ಘಕಾಲದಿಂದ ನನ್ನ ಕೈಸೇರುತ್ತಿದ್ದರೂ, ನಾನು ಇದರ ಹಣವನ್ನು ಪಾವತಿಸಿದವನಲ್ಲ. ಅಷ್ಟಕ್ಕೂ ಪಾವತಿಸುವ ಚೈತನ್ಯವೂ ನನ್ನದಲ್ಲ. ಅನಾರೋಗ್ಯದವನಾಗಿದ್ದು, ಓದು ಬರೆಹಗಳನ್ನಷ್ಟೇ ನೀಡುತ್ತಿರುವೆನು. ಆದರೆ ಹಣದ ಬಗ್ಗೆ ಯೋಚಿಸದೆ, ಕಲಾವಿದರನ್ನು ಗೌರವಿಸುವ ನಿಮ್ಮಂತವರ ಸಂಖ್ಯೆ ಸಾವಿರವಾಗಲಿ. ಹಲವಾರು ಸಂಘಸಂಸ್ಥೆಗಳಲ್ಲಿ, ಸಂಘಟನೆಗಳಲ್ಲಿ ಪಾಲ್ಗೊಳ್ಳುತ್ತಿರುವವರಾದ ತಾವು ಮಡಿಕೇರಿಯ ಬದಲು ದಕ್ಷಿಣಕನ್ನಡದಲ್ಲಾದರೂ ಇದ್ದಿದ್ದರೆ ಇನ್ನೂ ಪತ್ರಿಕಾ ಓದುಗರು ಹೆಚ್ಚಿಯಾರು, ನಿಸ್ಸಂಶಯ.
ಮಾನ್ಯರೇ, ಗೆಜ್ಜೆಯ ಗಿಣಿಗಿಣಿಯನ್ನು ಯಾರಿಗೂ ಮೋಹಿಸುವಂತೆ ಮಾಡಿ ನೃತ್ಯ ಕಲಿಯದವರನ್ನೂ ಕಲಿಯುವಂತೆ ಪ್ರೋತ್ಸಾಹಿಸುವುದು, ಅವರಿಂದ ಅಪಾರ ಪ್ರೀತಿ ಸಂಪಾದಿಸುವುದು ಮಹೋನ್ನತ ಗುಣವಾಗಿದೆ. ಇದು ಊಟಕ್ಕೆ ಆಹ್ವಾನಿಸಿ ಮೃಷ್ಠಾನ್ನ ಭೋಜನವನ್ನೇ ಪ್ರಾಪ್ತಿಯಾಗಿಸುವ ಮಟ್ಟಿನ ಪುಣ್ಯದ ಕೆಲಸ. ‘ಗೆಜ್ಜೆ’ ಎಂಬ ಅಭಿದಾನದಲ್ಲಿ ಯಾರನ್ನೂ ನರ್ತಿಸುವಂತೆ ಮಾಡುವ ಪತ್ರಿಕೆ ನಿಮ್ಮದು.
ನೂಪುರ ಮಾನ್ಯೆಗೆ ! ನೂಪುರದ ಕಳೆದ ಸಂಚಿಕೆಯಲ್ಲಿ ಜುಲೈ-ಆಗಸ್ಟ್ ಮಧ್ಯಭಾಗದ ಸಂಚಿಕೆ ಪ್ರಕಟವಾಗಿಲ್ಲವೆಂಬ ನೋವು ತೋರಿಸಿದಿರಿ. ಚಿಂತಿಲ್ಲ, ಹೆಚ್ಚು ಕಡಮೆ- ಹಿಂದು ಮುಂದು ಯಾರಿಂದಲೂ ಸಾಗುವುದು ಸಾಮಾನ್ಯ ಸಂಗತಿ. ಆದರೂ ಗಿಣಿಗಿಣಿಸುತ್ತಿದೆ ನೂಪುರ. ಅಕ್ಷರ ಚಿಕ್ಕದಾದರೂ ಚೊಕ್ಕದಾಗಿರುವ ೧೩ ಲೇಖನಗಳು ಸ್ಮರಣೀಯವಾಗಿದ್ದವು. ಕೃತಜ್ಞತೆಗಳ ಋಣಗಳನ್ನರ್ಪಿಸಿರುವೆನು. ಪ್ರೀತಿ-ಅಭಿಮಾನ-ಬಾಂಧವ್ಯಗಳಿಂದ ಪ್ರತೀ ತಿಂಗಳು ತಮ್ಮ ಉತ್ತಮೋತ್ತಮ ಕೃತಿಯು ನನ್ನ ಕೈಸೇರುತ್ತಲಿದೆ. ನೃತ್ಯಗಳ ಮುಖ್ಯತಃ ಶಾಸ್ತ್ರೀಯ ನೃತ್ಯಗಳ ಮೂಲವನ್ನು, ಅದರ ಮಹಾತ್ಮ್ಯೆಯನ್ನು ತಿಳಿಸುತ್ತ ನೃತ್ಯವೆಂದರೆ ಯಾವ ಆಸಕ್ತಿಯೂ ಇಲ್ಲದವನಿಗೂ ಕೂಡಾ ಗೆಜ್ಜೆ ಕಟ್ಟಿ ಕುಣಿಸಿ ನಲಿಸಿ ಉತ್ತೇಜಿಸುತ್ತಿದ್ದೀರಿ. ಪ್ರೇಕ್ಷಕರ ಹೊಗಳು ಹೂಗಳನ್ನೇ ಮಾಲೆ ಹಾಕಿ ಗೌರವಿಸುತ್ತಾ ತಮ್ಮ ಸಾಹಿತ್ಯರತ್ನದಿಂದ ಧನ್ಯರನ್ನಾಗಿ ಮಾಡುತ್ತಿರುವಿರಿ. ನೃತ್ಯದ ಪಾಲಿಗೆ ವಿಜಯ ಸಂವತ್ಸರದ ವಿಜಯೋತ್ಸವವೇ ತಮ್ಮ ವಿಶಿಷ್ಟ ಕಾರ್ಯಕ್ರಮಗಳಿಂದಾಗುತ್ತಿದೆ.
ಆರನೇ ವರ್ಷ ಪೂರ್ಣಗೊಳಿಸಿದ ಸಂಚಿಕೆ ನಿಜವಾಗಿಯೂ ಕೃತಿರತ್ನ. ತುಸು ಸಣ್ಣದಾಗಿದ್ದ ಪತ್ರಿಕಾ ಆಕಾರವು ಈ ಬಾರಿ ದೊಡ್ಡದಾಗಿರುವುದಷ್ಟೇ ಅಲ್ಲದೆ; ಅಲಂಕಾರಿಕವೂ ಆಗಿದೆ. ಬಹುಷಃ ಪೌರ್ಣಮಿ-ಹೋಳಿಹಬ್ಬ-ಸಂಕಷ್ಟ ಚತುರ್ಥಿಗಳ ಹೊನ್ನ ಬೆಳಕಿಗೆ ಬೆಳಗಿದೆ ! ಮುಖಪುಟದಿಂದಲೇ ಲಲಿತಲಹರಿಯ ಮಹಾನಟನ ಲೇಖನವು ಅತ್ಯದ್ಭುತವಾಗಿ ಹೊರಹೊಮ್ಮಿದ್ದು; ಕಲಾಬಾಂಧವ್ಯದ ಎಲ್ಲಾ ಲೇಖನಗಳೂ ಹೃದಯತಲ್ಲೀನ ಆಗುವಂತವುಗಳೇ. ಜೊತೆಗೆ ಸಂಪಾದಕಿಯವರ ಸಾಹಿತ್ಯ ಸಂಪತ್ತನ್ನು ಹತ್ತಾರು ಬಾರಿ ಹೊಗಳಿದರೂ ಸಾಲದೆಂಬುದು ನನ್ನ ಅಭಿಪ್ರಾಯ.
ನೂಪುರ ಭ್ರಮರಿಯಿಂದ ತಮಗೆ ಗಳಿಕೆ-ಲಾಭಾಂಶಗಳು ಸಿಕ್ಕಿರಲಾರದು. ಆದರೆ ಓದುಗರ ಅಪ್ಪುಗೆ-ಆಲಿಂಗನ ಸದಾ ನಿಮ್ಮ ತಂಡದೊಂದಿಗಿರುತ್ತದೆ. ತಮ್ಮ ಪತ್ರಿಕೆಯು ಸಹಸ್ರಾರು ವರ್ಷ ಬಾಳಿ ಬೆಳಗಲಿ. ನಟರಾಜನು ಆಯುಸ್ಸು ಆರೋಗ್ಯ-ಭಾಗ್ಯಗಳನ್ನು ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ.
**************