ಅಂಕಣಗಳು

Subscribe


 

ಮಾಯಾದೀದಿ ಇಲ್ಲವೆಂದರೆ ಮನಸ್ಸು ಒಪ್ಪುತ್ತಿಲ್ಲ…

Posted On: Saturday, November 1st, 2014
1 Star2 Stars3 Stars4 Stars5 Stars (No Ratings Yet)
Loading...

Author: - ವಿದ್ವಾನ್ ದೀಪಕ್ ಕುಮಾರ್, ನಿರ್ದೇಶಕರು, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ, ಪುತ್ತೂರು

ಮಾಯಾ ರಾವ್ ಎಂಬ ಹೆಸರಲ್ಲೇ ಏನೋ ಒಂದು ಆಕರ್ಷಣೆಯಿದೆ. ನಾನು ಬಾಲ್ಯದಿಂದಲೇ ಈ ಮಹಾನ್ ಕಲಾವಿದೆಯ ಬಗ್ಗೆ ಕೇಳಿದ್ದೆ. ಆದರೆ ಅವರ ಒಡನಾಟ ಸಿಕ್ಕಿದ್ದು ಸುಮಾರು 10 ವರ್ಷಗಳ ಹಿಂದೆ, ಅವರ ‘ನಾಟ್ಯ ಇನ್‍ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೋರಿಯೋಗ್ರಾಫಿ’ಯಲ್ಲಿ ಡಿಪ್ಲೊಮಾ ತರಗತಿಗೆ ಸೇರಿದಾಗ.

ನಮ್ಮದು ಡಿಪ್ಲೊಮಾದ ಪ್ರಥಮ ತಂಡವಾದ ಕಾರಣ ಎಲ್ಲರಲ್ಲೂ ಹೊಸತನದ ಉತ್ಸಾಹ. ದಕ್ಷಿಣ ಕನ್ನಡದ ಪುಟ್ಟ ಊರಾದ ಪುತ್ತೂರಿನವನಾದ ನನಗೆ ಬೆಂಗಳೂರಿನ ಥಳುಕಿನ ಜೀವನ ಹೊಸತಾಗಿತ್ತು. ನಾಟ್ಯ ಇನ್‍ಸ್ಟಿಟ್ಯೂಟ್ ಎಂದರೆ ಭಾರತದಾದ್ಯಂತವಲ್ಲದೆ ವಿದೇಶಗಳಿಂದಲೂ ವಿದ್ಯಾರ್ಥಿಗಳು ಕಲಿಯಲು ಬರುವಂತಹ ಸಂಸ್ಥೆ. ಇಂತಹ ವಾತಾವರಣದಲ್ಲಿ ಪ್ರಾರಂಭದಲ್ಲಿ ನಾನು ಬಹಳಷ್ಟು ಭಯ, ಸಂಕೋಚದಿಂದ ತರಗತಿಗೆ ಹೋಗುತ್ತಿದ್ದೆ. ಆದರೆ ಗುರುಗಳಾದ ಮಾಯಾ ದೀದೀ (ನಾವೆಲ್ಲ ವಿದ್ಯಾರ್ಥಿಗಳು ಪ್ರೀತಿ-ಗೌರವದಿಂದ ಹಾಗೆ ಕರೆಯುತ್ತಿದ್ದೆವು) ನಮ್ಮನ್ನೆಲ್ಲ ಬಹಳಷ್ಟು ಪ್ರೀತಿಯಿಂದ ನೋಡಿಕೊಂಡವರು.

EGYPT ICCCR programme Dances of India  Europe tour Germany

ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು. ನಮ್ಮ ಸಂಶಯಗಳು, ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡು ಪರಿಹರಿಸಿಕೊಳ್ಳುತ್ತಿದ್ದೆವು. ಆದರೆ ತರಗತಿಯಲ್ಲಿ ಶಿಸ್ತೆಂದರೆ ಶಿಸ್ತು. ತರಗತಿಗಳಲ್ಲಿ ಸದಾ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದರು. ತಮ್ಮ ಅನುಭವದ ಸಾರವನ್ನು ಬಹಳ ಸರಳವಾಗಿ ಎಲ್ಲರಿಗೂ ಮನಮುಟ್ಟುವಂತೆ-ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದರು. ನನ್ನ ಪಾಲಿಗೆ ಅವರೂ ಕೂಡ ಓರ್ವ ಮಮತಾಮಯಿ ತಾಯಿ.

ಅವರ ಜ್ಞಾನಭಂಡಾರ ಅಪಾರವಾದದ್ದು. ರೂಪಕಗಳನ್ನು ಸಂಯೋಜಿಸುವಾಗ ಸೂಕ್ಷ್ಮಾತಿಸೂಕ್ಷ್ಮ ವಿಷಯ ಗಮನಿಸುತ್ತಿದ್ದರು. ಉದಾ : ಆ ರೂಪಕದ ಕಥಾ ವಸ್ತು, ಅದು ನಡೆದ ಕಾಲಘಟ್ಟ, ಆಗಿನ ಜನರ ವೇಷಭೂಷಣ, ನಡೆ-ನುಡಿಗಳು, ಸಾಂಸ್ಕøತಿಕವಾಗಿ ವಿಭಿನ್ನವಾಗುವ ಕೆಲವು ವಿಶಿಷ್ಟ ಹಾವಾಭಾವಗಳು (ಉದಾ-ಮೊಘಲರ ರಾಜರಿಗೆ ಮಾಡುವ ಸಲಾಮ್ & ಮರಾಠ ರಾಜರಿಗೆ ಮಾಡುವ ಸಲಾಮ್‍ನ ವ್ಯತ್ಯಾಸ, ಮುಸಲ್ಮಾನ ರಾಜರ & ಹಿಂದೂ ರಾಜರ ದೇಹ ಭಾಷೆಯ ವ್ಯತ್ಯಾಸ), ಆಭರಣಗಳ ವಿಷಯದಲ್ಲಿ ಆಯಾ ಪ್ರಾಂತ್ಯದ ವಿಶಿಷ್ಟತೆ ಸಾರುವ ನಿರ್ದಿಷ್ಟ ಆಭರಣಗಳು, ನಿರ್ದಿಷ್ಟ ಬಣ್ಣದ ವಸ್ತ್ರಗಳು ಹೀಗೆ ಪ್ರತಿಯೊಂದೂ ವಿಷಯವನ್ನು ಸೂಕ್ಷ್ಮವಾಗಿ, ಆಳವಾಗಿ ಗಮನಿಸುತ್ತಿದ್ದರು.

ಸಾಮಾನ್ಯವಾಗಿ ಕಲಾವಿದರೂ ಕೂಡ ಗುರುತಿಸಲಾಗದ ಸಣ್ಣ ಪುಟ್ಟ ಲೋಪಗಳನ್ನು ಗಮನಿಸಿ ತಿದ್ದುಪಡಿ ಮಾಡಿಸುತ್ತಿದ್ದರು. ನಮಗೇ ಎಷ್ಟೋ ಬಾರಿ -‘ಓ ಇದು ನಮ್ಮ ಗಮನಕ್ಕೆ ಬರಲಿಲ್ಲವಲ್ಲಾ ಅಥವಾ ಹೀಗೂ ಆಲೋಚನೆ ಮಾಡಬಹುದೇ’ – ಎಂದು ಆಶ್ಚರ್ಯವಾಗುತ್ತಿತ್ತು. ನನ್ನ ‘ಕಂಟೆಂಪರರಿ’ ರೂಪಕ ಹಾಗೂ ‘ಸಂಸ್ಕøತ ನಾಟಕ’ದ ಸಂದರ್ಭದಲ್ಲಿ ಅನೇಕ ರೀತಿಯಲ್ಲಿ ಮಾರ್ಗದರ್ಶನ, ಸಲಹೆ, ಸಹಾಯ ಅನ್ಯಾದೃಶ್ಯ. ಎಷ್ಟೋ ಬಾರಿ ಸಂಯೋಜನೆ ಎಲ್ಲಾ ಮುಗಿದು ಕೊನೆಯ ಹಂತದಲ್ಲಿ ಬದಲಾವಣೆಗಳು ಮಾಡುವಾಗ ಸಂಶಯಗಳು ಬಂದಿದ್ದರೂ ಅಂತಿಮದ ಪ್ರದರ್ಶನದಲ್ಲಿ ಆದ ಅದ್ಭುತ ಯಶಸ್ಸು ನೋಡಿದಾಗ ಗುರುಗಳ ಅನುಭವದ ಅಗಾಧತೆಗೆ ಮನಸ್ಸು ನಮಿಸುತ್ತಿತ್ತು.

ಪರವೂರಿನಿಂದ ವಿದ್ಯಾರ್ಜನೆಗಾಗಿ ಬರುವ ವಿದ್ಯಾರ್ಥಿಗಳಿಗೆ ಅನೇಕ ರೀತಿಯಲ್ಲಿ ನೆರವು ನೀಡುತ್ತಿದ್ದರು. ಜಾನಪದ ಸಂಸ್ಸøತಿಯ ಮೇಲೆ ವಿಶೇಷ ಒಲವು, ಮಾಹಿತಿ. ತಮ್ಮ ಮೂಲ ಸ್ಥಳವಾದ ಕರಾವಳಿ ಪ್ರದೇಶದ ವೈವಿಧ್ಯ ಶ್ರೀಮಂತ ಸಂಸ್ಸøತಿಯ ಬಗ್ಗೆ ಅಪಾರವಾದ ಜ್ಞಾನ, ಪ್ರೀತಿ ಹೊಂದಿದ್ದರು. ಅದರಲ್ಲೂ ಯಕ್ಷಗಾನ ಮತ್ತು ಭೂತಕೋಲದ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು. ನನಗೂ ಕೂಡ ನಮ್ಮ ಮಣ್ಣಿನ ಸಂಸ್ಕøತಿಯ ಬಗ್ಗೆ ಸರಿಯಾಗಿ ಅಧ್ಯಯನ ನಡೆಸಲು ಹೇಳಿದ್ದರು. ಸಂಸ್ಥೆಯಲ್ಲಿ ನನ್ನ ತರಬೇತಿ ಮುಗಿದ ಬಳಿಕವೂ ಅದೆಷ್ಟೋ ನನ್ನ ಚಿಂತನೆಗಳಿಗೆ, ನೃತ್ಯಗಳಿಗೆ ರೂಪು ಕೊಟ್ಟವರು ಮಾಯಾದೀದಿ.

ಅವನ್ನೆಲ್ಲಾ ಅಕ್ಷರಕ್ಕಿಳಿಸೋಣವೆಂದರೆ ಪುಟಗಳು ಸಾಲದು. ಅವರೊಂದಿಗೆ ನಮ್ಮ ಬದುಕು ಇದ್ದುದ್ದೇ ನಮ್ಮ ಭಾಗ್ಯ.
ಇಳಿವಯಸ್ಸಿನಲ್ಲೂ ಅವರು ಸದಾ ಉತ್ಸಾಹದ ಚಿಲುಮೆ. ‘ನನ್ನ ಶರೀರಕ್ಕೆ ಪ್ರಾಯವಾದರೂ ನನ್ನ ಹೃದಯ ಇನ್ನು ಯಂಗ್’ ಎನ್ನುವ ನುಡಿ ನನ್ನ ಕಿವಿಯಲ್ಲಿ ಇಂದಿಗೂ ಅನುರಣಿಸುತ್ತದೆ. ಹಾಗಾಗಿ ಯಾರಾದರೂ “ಹೌ ಓಲ್ಡ್ ಆರ್ ಯು” ಎಂದು ಕೇಳಿದರೆ “ ಐಯಾಮ್ —ಇಯರ್ಸ್ ಯಂಗ್” ಎನ್ನುವುದೇ ಅವರ ಉತ್ತರ. ಒಮ್ಮೆ ಇನ್‍ಸ್ಟಿಟ್ಯೂಟ್‍ನ ಮಹಡಿಯ ಮೆಟ್ಟಲು ಏರುವಾಗ ನಾವು ಸಹಾಯ ಮಾಡಲು ಹೋಗಿದ್ದಕ್ಕೆ ದೀದಿ ನಯವಾಗಿ ನಿರಾಕರಿಸಿದ್ದು ನೆನಪಿನ್ನೂ ಇದೆ. ಯಾರು ಹಂಗು ಇಲ್ಲದೆ ಇಳಿವಯಸ್ಸಿನಲ್ಲೂ ತಮ್ಮ ಕೆಲಸ ಮಾಡುತ್ತಿದ್ದದ್ದನ್ನು ಕಂಡರೆ ಆ ತರಹದ ಬದುಕು ಭಾವ ಇರಲೂ ಪುಣ್ಯ ಮಾಡಿರಬೇಕು ಅನ್ನಿಸುತ್ತದೆ.

ಮಾಯಾದೀದಿ ನೃತ್ಯಜಗತ್ತಿಗೆ ಕೊಟ್ಟ ಅಮೂಲ್ಯ ಉಡುಗೊರೆಯೆಂದರೆ ಅವರ ಶಿಷ್ಯರು ಮತ್ತು ಕೊರಿಯೋಗ್ರಫಿಯ ಪಾಠಗಳು ! ನಾವು ನಮ್ಮ ಜೀವನದಲ್ಲಿ ನೃತ್ಯವನ್ನೇ ನಮ್ಮ ಮೊದಲ ಜೀವನಸಂಗಾತಿಯನ್ನಾಗಿ ಮಾಡಿಕೊಳ್ಳುವಲ್ಲಿ ಅವರ ಕೊಡುಗೆ ದೊಡ್ಡದಿದೆ. ಇಂದು ಅವರಿಲ್ಲ. ಆದರೆ ಅದನ್ನು ಭಾವಿಸಲೂ ಮನಸ್ಸು ತುಂಬಾ ಹಿಂದೇಟು ಹಾಕುತ್ತದೆ. ಸಂಸ್ಥೆಯ ವತಿಯಿಂದ ಬೆಂಗಳೂರಿನಲ್ಲಿ ಶಿಷ್ಯೋತ್ತಮರು ಅರ್ಪಿಸಿದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಲೂ ಇದೇ ಭಾವ ಮನಸ್ಸಿನಂಗಳವನ್ನು ಒದ್ದೆ ಮಾಡಿತ್ತು.

hqdefault  mayar12
ಅದೇಕೋ, ನಾಟ್ಯ ಇನ್ಸ್ಟಿಟ್ಯೂಟ್‍ನ ಬಂಗಾರದ ದಿನಗಳು ಮರೆಯಾದವೇ…? ಕಾಡುತ್ತಿದೆ. ಏಕೆಂದರೆ ಮಾಯಾದೀದಿ ಅಷ್ಟೊಂದು ಗಾಢವಾಗಿ ‘ನಾಟ್ಯ’ದ ತಂತುಗಳನ್ನು ತುಂಬಿದ್ದರು.

Leave a Reply

*

code